ಕಾರಂತರ ಜೀವಂತ ಪಾತ್ರಗಳು -೫ (೩)
ಇಷ್ಟಲ್ಲದೆ ’ ನಂಬಿದವರ ನಾಕ ನರಕ’ ದ ಎಲ್ಲ ಪಾತ್ರಗಳು ಜೀವದುಂಬಿ ನಿಲ್ಲುತ್ತವೆ .ವಾಗ್ದೇವಿಯ ತಂದೆ - ಬಡತನವೇ ಸಾಕಾರವೆತ್ತಂತಿರುವ ಶಂಕರಯ್ಯ ,ಸತ್ಯಭಾಮೆಯ ತಂದೆ ಸೋಮೇಶ್ವರಯ್ಯ, ಶಂಕರಯ್ಯನ ನೊಂದಸಂಸಾರಕ್ಕೆ ಅನನ್ಯವಾಗಿ ನೆರವಾಗಿ, ಅವನ ಬಡ ಮಕ್ಕಳನ್ನೂ ಮನೆ ತುಂಬಿಸಿಕೊಳ್ಳುವ ಎಂಭತ್ತರ ವೃದ್ದೆ ಸಿಂಗಾರಮ್ಮ , ಅತ್ಯಂತ ವಿಚಾರಶೀಲ ಮನಸ್ಸಿನ ಸತ್ಯಳ ಅಣ್ಣ ರಾಮಕೄಷ್ಣ , ಹೀಗೆ ಒಂದೊಂದೂ ಸಹ ಮರೆಯಲಾಗದ ಮನುಷ್ಯತ್ವದಿಂದ ಮೈದುಂಬಿರುವ ಪಾತ್ರಗಳು . ಇಡೀ ಕಾದಂಬರಿ ಓದುಗನ ಮನಸ್ಸನ್ನೇ ಮೃದುವಾಗಿಸಿ , ಸಂಸ್ಕರಿಸುವ ಗುಣವನ್ನು ಹೊಂದಿದೆ .
’ಧರ್ಮರಾಯನ ಸಂಸಾರ ’ ಹೆಣ್ಣಿನ ಸಂಕಷ್ಟಗಳ ಇನ್ನೊಂದು ರೂಪವನ್ನು ಅನನ್ಯವಾಗಿ ಚಿತ್ರಿಸುತ್ತದೆ .ಇಲ್ಲಿಯೂ ವಿಷಮ ದಾಂಪತ್ಯದ ಪರಿಣಾಮಗಳು ; ಗಂಡಿನ ಪಾಳೇಗಾರಿಕೆಯ ಮನೋಭಾವದಿಂದಾಗಿ ಅಸಹಾಯಕಳಾದ ಹೆಣ್ಣು ಚಿತ್ತವಿಕಾರಕ್ಕೊಳಗಾಗುವುದು , ಮುಂತಾದ ದಾಂಪತ್ಯದ ಸಮಸ್ಯೆಗಳ ಸರಮಾಲೆಯೇ ಇದೆ .
ನಾರಾಯಣ ಹೆಬ್ಬಾರರು ಶ್ರೀಮಂತರು ಮಾತ್ರವಲ್ಲ ನಿಷ್ಟುರ ವ್ಯವಹಾರಿ ,ವ್ಯವಹಾರದ ವಿಷಯದಲ್ಲಿ ಹೆಣ್ಣು ತಲೆಹಾಕುವುದಿರಲಿ ; ಇಣುಕಿ ನೋಡುವುದನ್ನೂ ಸಹಿಸದ ಊಳಿಗಮಾನ್ಯದ ಪಳೆಯುಳಿಕೆ ಅವರು .ಅವರ ಜೀವನದಲ್ಲಿ ಒನಪು ಒಯ್ಯಾರಗಳನ್ನು ತುಂಬಿದ ಚಂದು ಸಹ ಅವರ ನಿಷ್ಟುರತೆಗೆ ಹೆದರಿ ನಡುಗುತ್ತಾಳೆ .ಇನ್ನು ಕೈ ಹಿಡಿದ ಹೆಂಡತಿ ಮಹಾಲಕ್ಷ್ಮಿಯನ್ನು ಕೇಳುವವರಿ ಯಾರು ? ಎಷ್ಟೆಂದರೂ ನಾಲ್ಕು ಗೋಡೆಯ ನಡುವಣ ತೊತ್ತು ತಾನೇ ಕೈ ಹಿಡಿದವಳು . ಇಲ್ಲಿ ಚಂದು ಸಾಮಾನ್ಯ ಬೆಲೆವೆಣ್ಣಲ್ಲ; ಅವಳ ಮನಸ್ಸು ಬಹಳೇ ಎತ್ತರದ್ದು . ಅವಳ ಪಾಲಿಗೆ ಮಹಾಲಕ್ಷ್ಮಿಯಮ್ಮ ಅವಳ ಒಡಹುಟ್ಟಿದಳಿಗಿಂತ ಹೆಚ್ಚು . ಮಹಾಲಕ್ಷ್ಮಿಯಾದರೂ ಚಂದುವಿನ ಅಂತರಂಗವನ್ನು ಸರಿಯಾಗಿ ಗ್ರಹಿಸಿದವಳು . ಆದುದರಿಂದ ಈ ಎರಡು ಹೆಣ್ಣು ಜೀವಗಳ ನಿಷ್ಕಳಂಕ ಸ್ನೇಹ ವಿಶೇಷ ಅನುಭೂತಿಯಿಂದ ಕೂಡಿದುದು .
ನಾಯಕಸಾನಿಯಾದ ಚಂದುವಿಗೆ ಗೃಹಿಣಿಯಾದ ಮಹಾಲಕ್ಷ್ಮಿಯಂತಹವರ ಗಮನಕ್ಕೆ ಬಾರದ ಹೊರ ಜಗತ್ತಿನ ಅನೇಕ ವಿಷಯಗಳು ಗೊತ್ತಿರುತ್ತವೆ .ಆದುದರಿಂದಲೇ ಮಹಾಲಕ್ಶ್ಮಿಯ ಮುದ್ದಿನ ಮಗಳು ಸರಸ್ವತಿಯ ಮದುವೆ ಮಹಾಬಲನೊಡನೆ ಎಂದು ಗೊತ್ತಾಗುತ್ತಲೇ ಚಂದು ಮಮ್ಮಲ ಮರುಗತೊಡಗುತ್ತಾಳೆ . ಚಂದುವಿನ ಹತ್ತಿರದವರೂ ಚಂದುವಿನ ಕುಲದವರೂ ಆದ ಲಕ್ಷ್ಮಿ ಮತ್ತು ರಮಣಿಯರು , ಮಹಾಬಲನ ಪುರಾಣವನ್ನು ಬಿಚ್ಚಿಟ್ಟಾಗ ಅಂತಹ ಹದ್ದಿನ ಕೈಗೆ ಗಿಳಿಯಂತಹ ಸರಸ್ವತಿಯನ್ನು ಒಪ್ಪಿಸುವುದು ಅವಳ ಪಾಲಿಗೆ ಬೇಗುದಿಯ ಕೆಲಸವಾಗುತ್ತದೆ . ಆದರೆ ನಾರಾಯಣ ಹೆಬ್ಬಾರರಲ್ಲಿ ಈ ವಿಷಯವನ್ನು ತಿಳಿಸಿದರೆ ನಡೆಯುವ ಪರಿಣಾಮಗಳ ಬಗ್ಗೆ ಭಯಗ್ರಸ್ತೆಯಾಗುತ್ತಾಳೆ . ಆದರೂ ಮನಸ್ಸು ತಡೆಯದೆ ಮಹಾಲಕ್ಷ್ಮಿಯಮ್ಮನವರ ಮುಂದೆ ವಿಷಯವನ್ನು ತಿಳಿಸಿ ಹೇಗಾದರೂ ಮದುವೆಯನ್ನು ತಡೆಯಲು ಸೂಚಿಸುತ್ತಾಳೆ . ವಿಷಯವನ್ನು ತಿಳಿದು ಹೌಹಾರಿದ ಮಹಾಲಕ್ಷ್ಮಿ ಗಂಡನೊಡನೆ ಸೂಕ್ಷ್ಮವಾಗಿ ವಿಷಯವನ್ನು ತಿಳಿಸಲು ಪ್ರಯತ್ನಿಸಿದರೆ ಅದಕ್ಕೆ ಸಿಗುವ ಉತ್ತರ ಮಾತ್ರ " ಹೆಣ್ಣು ಅವಳ ಜಾಗದಲ್ಲಿ ಮಾತ್ರ ಅವಳು ಇರಬೇಕು , ಇಲ್ಲದ ಸಲ್ಲದ ಉಪದ್ವ್ಯಾಪ ಮಾಡುವುದಕ್ಕಲ್ಲ " ಎಂಬ ಉದ್ದಟ ಉತ್ತರ . ಹೆತ್ತ ಮಗಳ ಮದುವೆಯಂತಹ ಮುಖ್ಯ ಸಂದರ್ಭಗಳಲ್ಲೂ ಮಾತಾಡಲು ಬಾಯಿಲ್ಲದ ಹೆಣ್ಣು ಜನ್ಮಕ್ಕೆ ಮಹಾಲಕ್ಷ್ಮಿ ಮನಸ್ಸಿನಲಿಯೇ ಧಿಕ್ಕಾರ ಹಾಕುತ್ತಾಳೆ .ಪರಿಣಾಮ ಮಹಾಲಕ್ಷ್ಮಿಯ ಮೈಮೇಲೆ ಜಕ್ಕಣಿ ಬರುವುದು . ಆಗ ಮಾತ್ರ ಮಹಾಲಕ್ಷ್ಮಿಗೆ ಯಾರೆಂದರೆ ಯಾರೂ ಲೆಕ್ಕವಲ್ಲ . ನಾರಾಯಣ ಹೆಬ್ಬಾರರೂ ಹೆದರಿ ನಡುಗತಕ್ಕದ್ದೇ .
ಅತ್ಯಂತ ಮುಗ್ಧಳಾಗಿ ತಾಯಿಯ ನೆರಳಲ್ಲಿ ಬೆಳೆದ ಸರಸ್ವತಿಗೆ ತಾನು ಬಂದು ಸೇರಿದ ಜಾಗ ಮಾತ್ರ ಹುಲಿಯ ಗುಹೆ ಎಂಬುದು ತಿಳಿಯಲು ತಡವಾಗಲಿಲ್ಲ .ತಾನು ಸೇರಿರುವ ಜಾಗ , ಜನ ವಿದೂರವಾದ ದಟ್ಟಡವಿ ಎಂಬುದು ಅವಳ ಭಯ ಬೆಳೆಯಲು ಕಾರಣವಾಗುತ್ತದೆ .ಮದುವೆಯಾಗಿ ಕೈ ಹಿಡಿದ ಗಂಡನ ವಿಕೃತ ಮನಸ್ಸು ಅವಳಲ್ಲಿ ಅಸಹ್ಯ ಹುಟ್ಟಿಸುತ್ತದೆ ; ಅವನ ಕ್ರೌರ್ಯ ಅವಳನ್ನು ಭೀತಿಯಿಂದ ತತ್ತರಿಸುವಂತೆ ಮಾಡುತ್ತದೆ . ನಡೆಯುವ ಒಂದೊಂದು ಘಟನೆಗಳು - ನಾಗಿಯ ಸಾವು ,ಪಶುಗಳ ಮೇಲಿನ ಹಿಂಸೆ , ನಾಯಿಯ ಮೈಗೆ ಮತಾಪು ಕಟ್ಟಿ ಬೆಂಕಿ ತಗುಲಿಸಿ , ಭಯದಿಂದ ಚೀರಾಡುವ , ಅದರ ಆಕ್ರಂದನದಲ್ಲಿ ಸಂತೋಷ ಕಾಣುವ ಗಂಡನ ಕಿರಾತ ಪ್ರವೃತ್ತಿ - ಎಲ್ಲವೂ ಆಕೆಯನ್ನು ದಿಙ್ಮೂಢಳನ್ನಾಗಿಸುತ್ತವೆ .ಒಂದು ದಿನ ನನ್ನನ್ನೂ ಈ ನಾಯಿಯನ್ನು ಕೊಂದಂತೆ ಕೊಲ್ಲಲು ಹೇಸುವ ಜನ ಇವರಲ್ಲ, ಎಂದು ಎಣಿಸಿ ನಡುಗಿ ಹೋಗುತ್ತಾಳೆ .ತನ್ನ ಕಣ್ಣೆದುರಿನಲ್ಲಿಯೇ ಬೆಲೆವೆಣ್ಣನ್ನು ಕರೆ ತಂದು ನಾಯಿಯಂತೆ ನೆರೆಯುವ ಗಂಡನ ನಡತೆಗೆ , ಮನಸ್ಸು ತಿರಸ್ಕಾರದ ಅಗ್ನಿ ಕುಂಡವಾಗುತ್ತದೆ . ಇದೆಲ್ಲದರ ಪರಿಣಾಮ ಗಂಡ ಹೆಂಡತಿಯರು ಎಂದೂ ಸಂಧಿಸದ ಸಮಾನಾಂತರ ರೇಖೆಯಾಗುತ್ತಾರೆ . ಇವಳಂತಹ ಹೆಣ್ಣಿನ ರೂಪದ ಕಲ್ಲನ್ನು ಮಹಾಬಲ ಕಡೆಗಣಿಸಿಯೇಬಿಡುತ್ತಾನೆ .ಅವಳ ಪಾಲಿಗೆ ಅದೊಂದು ಮಹಾ ವಿಮೋಚನೆ .
ಇಂಥಲ್ಲಿಗೆ ಬಂದು ಸೇರುವವನು ನಾಗಪ್ಪಯ್ಯ . ಅದು ತನ್ನ ಮನೆತನದ ಮತ್ತು ದುರ್ಗತಿಗೆ ಕಾರಣನಾದ ಕ್ರೂರಿ , ನಾರಾಯಣ ಹೆಬ್ಬಾರರ ಮಗಳ ಮನೆ !ಎಂಬುದು ತಿಳಿದಾಗ , ಅವನ ಮನಸ್ಸು ಸೇಡಿಗೆ ಹಾತೊರೆಯುತ್ತದೆ . ಪ್ರತಿ ಕ್ಷಣದಲ್ಲಿ ಅವನ ಮನಸ್ಸು ಹಂಬಲಿಸುವುದು ಸೇಡನ್ನು .

- Login or register to post comments
- 151 hits
- Email this page





RSS: