ಸಾಹಿತ್ಯ ವಲಯದ ಪ್ರಾಚೀನ ಕಾಯಿಲೆ (೨)
ಜಿ.ಪಿ. ರಾಜರತ್ನಂ ಮತ್ತು ಬೀಚಿ ಈ ಇಬ್ಬರು ಮಹನೀಯರು ಕನ್ನಡಕ್ಕೆ ಕೊಟ್ಟ ಕಾಣಿಕೆ ಮಾತ್ರ ಅತ್ಯಂತ ಅಮೂಲ್ಯವಾದುದು. ಈ ನಾಡಿನ ಧರ್ಮ, ದರ್ಶನಗಳನ್ನೆಲ್ಲಾ ಸುಂದರವಾದ , ಸರಳವಾದ ಸಾಹಿತ್ಯ ಪರಿಭಾಷೆಯಲ್ಲಿ ರಾಜರತ್ನಂ ಕನ್ನಡಿಗರಿಗೆ ಪರಿಚಯಿಸುತ್ತಾ ಹೋದರು .ಬರಿಯ ದಾರ್ಶನಿಕ ಸಾಹಿತ್ಯ ಮಾತ್ರವಲ್ಲ,ಜನ ಸಾಮಾನ್ಯನ , ಬಾಳನ್ನೂ; ಗೋಳನ್ನೂ ಅರ್ಥ ಮಾಡಿಕೊಂಡಿದ್ದ ಆ ಸೃಜನಶೀಲ ಮನಸ್ಸು, ’ರತ್ನನ ಪದಗಳು’ ತರಹದ ವಿಶೇಷ ಮಾದರಿಯ ಸಾಹಿತ್ಯ ಕಾಣಿಕೆಯನ್ನು ಕನ್ನಡ ಜಗತ್ತಿಗೆ ಅರ್ಪಿಸಿತು.
ಬೀಚಿ ತಮ್ಮ ಸುಪ್ರಸಿದ್ದ ಮೊನಚು ಮಾತುಗಳಿಂದ ,ಸರಳ ಶೈಲಿಯ ಆಡು ಮಾತಿನ ಬರಹಗಳಿಂದ ,ಕನ್ನಡಿಗರ ವೈಚಾರಿಕ ಪ್ರಜ್ಞೆಯನ್ನು ತುಂಬಾ ವಿಸ್ತರಿಸಿಕೊಳ್ಳಲು ಸಹಾಯ ಮಾಡಿದರು .ತಮ್ಮ ಭಯಾಗ್ರಫಿಯಲ್ಲಿ ತಮ್ಮ ಜೀವನದ ಯಾವ ಅಂಶವನ್ನೂ ಮುಚ್ಚಿಡದೆ ,ಅಪ್ಪಟ ಪ್ರಾಮಾಣಿಕತೆಯನ್ನು ಮೆರೆದರು .ಮನುಷ್ಯನ ಸಹಜ ದೌರ್ಬಲ್ಯಗಳನ್ನೂ ; ಅವನ್ನು ಗೆಲ್ಲಲಾರದ ಅವನ ಅಸಹಾಯಕತೆಯನ್ನೂ , ನಿರ್ವಂಚನೆಯಿಂದ ತೆರೆದಿಟ್ಟರು .
ಒಟ್ಟಿನಲ್ಲಿ ಇದೆಲ್ಲದರ ಪರಿಣಾಮ ಕನ್ನಡದ ಪ್ರಜ್ಞಾವಲಯ , ಅಪಾರ ಜ್ಞಾನ ಸಂಪನ್ನತೆಯನ್ನು ಪಡೆಯುವಲ್ಲಿ ತೀರಾ ಯಶಸ್ವಿಯಾಯಿತು .ಈ ಎಲ್ಲ ಮಹಾ ಚೇತನಗಳ ವೈಚಾರಿಕ ಭಿನ್ನತೆ ಎನ್ನುವುದು ,ಅವರವರ ವಿಭಿನ್ನ ಸಂಸ್ಕಾರಗಳ , ಮನಃಸ್ಥಿತಿಗಳ , ಸ್ವಾನುಭವ ಸಾಮಗ್ರಿಗಳ, ಚಿಂತನೆಯ ಸ್ವರೂಪದಲ್ಲಿದ್ದ ಭಿನ್ನತೆಯ ಕಾರಣಗಳು .ಈ ಎಲ್ಲರಿಗೂ ಸಮಾನವಾಗಿದ್ದ ಅಂಶವೆಂದರೆ ,ಮಾನವ ಸಂಭಂಧಗಳ ಮಾರ್ದವ ಸಾಮರಸ್ಯ ; ಮನುಷ್ಯತ್ವದ ಕಡೆಗೆ ಮನುಷ್ಯನ ಮನಸ್ಸುಗಳನ್ನು ಎಳೆದೊಯ್ಯುವ ಕಾಳಜಿ .ಇದರ ಪರಿಣಾಮ ಸಾಹಿತ್ಯ ಪ್ರೇಮಿಗಳ ಮನಸ್ಸುಗಳು ,ಚಿಂತನ ಶೀಲವೂ, ವೈಚಾರಿಕವೂ, ಸೂಕ್ಷ್ಮವೂ, ಸ್ಪಂದನಶೀಲವೂ ಆದವು . ಈ ಎಲ್ಲ ಸಾಹಿತ್ಯಿಕ ಇತಿಹಾಸವನ್ನು ಗಮನಿಸಿದಾಗ ,ಭಿನ್ನ ಧ್ವನಿ ಎನ್ನುವುದು , ಸಾಹಿತ್ಯ ಪ್ರಪಂಚಕ್ಕೆ ಸಹಜವಾದ, ಚೈತನ್ಯಪೂರ್ಣವಾದ ನಡವಳಿಕೆ ಎನ್ನುವುದು ಮನವರಿಕೆಯಾಗದಿರದು .
ಆದರೆ ಇಂದಿನ ಪರಿಸ್ಥಿತಿಯಲ್ಲಿ , ಸಹಜವಾದ ಭಿನ್ನ ಚಿಂತನೆಗಳ ಅಭಿವ್ಯಕ್ತಿ ಕಂಡು ಬರುತ್ತಿದ್ದರೂ ,ಎಲ್ಲೋ ಒಂದು ಕಡೆ ಅದು ತನ್ನ ಸಹಜ ಗುಣವನ್ನು ಕಳೆದುಕೊಂಡು ,ಅಪರಿಮಿತ ಈರ್ಷೆ,ಗುಂಪುಗಾರಿಕೆ , ಹಣೆ ಪಟ್ಟಿ ಅಂಟಿಸಿಕೊಳ್ಳುವಿಕೆಯ ವಿಕೃತಿಯೆಡೆಗೆ ಧಾವಿಸುತ್ತಿದೆ ಎನಿಸದಿರದು .
ಒಬ್ಬ ಪ್ರತಿಭಾವಂತನನ್ನು ಇನ್ನೊಬ್ಬ ಪ್ರತಿಭಾವಂತ ಸೋಲಿಸಬಹುದಾದುದು , ಎದುರಾಳಿಯನ್ನು ಮೀರಿಸುವ ಕಲಾಕೃತಿಯನ್ನು ;ಸಾಹಿತ್ಯವನ್ನು ನಿರ್ಮಾಣ ಮಾಡುವ ಮೂಲಕವಾದರೆ ,ಅದು ಸಮಾಜಕ್ಕೆ ಕೊಡುವ ಬಹು ದೊಡ್ಡ ಕಾಣಿಕೆ .ಸಂಸ್ಕೃತಿಯನ್ನು ಬೆಳೆಸಲು , ವಿಸ್ತರಿಸಲು ಸಹಕಾರಿಯಾಗುವ ಆರೋಗ್ಯಕರ ಸ್ಪರ್ಧೆ ,ಎಲ್ಲ ಕಾಲಕ್ಕೂ ಸ್ವಾಗತಾರ್ಹವಾದುದು .ಬದಲಾಗಿ , ಗುಂಪು ಕಟ್ಟುವುದು, ಪರಸ್ಪರ ಕೆಸರೆರೆಚುವುದು, ಇತರರಿಗೆ ಹಣೆ ಪಟ್ಟಿ ಕಟ್ಟುವುದು ಇವಾವೂ ವಿದ್ವಾಂಸರಿಗೆ ಶೋಭೆ ತರುವ ಲಕ್ಷಣಗಳಲ್ಲ.
ಯಾರೂ ಎಲ್ಲ ಕಾಲಗಳಲ್ಲೂ ಯಾವುದೇ ಒಂದು ಬ್ರಾಂಡ್ ಆಗಿರಲು ಸಾಧ್ಯವಿಲ್ಲ .ವಿಭಿನ್ನ ಚಿಂತನೆಗಳು , ಒಬ್ಬನೇ ವ್ಯಕ್ತಿಯಲ್ಲಿ ಪರಸ್ಪರ ತಾಕಲಾಡುತ್ತಿರುತ್ತವೆ. ಏಕೆಂದರೆ ಎಷ್ಟೆಂದರೂ ಮನುಷ್ಯನ ಅರಿವಿನ ವಲಯ ತುಂಬಾ ಸಣ್ಣದು .ಈ ಮಿತಿಯನ್ನು ಅರಿತರೆ ಮನುಷ್ಯನ ಗರ್ವ ಅರ್ಧ ವಾಸಿಯಾದಂತೆಯೇ. ಗೋಪಾಲ ಕೃಷ್ಣ ಆಡಿಗರ ’ ಬೆಸೆಯಲಾಗದೆದೆ ಎದೆಗಳಲ್ಲೂ ಕಂಡೀತು ಏಕ ಸೂತ್ರ, ಹಾಗೆಯೇ ಒಂದೇ ಎಂಬ ಮನಸ್ಸುಗಳಲ್ಲೂ ಭಿನ್ನತೆಯ ವಿಕಟ ಹಾಸ ’ ಎಂಬುದು ನೆನಪಿನಲ್ಲಿದ್ದರೆ ಸಾಕು .

- Login or register to post comments
- 190 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS: