ಸೂಳ್ಪಡೆಯಲಪ್ಪುದು ಕಾಣ ಮಹಾಜಿರಂಗದೋಳ್
ಸಿಂಹದ ಮುಪ್ಪುಂ ನೆಗಳ್ದೀ ಗಾಂಗೇಯರ ಮುಪ್ಪುಮಿಳಿಕೆವಡೆಗುಮೆ,
ವನಮಾತಂಗಂ ಗಳಿನಸುರುಚ್ಚದುರಂಗ
ಬಲಂಗಳಿನದೆಂತುಮಂಗಾಧಿಪತಿ.
ಇದು ಹತ್ತನೇ ತರಗತಿಯಲ್ಲಿದ್ದಾಗ ನಾನು ಬಹಳ ಗಟ್ಟಿಯಾಗಿ ಹೇಳುತ್ತಿದ್ದ ಹಳೇಗನ್ನಡದ ಪದ್ಯ. ಕೇವಲ ೭, ವರೆ ವರ್ಷದಲ್ಲಿ ಅದನ್ನ ಮರೆತ್ತದ್ದೇನೆ.
ಇದು, ಕುರುಕ್ಷೇತ್ರ ಯುದ್ಧದಲ್ಲಿ, ಕೌರವರ ಸೇನಾಧಿಪತಿ ಯಾರಾಗಬೇಕೆಂದು ದೃತರಾಷ್ಟ್ರನ ಆಸ್ಥಾನದಲ್ಲಿ ನಡೆಯುವ ಚರ್ಚೆ.
ಯಾರಿಗಾದರು ಇನ್ನಿತರ ಸಾಲುಗಳು ತಿಳಿದಲ್ಲಿ, ದಯವಿಟ್ಟು ಸಂಪದದಲ್ಲಿ ಹಾಕಿರಿ.

- Login or register to post comments
- 1038 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಸಿಂಹದ ಮುಪ್ಪು ಪೂರ್ಣ ಪಾಠ
ಪಂಪದನ ಬಗ್ಗೆ ಆಸಕ್ತಿ ಹುಟ್ಟಿರುವುದಕ್ಕೆ ಅಚ್ಚರಿ ಮತ್ತು ಸಂತೋಷ.
ನೀವು ಬಯಸಿದ ಕಂದ ಪದ್ಯದ ಪಾಠ ಹೀಗಿದೆ: ಪಂಪ ಭಾರತ, ಆಶ್ವಾಸ ೧೦, ಪದ್ಯ ೧೯. ಮೈಸೂರು ವಿವಿ. ಪ್ರಕಟಣೆ, ವಿಕ್ರಮಾರ್ಜುನ ವಿಜಯಂ, ಭಾಗ ಎರಡು, ವರ್ಷ ೧೯೬೦ (ಎರಡನೆಯ ಮುದ್ರಣ). ಇಲ್ಲಿ ಶಕಟ ರೇಫ ಮತ್ತು ಱಳಗಳನ್ನು ಬಳಸಿಲ್ಲ.
ಸಿಂಗದ ಮುಪ್ಪುಂ ನೆಗಳ್ದೀ
ಗಾಂಗೇಯರ ಮುಪ್ಪುಮಿಳಿಕೆವಡೆಗುಮೆ ವನಮಾ
ತಂಗಗಳಿನಸುಹ್ರುಚ್ಚತು
ರಂಗ ಬಲಂಗಳಿನದೆಂದು ಮಂಗಾಧಿಪತೀ
ಕ್ಷಮೆ: ಮೂರನೆಯ ಸಾಲಿನಲ್ಲಿ ಸುಹ್ರುತ್ ಎಂದು ಬೆರಳಚ್ಚಿಸಿದ್ದೇನೆ. ವಟ್ರಸುಳಿಯ ಕೀಲಿಗಳು ಮರೆತಿದ್ದೇನೆ. ಅಲ್ಲಿ [ಹ]ಗೆ ವಟ್ರಸುಳಿ ಇದೆ ಎಂದು ತಿಳಿದುಕೊಳ್ಳಿ.
ಸಾಲುಗಳನ್ನು ಬಿಡಿಸಿಕೊಂಡರೆ ಹೀಗಾಗುತ್ತದೆ:
ಸಿಂಗದ ಮುಪ್ಪುಂ
ನೆಗಳ್ದ ಈ ಗಾಂಗೇಯರ ಮುಪ್ಪುಂ
ಇಳಿಕೆವಡೆಗುಮೆ?
ವನಮಾತಂಗಗಳಿನ್ ಅಸುಹ್ರುತ್ ಚತುರಂಗ ಬಲಗಳಿನ್
ಅದೆಂದುಮ್ ಅಂಗಾಧಿಪತೀ
ಇದರ ಮುಂದಿನ ಪದ್ಯವೂ ಸುಪ್ರಸಿದ್ಧವಾದದ್ದು:
ಕುಲಜರನ್ ಉದ್ಧತರಂ ಭುಜಬಲಯುತರಂ ಹಿತರನ್ ಈ ಸಭಾ ಮಧ್ಯದೊಳಗೆ ಅಗ್ಗಲಿಸಿದ ಮದದಿಂ
ನಾಲಗೆ ಕುಲಮಂ ತುಬ್ಬುವವೊಲು ಉಱದೆ ನೀಂ ಕೆಡೆ ನುಡಿವೈ
ಇದಕ್ಕೆ ಉತ್ತರವಾಗಿ ಕರ್ಣ ಹೇಳುವ ಮಾತು ಬಹು ಉಲ್ಲೇಖಿತ:
ಕುಲಮನೆ ಮುನ್ನಂ ಉಗ್ಗಡಿಸಿಪಿರೇಂ ಗಡ
ನಿಮ್ಮ ಕುಲಂಗಳ್ ಆಂತು ಮಾರ್ಮಲೆವವನನ್ ಅಟ್ಟಿ ತಿಂಬುವೆ
ಕುಲಂ ಕುಲಮಲ್ತು
ಚಲಂ ಕುಲಂ
ಗುಣಂ ಕುಲಂ
ಅಭಿಮಾನಮ್ ಒಂದೆ ಕುಲಂ
ಅಣ್ಮು ಕುಲಂ
ಬಗೆವಾಗಳೀ ಕಲಹದೊಳ್ ಅಣ್ಣ
ನಿಮ್ಮ ಕುಲಮ್ ಆಕುಲಮಂ ನಿಮಗುಂಟು ಮಾಡುಗುಂ
(ಇಲ್ಲಿ ಗದ್ಯ ರೂಪದಲ್ಲಿ ಬೆರಳಚ್ಚು ಮಾದಿದ್ದೇನೆ. ಇದು ಚಂಪಕ ಮಾಲಾ ಛಂದಸ್ಸಿನ ವ್ರುತ್ತ
ಕಠಿಣ ಪದಗಳು: ಉಗ್ಗಡಿಸು=ಜೋರಾಗಿ ಹೇಳಿಕೊಳ್ಳು
ಮಾರ್ಮಲೆವನ್=ವಿರೋಧಿ, ಮೇಲೆ ಬಿದ್ದು ಬರುವ ಶತ್ರು
ಅಣ್ಮು=ಪರಾಕ್ರಮ, ಶೌರ್ಯ
ಸೂಳ್ ಪಡೆಯಲಪ್ಪುದು ಕಾಣಾ: ಇಡೀ ಪದ್ಯ.
ನೀವು ಬಯಸಿದ ಪದ್ಯ ಇಲ್ಲಿದೆ:
ಪಂಪಭಾರತ, ಆಶ್ವಾಸ ೧೦, ಪದ್ಯ ೨೩:
ಕಲಿತನದುರ್ಕು ಜವ್ವನದ ಸೊರ್ಕು ನಿಜೇಶನ ನಚ್ಚು ಮಿಕ್ಕ ತೋ
ಳ್ವಲದ ಪೊಡರ್ಪು ಕರ್ಣ ನಿನಗುಳ್ಳನಿತೇನೆನಗುಂಟೆ ಭಾರತಂ
ಕಲಹಮಿದಿರ್ಚುವಂ ಹರಿಗನಪ್ಪೊಡೆ ಮೊಕ್ಕಳಮೇಕೆ ನೀಂ ಪಳಂ
ಚಲೆದಪೆಯಣ್ಣ ಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್
ಈ ಪದ್ಯದಲ್ಲಿ ಮಹಾಜಿರಂಗದೊಳ್ ಅನ್ನುವ ಮಾತಿಗೆ "ಭವಾಜಿರಂಗದೊಳ್" ಎಂಬ ಪಾಠಾಂತರವೂ ಇದೆಯಂತೆ. ಅದೂ ಅರ್ಥಪೂರ್ಣವೇ.
ಪೂಜ್ಯ ನಮನಗಳು
ಸ್ವಾಮಿಗಳೇ, ಅತೀವ ಸಂತೋಷವಾಯಿತು. ಬಹಳ ಧನ್ಯವಾದಗಳು. ಹಾಗೆಯೇ ಅಧ್ಯಾಪಕರಾದ ನಿಮಗೆ ನನ್ನ ಪೂಜ್ಯ ನಮನಗಳು ಕೂಡ. ಈ ಪದ್ಯವನ್ನ, ಅಭ್ಯಾಸವಾಗಿ ನಾವು ಶಾಲೆಯಲ್ಲಿ ಅಂದು ಆಭಿನಯಿಸಿದ್ದೆವು. ಕರ್ಣನು ಕುಲದ ಬಗ್ಗೆ ಮಾತನಾಡುವಾಗ ನಮ್ಮೆಲ್ಲರ ಕಣ್ಣಗಳು ತೇವಗೊಂಡಿದ್ದವು.
Re: ಸೂಳ್ ಪಡೆಯಲಪ್ಪುದು ಕಾಣಾ: ಇಡೀ ಪದ್ಯ.
ಆಜಿರಂಗ ಎಂದರೆ, ಯುದ್ಧಭೂಮಿಯಲ್ಲವೆ .
ಕನ್ನಡ ಛಂದಸ್ಸಿನ ಪ್ರಕಾರ(ಸಂಸ್ಕೃತಕ್ಕಿಂತ ಭಿನ್ನವಾಗಿದೆ ಕೆಲವು ಕಡೆ),
ಮಹಾ ಮತ್ತು ಭವಾ, ಕ್ರಮವಾಗಿ ಲಘು ಗುರುಗಳಾಗುತ್ತವಲ್ಲವೆ
ಭವಾ ಎಂದರೆ ಆಗಲಿರುವ ಸೂಚಿಸುತ್ತಿದೆಯೇ,
ತುಂಬಾ ಸಂತೋಷ
ಸಾರ್, ತುಂಬಾ ಒಳ್ಳೆಯ ಕಾವ್ಯದ ತುಣುಕನ್ನು ತೋರಿಸಿದ್ದಾರ. ನಾನೊಬ್ಬ ಪಾಪಿ. ಕನ್ನಡ ಕಾವ್ಯ ಓದಲೇ ಇಲ್ಲ. ಸಂಸ್ಕೃತ ಓದುವ ನೆಪದಲ್ಲಿ ಬಹಳ ಅನ್ಯಾಯ ಮಾಡಿಕೊಂಡೆ.
ಸಮಯವಾದಾಗಲೆಲ್ಲ ಹಳಗನ್ನಡ ಕಾವ್ಯದ ಪರಿಚಯ ಮಾಡಿಸಿಕೊಡಿ ಎಂದು ಕೇಳಿಕೊಳ್ಳುವೆ. ನಿಮ್ಮ ನಿರೂಪಣೆಯಂತೂ ಮನೋಜ್ಞವಾಗಿದೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಪಾಪಿಗಳಲ್ಲ.ಭಾಗ್ಯವಂತರು
ಇದು ಖಂಡಿತ ನೀವು ಭಾವಪರವಶರಾಗಿ ಹೇಳಿಕೊಂಡುರುವುದು. ನಮಗೆಲ್ಲ ನವ್ಯ ಕಾವ್ಯದ ರುಚಿ ತೋರಿಸುತ್ತಿದ್ದೀರ. ಕಾವ್ಯ ರಚಿಸುವುದು ಎಲ್ಲರಿಗೂ ಒಲಿಯುವಂತದ್ದಲ್ಲ. ನಿಮಗೆ ಆ ಕಲೆ ಸಿದ್ದಿಸಿದೆ. ಇದೀಗ ತಾನೆ ನಿಮ್ಮ ಹೆಣ್ತನಕ್ಕೆ ನಮನ ಪದ್ಯ ಓದಿದೆ. ನಾನು ವಯಸ್ಸಿನಲ್ಲಿ ನಿಮಗಿಂತ ಚಿಕ್ಕವನು. ಆದ್ದರಿಂದ ಹೆಚ್ಚು ವಟಗುಟ್ಟುವುದಿಲ್ಲ. ಆದರೆ ಒಂದು ಮಾತು ಹೇಳಿಬಿಡುತ್ತೇನೆ. ನೀವು ಪಾಪಿಗಳಲ್ಲ.ಭಾಗ್ಯವಂತರು