ನನ್ನ ಓಟದ ಹಾದಿ
ಇಲ್ಲಿ ಬಂದಾಗ ತಿಳಿದಿದ್ದೆ
ಹಾದಿಯೇ ಇಲ್ಲದ ಬಟ್ಟ ಬಯಲು
ಅಮ್ಮ ತೋರಿಸಿದ ಹಾದಿ ತುಳಿದೆ
ಇದೊಂದೇ ಹಾದಿ ಎಂದು ತಿಳಿದೆ
ಅಪ್ಪ ಒಂದು ಹಾದಿ ತೋರಿಸೇ
ಅಣ್ಣ ಅಕ್ಕಂದಿರ ಬೇರೆ ಬೇರೆ ವರಸೆ
ಮುಂದೆ ತಿಳಿಯಿತು
ಅಂದಾಗಿದ್ದೆ ನಾನೊಂದು ಕೂಪ ಮಂಡೂಕ
ದಿನ ದಿನಕೂ ದಿಗಂತದೆಡೆಗೇ ನೋಟ
ಕಣ್ಣು ಕೀಳದೇ ಒಂದೇ ಸಮನೆ ಓಟ
ಹೆಜ್ಜೆ ಹೆಜ್ಜೆಯಲೂ ಸಿಗುವ ಕಂದಕ
ಕಾಣದಂತೆ ಹಿಂದೆ ಓಡುವುದೇ ಅದರ ಕಾಯಕ
ನೇರ ಹಾದಿಯಲ್ಲೊಮ್ಮೆ ಓಟ
ಕವಲು ಹಾದಿಯಲ್ಲೊಮ್ಮೆ ಓಟ
ಬಟ್ಟ ಬಯಲೆಂದು ತಿಳಿದ ಜಾಗದಲ್ಲಿ
ಎಲ್ಲೆಲ್ಲಿ ನೋಡಿದರೂ ಒಂದೊಂದು ಕಡೆಗೆ ಹಾದಿ
ಹಿರಿಯರಿಂದ ಸರಿದಾರಿ ಕಲಿಯುತಿಹೆನೆಂಬ
ಅನಿಸಿಕೆಗಳೆಲ್ಲ ಸುಳ್ಳಾಯಿತು ಒಮ್ಮೆ
ಕಿರಿಯರಿಗೆಲ್ಲ ದಾರಿ ಸೂಚಕನಾಗಹೋಗಿ
ತಪ್ಪರಿವಾಗಿ ಬೆಪ್ಪನಾಗಿದ್ದೆ ಇನ್ನೊಮ್ಮೆ
ಕಣ್ಣ ಮುಂದೆ ಸಹಚರರ ಬೀಳುವಿಕೆ
ನೆನಪಿನಾಳದಿಂದ ಅವರ ಮಾಸುವಿಕೆ
ತಿಳಿದಿಹೆ ನಾ ಎಲ್ಲರ ಹಿಂದೆ ಹಾಕುತಿರುವೆ
ಮುಂದೆ ಮುಂದೆ ಓಡುತಲೇ ಇರುವೆ
ಹಿನ್ನೋಡದೇ ಅಪ್ರಮತಿಮನೆಂದೆ ತಿಳಿಯುತಿರುವೆ
ಒಮ್ಮೆ ಹಿಂದಾಗಲೂ ಅಳುತ ಕೂರುವೆ
ಒಮ್ಮೆ ಸೆಳೆವುದೇ ಕಂದಕ ತನ್ನ ಬಾಹುವಿನಿಂದ?
ಅಂದು ನಾ ಹೊರಬರುವೆನೇ ಈ ಕನಸಿನಿಂದ?

- Login or register to post comments
- 765 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಸಂದರ್ಭ ವಿವರಿಸಿ
ತ ವ. ಶ್ರೀನಿವಾಸರೇ, ನಿಮ್ಮ ಕವನ ಬಹಳ ಚೆನ್ನಾಗಿದೆಯೆಂದು ಹೇಳಿದರೆ, ಅದು ಕೇವಲ ರೂಢಿಮಾತಾಗಿ ಬಿಡುತ್ತದೆ. ಆದ್ದರಿಂದ ನಾನೊಂದು ಉಪಾಯ ಮಾಡಿದ್ದೇನೆ. ಅದೇನೆಂದರೆ, ಸಂದರ್ಭ ವಿವರಿಸುವುದು. ಈ ಕಸರತ್ತಿನಿಂದ (ಅಥವಾ ಅಭ್ಯಾಸ) ನಿಮ್ಮ (ಯಾವುದೇ) ಕವನಗಳು ಇನ್ನು ಹೆಚ್ಚು ನಾಟುತ್ತದೆಯೆಂದು ನಂಬಿದ್ದೇನೆ. ಏನಂತೀರಾ.
ಉದಾಹರಣೆಗೆ.
ಸಂದರ್ಭ ವಿವರಿಸಿ ೧೦ ಅಂಕಗಳು.
೧. ಮುಂದೆ ಮುಂದೆ ಓಡುತಲೇ ಇರುವೆ.
೨. ಅಂದು ನಾ ಹೊರಬರುವೆನೇ ಈ ಕನಸಿನಿಂದ.
ಉತ್ತರ ನಾನೂ ಕೂಡ ಆಮೇಲೆ ಬರೆಯುತ್ತೇನೆ. ಬೇರೆಯವರು ಪ್ರಯತ್ನಸಬಹುದು.
ತದ್ವಿರುದ್ಧ
ಮೊದಲಿಗೆ ಸುನೀಲ್ ಅವರಿಗೆ ನನ್ನ ವಂದನೆಗಳು. ನಿಮಗೆ ಕವನ ಓದೋಕ್ಕೆ ಇಷ್ಟ ಇದೆಯೆಂದು ತಿಳಿದು ಬಹಳ ಬಹಳ ಸಂತೊಷವಾಗ್ತಿದೆ. ನಿಮ್ಮಂತಹವರು ಸಿಗೋದು ಬಹಳ ಅಪರೂಪ.
ನೀವು ಮೇಲೆ ತಿಳಿಸಿರುವ ಎರಡು ಸಂದರ್ಭಗಳೂ ತದ್ವಿರುದ್ಧ. ಕನಸಿನಿಂದ ಆಚೆಗೆ ಬಂದಾಗ ಓಟ ನಿಂತಿರುತ್ತದೆ.
ನೀವೂ ಬರೆಯಿರಿ ಸಾರ್. ನಿಮ್ಮ ಹಿಂದೆ ನಾನಿರ್ತೇನೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಸಂದರ್ಭ ವಿವರಣೆ - ಮುಂದೆ ಮುಂದೆ ಓಡುತಲೇ ಇರುವೆ
ಈ ಕವನದ ಸಾಲನ್ನು ತ.ವಿ. ಶ್ರೀನಿವಾಸರ "ಓಟದ ಹಾದಿ" ಎಂಬ ಪದ್ಯದಿಂದ ಆರಿಸಲಾಗಿದೆ.
ಈ ಸಾಲಿನಲ್ಲಿ ಕವಿಗಳು, ಮಾನವನು ತನ್ನ ಜೀವಿತದಲ್ಲಿ ಸವೆಸುವ ದಾರಿ ಹಾಗು ಆತನ ತುಡಿತಗಳನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ.
ಈ ಇಳೆಯಲ್ಲಿ ತಾಯಿಯ ಪ್ರೀತಿಗಾಗಿ ಹಂಬಲಿಸದವರು ಯಾರೂ ಇರಲಾರರು. ಚಿಕ್ಕ ಮಗುವಾಗಿದ್ದಾಗ, ಆಕೆಯೇ ನಮಗೆ ಭದ್ರಕೋಟೆಯನ್ನೊದಗಿಸಿ ರಕ್ಷಿಸಿಟ್ಟಿರುತ್ತಾಳೆ. ನಾವು ತಪ್ಪು ಮಾಡಿದಾಗ ತಿದ್ದುತ್ತಾಳೆ, ಆದ್ದರಿಂದ ನಮಗೆ ಆಕೆಯೇ ಆದರ್ಶವಾಗಿರುತ್ತಾಳೆ. ನಾವು ಅಂಬೆಗಾಲಿಡುವಾಗ, ತಾಯಿಯನ್ನೇ ಹುಡುಕಿ ಹೋಗುತ್ತೇವೆ. ಇದನ್ನೇ ಕವಿಗಳು ಅಮ್ಮ ತೋರಿಸಿದ ಹಾದಿ ಎಂದು ಹೇಳಿದ್ದಾರೆ.
ದಿನಗಳೆದಂತೆ, ನಮ್ಮ ವ್ಯಕ್ತಿತ್ವದ ಮೇಲೆ, ತಂದೆಯ ಗಾಢ ಛಾಪಿರುತ್ತದೆ. ತಂದೆಯ ಮಾತಿಗೆ ಎದುರಾಡದವರಾಗಿರುತ್ತೇವೆ. ಆತನೇ ನಮಗೆ ಆದರ್ಶನಾಗುತ್ತಾನೆ. ಅಪ್ಪ ನಮ್ಮನ್ನು ಒಂದು ದಡ ಸೇರಿಸಿದ ಮೇಲೆ, ಇಷ್ಟ್ಹೋತ್ತಿಗೆ ಒಂದು ನೆಲೆ ಕಂಡುಕೊಂಡಿರುವ ನಮ್ಮ ಅಣ್ಣ ಅಕ್ಕಂದಿರು ನಮಗೆ ದಾರಿತೋರುವವರಾಗುತ್ತಾರೆ ಅಥವಾ ನಾವು ನಮಗೆ ದಾರಿ ತೋರಿಸುತ್ತಾರೆ ಎಂದು ನಂಬಿರುತ್ತೇವೆ. ಯಾವ ದಿನ ತನ್ನತನವನ್ನು ಕಂಡುಕೊಳ್ಳುತ್ತಾನೋ ಆ ದಿನ ತನ್ನ ಇಲ್ಲಿಯ ಜೀವಿತವನ್ನು ನೋಡಿ ತಾನೇ ಗೇಲಿ ಮಾಡಿಕೊಂಡು ನಗುತ್ತಾನೆ. ಇಲ್ಲಿ ಕವಿಯು ವಿಡಂಬನಾತ್ಮಕವಾಗಿ ತಮ್ಮನ್ನು ತಾವೇ ಕಪ್ಪೆಗೆ ಹೋಲಿಸಿಕೊಳ್ಳುತ್ತಾರೆ.
ಈ ಜಗತ್ತಿನಲ್ಲಿ ತನ್ನ ಕಾಲ ಮೇಲೆ ತಾನು ನಿಂತಾಗ, ತನ್ನ ನಯನಗಳಿಂದ ಈ ಜಗತ್ತನ್ನು ಸವಿಯುತ್ತಿರಲಾಗಿ, ಈ ಪ್ರಪಂಚದ ಕದಂಬ ಬಾಹುಗಳು ಅವನನ್ನು ಆವರಿಸುತ್ತವೆ. ಆಗ ಅವನಿಗೆ ತಿಳಿಯುತ್ತದೆ ತಾನು ಕಲಿಯಬೇಕಾದ್ದು ಬಹಳಷ್ಟಿದೆಯೆಂದು. ಸ್ವಂತ ಬುದ್ಧಿಯಿಲ್ಲದೆ ಅಜ್ಜ ಹಾಕಿದ ಆಲದ ಮರಕ್ಕೆ ಜೋತು ಬೀಳುವ ತನ್ನ ಸಹಚರರು ಹೊಸ ಕಾಲದ ಸಮಸ್ಯೆಗಳನ್ನು ಎದುರಿಸಲಾಗದೇ ಸೋಲುವುದನ್ನು ಕಾಣುತ್ತಾನೆ, ಮತ್ತು ತನ್ನನ್ನು ತಾನು ತಿದ್ದಿಕೊಳ್ಳುತ್ತಾನೆ. ಈ ಹಂತದಲ್ಲಿ ಅವನ ಅರಿವಿಗೆ ಬಾರದೆ, ಅಹಂ ಅವನ ಬೆನ್ನು ತಟ್ಟಿರುತ್ತದೆ.
ಇದನ್ನು ಗಮನಿಸದೇ, ಬೇರೆಯವರಿಗೆ ಬುದ್ದಿ ಹೇಳಲು ಹೋಗಿ, ತಾನೇ ನಗೆಪಾಟಲಾಗುತ್ತಾನೆ. ಇಷ್ಟೆಲ್ಲ ಆಗುವಾಗಲೂ ತನ್ನ ಆಶಯಗಳನ್ನು ಪೂರೈಸಿಕೊಳ್ಳಲು ಸದಾ ಅವನು ಪ್ರಯತ್ನಶೀಲನಾಗಿರುತ್ತಾನೆ ಎಂದು ಕವಿಗಳು ಹೇಳಿದ್ದಾರೆ.
ಇದನ್ನ ಗಮನಿಸಿದರೆ, ಮನುಷ್ಯರು ಬದಲಾವಣೆಗಳನ್ನು, ಹಿಂಜರಿಕೆಯಿಲ್ಲದೆ ಆದರೆ ಎಚ್ಚರಿಕೆಯಿಂದ ಸ್ವಾಗತಿಸಬೇಕೆಂದು ಹೇಳುವುದು ಕವಿಯ ಆಶಯವಿರಬಹುದು.
ಇನ್ನೊಂದು ಸಂದರ್ಭ ಬಾಕಿಯಿದೆ, ಬೇರೆ ಯಾರಾದರು ಪ್ರಯತ್ನಸಬಹುದು.
ನೇರ ಹಾದಿ
ನೇರ ಹಾದಿಯಲ್ಲೊಮ್ಮೆ ಓಟ
ಕವಲು ಹಾದಿಯಲ್ಲೊಮ್ಮೆ ಓಟ
ಬಟ್ಟ ಬಯಲೆಂದು ತಿಳಿದ ಜಾಗದಲ್ಲಿ
ಎಲ್ಲೆಲ್ಲಿ ನೋಡಿದರೂ ಒಂದೊಂದು ಕಡೆಗೆ ಹಾದಿ
ಇದು ಚೆನ್ನಾಗಿದೆ. ಜಗತ್ತನ್ನು ಬಯಲೆಂದು ತಿಳಿದವರಿಗೆ ಮುಂದೆ ಹಾದಿ ಕಾಣುವುದಿಲ್ಲ ಎನ್ನುವ ಹೆದರಿಕೆಯೇ ಇಲ್ಲ. ಶ್ರೀನಿವಾಸರು ಹೇಳಿದ ಹಾಗೆ ಎಲ್ಲಕಡೆಯೂ ನೇರ ಹಾದಿಯೇ!
- ಗೋಪೀನಾಥ ರಾವ್