ಶ್ವಾನ ಮಹಾಸಭೆಗೆ ಕರೆಯೋಲೆ
ನಮ್ಮದು ಬನಶಂಕರಿ ಮೂರನೆ ಹಂತದ ಶ್ವಾನ ಕ್ಷೇಮಾಭಿವೃದ್ಧಿ ಸಂಘ. ನಾವಿಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದು, ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಅದನ್ನು ವಿವರವಾಗಿ ಚರ್ಚಿಸಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಲು ಈ ಸಭೆಯನ್ನು ಕರೆದಿದ್ದೇವೆ.
ಸಮಯ: ಮಧ್ಯರಾತ್ರಿ, ಎಂದರೆ ಸುಮಾರು ಹನ್ನೆರಡು ಗಂಟೆ
ಸ್ಥಳ: ಬನಶಂಕರಿ ಮೂರನೆ ಹಂತದ ಯಾವುದಾದರೊಂದು ಬೀದಿ
ಕಾರ್ಯಕ್ರಮ ವಿವರ: ಮೊಟ್ಟ ಮೊದಲಾಗಿ ನಮ್ಮ ಅತಿ ಚಿಕ್ಕ ಸದಸ್ಯರೊಬ್ಬರಿಂದ ಪ್ರಾರ್ಥನಾ ಗೀತೆ. (ಸದಸ್ಯರು ಅತಿ ಆರೋಹಣದಲ್ಲಿ ಹಾಡಿ ಪೊಲೀಸರನ್ನು ಆಕರ್ಶಿಸುವ ಪ್ರಯತ್ನ ಮಾಡಬಾರದೆಂದು ಈ ಮೂಲಕ ಕೋರಲಾಗಿದೆ. ಏಕೆಂದರೆ ಅದು ನಮ್ಮ ಮುಂದಿನ ಕಾರ್ಯಕ್ರಮಗಳ ಮೇಲೆ ವಿರುದ್ಧ ಪರಿಣಾಮ ಬೀರಬಹುದು)
ಎರಡನೆಯದಾಗಿ ನಮ್ಮ ನಾಯಿಕರಿಂದ ಎಂದರೆ ಮಿ. ಗಡವರಿಂದ ಸ್ವಾಗತ ಭಾಷಣ. ಇವರು ಹೆಚ್ಚು ಸಮಯ ತೆಗೆದುಕೊಳ್ಳದೆ ಎಲ್ಲರನ್ನೂ ಸ್ವಾಗತಿಸುವರು. ಅಕ್ಕ ಪಕ್ಕದ ಬಡಾವಣೆಯ ಶ್ವಾನ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಿಗೂ ಆಹ್ವಾನವನ್ನು ಈಗಾಗಲೇ ಕಳುಹಿಸಲಾಗಿದೆ. ಅತಿ ಹೆಚ್ಚು ಸದಸ್ಯರು ಸಕಾಲಕ್ಕೆ ಆಗಮಿಸಿ ಸಭೆಗೆ ಕಳೆಯನ್ನು ತರಬೇಕೆಂದು ಪ್ರಾರ್ಥನೆ.
ಮೂರನೆಯದಾಗಿ ನಮ್ಮ ಮುಂದಿರುವ ತೊಂದರೆಗಳ ಬಗ್ಗೆ ವಿವರವಾದ ಚರ್ಚೆ, ನಿವಾರಣೆಗೆ ಸೂಕ್ತ ನಿರ್ಧಾರಗಳು. ತೊಂದರೆಗಳು -
(೧)ನಮಗೆ ನಮ್ಮದೆ ಆದ ಸ್ಥಳಾವಕಾಶವಿಲ್ಲ. ಬೆಳಗಿನ ಹೊತ್ತು ನಾವು ತಲೆ ಎತ್ತಿ ತಿರುಗಲಾಗುತ್ತಿಲ್ಲ. ರಾತ್ರಿಯಲ್ಲಿ ಪೊಲೀಸರ ಕಾಟ. ಚಿಕ್ಕವರು ದೊಡ್ಡವರೆನ್ನದೆ ನಮ್ಮ ಸದಸ್ಯರುಗಳಿಗೆ ಒದೆತ ಬೀಳುತ್ತಿರುವುದನ್ನು ನಾವುಗಳು ತೀವ್ರವಾಗಿ ಖಂಡಿಸಬೆಕು.
(೨) ಯಾವುದೇ ಭೀತಿ ಇಲ್ಲದೆ ನಡು ಮಧ್ಯಾನ್ಹದಲ್ಲಿಯೂ ಹೆಣ್ಣು ನಾಯಿ ತಲೆ ಎತ್ತಿ ತಿರುಗುವಂತಾಗಬೇಕು. ಇದಕ್ಕಾಗಿ ನಾವು ನಮ್ಮ ಬದ್ಧ ದ್ವೇಶಿಗಳಾದ ಎಸ್.ಪಿ.ಸಿ.ಎ, ಕೃಪಾ ಇತ್ಯಾದಿ ಸರಕಾರೇತರ ಸಂಸ್ಥೆಗಳ ವಿರುದ್ಧ ಹೋರಾಡಬೇಕು.
(೩) ಬಡಾವಣೆಯ ಉದ್ದಾರದ ಹೆಸರಿನಲ್ಲಿ ನಮಗೆ ಸಿಕ್ಕುತ್ತಿದ್ದ ಅನ್ನಕ್ಕೆ ಕಲ್ಲು ಹಾಕುತ್ತಿರುವುದನ್ನು ಖಂಡಿಸಬೇಕು. ಬೆಂಗಳೂರು ಮಹಾನಗರ ಪಾಲಿಕೆಯವರು ನಡೆಸುತ್ತಿರುವ ಮನೆ ಮನೆ ಬಾಗಿಲಿಂದ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯವನ್ನು ವಿರೋಧಿಸಬೇಕು. ಮನೆಯ ಹೆಂಗಸರು ಮನೆಯ ಕಸ ಕಡ್ಡಿಗಳನ್ನು ಬೀದಿ ಬದಿಯಲ್ಲಿ ಎಸೆಯಲು ಪ್ರೋತ್ಸಾಹಿಸಬೇಕು. ಮಕ್ಕಳು ಮನೆಯೊಳಗಿನ ಟಾಯ್ಲೆಟ್ಟಿಗೆ ಹೋಗದೆ ಬೀದಿ ಬದಿಯಲ್ಲಿ ತಮ್ಮ ಕೆಲಸ ಮುಗಿಸಲು ಹೆಚ್ಚು ಹೆಚ್ಚು ಪ್ರೋತ್ಸಾಹಿಸಬೇಕು. ಇದಕ್ಕೆ ಕೊಳಚೆ ಪ್ರದೇಶಗಳಲ್ಲಿ ನಮ್ಮ ಸದಸ್ಯರು ಹೆಚ್ಚು ಹೆಚ್ಚಾಗಿ ತಿರುಗಿ ಅರಿವು ಮೂಡಿಸಬೇಕು. ಮಕ್ಕಳ ಮೈ ನೆಕ್ಕಿ ಪ್ರೀತಿ ಗಳಿಸಬೇಕು.
(೪) ನಮ್ಮ ಸದಸ್ಯ ಸಂಖ್ಯೆಯ ಬೆಳವಣಿಗೆಯಾಗಬೇಕಾದರೆ, ಸಂತಾನೋತ್ಪತ್ತಿಯತ್ತ ನಮ್ಮ ಸದಸ್ಯರುಗಳು ಹೆಚ್ಚಿನ ಗಮನ ಹರಿಸಬೇಕು. ನಮ್ಮ ಸಂತಾನ ಹರಣ ನಡೆಸಿ, ಕಿವಿ ಕೊಚ್ಚುವ ಕಾರ್ಯವನ್ನು ತೀವ್ರವಾಗಿ ವಿರೋಧಿಸಬೇಕು. ಸಾಧ್ಯವಾದಲ್ಲಿ ಈ ಬಗ್ಗೆ ಸುಪ್ರೀಮ್ ಕೋರ್ಟಿಗೂ ಹೋಗುವ ತಯಾರಿ ನಡೆಸಬೇಕು.
(೫) ಇನ್ನೂ ಯಾವುದಾದರೂ ವಿಷಯವಿದ್ದರೆ, ಅಧ್ಯಕ್ಷರ ಅಪ್ಪಣೆಯ ಮೇರೆಗೆ ಚರ್ಚಿಸಬಹುದು.
ನೀವೂ ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆತನ್ನಿ.

- Login or register to post comments
- 720 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಶ್ವಾನ ಮಹಾಸಭೆಗೆ ಕರೆಯೋಲೆ
ಯಾಕೋ ನಿಮ್ಮ "ಹಾಸ್ಯ - ಲಲಿತ ಪ್ರಬಂಧ" ನಗಿಸುವಂತೆ ತೋರುತ್ತಿಲ್ಲ. ಬೇಸರ ತರುವಂತಿದೆ
ತಾವೇ ಹಾಸ್ಯ- ಅಣಕ-ತರಲೆ ನಮ್ಮ ಪರಂಪರೆಗೆ ಹೇಳಿಸಿದ್ದಲ್ಲ ಎಂದದ್ದು ನನ್ನ ನೆನಪು!
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಶ್ವಾನ ಮಹಾಸಭೆಗೆ ಕರೆಯೋಲೆ
ತಮ್ಮ ಹಾಸ್ಯ ಬರಹ ಚೆನ್ನಾಗಿದೆ.ಪುನಃ ಪುನಃ ಓದಿ ಖುಷಿಪಟ್ಟೆ.
ಹಾಗೆಯೇ ಶ್ರೀನಿಧಿಯ ಪ್ರತಿಕ್ರಿಯೆ ಸಹ ಸಮಯೋಚಿತ.
ನಾಗರಾಜು,ಶ್ರೀನಿಧಿ ಇಬ್ಬರಿಗೂ ನನ್ನಿ.
ಗಣೇಶ.
ಉ: ಶ್ವಾನ ಮಹಾಸಭೆಗೆ ಕರೆಯೋಲೆ
ಪ್ರಿಯ ಶ್ರೀನಿಧಿಯವರೆ,
ತಮ್ಮ ಅನಿಸಿಕೆಯನ್ನು ನೇರವಾಗಿ ಹೇಳಿದ್ದಕ್ಕೆ ಧನ್ಯವಾದಗಳು. ಹಾಸ್ಯ ನನ್ನ ಪ್ರಾಥಮಿಕ ವಿಷಯಗಳಲ್ಲೊಂದು. ಹಾಗಾಗಿ ನಾನು ಹಾಸ್ಯವನ್ನು ಎಂದೂ ವಿರೋಧಿಸಿಲ್ಲ. ನನ್ನದೇ ಕೆಲವು ಹಾಸ್ಯ ಲೇಖನಗಳು ಈಗಾಗಲೆ ಸಂಪದದಲ್ಲಿ ಬೆಳಕು ಕಂಡಿವೆ.
ಇನ್ನು ತಾವು ತಿಳಿಸಿರುವುದು ನಾನು ’ಏಪ್ರಿಲ್ ಒಂದರಂದು ಜನರನ್ನು ಮೂರ್ಖರನ್ನಾಗಿಸುವ ಆಟ’ವನ್ನು ವಿರೋಧಿಸಿರುವುದರ ಬಗ್ಗೆ ಎಂದು ಭಾವಿಸುತ್ತೇನೆ. ಅಲ್ಲಿ ನಾವು ಇನ್ನೊಬ್ಬರನ್ನು, ಅದರಲ್ಲಿಯೂ ನಮ್ಮ ಹತ್ತಿರದ ಸ್ನೇಹಿತರು, ಬಂಧುಗಳನ್ನು ಮೂರ್ಖರನಾಗಿಸುವಾಟವನ್ನು ವಿರೋಧಿಸಿದ್ದೆನೇ ಹೊರತು, ಹಾಸ್ಯವನ್ನಲ್ಲ. ಹಾಸ್ಯವೇ ಬೇರೆ, ಮೂರ್ಖರಾಟವೇ ಬೇರೆಯೆಂದು ನನ್ನ ಅನಿಸಿಕೆ.
ಈ ಲೇಖನವನ್ನು ನಾನು ಹಾಸ್ಯದ ಲೇಪವನ್ನು ಕೊಟ್ಟು ಬರೆದಿದ್ದೇನೆಯೇ ಹೊರತು, ಕೇವಲ ಮನರಂಜನೆಗಾಗಿ ಅಲ್ಲ. ಸಾಲುಗಳ ಒಳ ಹೊಕ್ಕು ಹೂರಣವನ್ನು ನೋಡಿದರೆ, ನಮ್ಮ ಬೆಂಗಳೂರಿನಲ್ಲಿ ಬೀದಿ ನಾಯಿಗಳಿಂದಾಗುತ್ತಿರುವ ಅನಾಹುತಗಳ, ಅವುಗಳ ಕಡೆಗೆ ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯ ಇತ್ಯಾದಿಗಳು ಕಣ್ಣಿಗೆ ಬೀಳುತ್ತವೆ. ಈ ಲೇಖನವನ್ನು ಬರೆಯುವಾಗ, ಅನ್ಯ ಕಾರ್ಯಗಳ ಒತ್ತಡ ಬಂದು ಪೂರ್ಣಗೊಳಿಸಲಾಗಲಿಲ್ಲ. ಆನಂತರ, ನಾನು ಅದನ್ನು ಸಂಪದದ ಓದುಗರಿಂದಲೇ ಬರೆಯಿಸಿದರೆ ಹೇಗೆಂದು ಯೋಚಿಸಿದ್ದೆ. ಇರಲಿ, ಇದು ಸಂಪದದ ಓದುಗರಿಗೆ ಬೋರೆನಿಸಿದರೆ, ಅಂತಹ ಸಾಹಸಕ್ಕೆ ಖಂಡಿತಾ ಕೈ ಹಾಕುವುದಿಲ್ಲ.
ಧನ್ಯವಾದಗಳು.
ಎ.ವಿ. ನಾಗರಾಜು
ಉ: ಶ್ವಾನ ಮಹಾಸಭೆಗೆ ಕರೆಯೋಲೆ
ಚೆನ್ನಾಗಿದೆ..

ಸಂಪದದ ಓದುಗರಿಂದ ಬರೆಸುವುದು ಅಂದರೆ?
*ಅಶೋಕ್
ಉ: ಶ್ವಾನ ಮಹಾಸಭೆಗೆ ಕರೆಯೋಲೆ
ನಾನು ಸಂಪದದ ಓದುಗರ ಪ್ರತಿನಿಧಿಯಾಗಲೀ, ಸಂಪದವಾಗಲೀ ಅಲ್ಲ. ಸಾಮಾನ್ಯ ಒಬ್ಬ ಓದುಗ. ನೀವು ಲೇಖನಗಳನ್ನು ಬರೆಯುವುದು ನಿಮ್ಮ ಸಂತೋಷಕ್ಕೆ. ನನಗಾಗಿಯಾಗಲೀ, ಬೇರೆಯವರಿಗಾಗಲೀ ಅಲ್ಲ. ಆದರೆ ನನಗೆ ಬೇಸರ ಆಗಿದ್ದಕ್ಕೆ ೨ ಕಾರಣಗಳಿವೆ.
೧. ಲೇಖನದ ಟೈಮಿಂಗು - ಬೇರೆ ಗಂಭೀರ ವಿಷಯದ ಕರೆಯೋಲೆಗಳು ಸಂಪದದಲ್ಲಿ ಇದ್ದಾವೆ. ಮೊದಲ ಬಾರಿ ನಿಮ್ಮ ಲೇಖನ ಓದಿದಾಗ ಆ ಕರೆಯೋಲೆಗಳ ಅಣಕ ಎನ್ನಿಸಿತು. (ಒಂದು ರೀತಿಯಲ್ಲಿ ಕೆಲವರನ್ನು ನಾಯಿಗಳಿಗೆ ಹೋಲಿಸಿದ ಹಾಗೆ) ನಿಮ್ಮ ಉದ್ದೇಶ ಅದಲ್ಲದಿದ್ದರೆ ಅರ್ಥ ಮಾಡಿಕೊಳ್ಳದ ತಪ್ಪು ನನ್ನದು.
೨. ಇದೇ ರೀತಿಯ ಬೇರೆ ಲೇಖನಗಳು (ಬೀದಿ ನಾಯಿಗಳ ಸಂಘ ಇತರೆ) ಕಾರ್ಟೂನ್ಗಳು ಹಿಂದೆ (ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದಾಗ) ಬಂದಿವೆ. ಹೊಸತೇನೂ ಕಾಣಿಸಲಿಲ್ಲ.
ನಾನು ಸ್ವಲ್ಪ ನೇರವಾಗಿ ಖಡಕ್ಕಾಗಿ ಬರೆದಿದ್ದ್ದು ನಿಮ್ಮ ಮನಸ್ಸಿಗೆ ನೋವಾಗಲೀ ಎಂದಲ್ಲ. ನನಗೆ ಹಿಡಿಸಲಿಲ್ಲ ಎಂದಷ್ಟೇ. ನಿಮ್ಮ ಬೇರೆ ಹಾಸ್ಯ ಲೇಖನಗಳು ನನಗೆ ಸಂತಸ ನೀಡಿದೆ. ಯಾವುದು ಹಾಸ್ಯ ಅಲ್ಲ ಯಾವುದು ಸರಿಯಾದ ಹಾಸ್ಯ ಅಲ್ಲ ಎನ್ನುವುದು ಬೇರೆ ವಿಚಾರ ಆಗುತ್ತದೆ ಅಲ್ಲವೇ? ಆದರೂ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಮನ್ನಿಸಿ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಶ್ವಾನ ಮಹಾಸಭೆಗೆ ಕರೆಯೋಲೆ
'ಬೌ ಬೌ ಬಿರ್ಯಾನಿ' ಎಂಬ ಖಾದ್ಯವನ್ನು ಮಾಡುವದನ್ನಗಲಿ ಸೇವಿಸುವದನ್ನಾಗಲಿ ಬ್ಯಾನ್ ಮಾಡಬೇಕು ಎಂಬ ಠರಾವನ್ನು ಪಾಸ್ ಮಾಡಿ ಠಸ್ಸೆ ಹಾಕಿ ಧ್ರೃಡಿಕರಿಸಬೇಕು.