ಸಾಹಿತ್ಯ ವಲಯದ ಪ್ರಾಚೀನ ಕಾಯಿಲೆ (೧)
’ಕವಿಗೆ ಕವಿ ಮುನಿವ’ ಎನ್ನುವುದು ಹಳೆಯ ಮಾತು . ಮಾತು ಹಳೆಯದೇ ಆದರೂ , ಎಲ್ಲಾ ಕಾಲಕ್ಕೂ ಸಲ್ಲುವಂತಹ ಮಾತು . ಎಲ್ಲರಿಗೂ ಗೊತ್ತಿರುವ ಈ ಹಳೆಯ ಮಾತನ್ನು ಈಗ ಎತ್ತಲು ಕಾರಣ , ಇದು ಇಂದಿನ ಕಾಲಕ್ಕೆ ಹೊಸ ಹೊಸ ಅವತಾರಗಳನ್ನು ಎತ್ತಿ, ಒಂದು ರೀತಿಯ ದ್ವೇಷದ ವಾತಾವರಣವನ್ನು; ಗುಂಪುಗಾರಿಕೆಯ ಸ್ಥಿತಿಯನ್ನು ನಿರ್ಮಾಣ ಮಾಡುವ ಮಟ್ಟಿಗೆ ಬೆಳೆದು ನಿಂತಿರುವುದು .
ಪಂಪನ ಕಾಲದಿಂದಲೂ ಕವಿ ಸಂಕುಲದ ನಡುವೆ ,ಈ ಈರ್ಷೆ ಇದ್ದೇ ಇದೆ . ಕವಿ, ಕುಕವಿ,ವಿಕಟಕವಿ ಇತ್ಯಾದಿ ಪದ ಬಳಕೆಗಳೂ ಹಳೆಯವೇ .ಕೆಲವು ಅಪರಿಮಿತ ಪ್ರತಿಭಾವಂತರೂ ಸಹ , ಸಾಮಾನ್ಯ ಸಾಹಿತಿಗಳನ್ನು ಅಸಡ್ಡೆಯಿಂದ ಕಂಡುದೂ ಉಂಟು . ಅವರಿಗೆ ತಮ್ಮ ಪ್ರತಿಭೆಯ ಆಳ, ವಿಸ್ತಾರಗಳ ವಿವರವಾದ ಪರಿ ಗೊತ್ತಿತ್ತು . ಅದು ನಿಜವೂ ಆದುದರಿಂದ , ಅವರ ಮಾತು ಸರಿ ಎನಿಸುತ್ತಿತ್ತು. ಸ್ವತಃ ಕುಮಾರವ್ಯಾಸನೇ " ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ” ಎನ್ನುತ್ತಾನೆ ಆದರೆ ಇದು ಅತ್ಯುಕ್ತಿ ಎನಿಸುವುದಿಲ್ಲ.ಕುವೆಂಪು " ನಾನೇರಿದೆತ್ತರವ ನೀನೇರಿ ಬರಲಾರೆ ” ಎನ್ನುತ್ತಾರೆ . ಇದು ಅಸಹಜವೆನಿಸುವುದಿಲ್ಲ .ಸಂತೋಷದ ವಿಷಯವೆಂದರೆ ಈ ವಾದ ಪ್ರತಿವಾದಗಳು ಸಾಹಿತ್ಯ ಕ್ಷೇತ್ರವನ್ನು ವಿಸ್ತರಿಸುತ್ತಾ ಹೋಗಿರುವುದು .
ಎಲ್ಲ ಕಾಲಗಳಂತೆ ನವೋದಯದ ಕಾಲದಲ್ಲಿಯೂ ಅನೇಕ ಭಿನ್ನ ಧ್ವನಿಗಳು ವೈಚಾರಿಕ ವಲಯದಲ್ಲಿ ಮುಂದುವರಿಯುತ್ತಲೇ ಇದ್ದವು . ಎರಡು ಪ್ರಸಿದ್ದ ಚೇತನಗಳಾದ ಮಾಸ್ತಿಯವರು, ಕುವೆಂಪುರವರೂ ಭಿನ್ನ ಅಭಿಪ್ರಾಯಗಳನ್ನು ತಳೆದುದು , ಸಾಹಿತ್ಯ ಪ್ರಿಯರಿಗೆಲ್ಲಾ ತಿಳಿದ ವಿಷಯವೇ ; ಇಬ್ಬರ ನಂಬಿಕೆಗಳಲ್ಲಿ ವ್ಯತ್ಯಾಸಗಳಿದ್ದರೂ , ಎರಡೂ ಚೇತನಗಳೂ ಸಹ ಸಾಹಿತ್ಯ ಮೇರುಗಳು ಎನ್ನುವುದು ನಿರ್ವಿವಾದವಾದ ವಿಷಯ . ಈ ಎರಡೂ ಮೇರುಗಳೂ ಸೇರಿ ಸಂಪಾದಿಸಿ ಕೊಟ್ಟ ಕುಮಾರ ವ್ಯಾಸ ಭಾರತ ಎಂತಹ ಅದ್ಭುತ ಕಾರ್ಯ ಎನ್ನುವುದನ್ನು ಇಲ್ಲಿ ವಿವರಿಸಬೇಕಾಗಿಲ್ಲ.
ಶಂಬಾ ಜೋಷಿ, ದಾ.ರಾ. ಬೇಂದ್ರೆ ಈ ಎರಡು ಮೇರುಗಳ ನಡುವಣ ವಿಪರೀತ ವೈಚಾರಿಕ ವಿರೋಧ , ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಪ್ರಸಿದ್ದವಾದುದು. ಬೇಂದ್ರೆ ಸಹಜ ಕವಿ ; ಅದು ಅವರ ಜನ್ಮ ಜಾತ ಪ್ತತಿಭೆ . ಅವರಲ್ಲಿ ಒಂದಿಷ್ಟು ಮಾರ್ದವತೆ , ಹೆಚ್ಚೇ ಎನಿಸುವ ಭಾವುಕತೆ , ಇದೆಲ್ಲಾ ಸಹಜವೇ .ಅದರಿಂದಾಗಿ , ಶಂಬಾ ರೀತಿಯ ತೀರಾ ವೈಚಾರಿಕ ನಿಲುವು ಅವರಿಂದ ಸಾಧ್ಯವಾಗುವುದಿಲ್ಲ. ಶಂಬಾ ಬರಿಯ ಸಾಹಿತಿಯಲ್ಲ ,ತೀವ್ರ ರೀತಿಯ ಚಿಂತಕ ; ಸಂಶೋಧಕ . ಅಲ್ಲಿ ಕವಿ ಪ್ರಜ್ಞೆಗಿಂತ ಸಂಶೋಧನ ಪ್ರಜ್ಞೆ ಮೇಲುಗೈ ಸಾಧಿಸುತ್ತದೆ .ಆದರೆ ಇಬ್ಬರೂ ಕೂಡಿ ಅನುವಾದಿಸಿ ಕೊಟ್ಟಿರುವ ರಾನಡೆಯವರ ’ಉಪನಿಷದ್ರಹಸ್ಯ’ ಕನ್ನಡ ಸಾರಸ್ವತ ಲೋಕಕ್ಕೆ ಬಹು ದೊಡ್ಡ ಕಾಣಿಕೆ .
ಇಲ್ಲಿ ಯಾರದೇ ಆದರೂ ತಪ್ಪು ,ಸರಿ ಎನ್ನುವ ಪ್ರಶ್ನೆ ಉದ್ಭವಿಸುವುದೇ ಇಲ್ಲ . ಅದು ಅವರವರ ಜಾಯಮಾನ . ಈ ಎಲ್ಲ ಚೇತನಗಳಿಂದ, ಕನ್ನಡ ಸಾಹಿತ್ಯ ಭಾವುಕವಾಗಿ, ವೈಚಾರಿಕವಾಗಿ,ಸಂಶೋಧನಾತ್ಮಕ ದೃಷ್ಟಿಯಿಂದಲೂ ಸಹ ಅತ್ಯಂತ ಶ್ರೀಮಂತವಾಗಿ ಬೆಳೆಯಿತು ಎನ್ನುವುದು ಮಾತ್ರ ಸರಿಯಾದುದು .
ಇನ್ನಿಬ್ಬರು ಪ್ರತಿಭಾಶಾಲಿಗಳ ವೈಚಾರಿಕ ವಿರೋಧಗಳನ್ನು ದಾಖಲಿಸದಿದ್ದರೆ ಈ ಲೇಖನ ಪೂರ್ಣವಾದಂತೆ ಎನಿಸುವುದಿಲ್ಲ. ಅವರೇ ಪ್ರಸಿದ್ದ ಸಾಹಿತಿ ಜಿ.ಪಿ. ರಾಜರತ್ನಂ ; ವೈಚಾರಿಕ ಹಾಸ್ಯ ಕ್ಷೇತ್ರದಲ್ಲಿ ಅಷ್ಟೇ ಪ್ರಸಿದ್ದರಾದ ಬೀಚಿ ಅರವತ್ತರ ದಶಕದಲ್ಲಿ ಈ ಪ್ರತಿಭಾವಂತ ಹೇಮಾಹೇಮಿಗಳ ,ವಾದ ವಿವಾದಗಳನ್ನು ಓದುವುದಕ್ಕೆಂದೇ ’ಪ್ರಜಮತ’ ವಾರ ಪತ್ರಿಕೆಯನ್ನು ವಾರ ವಾರವೂ ಕಾತುರದಿಂದ ಕಾಯುತ್ತಿದ್ದುದು ಇನ್ನೂ ನೆನಪಿನಲ್ಲಿ ಹಸಿರಾಗಿದೆ .
ಬೀಚಿ , ರಾಜರತ್ನಂರನ್ನು ’ಚಕ್ರವರ್ತಿ ರತ್ನ’ ಎಂದು ಛೇಡಿಸುತ್ತಿದ್ದರೆ , ರಾಜರತ್ನಂ ಬೀಚಿಯವರನ್ನು ’ ಹಾಸ್ಯ ಬ್ರಹ್ಮ’ ಎನ್ನುತ್ತಿದ್ದರು. ಬೀಚಿ ’ಭಯಾಗ್ರಫಿ’ ಯನ್ನು ಬರೆದರೆ ;ರಾಜರತ್ನಂ ’ನಿರ್ಭಯಾಗ್ರಫಿ ’ ಯನ್ನು ಬರೆದರು .( ಮುಂದುವರಿಯುವುದು)

- Login or register to post comments
- 232 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: