ಅನನ್ಯ ಅಲ್ಲಮ (೩)
ಬಸವಣ್ಣನವರು ಕಲ್ಯಾಣವನ್ನು ತಮ್ಮ ಕಾರ್ಯ ಕ್ಷೇತ್ರವನ್ನಾಗಿ ಮಾಡಿಕೊಂಡರು .ಅಂದಿನ ಇಡೀ ಸಮಾಜ ಗೊಂದಲಗಳ ಗೂಡಾಗಿತ್ತು .ಚಾಲುಕ್ಯ, ರಾಷ್ಟ್ರಕೂಟ ಇಂತಹ ಪ್ರಬಲರು ಕೊನೆಯುಸಿರೆಳೆಯುತ್ತಿದ್ದರು . ಕದಂಬರು ಕಣ್ಮರೆಯಾಗಿ ಬಹಳ ಕಾಲವೇ ಆಗಿತ್ತು . ಕರ್ನಾಟಕದ ದಕ್ಷಿಣದಲ್ಲಿಯೂ ಗಂಗರು, ಹೊಯ್ಸಳರು ತಮ್ಮ ಸುವರ್ಣ ಯುಗಗಳನ್ನು ಮುಗಿಸಿ , ಪಳೆಯುಳಿಕೆಗಳಾಗುತ್ತಿದ್ದರು .ಎಲ್ಲೆಯಿಯೂ ಮಾಂಡಳಿಕರ , ಪಾಳೆಯಗಾರರ ಸಣ್ಣಪುಟ್ಟ ಆಡಳಿತಗಳು ತಲೆಯೆತ್ತುತ್ತಿದ್ದವು .ಜನರಿಗೆ ಒಂದು ದೃಢವಾದ ರಾಜಕೀಯ ನಾಯಕತ್ವವೇ ಇಲ್ಲದಂತಾಗಿತ್ತು .ಇದರಿಂದಾಗಿ ಸಾಮಾಜಿಕ ಜೀವನ ಅಸ್ತವ್ಯಸ್ತವಾಗತೊಡಗಿತ್ತು .
ಇಂತಹ ಸಮಯದ ದುರುಪಯೋಗವನ್ನು , ಸಮಾಜದ ಬಲಾಢ್ಯ ಶಕ್ತಿಗಳು ಮತ್ತು ಮಾನವ ವಿರೋಧಿಗಳು ಸರಿಯಾಗಿಯೇ ಉಪಯೋಗಿಸಿಕೊಳ್ಳುತ್ತಿದ್ದರು . ಸಾಮಾನ್ಯರ ಕಾರ್ಪಣ್ಯಮಯ ಬದುಕು ಬದುಕಲಾರದಷ್ಟೇ ಅಸಹನೀಯವಾಗಿತ್ತು .
ಬಸವಣ್ಣನವರು ತಮ್ಮ ಸ್ವಭಾವ ಸಹಜವಾದ ಮಾರ್ದವ ಗುಣ ಮತ್ತು ಉನ್ನತ ಚಿಂತನೆಗಳಿಂದ ; ಸಂಗಮದಲ್ಲಿ ಹನ್ನೆರಡು ವರ್ಷ ನಡೆಸಿದ ಅಧ್ಯಯನದಿಂದ, ತಲುಪಿದ ತಾರ್ಕಿಕ ನಿಲುವುಗಳನ್ನು ಪ್ರಯೋಗದ ಪರೀಕ್ಷೆಗೆ ಒಡ್ಡಿ, ಫಲಾಫಲಗಳನ್ನು ಅರಿತುಕೊಳ್ಳುವ ಸಮಯ ಸನ್ನಿಹಿತವಾಗಿತ್ತು .
ತಾವು ಓದಿದ , ತಿಳಿದ ಆದರ್ಶಗಳಿಗೂ , ಎದುರಲ್ಲಿದ್ದ ಸಾಮಾಜಿಕ ಜೀವನಕ್ಕೂ , ಅರ್ಥಾರ್ಥ ಸಂಬಂಧವಿಲ್ಲದುದು ಅವರನ್ನುಚಿಂತೆಗೀಡುಮಾಡಿತ್ತು . ಸಮಾಜ ತನ್ನ ಎಲ್ಲ ಕುರೂಪದ ಮುಖಗಳನ್ನೂ ,ಯಾವ ಎಗ್ಗೂ ಇಲ್ಲದೆ ,ಎಲ್ಲ ರಂಗಗಳಲ್ಲಿ ನಾಚಿಕೆ ಬಿಟ್ಟು ಪ್ರದರ್ಶಿಸುತ್ತಿತ್ತು .
ಬಸವಣ್ಣನವರ ಎದುರಿಗಿದ್ದ ಮೊಟ್ಟ ಮೊದಲ ಆದ್ಯತೆ ಅನ್ನವಾಗಿತ್ತು .ಜಾತಿಯ ಕಾರಣಗಳಿಂದ , ಬಲಶಾಲಿಗಳಲ್ಲದ ಕಾರಣಗಳಿಂದ ,ಮನುಷ್ಯನಿಗೆ ಅನು ದಿನವೂ ಬೇಕಾದ ಅನ್ನದಿಂದಲೇ ಅನೇಕ ಸಮಾಜಗಳು ವಂಚಿತವಾಗಿದ್ದವು .ಬಡಕಲು ಶರೀರದ ಆಸೆಯ ನೋಟವನ್ನು ಬೀರುತ್ತಿದ್ದ , ಗುಳಿ ಬಿದ್ದ ಕಣ್ಣುಗಳ ,ಅಸಹಾಯಕ ಮುಖಗಳು ಅವರ ಮನಸ್ಸಿನಲ್ಲಿ ಅಚ್ಚೊತ್ತಿ, ಯಾತನೆಯನ್ನುಂಟು ಮಾಡುತ್ತಿದ್ದವು .
ಛಿನ್ನವಿಛ್ಛಿನ್ನವಾಗಿ ಒಡೆದು ಹೋಗಿರುವ , ಅಸಮಾನತೆಗಳಿಂದ ನೆಲ ಕಚ್ಚಿರುವ , ಈ ಇಡೀ ಸಮಾಜವನ್ನು ಒಂದು ಬಂಧಕ ಶಕ್ತಿಯ ಕೆಳಗೆ ಒಂದುಗೂಡಿಸಬೇಕಾದುದು ಮೊದಲ ಆದ್ಯತೆಯಾಗಿ ಅವರಿಗೆ ಕಾಣಿಸಿತು .
ಜನರು ದೇಹ ದಂಡಿಸಿ ದುಡಿಯುವ ಕೆಲಸಕ್ಕೆ , ಗೌರಪೂರ್ಣ ಪ್ರತಿಫಲ ಅವರಿಗೆ ಸಿಗಲೇಬೇಕು . ಮಾನವಂತ ಬದುಕು ಎಲ್ಲರ ಹಕ್ಕು . ಬರಿಯ ಉನ್ನತ ಸ್ತರದಲ್ಲಿರುವವರ ಹೊಟ್ಟೆ ಬೆಳೆಸಿಕೊಳ್ಳಲು, ಸಮಾಜದ ದುಡಿಮೆ ವಿನಿಯೋಗವಾಗಕೂಡದು . ಸಮಾಜದ ಸಂಪತ್ತಿಗೆ , ಅದರ ನಾಯಕ ಹೇಗೆ ಒಡೆಯನೋ , ಹಾಗೆಯೇ ಬೀದಿ ಗುಡಿಸುವ ಸಾಮಾನ್ಯನೂ ಅಷ್ಟೇ ಒಡೆಯ . ಈ ರೀತಿಯ ಅವರ ಪರಿಕಲ್ಪನೆಗಳು ಕಾಯಕ ತತ್ವದ ರೂಪ ರೇಷೆಗೆ ಕಾರಣವಾಗಿದ್ದವು .
ಜನರ ಆರ್ಥಿಕ ಅಸಮಾನತೆಯ ಜೊತೆ ಜೊತೆಗೇ ಧಾರ್ಮಿಕ ಅಸಮಾನತೆಗಳನ್ನೂ , ಸಮಾಜದಿಂದ ನಿರ್ಮೂಲಗೊಳಿಸಬೇಕಾಗಿತ್ತು . ಅದಕ್ಕಾಗಿ ಇಡೀ ಸಮಾಜದ ಚಿಂತನೆಯ ದಿಕ್ಕನ್ನೇ ಬದಲಾಯಿಸ ಬೇಕಾದ ಅನಿವಾರ್ಯತೆ ಎದುರಾಗಿತ್ತು . ಈ ರೀತಿಯ ಪ್ರಯೋಗಗಳಿಗೆ ಜನರಿಂದ ಅಭೂತಪೂರ್ವ ಬೆಂಬಲವೂ ದೊರೆಯತೊಡಗಿತು .
ಇದೆಲ್ಲ ರೀತಿಯ ಸಾಮಾಜಿಕ ಚಿಂತನೆಗಳು ಸರಿಯೇ ಸರಿ . ಆದರೆ ಮನುಷ್ಯ ಕೇವಲ ಯಂತ್ರವಲ್ಲ ; ಅವನು ಮನೋಜೀವಿ .ಮನಸ್ಸು , ಭಾವಗಳು ಮಿಶ್ರಣಗೊಂಡ ಮಾನಸಿಕ ಪರಿಕಲ್ಪನೆಗಳಿಂದ , ಅವನು ಹೊಸದನ್ನು ದರ್ಶಿಸಬಲ್ಲ: ಕಲ್ಪಿಸಬಲ್ಲ .ಈ ವಿಚಿತ್ರ ಜೀವಿಗೆ ಬರಿಯ ಹೊಟ್ಟೆ, ಬಟ್ಟೆಯ ಪ್ರಶ್ನೆ ಮಾತ್ರವಲ್ಲ ಇತರ ಅಗತ್ಯಗಳೂ ಇವೆ .
ಬರಿಯ ಭೌತಿಕ ಸಾಧನಗಳ ಲಭ್ಯತೆ , ಕೇವಲ ಮರಳುಗಾಡಿನ ಪಯಣ , ನಿರಂತರ ಏಕತಾನತೆ ಮನಸ್ಸನ್ನು ಕೊಂದುಹಾಕಬಲ್ಲ ಅಪಾಯದಿಂದ ಕೂಡಿದುದು .ಬರಿಯ ಭೌತಿಕ ಜಗತ್ತಿನ ನಿರಂತರ ಗೀಳು ,ಅದು ಹುಚ್ಚಿನಲ್ಲಿ ಪರ್ಯವಸನವಾಗಬಹುದು .
ಜಗತ್ತಿನ ಲಭ್ಯತೆಗಳಿಗೆ ಹೇಗೆ ಎಲ್ಲರೂ ಪಾಲುದಾರರೋ ? ಹಾಗೆಯೇ ಅವರವರ ಮನಸ್ಸನ್ನೂ ಸಂತೈಸಿಕೊಳ್ಳುವ ಹಕ್ಕೂ ಸಹ ಎಲ್ಲರಿಗೂ ಇದೆ .ಅದಕ್ಕಾಗಿ ಗುಡಿಯ ಪೂಜಾರಿ, ಪುರೋಹಿತನ ಮಧ್ಯಸ್ಥಿಕೆ ಬೇಕಾಗಿಲ್ಲ .ಅವರವರು ಪಡೆಯುವ ಭೌತಿಕ ಸುಖ ಸಾಧನಗಳು ಹೇಗೆ ಅವರವರ ಸ್ವಂತದ ಅನುರಕ್ತಿಗಳೋ , ಹಾಗೆಯೇ ಆಧ್ಯಾತ್ಮಿಕ ಅನುಭೂತಿಗಳೂ ಸಹ ,ಅವರವರ ಆತ್ಮಿಕ ಅನುಸಂಧಾನಗಳು ; ಮನುಷ್ಯನ ಹೊಟ್ಟೆಯ ಹಸಿವಿನಂತೆಯೇ ಆಧ್ಯಾತ್ಮಿಕ ಹಸಿವೂ ಸಹ ವೈಯುಕ್ತಿಕವಾದುದು ವಾದುದು .
ಆರ್ಥಿಕ ದಾಸ್ಯದಿಂದ ಮಾತ್ರವಲ್ಲ ಆಧ್ಯಾತ್ಮಿಕ ದಾಸ್ಯದಿಂದಲೂ ಮಾನವನ ಬಿಡುಗಡೆ ಆಗಬೇಕು .ಈ ಎರಡನ್ನೂ ಸಾಧಿಸುವುದರಿಂದ , ಈ ಎರಡರಿಂದಲೂ ವಂಚಿತರಾದ ಜನರನ್ನು ಸಮಾಜದ ಒಟ್ಟು ವ್ಯವಸ್ಥೆಯಲ್ಲಿ ಒಂದುಗೂಡಿಸಲು ಸಾಧ್ಯ , ಎಂಬ ಕಾರಣಕ್ಕಾಗಿ , ಅಲ್ಲದೆ ಮನಸ್ಸಿನ ಅಗಾಧ ಕಲ್ಪಕ ಶಕ್ತಿಯ ಸದುಪಯೋಗ ಪಡೆಯಲು ಆಧ್ಯಾತ್ಮವೂ ಅನಿವಾರ್ಯವಾದ ಅಂಶ , ಎಂಬುದನ್ನು ಮನಗಂಡಿದ್ದ ಬಸವಣ್ಣನವರು ಅದಕ್ಕಾಗಿ ಸೂಕ್ತ ಮಾರ್ಗದರ್ಶಿಯನ್ನು ಅರಸುತ್ತಿದ್ದರು .

- Login or register to post comments
- 252 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಅನನ್ಯ ಅಲ್ಲಮ (೩)
ಉತ್ತಮವಾಗಿ ಮೂಡಿಬರುತ್ತಿದೆ ಸೋಮಶೇಖರಯ್ಯನವರೇ..ಮುಂದುವರೆಸಿ..
ಉ: ಅನನ್ಯ ಅಲ್ಲಮ (೩)
ತುಂಬಾ ಚೆನ್ನಾಗಿ ಬರುತ್ತಾ ಇದೆ. ಯಾವುದೇ ಕಾರಣಕ್ಕೆ ಅಪೂರ್ಣ ಗೊಳಿಸಬೇಡಿ. ಓದುಗರು ಇದ್ದಾರೆ.
ನಾನು ಇದುವರೆಗೂ ಅಲ್ಲಮನನ್ನು ನೋಡಿದ್ದು ವಚನಗಳ ಮೂಲಕ. ಇಲ್ಲಿ ನೀವು ಅವನನ್ನು ಐತಿಹಾಸಿಕ / ಪುರಾಣಿಕ ವ್ಯಕ್ತಿಯಾಗಿ ನಿರೂಪಿಸುತ್ತೀದ್ದೀರಿ.
"ದೊಡ್ಡ" ವ್ಯಕ್ತಿಗಳಿಗೆ ಅತಿಮಾನುಷ ಗುಣಗಳನ್ನು ಆರೋಪಿಸುವದು ಎಲ್ಲ ಕಡೆ ನಡೆದಿದೆ. ರಾಮ ಕೃಷ್ಣರಾದಿಯಾಗಿ ಇತ್ತೀಚಿನ ಹಿಂದೂ ಧರ್ಮದ ಎಲ್ಲ ಮೇರು ವ್ಯಕ್ತಿಗಳಿಗೂ ಈ ಅತಿಮಾನುಷ ಶಕ್ತಿ / ಗುಣಗಳನ್ನು ಆರೋಪಿಸಲಾಗಿದೆ. ಅಲ್ಲಮನ ವಿಷಯದಲ್ಲೂ ಹೀಗೆ ಆಗಿದ್ದರೆ ಅದು ಮಾತ್ರ ಒಂದು ವಿಪರ್ಯಾಸ!. ಈ ಅತಿಮಾನುಷ ಗುಣಗಳನ್ನು ಆರೋಪಿಸದಿದ್ದರೂ ಅವನು ಎಲ್ಲರಿಗಿಂತ ಮೇಲೆದ್ದು ನಿಲ್ಲುತ್ತಾನೆ.
ಸವಿತೃ
ಉ: ಅನನ್ಯ ಅಲ್ಲಮ (೩)
ಮಾಧವ ಹೆಚ್.ಎಸ್. ಸವಿತೃ ಇಬ್ಬರಿಗೂ ಧನ್ಯವಾದಗಳು . ಸವಿತೃ ಅವರ ಅಭಿಪ್ರಾಯ ಸರಿಯಾಗಿದೆ .ಇಲ್ಲಿ ಸಾಮಾನ್ಯರಿಗಿಂತ ಭಿನ್ನವಾದ ವ್ಯಕ್ತಿಗಳನ್ನು ನೋಡುವವರಿಗೆ ಅವರು ಅಸಾಮಾನ್ಯರಾಗಿಯೇ ಕಾಣಿಸುತ್ತಾರೆ .ಅದರಿಂದಾಗಿಯೇ ಅಂತಹವರ ಬಿಂಬಕ್ಕೆ ಬಣ್ಣ ನೀಡುವುದು ಸಾಮಾನ್ಯರ ಸಾಮಾನ್ಯ ಸಂತೋಷ , ಉಳಿದಂತೆ ವೈಚಾರಿಕವಾಗಿ ಯೋಚಿಸುವುದೇ ಸರಿ .
ಉ: ಅನನ್ಯ ಅಲ್ಲಮ (೩)
ಚೆನ್ನಾಗಿ ಬರುತ್ತಿದೆ - ಎಲ್ಲ ಭಾಗಗಳೂ ಬಂದಮೇಲೆ, ಒಟ್ಟಿಗೆ ಒಂದೇ ಲೇಖನವಾಗಿಯೂ ಪೋಸ್ಟ್ ಮಾಡಿದರೆ ಒಳ್ಳೆಯದು. ಒಟ್ಟಿಗೆ ಓದಲು ಅನುಕೂಲವಾಗತ್ತೆ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ಅನನ್ಯ ಅಲ್ಲಮ (೩)
ಪ್ರೀತಿಯ ಹಂಸಾನಂದಿ ಅವರಿಗೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು . ಅಲ್ಲಮನ ಬಗ್ಗೆ ಈಗಾಗಲೇ ನೂರಾರು ವಚನಕಾರರು , ಕವಿಗಳು, ಸಾಹಿತಿಗಳು ಅನೇಕ ಕೃತಿಗಳನ್ನು ರಚನೆ ಮಾಡಿದ್ದಾರೆ . ಅವರೆಲ್ಲರೂ ಅವನ ವ್ಯಕ್ತಿತ್ವದಿಂದ ಪ್ರಭಾವಿತರಾದವರೆ . ಅವರ ಕೃತಿ ತೋಟಗಳಿಂದ ಮನ ಸೆಳೆಯುವ ಹೂವುಗಳನ್ನು ಆರಿಸಿ ಮಾಲೆ ಮಾಡುತ್ತಿರುವುದಷ್ಟೇ ನನ್ನ ಕೆಲಸ .ಇಲ್ಲಿ ದಾರ ಮಾತ್ರ ನನ್ನದು , ಈ ರಚನೆ ಸಹೃದಯರ ಗಮನ ಸೆಳೆಯುತ್ತಿರುವ ಸಂತೋಷವೂ ನನ್ನದು .ತಮ್ಮ ಪ್ರೀತಿಯ