ಕಾರಂತರ ಜೀವಂತ ಪಾತ್ರಗಳು ೩
(ಸಂಕಲನದ ೩೭ನೇ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)
ಜಗತ್ತಿನ ಜನರೆಲ್ಲರೂ ಪ್ರಸಿದ್ದರಲ್ಲ ; ಈ ಜಗತ್ತಿನ ಅಪಾರ ಜನಜಂಗುಳಿಯ ಎದುರು ,ಪ್ರಸಿದ್ದರ ಸಂಖ್ಯೆಯು ಅತ್ಯಂತ ಸಣ್ಣದು . ಪ್ರಸಿದ್ದರಲ್ಲಿ ಪ್ರಸಿದ್ದಿಯ ಯಾವ ಆಕಾಂಕ್ಶೆಯೂ ಇಲ್ಲದೆ,ಕೇವಲ ತಮ್ಮ ಕರ್ತವ್ಯದಲ್ಲಿ ಮುಳುಗಿ , ತನ್ಮಯತೆಯಿಂದ ಲೋಕದ ಹಿತದ ಬಗ್ಗೆ ಮಾತ್ರ ಯೋಚಿಸಿ , ಕಾರ್ಯ ತತ್ಪರರಾದವರನ್ನು, ಯಾವು ಯಾವುದೋ ರೀತಿಯಿಂದ ಜನತೆ ಗುರುತಿಸಿ,ಅವರನ್ನು ಗೌರವದಿಂದ ನಡೆಸಿಕೊಳ್ಳುವುದು ಸ್ವಾಭಾವಿಕ ; ಬಹುಶಃ ಇದು ನಿಸರ್ಗದ ಆಯ್ಕೆಯೂ ಇರಬಹುದು . ಅದರ ಹೊರತಾಗಿ , ಲೋಕದ ಹಿತದ ಬಗ್ಗೆ ಕಾಳಜಿ ಇದ್ದೂ ಸಹ, ತಮಗೆ ಪ್ರಸಿದ್ದಿ ದೊರಕಲೆಂದು ಹಂಬಲಿಸುವುದು , ಮಧ್ಯಮ ಮನಸ್ಸುಗಳ ಪ್ರವೃತ್ತಿ , ಇಂತಹವರಿಗೆ ಸಹ ಗೌರವಾದರಗಳು ದೊರಕುವುದೂ ಸಹ ಅಸಂಭವವಲ್ಲ . ಆದರೆ ಯಾವ ಜನ ಹಿತವನ್ನೂ ಲೆಕ್ಕಿಸದೆ ; ಯಾವುದೇ ಸಾಧನೆಯನ್ನೂ ಸಾಧಿಸದೆ , ಕೀರ್ತಿಗಾಗಿ ಬಾಯಿ ಬಾಯಿ ಬಿಡುವ ಅಥವಾ ವಾಮಮಾರ್ಗದಿಂದ ಪ್ರಚಾರ ಗಿಟ್ಟಿಸುವ ಕ್ಷುದ್ರ ಜೀವಿಗಳಿಗೆ , ಈ ಭೂಮಿಯ ಮೇಲೆ ಬರಗಾಲವೇ?
ತೋರಿಕೆಯ ಆಷಾಢಭೂತಿತನದಿಂದ ಪ್ರಸಿದ್ದಿಯನ್ನು ಸಾಧಿಸಲು , ಆಧ್ಯಾತ್ಮದ ಸೋಗು ಅತ್ಯಂತ ಸುಲಭದ ದಾರಿ . ನಿಜವಾದ ಆಧ್ಯಾತ್ಮವು ,ವ್ಯಕ್ತಿಯ ಅಂತರಂಗದ ಅನನ್ಯ ಹುಡುಕಾಟ, ಸೋಗಿನ ಆಧ್ಯಾತ್ಮಕ್ಕೆ, ಅಂತರಂಗವೂ ಬೇಡ , ಹುಡುಕಾಟವೂ ಬೇಡ . ಯಾರಿಗೂ ಅರ್ಥವಾಗದ ಪರಿ ಭಾಷೆಯಲ್ಲಿ , ಎಲ್ಲರೂ ತಲೆದೂಗುವಂತೆ ಬೋಧಿಸಬಹುದಾದ ವಾಚಾಳಿತನವಿದ್ದರೆ ಸಾಕು; ಬೊಧಿಸುವವನಿಗೇ ಅದರ ತಲೆ ಬುಡ ಅರ್ಥವಾಗದಿದ್ದರೂ ,ಎದುರಿಗಿರುವವರನ್ನು ತಲೆದೂಗಿಸುವ ಕಲೆ ಗೊತ್ತಿದ್ದರೆ ,ಇಲ್ಲಿ ಬಚಾವಾಗಬಹುದು . ಇಂತಹ ನಾಟಕದ ಸಾಧಕರನ್ನು ನಂಬುವ, ಮುಗ್ಧರ ಜನ ಸಾಗರವೇ ಇರುವುದರಿಂದ, ಸೋಗಲಾಡಿಗಳ ನಾಟಕಗಳಿಗೆ ಇದು ತುಂಬಾ ಪ್ರಶಸ್ತವಾದ ಕ್ಷೇತ್ರ.ಶಿವರಾಮ ಕಾರಂತರಿಗೆ ಇಂತಹ ಜನಗಳ ಬೂಟಕಗಳನ್ನು ಕಂಡರೆ ,ಕೆಂಡಾಮಂದಲದಂತಹ ಸಿಟ್ಟು.ಅವರ ಅನೇಕ ಕಾದಂಬರಿಗಳಲ್ಲಿ, ಈ ಸಾತ್ವಿಕ ಕೋಪ ಹೊರಹೊಮ್ಮುತ್ತಲೇ ಇರುತ್ತದೆ.
ಈ ಪ್ರಸಿದ್ದರು, ಪ್ರಸಿದ್ದರ ಪಾತ್ರಧಾರಿಗಳು, ಇವರೆಲ್ಲರ ಕತೆ ಹಾಗಿರಲಿ , ಇನ್ನು ಕೋಟ್ಯಾಂತರ ಜನ ಅನಾಮಧೇಯರು , ಅವರ ಪಾಡು ಹೇಗೆ ? ಅವರದು ನಿರರ್ಥಕ ಬದುಕೇ ? ಎಂಬ ಪ್ರಶ್ನೆಗೆ, ಉತ್ತರ ಮಾತ್ರ ಕುತೂಹಲ ಕಾರಿ . ಬದುಕು ಎಂಬುದು ಯಾವುದೂ ನಿರರ್ಥಕವಲ್ಲ ; ನಿರರ್ಥಕವಾಗಿದ್ದರೆ ಬದುಕು ರೂಪುಗೊಳ್ಳುತ್ತಲೇ ಇರಲಿಲ್ಲ.ಅನೇಕ ಬಾರಿ ಸಮಾಜದ ಯಾವುದೋ ಮೂಲೆಯಲ್ಲಿ , ತನ್ನ ಭಾಗಕ್ಕೆ ವಿಧಿಯಾಗಿ ಬಂದ ,ಅಥವಾ ಆಕಸ್ಮಿಕವಾಗಿ ಒದಗಿದ ಸನ್ನಿವೇಶಗಳನ್ನೇ ಸಹ್ಯವಾಗಿಸಿಕೊಂಡು, ಯಾರನ್ನೂ ; ಯಾವುದನ್ನೂ ದೂರದೆ ತನ್ನ ಪಾಡಿಗೆ ತಾನು ನಿಸ್ಪೃಹವಾಗಿ ಬಾಳು ನಡೆಸುತ್ತಾ , ಅನ್ಯರ ಕಷ್ಟ ಸುಖಗಳಿಗೆ ಸ್ಪಂದಿಸುವ ಜೀವ , ಹೇಗೆ ದೊಡ್ಡದಲ್ಲ? ಅದು ದೊಡ್ಡದಲ್ಲವಾದರೆ , ಆಷಾಡಭೂತಿತನವೇ ದೊಡ್ಡದೇ?ಎಂಬ ಸಹಜ ಪ್ರಶ್ನೆಗಳಿಗೆ , ’ಸನ್ಯಾಸಿಯ ಬದುಕು’ ಕಾದಂಬರಿಯು, ತಾನೇ ಅನಾಥಯಾದ ,ಆದರೂ ಅನೇಕ ಅಸಹಾಯಕರಿಗೆ ,ಅನೇಕ ರೀತಿಯಿಂದ ಆಶ್ರಯದಾತೆಯಾದ ರುಕ್ಮಾಯಿಯ ಜೀವನವೇ ಉತ್ತರ . ಕಾರಂತರು ಚಿತ್ರಿಸಿರುವ ಅನೇಕ ಜೀವಂತ ಪಾತ್ರಗಳಲ್ಲಿ, ಈ ರುಕ್ಮಾಯಿ ಸದಾ ನೆನಪಿನಲ್ಲಿ ಉಳಿಯುವ ಅತ್ಯಂತ ಸರಳ ಜೀವ .
’ಸನ್ಯಾಸಿಯ ಬದುಕು’ ’ ಕನ್ನಡಿಯಲ್ಲಿ ಕಂಡಾತ’ ಈ ಎರಡೂ ಕಾದಂಬರಿಗಳಲ್ಲಿ ಇಂತಹ ಎರಡು ರೀತಿಯ ಮನಸ್ಸುಗಳ ಚಿತ್ರಣ, ಸೊಗಸಾಗಿ ಮೂಡಿಬಂದಿದೆ .ಎರಡೂ ಕಾದಂಬರಿಗಳ ನಾಯಕರೂ ಸಹ , ಯಾವು ಯಾವುದೋ ಕಾರಣಗಳಿಂದಾಗಿ , ಮನೆ ತೊರೆದು ಹೋಗುತ್ತಾರೆ . ಹಾಗೆಂದು ಇವರೇನೂ ಬುದ್ದರಲ್ಲ ; ಅಪ್ರಬುದ್ದರು. ಇವರು ಮಾಡಿದ ಘನ ಕಾರ್ಯವೆಂದರೆ , ಕಟ್ಟಿಕೊಂಡ ಮಡದಿಯರನ್ನು ನಡು ನೀರಿನಲ್ಲಿ ಕೈ ಬಿಟ್ಟು ಪಲಾಯಾನ ಮಾಡಿದ್ದು .ಇವರನ್ನು ಕಟ್ಟಿಕೊಂಡ ತಪ್ಪಿಗೆ ಆ ಹೆಣ್ಣು ಜೀವಗಳು ಇವರು ದಯ ಪಾಲಿಸಿದ ಮಕ್ಕಳು ಮರಿಗಳನ್ನು ಕಟ್ಟಿಕೊಂಡು, ಪಟ್ಟದ್ದು ಮಾತ್ರ ಪಡಬಾರದ ಯಾತನೆಯನ್ನು .
ಎರಡೂ ಕಾದಂಬರಿಗಳಲ್ಲಿ ಸ್ವಲ್ಪ ಹೆಚ್ಚೂ ಕಡಿಮೆ ಒಂದೇ ರೀತಿಯ ಕಥಾ ನಾಯಕರಂತೆ ಕಂಡು ಬರುವ , ಸನ್ಯಾಸಿ ಬದುಕಿನ ಶಂಕರರಾಯ ಮತ್ತು ಕನ್ನಡಿಯಲ್ಲಿ ಕಂಡಾತದ ಮಂಗಲಪಾಡಿಯ ಪರಮೇಶ್ವರ , ಕಾದಂಬರಿಗಳ ಕೊನೆಯ ಭಾಗಕ್ಕೆ ಬರುವ ವೇಳೆಗೆ ಅವರ ವ್ಯಕ್ತಿತ್ವಗಳಲ್ಲಿ ಸಂಭವಿಸುವ ಅಪಾರ ವ್ಯತ್ಯಾಸವೆಂಬುದು , ಬೆರಗುಗೊಳಿಸುವಂತಹುದು. ಆರಂಭಕ್ಕೆ ಕಾರಂತರೇತಕ್ಕೆ ಒಂದೇ ರೀತಿಯ ಪಾತ್ರಗಳನ್ನು ಎರಡು ಕಾದಂಬರಿಗಳನಲ್ಲಿ ಚಿತ್ರಿಸಲು ಹೊರಟರು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದಾದರೂ ,ಈ ಎರಡು ಪಾತ್ರಗಳ ಮನಸ್ಸಿನ ಸೂಕ್ಷ್ಮವ್ಯತ್ಯಾಸಗಳು , ನಂತರ ಸಂಭವಿಸುವ ವಿಭಿನ್ನ ಮನೋವ್ಯಾಪಾರಗಳು , ಸಂಪೂರ್ಣ ಭಿನ್ನ ಗುಣ ಸ್ವಭಾವಗಳನ್ನು ಅನಾವರಣಗೊಳಿಸುತ್ತವೆ.
ಶಂಕರರಾಯ ತನ್ನ ಧಣಿಯ ದುಡ್ಡನ್ನು ಲಪಟಾಯಿಸಿ, ಸಿಕ್ಕುಹಾಕಿಕೊಳ್ಳುವ ಕಾರಣಕ್ಕೆ ಹೆದರಿ , ಊರು ತೊರೆದವನು . ಪರಮೇಶ್ವರ ಟೀಚರ್ ಚಂದ್ರಿಯ ಕಾರಣಕ್ಕೆ ಊರು ತೊರೆದನೋ ? ಅಥವಾ ಅವನ ಮನಸ್ಸೇ ಅಂತಹ ಅಧ್ವಾನದ ಹಾದಿಯಲ್ಲಿತ್ತೋ? ಯಾವುದೂ ಅರ್ಥವಾಗದ ಗೊಂದಲದ ಪರಿಸ್ಥಿತಿ . ಅವನು ಅವನ ಸಡ್ಡುಗ ಜಯರಾಮನಲ್ಲಿ ಕೋಪದಲ್ಲಿ ವ್ಯಕ್ತಪಡಿಸುವುದು ಮಾತ್ರ ಹೆಂಡತಿ ಕಾವೇರಿಯ ಮೇಲಿನ ಅಸಮಧಾನವನ್ನು . ಅವನು ಮದ್ರಾಸು ಬಿಡುವಾಗ ಯಾರ, ಯಾವ ವಿಧವಾದ ಸಮಾಧಾನದ ಮಾತುಗಳನ್ನೂ ಕಿವಿಯ ಮೇಲೆ ಹಾಕಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ . ಹೆಂಡತಿಗೆಗೆ ಸರಿಯಾದ ಬುದ್ದಿ ಕಲಿಸುವ ಪ್ರತಿ ಜ್ಝೆಯೊಡನೆಯೇ ಅವನು ಲೋಕ ಸಂಚಾರಿಯಾಗುತ್ತಾನೆ ; ಆದರೆ ಬುದ್ದಿ ಕಲಿತದ್ದು ಮಾತ್ರ ಸ್ವತಹ ಅವನೇ . ಅವನಿಗೆ ಅವನದೇ ಅವನದೇ ನಿಜವಾದ ಅಂತರಂಗದ ಕನ್ನಡಿ , ಪ್ರತಿಬಿಂಬಿಸುತ್ತಾ ಹೋಗಿದ್ದು ಮಾತ್ರ ಅವನದೇ ಪ್ರತಿ ರೂಪವನ್ನು ; ಕನ್ನಡಿಯ ಗುಣ ಧರ್ಮವೇ ಹಾಗೆ , ಎದುರಿಗಿದ್ದುದನ್ನು ಇದ್ದಹಾಗೆಯೇ ತೋರಿಸುವುದು ; ಅದರಿಂದಾಗಿ ಕುರೂಪಿ ಕೋಪಗೊಂಡರೆ , ಆ ಕನ್ನಡಿಯದು ಹೇಗೆ ತಾನೆ ತಪ್ಪಾದೀತು ?
ಅವನು ಉತ್ತರ ಇಂಡಿಯಾದ ಬಹು ಭಾಗಗಳನ್ನು ಗತಿ , ಗುರಿ ಎರಡು ಇಲ್ಲದೆ ತಿರುಗಿ , ಪುನಃ ಮರಳಿದ್ದು ಮಾತ್ರ ಗೇರುಸೊಪ್ಪೆಗೆ; ತನ್ನ ಊರಿನ ಸನಿಹದ ಊರಿಗೆ . ಈ ವೇಳೆಗೆ ಪರಮೇಶ್ವರನಿಗೆ ತನ್ನ ತಪ್ಪಿನ ಅರಿವಾಗಿರುತ್ತದೆ , ಆದರೆ ಆ ತಪ್ಪನ್ನು ತಿದ್ದಿಕೊಳ್ಳಲಾರದಷ್ಟು ಕಾಲ ಸರಿದಿರುತ್ತದೆ . ಗಂಡ ಪುನಃ ತನಗೆ ದಕ್ಕಲಾರನೆಂದು ಅರಿತುಕೊಂಡ ಅವನ ಹೆಂಡತಿ ಕಾವೇರಿ ಮಕ್ಕಳನ್ನು ಕಟ್ಟಿಕೊಂಡು ಬಾಳಿನ ಹೋರಾಟದಲ್ಲಿ ತೊಡಗಿಕೊಳ್ಳುತ್ತಾಳೆ . ಅಕ್ಷ್ರಶಃ ಬೀದಿಗೆ ಬಿದ್ದವನೆಂದರೆ ನಮ್ಮ ಪರಮೇಶ್ವರನೇ .
ಇಷ್ಟೆಲ್ಲಾ ಮೂರ್ಖತನವಿದ್ದೂ , ಅವನ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಕಪಟದ ವಿರುದ್ದದ ಮನೋಭಾವವಿರುತ್ತದೆ ; ತಾನು ಮಾಡಿಕೊಂಡ ಸ್ವಯಂಕೃತಾಪರಾಧಗಳ ಬಗ್ಗೆ ಅರಿವಿರುತ್ತದೆ , ಹೀಗಾಗಿ ಜನರ ಮುಗ್ಧತೆಯ ದುರುಪಯೋಗವನ್ನು ಅವನು ಮಾಡಿಕೊಳ್ಳುವುದಿಲ್ಲ .( ಮುಂದುವರಿಯುವುದು)

- Login or register to post comments
- 311 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS: