ಕಾರಂತರ ಜೀವಂತ ಪಾತ್ರಗಳು -೫ (೨)
ಸಾಮಾನ್ಯವಾಗಿ ವಿಭಿನ್ನ ಸನ್ನಿವೇಶಗಳಲ್ಲಿ ಹುಟ್ಟಿ ಬೆಳೆದು ವಿಭಿನ್ನ ಮನಃಸ್ಥಿತಿ , ಅಭಿರುಚಿಗಳನ್ನು ಹೊಂದಿರುವ ಎರಡು ಜೀವಗಳು , ದಾಂಪತ್ಯದ ಕಾರಣಕ್ಕೆ ಹೊಂದಿ ಬಾಳುವುದು ಅನಿವಾರ್ಯವೇ ಆದರೂ , ಪಸ್ಪರ ತ್ಯಾಗ ಅನುರಾಗಗಳಿಂದ ಬಾಳನ್ನು ಅನೇಕರು ಸಹ್ಯಗೊಳಿಸಿಕೊಳ್ಳುತ್ತಾರೆ . ಆದರೆ ಈ ಪುಣ್ಯ ಎಲ್ಲರದೂ ಅಲ್ಲ . ಪ್ರಪಂಚದ ಬಹಳಷ್ಟು ಜನರ ಜೀವನ ಇಮ್ಮನಸ್ಸಿನದು ಆಗಿರುವುದೇ ದಾಂಪತ್ಯದ ಭ್ರಮ ನಿರಸನಕ್ಕೆ ಕಾರಣ .ಅದೂ ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆದ ವಾಗ್ದೇವಿಯಂತಹವರಿಗೆ ತನ್ನರಿವಿಗೇ ಬಾರದೆ ಅನ್ಯ ಪಂಗಡದ ವ್ಯಕ್ತಿಯನ್ನು ಕೈ ಹಿಡಿದುದು ನುಂಗಲಾರದ ತುತ್ತಾಗುತ್ತದೆ .
ನಾಗೇಂದ್ರನ ಕೈ ಹಿಡಿದ ವಾಗ್ದೇವಿ , ತಾನು ಬೆಳೆದು ಬಂದು ಪ್ರಭಾವಿತಳಾದ ಶ್ರದ್ದಾಮಯ ವಾತಾವರಣದಿಂದ , ಒಮ್ಮೆಲೇ ಗತ್ಯಂತರವಿಲ್ಲದೆ , ಅನ್ಯ ವ್ಯವಸ್ಥೆಗೆ ಪಾದಾರ್ಪಣ ಮಾಡುತ್ತಾಳೆ. ವಾಗ್ದೇವಿಯ ತಾಯಿ ಮಹಾಲಕ್ಷ್ಮಿಯ ಪಾಲಿಗೆ ಇದು ಮರಣದ ಹೊರತು ಪರಿಹಾರ ಕಾಣದ ವಿಷಯವಾಗಿ ,ಅವಳ ಸಾಂಪ್ರದಾಯಶೀಲ ಮನಸ್ಸು ಕಮರಿ ಹೋಗಿ , ಸಾವೇ ಗತಿಯಾಗುತ್ತದೆ . ಆದರೆ ವಾಗ್ದೇವಿಗೆ ಇದು ನಂಜನ್ನು ಕುಡಿದೂ ಬದುಕಬೇಕಾದ ವಿಷಮ ಸನ್ನಿವೇಶ .ಅಲ್ಲಿ ಅವಳು ತಳೆಯುವ ನಿಲುವು ಕಾರಂತರು ಕಟ್ಟಿ ಕೊಡುವ ಪಾತ್ರಗಳಲ್ಲಿಯೇ ತುಂಬಾ ವಿಶಿಷ್ಟವಾದುದು. ವಾಗ್ದೇವಿಯನ್ನು ಕೆಲವೇ ಶಬ್ದಗಳಲ್ಲಿಜೀವಂತವಾಗಿ ನಮಗೆ ಕಟ್ಟಿ ಕೊಡುವ ಕಾರಂತರ ಶೈಲಿಯನ್ನು ಇಲ್ಲಿ ಗಮನಿಸಬಹುದು ; ಅದೂ ಸಹ ಅವಳನ್ನು ಗೆದ್ದಿದ್ದೇನೆಂದು ಭಾವಿಸಿ ಮೂರ್ಖನಾದ ಅವಳ ಗಂಡ ನಾಗೇಂದ್ರನ ದೃಷ್ಟಿಯಲ್ಲಿ , ’ ವಾಗ್ದೇವಿಯ ದೀನವಾದ ಆದರೂ ಶ್ರೀಮಂತ , ಲಕ್ಷಣವಂತ , ಚೆಲುವುದುಂಬಿದ ಮುಖವನ್ನು ಕಂಡಾಗಲೆಲ್ಲ, ಇಂಥ ಮಡದಿ ದೊರಕಲು ಪೂರ್ವ ಜನ್ಮದ ಪುಣ್ಯ ಬೇಕು ಎಂಬ ಭಾವನೆ ಬರುತ್ತಿತ್ತು . ಆ ಮುಖದಲ್ಲಿ ಒಂದಿಷ್ಟು ಕೋಪ ಸುಳಿದೀತೆನಿಸುವುದಿಲ್ಲ.ನಗುವಿಲ್ಲದಿದ್ದರೂ ಲೋಕದ ನೋವನ್ನೆಲ್ಲ ನುಂಗಿಯೂ ಗಂಭೀರವಾಗಿರಬಲ್ಲ ಮುಖವದು ’ ಇಂಥ ಕಾರಂತರ ಪರ ಮನಸ್ಸಿನ ಪ್ರವೇಶದ ಗುಣವೇ ಅವರ ಪಾತ್ರಗಳನ್ನು ಜೀವಂತಗೊಳಿಸುವ ಸಂಜೀವನ ಮಂತ್ರ ದಂಡ .
’ನಂಬಿದವ ನಾಕ ನರಕ ’ ದ ಸತ್ಯಭಾಮೆಯ ಬದುಕು ಇನ್ನೊಂದು ದುರಂತದ ಅಗ್ನಿಕುಂಡ .ಕಾರಂತರು ಜೀವ ತುಂಬಿದ ಪಾತ್ರಗಳಲ್ಲಿಯೇ , ಅತ್ಯಂತ ಜಟಿಲವಾದ ಬರಹಗಾರನೊಬ್ಬನ ಕ್ರಿಯಾಶೀಲತೆಗೆ ಸವಾಲು ಎಸೆಯುವ ರೀತಿಯ ಪಾತ್ರವದು . ಅಂತಹ ಸಂಕೀರ್ಣ ಮಾನಸಿಕ ಸ್ಥಿತಿಗಳನ್ನು ಅತ್ಯಂತ ಯಶಸ್ವಿಯಾಗಿ ಕಾರಂತರ ಲೇಖನಿ ನಿಭಾಯಿಸುತ್ತದೆ . ನಿಸರ್ಗ ಹೆಣ್ಣು ಜೀವಗಳನ್ನು ನಿರ್ಮಿಸುವುದು ಗಂಡೀಗಿಂತ ತುಂಬಾ ವಿಭಿನ್ನವಾಗಿ ; ಎರಡರ ಭಾವನಾತ್ಮಕ ಜಗತ್ತು ತೀರಾ ಪ್ರತ್ಯೇಕ .ಕೆಲವೇ ಅಪವಾದಗಳನ್ನು ಬಿಟ್ಟರೆ ಹೆಣ್ಣಿಗಿಂತಾ ಗಂಡು ಬೇಜವಾಬ್ದಾರಿ ಪ್ರಾಣಿ .ಹೆರಿಗೆ, ಬಾಣಂತನ ,ಶಿಶು ಪೋಷಣೆ ಇತ್ಯಾದಿ ಜವಾಬ್ದಾರಿಗಳಲ್ಲಿ ಹೆಣ್ಣು ತೊಳಲಾಡುತ್ತಿರುವಾಗ, ಈ ರೀತಿಯ ಯಾವ ಜವಾಬ್ದಾರಿಯೂ ಇಲ್ಲದ ಗಂಡು ,ಅನೇಕ ಸಾರಿ ನಡೆಸಿದ್ದು ಬೇಕಾ ಬಿಟ್ಟಿ ಜೀವನವನ್ನು . ಇಂತಹ ಗಂಡಿನ ಮನೋಭಾವವನ್ನು ನೋಡಬೇಕಾದರೆ ಅಂತಹ ಒಂದು ಮಾದರಿಯನ್ನು ಸತ್ಯಳ ಗಂಡ ಸುಬ್ರಾಯನಲ್ಲಿ ಧಾರಾಳವಾಗಿ ನೋಡಬಹುದು .
ಸುಬ್ರಾಯನಂತಹ ಗಂಡಸಿಗೆ ಹೆಂಡತಿ ಎಂಬುವವಳು , ಮನೆಯಲ್ಲಿ ತನ್ನ ಒಂದು ಸ್ವತ್ತಾಗಿ , ದುಡಿಯುವ ಎತ್ತಾಗಿ ಮನೆಯ ಯಾವುದೋ ಮೂಲೆಯಲ್ಲಿ ಇರಬಹುದಾದ ಒಂದು ವಸ್ತು . ಅವಳಿಗೆ ಆಸೆ , ಆಕಾಂಕ್ಷೆ , ಭಾವನೆಗಳು ಇತ್ಯಾದಿ ಯಾವುದು ಇರುವುದೂ ಸಹ ಅಂಥವರ ಅರಿವಿಗೇ ಬಾರದ ವಿಚಾರ .ಇಂಥಹದನ್ನೂ ಸಹ ಸಹಿಸುವ ಗುಣವನ್ನು ,ಆ ಕಾಲದ ಹೆಣ್ಣುಗಳು ಕಲಿತದ್ದು ಇನ್ನೊಂದು ವಿಶೇಷ .ಕನಿಷ್ಟ ಪಕ್ಷ ಗಂಡನೆಂಬುವವನ ಸಾಮಿಪ್ಯವಾದರೂ ಇದ್ದರೆ ,ಅವನ ಮೃಗೀಯ ಕಲ್ಪನೆಗಳನ್ನೂ ಸಹಿಸಿ , ಬದುಕುವ ಕಲೆ ಅವರಿಗೆ ತಿಳಿದಿರುತ್ತಿತ್ತು .ಆದರೆ ಸತ್ಯಳ ಪಾಲಿಗೆ ಅದೂ ಇರಲಿಲ್ಲ .ಮುಂಬೈಯಲ್ಲೋ, ಮತ್ತೆಲ್ಲೋ ವಿಳಾಸವೇ ಇಲ್ಲದ , ಗಂಡನೆಂಬ ಮಹಾಶಯನ ಮುಖದರ್ಶನ ದೊರೆಯುತ್ತಿದ್ದುದೇ ವರ್ಷ ಎರಡು ವರ್ಷಗಳಿಗೊಮ್ಮೆ . ಆಗ ಮಾತ್ರ ಅವನು ಸಾಕ್ಷಾತ್ ಪ್ರೇಮಿಯ ಸೋಗು ಹಾಕುತ್ತಿದ್ದ .ನಂತರ ವರ್ಷಾನುಗಟ್ಟಲೆ ನಾಪತ್ತೆ :ಇನ್ನೆಲ್ಲೋ ವಿಲಾಸ ಜೀವನ , ಇಂಥವನನ್ನು ಕಟ್ಟಿಕೊಂಡವಳ ಗತಿ ಏನಾಗಬಾರದು ?
ಇಂಥದನ್ನೂ ಸತ್ಯ ಸಹಿಸಿಕೊಂಡಿದ್ದಳು ,ಅದೂ ನಾಳಿನ ಬಾಳಿಗಾಗಿ . ದುರದೃಷ್ಟಕ್ಕೆ ಅವಳಿಗೆ ಆ ನಾಳಿನ ಬಾಳು ಎಂಬುದು ಎಂದೂ ಬರಲೇ ಇಲ್ಲ . ಅವಳಿಗೆ ಹುಟ್ಟಿದ ಮಗು ಆರು ಬೆರಳಿನ , ನೀಲಗಣ್ಣಿನ ವಿಶೇಷವಾಗಿ ಎಲ್ಲರ ಗಮನ ಸೆಳೆಯುವ ರೀತಿಯದು .ಅಂಥ ಲಕ್ಷಣಗಳಿದ್ದುದು ವೈದೇಹಿಯ ಗಂಡ ನಾಗೇಂದ್ರನಲ್ಲಿ ಮಾತ್ರ .ವಿಧಿ ನಾಗೇಂದ್ರನನ್ನು ಸತ್ಯಳ ಮನೆಯಲ್ಲಿ ಒಂದು ದಿನ ಉಳಿಯುವಂತೆ ಮಾಡಿದುದು ಇನ್ನೊಂದು ದುರಂತ .(ವಿಚಿತ್ರವೆಂದರೆ ನಾಗೇಂದ್ರನ ಪೂರ್ವಿಕರೂ ,ಸತ್ಯಳ ಗಂಡ ಸುಬ್ರಾಯನ ಪೂರ್ವಿಕರೂ ಒಂದೇ ಬುಡದವರಾಗಿದ್ದು ,ಯಾವುದೋ ತಳೀಗುಣದ ಪ್ರಭಾವದಿಂದ ಈ ರೀತಿ ಘಟಿಸಿದ್ದು ) ಇದಾವುದನ್ನೂ ಅರಿಯದ ಸತ್ಯ ,ತಾನೆಣಿಸದ ರೀತಿಯಲ್ಲಿ ಅಪವಾದಕ್ಕೆ ಗುರಿಯಾಗುತ್ತಾಳೆ .ಅವಳ ಬದುಕು ತಾನು ಮಾಡದ ತಪ್ಪಿಗಾಗಿ ಅಗ್ನಿ ಕುಂಡವಾಗುತ್ತದೆ! ಅವಳ ಪ್ರೀತಿಯ ಅತ್ತೆಯೇ ಅವಳನ್ನು ಸಂಶಯಿಸುತ್ತಾಳೆ ! ಆಗ ಅವಳು ಹಲ್ಲು ಕಚ್ಚಿ ಹೇಳುವ ಮಾತು " ನನ್ನ ಹೆಸರೂ ಸತ್ಯ , ನನ್ನ ಬಾಳೂ ಸತ್ಯ ,ನನ್ನ ಮೇಲೆ ಅಪವಾದ ತಂದವರು ಒಂದು ದಿನ ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಂಡಾರು" ಇಂತಹ ಸನ್ನಿವೇಶಗಳಿಗೆ ರೋಸಿ ಮಾನಸಿಕ ರೋಗಿಯಂತಾಗುವ ಸತ್ಯ ,ಆತ್ಮ ಹತ್ಯೆಯ ಆಲೋಚನೆಗೂ ಇಂಬು ಕೊಡುತ್ತಾಳೆ . ಇಷ್ಟಾದರೂ ಗಂಡನೆಂಬ ಪ್ರಾಣಿಗೆ ತಾನು ಮಾಡಿದ್ದು ತಪ್ಪು ಎಂಬ ಅರಿವೇ ಇರುವುದಿಲ್ಲ .ಅವಳನ್ನು ದೂರ ಮಾಡಲು ಈ ಒಂದು ನೆಪ ಅವನಿಗೆ ಸಾಕಾಗುತ್ತದೆ .
ಇಂಥ ಸತ್ಯಳ ಬಾಳನ್ನು ದಡಕ್ಕೆ ಸೇರಿಸಲು ಕಾರಂತರು ಸಮಾಜದ ಒಪ್ಪಿತ ನಿಯಮಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಾರೆ .ಆದರ್ಶವಾದಿಯಾದ ವಿನಾಯಕನ ಜೊತೆಗೆ ಸಹ ಬಾಳ್ವೆಗೆ ಸಿದ್ದಳಾದ ಸತ್ಯಭಾಮೆ , ಎಲ್ಲರನ್ನೂ ಎಲ್ಲವನ್ನೂ ತೊರೆದು ,ಹೇಳದೆ ಕೇಳದೆ ಮುಂಬೈಗೆ ಹೊರಟು ಹೋಗಿ ಅವನನ್ನು ಮದುವೆಯಾಗುತ್ತಾಳೆ .ಸುಬ್ರಾಯನಂತಹ ಲೋಲುಪ್ತ ಗಂಡನಿಗೆ ,ತನ್ನ ಕೈಗೆ ಬಂದ ಅಲಭ್ಯ ರತ್ನವನ್ನು ಗುರುತಿಸುವ ಯೋಗ್ಯತೆಯೂ ಇಲ್ಲದ ಮನಃಸ್ಥಿತಿಯಿಂದಾಗಿ , ಸರಿಯಾದ ಶಾಸ್ತಿ , ಪ್ರಾಯಶ್ಚಿತ್ತ ಎರಡೂ ಆಗುತ್ತವೆ .ತಂಗಿಯ ನಡವಳಿಕೆಯನ್ನು ಸಮರ್ಥಿಸುವವನು ಸತ್ಯಳ ಅಣ್ಣ ರಾಮಕೃಷ್ಣನೆಂಬ ವಿಶಾಲ ಹೃದಯಿ ಮಾತ್ರ .

- Login or register to post comments
- 127 hits
- Email this page





RSS: