ಭರತೇಶ ವೈಭವ ಕಲ್ಪು ೯ - ಕಾವ್ಯ ಹೇಗಿರಬೇಕು
"ತನ್ನ ಕಾವ್ಯವನ್ನು ಜನರು ಓದುವುದಕ್ಕಿಂತ ಹೆಚ್ಚಾಗಿ ಹಾಡಬೇಕು" ಎಂಬುದಾಗಿ ರತ್ನಾಕರವರ್ಣಿಯು ಭರತೇಶ ವೈಭವದ ಮೊದಲ ಸಂಧಿಯಲ್ಲೇ ಒತ್ತಿ ಹೇಳುತ್ತಾನೆ. ಸಂಗೀತದಲ್ಲಿ ಅಭಿರುಚಿಯುಳ್ಳ ಸಂಪದಿಗರಾದ ಹಂಸಾನಂದಿ, ಬೆನಕ ಮುಂತಾದವರು ಈ ದಿಸೆಯಲ್ಲಿ ಹೆಚ್ಚು ಪ್ರಯತ್ನಶೀಲರಾದರೆ ಚೆನ್ನಾಗಿರತ್ತೆ. ಇರಲಿ ಈ ದಿನ ಭರತೇಶ ವೈಭವ ಕಾವ್ಯದ ಸತ್ವ ಏನು ಎಂಬುದನ್ನು ನೋಡೋಣ.
ಬಿನ್ನಹ ಗುರುವೇ ಧ್ಯಾನಕೆ ಬೇಸರಾದಾಗ | ನಿನ್ನನಾದಿಯಮಾಡಿಕೊಂಡು ||
ಕನ್ನಡದೊಳಗೊಂದು ಕಥೆಯ ಪೇಳುವೆನದು | ನಿನ್ನಾಜ್ಞೆ ಕಂಡ್ಯ ನನ್ನೊಡೆಯ || ೫ ||
ಕಬ್ಬಿಗರೋದುಗಬ್ಬವ ಹಾಡುಗಬ್ಬವ | ಕಬ್ಬದೊಳೊರೆವರಡೆರಡು ||
ಕಬ್ಬಿನಂತಿರಬೇಕು ಬಿದಿರಂತೆ ರಚಿಸಲ್ಕೇ | ಕಬ್ಬೆ ಹೇಳೆಲೆ ಸರಸ್ವತಿಯೆ || ೬ || *
ಅಯ್ಯಯ್ಯಾ ಚೆನ್ನಾದುದೆನೆ ಕನ್ನಡಿಗರು | ರಯ್ಯಾಮಂಚಿದಿಯೆನೆ ತೆಲುಗ ||
ಅಯ್ಯಯ್ಯ ಎಂಚ ಪೊರ್ಲಾಂಡೆಂದು ತುಳುವರು || ಮೈಯ್ಯುಬ್ಬಿ ಕೇಳಬೇಕಣ್ಣ || ೭ ||
(ತುಳು ಬಲ್ಲ ಕನ್ನಡಿಗರು ಇದರ ಬಗ್ಗೆ ಏನು ಹೇಳುತ್ತಾರೆ ನೋಡಬೇಕು).
ರಳಕುಳ ಶಿಥಿಲಸಮಾಸ ಮುಂತಾದವ | ರೊಳಗಿಲ್ಲಿ ಕೆಲವುಳ್ಳರುಂಟು ||
ಕೆಲವಿಲ್ಲಾದರವಿಲ್ಲವೇಕೆಂದರವರ** ಕೋ | ಟಲೆಯೇಕೆ ಹಾಡುಗಬ್ಬದೊಳು || ೮ ||
***
ಚಂದಿರನೊಳಗೆ ಕಪ್ಪುಂಟು ಬೆಳ್ದಿಂಗಳು | ಕಂದಿಕುಂದಿಹುದೊ ನಿರ್ಮಲವೊ ||
ಸಂಧಿಸಿ ಶಬ್ದದೋಷಗಳೊಮ್ಮೆ ಸುಕಥೆಗೆ | ಬಂದರೆ ಧರ್ಮ ಮಾಸುವುದೇ || ೧೦ ||
ಕೇಳಿರೊ ಭವ್ಯರು ನಿಮಗೊಂದು ಸುಕಥೆಯ | ಹೇಳುವೆನತಿ ಮೃದುವಾಗಿ ||
ಕೇಳಿದಿರಾದರೆ ನಿಮಗಾತ್ಮಸುಖವಿಂದು | ನಾಳೆನಾಡಿದನೊಳಗಹುದು**** || ೧೧ ||
ಶ್ರೀಭರತೇಶವೈಭವವಿದು ಕೇಳಿರೊ | ಸೌಭಾಗ್ಯವಹುದಡಿಗಡಿಗೆ ||
ಶೋಭನವಹುದಿಂದ್ರಪದವಿಯಹುದು ಮೋಕ್ಷ | ಲಾಭವಹುದು ಕಟ್ಟಕಡೆಗೆ || ೧೨ ||
* - ಈ ಪದ್ಯದ ಅರ್ಥವನ್ನು ಇಲ್ಲಿ ವಿವರಿಸಲಾಗಿದೆ.
** - ಕೆಲವು + ಇಲ್ಲ + ಆದರೆ + ಅವು + ಇಲ್ಲ + ಏಕೆ + ಎಂದರೆ + ಅವರ + ಕೋಟಲೆ + ಏಕೆ
*** - ೯ನೇ ಪದ್ಯವನ್ನು ಬಿಡಿಯಾಗಿ ಬೇರೊಂದು ಬರಹದಲ್ಲಿ ಹಾಕುವೆ.
**** - ಇಂದು ನಾಳೆ ನಾಡಿದು ಎಂಬ ಬಳಕೆ ಗಮನಿಸಿ.

- Login or register to post comments
- 281 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: