23
October
2014

ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

ನನ್ನ ಮಗುವಿಗೊಂದು ಹೆಸರು ಕೊಡಿ

November 26, 2005 - 3:25pm
suresh_k
To prevent automated spam submissions leave this field empty.

-ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿದಂತೆ ಎಂಬ ಗಾದೆ ಮಾತನ್ನು ನೀವು ಕೇಳಿದ್ದೀರಿ. ಅದರ ಸಾಕ್ಷಾತ್ ಅನುಭವ ಆಗಬೇಕೆಂದರೆ ನೀವು ಅಪ್ಪನೋ ಅಮ್ಮನೋ ಆಗಿರಬೇಕು. ಅದರಲ್ಲೂ ಮೊದಲ ಮಗುವಿನ ನಿರೀಕ್ಷೆ ಇದಕ್ಕೆಲ್ಲ ಸುಸಂದರ್ಭ. ನಾನೀಗ ಆ ಕಾಲಘಟ್ಟದಲ್ಲಿದ್ದೇನೆ ಅನ್ನೋದನ್ನ ಬೇರೆ ಹೇಳೊಲ್ಲ ಬಿಡಿ.

ನನ್ನ ಮಗು ಈ ಹೊರ ಜಗತ್ತಿಗೆ ತನ್ನನ್ನು ತೆರೆದುಕೊಳ್ಳಲು ಇನ್ನೂ ಆರೇಳು ತಿಂಗಳು ಬಾಕಿ ಇರುವಾಗಲೇ ಹುಟ್ಟುವ ಮಗುವಿನ ಸಂಪೂರ್ಣ ಸ್ಕ್ರಿಪ್ಟ್ ತಯಾರಾಗಿಬಿಟ್ಟಿದೆ. ಗಂಡಾಗಲೀ ಹೆಣ್ಣಾಗಲೀ, ಮಗು ಯಾರ ಹಾಗಿರಬೇಕು, ಕಣ್ಣು ಹೇಗಿರಬೇಕು, ಮೂಗಿನ ಉದ್ದ-ಅಗಲ ಎಷ್ಟಿರಬೇಕು, ತುಟಿ ತೊಂಡೆ ಹಣ್ಣಂತಿರಬೇಕೋ ಅಥವಾ ಹಾಗಲ ಹಣ್ಣಂತಿರಬೇಕೋ, ಮಗುವಿಗೆ ಅಪ್ಪನ ಸಿಟ್ಟಿರಬೇಕೋ ಅಮ್ಮನ ಸಹನೆ (?!) ಇರಬೇಕೋ ಎಂಬ ವಿಷಯಗಳಿಂದ ಆರಂಭವಾಗಿರುವ ನನ್ನ ಮತ್ತು ನನ್ನ ಮಡದಿಯ ನಡುವಿನ ಚರ್ಚೆ ಮಗುವಿಗೆ ಎಂಥ ಬಟ್ಟೆ ಹಾಕಬೇಕು, ಎಂಥ ಶಿಕ್ಷಣ ಕೊಡಿಸಬೇಕು ಎಂಬುದನ್ನೂ ದಾಟಿ ಈಗ ಒಂದು ಹಂಪ್ ಬಳಿ ಬಂದು ನಿಂತುಬಿಟ್ಟಿದೆ. ಮಗುವಿಗೆ ಏನು ಹೆಸರಿಡಬೇಕು ಎಂಬ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅದಕ್ಕೆಲ್ಲ ಯಾಕಿಷ್ಟು ಅವಸರ ಎಂಬ ನನ್ನ ಪ್ರಶ್ನೆಗೋ ನಿರ್ಲಕ್ಷ್ಯಕ್ಕೋ ಉತ್ತರವಾಗಿ ನನ್ನ ಹೆಂಡತಿ ಆಗಲೇ ಮಗುವಿಗಾಗಿ ಎರಡು ಗೋಲಾಕಾರದ ದಿಂಬುಗಳನ್ನು ತಯಾರಿಸಿಬಿಟ್ಟಿದ್ದಾಳೆ. ಅವುಗಳ ರೌಂಡ್ ಶೇಪ್ ಎಷ್ಟು ಕರಾರುವಾಕ್ಕಾಗಿದೆಯೆಂದರೆ ಅದರ ಮುಂದೆ ಈ ಫೋಟೋಶಾಪ್, ಪೇಜ್ ಮೇಕರ್ ಗಳ ರೌಂಡ್ ಶೇಪ್ ಗಳು ವೀಕಾಗಿ ಕಂಗೊಳಿಸುವುದಂತೂ ನಿಶ್ಚಿತ.

ಇತ್ತೀಚೆಗೆ ಯಾಕೋ ಗೊತ್ತಿಲ್ಲ, ಈ ಥರದ ಚರ್ಚೆಗಳು ನನಗೂ ಖುಷಿ ಕೊಡುತ್ತಿವೆ. ಮಗುವಿನ ವಿಷಯ ಚರ್ಚೆಗೆ ಬಂದಾಗ ಅವಳ ಮುಖ ಹಿಗ್ಗಿ ಹೀರೇಕಾಯಿ ಆಗುವುದರಿಂದ ಹಿಡಿದು, ಇಷ್ಟಕ್ಕೆಲ್ಲ ನೀವೇ ಕಾರಣ ಎಂಬಂಥ ತುಂಟ ನೋಟವನ್ನು ಎದುರಿಸುವ ಮಜವೇ ಬೇರೆ ಅನ್ನಿಸತೊಡಗಿದೆ.

ಮಗುವಿಗೆ ಹೆಸರೇನಿಡಬೇಕು ಎಂಬ ನಮ್ಮ ಚರ್ಚೆ ಇನ್ನೂ ನಿಂತಿಲ್ಲ. ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ತಮಾಷೆ ಎಂದರೆ ಮಗುವಿಗೆ ಹೊಸ ಹೆಸರು ಇಡಬೇಕು ಎಂಬ ನಿಟ್ಟಿನಲ್ಲಿ ಮೊನ್ನೆ ಮೊನ್ನೆ ತಂದೆ ಎನಿಸಿಕೊಂಡ ಇಬ್ಬರು ಕಂಡ ಕಂಡ ವೆಬ್ ಸೈಟ್ ಗಳನ್ನೆಲ್ಲಾ ಜಾಲಾಡತೊಡಗಿದಾಗಲೇ ವಿಷಯ ಇಷ್ಟು ಸೀರಿಯಸ್ ಇದೆ ಎಂಬುದು ನನಗರಿವಾಗಿದ್ದು. ಯಾವುದಕ್ಕೂ ಇರಲಿ ಎಂದು ಮುಂಜಾಗ್ರತಾ ಕ್ರಮವಾಗಿ ಅವರಿಬ್ಬರ ಬಳಿ ಆ ವೆಬ್ ಸೈಟ್ ವಿಳಾಸಗಳನ್ನೂ ಪಡೆದಿದ್ದೇನೆ. ಅಂದರೆ ನಾನೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂಬ ಸೂಚನೆಯನ್ನು ನನ್ನ ಮಡದಿಗೆ ರವಾನಿಸಿದ್ದೇನೆ.

ನಮ್ಮ ನಾಮಕರಣ ಚರ್ಚೆಯಲ್ಲಿ ಬಂದ ಹೆಸರುಗಳ ಪಟ್ಟಿ ಹೀಗಿದೆ- ದೀಪಕ್, ಸಂಕೇತ್, ದೀಪು, ನಿಶಾಂತ್, ತೇಜಸ್, ಅಭಿ, ಅನನ್ಯ, ಸಂಭ್ರಮ, ಲಕ್ಷಣ, ವಿನೀತಾ, ವಿನೀತ್, ಸುಜಯ್, ವಿಸ್ಮಿತಾ....... ಹೇಳಲು ಹೋದರೆ ನಮ್ಮ ದೇಶದಲ್ಲಿರುವ ಎಲ್ಲರಿಗೂ ಪುನರ್ ನಾಮಕರಣ ಮಾಡಬಹುದು, ಅಷ್ಟಿದೆ. ಮನಸ್ಸಿಗೆ ಬಂದ ಇಷ್ಟು ಹೆಸರುಗಳ ನಡುವೆಯೂ ಬೇರೇನಾದರೂ ಹೊಸ ಹೆಸರಿಡಬೇಕೆಂಬ ಹಂಬಲ ಮಾತ್ರ ಹೋಗಿಲ್ಲ. ಹೆಸರಿನ ಮೇಲಿನ ವ್ಯಾಮೋಹ ತುಸು ಹೆಚ್ಚೇ ಆಗಿದೆ. ಮೊನ್ನೆ ಮಕ್ಕಳ ದಿನಾಚರಣೆ ಪ್ರಯುಕ್ತ ಒಂದು ಪತ್ರಿಕೆ ಹೊರತಂದ ಮಕ್ಕಳ ಛಾಯಾಚಿತ್ರಗಳಿರುವ ಪುರವಣಿಯಲ್ಲೂ ಯಾವುದಾದರೂ ಹೊಸ ಹೆಸರು ಸಿಗಬಹುದೇ ಎಂದು ತಡಕಾಡಿದ್ದಾಯಿತು. ಅಲ್ಲೂ ನಾವು ಊಹಿಸಿದ ಹೆಸರುಗಳೇ ಇದ್ದವು ಎನ್ನಿ. ಅಪವಾದ ಎಂಬಂತೆ ಒಂದೆರಡು ಹೊಸ ಹೆಸರುಗಳೂ ಸಿಕ್ಕವು. ಒಂದು ವಿಚಿತ್ರ ಹೆಸರೂ ಸಿಕ್ಕಿತು- ಅವ್ಯಯ.

ಹೆಸರು ಓದಿ ತುಸು ಗಾಬರಿಯಾಗಿದ್ದು ನಿಜ. ಕೇಶೀರಾಜ ಇದ್ದಿದ್ದರೆ ಇಂಥ ವ್ಯಾಕರಣ ಸೂಚಿ ಪದಗಳನ್ನು ಮಕ್ಕಳಿಗೆ ಹೆಸರಾಗಿ ಇಡಬಾರದು ಎಂದು ತನ್ನ ಶಬ್ದಮಣಿದರ್ಪಣದ ಸೂತ್ರಗಳಲ್ಲೇ ಹೇಳಿಬಿಡುತ್ತಿದ್ದನೇನೋ. 'ಅವ್ಯಯ' ಎಂಬ ಹೆಸರು ಓದಿದಾಗಿನಿಂದ ಕನ್ನಡ ವ್ಯಾಕರಣ ಶಾಸ್ತ್ರದಲ್ಲಿ ಏನಾದರೂ ಹೊಸ ಹೆಸರು ಸಿಗಬಹುದೇನೋ ಅಂತ ಯೋಚಿಸಿದ್ದೂ ಆಯಿತು. ಈಗಾಗಲೇ ಅವ್ಯಯ ಅನ್ನೋ ಹೆಸರು ಬಂದಿರೋದ್ರಿಂದ ಅದಕ್ಕೆ ಹೊಂದಿಕೊಂಡಂತೇ ಇರುವ 'ಪ್ರತ್ಯಯ' ಹೆಸರೂ ಚಾಲ್ತಿಯಲ್ಲಿ ಬಂದಿರಬಹುದು ಅಂತಾನೂ ಯೋಚಿಸಿದೆವು. ಕೊನೆಗೆ ಹೆಚ್ಚುಕಡಿಮೆ 'ಯುರೇಕಾ...!' ಎಂಬ ಉದ್ಗಾರದೊಂದಿಗೆ, ಹೆಣ್ಣು ಹುಟ್ಟಿದರೆ 'ಸ್ವರ' ಅಂತಿಡೋಣವೇ ಎಂದು ಹೆಂಡತಿಯನ್ನು ಕಿಚಾಯಿಸಿದೆ. ಅವಳೋ, ಹಾಗೇ ಗಂಡು ಹುಟ್ಟಿದರೆ ವ್ಯಂಜನ ಅಂತಿಡೋಣ ಅಂತ ರಿವರ್ಸ್ ಸ್ವಿಂಗ್ ಮಾಡಿಬಿಟ್ಟಳು.

ಮಗುವಿಗೆ ಹೆಸರು ಹುಡುಕೋದು ಇಷ್ಟೊಂದು ಕಷ್ಟವೇ ಅಂತ ಅನ್ನಿಸತೊಡಗಿದಾಗ, ನಮಗೆಲ್ಲ ಹೆಸರಿಡುವಾಗ ಅಪ್ಪ-ಅಮ್ಮ ಯಾವ ಸೂತ್ರ ಅನುಸರಿಸಿದ್ದರು ಎಂಬ ಕುತೂಹಲ ಸಹಜವಾಗಿ ಹುಟ್ಟಿತು. ನನಗೆ ಹೀಗೊಂದು ಹೆಸರು ಹುಟ್ಟಿಕೊಂಡಿದ್ದು ಹೇಗೆ, ಈ ಹೆಸರು ಹೊಳೆದಿದ್ದು ಯಾರಿಗೆ ಅಂತ ಯಾವತ್ತೂ ನನ್ನಲ್ಲಿ ಪ್ರಶ್ನೆ ಮೂಡಿರಲಿಲ್ಲ. ಅದಕ್ಕೆಲ್ಲಾ ಕಾಲ ಕೂಡಿ ಬರಬೇಕು ಎಂಬ ದೊಡ್ಡವರ ಮಾತು ಎಷ್ಟು ನಿಜ ಎಂದು ನನಗೆ ನಾನೇ ಅಂದುಕೊಳ್ಳುತ್ತಾ ಅಮ್ಮನ ಬಳಿ ಈ ಬಗ್ಗೆ ಪ್ರಶ್ನಿಸಿದೆ. ಹಿಂದಿನ ಕಾಲದಲ್ಲೆಲ್ಲಾ ಹೆಸರು ಹುಡುಕುವುದೂ ಸಂಪ್ರದಾಯಬದ್ಧವಾಗಿ ನಡೆಯುತ್ತಿತ್ತು ಅಂತ ಅಮ್ಮ ಮಾತು ಶುರು ಮಾಡಿದರು- ಆಗೆಲ್ಲ ನಾಮಕರಣದ ದಿನ ಪುರೋಹಿತರು ಮಗು ಹುಟ್ಟಿದ ದಿನ, ಸಮಯ, ಗಳಿಗೆ, ರಾಶಿ ಎಲ್ಲವನ್ನೂ ಪರಿಶೀಲಿಸಿ, ಪಂಚಾಂಗದಲ್ಲಿ ಏನೇನೋ ಲೆಕ್ಕಾಚಾರ ಹಾಕಿ, ಮಗುವಿನ ಹೆಸರು ಇಂಥ ಅಕ್ಷರದಿಂದಲೇ ಆರಂಭವಾಗಬೇಕು, ಇಂಥ ಅಕ್ಷರದಲ್ಲೇ ಕೊನೆಗೊಳ್ಳಬೇಕು ಅಂತ ಸೂಚಿಸುತ್ತಿದ್ದರು. ಹಾಗೇ ಹೆಸರು ಹುಡುಕುತ್ತಿದ್ದೆವು. ಇನ್ನೂ ಕೆಲವರು ತಮ್ಮ ವಂಶಾವಳಿಯ ನೆನಪಿಗೆ ಅಂತ ತಮ್ಮ ಅಜ್ಜನ ಹೆಸರನ್ನೋ ಅಥವಾ ಮುತ್ತಜ್ಜನ ಹೆಸರನ್ನೋ ಮಕ್ಕಳಿಗೆ ಇಡುವ ಪದ್ಧತಿ ಇತ್ತು. ಕೆಲವರು ಅಪ್ಪನ ಹೆಸರನ್ನೇ ಮಗನಿಗೂ ಇಟ್ಟಿದ್ದಿದೆ.....

ಅಮ್ಮ ಹೇಳಿದ ಪದ್ಧತಿಯ ಬಗ್ಗೆ ತುಸು ಗಂಭೀರವಾಗಿ ಯೋಚಿಸಿದೆ. ಇಂಥ ಅಕ್ಷರದಲ್ಲೇ ಆರಂಭವಾಗಬೇಕು, ಇಂಥ ಅಕ್ಷರದಲ್ಲೇ ಕೊನೆಗೊಳ್ಳಬೇಕು ಎಂಬುದು ಓ.ಸಿ. ಆಟದ ಓಪನ್, ಕ್ಲೋಸ್ ಥರ ಅನ್ನಿಸಿ ಆ ನಿಟ್ಟಿನಲ್ಲಿ ಯೋಚಿಸುವುದನ್ನೇ ಬಿಟ್ಟುಬಿಟ್ಟೆ. ಅಜ್ಜನ ಹೆಸರನ್ನೋ ಮುತ್ತಜ್ಜನ ಹೆಸರನ್ನೋ ಇಟ್ಟರೆ ಹೇಗೆ ಎಂಬ ನಿಟ್ಟಿನಲ್ಲಿ ಯೋಚಿಸತೊಡಗಿದೆ. ಗಂಡು ಮಗು ಹುಟ್ಟಿದರೆ ಪದ್ಧತಿ ಪ್ರಕಾರ ನನ್ನ ಅಜ್ಜನ ಹೆಸರು ಪರಮೇಶ್ವರ ಅಂತಿಡಬೇಕು ಅಥವಾ ಮುತ್ತಜ್ಜನ ಹೆಸರು ಗಣಪತಿ ಅಂತಿಡಬೇಕಾಗುತ್ತೆ. ಆದರೂ ಇಲ್ಲೊಂದು ಸಮಸ್ಯೆ ಇದೆ. ಈಗಿನ ಕಾಲದಲ್ಲೆಲ್ಲಾ ಚುಪ್ಪಿ, ಚುಮ್ಮಿ, ಚಿಂಕು, ರಿಂಕು, ಟಿಂಕು, ಮುನ್ನಿ, ಪಿಂಕಿ, ಮಂಕಿ.... ಅಂತೆಲ್ಲಾ ಸ್ವೀಟ್ ಮತ್ತು ಶಾರ್ಟ್ ಹೆಸರಿಡುತ್ತಿರುವಾಗ ನಮ್ಮ ಮಕ್ಕಳಿಗೆ ಪರಮೇಶ್ವರ, ಲಕ್ಷ್ಸೀನಾರಾಯಣ, ಗಣಪತಿ, ಕೋದಂಡರಾಮ- ಅಂತೆಲ್ಲಾ ಹೆಸರಿಡಲಿಕ್ಕಾಗುತ್ತದೆಯೇ? ನಾಳೆ ನನ್ನ ಮಗ ಶಾಲೆಗೋ ಕಾಲೇಜಿಗೋ ಹೋಗಿ, ಅಲ್ಲೆಲ್ಲಾ ಚಿಂಕು, ರಿಂಕು, ಪಿಂಕಿಯಂಥ ಹೆಸರುಗಳೇ ಓಡಾಡುತ್ತಾ, ಓಲಾಡುತ್ತಾ ಇರುವಾಗ ಅವರ ಮುಂದೆ ಈತನ ಕೋದಂಡರಾಮ ಅಥವಾ ಪರಮೇಶ್ವರ ಎಂಬಂಥ ಹೆಸರುಗಳು ಪೇಲವವಾಗಿಬಿಟ್ಟರೆ...? 'ಅಪ್ಪ ನನ್ಮಗ ನನಗೆ ಅದೇನಿಂಥ ಈ ಹೆಸರಿಟ್ಟನೋ?' ಅಂಥ ನನ್ನ ಮಗನೇ ತನ್ನ ಸ್ನೇಹಿತರ ಬಳಿ ಟೀಕೆ ಮಾಡಿದರೆ...? ಭಯವಾಗುವುದು ಸಹಜ ತಾನೆ?

...ಹೀಗೆ ತನ್ಮಯನಾಗಿ ಯೋಚಿಸುತ್ತಿರುವಾಗ ತನ್ಮಯ ಎಂಬ ಹೆಸರು ಕಣ್ಮುಂದೆ ಬರುತ್ತೆ. ನನ್ನ ಮಗ ಅಥವಾ ಮಗಳು ಹಾಗಿರಬೇಕು, ಹೀಗಿರಬೇಕು, ಲಕ್ಷಣವಾಗಿರಬೇಕು ಎಂದು ಚರ್ಚಿಸುವಾಗ ಲಕ್ಷಣ ಎಂಬ ಹೆಸರು ಕಣ್ಮುಂದೆ ಕುಣಿದಾಡುತ್ತೆ. ತಾಯಿಯಾಗುತ್ತಿದ್ದೇನೆ ಎಂಬ ನನ್ನ ಹೆಂಡತಿಯ ಸಂಭ್ರಮವನ್ನು ನೋಡಿದಾಗ, ನೆನೆಸಿಕೊಂಡಾಗೆಲ್ಲ ಸಂಭ್ರಮ ಎಂಬ ಹೆಸರೂ ಸಂಭ್ರಮಿಸುತ್ತಾ ಬರುತ್ತೆ. ಸಂಪದಕ್ಕಾಗಿ ಏನಾದರೂ ಬರೆಯಬೇಕು ಅಂತ ಯೋಚಿಸಿದಾಗೆಲ್ಲ ಸಂಪದ ಎಂಬ ಹೆಸರೂ.....

ಇದೊಂಥರಾ ಮುಗಿಯದ ಹಾಡಾಗಿಬಿಟ್ಟಿದೆ. ಹಾಡಿದ್ದೇ ಹಾಡುವ ರಾಗವಾಗಿಬಟ್ಟಿದೆ (ರಾಗ ಅಂತ ಹೆಸರಿಟ್ಟರೆ ಹೇಗೆ?). ಹೊಸ ಹೆಸರು ಹುಡುಕಿ ಹುಡುಕಿ ಎಷ್ಟು ಬೇಜಾರಾಗಿಬಿಟ್ಟಿದೆಯೆಂದರೆ ಇನ್ನು ಹುಡುಕಾಟ ಸಾಕು ಅಂತನ್ನಿಸಿ, ಮೊನ್ನೆ ಹೆಂಡತಿ ಬಳಿ ಯಾವ ಹೆಸರೂ ಬೇಡ, ಗಂಡು ಮಗುವಾದರೆ ಬಾಣ ಭಟ್ಟ ಅಂತಿಡೋಣ ಅಂದುಬಿಟ್ಟಿದ್ದೇನೆ. ನನ್ನ ಹೊಸ ಹೆಸರಿನ ಸಂಶೋಧನೆಗೆ ಖುಷಿಪಟ್ಟಳೋ ಅಥವಾ ಕ್ರಿಯೇಟಿವಿಟಿಯನ್ನು ಮೆಚ್ಚಿಕೊಂಡಳೋ ಅಥವಾ ನನಗಿರುವ 'ಕಾಮೆಡಿ ಸೆನ್ಸ್' ನೋಡಿ ಎಂಜಾಯ್ ಮಾಡಿದಳೋ, ಅಂತೂ ಆ ಹೆಸರು ಕೇಳಿ ಜೋರಾಗಿ ನಕ್ಕ ನನ್ನ ಹೆಂಡತಿ, ಇತ್ತೀಚೆಗೆ ಮಗುವಿನ ಕುರಿತಾದ ಏನೇ ಚರ್ಚೆ ಬಂದಾಗಲೂ ನಿಮ್ಮ ಬಾಣ ಭಟ್ಟ ಅಥವಾ ನಮ್ಮ ಬಾಣ ಭಟ್ಟ ಅಂತ ಅದಕ್ಕೊಂದು ಐಡೆಂಟಿಟಿ ಕೊಡಲು ಮಾತ್ರ ಮರೆಯುತ್ತಿಲ್ಲ.

ಇರಲಿ, ಹುಟ್ಟದ ಮಗುವಿಗೆ ಹೆಸರು ಹುಡುಕುವ ಅನುಭವ ಹೇಗಿರುತ್ತೆ ಎಂಬುದನ್ನು ಇಲ್ಲಿ ನಿಮ್ಮ ಬಳಿ ಹಂಚಿಕೊಂಡೆ, ಅಷ್ಟೆ. ಇಂಥ ವಿಷಯಗಳನ್ನೆಲ್ಲ ಸಖತ್ತಾಗಿ ಎಂಜಾಯ್ ಮಾಡಬೇಕು. ಅದೇ ಜೀವನದ ಖುಷಿಯ ಕ್ಷಣಗಳು, ಅಲ್ಲವೇ?

ಬಾಣ ಭಟ್ಟ ಹೊರತಾದ ಹೊಸ ಹೆಸರೇನಾದರೂ ನಿಮಗೆ ಹೊಳೆದರೆ ದಯವಿಟ್ಟು ನನಗೂ ಹೇಳಿ.

-ಸುರೇಶ್ ಕೆ.
sumasureshk @ gmail.com

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

Submitted by ismail on

ಹೆಸರಿಡುವ ಕಷ್ಟ ಕವಿತೆ ಬರೆಯುವವರಿಗೆ ಮಾತ್ರ ಎಂದು ಕೊಂಡಿದ್ದೆ. ಇದು ತಂದೆ ತಾಯಿಗಳಿಗೂ ಇದೆ ಎಂಬುದು ಅಪ್ಪನಾಗದ ನನಗೂ ಅರ್ಥವಾಗುತ್ತಿದೆ. ಮದುವೆಗೆ ಮೊದಲೇ ಎರಡು ಹೆಸರು ಸಿದ್ಧ ಪಡಿಸಿ ರಿಜಿಸ್ಟರ್ ಮಾಡಿಸುವ ವ್ಯವಸ್ಥೆ ಇದ್ದರೆ ಹೇಗೆ?

Submitted by pavanaja on

ಇಸ್ಮಾಯಿಲ್ ಅವರೇ, ನಾನು ನಿಮ್ಮ ವಿರುದ್ಧ. ನನಗೆ ಲೇಖನಗಳಿಗೆ (ನಾನು ಕವಿತೆ ಬರೆಯುವುದಿಲ್ಲ) ಹೆಸರಿಡಲು ಏನೇನೂ ಕಷ್ಟವಾಗುವುದಿಲ್ಲ. ಲೇಖನ ಬರೆಯುವುದೇ ಕಷ್ಟ. ನನ್ನಲ್ಲಿ ಈಗಾಗಲೇ ಹೆಸರಿಟ್ಟಿರುವ ಆದರೆ ಲೇಖನ ಬರೆಯದ ಶೀರ್ಷಿಕೆಗಳು ಹಲವಾರಿವೆ.

ಸಿಗೋಣ,
ಪವನಜ
-----------
[http://www.vishvakannada.com/|Vishva Kannada]
Think globally, Act locally

Submitted by muralihr on

ಹುಚ್ಚಪ್ಪ, ತಿಪ್ಪೆ ರುದ್ರಸ್ವಾಮಿ, - ಈ ತರಹದ ಹೆಸರಿಟ್ಟರೆ ಮಗು ಆರೋಗ್ಯವಾಗಿ ಪುಷ್ಟವಾಗಿಯೂ ಇರುತ್ತೆ, ಅನ್ನೂ ಮಾತು ನಾನು ಚಿಕ್ಕವನಾಗಿದ್ದಾಗ ಕೇಳಿದ್ದೇ.
ಎರಡು ಮಾತುಗಳು :
ಆಮೇಲೆ ನೀವು ಇಡುವ ಹೆಸರು ನಾಳೆ ನಿಮ್ಮ ಕೂಸು ಬದಲಾಯಿಸಬಹುದು , ಆದರೆ ನೀವು ಕಲಿಸುವ ನುಡಿ, ನೀವು ಕೊಡುವ ಶಿಕ್ಷಣ ಮಗು ಮರೆಯುವುದಿಲ್ಲಾ.

ಈಗಿನ ಕಾಲದಲ್ಲಿ ಮಕ್ಕಳು ಹುಟ್ಟಿದಾಗ / ಹುಟ್ಟೋಕ್ಕೂ ಮು೦ಚೆ ಯೋಚನೆ ಮಾಡಬೇಕಾದ ಪ್ರಶ್ನೆಗಳು -
1>ಮಗು ವಿಗೆ ಯಾವ ರೀತಿ ಶಿಕ್ಷಣ ಕೊಡಬೇಕು - (ಇ೦ಗ್ಲೀಷ್ Donation ಶಾಲೆಗಳೋ) ??
2>ಮಕ್ಕಳು ಶಾಲೆಗೆ ಹೋಗುವುದಕ್ಕೆ ಪಡುವ ಕಷ್ಟ ಓದುವುದಕ್ಕಿನ್ನಾ ಹೆಚ್ಚು ..ಇದರ ಪರಿಹಾರವೇನು ??

3>ಮಕ್ಕಳಿಗೆ ಆಟದ ಮೈದಾನವೇ ಇಲ್ಲಾ .. ಎಲ್ಲಿ ನೋಡಿದರೂ ಗಾಜಿನ ಮನೆಗಳು(IT PARKS)
ಮೊದಲು ಗಾಜಿನ ಮನೆ ಬರೀ ಲಾಲ್ ಬಾಗ್ ನಲ್ಲಿ ಇತ್ತು ಈಗ ಬೆ೦ಗಳೂರಿನಲ್ಲಿ ಎಲ್ಲಾ ಕಡೆ ಗಾಜಿನ ಮನೆಗಳು.ಆಟದ ಮೈದಾನ , ಉದ್ಯಾನವನ ಯಾವುದು ಇಲ್ಲಾ.

ಹೀಗೆ ಹಲವು ಪ್ರಶ್ನೆಗಳು ಮಗುವಿನ ಬಗ್ಗೆ ನೀವು ಯೋಚನೆ ಮಾಡಿ ಉತ್ತರ ಕ೦ಡುಕೊಳ್ಳಬೇಕು.

"ಮಗುವನ್ನು ಹುಟ್ಟಿಸಿ ಅದರ ಬೆಳವಣಿಗೆಯ ಬಗ್ಗ ಯೋಚನೆ ಮಾಡದಿರುವುದು ತ೦ದೆ ತಾಯಿಗಳು ಮಕ್ಕಳಿಗೆ ಮಾಡುತ್ತಿರುವ ದ್ರೋಹ " - ಎ೦ಬೋ ಮಾತು ಯಾರೋ ಹೇಳಿದ್ದು ಇನ್ನು ಮರೆತಿಲ್ಲಾ.

ಮುರಳಿ

Submitted by hpn on

[quote=muralihr]ಹುಚ್ಚಪ್ಪ, ತಿಪ್ಪೆ ರುದ್ರಸ್ವಾಮಿ, - ಈ ತರಹದ ಹೆಸರಿಟ್ಟರೆ ಮಗು ಆರೋಗ್ಯವಾಗಿ ಪುಷ್ಟವಾಗಿಯೂ ಇರುತ್ತೆ, ಅನ್ನೂ ಮಾತು ನಾನು ಚಿಕ್ಕವನಾಗಿದ್ದಾಗ ಕೇಳಿದ್ದೇ.[/quote]

heh! ಏನು ತರಲೆ ಐಡಿಯ ಕೊಟ್ಟಿದಿಯೋ! ಹೆಸರಿಗೂ ಆರೋಗ್ಯಕ್ಕೂ ಸಂಬಂಧ ಏನ್ ಮಾರಾಯ?
ಥೂ, ಇಲ್ಯಾರೋ ತೆಗ್ದಿರೋ ತರಲೆ ತ್ರೆಡ್ ನೋಡ್ಕೊಂಡ್ ನೀನೂ ತರ್ಲೆ ಕಾಮೆಂಟ್ ಹಾಕಿದೀಯ

Submitted by gvmt on

ಹಿಂದೆ, ಶಿಶುಮರಣಗಳು ಹೆಚ್ಚಾಗಿದ್ದಾಗ ಹುಟ್ಟಿದ ಮಗು ಗುಂಡುಕಲ್ಲಿನ ಹಾಗೆ ಆರೋಗ್ಯವಾಗಿರಲಿ ಅಂತ 'ಗುಂಡಪ್ಪ' ಹೆಸರಿಡುತ್ತಿದ್ದರು. ಹೆಸರಿಗೂ ಆರೋಗ್ಯಕ್ಕೂ ಯಾವುದೋ ಸಂಬಂಧ ಕಲ್ಪಿಸಿಕೊಂಡಿದ್ದರು.

ವೆಂ.

Submitted by veenashiv on

ನಮಸ್ಕಾರ, ಬಹಳ ದಿನದಿಂದ ಈ ಜಾಲತಾಣದ ಓದುಗಳಾಗಿದ್ದೆ,ಈಗ ಖಾತ ತೆರೆದು ಬರೆಯಲು ಆಯಿತು. ಬಹಳ ಸಂತೋಷ.

ನನ್ನ ಐದು ಮಂದಿ ಗೆಳತಿಯರೆಲ್ಲ ಬಹುಶಃ ತಮ್ಮ ತಮ್ಮ ಮಗುವಿಗೆ 'ಆದಿತ್ಯ' ಎನ್ನುವ ಹೆಸರು ಇಡಲೇಬೇಕೆಂಬ ತೀರ್ಮಾನ ತೆಗೆದುಕೊಂಡು ಬಿಟ್ಟಿದ್ದ್ದಾರೆ ಅನ್ನಿಸುತ್ತಿದೆ. ಯಾರನ್ನು ಕೇಳಿದ್ರು ಮಗನ ಹೆಸರು ಆದಿತ್ಯ ಎನ್ನುವವರೆ :-).. ಅದೇನಿದೆ ಆ ಹೆಸರಿನಲ್ಲಿ ತಿಳಿಯಲಿಲ್ಲ !!

ಇಂತಿ,
ವೀಣಾ.

ಎಲ್ಲೇ ಇರು, ಹೇಗೆ ಇರು ಎಂದೆಂದು ನೀ ಕನ್ನಡವಾಗಿರು.

Submitted by muralihr on

ಈ ಐಡಿಯ ತರಲೆ ಅಲ್ಲ್ವೇ ಅಲ್ಲಾ !
ನನ್ನ ಪ್ರಿಯ ಮಿತ್ರನೊಬ್ಬನ ಹೆಸರು ತಿಪ್ಪೇಶ ಅ೦ತ ಇತ್ತು.
ಅವನು ಸಿಕ್ಕಾಪಟ್ಟೆ ಜಾಣ ಆಟದಲ್ಲಿ. ನನ್ನ ಬಾಲ್ಯದ HERO.
ಅವನಿಗೆ ಬರದೆ ಇರುವ ಆಟ ಯಿಲ್ಲಾ, ಅವಾಗ ಇನ್ನು ಟೆ೦ಡಲ್ಕರ/ಡ್ರಾವಿಡ್
ಬ೦ದಿರಲಿಲ್ಲಾ. ನಮ್ಮ ಬೀದಿ ಯಲ್ಲಿ ನಮ್ಮ ಟೀಮ್ ನಾ ಗೆಲ್ಲಿಸುವನೇ STARU.
ಅವನು CRICKET, BADMINTON, ಗೋಲಿ(ಇದರಲ್ಲೂ ತು೦ಬಾ ತರಹ ಆಟಗಳು ಇವೆ)
ಈಜಿಯಾಗಿ ಈಜಿ೦ಗು, ಎಲ್ಲಾದರಲ್ಲೂ ದಾದ.
ಸಿನಿಮಾ ನೋಡೋಕ್ಕೆ ಟಿಕೆಟ್ ತಗೋಳ್ತಾ ಯಿರಲಿಲ್ಲಾ.
ಹಿ೦ದೆ ಒ೦ದು ಕಿಟಕಿ ಹತ್ತಿ , ಬಾಲ್ಕನಿ ಒಳಗೆ ಹೋಗಿ ಸಿನಿಮಾ ನೋಡುವ
ಮಾರ್ಗ ತೋರಿಸಿದ್ದಾ.ಒಟ್ಟಿನಲ್ಲಿ ಅವನ ಬಗ್ಗೆ ಒ೦ದು ಪುಸ್ತಕವನ್ನೇ ಬರಿಬಹುದು.
ಅವನ ಹೆಸರು ಹಾಗಿರಲಿ ಅವನ ಜೀವನ ನೋಡಿ ನನಗೆ ಎಲ್ಲರು
ತಿಪ್ಪೇಶ ಅ೦ತ ಹೆಸರು ಇಟ್ಕೋ ಬೇಕು ಅನ್ಸತ್ತೆ.

Submitted by hpn on

ಓ ಕೆ, ಓ ಕೆ ;)

[quote=muralihr]ಎಲ್ಲರು ತಿಪ್ಪೇಶ ಅ೦ತ ಹೆಸರು ಇಟ್ಕೋ ಬೇಕು ಅನ್ಸತ್ತೆ.[/quote]

ಎಲ್ಲರೂ ತಿಪ್ಪೇಶ ಅಂತ ಹೆಸರಿಟ್ಕೊಂಡ್ ಬಿಟ್ರೆ ಭಾರಿ ಕಷ್ಟ ಮಾರಾಯ ;)

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

Submitted by msanjay75 on

ಆಗ ಎಲ್ಲರೂ ತಿಪ್ಪೇಷ ಅಂತ ಹೆಸರಿಟ್ಕೊಂಡ್ ಬಿಟ್ರೆ ಆ ಹೆಸರಿಗೆ datestamp ಅಥವ uuid ಜೋಡಿಸಬೇಕಾಗಬಹುದು - ಉದಾಹರಣೆಗೆ ತಿಪ್ಪೇಷ೨೦೦೫೦೬೦೩ ! ;-)

ಸುರೆಶವರೆ, ನಿಮ್ಮ ಪ್ರಭಂದ ಓದಲು ತುಂಬ ಚೆನ್ನಾಗಿತ್ತು. ನಾನು ಬ್ರಹ್ಮಚಾರಿಯಾಗಿರುವುದರಿಂದ, ಸದ್ಯ ನನಗೀತಾಪತ್ರಯಗಳೆಲ್ಲಾ ಬಂದಿಲ್ಲ, ಆದರು ಸಲಹೆ ಕೊಡಕ್ಕೆ ಹೇಗಿದ್ದರು tax ಕಟ್ ಬೇಕಾಗಿಲ್ವಲ... ;-)

ಸಂಜಯ ಅಂತ ಯೆಷ್ಟೊಂದು ಜನ ಇದ್ದಾರಂದ್ರೆ, ನನಗೆ ಯಾರೊ ಹೇಳ್ತಾಯಿದ್ರು ಒಂದು public ಜಾಗದಲ್ಲಿ ನಿಂತು ಜೋರಾಗಿ "ಸಂಜಯ್" ಅಂತ ಕೂಗಿದ್ದರೆ ಒಂದು ದೊಡ್ಡ ಗುಂಪೆ ಬಂದು ನಿಲ್ಲುತಾರೆ ಅಂತ. (ಅವರು ಇನ್ನೊಂದು ವಿಷಯ ಹೇಳಿದರು - "ಮುಟ್ಠಾಳ" ಅಂತ ಕೂಗಿದ್ದರೆ, ದೊಡ್ಡ ಗುಂಪಲ್ಲ, ಅಲ್ಲಿ ಇರುವವರೆಲ್ಲರೂ ತಿರುಗಿ ನೋಡುತ್ತಾರಂತೆ :-) ಆದರೆ, ಅದು ಬೇರೆ ವಿಶ್ಯ ಬಿಡಿ) ಆದರಿಂದ ಈಗ ಯಾರು ಸಂಜಯ ಅಂತ ಹೆಸರೇ ಇಡೊಲ್ಲ ಅಂಸುತ್ತೆ, so ನಿಮ್ಮ ಮಗನಿಗೆ (ಮಗ ಆದರೆ) ಅದೇ ಹೆಸರು ಇಡಬಹುದು ;-)

ಹೆಸರಿಡುವುದು ಕಬಲಾರಿಯನ್ನರ ಪ್ರಕಾರ ವಿಙ್ನಾನವಂತೆ.
___________________________
- ಸಂಜಯ
---------------------------
ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೇನಿಲ್ಲ ಸುಳ್ಳು
---

Submitted by mahipati on
ಬಹುಶಹ ನೀವು ಮುಟ್ಠಾಳ ಅ೦ತ ಕೂಗಿದಾ ತಿರಿಗಿ ನೊದಡಿದ್ದಿರಿ ಅನಿಸುತ್ತೆ. :-)

Submitted by gvmt on

ತಿಪ್ಪೇಶ ಬಲು colourful characeter ಕಾಣ್ರಿ. "ಹೆಸರು .. ಇತ್ತು" ಅಂತೀರಲ್ಲ ಯಾಕೆ? ಹೆಸರು ಬದಲಾಯಿಸಿಕೊಂಡರೆ?

ವೆಂ.

Submitted by pavanaja on

ನನ್ನ ಗೆಳೆಯನ ಹೆಸರು "ಶೇಷಶಾಯಿ". ನಾವು ಅವನನ್ನು Reminder Ink ಎಂದು ಕೆರಯುತ್ತಿದ್ದೆವು. ಅವನ ಹೆಂಡತಿಯ ಹೆಸರು "ಗಾಯತ್ರಿ". ಅವನಿಗೆ ಮೊದಲ ಮಗು (ಹೆಣ್ಣು) ಹುಟ್ಟಿದಾಗ ಫೋನು ಮಾಡಿ ಒಂದು ಹೆಸರು ಸೂಚಿಸಲು ಕೇಳಿಕೊಂಡ. ನಾನೆಂದೆ "ನಿನ್ನ ಹೆಸರಿನ ಮೊದಲ ಅಕ್ಷರ 'ಶೇ'. ನಿನ್ನ ಹೆಂಡತಿಯ ಹೆಸರಿನ ಮೊದಲ ಅಕ್ಷರ 'ಗ'. ಇವುಗಳ ಮಧ್ಯೆ ಒಂದು ಸೊನ್ನೆ ಇಟ್ಟು 'ಶೇಂಗ' ಎಂದಿಡು".

ಸಿಗೋಣ,
ಪವನಜ
-----------
[http://www.vishvakannada.com/|Vishva Kannada]
Think globally, Act locally

Submitted by gvmt on

ನಿಮ್ಮ ಮಾತು ಕೇಳಿ ಕೆಟ್ಟರು. ನಮ್ಮ ನಾಡಿಗರಿಗೂ ಇಂತಹದ್ದೆ ಮಾಡೀರಿ. ನಾಡಿಗರೆ, ಜೋಪಾನ.

ವೆಂ.

Submitted by Gopinath Rao on

ಇದೇ ರೀತಿ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗ ಮಿತ್ರರೊಬ್ಬರು ಹೇಳಿಕೊಟ್ಟ ಉಪಾಯ ಹೇಳುತ್ತೇನೆ- "ಒಂಭತ್ತು ತಿಂಗಳು ಹೊತ್ತು ಕಷ್ಟ ಪಟ್ಟು ಹೆತ್ತ ನನ್ನ ಹೆಂಡತಿಗೆ ಮೀಸಲಾದ ಅಧಿಕಾರ ಇದು. ಅವಳು ಯಾವ ಹೆಸರಿಟ್ಟರೂ ನನಗೆ ಒಪ್ಪಿಗೆ" ಎಂದು ಕಾಲಮೇಲೆ ಕಾಲು ಹಾಕಿ ಸುಮ್ಮನೆ ಕುಳಿತುಕೊಂಡು ಬಿಡಿ!
ಒಂದು ಉತ್ತಮ ಪ್ರಯತ್ನ- ಇನ್ನು ಮುಂದೆಯೂ ಹೀಗೆಯೇ ಒಂದರ ಹಿಂದೆ ಒಂದು ಬರಲಿ!(ಲೇಖನಗಳು ಸ್ವಾಮೀ, ತಪ್ಪಾಗಿ ಮಕ್ಕಳು ಎಂದುಕೊಂಡಿರಿ ಮತ್ತೆ!)
-ಗೋಪೀನಾಥ ರಾವ್

Submitted by gvmt on

ಈ ದುಬಾರಿ ಕಾಲದಲ್ಲಿ ಅ'ವ್ಯಯ' ಯಾರಿಗೆ ಬೇಡ? consider ಮಾಡಿ ನೋಡಿ. ಕೋದಂಡರಾಮ ಉದ್ದವಾಯಿತೆಂದು ಹೆದರಬೇಕಾಗಿಲ್ಲ - ಕಾಲಕ್ಕೆ ತಕ್ಕಂತೆ ಅದು 'ದಂಡ'ವೋ 'ಕೋಮ'ವೊ ಆಗಿ ನಿಮಗೂ ನಿಮ್ಮ ಮಗನಿಗೂ ಹಿತಮಧ್ಯಮವಾಗಿ ನಿಲ್ಲುತ್ತದೆ. ಬಾಣಭಟ್ಟ ಅಂದರೆ ನಿಮ್ಮ ಮಗನಿಗೆ ರೆಡೆಮೇಡ್ ಹೆಂಡತಿ ತಯರಾಗಿರುತ್ತಾಳೆ ("ಬಾಣಂ ವಲ್ಲಭನಕ್ಕುಮೆಂದು ಪಡೆದಾ ವಾಗ್ದೇವಿಗಬ್ಜೋದ್ಭವಂ ಜಾಣಿಂ ಬಾಣಿ ಎನಿಪ್ಪ ಪೆಸರಂ ಮುನ್ನಿತ್ತಂ") ಒಂದು ವೇಳೆ ನಿಮ್ಮ ಸೊಸೆಯನ್ನು ಹುಡುಕುವ ಕೆಲಸವನ್ನು ನಿಮ್ಮ ಮಗ ನಿಮ್ಮ ತಲೆಗೇ ಕಟ್ಟಿದರೆ ಇದು ಸುಲಭೋಪಾಯ. ಏನೇ ಆಗಲಿ, ನೀವು ಮಾತ್ರ ಪವನಜರ "ಶೇಂಗ" ಟ್ರಿಕ್ಕನ್ನು ಮಾಡಲಿಕ್ಕೆ ಹೋಗಬೇಡಿರಿ due to an unfortunate concatenation of circumstances :)

ವೆಂ.

Submitted by pavanaja on

ನಾನು ಇನ್ನೊಂದು ತ್ರೆಡ್‌ನಲ್ಲಿ ಬರೆದ ತಲೆಹರಟೆ ಓದಿ ಸಿಟ್ಟು ಮಾಡಿಕೊಂಡಿರೇನೋ? ಇರಲಿ. ಈಗ ಎರಡು ಹೆಸರು ಸೂಚಿಸುತ್ತೇನೆ.

ಗಂಡಾದರೆ: ಮನ್ಮಯ. ಇದರ ಅರ್ಥ ತನ್ನನ್ನು ತಾನು ಅರಿತವನು, ಆತ್ಮ ಸಾಕ್ಷಾತ್ಕಾರ ಹೊಂದಿದವನು ಎಂದು.

ಹೆಣ್ಣಾದರೆ: ಅನಿಮಿಷ (ಷಾ). ನಿಮಿಷ ಎಂದರೆ ಕಣ್ಣ ರೆಪ್ಪೆ. ಅನಿಮಿಷ ಎಂದರೆ ಕಣ್ಣ ರೆಪ್ಪೆ ಇಲ್ಲದವಳು (ನು) ಎಂದರೆ ದೇವತೆ. ದೇವತೆಗಳಿಗೆ ಕಣ್ಣ ರೆಪ್ಪೆ ಇಲ್ಲ. ನಳ ದಮಯಂತಿ ಕಥೆಯಲ್ಲಿ ನಳನ ವೇಶದಲ್ಲಿ ಬಂದಿದ್ದ ದೇವತೆಗಳನ್ನು ದಮಯಂತಿ ಪತ್ತೆ ಹಚ್ಚಿದ್ದೇ ಅವರು ಕಣ್ಣು ಮಿಟುಕಿಸದಿರುವದನ್ನು ಗಮನಿಸಿ.

ಸಿಗೋಣ,
ಪವನಜ
-----------
[http://www.vishvakannada.com/|Vishva Kannada]
Think globally, Act locally

Submitted by hpn on

ಇವತ್ತು ಬೆಳಿಗ್ಗೆ ಈ ಲೇಖನವನ್ನು ಓದಿದ ನಮ್ಮ ತಾಯಿಯವರು ಈ ಕೆಳಗಿನ ಹೆಸರುಗಳನ್ನು ನಿಮಗೆ ಸೂಚಿಸಲು ತಿಳಿಸಿದರು. ಅದರಂತೆ ಬರೆಯುತ್ತಿದ್ದೇನೆ:
ಶುಭಾಂಗ್, ಅಚ್ಯುತ (ವಿಷ್ಣು ಸಹಸ್ರನಾಮದಿಂದ)
ಕೃತಿ (ಲಕ್ಷ್ಮಿ), ಅದಿತಿ (ದೇವತೆಗಳ ತಾಯಿಯ ಹೆಸರು)

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

Submitted by honnung on

ನಿನ್ನೆ ಸಾಯಂಕಾಲ ಹೊಸೂರು ರಸ್ತೆಯಲ್ಲಿ ಕಾರಿನ ಹಿಂಭಾಗದಲ್ಲಿ 'ಶ್ರೀ ಛಾಯಾ ಸುತ' ಎಂದು ಬರೆದಿದ್ದನ್ನು ನೋಡಿದೆ. ಇದು ಯಾವುದೋ ಒಬ್ಬ ದೇವತೆಯ ಹೆಸರೇ ಇರಬಹುದು. ನನಗೆ ಈ ಪುರಾಣ, ರಾಮಾಯಣ , ಮಹಾಭಾರತಗಳಲ್ಲಿರುವ ಪಾತ್ರಗಳ ಪರಿಚಯ ಅಷ್ಟಿಲ್ಲ. ಈ ಪಾತ್ರಗಳಾದ 'ಛಾಯಾ' ಹಾಗೂ 'ಅವಳ ಮಗ' ಯಾರೆಂದು ಗೊತ್ತೆ?
-----
ಶಶಿಧರ

Submitted by pavanaja on

ಛಾಯೆ (ಛಾಯಾ - ಸಂಸ್ಕೃತ) ಎಂದರೆ ಸೂರ್ಯನ ಹೆಂಡತಿ. ಛಾಯೆಯ ಮಗ ಶನಿ. ಛಾಯಾಸುತ ಅಥವಾ ಛಾಯಾಪುತ್ರ ಎಂದರೆ ಶನಿದೇವ.

ಸಿಗೋಣ,
ಪವನಜ
-----------
[http://www.vishvakannada.com/|Vishva Kannada]
Think globally, Act locally

Submitted by ismail on

ನಾಮದ ಬಲವೊಂದಿದ್ದರೆ ಸಾಕು ಎಂದು ದಾಸರು ಹೇಳಿದ್ದು ಎಷ್ಟು ನಿಜ.

Submitted by mahesha on

ವಯ್ಬವ ಇವೆಲ್ಲ ನಮ್ಮ ಮಕ್ಕಳ ಹೆಸರುಗಳು!! :)

ನನ್ನಿಗ/ಸತ್ಯನಾಥ,
ತಿಂಗಳ/ಚಂದ್ರ,
ನೇಸರ/ಸೂರ್ಯ,
ಸಿರಿ ,
ಮೈಸಿರಿ/ಸುತನು,
ಐಸಿರಿ/ಐಶ್ವರ್ಯ,
ಉಲಿಗಾತಿ/ವಾಗ್ದೇವಿ,
ಪೆರಿಯಪ್ಪ/ಮಹೇಶ :)
ಮರೆಗಾರ/ವಯ್ಬವ
ಚನ್ನೀಲ/ಸುನೀಲ
ತುರುಕಾವ/ಗೋಪಾಲ ( ದನಕಾಯೋನು :) )
ಸಿರಿನೆಲೆಗಾರ/ಶ್ರೀನಿವಾಸ
ಮಾರ/ಮನ್ಮಥ
ಮೀನ್ಗಣ್ಣೆ/ಮಿನಾಕ್ಷಿ
ಬಯಕೆಗಣ್ಣೆ/ಕಾಮಾಕ್ಷಿ
ನಲ್ಗಾರ/ಶಂಕರ

ಹೀಗೆ ಹೆಸರಿಟ್ಟರೆ, ನಮ್ಮ ಮಕ್ಕಳನ್ನು 'ಸುಸಂಸ್ಕೃತ'ರು ಬಂದು "ನೀವು ತಮಿಳರ?" ಎಂದು ಕೇಳೇ ಕೇಳ್ತಾರೆ :)

Submitted by kpbolumbu on

[quote]ಪೆರಿಯಪ್ಪ/ಮಹೇಶ[/quote]

ಇದರ ಬದಲು ಹಿರಿಯಣ್ಣ ಎ೦ದಾಗಬಹುದು. ಅಪ್ಪನಿಗೆ ಕೆಲವೆಡೆ ಅಣ್ಣ ಎ೦ದೂ ಕರಯುತ್ತಾರೆ. ಪೆರಿಯಪ್ಪ ಎ೦ದರೆ ಕನ್ನಡದ೦ತಿರದು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

Submitted by suresh_k on

ಹೌದು, ನನ್ನ ಮಗುವಿಗೆ (ಮಗಳಿಗೆ) ಈಗ ಒಂದೂವರೆ ವರ್ಷ. ಅವಳಿಗೆ ತನ್ಮಯಿ ಅಂತ ಹೆಸರಿಟ್ಟಿದ್ದೇವೆ. ಕೆಲ ತಿಂಗಳ ಹಿಂದೆ ಅವಳ ಕುರಿತಾದ ಒಂದು ಚಿತ್ರ ಮತ್ತು ಪುಟ್ಟ ಬರೆಹವನ್ನು ಸಂಪದಕ್ಕೆ ಲೋಡ್ ಮಾಡಿದ್ದೆ. ಓದಿ- ’ನಾನು ತನ್ಮಯಾ...’ (ಲಿಂಕ್ ಇಲ್ಲೆ ಕೆಳಗಿದೆ ನೋಡಿ). ನನ್ನ ಕರ’ಕರೆ’ಗೆ ಓಗೊಟ್ಟು ಹೆಸರುಗಳನ್ನು ಸೂಚಿಸಿದ ಸಂಪದದ ಎಲ್ಲರಿಗೂ ಧನ್ಯವಾದಗಳು.

-ಸುರೇಶ್ ಕೆ.

Submitted by suresh_k on

’ಮುಂಗಾರು ಮಳೆ’ ಸಿನಿಮಾ ಹಾಡಿನಲ್ಲಿ (...ಕುಣಿದು ಬಾರೇ) ’ನಾನು ತನ್ಮಯಾ...’ ಅಂತ ರಾಗವಾಗಿ ಬರುತ್ತಲ್ಲ ಸ್ವಾಮೀ, ಅದೇ. ಬಹುಶಃ ’ತನ್ಮಯsss...’ ಅಂತ ಬರೆಯಬೇಕಿತ್ತೇನೋ, ಅಲ್ವಾ?

ಟ್ವಿಟ್ಟರಿನಲ್ಲಿ ಸಂಪದ