ಚೆಂಗನ್ನಡ ಛಂದಸ್ - ೧
ಚೆಂಗನ್ನಡ ಛಂದಸ್ - ೧
------------------
ರತ್ನಾಕರವರ್ಣಿಯ ಭರತೇಶವೈಭವದ ತುಣುಕುಗಳಲ್ಲಿ ಯಮಕ ಪ್ರಾಸ ಪ್ರಯೋಗಗಳ ಬಗ್ಗೆ ಚರ್ಚೆಯಾಗುತ್ತಿದ್ದಾಗ ಸುನಿಲರು ಕೇಳಿದ ಪ್ರಶ್ನೆಯೇ ಈ ನನ್ನ ಲೇಖನಕ್ಕೆ ಸ್ಫೂರ್ತಿಯೆಂದರೆ ತಪ್ಪಾಗಲಾರದು. ಕನ್ನಡದಲ್ಲಿನ ಪ್ರಾಸದ ಬಗೆಗಳು ಹಾಗೂ ಅದಕ್ಕೆ ಹೊಂದಿಕೊಂಡಂತೆ ಕರ್ನಾಟಕ ಶಾಸ್ತ್ರೀಯ ಸಂಗೀತ - ನೃತ್ಯದ ಪೂರಕ ಬೆಳವಣಿಗೆಯ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವುದೇ ಈ ಬರಹದ ಉದ್ದೇಶ. ಮೊದಲನೆಯ ಕಂತಿನಲ್ಲಿ ನಾಗವರ್ಮನ ಕನ್ನಡ ಛಂದಸ್ಸು ಹಾಗೂ ಎರಡನೆಯ ಕಂತಿನಲ್ಲಿ ಮತಂಗನ ಬೃಹದ್ದೇಶೀ ಕೃತಿಗಳಿಗೆ ಪರಿಚಯ ನೀಡುವ ಯತ್ನ ಮಾಡುತ್ತೇನೆ.
ಕನ್ನಡ ಛಂದಸ್ಸು, ಪ್ರಾಸ, ಯಮಕಗಳ ಬಗ್ಗೆ ತಿಳಿಸುವ ಕೆಲವು ಹಳೆಯ ಕನ್ನಡ ಗ್ರಂಥಗಳಲ್ಲಿ "ನಾಗವರ್ಮನ ಕನ್ನಡ ಛಂದಸ್ಸು" ಕೂಡ ಒಂದು. ಈ ಹಳೆಯ ಗ್ರಂಥವನ್ನು ಜೋಪಾನವಾಗಿ ಸಂಗ್ರಹಿಸಿಟ್ಟು, ಆಂಗ್ಲ ಟಿಪ್ಪಣಿಗಳನ್ನು ಸೇರಿಸಿದ ಹಿರಿಮೆ ಕಿಟ್ಟೆಲ್ ಮಹಾಶಯನಿಗೆ ಸೇರಬೇಕು. ಈ ಗ್ರಂಥದ ಮೊದಲೆರಡು ಅಧ್ಯಾಯಗಳು ಮಾತ್ರ ನನಗೆ ಲಭ್ಯವಾಗಿದ್ದು, ಇನ್ನೂ ನಾಲ್ಕು ಅಧ್ಯಾಯಗಳಿತ್ತೆಂದು ಟಿಪ್ಪಣಿಯಿದೆ. ಒಂದು ವಿಧದಲ್ಲಿ, ಪಿಂಗಳನ ನಂತರದಲ್ಲಿ ಛಂದೋಪ್ರಕಾರಗಳನ್ನು ವಿವರಿಸುವ ಗ್ರಂಥ ಇದೊಂದೇ ಎನ್ನುತ್ತಾರೆ ತಿಳಿದವರು. ಇರಲಿ ಈಗ ವಿಷಯಕ್ಕೆ ಬರೋಣ.
ಕಾವ್ಯವೆಂದರೆ ಹೇಗಿರಬೇಕು? ಹೇಗಿರಬಾರದೆಂದು ಈ ಗ್ರಂಥದಲ್ಲಿ ಹಲವು ಉಲ್ಲೇಖಗಳಿವೆ. ಕಾವ್ಯಾದರ್ಶ, ಲಕ್ಷಣಗಳನ್ನೂ ವಿವರಿಸುವ ಈ ಕೃತಿಯ ಮೊದಲ ಅಧ್ಯಾಯ ಸಂಜ್ಞಾಧ್ಯಾಯ - ಮಾತ್ರಾಗಣ, ಅಕ್ಷರಗಣ, ಯತಿ, ಪ್ರಾಸ, ೨೬ ಸಕ್ಕದ ಛಂದಸ್ಸುಗಳನ್ನು ವಿವರಿಸುತ್ತದೆ. ಎರಡನೆಯ ಸಮವೃತ್ತವಿವರಣಾಧ್ಯಾಯ ಕನ್ನಡ ಛಂದೋವೃತ್ತಗಳನ್ನು ವಿವರಿಸುತ್ತದೆ. ಇದಲ್ಲದೆ, ’ವಚನ’ವೆಂಬ ಗದ್ಯರೂಪದಲ್ಲಿ ನಾಗವರ್ಮ ಹೀಗೆನ್ನುತ್ತಾ ಆರಂಭಿಸುತ್ತಾನೆ:
"ಅದೆಂತೆಂದೊಡೆ ಸಂಸ್ಕೃತಂ ಪ್ರಾಕೃತಮಪಭ್ರಂಶಂ ಪೈಶಾಚಿಕಮೆಂಬ ಮೂರುವರೆ ಭಾಷೆಗಳೊಳ್ ಪುಟ್ಟುವ ದ್ರವಿಡಾಂಧ್ರ-ಕರ್ಣಾಟಕಾದಿ-ಷಟ್ಪಂಚಾಷತ್-ಸರ್ವವಿಷಯ-ಭಾಷಾ-ಜಾತಿಗಳಕ್ಕುಂ. ಅಲ್ಲಿ ಸಮಮರ್ಧಸಮಂ
ವಿಷಮಮೆಂದು ವೃತ್ತಂ ಮೂರು ತೆರನಕ್ಕುಂ."
ಮೊದಲನೆಯ ಸಂಜ್ಞಾಧ್ಯಾಯದಲ್ಲಿ ಪ್ರಾಸಗಳನ್ನು ಮೂರು ಬಗೆಯವೆಂದು ಹೀಗೆ ಹೇಳುತ್ತಾನೆ:
೧. ಅಕ್ಷರಗಳು
-----------
೧) ಹ್ರಸ್ವಸ್ವರಗಳಿಂದ ಪ್ರಾಸವಾದರೆ - ಸಿಂಹ
೨)ದೀರ್ಘಸ್ವರಗಳಿಂದಾದರೆ - ಗಜ
೩)ಅನುಸ್ವಾರದಿಂದಾದರೆ - ವೃಷಭ
೪)ವ್ಯಂಜನದಿಂದಾದರೆ - ಶರಭ
೫)ವಿಸರ್ಗದಿಂದಾದರೆ - ಅಜ
೬)ದಡ್ಡಕ್ಕರ (ಒತ್ತಕ್ಷರ)ದಿಂದಾದರೆ - ಹಯ
೨.ಅಕ್ಷರ ಸಂಬಂಧ
--------------
ಪ್ರತಿಪಾದದ ಎರಡನೇ ಗುಣಿತಾಕ್ಕರವು
೧) ಒಂದೇ ಆದರೆ (ಹ್ರಸ್ವ-ದೀರ್ಘ ಯಾವುದಾದರೂ) - ವಿನುತಪ್ರಾಸ
೨) ಒಂದೇ ಅಕ್ಕರವಾಗಿ, ಅನುಸ್ವಾರಸಹಿತವಾದರೆ - ಶಾಂತಪ್ರಾಸ
೩) ಕ್ರಮವಾಗಿ ಒಂದೇ ವರ್ಗದ ಬೆಂಜನಗಳಾದರೆ - ವರ್ಗಪ್ರಾಸ
೪) ಶ-ಷ-ಸ ವರ್ಣಗಳಾಗಿದ್ದರೆ - ಸಮೀಪಪ್ರಾಸ
೫) ಒಂದೇ ಅಕ್ಕರದ ಗುಣಿತಾಕ್ಷರಗಳಾದರೆ - ಅನುಗತಪ್ರಾಸ
೬) ಒಂದೇ ಅಕ್ಕರವಾಗಿ, ಅದೇ ಅಕ್ಕರವು ಪಾದಾಂತ್ಯದಲ್ಲಿ ಅನುಸ್ವಾರಸಹಿತವಾದರೆ - ಅಂತಪ್ರಾಸ
೩.ಅಕ್ಷರಸ್ಥಾನ
----------
{ಇವನ್ನೇ ಬಹುಶಃ ಸುನಿಲ, ಹಂಸಾನಂದಿಯವರು ಕೇಳಿದ್ದು}
೧) ಪ್ರತಿಪಾದದ ಎರಡು ಹಾಗೂ ಮೂರನೆಯ ಅಕ್ಕರಗಳು ಒಂದೇ ಆದರೆ (ಗುಣಿತಾಕ್ಷರ ಬದಲಾಗಬಹುದು) - ದ್ವಿಪ್ರಾಸ
೨) ಪ್ರತಿಪಾದದ ಎರಡು ಹಾಗೂ ಮೂರನೆಯ ಅಕ್ಕರಗಳು ಒಂದೇ ಆಗಿ, ಅದೇ ಪಾದದೊಳಗೆ (ಕೊನೆಯಲ್ಲಲ್ಲದೆ) ಮತ್ತೆ ಕಾಣಿಸಿದರೆ - ದ್ವಂದ್ವಪ್ರಾಸ
೩) ಪ್ರತಿಪಾದದ ಎರಡು ಹಾಗೂ ಮೂರನೆಯ ಅಕ್ಕರಗಳು ಒಂದೇ ಆಗಿ, ಪಾದದ ಕೊನೆಯಲ್ಲೂ ಅವೇ ಇದ್ದರೆ - ಆದ್ಯಂತಪ್ರಾಸ
೪) ಪ್ರತಿಪಾದದ ಎರಡು, ಮೂರು ಹಾಗೂ ನಾಲ್ಕನೆಯ ಅಕ್ಕರಗಳು ಒಂದೇ ಆದರೆ - ತ್ರಿಪ್ರಾಸ
ಈ ಎಲ್ಲಕ್ಕೂ ಉದಾಹರಣೆ ದೊರಕುವುದಾದರೂ, ಸದ್ಯಕ್ಕೆ ಸಿಂಹಾದಿ ಷಟ್-ಪ್ರಾಸಗಳಿಗೆ ಮಾತ್ರ ಉದಾಹರಣೆಗಳನ್ನು ನೋಡೋಣ:
ಸಿಂಹಪ್ರಾಸ: (ಹ್ರಸ್ವ)
---------
ಸಕಳ-ಕಳಾನಿಧಿ ನಿಕಟದೆ
ಸುಕರ ರಸ ಪ್ರಕಟ ಕಾವ್ಯಮೆಂಬಮೃತ-ಪಯೋ|
ಧಿ ಕರಂ ಪೆರ್ಚುಗುಮಲ್ಲದೆ
ಕುಕವಿ-ಬುಧ-ಪ್ರಭೃತಿಯಿದಿರೊಳೇಂ ಪೆರ್ಚುಗುಮೇ?||
ಗಜಪ್ರಾಸ: (ದೀರ್ಘ)
----------------
ಆರಾರೇಱರ್ ಶಾಸ್ತ್ರ-
ಶ್ರೀರೋಹಣಗಿರಿಯನಲ್ಲಿ ನವಕವಿತಾ-ಚಿಂ|
ತಾರತ್ನಂ ದೊರಗುಮೆ ತೇ
ಜೋರೂಪ ಕೃಪೆಯಿರದಂಗೆ ಧರಣೀ-ತಳದೊಳ್?||
ವೃಷಭಪ್ರಾಸ: (ಅನುಸ್ವಾರ)
--------------------
ಆ ನಂದನಮಂ, ವಿಜಿತ-ಮ
ಹಾನಂದನಮಂ, ನಿಜಾಂತರಾಳಾಶ್ರಿತ-ಲೋ|
ಕಾನಂದನಮಂ, ತೋಷಿತ
ಮಾ ನಂದನಮಂ ನಿರೀಕ್ಷಿಸಲ್ ನಡೆ, ನೃಪತೀ! ||
ಶರಭಪ್ರಾಸ: (ವ್ಯಂಜನ)
------------------
ಬಾಯ್ವಿಡುತೆಯ್ದಿದ ಮಱಿಯಂ
ತಾಯ್ವಿಡಿ ನಡೆ ನೋಡಿ ಬಾಡಿ, ತಾಪಂ ಮೊದಲಿಂ |
ದೆಯ್ವಡಿ ನೆಗಳ್ದಿರೆ, ತೆಗೆದೇಂ
ಕೆಯ್ವಿಡಿದೂದಿದುದೊ ಸೋಷ್ಣಜಲಮಂ ಬಸುಱಿಂ?||
ಅಜಪ್ರಾಸ : (ವಿಸರ್ಗ)
-----------------
ನೀಂ ನಿಃಶಂಕೆಯನೀ! ದೇ
ವಾ ನಿಃಶರಣ-ಜನರಿಂಗೆ ಶರಣಾಗೀಗಳ್!|
ಕೇಳ್, ನಿಃಶಮಮಂ ಪರಿಹರಿ
ಸೀ ನಿಃಶಾಪ-ಪ್ರಸಾದಮಂ, ಕರುಣಾತ್ಮಾ!||
ಹಯಪ್ರಾಸ: (ದಡ್ಡಕ್ಕರ)
------------------
ಮಲ್ಲಿಗೆ ಮಾಮರದೆಳೆ-ದಳಿ
ರಲ್ಲಿ ಮುಗುಳ್ತಡಱಿ, ಮುಗುಳ್ಗಳೆಸೆದವು ಸಂಧ್ಯಾ-|
ಸಲ್ಲಲಿತ ತಾರಕಾಳಿಯೊ
ಲಲ್ಲಿಳಿವಾಱಡಿಗಳಿಳಿವ ತಮಮೆನಿಸಿರ್ಕುಂ ||
ನಾಗವರ್ಮನ ಈ ಗ್ರಂಥ ನಿಮಗೆ ಸಿಕ್ಕರೆ, ತಪ್ಪದೆ ಓದಿ ನಲಿಯಿರಿ!
ಸಂಪದದೊಳಕ್ಕರೆಯಿಟ್ಟೋದುವ
ಇಂಪಿನ ಕನ್ನಡದ ಮಳೆಯ ಕಾಯ್ವ
ಸಿಂಪಿಗಳೊಳಗಿಹ ಮುತ್ತುಗಳಿಗೀಗ
ತಂಪೀಯ್ವ ಸ್ವಾತಿಯ ಹನಿಗರೆದು!
ನಿಮ್ಮವ
ಬೆನಕ
(ಮುಂದಿನ ಭಾಗದಲ್ಲಿ : ಮತಂಗಮುನಿಯ ಬೃಹದ್ದೇಶೀ)

- Login or register to post comments
- 383 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಚೆಂಗನ್ನಡ ಛಂದಸ್ - ೧
ಬೆನಕರೆ,
ಧನ್ಯವಾದಗಳು. ಎಲ್ಲ ವಿವರಣೆಗಳೊಂದಿಗೆ ಬಹಳ ಒಳ್ಳೆಯ ಬರಹವನ್ನಿತ್ತಿದ್ದೀರಿ.
ಚಾಂಗು ಚಾಂಗುರೆ ! ಭಲಾ ಭಳಿರೆ ಎಂದು ನುಡಿಯುತ್ತಾ
ಮುಂದಿನ ಕಂತಿಗೆ ಕಾಯುವೆ.
ದ್ವಂದ್ವಪ್ರಾಸದ ಬಗ್ಗೆ ನೀವು ಬರೆದಿರುವುದನ್ನು ಓದಿದ ಮೇಲೆ,
ದ್ವಂದ್ವ ಪ್ರಾಸದ ಕೆಲವು ಉದಾಹರಣೆಗಳು ನೆನಪಾದವು. ಬರೆಯುತ್ತಿದ್ದೇನೆ. (ಇವು ಕನ್ನಡದ್ದಲ್ಲವಾದರೂ, ಪ್ರಾಸವನ್ನು ತೋರಿಸುವುದಕ್ಕೆ ಅಡ್ಡಿ ಇಲ್ಲ ಎನ್ನಿಸುತ್ತೆ)
ನಾಗರಾಜ ಹೃತ್ಸಾಗರಾಬ್ಜ ಭವಸಾಗರಾಂತಕ ಸುರಾಗಹರೇ ಕನ-
ಕಾಘ ಧೀರ ವರ ನಾಗಗಮನ ಶರಣಾಗತಾಪ್ತ ಶ್ರೀ ತ್ಯಾಗರಾಜನುತ ||
(ತ್ಯಾಗರಾಜರ ಮಾಪಾಲ ವೆಲಸಿ ಎಂಬ ಅಸಾವೇರಿ ರಾಗದ ಕೃತಿಯ ಚರಣ - ತೆಲುಗು ರಚನೆ ಇದು, ಆದರೆ ಚರಣ ಪೂರ್ತಿ ಸಂಸ್ಕೃತದಲ್ಲಿದೆ)
ಸಾಗರ ಮದದಮನ ನಾಗಾರಿರಥ ಶರಣಾಗಣಪತಿಹೃದಯಾಗರ ಸದನ!
ಜಾಗರೂಕ ಶರಣಾಗತ ವತ್ಸಲ ತ್ಯಾಗರಾಜನುತ ನಾಗಾರಿ ತುರಗ
(ತ್ಯಾಗರಾಜರ ಪರಿಪಾಲಯಮಾಂ ಶ್ರೀ ಕೋದಂಡಪಾಣೇ ಎಂಬ ದರ್ಬಾರ್ ರಾಗದ ಕೃತಿಯ ಚರಣ - ಸಂಸ್ಕೃತದಲ್ಲಿದೆ ಈ ರಚನೆ)
-ಹಂಸಾನಂದಿ
ಉ: ಚೆಂಗನ್ನಡ ಛಂದಸ್ - ೧
ಹಂಸಾನಂದಿಯವರೆ,
ನಿಮ್ಮ ಪೂರಕ ಉದಾಹರಣೆಗಳಿಗೆ ಧನ್ಯವಾದಗಳು. ತೆಲುಗು ಭಾಷೆಯ ಛಂದಸ್ಸಿಗೂ, ಕನ್ನಡ ಛಂದಸ್ಸಿಗೂ ಅಷ್ಟೇನೂ ವ್ಯತ್ಯಾಸವಿಲ್ಲ. ನಾಗವರ್ಮನ ಕೃತಿಯೇ ತೆಲುಗು ಛಂದಸ್ಸಿಗೂ ತಳಹದಿಯೆನ್ನುವಷ್ಟು ಮಟ್ಟಿಗೆ ಸಾಮ್ಯತೆಯಿದೆ. ನಿಜವಾಗಿ ಹೇಳಬೇಕೆಂದರೆ, ನಾಗವರ್ಮನ ಕನ್ನಡ ಛಂದಸ್ಸು ಸಿಕ್ಕಿದ್ದು ಆಂಧ್ರದಲ್ಲಂತೆ! ಕೇವಲ ಮುದ್ರಣಶೈಲಿ ಮಾತ್ರ ಆಂಧ್ರಾಕ್ಷರಗಳನ್ನು ಉಪಯೋಗಿಸಿವೆಯೇನೋ ಎಂದಿದ್ದೆ; ಆದರೆ, ಅಲ್ಲಲ್ಲಿ ತೆಲುಗಿನ ವಾಕ್ಯಗಳಂತೆ ಟಿಪ್ಪಣಿಗಳಿವೆ. ಉದಾ:
"... ಇದು ಸಿಂಗಪ್ರಾಸು"
"... ಇದು ಗಜಪ್ರಾಸು" ಇತ್ಯಾದಿ
ಪ್ರಾಸು ಎಂಬುದು ’ಪ್ರಾಸ’ದ ತೆಲುಗು ರೂಪ!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಚೆಂಗನ್ನಡ ಛಂದಸ್ - ೧
ಅಬ್ಬ...
ಸಕ್ಕತ್ತಾಗಿದೆ.. ಹೊಸ ಸಂಗತಿ!
ಹಿರಿನನ್ನಿ...
ಉ: ಚೆಂಗನ್ನಡ ಛಂದಸ್ - ೧
ಸಂಪದದೊಳಕ್ಕರೆಯಿಟ್ಟೋದುವ
ಇಂಪಿನ ಕನ್ನಡದ ಮಳೆಯ ಕಾಯ್ವ
ಸಿಂಪಿಗಳೊಳಗಿಹ ಮುತ್ತುಗಳಿಗೀಗ
ತಂಪೀಯ್ವ ಸ್ವಾತಿಯ ಹನಿಗರೆದು!
ದಿಟಕ್ಕೂ ಸಂಪದದ ಹೆಸರು ಸಂಪದವಾಗೇ ಸಾರ್ಥಕವಾಯ್ತು! ಭಲಾ...
ಉ: ಚೆಂಗನ್ನಡ ಛಂದಸ್ - ೧
ಅಬ್ಬಬ್ಬಾ, ಚಾಂಗು ಭಳಾ ಬೆನಕರೆ.
ಬೆಳಕು ಚೆಲ್ಲುವಂತಹ ಮಾಹಿತಿ. ಸೂಪರ್ರಾಗಿತ್ತು. ನನಗೆ ಇನ್ನೂ ಒಂದು ಕುತೂಹಲ ಕಾಡುತ್ತಿದೆ. ಈಗ ಒಂದು ಪಾದದಲ್ಲಿ ಅಕ್ಷರಗಳ ಸಂಖ್ಯೆಯ ಮೇಲೆಯೂ ನಿಯಮಗಳಿವೆಯೇ ? ಕೆಲವೊಮ್ಮೆ ಷಟ್-ಪ್ರಾಸಗಳು ಇರುತ್ತವೆಯಾದರೂ, ಪಾದಗಳಲ್ಲಿನ ಮಾತ್ರೆಗಳು ಚೆಲ್ಲಾಪಿಲ್ಲಿಯಾಗಿರುತ್ತವೆ.
ಸವಿಗೂ ಮಿಕ್ಕು ಸವಿ :ಚಪ್ಪಾಳೆ: :ಶಿಳ್ಳೆ: :ಹೆನ್ನನ್ನಿ:
ಉ: ಚೆಂಗನ್ನಡ ಛಂದಸ್ - ೧
ಸುನಿಲರೇ,
ಪ್ರಾಸಕ್ಕೂ, ಅಕ್ಕರ/ಮಾತ್ರಾಗಣಕ್ಕೂ ಸಂಬಂಧವಿಲ್ಲ ಎಂದೇನೂ ಹೇಳಲಾಗದು. ನೇರವಾಗಿ ಇಂತಿಷ್ಟೇ ಎಂಬ ನಿಯಮ ಕಾಣುವುದಿಲ್ಲವಾದರೂ, ಪ್ರಾಸಗಳಿಗೆ ಲಕ್ಷಣಗಳನ್ನು ಹೇಳುವಾಗ, ಅಕ್ಷರಗಣಗಳ ಕಟ್ಟುಪಾಡುಗಳಿವೆ. ಮಾತ್ರಾಗಣಗಳ ಬಗ್ಗೆ ನಾಗವರ್ಮ ಏನೋ ಹೇಳಲು ಹೊರಟಿದ್ದು, ಅರ್ಧದಲ್ಲಿಯೇ ನಿಂತಂತೆ ಕಾಣುತ್ತದೆ; ಮುಂದಿನ ಅಧ್ಯಾಯಗಳು ಸಿಗವು. ಬಹುಶಃ ಮೇಲಿನ ಸಿಂಹಾದಿ ಪ್ರಾಸಗಳ ಉದಾಹರಣೆಗಳೂ ಅವನದಲ್ಲದೆ, ಕವಿ ಜಿಹ್ವಾಬಂಧನ ಬರೆದು ಸೇರಿಸಿರಬಹುದೆಂದು ಹೇಳುತ್ತಾರೆ. ಇರಲಿ, ಲಕ್ಷಣಸೂತ್ರವನ್ನು ನೋಡೋಣ:
ಸಿಂಹಪ್ರಾಸಕ್ಕೆ ಲಕ್ಷಣಂ|
ಸರಸಿಜಜ| ಲರುಹ |ಇದು ದೇವಗಣಂ ||
ವೃಷಭಪ್ರಾಸಕ್ಕೆ ಲಕ್ಷಣಂ|
ಪಂಕಜ|ಕಿಂಕರ|ಇದು ಭಗಣಂ||
ಗಜಪ್ರಾಸಕ್ಕೆ ಲಕ್ಷಣಂ|
ಧರಾಧರ| ಮರಾಳ |ಇದು ಸೂರ್ಯಗಣಂ ||
ತುರಂಗಪ್ರಾಸಕ್ಕೆ ಲಕ್ಷಣಂ|
ಮತ್ತಚಕೋರಲೋಚನೆ|ಬಿತ್ತಜರಾಜಧಾನಿ|ಇದು ಲಕ್ಷಣದಲ್ಲಿ ಭಗಣಂ||
ಶರಭಪ್ರಾಸಕ್ಕೆ ಲಕ್ಷಣಂ|
(ನೀರೊಳಿ)| ತಳ್ತೀಹಯಿ|ತ್ತಳ್ತಂಪಕಗಂಧಿ |ಇದು ಆಕಾಶಗಣಂ| ನಾಂದಿಯ ಮೊದಲಿಗೆ ಸಲ್ಲದು ||
ಅಜಪ್ರಾಸಕ್ಕೆ ಲಕ್ಷಣಂ|
ಸ್ವಃಕಾಂತಾ|ಇದೆ ದುಷ್ಕರ ಪ್ರಾಸವೆಂಬುದು|ಇದು ನಾಂದಿಯ ಮೊದಲಿಗೆ ಆಗದು||
ಹೀಗೆ ಕಟ್ಟಳೆ ವಿಧಿಸಿರುವ ರೀತಿಯೂ ಇದೆ; ಆದರೆ ಇಂತಿಷ್ಟೇ ಅಕ್ಷರ / ಮಾತ್ರೆಗಳು ಎಂದು ಕಂಡು ಬರುವುದಿಲ್ಲ. ಆದರೆ ತದನಂತರದ ವೀರಶೈವ ಕವಿಯ "ನಂದಿಛಂದಸ್" ಮಾತ್ರಾಗಣ ಹಾಗೂ ಯತಿ ಕಟ್ಟಳೆಗಳನ್ನು ಸೊಗಸಾಗಿ ವರ್ಣಿಸಿದೆ. ಸಾಧ್ಯವಾದರೆ ಮೂರನೆಯ ಕಂತಿನಲ್ಲಿ ನಂದಿಛಂದಸ್ಸಿನ ಬಗ್ಗೆ ಬರೆಯುತ್ತೇನೆ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಚೆಂಗನ್ನಡ ಛಂದಸ್ - ೧
ಕನ್ನಡ ಪದಗಳೊಡನೆ ಎಷ್ಟೆಲ್ಲ ಆಟವಾಡಬಹುದು ಎಂಬುದಕ್ಕೆ ಇದು ಒಂದು ಸುಂದರ ಉದಾಹರಣೆ. ಕಾವ್ಯದ ಪ್ರಾಸಗಳಿಗನುಣವಾಗಿ, ಅಡಗು ಎಂಬುದನ್ನು ಅಡಂಗು, ಅಳಗು, ಅಳಂಗು ಮುಂತಾಗಿ ಬಳಸಬಹುದು.
"ಸಿಂಪಿಗಳೊಳಗಿಹ ಮುತ್ತುಗಳು" ತುಂಬಾ ಹದವಾದ ಬಳಕೆ, ನನಗೆ ತುಂಬಾ ಇಷ್ಟವಾಯಿತು. ಮತಂಗಮುನಿಯ ಬೃಹದ್ದೇಶಿಯ ಬರಹಕ್ಕೆ ನಾನು ಸಿಕ್ಕಾಪಟ್ಟೆ ಕಾತುರನಾಗಿ ಕುಳಿತಿದ್ದೇನೆ.
ಉ: ಚೆಂಗನ್ನಡ ಛಂದಸ್ - ೧
ಹಲವರಿಗೆ ಅದರ ಹುರುಳು ತಿಳಿದಿರಕ್ಕಿಲ್ಲ.. ( ನನಗೂ ಪೂರ ನಿಕ್ಕುವ ತಿಳಿದಯ್ತೆ ಅಂತಿಲ್ಲ )
ದಯಮಾಡಿ ಅದನ್ನ ಬಿಡಿಸಿ ಹುರುಳು ತಿಳಿಸಯ್
ಉ: ಚೆಂಗನ್ನಡ ಛಂದಸ್ - ೧
ಮಹೇಶ, ನಿನಗೆ ಗೊತ್ತಿರುವಷ್ಟನ್ನು ಎಲ್ಲರಿಗೂ ನೀನೇ ಹೇಳಿಬಿಡು, ಒಂದು ಪದ್ಯದ ಮೂಲಕ.
ಉ: ಚೆಂಗನ್ನಡ ಛಂದಸ್ - ೧
ಸಿಂಪಿ ಅಂದರೆ ಚಿಪ್ಪು... ಸ್ವಾತಿಮಳೆಗೆ ಆ ಚಿಪ್ಪು ಬಾಯ್ ತೆರೆಯುತ್ತೆ,... ಆಗ ಮುತ್ತು ಸಿಗುತ್ತೆ... ಅಂದರೆ ಸಂಪದದಲ್ಲಿ ಸಿಹಿ ಸಿಹಿ ಸಂಗತಿಗಳನ್ನು ಓದೋಕೆ ಬಾಯ್ತೆರೆಯಲು ಕಾಯುವ ಆ ಚಿಪ್ಪಿನೊಳವಿತ ಮುತ್ತುಗಳು ನಾವು... ಹಂ... ಸಕ್ಕತ್....
ಉ: ಚೆಂಗನ್ನಡ ಛಂದಸ್ - ೧
*ಓದೋಕೆ(ಬಾಯ್ತೆರೆಯಲು)
ಉ: ಚೆಂಗನ್ನಡ ಛಂದಸ್ - ೧
*ಓದೋಕೆ(ಬಾಯ್ತೆರೆಯಲು)
ಉ: ಚೆಂಗನ್ನಡ ಛಂದಸ್ - ೧
ನನ್ನಿ ಏ ಲಾಟ್!
ಉ: ಚೆಂಗನ್ನಡ ಛಂದಸ್ - ೧
ಬೆನಕರೆ, ಸಿಹಿ ಸುದ್ಧಿ. ಗೂಗಲ್ ಬುಕ್, ತಾಣದಲ್ಲಿ, ಇಡೀ ಪುಸ್ತಕ ಡೌನ್ಲೋಡಿಗೆ ಸಿಗುತ್ತಿದೆ. ಆಸಕ್ತಿಯಿದ್ದವರು ನೋಡಿ.
Nagavarma's Canarese Prosody. EDITED WITH AN INTRODUCTION TO THE WORK AND AN ESSAY ON CANARESE LITERATURE BY REV. F. KITTEL. B.M.S
ಉ: ಚೆಂಗನ್ನಡ ಛಂದಸ್ - ೧
ಡೌನ್ಲೋಡ್ ಕೊಂಡಿ ಇಲ್ಲ ಅಲ್ಲಿ....
ಉ: ಚೆಂಗನ್ನಡ ಛಂದಸ್ - ೧
ಡೌನ್ಲೋಡ್ ಕೊಂಡಿ ಇಲ್ಲ ಅಲ್ಲಿ....
ಉ: ಚೆಂಗನ್ನಡ ಛಂದಸ್ - ೧
ಸುನಿಲರೇ,
ಮಂಡಿಯೂರಿ ಕೋರಿದರೂ,
ಕೊಂಡಿಯಿಲ್ಲ ತಾಣದಲ್ಲಿ
ಕಿಂಡಿಯಲ್ಲಿ ನೋಡಲಷ್ಟೇ
ಕಂಡ ಹೊತ್ತಗೆಯದು!
"ಕನ್ನಡ ಛಂದಸ್ಸು"ನೀವು ತೋರಿದ ತಾಣದಿಂದ ಇಳಿಸಿಕೊಳ್ಳಲಾಗದೆನಿಸುತ್ತದೆ; ಆದರೆ ಓದಬಹುದು.
"ಪ್ರಥಮ ನಾಗವರ್ಮನ ಛಂದೋಂಬುಧಿ" ಮಾರುಕಟ್ಟೆಯಲ್ಲಿ ಲಭ್ಯವಿದೆಯೇನೋ ಗೊತ್ತಿಲ್ಲ (ಎರಡೂ ಒಂದೇ ಹೊತ್ತಗೆ).
ಆದರಿದು ಕಿಟ್ಟೆಲನ ನಂತರ ಬಂದದ್ದು; ಟಿಪ್ಪಣಿಭೇದವಿದೆ. ಕಿಟ್ಟೆಲನ ದೋಷಗಳನ್ನೂ ಎತ್ತಾಡುತ್ತದೆ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಚೆಂಗನ್ನಡ ಛಂದಸ್ - ೧
ಬೆನಕರೇ, ಇಲ್ಲಿ ಏನೋ ಎಡವಟ್ಟು ಆಗಿದೆ.
೧. ಬಹುಶಃ ಗೂಗಲ್ಲಿನವರು, ನಾನು ಲಿಂಕ್ ನೀಡದ ಮೇಲೆ ಡೌನ್ಲೋಡ್ ಪರ್ಮಿಶನ್ ತೆಗೆದುಬಿಟ್ಟಿರಬೇಕು. ಚಿಂತಿಸಬೇಡಿ, ನಾನು ಈಗಾಗಲೇ ಡೌನ್ಲೋಡ್ ಮಾಡಿರುವೆ, ಪೂರ್ತಿ ಪುಸ್ತಕ. ನಿಮಗೆ ಹೇಗಾದರೂ ತಲುಪಿಸುತ್ತೇನೆ.
೨. ೧ನೇ ನಾಗವರ್ಮನ ಛಂದೋಂಬುಧಿ, ಐಐಎಸ್ ಸಿಯ ಡಿಎಲ್ಐ ಸೈಟಿನಲ್ಲಿ ಲಭ್ಯವಿದೆ. ೧೪೩ ಪುಟಗಳು. ಇಂಟರ್ನೆಟ್ಟಿನಿಂದಲೇ ಓದಲು ಇಲ್ಲಿ ಚಿಟುಕಿ. ನಾಳೆ ಪುಸ್ತಕವನ್ನು ಡೌನ್ಲೋಡ್ ಮಾಡಿ ಎಲ್ಲಿಯಾದರೂ ಹೋಸ್ಟ್ ಮಾಡ್ತೀನಿ. ಆಗ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Chandombudhi Of Nagavarma I - H.S.Ramaswamy Iyengar
ಉ: ಚೆಂಗನ್ನಡ ಛಂದಸ್ - ೧
ಬೆನಕ/ಸುನಿಲ್
ಕೊಂಡಿ ಸರಿಯಾಗಿದೆ, ನನಗೆ ಪುಸ್ತಕವನ್ನು ಉಳಿಸಿಕೊಳ್ಳುವುದಕ್ಕಾಯಿತು
ಓದುವುದಕ್ಕಾವಾಗಾಗುತ್ತೋ ಗೊತ್ತಿಲ್ಲ 
ಇನ್ನೊಂದು ಪುಸ್ತಕವನ್ನು ಯಾವಾಗಾಯ್ತೋ ಆಗ ದಯವಿಟ್ಟು ಹಾಕಿ.
-ಹಂಸಾನಂದಿ
ಉ: ಚೆಂಗನ್ನಡ ಛಂದಸ್ - ೧
ಗೆಳೆಯರೆ, ಒಂದನೇ ನಾಗವರ್ಮನ ಛಂದೋಂಬುಧಿಯನ್ನು ರೇಪಿಡಶೇರಿನಲ್ಲಿ ಏರಿಸಿದ್ದೇನೆ. ಆಸಕ್ತಿಯುಳ್ಳವರು ಇಳಿಸಿಕೊಳ್ಳಿರಿ.
Chandombudhi of Nagavarma 1.
ಹಂಸಾನಂದಿಯವರೆ, ನಿಮ್ಮ ಮುಂದಿನ ಕಾವ್ಯಪ್ರಯೋಗಗಳಲ್ಲಿ ಪ್ರಾಸದ ಸ್ಪರ್ಶವೂ ಇರುತ್ತದೆ ಎಂಬುದನ್ನು ನಿರೀಕ್ಷಿಸಬಹುದೇ ?