ವಿಮರ್ಶೆಗೂ ವಿಕೃತಿಗೂ ವ್ಯತ್ಯಾಸವೇ ಇಲ್ಲವೇ?
ಇದನ್ನು ಎಂತಹ ಪತ್ರಿಕೋದ್ಯಮವೆನ್ನಬೇಕೊ!
‘ವಿಜಯ ಕರ್ನಾಟಕ’ ಪತ್ರಿಕೆಯ ಉಪಸಂಪಾದಕ ಹಾಗೂ ಯುವ ಅಂಕಣಕಾರರಾದ ಪ್ರತಾಪ್ ಸಿಂಹ ಈ ವಾರ ತಮ್ಮ ಅಂಕಣದಲ್ಲಿ ಬರೆದಿರುವ ಈ ಲೇಖನವನ್ನು ಗಮನಿಸಿ.
ಎಂ.ಎಫ್.ಹುಸೇನ್ ಧರ್ಮದ ಪ್ರಜ್ಞೆಯನ್ನು ಮೀರಿದ ಕಲಾವಿದ ಎಂದು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ತನ್ನ ಕಲೆಯಲ್ಲಿ ಒಂದು ಧರ್ಮದವರ ಭಾವನೆಗಳಿಗೆ ಘಾಸಿಯಾಗುವ ಹಾಗೆ ಅವಕಾಶ ಕಲ್ಪಿಸಿರುವುದು ಪ್ರಶ್ನಾರ್ಹ. ಆತನನ್ನು ಶಿಕ್ಷಿಸಲು ನ್ಯಾಯಾಲಯವಿದೆ, ಸಂವಿಧಾನವಿದೆ. ಆತನ ವಿರುದ್ಧ ಈಗ ಭಾರತದ ಹಲವಾರು ಪೋಲಿಸ್ ಠಾಣೆಗಳಲ್ಲಿ ಸುಮಾರು ೧೨೫೦ ದೂರುಗಳು ದಾಖಲಾಗಿವೆ. ನ್ಯಾಯಾಲಯಗಳಲ್ಲಿ ವಿಚಾರಣೆಗಳು ನಡೆಯುತ್ತಿವೆ. ಹರಿದ್ವಾರದ ನ್ಯಾಯಾಲಯ ಆತನ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದೆ. ಆದರೆ ಹುಸೇನ್ ಭಾಯ್ ಭಾರತದಿಂದಲೇ ಜಾಗ ಖಾಲಿ ಮಾಡಿ ದುಬೈನಲ್ಲಿ ನೆಲೆಸಿದ್ದಾನೆ. ಆತನನ್ನು ಸಾಮಾನ್ಯ ಜನರು ಒಬ್ಬ ಖಳನಂತೇ ಕಾಣುತ್ತಾರೆ.
ಸರಿ, ಹೀಗಿರುವಾಗ ವಿವಾದವೆದ್ದದ್ದು ಯಾಕೆ? ವಿವಾದಪ್ರಿಯ, ಕಲಹಪ್ರಿಯ ಸುದ್ದಿ ಮಾಧ್ಯಮಗಳು ನಾರದನ ಕೆಲಸವನ್ನು ಮಾಡಿರುವುದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿರುವುದು. ಭಾರತ ರತ್ನ ಯಾರಿಗೆ ಕೊಡಬೇಕು ಎನ್ನುವುದರ ಬಗ್ಗೆ ವ್ಯಾಪಕವಾದ ಚರ್ಚೆ ನಡೆದು ಸಮಾಧಿಯಲ್ಲಿ ಕುಳಿತಿದ್ದವರ ಹೆಸರುಗಳೆಲ್ಲಾ ಎದ್ದು ಬಂದು ಧೂಳೆಬ್ಬಿಸಿದ್ದವು. ಈ ಸಂದರ್ಭದಲ್ಲಿ ಎನ್.ಡಿ.ಟಿ.ವಿ ಒಂದು ಪೋಲ್ ನಡೆಸಿತು. ಅದರಲ್ಲಿ ಭಾರತ ರತ್ನಕ್ಕೆ ನಿಮ್ಮ ಆಯ್ಕೆ ಯಾರು ಆರಿಸಿ ಅಂತ ಕೇಳಿ ಒಂದು ಪಟ್ಟಿಯನ್ನು ಕೊಟ್ಟಿತ್ತು. ಅದರಲ್ಲಿ ಸನ್ಮಾನ್ಯ ಹುಸೇನ್ ಸಾಹೇಬರ ಹೆಸರನ್ನೂ ಸೇರಿಸಿಬಿಟ್ಟಿದ್ದರು. ಇದರಿಂದ ರೊಚ್ಚಿಗೆದ್ದ ಹಿಂದು ಸಂಘಟನೆಯೊಂದು ಎನ್.ಡಿ.ಟಿ.ವಿಯ ಕಛೇರಿಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿ, ಬೆದರಿಕೆ ಹಾಕಿ ಬಂದಿತು. ಅನಂತರ ಮಾಧ್ಯಮಗಳಲ್ಲಿ ‘ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ’ ಎಂಬ ಚರ್ಚೆ ನಡೆಯಲಾರಂಭಿಸಿತು.
ಇದನ್ನು ಉಲ್ಲೇಖಿಸಿ ಅಂಕಣ ಬರೆದಿರುವ ಪ್ರತಾಪ್ ಸಿಂಹರ ಆಶಯವನ್ನು ಮೆಚ್ಚೋಣ. ಅವರ ಲೇಖನದ spiritನ್ನು ಬೆಂಬಲಿಸೋಣ. ಆದರೆ ಒಂದು ರಾಜ್ಯಮಟ್ಟದ ದಿನಪತ್ರಿಕೆಯ ಅಂಕಣಕಾರರಾಗಿ ಅವರು ಬಳಸಿರುವ ಭಾಷೆ, ಅವರ ವಿಷಯ ಮಂಡನಾ ಶೈಲಿ ಅವರನ್ನು ಒಬ್ಬ ಮತಾಂಧ ಹಿಂದು ಸಂಘಟನೆಯ ಮುಖವಾಣಿ ಪತ್ರಿಕೆಯ ಬರಹಗಾರನೆನ್ನುವಂತೆ ತೋರುತ್ತದೆ.
ತಮ್ಮ ಲೇಖನಕ್ಕೆ ಅವರು ಕೊಟ್ಟಿರುವ ಶೀರ್ಷಿಕೆಯನ್ನೇ ಗಮನಿಸಿ, ‘ನಿಮ್ಮ ತಾಯಿಯನ್ನು ಬೆತ್ತಲಾಗಿ ಚಿತ್ರಿಸಿದರೆ ಸುಮ್ಮನಿರ್ತೀರಾ?’ ಎಂಥಾ ಪ್ರಚೋದನಕಾರಿ ಶೀರ್ಷಿಕೆಯಿದು! ಇಂಥ ವಾಕ್ಯಗಳು ಧರ್ಮಯುದ್ಧವನ್ನು ಘೋಷಿಸುವ ಮತಾಂಧ ಮುಲ್ಲಾ, ಹಿಂದೂ ಸಂಘಟನೆಗಳಿಗೆ ಹೇಳಿ ಮಾಡಿಸಿದ್ದೇ ಹೊರತು ಪ್ರತಾಪ್‌ರಂತಹ ಯುವ ಪತ್ರಕರ್ತರಿಗಲ್ಲ.
ಇನ್ನು ಅವರು ತಮ್ಮ ವಿಚಾರ ಮಂಡಿಸುವ ಶೈಲಿಯನ್ನು ಗಮನಿಸಿದರೆ ಅವರ ಅಭಿರುಚಿಯ ಬಗ್ಗೆಯೇ ಸಂಶಯಗಳು ಮೂಡುತ್ತವೆ. ಹುಸೇನ್ ನಿಜಕ್ಕೂ ಕಲಾವಿದನೇ ಆಗಿದ್ದರೆ ಭಾರತ ಮಾತೆಯನ್ನು ಬೆತ್ತಲಾಗಿ ಚಿತ್ರಿಸಿ ಅವನ ತಾಯಿಯನ್ನು ಪೂರ್ತಿ ಬಟ್ಟೆ ಹಾಕಿ ಚಿತ್ರಿಸುತ್ತಿರಲಿಲ್ಲ. ಸರಸ್ವತಿ ಲಕ್ಷ್ಮಿಯರನ್ನು ಬೆತ್ತಲಾಗಿ ಚಿತ್ರಿಸಿ ತನ್ನ ಮಗಳಿಗೆ ಬಟ್ಟೆ ತೊಡಿಸಿ ಚಿತ್ರಿಸುತ್ತಿರಲಿಲ್ಲ ಎಂದು ಆರ್ಭಟಿಸುತ್ತಾರೆ ಪ್ರತಾಪ್. ಇವರ ಮನಸ್ಸಿನಲ್ಲಿರುವುದಾದರೂ ಏನು? ಹುಸೇನ್ ತನ್ನ ತಾಯಿಯನ್ನು, ಮಗಳನ್ನು ಬೆತ್ತಲಾಗಿ ಚಿತ್ರಿಸಬೇಕೆಂದೇ? ಹಾಗೆ ಚಿತ್ರಿಸಿದರೆ ಇವರಿಗೆ ಸಮಾಧಾನವಾಗುತ್ತದೆಯೇ? ಆಗ ಆತನ ‘ಪೋರ್ನಾಗ್ರಫಿಕ್ ಚಿತ್ರ’ಗಳೆಲ್ಲಾ ಕಲೆಯ maaster piece ಆಗಿಬಿಡುತ್ತವೆಯೇ? ಒಬ್ಬ ವ್ಯಕ್ತಿಯನ್ನು ನಿಂದಿಸುವಾಗ, ಟೀಕಿಸುವಾಗ ಆತನ ತಾಯಿ, ಮಗಳು, ಅಕ್ಕ ತಂಗಿಯರನ್ನು ಎಳೆದು ತರುವುದು ದುಶ್ಯಾಸನ ವಂಶಸ್ಥರಿಗೆ ಸರಿಯೆನ್ನಿಸುತ್ತದೆಯೇ ಹೊರತು ಕನ್ನಡ ಪತ್ರಿಕೋದ್ಯಮದ ಆಶಾ ಕಿರಣವಾಗಿರುವ ಪ್ರತಾಪ್ ಸಿಂಹರಿಗಲ್ಲ. ತಮ್ಮ ಲೇಖನದಲ್ಲಿ ಪ್ರಕಟಿಸಿಕೊಂಡಿರುವ ಚಿತ್ರಗಳಲ್ಲಿ ಒಂದು ಬದಿಯಲ್ಲಿ ಭಾರತ ಮಾತೆಯ ಚಿತ್ರ ಇನ್ನೊಂದು ಬದಿಯಲ್ಲಿ ಹುಸೇನ್ ತಾಯಿಯ ಚಿತ್ರ… ಹೀಗೆ ಪ್ರಕಟಿಸಿ ಅವರನ್ನೂ ಬೆತ್ತಲಾಗಿ ಚಿತ್ರಿಸು ನೋಡೋಣ ಎನ್ನುವ ಪ್ರತಾಪ್ ವಿಕೃತಿಗೆ ಧಿಕ್ಕಾರವಿರಲಿ.
ಇನ್ನು ಎನ್.ಡಿ.ಟಿಯವರ ಮೂರ್ಖತನದ ಬಗ್ಗೆ ಮಾತನಾಡೋಣ. ಹೀಗೆ ಕಲ್ಪಿಸಿಕೊಳ್ಳಿ, ಆ ಛಾನೆಲ್ಲಿನವರು ಭಾರತ ರತ್ನದ ಪಟ್ಟಿಯಲ್ಲಿ ದಾವುದ್ ಇಬ್ರಾಹಿಂನ ಹೆಸರನ್ನು ಪ್ರಸ್ತಾಪಿಸಿದ್ದರೆ ಪ್ರತಿಕ್ರಿಯೆ ಯಾವ ರೀತಿಯದ್ದಾಗಿರುತ್ತಿತ್ತು? ಆ ಚಾನೆಲ್ಲಿನವರಿಗೆ ಬುದ್ಧಿಯಿಲ್ಲ, ಸಾಮಾಜಿಕ ಜವಾಬ್ದಾರಿಯಿಲ್ಲ, ಮಾನಗೆಟ್ಟವರು ಅವರು ಎಂದು ಟೀಕಿಸಿ ಸಾಧ್ಯವಾದರೆ ಅವರ ವಿರುದ್ಧ ನ್ಯಾಯಾಲಯದಲ್ಲಿ ಒಂದು PIL ಹಾಕಿ ಸುಮ್ಮನಾಗುತ್ತಿದ್ದರು. ಈಗ ಹುಸೇನ್‌ರನ್ನೂ ಸಹ ಆರೋಪಿ, ಖಳ ಎಂದು ಕರೆಯುವ ಮಂದಿಗೆ ಎನ್.ಡಿ.ಟಿ.ವಿಯವರ ಮೂರ್ಖತನವನ್ನು ಹಾಗೆ ಖಂಡಿಸಲು ಸಾಧ್ಯವಿರಲಿಲ್ಲವೇ? ಆಗ ಯಾರ ಅಭಿವ್ಯಕ್ತಿ ಸ್ವಾತಂತ್ರ ಹರಣವೂ ಆಗುತ್ತಿರಲಿಲ್ಲ. ಅದಕ್ಕೆ ಬದಲಾಗಿ ಗೂಂಡಾಗಳ ಹಾಗೆ ನುಗ್ಗಿ ಹಿಂಸೆಯಿಂದ ವರ್ತಿಸಿದರೆ ಇಡೀ ಸಮಸ್ಯೆಯ ಕೇಂದ್ರ ಅಭಿವ್ಯಕ್ತಿ ಸ್ವಾತಂತ್ರದ ಹರಣದೆಡೆಗೆ ಸ್ಥಳಾಂತರಗೊಂಡುಬಿಡುತ್ತದೆ.
ಈ ಹಿಂದೆ ತಸ್ಲೀಮಾ ನಸ್ರಿನ್ ಎಂಬ ಬಾಂಗ್ಲಾ ಲೇಖಕಿಯ ವಿರುದ್ಧ ಮತಾಂಧ ಮುಸ್ಲೀಮರು ಬೀದಿಗಿಳಿದು ಗದ್ದಲ ನಡೆಸಿದಾಗ ಇದೇ ಲೇಖಕರು ಅದನ್ನು ಖಂಡಿಸಿ ಇವರಿಗೆ ಒಳ್ಳೆಯ ಮುಸಲ್ಮಾನರು ಆದರ್ಶವಾಗುವುದಿಲ್ಲವೇಕೆ ಎಂದು ಹಲುಬಿದ್ದರು. ಈಗ ಅದೇ ಪ್ರಶ್ನೆಯ ದಿಕ್ಕನ್ನು ಬದಲಾಯಿಸಿ ಈ ಹಿಂದುಗಳಿಗೆ ಗಾಂಧಿ ಏಕೆ ಆದರ್ಶವಾಗುವುದಿಲ್ಲ ಎಂದು ಕೇಳಬೇಕಾಗುತ್ತದೆ. ಪೂರ್ ಪ್ರತಾಪ್!

- Login or register to post comments
- 637 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ವಿಮರ್ಶೆಗೂ ವಿಕೃತಿಗೂ ವ್ಯತ್ಯಾಸವೇ ಇಲ್ಲವೇ?
ಹೌದು, ವಿಕ್ರಮ ಸಿಂಹ ರಂಥಹ ವಿಮರ್ಶಕರಿಗೂ ಅವರ ಬರಹಗಳನ್ನು ಅರ್ಥ ಮಾಡಿಕೊಳ್ಳದ ವಿಕೃತಿಕಾರರಿಗೂ ಬಹಳವ್ಯತ್ಯಾಸವಿದೆ !!
ಉ: ವಿಮರ್ಶೆಗೂ ವಿಕೃತಿಗೂ ವ್ಯತ್ಯಾಸವೇ ಇಲ್ಲವೇ?
ಯಾರ್ರೀ ಇವ ವಿಕ್ರಮ ಸಿಂಹ? ಒಂದು ಸಿಂಹವನ್ನೇ ನಾವು ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ!
................................................................
ಹಾಸ್ಯಕ್ಕೆ ಮೀಸಲಾದ ನನ್ನ ಬ್ಲಾಗು: http://nagenagaaridotcom.wordpress.com
ಭೇಟಿ ಕೊಡಿ, ಓದಿ, ಸಲಹೆ ನೀಡಿ, ನೀವೂ ಬರೆಯಿರಿ
ಉ: ವಿಮರ್ಶೆಗೂ ವಿಕೃತಿಗೂ ವ್ಯತ್ಯಾಸವೇ ಇಲ್ಲವೇ?
ಪ್ರತಾಪ್‍ಸಿಂಹ ಬರೆದುದನ್ನು ಓದೋದು ನಿಲ್ಲಿಸಿ ಯಾವುದೋ ಕಾಲವಾಯಿತು..ಆತನ ಲಾಜಿಕ್‍ಗಳು ಅರ್ಥವಾಗೋದು ಕಷ್ಟ!
ಉ: ವಿಮರ್ಶೆಗೂ ವಿಕೃತಿಗೂ ವ್ಯತ್ಯಾಸವೇ ಇಲ್ಲವೇ?
ಪ್ರತಾಪ ಸಿಮ್ಮರ ಬರಹಗಳನ್ನು ಓದುವುದು ನಿಲ್ಲಿಸಿ ತುಂಬ ದಿನಗಳಾದುವು. ಯಾಕಂದ್ರೆ ವಿ.ಕ. ನ ಓದುವುದನ್ನೇ ನಿಲ್ಲಿಸಿದ್ದೇನೆ. ಈಚೀಚೆಗೆ ಇವರ ಬರಹಗಳು ತುಂಬ ಎಳಸುತನದಿಂದ ಕೂಡಿದೆ ಅಂತ ಕೇಳಿದ್ದೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ವಿಮರ್ಶೆಗೂ ವಿಕೃತಿಗೂ ವ್ಯತ್ಯಾಸವೇ ಇಲ್ಲವೇ?
ಪ್ರತಾಪ್ ಸಿಂಹ ಯಾರು?..
ವಿ.ಕ ದ ಉಪ ಸಂಪಾದಕ.
ಅಂಕಣಕಾರ.
ಇದ್ದದ್ದನ್ನು ಇದ್ದ ಹಾಗೆಯೇ ಹೇಳುವುದು ಈತನ ಸ್ವಭಾವ. ತಿಪ್ಪೆ ಸಾರಿಸಿದಂತೆ ಬರೆಯುವುದು ಈತನ ಜಾಯಮಾನವಲ್ಲ. ಅಡ್ದಗೋಡೆಯ ಮೇಲೆ ದೀಪವಿಟ್ಟಂತೆ ಬರೆದು ’ನೀವೂ ಸರಿ, ಅವರೂ ಸರಿ’ ಎಂದು ಬರೆದು ಅಸಲಿ ಸಮಸ್ಯೆಯನ್ನೇ ಮುಚ್ಚಿಡುವುದನ್ನು ಇವರು ಮಾಡುವುದಿಲ್ಲ. ಇವರ ಬರವಣಿಗೆಯ ವಿಷಯಗಳು ಬಹಳ ವಿಸ್ತಾರ. ಇಂತಹ ಪತ್ರಕರ್ತರು ಇನ್ನೂ ಹೆಚ್ಚಬೇಕು.
ಉ: ವಿಮರ್ಶೆಗೂ ವಿಕೃತಿಗೂ ವ್ಯತ್ಯಾಸವೇ ಇಲ್ಲವೇ?
ಪ್ರತಾಪ್ ಮೇಲಿರುವ ಅಭಿಮಾನದಿಂದಾಗಿಯೇ ನಾನು ಅವರ ಹಲವು ಎಳಸು ಹಾಗೂ ಏಕಮುಖೀ ಚಿಂತನೆಯ ಬರಹಗಳನ್ನು ಸಹಿಸಿಕೊಂಡು ಅವರನ್ನು ಓದಿ ಸ್ಪಂದಿಸುತ್ತಿರುವುದು. ಇದನ್ನು ವಿಕಾಸ್ ಗಮನಿಸಬೇಕು.
ಇನ್ನು ಗೋಡೆ ಮೇಲಿನ ದೀಪ ಎಂಬ ಪದ ಪುಂಜದ ಪ್ರಯೋಗದ ಬಗ್ಗೆ ನನಗೆ ಕುತೂಹಲವಿದೆ. ಒಂದು ಸನ್ನಿವೇಷ ಗಮನಿಸಿ ಒಂದು ಗೋಡೆಯಿದೆ ಅದರ ಅತ್ತ ಬದಿಯಲ್ಲೂ ಮಂದಿಯಿದ್ದಾರೆ ಇತ್ತ ಬದಿಯಲ್ಲೂ ಇದ್ದಾರೆ ಅವರಲ್ಲಿ ಒಳ್ಳೆಯವರೂ ಇದ್ದಾರೆ ಕೆಡುಕರೂ ಇದ್ದಾರೆ ಎರಡೂ ಬದಿಯ ಜನರಿಗೂ ಬೆಳಕು ಕೊಡಬೇಕಾದ್ದು ದೀಪದ ಧರ್ಮ ಅಲ್ಲವೇ?
ಇನ್ನು ಏಕಮುಖೀ ಅಭಿಪ್ರಾಯಗಳ ಬಗ್ಗೆ. ‘ಗುಲಾಬಿ ನಿನಗೆ ಇಷ್ಟವಾ?’ ಅಂತ ಕೇಳಿದಾಗ ಹೌದು ಎಂದರೆ ನೀವು ಪರಿಸರ ಪ್ರೇಮಿ, ಪ್ರಕೃತಿ ಆರಾಧಕ, ಸೌಂದರ್ಯ ಪ್ರಜ್ಞಾವಂತ(ಹೊಸ ಪ್ರಯೋಗ), ಇಲ್ಲ ಎಂದರೆ ನೀನು ಜೀವ ವಿರೋಧಿ, ಗುಲಾಬಿಯ ವಿನಾಶ ಬಯಸುವವ ಎಂಬ ರೀತಿಯ ಏಕಮುಖಿ ಅಭಿಪ್ರಾಯಗಳು ಎಷ್ಟರ ಮಟ್ಟಿಗೆ ಸರಿ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವಿಮರ್ಶೆಗೂ ವಿಕೃತಿಗೂ ವ್ಯತ್ಯಾಸವೇ ಇಲ್ಲವೇ?
ಪ್ರತಾಪರ ವಿಮರ್ಶೆಯನ್ನು ಇಲ್ಲಿ ವಿಕೃತ ವಿಮರ್ಶೆ ಮಾಡಿರುವುದು ಓದಿದಾಗ ನನಗೂ ಅದೇ ಸಂಶಯ ಬರುತ್ತಿದೆ. ವಿಮರ್ಶೆಗೂ ವಿಕೃತಿಗೂ ವ್ಯತ್ಯಾಸವೆ ಇಲ್ಲವೆ?!!!
ಅಲ್ಲಿ ಪ್ರತಾಪ ಮಾಡಿದ್ದು ವಿಕೃತಿಯಾದರೆ ಇಲ್ಲಿ ಅವರ ವಿಕೃತಿಯ ವಿಮರ್ಶೆ ಇನ್ನೂ ವಿಕೃತ !
ಉ: ವಿಮರ್ಶೆಗೂ ವಿಕೃತಿಗೂ ವ್ಯತ್ಯಾಸವೇ ಇಲ್ಲವೇ?
ಗುರುರಾಜ ಕೊಡ್ಕಣಿ
ನಿಜ, ಪ್ರತಾಪಸಿ೦ಹರಿಗೆ ಹುಸ್ಸೇನ್ ಕೃತ್ಯವನ್ನು ಖ೦ಡಿಸುವುದಾದರೆ,ಬೇರೆ ರೀತಿ ಖ೦ಡಿಸಬಹುದಾಗಿತ್ತು.ನಿಜಕ್ಕೂ ಅವರ ಬರವಣಿಗೆ ಈ ಲೇಖ್ಹನದಲ್ಲಿ ತು೦ಬಾ ಪ್ರಚೋದನಕಾರಿಯಾಗಿದೆ.ಅಷ್ಟೇ ಅಲ್ಲದೆ ಬರವಣಿಗೆಯ ರೀತಿ ಕೊಡಾ ತು೦ಬಾ cheap ಎನ್ನುವ ವರ್ಗದ್ದಾಗಿದೆ.
ಉ: ವಿಮರ್ಶೆಗೂ ವಿಕೃತಿಗೂ ವ್ಯತ್ಯಾಸವೇ ಇಲ್ಲವೇ?
ಗುರುರಾಜರೇ,
ನನ್ನ ಕೂಗಿಗೆ ದನಿ ಸೇರಿಸಿದ್ದಕ್ಕೆ ಧನ್ಯವಾದಗಳು.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com