ಭರತೇಶ ವೈಭವ ಕಲ್ಪು ೧೫ - ಕನ್ನಡದಲ್ಲಿ ಶ್ಲೇಷಾಲಂಕಾರದ ಪ್ರಯೋಗ
ಈ ದಿನ "ಕನ್ನಡ ನುಡಿಯ ತಂಪರಿವಿನ (Self-Evolving capability)" ಬಗ್ಗೆ ಸ್ವಲ್ಪ ಬೆಳಕು ಚೆಲ್ಲುವ ಭರತೇಶ ವೈಭವದ ಎರಡು ಪದ್ಯಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು.
೧. ಬೇಕಾದರಾಡಿಸಿ ಗಾಳಿಪಟವನರ್ತಿ | ಸಾಕಾಗೆ ಸುರುಳುವನಂತೆ || ನೂಕಿ ಚಿತ್ತವ ಹೊರಗಾಡಿಸುವನು ತನ್ನೊ | ಳೇಕವಾಗಿರಿಸುವನೊಮ್ಮೆ ||
(ಬೇಕಾದರೆ ಆಡಿಸಿ ಗಾಳಿಪಟವನು, ಅರ್ತಿ ಸಾಕಾಗೆ, ಸುರುಳುವನಂತೆ, ನೂಕಿ, ಚಿತ್ತವ, ಹೊರಗಾಡಿಸುವನು. ತನ್ನೊಳು ಏಕವಾಗಿರಿಸುವನು ಒಮ್ಮೆ). ನಾಯಕಿ ಹೇಳುವ ಮಾತಿದು. ಇಲ್ಲಿ "ಅರ್ತಿ" ಎಂದರೆ ಕುತೂಹಲ, ಆಸಕ್ತಿ.
೨. ಕೆಳದಿಯ ಕೈಯ ಹೊಂದಟ್ಟೆಯ ತಾನೊಯ್ದು | ಮಲಯಜವೀಟಿಕಾಕ್ಷತೆಯ || ನಳಿತೋಳ ನೀಡಿ ಭಾವಗೆ ಕೊಟ್ಟಳರಸನಾ | ಗಳೆ ಕೈಕೊಂಡನರ್ತಿಯೊಳು||
(ಕೆಳದಿಯ ಕೈಯ ಹೊನ್ ತಟ್ಟೆಯ ತಾನೊಯ್ದು, ಮಲಯಜವೀಟಿಕಾಕ್ಷತೆಯ ನಳಿತೋಳ ನೀಡಿ ಭಾವಗೆ ಕೊಟ್ಟಳು. ಅರಸನು ಆಗಳೆ ಕೈಕೊಂಡನು ಅರ್ತಿಯೊಳು). "ಅರಸನು ಪ್ರೀತಿಯಿಂದ, ಗೆಳತಿಯ ಕೈಯಿಂದ ಎಲೆ-ಅಡಿಕೆ ತೆಗೆದುಕೊಂಡನು" ಎಂಬರ್ಥದಲ್ಲಿ.
ಇಲ್ಲಿ "ಅರ್ತಿಯೊಳು" ಎಂದರೆ "ನಲ್ಮೆಯಿಂದ, ಪ್ರೀತಿಯಿಂದ, ಒಲುಮೆಯಿಂದ". ಅಚ್ಚಕನ್ನಡದ "ಅರ್ತಿ" ಪದ ಸಂಸ್ಕೃತದ "ಅರ್ಥಿ" ಪದದ ತದ್ಭವವಲ್ಲ. ಆದರೆ ಕೆಲವೊಮ್ಮೆ ಅದೇ ಅರಿವು ಮೂಡಿಸುತ್ತದೆ.
ಒಂದು ಸಂಸ್ಕೃತ ಸುಭಾಷಿತ ಗಮನಿಸಿ.
ಸುಖಾರ್ಥೀ ವಾ ತ್ಯಜೇತ್ ವಿದ್ಯಾ, ವಿದ್ಯಾರ್ಥೀ ವಾ ತ್ಯಜೇತ್ ಸುಖಂ | ಸುಖಾರ್ಥಿನಃ ಕುತೋ ವಿದ್ಯಾ, ವಿದ್ಯಾರ್ಥಿನಃ ಕುತೋ ಸುಖಂ ||
ಸಂಸ್ಕೃತದಲ್ಲಿ "ಅರ್ಥಿನ್" ಎಂದರೆ ಆಸಕ್ತ, ಆಕಾಂಕ್ಷೆಯುಳ್ಳ, ಭಿಕ್ಷುಕ, ಸೇವಕ ಎಂಬೆಲ್ಲ ಅರ್ಥಗಳಿವೆ. "ಅರ್ಥಿ" ಪದದ ಸ್ವತಂತ್ರ ಬಳಕೆಯನ್ನು ಮಾಡಬಹುದಾಗಿದ್ದರೂ ಇದು ಬೇರೆ ಬೇರೆ ನಾಮಪದಗಳೊಡನೆ ಬಂದು ಬಳಕೆಯಾಗುವ ಸಂಭವಗಳೇ ಹೆಚ್ಚು. ಉದಾ:- ಪರೀಕ್ಷಾರ್ಥಿ, ಉದ್ಯೋಗಾರ್ಥಿ, ಸೇವಾರ್ಥಿ, ವಿದ್ಯಾರ್ಥಿ, ಸ್ವಾರ್ಥಿ.
ವಿದ್ಯಾ + ಅರ್ಥಿ = ವಿದ್ಯಾರ್ಥಿ (ವಿದ್ಯೆಯಲ್ಲಿ ಆಸಕ್ತಿಯುಳ್ಳುವನು, ವಿದ್ಯೆಯ ಭಿಕ್ಷೆ ಬೇಡುತ್ತಿರುವವನು ಎಂಬ ಅರ್ಥವೂ ಇದೆ!!!!)
ಹಾಗಾದರೆ ಕನ್ನಡದ "ಅರ್ತಿ" ಎಂದರೇನು ?
Ka. arti ಪ್ರೀತಿ, ಸಂತೋಷ, ಇಷ್ಟ, ಸೊಗಸು, love, desire, a pleasant object;
Tu. arti fondness
ಕನ್ನಡದ ನೆಲೆಗಟ್ಟಿನಲ್ಲಿ ನೋಡಿದರೆ, "ಅರ್ಥಿ" ಪದವನ್ನು ಬಳಸುವುದಕ್ಕಿಂತ "ಅರ್ತಿ" ಪದವನ್ನು ಬಳಸೋದು ಹೆಚ್ಚು ಪಕ್ವವಾದ ಪ್ರಯೋಗ! ಬೇಕಿದ್ದರೆ ಗಮನಿಸಿ. ವಿದ್ಯಾರ್ತಿ - ವಿದ್ಯಾ(ಸಂಸ್ಕೃತ) + ಅರ್ತಿ(ಕನ್ನಡ) - ವಿದ್ಯೆಯನ್ನು ಇಷ್ಟಪಟ್ಟು ಪ್ರೀತಿಯಿಂದ, ಆಸಕ್ತಿ-ಕುತೂಹಲಗಳಿಂದ ಶ್ರದ್ಧೆವಹಿಸಿ ಸೊಗಸಾಗಿ ಕಲಿಯುತ್ತಿರುವವನು. ಕನ್ನಡದಲ್ಲಿ, ಶ್ಲೇಷಾಲಂಕಾರದ ವ್ಯಾಪ್ತಿಯನ್ನು ಹೇಗೆಲ್ಲ ವಿಸ್ತರಿಸಬಹುದು, ಅಲ್ವಾ. ಈ "ಅರ್ತಿ" ಪದ ಕನ್ನಡ ಕವಿಗಳಿಗೆ ತುಂಬಾ ಇಷ್ಟವಾದ ಪದವಾಗಿತ್ತು ಎನಿಸುತ್ತದೆ. ಕಬ್ಬಿಗರ ಕಾವನದಲ್ಲಿಯೂ ಇದರ ಬಳಕೆಗಳಿವೆ. ಆದ್ದರಿಂದ,
೧. ವಿದ್ಯಾರ್ಥಿ, ವಿವಾಹಾರ್ಥಿ ಮುಂತಾಗಿ ಹೇಳುವಾಗ, ಸಣ್ಣ "ತ" ಬಳಸಲು ಮುಜುಗರ ಪಡಬೇಡಿ.
೨. ವ್ಯಾಕರಣದ ನಿಟ್ಟಿನಿಂದ ವಿದ್ಯಾರ್ತಿ, ವಿವಾಹಾರ್ತಿ ಪದಬಳಕೆಗಳು ವ್ಯಾಕರಣದ ಅಡಿಯಲ್ಲಿ ಸರಿಯೇ ಆಗುತ್ತದೆ.
೩. ಅರ್ತಿ ಪದ ತುಳುವಿನಲ್ಲಿಯೂ ಇದೆಯಂತೆ. ಕನ್ನಡ-ತುಳುವರನ್ನು ಒಂದಾಗಿಸಿದ ಪುಣ್ಯವೂ ನಿಮಗೆ ಬರತ್ತೆ.
೪. ಕನ್ನಡದಲ್ಲಿ "ಅಲ್ಪಪ್ರಾಣ-ಮಹಾಪ್ರಾಣಗಳ" ಬಗ್ಗೆ ತುಂಬಾ ಚರ್ಚೆಗಳಾಗುತ್ತಿದ್ದು, ಆ ಚರ್ಚೆಯ ಹೊರತಾಗಿ ನೋಡಿದರೂ, "ವಿದ್ಯಾರ್ಥಿ" ಬಳಕೆಗಿಂತ, "ವಿದ್ಯಾರ್ತಿ" ಮಾಗಿದ ಬಳಕೆಗಳಲ್ಲೊಂದು.
೫. ಡಬ್ಬಲ್ ಮೀನಿಂಗ್
ಪ್ರಿಯರಿಗೆ "ಅರ್ತಿ" ಹೇಳಿಮಾಡಿಸಿದಂತಹ ಪದ. ಅಥವಾ, ಸುಸಂಸ್ಕೃತವಾಗಿ ಹೇಳಬೇಕೆಂದರೆ, "ಕುರಿತು ಓದದೆಯುಂ ಕಾವ್ಯೇಷು ಶ್ಲೇಷಾಲಂಕಾರ ಪ್ರಯೋಗ ಪರಿಣತಮತಿಗಳ್" ಆಗಬೇಕಿದ್ದರೆ "ಅರ್ತಿ" ಬಳಸಿ.

- Login or register to post comments
- 373 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಭರತೇಶ ವೈಭವ ಕಲ್ಪು ೧೫ - ಕನ್ನಡದಲ್ಲಿ ಶ್ಲೇಷಾಲಂಕಾರದ ಪ್ರಯೋಗ
ಬಲಾ ಬಾಪುರೆ!!
ಕನ್ನಡದ ಅರ್ತಿಯೇ ಸಕ್ಕದಕ್ಕೆ ಹೋಗಿ ಅರ್ಥಿ ಆಗಯ್ತೆ.. ಅಂತ ಸಕ್ಕದದ ಮೂಲವ್ಯಾದಿಗಳಂಗೆ ಹೇಳುಮ ಸುನಿಲ?
ಸಕ್ಕತ್!!
ಉ: ಭರತೇಶ ವೈಭವ ಕಲ್ಪು ೧೫ - ಕನ್ನಡದಲ್ಲಿ ಶ್ಲೇಷಾಲಂಕಾರದ ಪ್ರಯೋಗ
ಹೇಯ್, ಮಹೇಶ. "ಹಾಗೆಲ್ಲ ಹೇಳೋದು ತಪ್ಪು", ಅಂತ ನಿನಗೆ ಗೊತ್ತೇ ಗೊತ್ತು.