ಶಂಕರ ಸ್ತುತಿ
ಮುಂಗುರುಳು
೧. ಇದು ನಮ್ಮ ಮುತ್ತಜ್ಜಿ ನಮ್ಮಮ್ಮನಿಗೆ ಹೇಳಿಕೊಟ್ಟಿದ್ದಂತೆ ![]()
೨. ಇತ್ತೀಚೆಗೆ ಬೆನಕ ಅವರು ಚೆಂಗನ್ನಡ ಛಂದಸ್ಸು - ೨ ಎಳೆಯಲ್ಲಿ ಬೃಹದ್ದೇಶಿಯ ಬಗ್ಗೆ ಮಾತನಾಡುತ್ತಾ ಉಸಿರ್ದಾಣದ(ಯತಿಗಳ) ಪರಿಚಯ ಮಾಡಿಕೊಟ್ಟಿದ್ದರು. ಈ ಸ್ತುತಿಯ ಪ್ರತಿಪದ್ಯದಲ್ಲಿ ಪ್ರಾಸ ನಿಮಯಗಳನ್ನು ಪಾಲಿಸಲಾಗಿದೆ. ಇದಲ್ಲದೆ ಯತಿಗಳನ್ನು ಕೂಡ ತೋರಿಸಲಾಗಿದೆ.
===========ಶ್ರೀ ಗಣೇಶ ಶಾರದಾಗುರುಭ್ಯೋನಮಃ===========
ಶ್ರೀ ಗುರು ಶಂಕರ | ಚರಿತೆಯನೊರೆಯುವೆ | ರಾಗದೊಳಿದನೊಲಿದೋದುವುದು ||
ನಾಗಾಭರಣನು | ಕರುಣದೊಳೀವನು | ಲೋಗರಭೀಷ್ಟವ ತಾಮುದದಿ || ೧ ||
ಅವನಿಯೊಳಗೆ ದುರ್ಮತಗಳು ಹೆಚ್ಚುತ | ಪಾವನ ವೈದಿಕ | ಮತವಳಿಯೆ ||
ದೇವತೆಗಳು | ಮಹದೇವಗೆ ಮೊರೆಯಿಡ | ಲವತರಿಸಿದ | ಧರೆಯೊಳು ಹರನು || ೨ ||
ಆ ಶಿವನುದಿಸಲು | ಶಿವಗುರುವಿಪ್ರಗೆ | ಕ್ಲೇಶವಡಗಿತು | ಸಜ್ಜನರ ||
ಭಾಸುರತೇಜದಿ ಮೆರೆಯುವ ಶಿಶುವಿಂ | ದೂರಹಿತ | ಮಾದುದು ಶಿವಮಹಿಯು || ೩||
ಇಂದು ಕಲಾಧರನುದಿಸಿದಕರದಿಂ | ಮಂದಾನಿಲವದು | ಬೀಸುತಿರೆ ||
ಬೃಂದಳವೆಲ್ಲವು ನಿರ್ಮಲವಾದುದು | ಬೃಂದಾರಕಶತಿ | ಪೊಗಳಿದುದು || ೪ ||
ಈ ಪರಿ ಶುಭಲಕ್ಷಣದಾಮಗುವಿಗೆ | ಪಾಪಹರನು ಶಂಕರನೆಂದೂ ||
ಸ್ಥಾಪಿಸಿನಾಮವಸಂತಸ | ತಳದನು | ಶ್ರೀಪರಮೇಶಗೆ | ಶಿವಗುರುವು || ೫ ||
ಉದಿಸಿದ ಶಿಶುವಿಗೆ | ವರ್ಷಗಳೈದಿರೆ | ಸದಮಲಶಾಸ್ತ್ರಗಳನುಭವವೂ ||
ವುದಿಸಿತು ಪೇಳುವದೇನದ ನೋಡಲು ಅದುಭುತವಾಯಿತು ಶಿವಮಹಿಮೆ || ೬ ||
ಊರ್ಜಿತನಾಗುತಲಿರುವಾ ಬಾಲನ | ನಾರ್ಜಿಸಿ ಮೆರೆದಾ | ಶಿವಗುರುವೂ ||
ವರ್ಜಿಸಿ ನಶ್ವರ ದೇಹವ ಶಾಶ್ವತ | ನಿರ್ಜರ ಸೌಖ್ಯವ ತಾಪಡೆದ || ೭ ||
ಋಷಿಪಿತೃದೇವರ ಋಣವನು ಕಳೆಯಲು | ಪಶುಪತಿರೂಪನು | ಶಂಕರನೂ
ಎಸದನು ಪಾವನ | ನುಪನಯನೋತ್ಸವ | ದೊಳಸೆಯೊಳಗೆ | ಪರಶಿವನಂತೆ || ೮ ||
ಔತ್ಸುಕದವಟು ಭಿಕ್ಷೆಗೆ ಪೋಗಿರೆ | ಉತ್ಸಾಹದೊಳಾಮಲಕವನು ||
ಸತ್ಸತಿಯೋರ್ವಳು | ನೀಡಲು | ಶಂಕರ | ನುತ್ಸವಗೈನದೆಂತೆನಲು || ೯ ||
ಅಂಬರದೆಡೆಯಿಂ | ಸ್ವರ್ಣಾಮಲಕವು | ತುಂಬಿತು ವರ್ಷಿಸಿ | ಸತಿಗೃಹದೋಳ್ ||
ಅಂಬುಜನೇತ್ರನ | ರಾಣಿಯಸ್ಮರಿಸಲು | ಶಂಭುವಿನಂಶದ ಶಂಕರನೂ || ೧೦ ||
ಒಂದು ದಿನ ತಾಯ್ | ನದಿಯೊಳುಮೀಯಲು | ಕುಂದಿದದೇಹದಿ | ನೊಂದಿರಲು ||
ಬಂಧನದೂರನು | ಶಂಕರನಾಗಲೆ | ತಂದನು | ಪೂರ್ಣಿಯ ಗೃಹದೆಡೆಗೆ || ೧೧ ||
ಎಳವೆಳೆಯೊಳೊಂದಿನ | ಪೂರ್ಣಾನದಿಯೊಳ್ | ಜಳಕವ | ನಾಡುತಶಂಕರನೂ ||
ಸುಳಿಯೊಳು | ಮೊಸಳೆಗೆ | ಸಿಕ್ಕಿದೆವಮ್ಮಾ | ವುಳಿವುದುಯತಿಯಾಗಲು ನಾನು || ೧೨ ||
ಏನನು ಪೇಳುವೆ | ಎನಲಾರ್ಯಾಂಬೆಯು | ಮನಧೀಷ್ಟವು | ಸಿದ್ಧಿಸಲೆಂದು ||
ಸನುಮತವೀಯಲು | ಶಂಕರನಾಗಲೆ | ಮಾನಸಸನ್ಯಾಸವಕೊಂಡ || ೧೩ ||
ಐತರುತಾ ಗೋವಿಂದಯತೀಂದ್ರರ | ಪೂತಪದದ್ವಯ | ವನುಕಂಡು ||
ಪ್ರೀತಿಯೊಳಗೆ ಸದ್ವಿದ್ಯೆಯ | ನೆಲ್ಲವ ಭೂತಾಧೀಶನು | ನೆರೆತಿಳಿದ || ೧೪ ||
ಪದುಳದೊಳೋರ್ವನು | ಶಿಷ್ಯನು ಕುಸುಮವ | ನದಿಯಾಚೆಯೊಳಿರೆ | ತರುತಿರಲೂ ||
ಸದಮಲಶಂಕರ | ನಾತನ ಬಾರೆನೆ | ನದಿಯೊಳು ನಡೆಯಲು ಗುರುಭಕ್ತ || ೧೫ ||
ಫಲಕುಸುಮವ | ತರುತಿರುಶಿಷ್ಯನ | ಪದತಲಕಾಶ್ರಯ | ಪದುಮಗಳಿರಲು ||
ನೆಲಸಿತು ಶಿಷ್ಯಗೆ ಪದುಮಚರಣಾನೆಂಬೊಲುಮೆಯ | ನಾಮವು | ಗುರುವರನಿಂ || ೧೬ ||
ನೀನಾರೆನಲಾ | ಮೂಕನಮೋರ್ವನು | ತಾನಾಬ್ರಂಹ್ಮವೀ | ನಾ ಎನಲು ||
ಆನರನೆಸೆದನು ಶಂಕರನಿಷ್ಟದಿ | ಮೌನಿಯು | ಹಸ್ತಾಮಲಕಾಖ್ಯ || ೧೭ ||
ಭಕ್ತಿಯ ಭರದೊಳು | ತೋಟಕವೃತ್ತದಿ | ಭಕ್ತನದೋರ್ವನು | ಸ್ತುತಿಸುತಿರೆ ||
ವ್ಯಕ್ತಮದಾಯಿತು ತೋಟಕನೆಂಬುವ | ಯುಕ್ತದ ನಾಮವು ಗುರುವರನಿಂ || ೧೮ ||
ತಮವಳಿವುದೆಮೋಕ್ಷವು | ಪೆರತಿಲ್ಲವು | ಶಮದ ಮಗಳೆವರಸಾಧನವು ||
ಸುಮತಿಯೆ ತಿಳಿಯಿದನೆನ್ನುತ | ಭೋದಿಸಿ | ತಿಮಿರವ ಕಳದನು | ಜನಮನದ || ೧೯ ||
ಥಳಥಳಿಸಿವ | ಶುಕ್ತಿಯೊಳಗೆರ ಜತವು | ನೆಲಸಲು ದೊರೆಯದ | ರೀತಿಯೊಳು ||
ಅಳಿಯುವ ಭೋಗವ ಬಿಡುವುದೆ ಮೋಕ್ಷವು ತಿಳಿಯಿರಿ ನೀವೆಂದುಸುರಿದನು || ೨೦ ||
ದಿನದಿನಕ್ಕಿಂತತಿ ಜನಗಳಮನವನು | ಘನಮಹಿಮನು | ತಿದ್ದುತ ಮತ್ತೆ ||
ಮನದೊಳು ನೆನದಾ | ಮಾತೆಯ ಸನಿಹಕೆ ಕ್ಷಣದೊಳು | ಗುರುಶಂಕರ ಬಂದ || ೨೧ ||
ಧರಣಿಯೊಳುದಿಸಿದ | ಜೀವಿಗಳೆಲ್ಲವು | ಮರಣವ ಹೊಂದುವ | ಧರ್ಮದೊಳು ||
ಸುರಪುರಸೇರಲು | ಮಾತೆಯ ಶಂಕರ | ನುರುಸಂಸ್ಕಾರವವೆಸಗಿದನು || ೨೨ ||
ಝಗಝಗಿಸುವ ಮಕ್ತಾಹಾರಂಗಳ | ನಿಗಿನಿಗಹೊಳೆಯುವ | ನೂಪುರದ ||
ಮೊಗದಾವರೆಯಿಂ | ಹುಸಿನಗೆ ಸೂಸುವ | ಸೊಗಸಿನ ಶಾರದೆಯ ಕಂಡ || ೨೩ ||
ಜ್ಞಾನಾಧೀಶಳಂಕಾಣುತ ಶಂಕರತಾನಾಕೆಯನುಪತಿ | ಮಂಡನರೊಳ್ ||
ಜ್ಞಾನಾಧಿಖ್ಯವ ಸಾಧಿಸಿ ಮಿಶ್ರಿನ | ಮೌನಿಸುರೇಶನ ಮಾಡಿದನು || ೨೪ ||
ಸರಸದಕವಿತೆಯೊಳನುಪಮತೇಜನು | ನರಹರಿದೇವನ | ತಾನುತಿಸಿ ||
ಕರಗಳ ಪಡೆಯುತ | ಗುರುಶಂಕರ | ಧರೆಗಿದು ಪೊಸತೆನೆ | ತಾಮೆರೆದ || ೨೫ ||
ಢಮರುಗಧರ ನಹ | ಪರಶಿವರೂಪನು | ಹಿಮಕರವದನೆಯ ಶಾರದೆಯಾ ||
ತಮಹರೆಯನು ಶೃಂಗಾದ್ರಿಯ ಪುರದೊಳು | ಕಮನೀಯತವೇ | ನಿಲ್ಲಿಸಿದ || ೨೬ ||
ಕಲಕಲನಾದದಿ | ನರ್ಮದೆಯೊಮ್ಮೆಯು | ನೆಲಮೇರುತ | ಪರಿಯುತಜನರ ||
ಅಳವಡಿಸಲು | ಕಂಡದ ಗುರುಶಂಕರ | ನಳಡಿಸಿದ | ಗುಂಡಿಯೊಳಗೆ || ೨೭ ||
ಖಂಡಪರಶುತಾ | ಕಾಶೀಪುರಿಯೊಳು | ಚಂಡಾಲನರೂಪವ ಧರಿಸೀ ||
ಪಂಡಿತಯತಿಯನು | ಕಾಣುತ ಪರಶಿವ ಖಂಡಿಸಿಕೇಳಿದ ತತ್ವವನು || ೨೮ ||
ಗಮನಿಸೆ ಭೇದಾಭೇದವು ದೇಹಕೆ | ಸಮತೆಯು ಚೈತನ್ಯಕೆ ನಿಜವೂ ||
ನಮಿಪೆನು ಗುರುವೆಂದಂತ್ಯಗು | ವಿಪ್ತಗುಸಮತಾಭಾವದೊಳಾತ್ಮದೊಳು || ೨೯ ||
ಘನತತ್ವವಕೇಳುತ ವಿಶ್ವೇಶ್ವರ | ಮನದೊಳುಸಂತೋಷವನಾಂತು ||
ದಿನಕರಕೋಟಿ | ಪ್ರಭೆಯನು ಮೀರುವ | ತನುಕಾಂತಿಯೊಳೆಸೆದನುನಿಂದು || ೩೦ ||
ಜಮುಣಾನಮೆ | ಇಂದೊದಿರುವ | ಢಮರುಗ | ಉಮೆಯರಸನಕಾಣುತನಲಿದು ||
ನಮಿಸುತಯತಿರಾಜೇಶ್ವರ ಪರಿಪರಿ || ಸುಮಶರಹರನನು | ನುತಿಸಿದನು || ೩೧ ||
ಓಂಕಾರಾರ್ಥವ | ಲೋಕದಜನರಿಗೆ | ಓಂಕಾರಾತ್ಮನು | ತಾತಿಳುಪಿ ||
ಶಂಕೆಯುಹರಿಸುತ | ವೇದಕೆ ಭಾಷ್ಯವ | ಶಂಕರನೆಸೆದನು ತಾರಚಿಸಿ || ೩೨ ||
ಚರಿಸುತ ಚಾರ್ವಾಕರಮತ ಖಂಡಿಸಿ | ಮೆರೆಯುತ ವಾದವಿವಾದದೊಳು ||
ನೆರೆಸುಜ್ಞಾನವತೋರುತ ಜನರಿಗೆ | ಪರಶಿವಮಹಿಮೆಯ ಕಾಣಿಸಿದ || ೩೩ ||
ಛಲವಾದಿಗಳನು ಜೈಸುತ ಶಂಕರ | ಮಲಿನವಪೊದಿದ | ಶಾಸ್ತ್ರಗಳ ||
ಒಲವಿಂ ಶೋಧಿಸಿ | ಯರ್ಥವ ಪೇಳುತ | ನಿಲಿಸಿದ ನಿಳೆಯೊಳು ಚಿರಮಾಗಿ || ೩೪ ||
ಜನಗಳಿಗುರುವಿನ | ಕಣ್ಣನು ಕೊಟ್ಟನು | ತನುಧನಸತಿಸುತ | ಮೊದಲಾಗಿ ||
ಕೊನೆಗಾದರೂ | ಸುಜ್ಞಾನವ | ಪಡೆಯಿರಿ | ಮನಗಾಣಿರಿ | ಮುಕ್ತಿಯ ನೀವೆಂದು || ೩೫ ||
ಟಂಕಾರಧ್ವನಿಯಿಂದಲಿ | ರಣದೊಳು | ಶಂಕರಹಿತ | ನೃಪ | ರೆಸೆವಂತೆ ||
ಶಂಕರಮೌಳಿಯು ಶಾಸ್ತ್ರಧ್ವನಿಯಿಂ | ಶಂಕೆಯನೀಗಿಸಿ | ಬೋಧಿಸಿದ || ೩೬ ||
ಠಕ್ಕನ ವಾದಿಗಳದ್ಭುತವಾದವ | ನಿಕ್ಕಾಲು ಪೆದರದೆ ಮುನಿರಾಯ ||
ಸೊಕ್ಕನು ಮುರಿದವರತಿವಾದಿಗಳನು | ಬೊಕ್ಕಸ ಬರಿದಾಗಿಸಿ ಗೆಲಿದ || ೩೭ ||
ಢಕ್ಕನಾದೊಳಕ್ಷರಪಂಕ್ತಿಯ | ಸಿಕ್ಕಿಸಿಲೋಕಕೆ | ಭಾಷೆಯನು ||
ಅಕ್ಕರದೊಳು | ನೀಡಿದ ಶಶಿಮೌಳಿಯ | ನಕ್ಕರದೊಳು ಪೂಜಿಸಿಮೆರೆದ || ೩೮ ||
ಣಾಕಾರಾಕ್ಷರ | ತಳದಿಹಗಣಪನ | ಸಾಕಾರದ ತತ್ವೊಧರನು ||
ಶ್ರೀಕರ ನರಹರಿದೇವನ ಮುದದೊಳ | ಗೇಕಾಗ್ರತೆಯೊಳ | ಗರ್ಚಿಸಿದ || ೩೯ ||
ಭುವಿಯೊಳಗೆಸೆಯುವ | ಕಾಂಚೀ ನಗರದ | ದೇವಿಯ | ಕಾಮಾಕ್ಷಿಯ ಗುಡಿಯೊಳ್ ||
ಶಿವರೂಪನು | ಸಿರಿಚಕ್ರವನಿಲ್ಲಿಸಿ ಶಿವಯುಗ್ರವ | ತವೆ ನಿಲ್ಲಿಸಿದ || ೪೦ ||
ಮಂಗಳರೂಪನು | ಮಂತ್ರಾರ್ಥಗಳನು | ಸಾಂಗದೊಳದ್ವೈತಾಮೃತವ ||
ತುಂಗೆಯಶೋಭಿಸಿದ ಶಂಕರ ಗುರುಪುಂಗವನೊರೆದನು | ಧರೆಯೊಳಗೆ || ೪೧ ||
ಯತಿರಾಜೇಶ್ವರ | ನಾಲ್ವರ ಶಿಷ್ಯರ | ನತಿಶಯದೊಳು | ನಾಲ್ದೆಸೆಯೊಳಗೆ ||
ಯತಿಗಳಾಗಿಸಿ | ಮಠಗಳ ನಿಲ್ಲಿಸಿ | ಮತಿಯುತ ಮೆರೆದನು ತೇಜದೊಳು || ೪೨ ||
ರಜತಾಜಲಗೃಹ | ನಾಗಿಹ ಶಂಭುವ | ನಜಮೊದಲಾಗಿಹನಿರ್ಜರರೂ ||
ಭಜಿಸಿದ ಕಥದಿಂ ಕಾರ್ಯವನಾಗಿಸಿ | ಭಜಕರಭೀಷ್ಟವ ಸಲ್ಲಿಸಿದ || ೪೩ ||
ಲಕ್ಷಣಕವಿತೆಯೊಳದ್ಭುತ ವಿಷಯವ ಸುಕ್ಷಮಶೀಲನು | ತಾರಚಿಸಿ ||
ಮೋಕ್ಷದಮಾರ್ಗವ | ಜನರಿಗೆ ತಿಳುಪಿದ | ಪಕ್ಷ್ಯಪಾತಗಳೇನಿಲ್ಲದೆಲೆ || ೪೪ ||
ವ್ಯಾಕರಣದ | ಸೂತ್ರಂಗಳ | ಪಠಿಸುತ | ಡುಕುರುಂಕರಣವದೆನ್ನುತ ||
ವ್ಯಾಕುಲಪಡುತಿಹ ವೃದ್ಧಗೆನೀತಿಯನೇಕವು ಪೇಳಿದ ಗುರುವರನು || ೪೫ ||
ಶಂಕರಯತಿವರ | ಲೋಕದ ಜನರಿಗೆ | ಸಂಕಟಹರಿಸುತ | ಪರಿಪರಿಯೋಳ್ ||
ಪಂಕಜನೇತ್ರ ಪರಾಶರಮಹಿಮೆಯ | ಶಂಕೆಯನೀಗಿಸಿ ಬೋಧಿಸಿದ || ೪೬ ||
ಷಣ್ಮತಗಳ ನಿಲ್ಲಿಸಿ | ಭಾರತದೊಳು | ಷಣ್ಮತದಾತನ | ಪೂಜಿಸುತ ||
ಚಿನ್ಮಯರೂಪವ ಪೊಂದಿದ ಶಂಭು | ಜಗನ್ಮಯವೆಂಬುದ ತೋರಿದನು || ೪೭ ||
ಹರುಷದಿಯತಿವರ | ಬದರೀಕ್ಷೇತ್ರಕೆ ತೆರಳಲು ಸುರಜನವಭ್ರದೊಳು ||
ಕರದರುಪೂಮಳೆಯನು ಗುರುಶಿರದೊಳು | ಪರಿಪರಿರಾಗವ ಪಾಡಿದರು || ೪೮ ||
ಕ್ಷಿತಿಯೊಳು ಮೆರೆಯಲಿ | ಭಾರತಿರಚಿಸಿದ | ಕೃತಿಯಿದು | ಶಂಕರ ಗುರುಕಥೆಯು ||
ಮತಿಯುತರೋದಲಿ | ಯೋದಿಸಿಕೇಳಲಿ | ನುತಿಸಲಿ ಸದ್ಗುರು ಮಹಿಮೆಯನು || ೪೯ ||
ಮಂಗಳಸದ್ಗುರು | ಶಂಕರಮಹಿಮೆಗೆ | ಮಂಗಳಕೃಷ್ಣಮಹೀಪತಿಗೆ ||
ಮಂಗಳಕಂಠೀರವ ನರಸಿಂಹಗೆ | ಮಂಗಳ ಜಯಚಾಮೇಂದ್ರನಿಗೆ || ೫೦ ||
ಇತಿ ಶ್ರೀಮತ್ಪರಮಹಂಸ | ಪರಿವ್ರಾಜಿಕಾಚಾರ್ಯವರ್ಯ | ಶ್ರೀಮತ್ ಶಂಕರ ಗುರುಭಗವತ್ಪಾದಾರ್ಪಣಮಸ್ತು||

- Login or register to post comments
- 281 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS: