ಸೌಂದರ್ಯ ಹೆಚ್ಚಿ
ಈಗ ತಾನೆ ಎಫ್.ಎಮ್.ರೈನ್ ಬೋ ೧೦೧.೩ ಕಂಪನಾಂಕಗಳಲ್ಲಿ ೯ಃ೫೫ ಕ್ಕೆ ಪ್ರಸಾರವಾದದ್ದು. ಯಾವುದೋ, ಸಂಸ್ಧೆಯ ಜಾಹಿರಾತಿಗಾಗಿ ಅಲ್ಲಿರುವ ಉದ್ಘೋಷಕ ಸೌಂದರ್ಯ ಹೆಚ್ಚಕ್ಕೆ ನೀವು ಏನು ಮಾಡುತ್ತೀರ ಎಂದು ಬಡಬಡಾಯಿಸಿದ. ಇಲ್ಲಿಯ ತನಕ ನಾನು ಸೌಂದರ್ಯ ಕಾಪಾಡಬೇಕು ಎಂದು ಕೇಳಿದ್ದೆ. ಇದೇನಿದು, ಸೌಂದರ್ಯ ಹೆಚ್ಚುವುದು. ಆತ ಹೆಚ್ಚು ಮಾಹಿತಿ ನೀಡಲಿಲ್ಲ.
ಯಾರಿಗಾದರು ಈ ಕೆಳಗಿನ ಪ್ರಶ್ನಗಳಿಗೆ ಉತ್ತರ ಗೊತ್ತಿದ್ದರೆ ದಯಮಾಡಿ ತಿಳಿಸಿ.
೧. ಸೌಂದರ್ಯ ಯಾವ ತರಹ ಹೆಚ್ಚಬೇಕು. ತರಕಾರಿ ತರಹವೋ, ಕಾಗದದ ತರಹವೋ, ಕೇಕ್ ತರಹವೋ
೨. ಈಳಿಗೆಮಣೆಯಿಂದಲೇ ಆಥವಾ ಚಾಕುವಿನಿಂದಲೇ.
೩. ಯಾವ ಹೊತ್ತಿನಲ್ಲಿ ಹೆಚ್ಚಬೇಕು.
೪. ಯಾವ ಪ್ರಮಾಣದಲ್ಲಿ ಹೆಚ್ಚಬೇಕು.
೫. ಅಗಲವಾಗಿ ಹಚ್ಚಬೇಕೋ, ಆಥವಾ ಉದ್ದವಾಗಿ ಹೆಚ್ಚಬೇಕೋ.
೬. ಪಲ್ಯಕ್ಕೋ ಆಥವಾ ಮಜ್ಜಿಗೆಹುಳಿಗೋ
೭. ವಾರಕ್ಕೆ ಎಷ್ಟು ಬಾರಿ ಹೆಚ್ಚಬೇಕು.

- Login or register to post comments
- 1054 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಸೌಂದರ್ಯ ಹೆಚ್ಚುವುದು
ಸುನಿಲ ಜಯಪ್ರಕಾಶ ಅವರು ಒಂದು ಉತ್ತಮ someಶೋಧನೆ ಮಾಡಿದ್ದಾರೆ. ಮುಂಬಯಿಯ ಹೋಟೆಲಿನಲ್ಲಿ ಕುಳಿತುಕೊಂಡಿದ್ದೇನೆ. ನಾನು ಹೋಗಬೇಕಾದ ಕಡೆ ಹೋಗುವುದು ಇನ್ನೂ ತೀರ್ಮಾನವಾಗಿಲ್ಲ. ಕ್ಲೈಂಟ್ ಕಡೆಯವರು ಎಷ್ಟು ಹೊತ್ತಿಗೆ ಬರಬೇಕೆಂದು ಇನ್ನೂ ತಿಳಿಸಿಲ್ಲ. ಆದುದರಿಂದ ಸುನಿಲ ಜಯಪ್ರಕಾಶ (ಅಂದ ಹಾಗೆ ನಿಮ್ಮ ಹೆಸರು ಯಾವುದು -ಸುನಿಲ, ಜಯಪ್ರಕಾಶ -ಇವೆರಡರಲ್ಲಿ?) ಅವರ ಸಮಸ್ಯೆಯನ್ನು ಬಗೆಹರಿಸಲು ಅಟೆಂಪ್ಟಿಸುತ್ತೇನೆ (ಶ್ರೀವತ್ಸ ಜೋಶಿಯವರ ರೀತಿಯಲ್ಲಿ).
ಸೌಂದರ್ಯವನ್ನು ಹೆಚ್ಚಲು ಇವುಗಳಲ್ಲಿ ಯಾವುದನ್ನಾದರೂ ಬಳಸಬಹುದು - ಬಾರುಕೋಲು, ಚಾಟಿ, ಅಡಿಕೋಲು (ಹಾಗೆಂದರೇನೆಂದುಕೊಂಡಿರೋ -ಅದು ಮಕ್ಕಳು ಬಳಸುವ ಸ್ಕೇಲು ಸ್ವಾಮಿ), ಮರದಿಂದ ತುಂಡು ಮಾಡಿ ತೆಗೆದ ಯಾವುದೇ ಬೆತ್ತ, ಅಥವಾ, ಇನ್ನೂ ಉತ್ತಮವಾದುದು ಬೇಕಿದ್ದರೆ -ನಾಗರ ಬೆತ್ತ. ಈಳಿಗೆ ಮಣೆ ಅಥವಾ ಚಾಕುವನ್ನೂ ಬಳಸಬಹುದು. ಆದರೆ ಇವುಗಳಲ್ಲಿ ಆಳವಾದ ದುಷ್ಟಪರಿಣಾಮಗಳಾಗುವ ಸಾಧ್ಯತೆಗಳು ಹೆಚ್ಚು. ಆದುದರಿಂದ ಇವುಗಳನ್ನು ಬಳಸದಿರುವುದೇ ಕ್ಷೇಮ.
ನಾಗರ ಬೆತ್ತವನ್ನು ಹೊರತು ಉಳಿದೆಲ್ಲವುಗಳಲ್ಲಿ ಯಾವುದನ್ನು ಬಳಸಿದರೂ ಸಾಮಾನ್ಯವಾಗಿ ಅಡ್ಡವಾಗಿ ಹೆಚ್ಚಬಹುದಷ್ಟೆ. ನಾಗರಬೆತ್ತದಲ್ಲೂ ಅಡ್ಡವಾಗಿಯೇ ಹೆಚ್ಚುವ ಸಾಧ್ಯತೆಗಳು ಜಾಸ್ತಿ. ಸ್ವಲ್ಪ ಪ್ರಯತ್ನ ಪಟ್ಟರೆ ಉದ್ದವಾಗಿಯೂ ಹೆಚ್ಚಬಹುದು. ಇಲ್ಲಿ ಅಡ್ಡ ಎಂದರೆ ಭೂಮಿಗೆ ಸಮಾಂತರವಾಗಿ ಎಂದೂ ಉದ್ದವಾಗಿ ಎಂದರೆ ಭೂಮಿಗೆ ಲಂಬವಾಗಿ ಎಂದೂ ಅರ್ಥ ಮಾಡಿಕೊಳ್ಳಬೇಕು.
ಯಾವ ಪ್ರಮಾಣದಲ್ಲಿ ಹೆಚ್ಚುವುದು ಎಂಬುದು ಹಲವು ವೇರಿಯೇಬಲ್‌ಗಳನ್ವಯ ಹೆಚ್ಚುಕಡಿಮೆಯಾಗುವುದು. ಅವುಗಳೆಂದರೆ - ಚರ್ಮದ ದಪ್ಪ, ಬಣ್ಣ, ಪಟ್ಟಣದ್ದೇ, ಹಳ್ಳಿಯದ್ದೇ (ಅಂದರೆ ಬಿಸಿಲಲ್ಲಿ ದುಡಿದದ್ದೇ), ಹೆಚ್ಚುವಾಗ ಚರ್ಮಕ್ಕೆ ಹೊದಿಕೆ ಇತ್ತೇ ಇಲ್ಲವೇ (ಅಂದರೆ ಬಟ್ಟೆ ಇತ್ತೇ ಇಲ್ಲವೇ), ಹೆಚ್ಚುವಾಗ ನೀವು ಅಪ್ಲೈ ಮಾಡಿದ ಬಲ ಎಷ್ಟು, ಇತ್ಯಾದಿ.
ಹೆಚ್ಚಿದ ನಂತರ ಅದನ್ನು ಯಾವುದಕ್ಕೆ ಬಳಸಬೇಕು ಎಂಬುದು ನಿಮಗೆ ಬಿಟ್ಟದ್ದು. ಅದಕ್ಕೆ ಉಪ್ಪು ಹಚ್ಚಬೇಕೇ, ಮೆಣಸು ಹಚ್ಚಬೇಕೇ, ನಿಂಬೆಹುಳಿ ಹಿಂಡಬೇಕೇ -ಇವೆಲ್ಲವುಗಳನ್ನು ನೀವೇ ತೀರ್ಮಾನ ಮಾಡಿಕೊಳ್ಳಬೇಕು. ಉತ್ತಮ ಫಲಿತಾಂಶ ಬೇಕಿದ್ದರೆ ಎಲ್ಲವನ್ನೂ ಬಳಸಬಹುದು.
ಎಷ್ಟು ಸಲ ಹೆಚ್ಚಬೇಕು? ಒಮ್ಮೆ ಹೆಚ್ಚಿದರೆ ತಿಂಗಳುಗಳ ಕಾಲ ಪರಿಣಾಮ ಬೀರಬಲ್ಲುದುದು. ಆದುದರಿಂದ ಯೂಸ್ ಅಂಡ್ ತ್ರೋ ರೀತಿಯಲ್ಲಿ ಒಮ್ಮೆ ಬಳಸಿದರೆ ಸಾಕು.
ನಾಗರ ಬೆತ್ತ: ಇದು ದಕ್ಷಿಣ ಕನ್ನಡ ಮತ್ತು ಮಲೆನಾಡಿನಲ್ಲಿ ಪ್ರಚಲಿತವಿರುವ ಬೆತ್ತ. ಇದನ್ನು ಬಿದಿರಿನ ಜಾತಿಯ ಸಸ್ಯದಿಂದ ತಯಾರಿಸುತ್ತಾರೆ. ಹೆಚ್ಚಿನ ವಿವರಗಳಿಗೆ ಸೇಡಿಯಾಪು ಕೃಷ್ಣ ಭಟ್ಟರ "ನಾಗರ ಬೆತ್ತ" ಕಥೆ ಓದಿ.
ಸಿಗೋಣ,
)
ಪವನಜ
(ಹೆದರಬೇಡಿ. ನನ್ನಲ್ಲಿ ನಾಗರಬೆತ್ತವಿಲ್ಲ
-----------
Vishva Kannada
Think globally, Act locally
ಸೌಂದರ್ಯ ಹೀಗೂ ಹೆಚ್ಚಬಹುದು!
ಬೇರೆಯವರ ಸೌಂದರ್ಯವನ್ನು ಹೀಗೂ ಹೆಚ್ಚಬಹುದು:
೧. ಅಸೂಯೆ ತುಂಬಿದ ಟೀಕೆ ಮಾಡುತ್ತಾ
೨. ಸುಳ್ಳೇ ಹೊಗಳಿ ಜಂಬ ಹುಟ್ಟಿಸುತ್ತಾ
೩. ನಿರುಪಯುಕ್ತ ಮತ್ತು ಅಪಾಯಕಾರಿ ಸೌಂದರ್ಯವರ್ಧಕ ಬಳಸುವಂತೆ ಮನಸ್ಸು ಒಲಿಸುತ್ತಾ. (ಜಾಹಿರಾತುಗಳು ಮಾಡುತ್ತಿರುವುದು ಅದೇ ಅಲ್ಲವೆ!)
೪. ಬ್ಯೂಟಿ ಈಸ್ ಎ ಗಿಫ್ಟ್ ಹ್ಯಾಡ್ ಬೈ ದೋಸ್ ಹು ಆರ್ ನಾಟ್ ಎಂಟೈರ್ಲಿ ಬ್ಯೂಟಿಫುಲ್ ಎಂದ ಯೇಟ್ಸ್ ನಂಥ ಕವಿಗಳನ್ನು ಎಂದೂ ಓದದಂತೆ ಮೂರ್ಖರನ್ನಾಗಿಸುತ್ತ.
೫. ಸರ್ವೋತ್ತಮ ವಿಧಾನವೆಂದರೆ ಸುಂದರವಾಗಿರುವವರ ಮನಸ್ಸನ್ನು ಸಂಪೂರ್ಣ ಲಂಪಟಗೊಳಿಸುತ್ತಾ...
ಉದ್ದ-ಅಡ್ಡ ಹೆಚ್ಚಲ್ಪಡುವ ಸೌಂದರ್ಯ?
ಡಾ|ಪವನಜ,
ನಮಸ್ಕಾರ.
ಸೌಂದರ್ಯವನ್ನು ಹೆಚ್ಚುವುದು ಹೇಗೆ ಎಂದು ವಿವರಿಸುತ್ತ 'ಉದ್ದಕ್ಕೂ ಹೆಚ್ಚಬಹುದು, ಅಡ್ಡಡ್ಡವಾಗಿಯೂ ಹೆಚ್ಚಬಹುದು...' ಎಂದಿದ್ದೀರಿ. ನನಗೆ, 'ಉದ್ದ ಕೊಯ್ದರೆ ಶಂಖ; ಅಡ್ಡ ಕೊಯ್ದರೆ ಚಕ್ರ, ಏನದು? (ಉತ್ತರ-ಈರುಳ್ಳಿ ) ಒಗಟು ನೆನಪಾಯಿತು. ಇನ್ನೊಂದು ಸಾಮ್ಯವೆಂದರೆ (ಸೌಂದರ್ಯ ಹೆಚ್ಚುವುದಕ್ಕೂ ಮತ್ತು ಈರುಳ್ಳಿ ಹೆಚ್ಚುವುದಕ್ಕೂ)
ಅ) ಸೌಂದರ್ಯ ಹೆಚ್ಚುವಾಗ ಎದುರಿರುವವರಿಗೆ ಕಣ್ಣೀರು ಬರಬಹುದು (ಅಥವಾ ಕಣ್ಣುರಿ, ಹೊಟ್ಟೆಯುರಿ ಎಂದರೂ ಸರಿಯೇ!)
ಆ) ನಿಮ್ಮ ವಿಧಾನದಂತೆ ಸೌಂದರ್ಯ ಹೆಚ್ಚುವ ಪ್ರಕ್ರಿಯೆಯಲ್ಲಿ ಹೆಚ್ಚಿಸಿಕೊಂಡವರಿಗೂ ಕಣ್ಣೀರು ಬರಬಹುದು!
======
ಹೆಚ್ಚುವುದನ್ನೇ ಬಹಳವಾಗಿ ಹಚ್ಚಿಕೊಂಡಿರುವ
ಹುಚ್ಚೂರಾಯ*ನಿಗೆ ಎಚ್ಚರಿಕೆಯೇನೆಂದರೆ
ಉಚ್ಚಾರ ಸರಿಯಿಲ್ಲದಿರೆ ರೇಡಿಯೊಜಾಕಿ ಎಂಬ
ಹೆಚ್ಚುಗಾರಿಕೆ ತೋರಿಸಬೇಡ... ಎಂದು.
======
ಇತಿ,
ಶ್ರೀವತ್ಸ ಜೋಶಿ
ವಾಹ್!
ವಾ!ವಾ!ವಾ!ವಾ!ವಾ!ವಾ!ವಾ!ವಾ!ವಾ!ವಾ!
ಹುಚ್ಚೂರಾಯರಿಗೆ (*) ಚಹ್ನೆ ಯಾಕೆ?.
* wildcard ಅಲ್ವೆ, ಯಾವುದಕ್ಕೆ ಬೇಕಾದರೂ ಅನ್ವಯಿಸುತ್ತೆ. ಅಂದರೆ ಎಲ್ಲರೂ ಹುಚ್ಚೂರಾಯರ ಸಂಬಂಧಿಗಳು. ಹೌದು ನಾವು, ನೀವು, ಅವರು, ಇವರು, ಎಲ್ಲರೂ.
Re: ಸೌಂದರ್ಯ ಹೆಚ್ಚುವುದು
ಸುನಿಲ ನನ್ನ ಅಂಕಿತ ನಾಮ. ನನಗೆ ಇಷ್ಟವಾದ ಹೆಸರು. ಜಯಪ್ರಕಾಶ ನಮ್ಮ ಪೂಜ್ಯ ತಂದೆಯವರ ಹೆಸರು. ಸಂಪದದಲ್ಲಿ ನನ್ನ ನಾಮಧೇಯದ ಬಗ್ಗೆ ಚರ್ಚೆ ನಡೆದ ಮೇಲೆ, ನನನ್ನು ಎಲ್ಲ ಕಡೆ ಸುನಿಲ ಜಯಪ್ರಕಾಶ ಎಂದೇ ಗುರುತಿಸಿಕೊಳ್ಳುತ್ತಿರುವೆ. ಧನ್ಯವಾದ ಸಂಪದ.
http://sampada.net/node/772#comment-1061
ನಿಮ್ಮ ಸೌಂದರ್ಯ ಪ್ರಜ್ಞೆಗೆ ಹಾಗು ನಿಮ್ಮ ಮಾಹಿತಿ ಭಂಡಾರವನ್ನ ಹಂಚಿಕೊಂಡಿದ್ದಕ್ಕೆ ಅನಂತ ಕೋಟಿ ವಂದನೆಗಳು. ಸಕಾಲದಲ್ಲಿ ನೀವು ಎಚ್ಚರಿಸಿದ್ದು ಒಳ್ಳೆಯದಾಯಿತು. ಇಲ್ಲವಾದಲ್ಲಿ ನಾನು ಒಮ್ಮೆ ಹೆಚ್ಚುತ್ತಿದ್ದೆ.
ಸುನಿಲ ಅಲ್ಲ ಸುನೀಲ
ಅಂದ ಹಾಗೆ, ನಾನು ಒಂದು ಬೆರಳಚ್ಚಿನ ತಪ್ಪು ಮಾಡಿದ್ದೆ. ಸುನಿಲ ಅಲ್ಲ, ಸುನೀಲ. ಸುನೀಲ ಎಂದರೆ ಒಳ್ಳೆಯ ನೀಲಿ ಬಣ್ಣ, ಲಾಮಂಚ ಮತ್ತು ದಾಳಿಂಬೆ ಗಿಡ ಎಂಬ ಅರ್ಥಗಳಿವೆ (ಜಿ.ವಿ. ಅವರ ಇಗೋ ಕನ್ನಡ ಪುಸ್ತಕದಿಂದ). ಸುನಿಲ್ ಎಂಬುದು ಕನ್ನಡದ ಜಾಯಮಾನ ಪ್ರಕಾರ ಸರಿಯಲ್ಲ (ಇಗೋ ಕನ್ನಡ).
ಕುಮಾರ ಎಂಬುದರ ವಿಶೇಷ ಸುಕುಮಾರ ಎಂದರೆ ಒಳ್ಳೆಯ ಮಗ, ಸುಪುತ್ರ, ಅದೇ ರೀತಿ ಇನ್ನೂ ಹಲವು ಪದಗಳಿವೆ. ತರಲೆ ಉದಾಹರಣೆ ಬೇಕಿದ್ದರೆ "ಸುಸೈಡ್" ಅಂದರೆ ಒಳ್ಳೆಯ ಬದಿ ಎಂದು ಅರ್ಥೈಸಬಹುದು.
ಸುNIL ಎಂದರೆ?
ಸಿಗೋಣ,
ಪವನಜ
-----------
Vishva Kannada
Think globally, Act locally
ರಹಸ್ಯ ಬಯಲು.
ಪವನಜರೆ, ನಿಮ್ಮ ಮೇಲೆ ನನಗೆ ಹುಸಿ ಮುನಿಸು ಮೂಡಿದೆ.
ನನ್ನ ನಿಜ ನಾಮಧೇಯ ರಹಸ್ಯವಾಗಿರಲಿ ಎಂದು ನಾನು ಬಯಸಿದ್ದೆ. ನೀವು ನೋಡಿದರೆ ಅದನ್ನು ಬಟಾ ಬಯಲು ಮಾಡಿದಿರಿ. ಈ ಸಂದರ್ಭದಲ್ಲಿ ನಿಮಗೆಲ್ಲರಿಗೂ ಇನ್ನೊಂದು ಸ್ವಾರಸ್ಯಕರ ಘಟನೆ ವಿವರಿಸುತ್ತೇನೆ. ಅಯ್ಯೋ ಇವನೇನಪ್ಪ ಬರೀ ಕಥೆಗಳ್ಹೇತನೆ ಅಂತ ತಿಳಿಬೇಡಿ. ಏನೋ ವಿಷಯಗಳನ್ನ ಹಂಚಿಕೊಳ್ಳುವ ಹೆಬ್ಬಯಕೆ. ಇದು ನಾನು ಒಂಬತ್ತನೇ ಇಯತ್ತಿನಲ್ಲಿದ್ದಾಗ ನಡೆದದ್ದು. ನನಗೆ ಯಾವಾಗಲೂ ಸಂಸ್ಕೃತದಲ್ಲಿ ಅತಿ ಹೆಚ್ಚು ಅಂಕಗಳು ಬರುತ್ತಿದ್ದವು. ಆದರೆ ಪೂರ್ಣ ಅಂಕ ಕೊಡುವ ಹಾಗಿಲ್ಲವಲ್ಲ, ಒಂದಲ್ಲ ಒಂದು ಕಾರಣ ನೀಡಿ ನಮ್ಮ ಉಪಾಧ್ಯಾಯಿನಿಯವರು ಕನಿಷ್ಠ ಒಂದು ಅಂಕ ಕಡಿತಗೊಳಿಸುತ್ತಿದ್ದರು. (ನಾನು ಅವರೊಂದಿಗೆ ಪಂಥವನ್ನೂ ಕಟ್ಟಿದ್ದೆ ಅನ್ನಿಸುತ್ತೆ. ಪೂರ್ಣ ಅಂಕ ಪಡೆದೇ ಪಡೆಯುತ್ತೀನಿ ಅಂತ) ಹೀಗಿರುವಾಗ, ಒಮ್ಮೆಯಂತೂ ಸಿಕ್ಕಾಪಟ್ಟೆ ಚೆನ್ನಾಗಿ ಮಾಡಿದ್ದೆ, ೩೦ ಕ್ಕೆ ಒಂದು ಅಂಕವೂ ಕಡಿತಗೊಳಿಸಲು ಸಾಧ್ಯವಿರಲಿಲ್ಲ. ಈ ಬಾರಿಯಂತೂ ನನ್ನದೇ ಸ್ವಂತ ವಾಕ್ಯಗಳು, ನನ್ನ ಲಹರಿಯಲ್ಲಿಯೇ ಉತ್ತರಗಳನ್ನ ಬರೆದ್ದಿದ್ದೆ. ಅವರು ಒಂದು ಅಂಕವೂ ಕಡಿತಗೊಳಿಸಲಾಗುತ್ತಿರಲಿಲ್ಲ. ನಮ್ಮ ತರಗತಿಯಲ್ಲಿ ಇದರ ಬಗ್ಗೆಯೇ ಮಾತುಕತೆಗಳು ನಡೆಯುತ್ತಿದ್ದವು. ಸರಿ, ಬಂತು ನೋಡಿ ಆ ದಿನ, ಎಲ್ಲರ ಉತ್ತರ ಪತ್ರಕೆಗಳ ಮೌಲ್ಯ ಮಾಪನ ಮಾಡಿ, ಅವರವರ ಉತ್ತರ ಪತ್ರಿಕೆಗಳನ್ನ ಹಂಚುದ್ರು.
ಇಡೀ ತರಗತಿಯೇ ನನ್ನ ಅಂಕಗಳಿಗೆ ಕಾದು ಕುಳಿತಿದೆ. ತೆರೆದು ನೋಡಿದೆ. ಕಣ್ಣೀರ ಧಾರೆ ಹರಿಯಿತು. ನೋಡಿದರೆ, ೨೯.೫೦(ಇಪ್ಪತ್ತೊಂಬತ್ತು ವರೆ ಕೊಟ್ಟಿದ್ದಾರೆ.) ಜಗಳ ಆಡಿದೆ, ಆದರೂ ಕೊಡಲಿಲ್ಲ. ಯಾಕೆ ಗೊತ್ತೆ?
ಊಹಿಸಿ ನೋಡೋಣ.
ಊಹಿಸಿ ನೋಡೋಣ.
ಆಗ ವಿವರಿಸಿದರು.
ಉ: ಸಂಸ್ಕೃತದಲ್ಲಿ(ಯಾವುದೇ ಭಾಷೆಯಾಗಲಿ) ಅತಿ ಮುಖ್ಯ ಯಾವುದು?
ನಾ: ವ್ಯಾಕರಣ ಮತ್ತು ಶಬ್ದಾರ್ಥ
ಉ: ಒಹೋ! ವ್ಯಾಕರಣಕ್ಕೆ ಮತ್ತು ಅರ್ಥಗಳಿಗೆ ಬಹಳ ಮಹತ್ವ ಕೊಡ್ಬೇಕು ತಾನೆ.
ನಾ: ಹೌದು.
ಉ: ನೋಡು. ತಪ್ಪು ತಿಳಿಬೇಡ, ಸುನಿಲ್ ಎಂಬುದಕ್ಕೆ, ಅರ್ಥವೇ ಇಲ್ಲ. ನಿನ್ನ ಹೆಸರು सुनिल् जे ಅಲ್ಲ सुनील जे, ಸುನಿಲ್ ಅಲ್ಲ ಸುನೀಲ. ಇಂಗ್ಲೀಷಲ್ಲಿ ಬರೀವಾಗ ಎಷ್ಟು ಬೇಕಾದರು, ಅಪಭ್ರಂಷಗೊಳುಸ್ಕೋ(ಏಕೆಂದರೆ, ಅಲ್ಲಿ ಪ್ರಚಲಿತವೇ ಅಂತಿಮವಾಗುತ್ತದೆ, ಹರಿ ಹ್ಯಾರಿಯಾಗುತ್ತಾನೆ. ಇತ್ಯಾದಿ). ಆದರೆ, ಸಂಸ್ಕೃತದಲ್ಲಿ ಅಥವಾ ಕನ್ನಡದಲ್ಲಿ ಬರೀಬೇಕಾದ್ರೆ, ಸುನೀಲ ಅಂತಲೇ ಬರೀ ಅಂದಿದ್ರು. ಈ ನನ್ನ ಹೆಸರಿನ ರಹಸ್ಯ ಕೆಲವೇ ಕೆಲವು( ಅಥವಾ ನನಗೊಬ್ಬನಿಗೇ ಅಂದರೂ ತಪ್ಪಿಲ್ಲ ) ಸ್ನೇಹಿತರಿಗೆ ಗೊತ್ತಿತ್ತು, ನೀವು ಅದನ್ನು ಜಗಜ್ಜಾಹಿರು ಮಾಡಿದಿರಿ.
ಛೆ, ಈಗ ಸಂಸ್ಕೃತ ಮರೆತು ಹೋದ ಹಾಗೇ ಆಗಿದೆ. ಕೆಲವೊಮ್ಮೆ ನನ್ನ ತಮ್ಮನ ಪುಸ್ತಕ ಕುತೂಹಲದಿಂದ ತೆರೆದು ನೋಡುತ್ತಿರುತ್ತೇನೆ. ಏನು ಮಾಡುವುದು ಎಲ್ಲ ನಮ್ಮ ನಿರ್ಲಕ್ಷ್ಯ ಭಾವ.
ಈ ಸಂಪದಕ್ಕೆ ಬಂದು ಒಂದು ತಿಂಗಳು ಕೂಡ ಆಗಿಲ್ಲ. ಆಗಲೇ ಪ್ರೌಢ ಶಾಲೆಯ ನನ್ನ ನೆನಪುಗಳನ್ನು ಹಂಚಿಕೊಳ್ಳುವಂತೆ ಮಾಡಿದೆ. ಬಹಳ ಧನ್ಯವಾದಗಳು.
ಅಂದ ಹಾಗೆ, ಸುNIL ಕೂಡ ಈ ನಡುವೆ, ಸರೆ ಎನ್ನುಸುತ್ತಿದೆ. ಈ ನಡುವೆ ವಿಪರೀತ ಮರೆವು ಕಾಡುತ್ತಿದೆ. ಎಲ್ಲ ಪಿಟೀಲು ಪ್ರಭಾವವಿರಬಹುದು.
Re: ಸೌಂದರ್ಯ ಹೆಚ್ಚಿ
೨. ಈಳಿಗೆಮಣೆಯಿಂದಲೇ ಆಥವಾ ಚಾಕುವಿನಿಂದಲೇ.
೩. ಯಾವ ಹೊತ್ತಿನಲ್ಲಿ ಹೆಚ್ಚಬೇಕು.
೪. ಯಾವ ಪ್ರಮಾಣದಲ್ಲಿ ಹೆಚ್ಚಬೇಕು.
೫. ಅಗಲವಾಗಿ ಹಚ್ಚಬೇಕೋ, ಆಥವಾ ಉದ್ದವಾಗಿ ಹೆಚ್ಚಬೇಕೋ.
೬. ಪಲ್ಯಕ್ಕೋ ಆಥವಾ ಮಜ್ಜಿಗೆಹುಳಿಗೋ
೭. ವಾರಕ್ಕೆ ಎಷ್ಟು ಬಾರಿ ಹೆಚ್ಚಬೇಕು.
LOL!!
Too good ಸುನಿಲ್!!