ಕಾರಂತರ ಜೀವಂತ ಪಾತ್ರಗಳು ೪ (೨)
ಮುಂಬೈನಿಂದ ಕರ್ನಾಟಕಕ್ಕೆ ಬಂದು ಪ್ರೊಫೆಸರನಾದವನು ಸೀತಾರಾಮ ;ಅವನ ತಂದೆ ರಾಘವೇಂದ್ರರಾಯ ಕರ್ನಾಟಕದಿಂದ ಉದ್ಯೋಗ ಅರಸಿ ಮುಂಬೈಗೆ ಹೋದವನು ; ಹೋಗಿ ಉದ್ಯಮಿಯಾದವನು .ಸೀತಾರಾಮನಿಗೆ ಇದು ತಿಳಿದದ್ದೇ . ಆದರೆ ತನ್ನ ತಂದೆಯ ಪೂರ್ವಾಪರಗಳ ಬಗ್ಗೆ ಅನೀರೀಕ್ಷಿತವಾಗಿ ಅವನಿಗೆ ತಿಳಿದು ಬರುತ್ತದೆ .ತಂದೆಯ ರಕ್ತಸಂಬಂಧಿಗಳ ದಾರುಣ ಸ್ಥಿತಿಯೂ ಅವನ ಅರಿವಿಗೆ ಬರುತ್ತದೆ .ಮುಂಬೈನ ದೊಡ್ಡ ಕುಳವಾದ ತಂದೆ . ಅವನ ಹೆತ್ತವರನ್ನಾಗಲೀ ,ಒಡಹುಟ್ಟಿದವರನ್ನಾಗಲೀ ,ಕೊನೆಗೆ ತನ್ನ ಹುಟ್ಟೂರನ್ನಾಗಲೀ , ಕನಸಿನಲ್ಲಿಯೂ ನೆನೆಸದುದು ಸೀತಾರಾಮನ ಮನಸ್ಸನ್ನು ಘಾಸಿಗೊಳಿಸುತ್ತದೆ .
ಸೀಗೇ ಮನೆ ಗಣಪತಿ ಹೆಗ್ಗಡೆಯವರು ಶಿರಶಿಯಲ್ಲಿ ಒಂದು ರೀತಿಯ ನಿವೃತ್ತರ ತರಹ ಜೀವಿಸುತ್ತಿದ್ದವರು .ಮುಂಬೈಯಲ್ಲಿ ದೊಡ್ಡ ವ್ಯಾಪಾರಿಗಳಾಗಿ ಸಾಕಷ್ಟು ಗಳಿಸಿ , ಇದ್ದೊಬ್ಬ ಮಗನು ರೋಗ ಪೀಡಿತನಾದುದರಿಂದ ಮನನೊಂದು , ಸ್ವಂತ ನೆಲೆ ಶಿರಸಿಗೆ ಹಿಂತಿರುಗಿದವರು .ಅಲ್ಲಿ ಆ ಮಗನನ್ನೂ ಕಳೆದುಕೊಂಡು ಹತಾಶರಾದವರು .ಸಂತತಿಯೇ ಇಲ್ಲದೆ ,ಹಣವಿರುವ ಹೆಗಡೆ ದಂಪತಿಗಳ ಸುತ್ತ ಅವರ ಸಂಪತ್ತಿನ ಆಸೆಗಾಗಿ ಬಾಯಿ ಬಿಡುತ್ತಿದ್ದ ರಣ ಹದ್ದಿನ ರೀತಿಯ ಪರಿವಾರವೇ ಇತ್ತು .
ಹೆಗಡೆಯವರ ಪರಿಚಯದ ವಲಯಕ್ಕೆ ಸೀತಾರಾಮ ಆಕಸ್ಮಿಕವಾಗಿ ಸೇರ್ಪಡೆಯಾಗುತ್ತಾನೆ . ಅವನ ಸ್ವಭಾವದಿಂದಾಗಿ ಗಣಪತಿ ಹೆಗಡೆಯರ ಆಪ್ತನಾಗುತ್ತಾನೆ .ಹೆಗಡೆಯವರು ಪ್ರಾಸಂಗಿಕವಾಗಿ ತಮ್ಮ ಮುಂಬೈ ಜೀವನದ ಬಗ್ಗೆ ಮಾತನಾಡುತ್ತಾ , ತಮ್ಮ ಆಸರೆಗೆ ಬಂದ ಕನ್ನಡ ಜಿಲ್ಲೆಯ ಒಬ್ಬ ಬಡ ಹುಡುಗನ ಬಗ್ಗೆ ವಿವರಿಸುತ್ತಾ ಆ ಹುಡುಗ ಹೇಗೆ ತಮ್ಮನ್ನೇ ವಂಚಿಸಿ , ತಮ್ಮ ದಾಸ್ತಾನಿನಲ್ಲಿದ್ದ ಬಣ್ಣಗಳನ್ನೇ ಮಾರಿಕೊಂಡು ಮಹಾಯುದ್ದ ಕಾಲದಲ್ಲಿ ಹಣ ಗಳಿಸಿದ , ಎನ್ನುವ ವಿಚಾರ ತಿಳಿಸುತ್ತಾರೆ . ಅ ಹುಡುಗ ಬೇರಾರೂ ಆಗಿರದೆ , ತನ್ನ ಸ್ವಂತ ತಂದೆಯೇ ಎನ್ನುವುದು ಅರಿವಾದ ಸೀತಾರಾಮ , ತಂದೆಯ ಕೃತ್ಯಗಳಿಗೆ ನಾಚಿ ನೀರಾಗುತ್ತಾನೆ .ತನ್ನ ತಂದೆಯ ಕಂಪನಿ’ ಯಜಮಾನ್ ಎಂಡ್ ಕಂಪನಿ’ ಹೆಸರೂ ಸಹ ಹೆಗಡೆಯವರ ಕೃಪೆ , ಎಂಬುದು ಅವನಲ್ಲಿ ಇರಿಸು ಮುರಿಸಿನ ವಿಚಾರವಾಗುತ್ತದೆ .ಸೀತಾರಾಮ ತನ್ನ ತಂದೆಯ ತಪ್ಪಿಗಾಗಿ ಹೆಗಡೆಯವರ ಕ್ಷಮೆ ಕೋರುವ ವಿಧಾನ , ಹೆಗಡೆಯವರ ಕಣ್ಣಲ್ಲಿ ಸೀತಾರಾಮನನ್ನು ದೊಡ್ಡವನನ್ನಾಗಿಸುತ್ತದೆ .ಅಷ್ಟಲ್ಲದೆ ಮನುಷ್ಯ ಸಮಾಜ ಕಳೆದುಕೊಂಡಿರುವ ಯಾವುದೋ ಒಂದು ಸಂಸ್ಕೃತಿಯನ್ನು ಪುನಃ ನೆನಪಿಸಿ ಕೊಡುತ್ತದೆ .
ಹಸಿದ ತೋಳಗಳ ರೀತಿಯಲ್ಲಿ ಸುತ್ತುವರಿದಿದ್ದ ಬಂಧುಗಳನ್ನು ದೂರ ಸರಿಸುತ್ತಾ ಅವರಿಂದ ಜಿಪುಣರೆಂಬ ಹೆಸರು ಪಡೆದ ಹೆಗಡೆಯವರು , ಬಡತನವಿದ್ದರೂ ಕಾಯ ಕಷ್ಟದಿಂದ ಬದುಕುತ್ತಾ ಘನತೆಯ ಬಾಳು ನಡೆಸುತ್ತಿದ್ದ ರೈತ , ಗೋಳೀಮನೆ ಶಂಕರಯ್ಯನ ಕುಟುಂಬಕ್ಕೆ ನೆರವಾಗಿ ನಿಂತವರು ." ಸೀತಾರಾಮ, ನಿನ್ನ ಸಸ್ಯ ಶಾಸ್ತ್ರದ ನೈಪುಣ್ಯವನ್ನು ಇಲ್ಲಿ ತೋರಿಸಿ ಕೊಡಯ್ಯಾ , ಈ ಶಂಕರಯ್ಯ ಕಾಫೀ ತೋಟ ಮಾಡುತ್ತೇನೆನ್ನುತ್ತಾನೆ ,ಹಣ ಕಾಸಿನ ಜವಾಬ್ದಾರಿ ನನ್ನದು ,ತಾಂತ್ರಿಕ ಪರಿಜ್ಞಾನ ನಿನ್ನದು ,ಕಾಯ ಕಷ್ಟ ಅವರದು . ನಡೆ ಅವರ ಊರಿಗೆ ಹೋಗಿ ಅವರ ಆಸ್ತಿ ನೋಡಿಕೊಂಡು ಬರೋಣ . ಹಾಗೆಯೇ ಕಾಫಿ ಬೆಳೆಯುತ್ತಿರುವ ಕಡೆಗೆ ಹೋಗಿ ಬೆಳೆಯ ರೀತಿ ತಿಳಿದು ಇವರಿಗೆ ನೆರವಾಗೋಣ " ಎಂಬ ಇಳಿವಯಸ್ಸಿನ ಅವರ ಉತ್ಸಾಹಕ್ಕೆ , ಸೀತಾರಾಮನ " ಈ ವಯಸ್ಸಿನಲ್ಲಿ ನಿಮಗೇಕೆ ಕಷ್ಟ " ಎಂಬ ಪ್ರಶ್ನೆಗೆ "ನನಗೆಂತಹ ಕಷ್ಟ ?ನಿನ್ನಂತಹವನ ಸಹವಾಸದಲ್ಲಿ ನಾನೂ ಹುಡುಗನಾದೇನು " ಎನ್ನುವ ಉತ್ಸಾಹದ , ಉದಾರ ಮನಸ್ಸಿನ ಮಾತುಗಳು ,ಗಣಪತಿ ಹೆಗಡೆಯ ತರದ ಮನಸ್ಸುಗಳು ಚಿಂತಿಸುವ ರೀತಿಯನ್ನು ಬಿಂಬಿಸುತ್ತವೆ .ಇಂತಹ ಜೀವಪರ ಪಾತ್ರಗಳನ್ನು ಸೃಷ್ಟಿಸುತ್ತಿದ್ದ ಕಾರಂತರು , ಹಣ ಕಾಸಿನ ಕಾರಣಕ್ಕಾಗಿ ಕಪಟಿಗಳು ನಡೆಸುವ ವಿವಿಧ ರೀತಿಯ ತಂತ್ರ ಕುತಂತ್ರಗಳ ಆಟವನ್ನೂ ಸಹ ’ಇದ್ದರೂ ಚಿಂತೆಯಲ್ಲಿ’ ಸವಿವರವಾಗಿ ಚಿತ್ರಿಸುತ್ತಾರೆ .
’ಇದ್ದರೂ ಚಿಂತೆಯ’ ಸೀತಾರಾಮನ ರೀತಿಯಲ್ಲಿಯೇ ತನ್ನವರ ತವರನ್ನು ಹುಡುಕುತ್ತಾ ಬರುವ ಶಂಕರನ ಪಾತ್ರವನ್ನು ’ಚಿಗುರಿದ ಕನಸು’ ವಿನಲ್ಲಿ ಸೃಷ್ಟಿಸುವ ಕಾರಂತರು ಮಾನವನ ನಿರಂತರ ಅನ್ವೇಷಣೆಯ ಅಲೆದಾಟದ ಜೊತೆಯಲ್ಲಿಯೇ ಅವನ ತವರಿನ ಹಂಬಲವೂ ಸಹ ಅದಮ್ಯವಾದುದು ಎಂಬುದನ್ನೂ ಸಹಜವಾಗಿಯೇ ಚಿತ್ರಿಸುತ್ತಾರೆ .ಅವರ ಪಾತ್ರಗಳ ಪರಿಕಲ್ಪನೆಗಳೇ ಹಾಗೆ , ಅವು ಚಲನಶೀಲವಾದುವು ; ಮಾನವತೆಯ ಅನ್ವೇಷಣೆಯ ದಿಕ್ಕಿನಲ್ಲಿ ನಿರಂತರ ಮುನ್ನಡೆ ಕಾಣುವಂತಹವು .
ಚಿಗುರಿದ ಕನಸಿನ ಶಂಕರನಿಗೆ ಆಸ್ತಿತ್ವದ ಹುಡುಕಾಟ ಪ್ರಮುಖವಾಗುತ್ತದೆ . ದೆಹಲಿಯ ತನ್ನ ತಂದೆ ತಾಯಿಯರು ಇರುವ ಬಾಡಿಗೆ ಮನೆ ವೈಭವಯುತವಾದುದಾದರೂ ಅಸಹಜವೆನಿಸುತ್ತದೆ . ತಂದೆಯದು ಭಾರತ ಸರ್ಕಾರದ ಸೆಕ್ರಟರಿಯೇಟ್ ನಲ್ಲಿ ಉನ್ನತ ಹುದ್ದೆಯಾದರೂ , ಕೃತಕವೆನಿಸುತ್ತದೆ .ತಮ್ಮ ಇಡೀ ಜೀವನವೇ ಒಂದು ಆಧಾರ ತಪ್ಪಿದ , ಅತಂತ್ರ ನೆಲೆಗಟ್ಟಿನ ಮೇಲೆ ಕಟ್ಟಲ್ಪಟ್ಟ ಮರಳಿನ ಮನೆಯಂತೆ ಭಾಸವಾಗುತ್ತದೆ .ಇದರಿಂದಾಗಿಯೇ ಪುನಃ ತನ್ನ ಹಿರಿಯರು ಬಾಳಿ ಬದುಕಿದ ನೆಲೆಯಾದ ಬಂಗಾಡಿಗೆ ಬಂದು ಕೃಷಿಯಲ್ಲಿ ತೊಡಗುವುದು ಮತ್ತು ತಾನು ಕಲಿತ ವಿದ್ಯೆಯಿಂದ ಕತ್ತಲಿನ ಕೊಂಪೆಯಲ್ಲಿ ವಿದ್ಯುತ್ತಿನ ದೀಪಗಳನ್ನು ಬೆಳಗಿಸುವುದು .
ಕೃಷಿ , ಗ್ರಾಮೀಣ ಜೀವನ ಇವೆಲ್ಲಾ ಕಾರಂತರ ಸಮಕಾಲೀನರ ಮತ್ತು ಕಾರಂತರ ತರದವರ ಆಲೋಚನೆ ಆದರ್ಶಗಳಾಗಿದ್ದವು . ಇಂದು ಇವೆಲ್ಲಾ ವಿಕೃತ ಪರಿಸ್ಥಿತಿಗೆ ಸಿಲುಕಿವೆ . ರೈತರ ಬದುಕಿನ ಬೇರನ್ನೇ ಕೊಯ್ದು ,ಅವರಿಗೆ ಸಾಲ ಮನ್ನಾ ತರದ ಆಮಿಷದ ನಾಟಕಗಳನ್ನಾಡುತ್ತಿರುವ ವ್ಯವಸ್ಥೆ , ರೈತ ಸಮುದಾಯದ , ಗ್ರಾಮೀಣ ಜೀವನದ ಘನತೆಯನ್ನೇ ನಾಶ ಮಾಡುತ್ತಿದೆ .ಜನರ ಉದ್ಯೋಗಶೀಲತೆಯನ್ನಾಗಲೀ , ಸ್ವಾಭಿಮಾನವನ್ನಾಗಲೀ ಪ್ರೋತ್ಸಾಹಿಸದೆ ಯಾಚಕರ ಪಡೆಯೊಂದನ್ನು ನಿರ್ಮಿಸಹೊರಟಿರುವ ಸಮಾಜಕ್ಕೆ ಭವಿಷ್ಯವಿದೆಯೇ ? ಇಂತಹ ಸಮಕಾಲೀನ ಪ್ರಶ್ನೆಗಳನ್ನು ’ಚಿಗುರಿದ ಕನಸು ’ ’ಇದ್ದರೂ ಚಿಂತೆ’ ಯಂತಹ ಕೃತಿಗಳಲ್ಲಿ ಬರುವ ಪಾತ್ರಗಳು ಓದುಗನಲ್ಲಿ ಚಿಗುರೊಡೆಸುತ್ತವೆ.
ಕಾರಂತ ಆರ್ಥಿಕ ಸಿದ್ದಾಂತ , ಕಠಿಣ ದುಡಿಮೆ ಮತ್ತು ಪರಿಶ್ರಮಗಳ ಮೇಲೆ ನಿಂತಿರುವಂತಹುದು ,ಯಾರದೋ ತಲೆಯನ್ನು ಹೊಡೆದೋ ,ಇನ್ನಾರದೋ ತಲೆಯ ಮೇಲೆ ಟೋಪಿಯನ್ನಿಟ್ಟೋ ಸಂಪಾದಿಸಿದಂತಹವರಿಗೆ ಬೆಲೆಯನ್ನು ನೀಡುವಂತಹುದಲ್ಲ .( ಅಂತಹ ಸಂಪಾದನೆಯನ್ನು ಕಾರಂತರು ದರೋಡೆ ಎಂದು ಕರೆಯುತ್ತಾರೆ ) ಬರಿಯ ಆರ್ಥಿಕ ವಿಷಯಗಳಿಗೆ ಬೆಲೆ ನೀಡಿದಂತಹುದೂ ಅಲ್ಲ. ಅಲ್ಲಿನ ಅರ್ಥಕ್ಕೆ ಅರ್ಥ ಬರುವುದು ಮನುಷ್ಯನ ಜೀವಂತಿಕೆಯ ನೆಲೆಗಟ್ಟಿನಲ್ಲಿ ಮಾತ್ರ . ಮನುಷ್ಯನನ್ನು ನಿರ್ಜೀವ ಯಂತ್ರದಂತೆ ಪರಿಗಣಿಸಿಯೋ ಅಥವಾ ಅಲಕ್ಷಿಸಿಯೋ , ಸಾಧಿಸುವ ಆರ್ಥಿಕ ಪ್ರಗತಿಯು ತರುವ ವಿನಾಶದ ಅರಿವಿರುವಂತಹುದು .
ಮನುಷ್ಯಕೃತವಾದ ಎಲ್ಲ ಆರ್ಥಿಕ ಸಿದ್ದಾಂತಗಳೂ ಸಹ , ಮಾನವನ ಜೀವನ ಪ್ರವಾಹದಲ್ಲಿ ; ಕಾಲಾನುಗತಿಯಲ್ಲಿ ದಡ ಕುಸಿದು ಬೀಳುವ ವಾಸ್ತವ ಸಾಬೀತಾಗಿದೆ .ಮನುಷ್ಯನ ಅಗತ್ಯ ಮತ್ತು ಅನುಕೂಲತೆಗಳ ಉದ್ದೇಶದಿಂದ ರೂಪಿತವಾದ ಆರ್ಥಿಕ ಶಿಸ್ತು ಎಂಬುದು ಮನುಷ್ಯನ ಮೇಲೆಯೇ ಪ್ರಭುತ್ವ ಸಾಧಿಸಿದುದು ಈಗ ಇತಿಹಾಸ .ಇದೇ ಆರ್ಥಿಕ ಆಯಾಮಗಳು ಮಾನವತೆಗೆ ಮಾತ್ರವಲ್ಲ ಸೃಷ್ಟಿಗೇ ಸವಾಲಾಗಿ ವಿನಾಶದ ದಾರಿಯನ್ನು ಹಿಡಿದಿರುವುದು ಕಳವಳಕಾರಿ ಸಂಗತಿ . ಇದಕ್ಕೆ ಕಾರಣ ಮಾನವೀಯ ಅಂಶಗಳಿಂದ ಆರ್ಥಿಕ ನೆಲೆಗಟ್ಟನ್ನು ಪ್ರತ್ಯೇಕಿಸತೊಡಗಿದ ಅಪಾಯಕಾರಿ ಸನ್ನಿವೇಶಗಳು . ಇದಕ್ಕೆ ಸಮರ್ಥವಾಗಿ ತಡೆಯೊಡ್ಡದಿದ್ದರೆ , ಮನುಷ್ಯ ಕುಲ ತೆರಬೇಕಾದ ಬೆಲೆ ಊಹಾತೀತವಾದುದು .
ಆರ್ಥಿಕ ಸಾರ್ವಭೌಮತೆಯನ್ನು ತಡೆಗಟ್ಟಲು , ಅಮೂರ್ತ ಕಲ್ಪನೆಗಳಾದ ಮಾನವೀಯ ಪ್ರೇಮ ,ಕರುಣೆ , ಅನುಕಂಪ , ಸೌಹಾರ್ದ ಇತ್ಯಾದಿ ಭಾವನಾತ್ಮಕ ಜಗತ್ತಿನ ಬಳಕೆ ಅನಿವಾರ್ಯ .ಇವು ನಿಸರ್ಗವೇ ರೂಪಿಸಿ ರಚಿಸಿಕೊಂಡಿರುವ ನಿಯಮಗಳು . ಇವುಗಳಿಗೆ ಅನಿವಾರ್ಯವಾಗಿ ಶರಣು ಹೋಗಲೇಬೇಕಾಗುತ್ತದೆ .ಮನುಷ್ಯ ಎಷ್ಟೇ ಆಧುನಿಕನಾದರೂ ನಿಸರ್ಗದ ಈ ಪುರಾತನ ನಿಯಮಗಳ ಎಲ್ಲೆಯನ್ನು ಅವನು ದಾಟುವಂತಿಲ್ಲ .ಶಿವರಾಮ ಕಾರಂತರದು ಎಷ್ಟೇ ವಾಸ್ತವಿಕವಾದ ವಿಚಾರ ಸರಣಿಯಾದರೂ ಸಹ ;ಭಾವ ಜಗತ್ತಿಗೆ ಅವರು ಕೊಡುವ ಬೆಲೆಗೆ ಇದುವೇ ಕಾರಣ .

- Login or register to post comments
- 120 hits
- Email this page





RSS: