Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಬಾಳೇ ಒಂದು ಗಿಡವಾದರೆ ಪ್ರೀತಿಯದರ ಗೊನೆ!

March 30, 2008 - 4:06pm — narendra
ಬಾಳೆಗಿಡ ಗೊನೆಹಾಕಿತು

ಇದೊಂದು ಪುಟ್ಟ ಪುಸ್ತಕ. ಐವತ್ತು ಅರವತ್ತು ಪುಟಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದವೆಲ್ಲ ಪುಟ್ಟ ಪುಟ್ಟ ಕಥೆಗಳೇ. ಈ ಪುಸ್ತಕ ಕೂಡ ಸಾಹಿತ್ಯದ ವಲಯದಲ್ಲಿ ಪ್ರಚಲಿತವಿರುವ ಸದ್ದುಗದ್ದಲ ಎಬ್ಬಿಸಿದಂತಿಲ್ಲ. ಅದೇ ರೀತಿ ತಣ್ಣಗೇ ಮನಸ್ಸನ್ನು ಆವರಿಸುವ ಇಲ್ಲಿನ ಏಳು ಕಥೆಗಳು ನಮ್ಮನ್ನು ನಿಜಕ್ಕೂ ಚಕಿತಗೊಳಿಸುತ್ತವೆ. ಇಲ್ಲಿನ ಕತೆಗಳ ಹಂದರ, ಆಪ್ತ ನಿರೂಪಣೆ, ಜಾಣತನವನ್ನು ಮರೆಮಾಚದ ತಾಂತ್ರಿಕ ಕಲೆಗಾರಿಕೆ, ಸಹಜವಾಗಿ ಒಂದು ವಾತಾವರಣವನ್ನು ತನ್ನ ಕತೆಯ ಸುತ್ತ ನಿರ್ಮಿಸಿಕೊಳ್ಳುವ ಸರಳ ಶೈಲಿ, ಎಲ್ಲವನ್ನೂ ಮೀರಿಸುವ ಮಾನವೀಯ ಕಳಕಳಿಯ ತುಡಿತ ಯಾರನ್ನೂ ಸೆಳೆಯುವಂತಿವೆ. ಈ ಪುಸ್ತಕದ ಹೆಸರೇ ಮುದ್ದಾಗಿದೆ, ಬಾಳೆಗಿಡ ಗೊನೆಹಾಕಿತು! ಕತೆಗಾರ ಬಿ.ಎಂ.ಬಶೀರ್.

ಈ ಸಂಕಲನದ ಮೊದಲ ಕತೆ ಮಸೀದಿಯ ಅಂಗಳ ಬಹುಷಃ ಕತೆಯಾಗುವ ಅಥವಾ ಕಾದಂಬರಿಯಾಗುವ ಒಂದು ಸುಪ್ತ ಉದ್ದೇಶ ಇಟ್ಟುಕೊಂಡೇ ಹೊರಟ ಕಥಾನಕದಂತಿಲ್ಲ. ಬಾಲ್ಯದ ನೆನಪುಗಳ, ಸ್ಮೃತಿಗಳ ಮೆಲುಕಾಟದಂತೆ ತೊಡಗುವ ಈ ಎಲ್ಲ ವಿವರಗಳು ಕ್ರಮೇಣ ಹಲವು ಕತೆಗಳ ಒಡಲಾಗುತ್ತ, ಬೆಳೆಯುತ್ತ ಹೋಗುತ್ತದೆ. ಮಗುವಿನ ಕಣ್ಣುಗಳಿಂದ ಹಿರಿಯರ ಬದುಕಿನ ದುರಂತಗಳನ್ನು ಮುಗ್ಧವಾಗಿ ಕಟ್ಟಿಕೊಡುವ ಕತೆಗಳು ಕನ್ನಡಕ್ಕೆ ಹೊಸತೇನಲ್ಲ. ಆದರೆ ಇಲ್ಲಿ ಅಂಥ ಯೋಜಿತ ಉದ್ದೇಶ, ಕ್ರಿಯೆ ಎರಡೂ ಇಲ್ಲ. ಕತೆಯ ಕೊನೆಗೆ (ಕೊನೆಯೆಂಬುದು ಇದೆಯೆ, ಇಂಥ ಕತೆಗಳಿಗೆ?) ಈ ವಿವರಗಳಿಗೆಲ್ಲ ಒಂದು ಆಕಾರ ನೀಡಲು ಬಶೀರ್ ಪ್ರಯತ್ನಿಸಿದಂತಿದೆ. ಈ ಪ್ರಯತ್ನ ಕೂಡ ಅತ್ಯಂತ ಸಹಜವಾಗಿ, ಅಪ್ರಯತ್ನ ಎಂಬಂತಿರುವುದು ವಿಶೇಷ. ತಮ್ಮ ಪ್ರೀತಿಯ ಆಟದ ಅಂಗಳವಾಗಿದ್ದ, ಮದರಸಾದ ಕಠಿಣ ಕಲಿಕೆಯ ಶಿಸ್ತಿನಿಂದ ಆಚೆ ಒಂದಿಷ್ಟು ಸ್ವಾತಂತ್ರ್ಯದ ಆಕಾಶವನ್ನು ಒದಗಿಸುತ್ತಿದ್ದ ಮೈದಾನವಾಗಿದ್ದ, ಪ್ರೀತಿಯ ನೇರಳೆ ಮರದ ನೆರಳ ತಾವಾಗಿದ್ದ ಜಾಗ ಕ್ರಮೇಣ ಕಬರಸ್ಥಾನವಾಗುವುದನ್ನು, ಅದಕ್ಕಾಗಿ ಸವಿ-ಒಗರು ನೆನಹುಗಳ ಹಲವಾರು ಕಲರವಗಳನ್ನು ಹೊತ್ತ ನೇರಳೆ ಮರವನ್ನೂ ಕಡಿಯಬೇಕಾಗಿ ಬರುವುದನ್ನು, ಒಂದಲ್ಲಾ ಒಂದು ಕಾಲಕ್ಕೆ ಚಟುವಟಿಕೆಯ ಬುಗ್ಗೆಗಳಂತೆ ಅಲ್ಲೇ ಓಡಾಡಿಕೊಂಡಿದ್ದ ಪುಟ್ಟ ಮಕ್ಕಳೇ ಅಲ್ಲಿ ಹೆಣವಾಗಿ ಮಲಗುವುದನ್ನು, ಅದನ್ನು ಉಳಿದವರು ಕಾಣಬೇಕಾಗುವುದನ್ನು ಹಂತ ಹಂತವಾಗಿ ಚಿತ್ರಿಸುತ್ತ ಮಸೀದಿಯ ಅಂಗಳ ಸವಿನೆನಪುಗಳ ಪೊರೆ ಕಳಚಿಕೊಂಡು ವಿಷಾದದ ಕಹಿ ನೆನಪುಗಳ ಮೈತೋರುತ್ತದೆ.

ಉಮ್ಮಾ ಕತೆ ಅತ್ಯಂತ ಕೌಶಲದ, ಕತೆಗಾರರ ಪ್ರಾಮಾಣಿಕ ಪೋಷಣೆ ಪಡೆದ ಒಂದು ಉತ್ತಮ ಕತೆ. ವಸ್ತುವಿನ ಮಟ್ಟಿಗೆ ಅಂಥ ವಿಶೇಷ ಇಲ್ಲಿದೆ ಎನ್ನಲಾಗದಾದರೂ ಇದೇ ಬಗೆಯ ವಸ್ತು ಕನ್ನಡದ ಅನೇಕ ಕಥೆಗಾರರಲ್ಲಿ ಹೇಗೆಲ್ಲ ಅಭಿವ್ಯಕ್ತಿ ಪಡೆದಿದೆ ಎನ್ನುವುದನ್ನು ಗಮನಿಸುವಾಗ ವಿಶೇಷ ಮಹತ್ವ ಪಡೆಯುತ್ತದೆ. ಹೆತ್ತ ಮಗನ ಸಾವಿನ ನಂತರ ಮಗನ ಮಡದಿಯ ವಿಷಯದಲ್ಲಿ ಮಾವನಾದವ ನಡೆದುಕೊಳ್ಳುವ ಬಗೆಯನ್ನು ಕುರಿತೇ ನಮ್ಮಲ್ಲಿ ಹಲವು ಕತೆಗಳು ಬಂದಿವೆ. ಮಗನಿಗಿಂತ ಕಿರಿಯಳಾದ ಎರಡನೆಯ ಹೆಂಡತಿಯನ್ನು ಮನೆತುಂಬಿಸಿಕೊಂಡ ತಂದೆ ಅಥವಾ ಬೆಳೆದ ಮಗನ ಎದುರೇ ಇನ್ನೊಬ್ಬಳನ್ನು ಇಟ್ಟುಕೊಂಡು ಊರೆಲ್ಲ ಗುಲ್ಲು ಮಾಡಿಕೊಂಡ ತಂದೆಯ ಕತೆ - ತಂದೆ ಮಗನ ಸಂಬಂಧವನ್ನು ಒರೆಗೆ ಹಚ್ಚುವುದನ್ನು ಕಂಡಿದ್ದೇವೆ. ಇದೇ ರೀತಿ ತಾಯಿ ಮಗಳ ಅಥವಾ ತಂದೆ ಮಗಳ ನಡುವಿನ ಒಳತೋಟಿಗಳನ್ನು ಮೀಟುವ ಕತೆಗಳೂ ಕನ್ನಡದಲ್ಲಿವೆ. ಇಲ್ಲಿ ಅಪ್ಪ ಎರಡನೆ ಮದುವೆ ಮಾಡಿಕೊಂಡು ಮನೆತುಂಬಿಸಿಕೊಳ್ಳುವ ಹುಡುಗಿ, ಚಿಕ್ಕಮ್ಮ ಎನಿಸಿಕೊಳ್ಳಲು ತಯಾರಾದ ಹುಡುಗಿ, ಮಗನ ಪತ್ನಿಯಾಗಲು ಯೋಗ್ಯಳಾದ ಒಬ್ಬಳು ಕನ್ಯೆ. ಇದು ತೀರಿಕೊಂಡ ತನ್ನ ಪ್ರೀತಿಯ ಉಮ್ಮಾಳ ನೆನಪಿನಲ್ಲಿ ಇನ್ನೂ ಹೊಯ್ದಾಡುತ್ತಿರುವ ಯುವಕನಲ್ಲಿ ಉಂಟು ಮಾಡುವ ತಲ್ಲಣಗಳು, ಅಪ್ಪ ಮಗನ ಸಂಬಂಧದಲ್ಲಿ ಕಾಣಿಸಿಕೊಳ್ಳುವ ಮೌನದ ಗೋಡೆಗಳು, ಅದರ ನಡುವಿನ ಬಿರುಕುಗಳು ಎಲ್ಲ ಕತೆಯಲ್ಲಿ ನವಿರಾಗಿ, ಅತ್ಯಂತ ಸಾವಧಾನವಾಗಿ ಮೂಡಿರುವುದು ಗಮನಾರ್ಹ.

ಬಾಳೆಗಿಡ ಗೊನೆಹಾಕಿತು ಕೊಂಚ ವಾಗ್ ವೈಭವಕ್ಕೆ ಅಗತ್ಯಕ್ಕಿಂತ ಹೆಚ್ಚೇ ಮನಸೋತಿದೆ ಅನಿಸಿದರೂ ಕತೆಯ ಉತ್ತರಾರ್ಧ ಅಗತ್ಯವಾದ ಬಿಗಿಯನ್ನು ಮೈಗೂಡಿಸಿಕೊಂಡು ಮನಸ್ಸಿಗಿಳಿಯುವ ಅಂತ್ಯದಿಂದ ಮನಗೆಲ್ಲುತ್ತದೆ. ಕೆ ಸದಾಶಿವರ ನಲ್ಲಿಯಲ್ಲಿ ನೀರು ಬಂದಿತು ಮಾದರಿ ನಮ್ಮ ಬಹುತೇಕ ಎಲ್ಲ ಯುವ ಕತೆಗಾರರನ್ನು ಸೆಳೆದಿರುವುದು ಕುತೂಹಲಕರ!

ಗೋಡೆ ಕಪಾಟು ಒಂದು ಬಗೆಯ ವಿಡಂಬನೆಯನ್ನೇ ಗುರಿಯಾಗಿರಿಸಿಕೊಂಡಂತೆ ಕಾಣುವ ಕತೆ. ಸಾಹಿತಿಯ ಸಾಹಿತ್ಯ ಮತ್ತು ಬದುಕಿನ ನಡುವಿನ ಕಂದಕವನ್ನು ಲೇವಡಿಯಿಲ್ಲದೆ, ಸಾಧ್ಯವಾದ ಮಟ್ಟಿಗೆ ಕೊಂಕು ಇಲ್ಲದೆ ನೋಡುವ ಕತೆಯಿದು ಎಂದರೂ ಒಟ್ಟಾರೆಯಾಗಿ ಇದು ವಿಡಂಬನೆಯ ಲೇಪದಿಂದ ಮುಕ್ತವಾಗುವುದಿಲ್ಲ.

ರಣರಂಗದಲ್ಲಿ ಮುಸ್ಸಂಜೆ, ತಮಸೋಮಾ ಮತ್ತು ಹಲೋ ಹಲೋ ಕತೆಗಳು ಬಶೀರರಲ್ಲಿರುವ ಕತೆಗಾರನ ನಿಜವಾದ ಅಂತಃಸ್ಸತ್ವವನ್ನು ತೆರೆದು ತೋರುವಂಥ ಕತೆಗಳು. ರಣರಂಗದಲ್ಲಿ ಮುಸ್ಸಂಜೆ ಕತೆಯ ವಸ್ತು ತುಂಬ ಸೂಕ್ಷ್ಮದ್ದು. ಕೊಂಚ ಅವಾಸ್ತವಿಕ ಎನಿಸುವ ಒಂದು ನೆಲೆಯಿಂದಲೇ ಹೊರಟರೂ ಇಲ್ಲಿನ ನಿರೂಪಣೆಯ ಬಿಗಿ, ಮಿತಿಯಲ್ಲಿರುವ ಮಾತುಗಳು, ಕಥಾನಕದ ಹೆಚ್ಚಿನ ಹೊಣೆಯನ್ನು ತಾವೇ ಹೊತ್ತಂತಿರುವ ವಿವರಗಳು ಈ ಕತೆಯನ್ನು ಯಶಸ್ವಿಯಾಗಿಸಿವೆ. ವಸ್ತುವನ್ನು ನಿರ್ವಹಿಸಿದ ರೀತಿ ನಿಜಕ್ಕೂ ಮೆಚ್ಚುಗೆಗೆ ಅರ್ಹವಾಗಿದೆ. ಅದೇ ರೀತಿ ತಮಸೋಮಾದ ವಸ್ತು ಕೂಡ ತುಂಬ ಹೊಸತನದಿಂದ ಕೂಡಿದ್ದು ನಿರೂಪಣೆಯ ಹದ ನಿಜಕ್ಕೂ ಅದ್ಭುತವಾಗಿದೆ. ಇಂಥ ವಸ್ತು ಮತ್ತು ಕಥಾನಕವನ್ನು ಆಕರ್ಷಕವಾಗಿ, ಸಂಯಮದಿಂದ ನಿರ್ವಹಿಸುವುದು ನಿಜಕ್ಕೂ ಒಂದು ರೀತಿಯ ಸವಾಲು. ಇದನ್ನು ಬಶೀರ್ ತುಂಬ ತಾಳ್ಮೆಯಿಂದ ನಿಭಾಯಿಸುತ್ತಾರೆ. ಹಲೊ ಹಲೊ ಕತೆ ಮೇಲ್ನೋಟಕ್ಕೆ ವಿಶೇಷವಾದುದೇನನ್ನೂ ತನ್ನೊಡಲೊಳಗೆ ಇರಿಸಿಕೊಂಡಂತೆ ಕಾಣುವುದಿಲ್ಲವಾದರೂ ಈ ಕತೆ ಎಂಥವರನ್ನೂ ತಲ್ಲಣಗೊಳಿಸಿಬಿಡುವ ಪರಿಯೇ ಒಂದು ಅಚ್ಚರಿ. ಐದೇ ಐದು ಶಬ್ದಗಳ ಕೊನೆಯ ಒಂದು ಸಾಲು ಸಾಧ್ಯವಾಗಿಸುವ ಈ ಪವಾಡಕ್ಕೆ ಬೆರಗಾಗಿದ್ದೇನೆ. ಹಾಗೆಯೇ ಈ ಮೂರೂ ಕತೆಗಳ ಬಗ್ಗೆ ಇಷ್ಟೇ ಎಂದು ಹೇಳಲು ಸಾಧ್ಯವಿಲ್ಲದ ಒಂದು ಕಥಾನಕವನ್ನು ಮೀರಿದ ವ್ಯಾಪ್ತಿಯನ್ನು ಈ ಮೂರೂ ಕಥೆಗಳು ಪಡೆದಿರುವುದು ಗಮನಿಸ ಬೇಕಾದ ಅಂಶವಾಗಿದೆ.

ಬಶೀರ್ ಇನ್ನಷ್ಟು ಕತೆಗಳನ್ನು ಬರೆಯಬೇಕಿತ್ತು ಅನಿಸುವಾಗಲೇ ಸುದ್ದಿಮನೆಯ ಕತೆಗಳ ನಡುವೆ ಅವರು ಕಳೆದೇ ಹೋದಂತಿದ್ದಾರೆ. ಅವರು ಮತ್ತೆ ಕತೆಗಳನ್ನು ಬರೆಯಬೇಕು, ಅವರ ಸಂಕಲನ ಬರಬೇಕು ಅನಿಸುವಂತೆ ಮಾಡುತ್ತದೆ ಈ ಬಾಳೇ ಗಿಡ.

  • ಪುಸ್ತಕ ವಿಮರ್ಶೆ
Ornamental seperator
  • Login or register to post comments
  • 188 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಸ್ತಕ ನಿಧಿ - ಮಾಸ್ತಿ ವೆಂಕಟೇಶ ಅಯ್ಯಂಗಾರರ ಅದ್ಭುತ ಕತೆಗಳು
  • ಪ್ರೇಮದ ಓಲೆ
  • ನನ್ನ ಕಾವ್ಯ
  • ರಾಜಕೀಯ
  • *ಸ್ಪೂರ್ತಿಯ ಲೈಟು*
Syndicate content

ಲೇಖಕರು

narendra's picture

ಪರಿಚಯ

ಕನ್ನಡ ಸಾಹಿತ್ಯದಲ್ಲಿ ಆಸಕ್ತ. ಸುಮಾರು ಮುವ್ವತ್ತು ಕಥೆಗಳನ್ನು ಬರೆದಿದ್ದೇನೆ. ಉತ್ತಮ ಅಭಿರುಚಿಯ ನಾಟಕ, ಸಿನಿಮಾ, ಕಲೆ ಮುಂತಾಗಿ ಇಲ್ಲಿನ ಬದುಕನ್ನು ಸಂಪನ್ನಗೊಳಿಸಬಲ್ಲ ಎಲ್ಲದರಲ್ಲೂ ಆಸಕ್ತಿ ಇದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 17 ಅತಿಥಿಗಳು ಆನ್ಲೈನ್ ಇರುವರು.

ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator