ಭರತೇಶ ವೈಭವ ಮತ್ತು ಕನ್ನಡ ನುಡಿಗಟ್ಟುಗಳು - ಕಲ್ಪು ೧೦
ರತ್ನಾಕರವರ್ಣಿಯಲ್ಲಿರುವ ಒಂದು ಪ್ರಮುಖ ಗುಣವನ್ನು ನಾವು ಗಮನಿಸಲೇಬೇಕು. ಈಗ ನೋಡಿ, ನಾವು ಓದುಗರು ಒಂದು ಭ್ರಮೆ ಕಟ್ಟಿಕೊಂಡಿರುತ್ತೇವೆ. ಮಹಾಕಾವ್ಯ ಎಂದರೆ ಹೀಗಿರಬೇಕು, ಹಾಗಿರಬೇಕು. "ಇಂತಹ ಮಾತುಗಳು", "ಇಂತಿಂತಹ ಪದಗಳು", "ಅಂತಹ ಮಹಾ ಸಾಹಿತ್ಯದಲ್ಲಿ" ಇರಬಾರದು ಎಂಬ ಕಲ್ಪನೆಯಲ್ಲಿದ್ದುಬಿಡುತ್ತೇವೆ. ಆದರೆ, ಗಮನಿಸಿ, ರತ್ನಾಕರವರ್ಣಿ ಭರತೇಶ ವೈಭವದಂತಹ ಮಹಾಕಾವ್ಯದಲ್ಲಿಯೂ ಕೂಡ ದೇಸೀನುಡಿಗಟ್ಟುಗಳನ್ನು ಬಳಸುವುದಕ್ಕೆ ಹಿಂಜರಿಯುವುದಿಲ್ಲ. ಹಿಂದೆ ಈಗಾಗಲೇ ಅದರ ಒಂದು ಉದಾಹರಣೆ ತೋರಿಸಿಕೊಟ್ಟಿದ್ದೆ. ಈ ದಿನ ಮತ್ತೊಂದು ತುಂಬಾ ನಗುತರಿಸುವ ಪದ್ಯವನ್ನು ಗಮನಿಸೋಣ.
ಸಕಲ ಲಕ್ಷಣವು ವಸ್ತುಕಕೆ, ವರ್ಣಕಕಿಷ್ಟು ವಿಕಳವಾದರು ದೋಷವಿಲ್ಲ.
ಸಕಲ ಲಕ್ಷಣಕಾಗಿ ಬಿರುಸು ಮಾಡಿದರೆ ಪುಸ್ತಕದ ಬದನೆಕಾಯಹುದು || ೮ ||
ಈ ರೀತಿಯ ನುಡಿಗಟ್ಟುಗಳು ಭರತೇಶ ವೈಭವದಲ್ಲಿ ಮತ್ತಷ್ಟು ಇವೆ. ಅದೇನೇ ಇರಲಿ, "ಬದನೆಕಾಯಿ"ಯಂತೂ ಒಂದು ಕಾಲದಲ್ಲಿ ಕನ್ನಡಿಗರನ್ನು ತುಂಬಾ ಮೋಡಿ ಮಾಡಿತ್ತು ಅನ್ಸತ್ತೆ ![]()

- Login or register to post comments
- 399 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಭರತೇಶ ವೈಭವ ಮತ್ತು ಕನ್ನಡ ನುಡಿಗಟ್ಟುಗಳು - ಕಲ್ಪು ೧೦
ಪುಸ್ತಕದ ಬದನೇಕಾಯಿಗೆ ಇಷ್ಟೆಲ್ಲಾ ಚರಿತ್ರೆ ಇದೆ ಅಂತ ಗೊತ್ತಿರಲಿಲ್ಲ !
ಉ: ಭರತೇಶ ವೈಭವ ಮತ್ತು ಕನ್ನಡ ನುಡಿಗಟ್ಟುಗಳು - ಕಲ್ಪು ೧೦
ಸುಟ್ಟು ಬದನೇಕಾಯಿ ಎಂದು ಒಂದು ಪದ ಸಾಮಾನ್ಯ ಜನರು ಹೇೞುವ ಪದವೂ ಒಂದಿದೆ. ಇದು ನಿಜವಾಗಿ ಸುರುಟು ಬದನೆ (ಸುಟ್ಟ ಬದನೆಯಲ್ಲ) ಅಂದರೆ ಹುೞು ಹಿಡಿದು ಸುರುಟಿದ ಬದನೆ ಎಂದೇ ಅರ್ಥ. ಈ ಸುರುಟು->ಸುಟ್ಟು ಹೇಗೆ ಕರುಳು-> ಕಳ್ಳು, ಬೆರಳು->ಬೆಳ್ಳು ಇತ್ಯಾದಿ ಜನಸಾಮಾನ್ಯರ ಬಾಯಲ್ಲಿ ಮಧ್ಯದ ರ ಲೋಪವಾಗಿ ನಂತರದ ಅಕ್ಷರ ಒತ್ತಾದ ಹಾಗೆ. ಬಹುಶ: ಸುರುಟು->ಸುರ್ಟು->ಸುಟ್ಟು ಆಗಿರಬಹುದು. ಹೇಗೆಂದರೆ ಹೞಗನ್ನಡದ ಮರ್ದು->ಮದ್ದು ಆದಂತೆ. ಸೊರ್ಕು->ಸೊಕ್ಕು ಆದಂತೆ.
ಉ: ಭರತೇಶ ವೈಭವ ಮತ್ತು ಕನ್ನಡ ನುಡಿಗಟ್ಟುಗಳು - ಕಲ್ಪು ೧೦
ಕನ್ನಡದಲ್ಲಿ ಮತ್ತೊಂದು ಪನ್ನುಡಿಗಟ್ಟು (ಪಲ್ಲೆ->ಪಲ್+ನುಡಿಗಟ್ಟು->ಪನ್ನುಡಿಗಟ್ಟು) ಇದೆ. "ಸೊಟ್ ಮೂತಿ ಸೋರೇಕಾಯಿ". ಆದರೆ ಇಂತಹವನ್ನು ಯಾವ ಯಾವ ಕವಿಗಳು ಮಹಾಕಾವ್ಯಗಳಲ್ಲಿ ಬಳಸಿದ್ದಾರೋ ಗೊತ್ತಿಲ್ಲ. ರತ್ನಾಕರವರ್ಣಿ ಮಾತ್ರ ಪಂಡಿತರಿಗಿಂತ ತನ್ನ ಕಾವ್ಯವನ್ನು ಜನಸಾಮಾನ್ಯರು ಹಾಡಬೇಕು ಎಂಬ ಇಚ್ಚೆ ಇದ್ದದ್ದರಿಂದಲೋ ಏನೋ ಇಂತಹವನ್ನು ಬಳಸುವ ಎದೆಗಾರಿಕೆ ತೋರಿದ್ದಾನೆ.