ಅನನ್ಯ ಅಲ್ಲಮ (೫)
ಅಲ್ಲಮನಿಗೆ ನೆಲೆ ಇಲ್ಲವೆ ? ಇದ್ದರೆ ಯಾವುದು ಅವನ ನೆಲೆ ? ಆಲೋಚನೆಗಳ ಹರಹು ಗಗನ ಸದೃಶವಾದವನಿಗೆ , ಭುವಿಯ ನೆಲೆಯ ಹಂಗೇಕೆ ? ಅವನ ಆಲೋಚನೆಯ ಕ್ಷಿತಿಜವನ್ನು ವಿಸ್ತರಿಸಲು ಪ್ರೇರಕವಾದ ಘಟನೆಗಳಾದರೂ ಯಾವುವು ? ಈ ಪ್ರಶ್ನೆಗೆ ಉತ್ತರಗಳಿರಲಿ ,ಅವನನ್ನು ಮುಖಾಮುಖಿಯಾಗುವುದೇ ಮೊದಲ ಕಷ್ಟ , ಅದಕ್ಕೆ ಅಪರಿಮಿತ ಓಜಸ್ಸು ಬೇಕಾಗುತ್ತದೆ .ಅದಕ್ಕಾಗಿ ಅಲ್ಲಮನ ಬಗೆಗಿನ ಎಲ್ಲವೂ ಪಾರ್ಶ್ವ ನೋಟಗಳೇ .
ಅವನು ಬಳ್ಳಿಗಾವಿಯ ನಾಗವಾಸಾಧಿಪನ ಮಗ ಎಂದು ಹರಿಹರನು ತನ್ನ ಕಾವ್ಯದಲ್ಲಿ ಬಣ್ಣಿಸಿದರೆ ,ಅವನು ನಿರಹಂಕಾರ , ಸುಜ್ಞಾನಿಗಳ ಮಗ ಎನ್ನುತ್ತಾನೆ , ಚಾಮರಸ .ನಿರಹಂಕಾರ ಸುಜ್ಞಾನಿ ಇವ ಗುಣ ವಾಚಕವೋ ? ನೈಜ ನಾಮಗಳೋ ? ಚಾಮರಸನೇ ಬಲ್ಲ .ಕವಿಗಳ ಈ ವಿರೋಧಾಭಾಸಗಳಿಗೂ ಅಲ್ಲಮನ ಮನಃ ಸ್ಥಿತಿಗೂ ಸಂಭಂಧವಿಲ್ಲ , ಅವನ ಸಾವಿರಾರು ವಚನಗಳಲ್ಲಿ , ಎಲ್ಲಿಯೂ ಅವನ ಸ್ವಕೀಯ ವಿವರಗಳಿಲ್ಲ .
" ನೆಲದ ಬೋಂಬೆಯ ಮಾಡಿ , ಜಲದ ಬಣ್ಣವನುಡಿಸಿ ,ಉಲಿವ ಗೆಜ್ಜೆಯ ಕಟ್ಟಿ ,ವಾಯುವನಲನ ಸಂಚಕ್ಕೆ , ಅರಳೆಲೆಯ ಶ್ರುಂಗಾರವ ಮಾಡಿ ,ಆಡಿಸುವ ಯಂತ್ರವಾಹಕನಾರೋ ? ,, ಎನ್ನುವ ಬಗೆ ಇದೆ .
ಆದರೆ ಅವನದು ಆಕರ್ಷಕ ವ್ಯಕ್ತಿತ್ವ , ಕಣ್ಮನ ಸೆಳೆಯುವ ಮೈ ಮಾಟ ,ಅವನನ್ನು ಕಂಡ ಚಾಮರಸನ ಮಾಯಾದೇವಿ , ಮರುಳಾಗಿ ಹೋಗುತ್ತಾಳೆ . ಮಾಯೆ ಸಾಮಾನ್ಯಳಲ್ಲ , ಅವಳ ರೂಪ ಸಾಮ್ರಾಜ್ಯದ ಬಲೆಗೆ ಸಿಲುಕಿದ ನರರ ಕಣ್ಣುಗಳು ಅದರಿಂದ ಬಿಡುಗಡೆ ಪಡೆಯಲಾಸಿಸಲಾರವು . ಅಂತಹವಳ ಮನಸ್ಸನ್ನು ತನ್ನ ಅಪೂರ್ವ ಕಲಾಪ್ರೌ ಢಿಮೆ ವಿಶಿಷ್ಟ ಅಂಗ ಸೌಷ್ಟವಗಳ ಬಲೆಯಿಂದ ಸೆರೆ ಹಿಡಿದು , ಆಟವಾಡಿಸಿದ ಅಲ್ಲಮನ ಅತಿ ಮಾನವ ವ್ಯಕ್ತಿತ್, ಚಾಮರಸನಂತಹ ಕವಿಯ ಲೇಖನಿಯಿಂದ ಮಾತ್ರ ರೂಪುಗೊಳ್ಳಬಲ್ಲದು .
ಚಾಮರಸನ ಪ್ರಕಾರ , ಮಾಯೆ ಮನಸಿಜನ ಮನೆದೇವಿ ; ಕುಸುಮಾಸ್ತ್ರನ ಕುಲೋತ್ತಮೆ . ಅವಳ ನಿತ್ಯದ ಮಧುಕೇಶ್ವರನ ಪೂಜೆಯೇ ಅಪೂರ್ವವಾದುದು .ಅಲ್ಲಿ ವಿಧಿಯುಕ್ತ ಪೂಜೆಯ ನಂತರ ,ಸ್ವಾಮಿಯೆದುರು ಅವಳ ನರ್ತನ . ಕುಣಿತದ ದಣಿವಿನಿಂದ ,ದೇವಾಲಯದ ಗರ್ಭ ಮಂದಿರದ ಧೂಪ ಧೂಮದಿಂದ ,ಅಲ್ಲಿನ ವಿರಳ ವಾಯುವಿನ ಧಗೆಯಿಂದ ,ಹೊರ ಬರುವ ಮಾಯಾದೇವಿಯ ಬೆವರೊಡೆದ ಮುಖ , ಕೆಂಪೇರಿದ ಕಣ್ಣುಗಳು ,ಕೆದರಿದ ಕೇಶ ರಾಸಿಯನ್ನು ಕಂಡರೆ ಇವಳೇನು ಪರ ಶಿವನೆದುರು ನಾಟ್ಯವಾಡಿ ಬಂದಳೋ ? ಶಿವನೊಡನೆ ಸುರತಗೈದು ಬಂದಳೋ ? ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ ಚಾಮರಸ .
ಇಂತಹ ಅಪ್ರತಿಮ ದೇವಸುಂದರಿ ಒಂದು ದಿನ ತನ್ನ ನರ್ತನದ ಸಮಯದಲ್ಲಿ , ಸುಮಧುರವಾದ ಮದ್ದಳೆಯ ದನಿಯನ್ನು ಕೇಳುತ್ತಾಳೆ , ಲೋಕಸಾಮಾನ್ಯದ ರೀತಿಯಲ್ಲಿರದ , ವಿಶೇಷವಾದ ಈ ರೀತಿಯ ಮದ್ದಳೆಯ ಶಬ್ದವನ್ನು ಹೊರಡಿಸುತ್ತಿರುವ ವ್ಯಕ್ತಿ ಯಾರು ? ಎಂದು ನೋಡಿದರೆ ಅಲ್ಲೊಬ್ಬ ಸುಂದರ ತರುಣ , ಲೋಕದ ಇರವಿನ ಅರಿವನ್ನೇ ಮರೆತು ತನ್ಮಯನಾಗಿ ತನ್ನ ಮದ್ದಳೆಯಲ್ಲಿ ಲೀನನಾಗಿ ಬಾರಿಸುತ್ತಿದ್ದಾನೆ .ಅವನನ್ನು ಕಾಣುತ್ತಲೇ ಅವಳ ದೃಷ್ಟಿ ಅವನಲ್ಲಿ ನೆಟ್ಟು ಹೋಗುತ್ತದೆ .ಇದು ವರೆಗೆ ಅಳಿಮನದ ಲೋಗರ ದೃಷ್ಟಿಯನ್ನುಅಸ್ಡ್ಡೆಯಿಂದ ಸೆರೆಗೈಯುತ್ತಿದ್ದ ಮಾಯೆಯ ಶರೀರ ,ಇಂದು ತಾನೇ ಇನ್ನೊಂದು ರೂಪಕ್ಕೆ ಮರುಳಾಗಿ ಭ್ರಮಾಧೀನವಾಗಿದೆ , ಇದು ಮಾಯೆಗೆ ಹೊಸ ಪರಿ . ಆದರೆ ಇಲ್ಲಿ ಮಾಯಾದೇವಿ ವಿಚಿತ್ರ ರೀತಿಯಿಂದ ಸೋಲಬೇಕಾಗುತ್ತದೆ .ತನ್ನ ಮೋಹಕ ನೋಟದ ಬಲೆಗೆ ಸಿಲುಕಿ ಆಸೆಗಣ್ಣಿಂದ ನೋಡುವ ನರರನ್ನು ತಿರಸ್ಕಾರದ ನೋಟದಿಂದ ಕೊಲ್ಲುತ್ತಿದ್ದ ಮಾಯೆ , ಇಂದು ತಾನಾಗಿ ಒಲಿದು ಕಾಮಿಸಿದ ವ್ಯಕ್ತಿಯೇ ತನ್ನನ್ನು ತಿರಸ್ಕರಿಸಿದ ರೀತಿಯನ್ನು ಕಂಡು ಚಕಿತಳಾಗುತ್ತಾಳೆ .
ಅಲ್ಲಮನಿಗೆ ತೋರುವ ಜಗತ್ತಿನ ಸೌಂದರ್ಯವು , ತನ್ನ ಕಾರ್ಯ ಸಾಧನೆಗೆ ಮಾಯೆ ಹೆಣೆದ ಜಾಲ .ತೋರುವ ಲೇಪಿತ ಸೌಂದರ್ಯದ ಹಿಂದಣದೆಲ್ಲವೂ ಬೆಂತರ . ಕಾಣುವ ಹೊರಗಿನ ಸೌಂದರ್ಯವೆನ್ನುವುದೆಲ್ಲವೂ ಕರಗಿ ಹೋಗುವಂಥದು . " ಅರಗಿನ ಪುತ್ತಳಿಗೆ ಉರಿಯ ಸೀರೆಯನುಡಿಸಿದರೆ , ಅದು ಸಿರಿಯ ಸಿಂಗಾರವಾಯಿತ್ತು ನೋಡಾ ,, ಆಛ್ಛಾದನಗೊಂಡಿರುವ ರೂಪ , ಅದನ್ನು ಕಾಣುವ ಕಣ್ಣು , ಕಂಡದ್ದನ್ನು ಪರಿಭಾವಿಸುವ ಮನಸ್ಸು ,ಇವೆಲ್ಲವುಗಳನ್ನು ಒಂದು ವ್ಯೂಹದೊಳಗೆ ಬಂಧಿಸಿ ತನ್ನ ಕಾರ್ಯ ಸಾಧನೆ ಮಾಡಿಕೊಳ್ಳುವುದು , ಮಾಯಾ ಪ್ರಕೃತಿಯ ಗುಣ ಧರ್ಮ .
" ಕಂದನ ಕೈಯ್ಯ ದರ್ಪಣವ ಪ್ರತಿಬಿಂಬ ನುಂಗಿತ್ತು , ಉದಯದ ಬೆಳಗನು ಕತ್ತಲೆ ನುಂಗಿತ್ತು ,, " ಹೊನ್ನು , ಹೆಣ್ಣು, ಮಣ್ಣ ತೋರಿ ಮುಕ್ಕಣ್ಣನಾಡಿದ ಬೇಂಟೆಯ ,, (ಮುಂದುವರಿಯುವುದು)

- Login or register to post comments
- 180 hits
- Email this page





RSS: