ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು?
ಕನ್ನಡ ಜನರ ಓದು ಅಭ್ಯಾಸದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ನನ್ನ ಮಾತುಗಳು ಕೊಂಚ ವಿಚಿತ್ರವಾಗಿ ಕೇಳಿಸಬಹುದು. ಆದರೂ ತಾಳ್ಮೆಯಿಂದ ಓದಿ ಚರ್ಚೆ ಮಾಡುತ್ತೀರೆಂದುಕೊಂಡಿದ್ದೇನೆ.
ಪುಸ್ತಕಗಳನ್ನು ಸಂಗ್ರಹಿಸುವುದು, ಜೋಪಾನವಾಗಿ ಇಟ್ಟುಕೊಳ್ಳುವುದು ವ್ಯರ್ಥ ಎಂದು ಅನಿಸುತ್ತಿದೆ. ನಮ್ಮ ಅಪ್ಪನ ಕಾಲದಿಂದ ಮತ್ತು ನಾನು ಓದ ತೊಡಗಿದಾಗಿನಿಂದ ಸಂಗ್ರಹಗೊಂಡ ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ಅನಗತ್ಯ ಹೊರೆ ಅನಿಸತೊಡಗಿದೆ.
೧. ಮತ್ತೆ ಮತ್ತೆ ಓದಲು ಬಯಸುವ ಪುಸ್ತಕಗಳ ಸಂಖ್ಯೆ ನನಗೆ ಗೊತ್ತಿರುವ ಭಾಷೆಗಳನ್ನೆಲ್ಲ ಸೇರಿಸಿದರೂ ಐನೂರು ಮೀರಲಾರದು. ಮತ್ತೆ ಯಾಕೆ ಈ ಪುಸ್ತಕ ರಾಶಿ?
೨. ನಮ್ಮ ಯಾರದೇ ಸಂಗ್ರಹದಲ್ಲಿರುವ ಪುಸ್ತಕಗಳಲ್ಲಿ ಶೇ ೮೦ಕ್ಕೂ ಹೆಚ್ಚು ಪುಸ್ತಕಗಳನ್ನು ಎರಡನೆಯ ಬಾರಿಗೆ ತೆರೆದು ನೋಡುವುದೇ ಇಲ್ಲ. ಮತ್ತೆ ಯಾಕೆ ಅವನ್ನೆಲ್ಲ ಇಟ್ಟುಕೊಂಡಿರುತ್ತೇವೆ?
೩. ಹೆಣ್ಣುಮಕ್ಕಳು ಇಡೀ ಜೀವಮಾನದಲ್ಲಿ ಹತ್ತು ಬಾರಿ ಕೂಡ ಉಡದ ಬೆಲೆ ಬಾಳುವ ಜರಿ ಸೀರೆಗಳನ್ನು ಸಂಗ್ರಹಿಸುವ ಹಾಗೆ ಪುಸ್ತಕಗಳನ್ನೂ ನಾನು ಸಂಗ್ರಹಿಸಿಕೊಂಡಿದ್ದೀನಾ?
೪. ಓದಿದ್ದು ಮನಸ್ಸಿಗೆ ಇಳಿದು ನನ್ನ ವ್ಯಕ್ತಿತ್ವದ ಭಾಗವೇ ಅಗುವುದಾದರೆ ನಿರ್ಜೀವ ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು? ನನಗೆ ಹಾಗೆ ಓದಲು ಅಗಿಲ್ಲ ಎಂದೇ?
೫. ವರ್ತಮಾನದಲ್ಲಿ ಬದುಕುವುದು ಮುಖ್ಯ ಅನ್ನುವುದಾದರೆ ಭೂತಕಾಲದ ಭಾವ-ವಿಚಾರ ವಸ್ತು ಸಂಗ್ರಹಾಲಯದಂತಿರುವ ಪುಸ್ತಕಗಳನ್ನು ಯಾಕೆ ಕೂಡಿಟ್ಟುಕೊಳ್ಳಬೇಕು?
೬. ಬರೆಯುವ ಕೆಲಸದಲ್ಲಿರುವವರಿಗೆ ರೆಫರೆನ್ಸ್‌ಗೆ ಬೇಕು ಅನ್ನುವ ವಾದ ಇದ್ದೀತು. ಆದರೆ ಅದಕ್ಕೆ ಈಗ ಅಂತರ್ಜಾಲ ಇದೆ, ಲೈಬ್ರರಿ (ಎಷ್ಟೇ ಕೆಟ್ಟ ವ್ಯವಸ್ಥೆಯವಾದರೂ) ನಮ್ಮಲ್ಲಿವೆ. ಖಾಸಗಿ ಪುಸ್ತಕ ಸಂಗ್ರಹ ಏಕೆ ಬೇಕು?
೭. ದುಡ್ಡು ಕೂಡಿಡುವುದಕ್ಕೆ, ಒಡವೆಗಳನ್ನು ಮಾಡಿಸಿ ಬ್ಯಾಂಕಿನ ಲಾಕರ್‌ನಲ್ಲಿ ಇಡುವುದಕ್ಕೆ, ಇರುವ ಒಂದು ಮನೆಯಲ್ಲದೆ ಹಲವು ಮನೆ ಸೈಟುಗಳನ್ನು ಮಾಡಿಕೊಳ್ಳುವುದಕ್ಕೆ ಇತ್ಯಾದಿ ಚಟುವಟಿಕೆಗಳಿಗೆ ಮತ್ತು ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದಕ್ಕೆ ಯಾವ ವ್ಯತ್ಯಾಸವಿದೆ?

- Login or register to post comments
- 1301 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಹೊಳೆದಿರಲಿಲ್ಲ
ನನಗಿದು ಹೊಳೆದಿರಲಿಲ್ಲ.
ನನಗೂ ಹೊಳೆದಿರಲಿಲ್ಲ
ಪುಸ್ತಕಗಳನ್ನು ಸ್ವಂತದ ಲೈಬ್ರೆರಿಯಂತೆ ಇಟ್ಟುಕೊಳ್ಳುವುದು 'convention'. ಹಾಗೆ ನೋಡಿದರೆ ನಾವು ಕಂಪ್ಯೂಟರಿನಲ್ಲಿ ಸ್ಟೋರ್ ಮಾಡಿಟ್ಟುಕೊಳ್ಳುವ ಒಮ್ಮೆ ಬಳಸಿದ ಎಷ್ಟೋ ಫೈಲ್ಸು ಕೂಡ ಇದೇ ವರ್ಗಕ್ಕೆ ಸೇರುತ್ತವೆ. ನಾವು ಮುಂದೆ ಅದನ್ನು ಬಳಸುತ್ತೀವೋ ಇಲ್ವೋ, ಹಾಗೇ ಇಟ್ಟುಕೊಂಡಂತೂ ಇರುತ್ತೇವೆ.
ಎಲ್ಲ ಪುಸ್ತಕಗಳೂ ಸಿಗೋದಿಲ್ವಲ್ಲ. ಹಲವು ತಾಂತ್ರಿಕ ಪುಸ್ತಕಗಳು ಆನ್ಲೈನ್ ಸಿಗೋದಿಲ್ಲ (ನನ್ನ ಬಳಿ ಇರುವ ಪುಸ್ತಕಗಳಲ್ಲಿ ಸುಮಾರು ೮೦% ತಾಂತ್ರಿಕ ಪುಸ್ತಕಗಳೇ). ಅಲ್ಪ ಸ್ವಲ್ಪ ಮಾಹಿತಿ ಮಾತ್ರ ಇಂಟರ್ನೆಟ್ಟಿನಲ್ಲಿ ಜಾಲಾಡಿ ಪಡೆದುಕೊಳ್ಳಬಹುದು - ಆದರೆ ಡೀಟೇಯ್ಲಾಗಿ ಓದಬೇಕಾದರೆ ಪುಸ್ತಕಗಳೇ ಚೆನ್ನ. ರೆಫರೆನ್ಸಿಗೆ ಮತ್ತೆ ಮತ್ತೆ ಮತ್ತೊಬ್ಬರಿಂದ ಕೇಳಿ ತರುವುದು ಕಷ್ಟದ ಕೆಲಸ. ಸ್ವಲ್ಪ ದುಡ್ಡು ಖರ್ಚಾದರೂ ಸ್ವಂತದ ಕಾಪಿ ಇದ್ದರೆ ಕೆಲಸ ಸುಲಭ. ಆದರೂ ತಾಂತ್ರಿಕ ಪುಸ್ತಕಗಳ ತೊಂದರೆ ಏನೆಂದರೆ, ಅದರಲ್ಲಿ ಹಲವು ಸ್ವಲ್ಪ ದಿನಗಳ ನಂತರ outdate ಆಗಿಬಿಡುತ್ವೆ. (php ಬಗ್ಗೆಯೇ ಒಂದು ವರ್ಷದಲ್ಲಿ ೬ ಪುಸ್ತಕಗಳನ್ನು ನಾನು ಕೊಂಡಿರುವೆ).
asterix adventures, Tintin, ಇಂದ್ರಜಾಲ, ಅಮರ ಚಿತ್ರ ಕಥೆ ಮುಂತಾದ ಕಾಮಿಕ್ ಪುಸ್ತಕಗಳು ಹಲವು ನನ್ನ ಬಳಿ ಸುಮಾರು ವರ್ಷಗಳಿಂದ ಇವೆ. ಅವನ್ನು ಎಷ್ಟು ಬಾರಿ ಓದಿದರೂ ಬೇಜಾರು ಮೂಡುವುದಿಲ್ಲ.
ಇನ್ನು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯ ಪುಸ್ತಕಗಳು ಮಾತ್ರ - ಒಮ್ಮೆ ಓದಿದ ಮೇಲೆ ಮತ್ತೊಮ್ಮೆ ಓದುವುದು ಬರಿಯ ವೊಕ್ಯಾಬ್ಯುಲರಿ ಇಂಪ್ರೂವ್ ಮಾಡಿಕೊಳ್ಳೋದಕ್ಕೋ ಅಥವಾ (ಕೃತಿ ಬಹಳ ಚೆನ್ನಾಗಿದ್ದರೆ) ಅದರ ನಿರೂಪಣೆಯ ಶೈಲಿಯ ಬಗ್ಗೆ ಮತ್ತಷ್ಟು ತಿಳಿಯಲು ಬಹುಶಃ ಮತ್ತೆ ಓದ್ತೀವಿ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಪುಸ್ತಕಸ್ಫೋಟ
ನೀವು ಹೇಳಿದಂತೆ ಎಲ್ಲಾ ಬಗೆಯ ಪುಸ್ತಕಗಳನ್ನು ಸಂಗ್ರಹಿಸುವ ಅಗತ್ಯವೇನೂ ಇಲ್ಲ. ಅದರಲ್ಲೂ ಕೇವಲ ಮಾಹಿತಿ ನೀಡುವ ಪುಸ್ತಕಗಳು, reference materialಗಳನ್ನು ಬರವಣಿಗೆಯ ವ್ಯವಸಾಯದಲ್ಲಿರುವವರು ಇಟ್ಟುಕೊಳ್ಳಬಹುದು. ಉಳಿದವರು ಅಗತ್ಯ ಬಿದ್ದಾಗ ಗ್ರಂಥಾಲಯಕ್ಕೆ ಹೋಗಬಹುದು. ಆದರೆ ಇದೇ ಮಾತನ್ನು ‘ಕಲಾಕೃತಿ’ಗಳಿಗೆ ಅಥವಾ ವೈಚಾರಿಕ ಬರಹಗಳಿಗೆ ಅನ್ವಯಿಸಲಾಗದೇನೋ. ಇಂತಹ ಮೌಲಿಕ ಕೃತಿಗಳು ಕೇವಲ ದಿನಪತ್ರಿಕೆಗಳಲ್ಲಿ ವಾರಪತ್ರಿಕೆಗಳಲ್ಲಿ ಪ್ರಕಟವಾದರೆ ನಂತರದ ಪೀಳಿಗೆಯ ಓದುಗರಿಗೆ ಅವು ಸಿಗದೇ ಹೋಗುತ್ತವೆ. Paper cutting ಗಳನ್ನು ಸಂಗ್ರಹಿಸಿಡುವುದಕ್ಕಿಂತ ಮುನ್ನುಡಿ ಬೆನ್ನುಡಿಗಳನ್ನೊಳಗೊಂಡ ಪುಸ್ತಕವು ಓದಿಗೆ ಬೇಕಾದ context ಒದಗಿಸುತ್ತದೆ. ಕಾಲೇಜು ದಿನಗಳಲ್ಲಿ ಹತ್ತಿರದಲ್ಲೇ ಇದ್ದ ಸೆಂಟ್ರಲ್ ಲೈಬ್ರರಿಗೆ ಪದೇಪದೇ ಹೋಗಿ ಬೇಕಾದ ಪುಸ್ತಕ ಸಿಗದೇಹೋದಾಗ ಬೇಸರಪಟ್ಟುಕೊಂಡು (ಕೆಲವೊಮ್ಮೆ ಆ ಅಸಹಾಯಕ ಪರಿಸ್ಥಿತಿಗೆ ನೊಂದು) ಹಿಂತಿರುಗಿ ಬರುತ್ತಿದ್ದುದು ನೆನಪಿಗೆ ಬರುತ್ತಿದೆ. ಮುಂದೊಮ್ಮೆ ದುಡಿಯುವಂತಾದಾಗ ಮೊದಲು ಈ ಪುಸ್ತಕಗಳನ್ನು ಕೊಳ್ಳಬೇಕು ಎಂದುಕೊಳ್ಳುತ್ತಿದ್ದೆ. ನಿಮ್ಮ ಚಿಂತನೆ ಓದಿದ ಮೇಲೆ ನನ್ನ ಬಳಿಯಿರುವ ಪುಸ್ತಕಗಳ ಮೇಲೆ ಕಣ್ಣಾಡಿಸಿದೆ. ಬಹುತೇಕ ಎಲ್ಲಾ ಪುಸ್ತಕಗಳನ್ನೂ ನಾನು ಒಂದಕ್ಕಿಂತ ಹೆಚ್ಚು ಬಾರಿ ಓದಿದ್ದೇನೆ. ಒಂದೆರಡು ಪುಸ್ತಕಗಳನ್ನು ಬಿಟ್ಟು ಬೇರೆ ಯಾವ ಪುಸ್ತಕವನ್ನೂ ಕೊಳ್ಳಬಾರದಿತ್ತು ಎನ್ನಿಸಿಲ್ಲ (ಸಧ್ಯಕ್ಕೆ ನನ್ನ ಹತ್ತಿರ ಇರುವ ಪುಸ್ತಕಗಳು 60 ಮೀರುವುದಿಲ್ಲ. ಬಹುಶಃ ಅದಕ್ಕೆ ಹೀಗನಿಸುತ್ತಿರಬೇಕು!). ಕೆಲವೊಮ್ಮೆ ಕೊಳ್ಳುವವರೆಗೆ ‘ಈ ಪುಸ್ತಕ ನನ್ನಂತವರಿಗಾಗಿಯೆ’ ಎಂಬುದು ತಿಳಿಯುವುದಿಲ್ಲ!
ಇನ್ನು ಓದಿದ್ದು ಮನಸ್ಸಿಗಿಳಿದು ವ್ಯಕ್ತಿತ್ವದ ಭಾಗವಾಗುವ ಬಗ್ಗೆ ನನಗೆ ಸ್ವಲ್ಪ ಅನುಮಾನವಿದೆ. ಪ್ರತಿ ಓದಿಗೂ ಹೊಸದೇನನ್ನೋ ಕೊಡುವ ಓದುಗನ ಮನಸ್ಥಿತಿಗೆ ತಕ್ಕಂತೆ ಹಿಂದೆ ಹೊಳೆಯದ್ದೇನೋ ಈಗ ಹೊಳೆಯುವ ಕಾಣದ ಒಳಪದರಗಳು ಅನಾವರಣಗೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ ಎನ್ನಿಸುತ್ತದೆ. ಒಂದು ಒಳ್ಳೆಯ ಕೃತಿಗೆ (ಕಾವ್ಯ, ಕಥೆ, ವೈಚಾರಿಕ ಬರಹ ಇತ್ಯಾದಿ) ಈ ಗುಣ ಇರುತ್ತದೆ ಹಾಗಾಗಿ ಆ ಪುಸ್ತಕವನ್ನು revisit ಮಾಡುವ ಬರಹದೊಂದಿಗೆ ಬರಹಗಾರರೊಂದಿಗೆ ಮುಖಾಮುಖಿಯಾಗುವ ಅಗತ್ಯ ಇರುತ್ತದೆ. ಆ ಕಾರಣಕ್ಕೆ ಪುಸ್ತಕಗಳು ‘ಸಜೀವ’ವಾಗಿರುತ್ತವೆ. ಲೈಬ್ರರಿಯಲ್ಲಿ ಪುಸ್ತಕ ಸಿಗದೇ ಬೇಸರಪಟ್ಟುಕೊಳ್ಳುವುದರ ಬದಲು ಅಥವಾ ಪ್ರತಿ ಸಲ ಪುಸ್ತಕ ಬೇಕಾದಾಗ ಇನ್ನೊಬ್ಬರನ್ನು ಮುಜುಗರಪಟ್ಟುಕೊಂಡು ಕೇಳುವುದರ ಬದಲು ಕೊಂಡಿಟ್ಟುಕೊಳ್ಳ್ರವುದೇ ಮೇಲು ಎನ್ನಿಸುತ್ತದೆ. ಆದರೆ 1000 ಪುಸ್ತಕಗಳ ರಾಶಿಯಿದ್ದರೆ ಏನು ಮಾಡಬೇಕೋ ತಿಳಿಯದು! ಬಹುಶಃ ನಿಮ್ಮ ಅಭಿಪ್ರಾಯಕ್ಕೆ ಮೂಲಕಾರಣ ಪುಸ್ತಕಸ್ಫೋಟ!
ಪುಸ್ತಕಗಳ ಬಗ್ಗೆ
ನೀವು ಕೊಂಡು ,ಓದಿ ಇಷ್ಟಪಟ್ಟ ಪುಸ್ತಕಗಳನ್ನು ಮಿತ್ರರಿಗೆ ಹುಟ್ಟುಹಬ್ಬ ಮತ್ತಿತರ ಸಮಾರಂಭಗಳಲ್ಲಿ ಊಡುಗೊರೆಯಾಗಿ ಕೊಟ್ಟರೆ ಹೇಗೆ ? ಪುಸ್ತಕ ಓದಿದಂತೆಯೂ ಆಯಿತು ಜೊತೆಗೆ ಆ ಪುಸ್ತಕದ indirect marketing ಕೂಡ ಆದಂತಾಯಿತು
ಆಗ ಹೀಗೂ ಆದೀತು
ಪುಸ್ತಕ ಸಂಗ್ರಹದ ಹಂಬಲ ತೀವ್ರವಾಗಿದ್ದ ನನ್ನ ಬದುಕಿನ ಯುಗದಲ್ಲಿ ಕನ್ನಡದ ಹಿರಿಯ ಸಾಹಿತಿಗಳು ಇತರ ಹಿರಿಯ ಸಾಹಿತಿಗಳಿಗೆ ಕೊಟ್ಟ ಪುಸ್ತಕಗಳು, ನಾನೇ ಯಾವುದೋ ಪತ್ರಿಕೆಗೆ ರಿವ್ಯೂಗೆ ಕಳಿಸಿದ ಪುಸ್ತಕ ಇತ್ಯಾದಿಗಳೆಲ್ಲ ಸೆಕೆಂಡ್ ಹ್ಯಾಂಡ್ ಅಂಗಡಿಗಳಲ್ಲಿ ಸಿಕ್ಕಿವೆ. ನನಗೆ ಬೇಡ ಅನ್ನಿಸಿದ್ದನ್ನು ಇನ್ನೊಬ್ಬರಿಗೆ ಉಡುಗೊರೆ ಕೊಟ್ಟರೆ ಅವರಿಗೆ ಅದು ಬೇಕಾದೀತು ಅನ್ನುವ ಗ್ಯಾರಂಟಿ ಏನೂ ಇಲ್ಲ. ನನ್ನಲ್ಲಿದ್ದ ಪುಸ್ತಕ ಒಂದಷ್ಟು ಕಡಮೆ ಆಯಿತು ಅನ್ನುವ ಹಗುರಭಾವ ಬಿಟ್ಟರೆ.
ಇನ್ನೊಬ್ಬರಿಗೆ ಏನು ಬೇಕು ಎಂದು ಗೊತ್ತಿದ್ದರೆ ಬರೆದ ಪುಸ್ತಕಗಳೆಲ್ಲ ಬೆಸ್ಟ್ ಸೆಲ್ಲರ್ ಆಗುತ್ತಿದ್ದವಲ್ಲವೆ!
ರಾಮನಾಥನ್ ಅವರು ಹೇಳಿದ್ದು ನಿಜ: ಪ್ರತಿಯೊಬ್ಬರಿಗೂ ಒಂದು ಪುಸ್ತಕ, ಪ್ರತಿ ಪುಸ್ತಕಕ್ಕೂ ಒಬ್ಬ ಓದುಗ ಇರುತ್ತಾನಂತೆ. ನನಗೆ ಮುಖ್ಯ ಅನ್ನಿಸಿದ ಪುಸ್ತಕ ನಮ್ಮ ಮನೆಯಲ್ಲೇ ಇನ್ಯಾರಿಗೂ ಮುಖ್ಯ ಅನಿಸದೆ ಇರಬಹುದು. ನಾನು ಅಮೂಲ್ಯ ಅಂತ ಸೆಕೆಂಡ್ ಹ್ಯಾಂಡಿನಲ್ಲಿ ತಂದ ಪುಸ್ತಕ ಅದನ್ನು ತೂಕಕ್ಕೆ ಹಾಕಿದವರಿಗೆ ಬೇಡದ ಕಸವಾಗಿತ್ತು ಅಲ್ಲವೆ? ಪುಸ್ತಕ ಇನ್ನೊಬ್ಬರಿಗೆ ಉಡುಗೊರೆಯಾಗಿ ದಾಟಿಸಿದಾಗ ಮಾರ್ಕೆಟಿಂಗ್ ಎಲ್ಲಿಂದ ಬಂತು? ಪ್ರಕಾಶಕರಿಗೆ ಒಬ್ಬ ಕೊಳ್ಳುಗ ಕಡಮೆಯಾಗುವಂತೆ ಮಾಡಿರುತ್ತೇನೆ, ಅಲ್ಲವೆ?
ಒಳ್ಳೆ ವಿಚಾರ
ಸಾರ್,
ಇದು ನಿಜವಾಗಲು ಒಳ್ಳೆ ವಿಚಾರ. ನಿಮ್ಮ ಹತ್ತಿರ ತು೦ಬಾ ಪುಸ್ತಕಯಿದಿದ್ದು ನೋಡಿದ್ದೆ.
ಈ ಮನುಷ್ಯ ಅದೆಷ್ಟು ತಲೆ ಕೆಡಿಸಿಕೊ೦ಡಿರಬೇಕು -- ದೇವರೆ ಈ ಪ್ರೋಪೆಸರ್ ಗಿರಿ ಅ೦ದರೇನೆ ಇಷ್ಟು
ಅ೦ದ್ಕೊ೦ಡಿದ್ದೆ. ನಿಮ್ಮ ಭಾರ ಕಡಿಮೆ ಮಾಡುವ ಯತ್ನ ನಾನು ಮಾದುತ್ತೇನೆ.
ನನಗೆ ಕಾವ್ಯಮೀಮಾ೦ಸೆ ಮತ್ತು ಕೆಲವು ಬೇರೆ ಬೇರೆ ಪುಸ್ತಕ ಬೇಕಿತ್ತು.
ನಿಮ್ಮ ಬಳಿ ಇದ್ದರೆ - ದಾನ ವನ್ನು ಮಾಡಿ.
ನಿಮ್ಮ ಭಾರ ಕಡಿಮೆಯಾಗುತ್ತೆ.
ನಿಮ್ಮ ರೂಮ್ ಖಾಲಿ ಆಗುತ್ತೆ.
ನಿಮ್ಮ ಆತ್ಮಕ್ಕೆ ಶಾ೦ತಿ ಸಿಗತ್ತೆ.
ಖಂಡಿತ ತೆಗೆದುಕೊಳ್ಳಿ
ನನಗೆ ತೀರ ಬೇಕೇ ಬೇಕೆನ್ನಿಸುವ ಒಂದು ಐನೂರು ಪುಸ್ತಕಗಳನ್ನು ಬಿಟ್ಟು ಉಳಿದವನ್ನೆಲ್ಲ ಆಸಕ್ತರಿಗೆ ಕೊಟ್ಟುಬಿಡುತ್ತಿರುವೆ. ಮುರಳಿಯವರು ಖಂಡಿತ ಕಾವ್ಯಮೀಮಾಂಸೆಯ ಪುಸ್ತಕಗಳನ್ನು ತೆಗೆದುಕೊಂಡು ಸಂತೋಷಪಡಬಹುದು. ಮೈಸೂರಿಗೆ ಬರಬೇಕು, ಅಷ್ಟೆ.