ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ನೀನಲ್ಲದನ್ಯದೈವವುಂಟೆಂಬವನ ಬಾಯ
ಕೆನ್ನೆವಾರೆ ಸೀಳಿದಲ್ಲದೆ ಎನ್ನ ಮುನಿಸು ಹೋಗದಯ್ಯಾ
ಎನ್ನ ಕೋಪವಡಗದಯ್ಯಾ
ಎನ್ನ ಬಿನ್ನಪವನವಧರಿಸು ಕೂಡಲಸಂಗಮದೇವಾ (ವಚನ ಸಂಖ್ಯೆ ೭೫೨, ಬಸವಣ್ಣನವರ ಷಟ್ಸ್ಥಲ ವಚನಗಳು, ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆ)
ಇದು ಬಸವಣ್ಣನ ಒಂದು ವಚನ. ಕೂಡಲಸಂಗಮನಲ್ಲದೆ ಬೇರೆಯ ದೇವರು ಉಂಟು ಎಂಬುವಾತನ ಬಾಯನ್ನು ಕೆನ್ನೆಯೆಲ್ಲ ಹರಿದುಹೋಗುವಂತೆ ಸೀಳುವವರೆಗೆ ನನ್ನ ಮುನಿಸು ಹೋಗದು, ನನ್ನ ಕೋಪ ತಣಿಯದು. ನನ್ನ ಬಿನ್ನಹವನ್ನು ಕೇಳು ಎಂಬುದು ವಚನದ ಅರ್ಥ.
ವಚನದ ಅರ್ಥದಲ್ಲಿ ತೊಡಕಿಲ್ಲ. ಆದರೆ "ದಯವೇ ಧರ್ಮದ ಮೂಲ" ಎಂದು ಹೇಳಿದ ಮನಸ್ಸು, ಹಬ್ಬಕ್ಕೆ ತಂದ ಹರಕೆಯ ಕುರಿಯನ್ನು ಕುರಿತು ಮರುಗಿದ ಮನಸ್ಸು ಈ ಮಾತನ್ನೂ ಹೇಳಲು ಸಾಧ್ಯವೇ? ಈ ಮಾತನ್ನು ಅರ್ಥಮಾಡಿಕೊಳ್ಳುವುದು, ವಿವರಿಸಿಕೊಳ್ಳುವುದು ಹೇಗೆ?
ಅನ್ಯ ಧರ್ಮದ ಬಗ್ಗೆ ಇಲ್ಲಿ ದೊಡ್ಡ ಪ್ರಮಾಣದ ಅಸಹನೆ ವ್ಯಕ್ತವಾಗಿದೆ. ನಾವೆಲ್ಲ ಇಂದು ಕಾಣುತ್ತಿರುವುದು ಇಂಥ ಅಸಹನೆಯನ್ನೇ. ಧರ್ಮದ ಇನ್ನೊಂದು ಮುಖ ಹಿಂಸೆ ಮತ್ತು ಅಸಹನೆ ಎನ್ನೋಣವೇ? ಅಥವಾ ಬಸವ ಕೂಡ ಸಾಮಾನ್ಯ ಮನುಷ್ಯರಂತೆ ಕೋಪ, ರೋಷ, ಹಿಂಸೆಗಳಿಗೆ ಒಳಗಾದವನೇ ಎನ್ನೋಣವೇ? ಅಥವಾ ಧರ್ಮದ ಆದರ್ಶ ಮತ್ತು ವಾಸ್ತವಗಳ ನಡುವೆ ದಾಟಲಾಗದ ಕಂದಕ ಇದ್ದೇ ಇರುತ್ತದೆ ಎನ್ನೋಣವೇ?
ಇಲ್ಲವೇ "ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ" ಎಂಬ ಮಾತು ಸುಮ್ಮನೆ ಹೇಳಿದ್ದು, ತನ್ನ ಧರ್ಮವನ್ನು ಒಲ್ಲದೆ ಅನ್ಯ ದೈವ ಮತ್ತು ಧರ್ಮವನ್ನು ಒಲಿದವರು "ಸಕಲ ಪ್ರಾಣಿಗಳು" ಎಂಬುವುದರಲ್ಲಿ ಸೇರುವುದಿಲ್ಲ ಎಂಬ ಸಂಕುಚಿತ ಮನೋಧರ್ಮ ಬಸವನದೂ ಆಗಿತ್ತು ಎನ್ನೋಣವೇ?
ಬಸವನ ನುಡಿಗಳ ಈ ಎರಡು ಧ್ರುವಗಳನ್ನು ನೀವು ಹೇಗೆ ವಿವರಿಸಿಕೊಳ್ಳುವಿರಿ?

- Login or register to post comments
- 826 hits
- Email this page





RSS:
ಪ್ರತಿಕ್ರಿಯೆಗಳು
ಹೆಚ್ಚಿನ ಪ್ರೇಮ
ಸಾರ್, ನೀವು ನಮ್ಮ ಅಜ್ಞಾನದ ಪರೀಕ್ಷೆ ಮಾಡುತ್ತಿರುವಿರಾ?
ನನಗೆ ತಿಳಿದ ಅಲ್ಪಮತಿಯಂತೆ ಬಸವಣ್ಣನವರು ಹಾಗೆ ಎರಡು ತರಹದ ಮಾತುಗಳನ್ನು ನಿಜಾರ್ಥದಲ್ಲಿ ಹೇಳಿರುವುದಕ್ಕೆ ಸಾಧ್ಯವಿಲ್ಲ. ಬಹುಶ: ಕೂಡಲ ಸಂಗಮದೇವನ ಮೇಲಿನ ವಿಪರೀತ ಪ್ರೇಮದಿಂದ ಹೀಗೆ ಬರೆದಿರಬಹುದೇನೋ? ನೀವೇ ಇದನ್ನು ಸರಿಯಾಗಿ ಅರ್ಥೈಸಿ ತಿಳಿಸಬೇಕು.
ನಿಮ್ಮಲ್ಲಿ ಇನ್ನೊಂದು ಕೋರಿಕೆ. ನೀನೊಲಿದರೆ ಕೊರಡು ಕೊನರುವುದಯ್ಯಾ ... ಇದರ ಬಗ್ಗೆ ಸ್ವಲ್ಪ ತಿಳಿಸಿ ಸಾರ್.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಅಜ್ಞಾನದ ಪರೀಕ್ಷೆಯಲ್ಲ, ನನಗಾದ ದಿಗ್ಭ್ರಮೆ
ದಯವಿಟ್ಟು ಅಜ್ಞಾನದ ಪರೀಕ್ಷೆ ಇತ್ಯಾದಿಯೆಲ್ಲ ಅಂದುಕೊಳ್ಳಬೇಡಿ. ನಾವು ಕಲ್ಪಿಸಿಕೊಂಡಿರುವ ಬಸವಣ್ಣ ಹೀಗೂ ಹೇಳಿದ್ದರೆ ಅದನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎಂದು ತಿಳಿಯದೆ ನನಗಾದ ದಿಗ್ಭ್ರಮೆಯನ್ನು ಸಂಪದದ ಗೆಳೆಯರೊಂದಿಗೆ ಹಂಚಿಕೊಂಡಿರುವೆ. ದಯವಿಟ್ಟು ಯೋಚಿಸಿ ನಿಮ್ಮ ಅನಿಸಿಕೆ ತಿಳಿಸಿ.
ಕೆಲವೊಮ್ಮೆ ಹಾಗೆ
ಕೆಲವೊಮ್ಮೆ ಹಾಗೆ ಆಗುವುದಂತೆ. ಎಷ್ಟೇ ಆಗಲಿ ಬಸವಣ್ಣನವರು ಕೂಡಲಸಂಗಮನ ಭಕ್ತರು. ಅವನ ಮೇಲಿನ ಅತೀವ ಪ್ರೇಮದಿಂದ ಹೀಗಂದಿರಬಹುದು.
ಕಾಲೇಜಿನಲ್ಲಿದ್ದಾಗ ಒಮ್ಮೆ (ಬಹುಶ: ೧೯೭೯ರಲ್ಲಿ), ಒಂದು ಪುಸ್ತಕ ಓದುತ್ತಿದ್ದೆ. ಅದರಲ್ಲಿ ತಿಳಿಸಿದಂತೆ,
ಮಹಾಭಾರತದಲ್ಲಿ ಅರ್ಜುನ ಕರ್ಣರ ವಾಗ್ಯುದ್ಧದಲ್ಲಿ ಅರ್ಜುನ ಕರ್ಣನನ್ನು ಕುಮಾರಿಯ ಮಗ ಎಂದು ಸಂಬೋಧಿಸುತ್ತಾನೆ. ಇವನಿಗೆ ಹೇಗೆ ಗೊತ್ತಿತ್ತು ಎಂಬ ಯೋಚನೆ ನನ್ನನ್ನು ಕಾಡಹತ್ತಿತು.
ನಾನು ಸಂಸ್ಕೃತದ ವಿದ್ಯಾರ್ಥಿ ಆಗಿದ್ದೆ. ನನ್ನ ಗುರುಗಳಾದ ಶ್ರೀ ಅನಂತರಂಗಾಚಾರ್ಯರನ್ನು ಕೇಳಿದೆ. ಅವರು ಕನ್ನಡದ ಬಗ್ಗೆ ಅಷ್ಟಾಗಿ ತಮಗೆ ತಿಳಿಯದೆಂದು ಕೇಶವಭಟ್ಟರನ್ನು ಕೇಳಿದರು. ಅವರು ಹೇಳಿದ್ದಿಷ್ಟೇ. ಬರಹಗಾರರು ಕೆಲವೊಮ್ಮೆ ಪೂರ್ವಾಗ್ರಹ ಪೀಡಿತರಾಗಿರುತ್ತಾರೆ. ಮನಸ್ಸಿನಲ್ಲಿ ಮುಂದಾಗುವುದು ಅಚ್ಚಳಿಯದೇ ಕುಳಿತಿದ್ದು, ತಿಳಿಯದಂತೆ ಇಂತಹ ಪದಗಳು ಬರುವ ಸಾಧ್ಯತೆ ಇದೆ. ಇದನ್ನು ತಪ್ಪು ಎಂದು ತಿಳಿಯಬೇಡ, ಎಂದಿದ್ದರು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಬಹುಶ:
ಈ ವಚನ ಬಸವಣ್ಣ ಬರೆದಿರುವಿದು ಅಲ್ಲವೇ ಅಲ್ಲಾ. ಬಸವಣ್ಣನವರ ಮೇಲೆ ಅಸೂಯೆ ಯಿರುವವರು
ಅವರ ಶೈಲಿಯಲ್ಲಿ ಈ ವಚನ ಬರೆದಿರಬಹುದು.
ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ನಿಜ.ಹೀಗನಿಸುವುದು ಸುಳ್ಳಲ್ಲ.ಆದರೆ ಬಸವಣ್ಣನವರ ಕಾಲಾನಂತರ ವಚನಗಳು ಹಂಚಿ ಹೋಗಿದ್ದವು.ಏಳು ನೂರು ವರ್ಷಗಳ ನಂತರ ಅವು ಈಗಲೂ ಅಷ್ಟೊಂದು ಪ್ರಭಾವ ಬೀರಬಲ್ಲವಾದರೆ ಆಗ ಶರಣರ ಬಾಯಲ್ಲಿ ಉದಿಸಿದ ಈ ವಾಕ್ಯಗಳಿಗೆಂಥ ಶಕ್ತಿ ಇದ್ದಿರಬೇಡ.ಈ ಅಂತರದಲ್ಲಿ ಅವುಗಳನ್ನು ಕೆಲವಡೆ ತಮಗನುಕೂಲವಾಗುವಂತೆ ತಿರುಚಲಾಗಿದೆ/ವ್ಯಾಖ್ಯಾನಿಸಲಾಗಿದೆ.ಎಷ್ಟೋ ವಚನಗಳ ಸರಿಯಾದ ವ್ಯಾಖ್ಯಾನವೂ ಆಗಿಲ್ಲ.ಈಗ ಆ ಕಾರ್ಯ ಕೆಲವೆಡೆ ನಡೆಯುತ್ತಿದೆ ಎಂದು ಕೇಳಿದ್ದೇನೆ.ಉದಾಹರಣೆ 'ಜಂಗಮ' ಎನ್ನುವ ಪದದ ಅರ್ಥ ಎಲ್ಲರಂತೆ ನಾನು ಯಾರೋ ಸ್ವಾಮಿಗಳಿಗೆ ಹೇಳಿರಬೇಕೆಂದು ತಿಳಿದಿದ್ದೆ.ಆದರೆ ಅದರರ್ಥ 'ಸಮಾಜ' ಎಂದು ನಮ್ಮಪ್ಪಾಜಿ ಹೇಳಿದಾಗಲೇ ಗೊತ್ತಾಗಿದ್ದು.'ಜಂಗಮ ದಾಸೋಹ' ಎಂದರೆ ಸ್ವಾಮಿಗಳಿಗೆ ಊಟ ಹಾಕಿಸು ಎಂದರ್ಥವಲ್ಲ..ನೀನು ದುಡಿದಿದ್ದರಲ್ಲಿ ಕೊಂಚವಾದರೂ ಸಮಾಜಕ್ಕೆ ಮೀಸಲಿಡು ಎಂದು..ಅದು ಭಿಕ್ಷುಕನಿಗೋ,ಅನಾಥಾಶ್ರಮಕ್ಕೋ ಯಾವುದೇ ರೀತಿಯಲ್ಲಾಗಬಹುದು.
ವಚನ ಸಾಹಿತ್ಯ ಅರ್ಥಗರ್ಭಿತ.ಅದನ್ನು ಜನಸಾಮಾನ್ಯನಿಗೆ ಅರ್ಥವಾಗುವಂತೆ ಮಾಡಿದ ಬಸವಣ್ಣ ಇಂಥ ಮಾತು ಹೇಳಿರಲಾರ ಎಂಬುದು ಅವರ ವಚನ, ಜೀವನ ಚರಿತ್ರೆ ಓದಿದ ಯಾರಿಗಾದರೂ ತಿಳಿಯುವಂಥದ್ದು.ಅಷ್ಟಕ್ಕೂ ಕೋಗಿಲೆ ಮರಿಗಳೊಂದಿಗೆ ಕಾಗೆ ಮರಿಗಳನ್ನಿಟ್ಟರೂ ಎಂದಾದರೂ ಸತ್ಯ ಹೊರಬರಲೇಕಲ್ಲವೇ?
ಬಹುಶಃ ಈ ವಚನವೂ ಅರ್ಥವಾಗದಿದ್ದುದು ಸರಿಯಾದ ವ್ಯಖ್ಯಾನ ನೀಡದಿದ್ದುದಕ್ಕೆ ಎನಿಸುತ್ತದೆ.ವ್ಯಾಖ್ಯಾನ ನನಗೆ ತಿಳಿದಲ್ಲಿ ಖಂಡಿತವಾಗಿಯೂ ತಿಳಿಸುವೆ.
-ಸುಶೀಲ್.