ಕಾರಂತರ ಜೀವಂತ ಪಾತ್ರಗಳು -೫ (೧)
( ಸಂಕಲನ , ಸಂಚಿಕೆ ೩೮ ರಲ್ಲಿ ಪ್ರಕಟವಾದ ಲೇಖನ)
ಈ ಜಗತ್ತಿನ ಬಂಧಕ ಶಕ್ತಿ ಮನುಷ್ಯನ ಪಾಲಿಗೆ ಪ್ರೀತಿಯೊಂದೇ : ಪ್ರೀತಿರಹಿತ ಜಗತ್ತು ,ಕ್ಷಣ ಮಾತ್ರವೂ ಬದುಕಲು ಅರ್ಹವಲ್ಲದ ಭಯಂಕರ ಮರುಭೂಮಿ .ಜಗತ್ತಿಗೆ ಜೀವಿಗಳನ್ನು ತಂದ ಶಕ್ತಿಗಳು ಈ ಜಗತ್ತಿನೊಳಗೆ ಅವುಗಳು ಅಂಟಿಕೊಂಡು ಬಾಳಲು ಅನೇಕ ಉಪಾಯಗಳನ್ನು ಹೆಣೆದಿವೆ .ಅವುಗಳಲ್ಲಿ ಭೌತಿಕ ಸುಖಾಪೇಕ್ಷೆ ಅತ್ಯಂತ ನಿಬಿಡವಾದ ಸೆಳೆತ .ಈ ಶಾರೀರ ನಿರ್ಮಾಣ ಕೌಶಲವನ್ನು ಮೆರೆದ ವಿಶ್ವ ಶಕ್ತಿಗಳು, ಅದರಲ್ಲೇ ಹುದುಗಿಸಿದ ಬಾಳಿನ ಸೆಳೆತವನ್ನು ಅಗಾಧವೆನ್ನುವ ರೀತಿಯಲ್ಲಿ ಸಂಕಲಿಸಿ ,ನಾಳಿನ ದಿನದ ಒಳಿತಿನ ಬಾಳಿಗಾಗಿ ಹಾತೊರೆಯುವಂತೆ ಸಜ್ಜುಗೊಳಿಸಿವೆ . ಇಂದಿನ ಸಾವಿರ ಕಷ್ಟಗಳು , ನಾಳಿನ ಸುಖದ ಕನಸಿನಲ್ಲಿ ಕರಗಿ ನೀರಾಗಿ ಹೋಗುತ್ತವೆ .ಆ ನಾಳಿನ ಸುಖವೆಂಬುದು ಎಂದೆಂದಿಗೂ ಬಾರದೆಯೂ ಹೋಗಬಹುದು ; ಆದರೆ ಅದರ ನಿರೀಕ್ಷೆ ಬಾಳಿನ ದುಃಖವನ್ನು ಸಹ್ಯಗೊಳಿಸುತ್ತದೆಂಬುದಂತೂ ನಿಜ .
ಮನುಷ್ಯನ ಬದುಕಿಗೆ ಮುಖ್ಯ ಆಸರೆ ಅವನ ಕೌಟುಂಬಿಕ ಜಗತ್ತು .ಪ್ರಾಣಿ ಜೀವನದಲ್ಲಿಯೂ - ಕುಟುಂಬದ ಪರಿಕಲ್ಪನೆ ಇರದಿದ್ದರೂ - ಒಂದು ಬಗೆಯ ಕೂಡಿ ಬಾಳುವ ಬಂಧನ ಇದ್ದೇ ಇದೆ .ಆದರೆ ಅದು ಅವುಗಳ ಸ್ವಂತ ಅಭೀಷ್ಟೆಯಂತೆ ಅಲ್ಲ, ಪ್ರಕೃತಿಯ ಆಣತಿಯಂತೆ ಅವುಗಳ ಪ್ರವರ್ತನೆ ಇರುತ್ತದೆ .ಆದರೂ ಪಕ್ಷಿಗಳ ನಡವಳಿಕೆಗಳನ್ನು ಗಮನಿಸಿದರೆ ,ವಿಕಾಸದ ಗತಿಯಲ್ಲಿ ಅವುಗಳ ಸ್ವಂತಿಕೆಯೂ ಗಮನಾರ್ಹವಾಗಿ ಕಂಡು ಬರುತ್ತದೆ . ಇನ್ನೂ ಕೆಳವರ್ಗದ ಕೀಟಗಳಾದರೂ ಜೇನು ನೊಣಗಳು ,ಗೆದ್ದಲು, ಇರುವೆಗಳು ಮುಂತಾದುವುಗಳ ಕೂಡಿ ಬಾಳುವಿಕೆಗೆ ಪ್ರಕೃತಿ ಅವುಗಳೊಳಗೆ ಜೋಡಿಸಿಟ್ಟಿರುವ ಜೈವಿಕ ಹಾರ್ಮೋನುಗಳು ಕಾರಣ . ಹೀಗಿದ್ದರೂ ಒಮ್ಮೊಮ್ಮೆ ಅವುಗಳ ವರ್ತನೆಯನ್ನು ಗಮನಿಸಿದರೆ ಸಮಯ ಪ್ರಜ್ಞೆಯನ್ನು ಅವು ಬಳಸಿಕೊಳ್ಳುತ್ತವೇನೋ ಎಂಬ ಅನುಮಾನ ಕಾಡದಿರದು .ಹಾಗೊಂದು ವೇಳೆ ಅತ್ಯಲ್ಪ ಕಾಲದ ಭಾವನೆ ಅಲ್ಲಿ ಮಿಂಚಿ ಮಾಯವಾದರೂ ಸಹ ಅದೊಂದು ವಿಸ್ಮಯವೇ ಆಗಬಲ್ಲುದು ; ಮನುಷ್ಯನ ಭಾವ ಜೀವನದ ಯಾವ ತಾಳೆಯೂ ಅಲ್ಲಿಗೆ ಹೋಲದಾದರೂ ಭಾವನೆಗಳ ಯಾವುದೋ ಒಂದು ರೂಪದ ಮೂಲ ಕಣ , ಕ್ಷಣದಲ್ಲಿ ಅಲ್ಲಿ ತೋರಿ ಮರೆಯಾದೀತೆನಿಸೀತು .
ಈ ಪ್ರಾಣಿ ವರ್ಗದಿಂದ ಈಗ್ಗೆ ನಲವತ್ತು ಲಕ್ಷ ವರ್ಷಗಳಿಗೂ ಮೊದಲೇ ಮನುಷ್ಯತ್ವವನ್ನು ಪಡೆದು ಮಾರ್ಪಾಟಾದ ಮನುಷ್ಯ ಇಂದಿನ ವರೆಗೆ ಕ್ರಮಿಸಿರುವ ದಾರಿ ತುಂಬಾ ರೋಚಕ ವಾದುದು ಪ್ರಾಣಿಗಳ ವಿಷಯದಲ್ಲಿ ತನ್ನದೇ ಸಾರ್ವಭೌಮತ್ವವನ್ನು ಇಟ್ಟುಕೊಂಡು ತನ್ನ ಆಣತಿಯಂತೆಯೇ ಅವುಗಳ ವರ್ತನೆಯನ್ನು ನಿಯಂತ್ರಿಸುತ್ತಿರುವ ಪ್ರಕೃತಿ ,ಮನುಷ್ಯನಿಗೆ ಮಾತ್ರ ಕೊಟ್ಟಿರುವ ಸ್ವತಂತ್ರ್ಯ ಅಪಾರವಾದುದು . ಅವನ ಬದುಕನ್ನು ಬಹುತೇಕ ತನ್ನ ಹಿಡಿತದಿಂದ ಮುಕ್ತಗೊಳಿಸಿರುವ ನಿಸರ್ಗ ಅವನ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕುಳಿತಿರುವ ಗುಮಾನಿ ಕಾಡದೇ ಇರದು . ಇಡೀ ಜಗತ್ತಿನ ಭಿನ್ನ ಲಿಂಗಿಗಳ ನಡುವೆ , ಋತು ಚಕ್ರಗಳನ್ನೇರ್ಪಡಿಸಿ , ಮಿಲನದಿಂದ ಸಂತಾನೋತ್ಪತ್ತಿಯ ವರೆಗೆ ಎಲ್ಲ ಜೈವಿಕ ಪ್ರಕ್ರಿಯೆಗಳ ಸಂಪೂರ್ಣ ಜವಾಬ್ದಾರಿಯನ್ನು ತನ್ನ ವಶದಲ್ಲಿಟ್ಟುಕೊಂಡಿರುವ ಈ ಅಗಾಧ ಕ್ರಿಯಾತ್ಮಕ ನಿಗೂಢ ಜಗತ್ತು ,ಮನುಷ್ಯನಿಗೆ ಮಾತ್ರ ಅವನ ವಿವೇಚನೆಗೆ , ಅನೇಕ ಮುಖ್ಯ ವಿಷಯಗಳನ್ನು ಬಿಟ್ಟು ಕೊಟ್ಟಿರುವುದು , ಈ ವಿಚಿತ್ರ ಪ್ರಾಣಿಯ ಮೇಲೆ ಅದು ಇಟ್ಟಿರುವ ನಂಬಿಕೆಯ ದ್ಯೋತಕ .
ಪ್ರಕೃತಿ ಪ್ರಾಕೃತಿಕವಾಗಿಯೇ ಕೊಟ್ಟ ಈ ಕೊಡುಗೆಯನ್ನು , ಮನುಷ್ಯ ಪ್ರಾಣಿ ಬಳಸಿಕೊಂಡುದಾದರೂ ಹೇಗೆ ? ನಾಗರಿಕನಾಗುತ್ತಾ ಆಧುನಿಕನೂ ಆಗುತ್ತಿರುವ ಮನುಷ್ಯ ತನ್ನ ಬಾಳನ್ನು ಕಟ್ಟಿಕೊಳ್ಳುತ್ತಿರುವ ರೀತಿ , ನಿಸರ್ಗ ಅವನ ಮೇಲಿಟ್ಟಿರುವ ನಂಬಿಕೆಗೆ ಅನುಗುಣವಾಗಿದೆಯೇ ? ಅಥವಾ ಪ್ರಕೃತಿಯ ಮೂಲ ತತ್ವವಾದ ’ ಬದುಕು , ಬದುಕಲು ಬಿಡು’ ಎಂಬ ಸಿದ್ದಾಂತಕ್ಕೆ ವಿರುದ್ದವಾಗಿದೆಯೇ ?ಎಂಬುದನ್ನು ವಿವೇಚಿಸುವುದು ಅವಶ್ಯಕವಾದುದು .
ಮನುಷ್ಯನ ಮೂಲ ಸ್ವಭಾವವಾದ ಮತ್ತು ಅವನ ಬಾಳಿಗೆ ; ಬಾಳಿನ ಮುಂದುವರಿಕೆಗೆ ಅತ್ಯಂತ ಅಗತ್ಯವಾದ ಕಾಮವನ್ನು ಅವನು ನಿರ್ವಹಿಸುತ್ತಿರುವ ರೀತಿಗಳನ್ನು ವಿಶ್ಲೇಷಿಸುವುದರಲ್ಲಿ ಕಾರಂತರದು ನಿರ್ವಿಕಾರವಾದ ಮನಸ್ಸು .ಅವರ ’ನಂಬಿದವರ ನಾಕ ನರಕ’ ’ಧರ್ಮರಾಯನ ಸಂಸಾರ’ ’ಮೂಕಜ್ಜಿಯ ಕನಸುಗಳು ’ ಮತ್ತು ’ಮರಳಿ ಮಣ್ಣಿಗೆ’ ಇವುಗಳಲ್ಲಿ ಬಹು ಮುಖ್ಯವಾಗಿ ಈ ವಿಷಯಗಳ ಮುಕ್ತ ಸಂವಾದವನ್ನು ಅಲ್ಲಿನ ಜೀವಂತ ಪಾತ್ರಗಳ ಮೂಲಕ ನಮಗೆ ಕಟ್ಟಿ ಕೊಡುತ್ತಾರೆ .
ಪ್ರಪಂಚದ ವಿವಿಧ ಕಡೆಗಳಲ್ಲಿ ವಿಕಾಸವಾದ ಮನುಷ್ಯ ಜೀವಿ , ಅಲ್ಲಿನ ಪರಿಸರ ಮತ್ತು ಎದುರಾದ ಸನ್ನಿವೇಶಗಳಿಗನುಗುಣವಾಗಿ , ಅನೇಕ ರೀತಿಯ ಜೀವನ ಪದ್ದತಿಗಳನ್ನು ಅಳವಡಿಸಿಕೊಳ್ಳುತ್ತಾ ಬಂದುದು ಈಗ ಇತಿಹಾಸ .ಈ ವಿಷಯವಾಗಿ ಕರಾವಳಿ ಕರ್ನಾಟಕದ ಇಪ್ಪತ್ತನೆಯ ಶತಮಾನದ ಆರಂಭ ಕಾಲದಲ್ಲಿ ಅಲ್ಲಿ ಬಾಳಿದ ಜನ ಜೀವನದ ಪದ್ದತಿಯನ್ನು ಅವರ ಮನಃಸ್ಥಿತಿಯನ್ನು ’ನಂಬಿದವರ ನಾಕ ನರಕ’ ಯಶಸ್ವಿಯಾಗಿ ಕಟ್ಟಿಕೊಡುತ್ತದೆ .’ನಂಬಿದವ ನಾಕ ನರಕ’ ದ ಮುನ್ನುಡಿಯಲ್ಲಿಯೇ ಕಾರಂತರು ಕಾದಂಬರಿಯಲ್ಲಿ ಬರುವ ಇಬ್ಬರು ಸೋದರಿಯರ ನಂಬಿಕೆಗಳು "ನನ್ನವೇನಲ್ಲ" ಎಂದು ಸ್ಪಷ್ಟಪಡಿಸುತ್ತಾರೆ.ಆದರೆ "ಅನ್ಯರ ನಂಬಿಕೆಗಳನ್ನು ಅರಿಯಲೆತ್ನಿಸದೆ ಹೋದರೆ ಆ ಅನ್ಯರ ಬದುಕಿನ ಅರ್ಥ ನಮಗಾಗದು " ಎಂದು ವಿವರಣೆಯನ್ನೂ ಕೊಡುತ್ತಾರೆ .ಇಡೀ ಕಾದಂಬರಿಯನ್ನು ಗಮನಿಸಿದಾಗ ಈ ಅನ್ಯರ ನಂಬಿಕೆಗಳ ವಿಷಯದಲ್ಲಿ ಕಾರಂತರು ಹೊಂದುವ ತಾದಾತ್ಮ್ಯ ಭಾವ, ಎಷ್ಟರ ಮಟ್ಟಿಗೆ ಪರಕಾಯ ಪ್ರವೇಶ ಪಡೆದಿದೆ ಎಂಬುದು ಆಶ್ಚರ್ಯಕರವಾಗಿ ಗೋಚರಿಸುತ್ತದೆ . ಅಲ್ಲಿನ ಸೋದರಿಯರು ಅನುಭವಿಸುವ ಸಾಂಪ್ರದಾಯಿಕ ಶ್ರದ್ದೆಯ ಮಾನಸಿಕ ತೊಳಲಾಟಗಳು; ಕಾರಂತರ ಕರುಳ ತೊಳಲಾಟದೊಡನೆ ನೇರವಾಗಿ ಮಿಳಿತವಾದರೀತಿಯಲ್ಲಿ ಸಾಂದ್ರವಾಗಿ ಭಾವುಕ ಶ್ರದ್ದೆಯೊಡನೆ ಹೊರ ಹೊಮ್ಮುತ್ತವೆ .

- Login or register to post comments
- 155 hits
- Email this page





RSS: