ಅನನ್ಯ ಅಲ್ಲಮ (೨)
ಅರಣ್ಯಗಳಿಂದ ಸುತ್ತುವರಿದ ಹೆಬ್ಬಂಡೆಗಳ ಆ ದುರ್ಗಮ ಪ್ರದೇಶದಲ್ಲಿ , ಯೋಗಿ ಇರುವನೆಂದು ನಂಬಿದ್ದ ಬೆಟ್ಟದ ಮೇಲಣ ಗುಹೆ ಎದುರು ,ಪರಿಮಿತ ಪರಿವಾರದೊಡನೆ ತೈಲಪ ಬಂದಾಗ ,ಸೂರ್ಯ ದಿಗಂತದ ಮಧ್ಯದಿಂದ ಪಡುವಣದತ್ತ ವಾಲುತ್ತಿದ್ದ .ಎಲ್ಲರೂ ಕಾತುರದಿಂದ ಕಾಯುತ್ತಿದ್ದಂತೆಯೇ ,ತೇಜಸ್ವಿಯಾದ ಬಿಂಬವೊಂದು ಗುಹೆಯಿಂದ ಹೊರ ಬಂದಿತು .ಆ ಆಕೃತಿಯನ್ನು ನೋಡಿ ಎಲ್ಲರೂ ಮಂತ್ರ ಮುಗ್ಧರಾದರು .ತೈಲಪನ ಆಂದೋಲಿತ ಮನಸ್ಸಿನಲ್ಲಿಯೂ ಯಾವುದೋ ಮಧುರ ತಂಗಾಳಿ ಆ ಕ್ಷಣಕ್ಕೆ ಬೀಸಿತು .ತನ್ನ ಜೀವನದಲ್ಲಿಯೇ ಎಂದೂ ಕಾಣದ ಆ ವ್ಯಕ್ತಿಯೊಡನೆ ಚಕ್ರವರ್ತಿ ತೈಲಪ ಹಸುಮಗುವಿನಂತೆ ತನ್ನೆಲ್ಲಾ ಅಳಲುಗಳನ್ನೂ ತೋಡಿಕೊಂಡ .ಮುಂದೆ ಚಾಲುಕ್ಯರ ಕರ್ತವ್ಯಗಳೇನು? ಎಂಬ ತೀಕ್ಷ್ಣ ಪ್ರಶ್ನೆಯನ್ನುತೈಲಪ ಯೋಗಿಯೆದುರು ದೀನನಾಗಿ ಕೇಳಿದ .ಎಲ್ಲವನ್ನೂ ಧೃಢ ಹಾಗೂ ಶಾಂತ ಚಿತ್ತದಿಂದ ಆಲಿಸಿದ ಯೋಗಿ , " ಚಕ್ರವರ್ತಿ ತೈಲಪ , ಹಿಂತಿರುಗಿ ನೋಡು,, ಎಂದರು ತಕ್ಷಣ ತೈಲಪ ತಿರುಗಿ ನೋಡಿದ .ತಾವು ಕುಳಿತಿದ್ದ ಎತ್ತರ ಪ್ರದೇಶದಿಂದ ಬಹು ದೂರದವರೆಗೆ ಹಬ್ಬಿ ಹರಡಿದ ಕಾಂತಾರ ; ಎಲ್ಲಿಂದ ಎಲ್ಲಿಯವರೆಗೂ ವಿಸ್ತರಿಸಿದ ಕಾನನ , ಅಲ್ಲಲ್ಲಿ ಬೆಟ್ಟದ ಮೇಲಿದ್ದ ಬಂಡೆಗಳನ್ನೂ ಸುತ್ತುವರಿದು ಹಬ್ಬಿದ ವನ ರಾಸಿ . ತೈಲಪ ಯೋಗಿಯೆಡೆಗೆ ತಿರುಗಿ ,"ಮಹಾತ್ಮ ಇದರಲ್ಲೇನು ವಿಶೇಷ ,ನಾನು ಅದನ್ನು ಹಾದೇ ತಮ್ಮ ಬಳಿ ಬಂದುದು . ಈ ಪಂಪಾನದಿಯ ಪರಿಸರ ನನಗೆ ಹೊಸದೇನೂ ಅಲ್ಲ ,ಚಿಕ್ಕವನಿದ್ದಾಗಿನಿಂದ ಕಂಡುದೇ ,, ಯೋಗಿ ನಸು ನಗುತ್ತಾ " ಹೌದೇನು ,ಈ ಪರಿಸರ ನಿಮಗೆ ತುಂಬಾ ಪರಿಚಿತವಲ್ಲವೇ ? ಇನ್ನೊಮ್ಮೆ ಹಿಂತಿರುಗಿ ನೋಡಿ ,,
ತೈಲಪ ಯೋಗಿಯ ಆಣತಿಯನ್ನು ಮೀರಲಾರದೆ ಮತ್ತೊಮ್ಮೆ ಹಿಂತಿರುಗಿ ನೋಡಿದ .ಆಶ್ಚರ್ಯ! ತಾನು ಹಿಂದೆ ಕಂಡ ಅರಣ್ಯವೇ ಇಲ್ಲ ,ಭವ್ಯ ಭವನಗಳೂ , ಜನ ಜಂಗುಳಿಗಳೂ ,ಓಡಾಡುವ ವಾಹನಗಳು,ಆನೆ , ಕುದುರೆ, ರಥಗಳು, ಆಯುಧಪಾಣಿಗಳಾದ ಸೈನಿಕರು, ವಿವಿಧ ದಿರುಸಿನ ಸರದಾರರು ,ವಿಸ್ಮಿತನಾದ ತೈಲಪ , " ತಂದೆ , ಇದೆಲ್ಲಾ ಏನು ? ಯಾವ ಇಂದ್ರ ಜಾಲ ಇದು? ,, ಯೊಗಿ ಶಾಂತ ಚಿತ್ತದಿಂದ ನಸು ನಗುತ್ತಲೇ ಹೇಳಿದ " ಇಂದ್ರಜಾಲವಲ್ಲ , ಇದು ಚಾಲುಕ್ಯರ ನಂತರ ಈ ನಾಡಿನಲ್ಲಿ ಭವ್ಯವಾಗಿ ಮೈದಳೆಯಬೇಕೆಂದು ,ಕಾದು ಕುಳಿತಿರುವ ಸಾಮ್ರಾಜ್ಯ ; ಭವಿಷ್ಯದ ಪ್ರಭುತ್ವ ,, "ಹಾಗಾದರೆ ಚಾಲುಕ್ಯರು ? ,, " ಏನಿಲ್ಲ, ಇನ್ನೊಮ್ಮೆ ಹಿಂತಿರುಗಿ ನೋಡು ,, ಹಿಂತಿರುಗಿದ ತೈಲಪ ದಿಗ್ಭ್ರಾಂತನಾಗಿ ಹೋದ ,ತಾನು ಕಂಡ ಇಡಿಯ ದೃಶ್ಯ ಸ್ಮಶಾನ ಸದೃಶವಾಗಿ ಹೋಗಿದೆ . ಶಿಥಿಲ ಕಟ್ಟಡಗಳು , ಭಗ್ನ ಮಂದಿರಗಳು ,ಜನ ಜಂಗುಳಿ ಇದ್ದ ಜಾಗದಲ್ಲಿ , ವನ್ಯ ಮೃಗಗಳು . ಇಡಿಯ ಸನ್ನಿವೇಶ ಭೀಭತ್ಸ ಮಯವಾಗಿ ಹೋಗಿದೆ ." ಇದೆಲ್ಲ ಏನು ? ನನ್ನಿಂದ ನೋಡಲೇ ಆಗುತ್ತಿಲ್ಲ , ಏನಿದು ತಂದೆ ?
ಅಷ್ಟೇ ಶಾಂತನಾಗಿ ಯೋಗಿ ಹೇಳಿದ , "ಅದು ಆ ಸಾಮ್ರಾಜ್ಯದ ಸರ್ವ ನಾಶ . ಈ ಜಗತ್ತಿನಲ್ಲಿರುವುದೆಲ್ಲವೂ ಹುಟ್ಟಿ, ಬೆಳೆದು , ಬಾಳಿ, ವಿನಾಶದೆಡೆಗೆ ನಡೆಯಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಅಸಹಾಯಕ ವಸ್ತುಗಳು .ನಿರಂತರ ವೇಗವಾಗಿ ಸರಿಯುವ ಈ ಜಗತ್ತಿನಲ್ಲಿ ,ಎಲ್ಲವೂ ತಿಳಿದುಕೊಳ್ಳುವುದು ತಾನು ಸ್ಥಿರ ಎಂದು .ಅದೇ ಜಗಕ್ಕಿದ ವಿಧಿ . ಅಸ್ಥಿರವಾದ ಜೀವಮಾನದ ಮೇಲೆ ಬಣ್ಣದ ಹೊದಿಕೆ ಎಳೆದು ಸ್ಥಿರವೆಂಬ ಭ್ರಮೆಯನ್ನು ಕಲ್ಪಿಸುವುದೇ ಮಾಯೆಯ ಕೆಲಸ ........... ಯೋಗಿ ಹೇಳುತ್ತಲೇ ಹೋದ ,ಆ ಗಂಭೀರ ವಾತಾವರಣದಲ್ಲಿ ಎರಡನೆಯ ಸ್ವರವೇ ಇರಲಿಲ್ಲ . ಯೋಗಿಯ ಮಾತುಗಳನ್ನು ಮಂತ್ರ ಮುಗ್ಧನಂತೆ ಕೇಳುತ್ತಾ ಹೋದ ಚಕ್ರವರ್ತಿಯ ಪ್ರಕ್ಷುಬ್ಧ ಕಡಲಿನಂತಹ ಮನಸ್ಸು ,ಶಾಂತವಾಗುತ್ತ ಹೋಯಿತು . ಯೋಗಿಯ ಎರಡು ಹುಬ್ಬುಗಳ ನಡುವೆ ,ಮೀಂಚಿನಂತೆ ಮೂರನೆಯ ನೋಟವೊಂದು ಮಿನುಗುತ್ತಿತ್ತು . ( ಮುಂದುವರಿಯುವುದು )

- Login or register to post comments
- 119 hits
- Email this page





RSS:
ಪ್ರತಿಕ್ರಿಯೆಗಳು
ಉ: ಅನನ್ಯ ಅಲ್ಲಮ (೨)
ತುಂಬ ಚೆನ್ನಾಗಿದೆ ಸರ್,
ಮುಂದಿನ ಸಂಚಿಕೆ ಬೇಗ ಬರಲಿ.
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.
ಉ: ಅನನ್ಯ ಅಲ್ಲಮ (೨)
ಪ್ರೀತಿಯ ಗಿರೀಶ್ ಮೊದಲ ಪ್ರತಿಕ್ರಿಯೆಗಾಗಿ ಧನ್ಯವಾದಗಳು , ಅಲ್ಲಮನ ಬಗ್ಗೆ ಬರೆಯುವ ಆಸೆ ಈ ರೀತಿಯಾಗಿ ಸಂಪದದ ಮೂಲಕ ತೀರುತ್ತಿರುವುದು ಸಂತಸ ತಂದಿದೆ .ಆದುದರಿಂದ ಸಂಪದಕ್ಕೂ ಅದರೆಲ್ಲ ಬಳಕೆದಾರರಿಗೂ ( ಓದುಗರಿಗೂ ಎನ್ನುವುದು ಈ ಕ್ಷೇತ್ರಕ್ಕೆ ಹೊಂದುತ್ತದೋ ಇಲ್ಲವೋ ಕಾಣೆ) ಈ ಮೂಲಕ ಧನ್ಯವಾದಗಳು . ನನ್ನಿಂದಾದಷ್ಟು ಈ ಲೇಖನವನ್ನು ವಿಸ್ತರಿಸುತ್ತೇನೆ