ಅನನ್ಯ ಅಲ್ಲಮ ೭
ಅಲ್ಲಮನ ಬಾಲ್ಯ ಕಾಲದ ಸಾಮಾಜಿಕ ಜೀವನ ಅಸ್ಥಿರತೆಯ ಬೀಡು . ಊರೂರುಗಳಲ್ಲಿ ಪಾಳೆಯಪಟ್ಟುಗಳು ತಲೆಯೆತ್ತಿ ಅವರೆಲ್ಲಾ ಸ್ಥಳೀಯ ರಾಜರುಗಳೇ ಆಗಿದ್ದರು . ಪುರಾಣಗಳಲ್ಲಿ ಯಾವ ಊರುಗಳನ್ನು ತೆಗೆದುಕೊಂಡರೂ ಅಲ್ಲಿಗೊಬ್ಬ ರಾಜ ! ಬನವಸೆಯಲ್ಲೊಬ್ಬ ರಾಜ, ಬಳ್ಳಿಗಾವೆಯಲ್ಲೊಬ್ಬ ರಾಜ , ಉಡುತಡಿಯಲ್ಲಿನ್ನೊಬ್ಬ ರಾಜ ಹೀಗೆ ಹೆಜ್ಜೆ ಹೆಜ್ಜೆಗೆ ರಾಜರುಗಳ ಸಂದಣಿ . ಇದರ ಪರಿಣಾಮದಿಂದ ನಿತ್ಯ ಕಲಹಗಳು ; ಕಂಡದ್ದೆಲ್ಲವು ತಮ್ಮದೆನ್ನುವ ಲೋಭ , ಪಡೆದದ್ದನ್ನು ಉಳಿಸಿಕೊಳ್ಳಲು ; ಆಶಿಸಿದ್ದನ್ನು ಪಡೆಯಲು , ನಿರಂತರ ಕಾಳಗಗಳು . ಬಹುತೇಕ ಕಲಹದ ಕಾರಣಗಳು ಸಹಜವಾಗಿಯೇ , ಐಶ್ವರ್ಯ, ನೆಲ, ಸ್ತ್ರೀಮೂಲದವು . ಉಳಿದವು ಪ್ರತಿಷ್ಟೆಯ ಪ್ರಶ್ನೆಗಳು . ಐಶ್ವರ್ಯ ಮತ್ತು ನೆಲ ಜೀವ, ಭಾವ ರಹಿತ ವಸ್ತುಗಳು ; ತನ್ನಂತೆಯೇ ಜೀವ ಭಾವಗಳಿರುವ ಹೆಣ್ಣನ್ನೂ ನಿರ್ಜೀವ ವಸ್ತುಗಳ ಮಾನದಲ್ಲಿ ಗಣಿಸುತ್ತಿದ್ದ ಈ ಬಗೆಯ ವಿಪರೀತ ಕಲ್ಪನೆಗಳಿಗೆ, ಮಧ್ಯಯುಗೀನ ಸಮಾಜದ ಅಂಗೀಕಾರವೂ ಇದ್ದುದು ಅಂದಿನ ವಿಷಮ ಮನಃಸ್ಥಿತಿಯ ಕನ್ನಡಿ .
ಕಂಡ ಸುಂದರಿಯರನ್ನೆಲ್ಲಾ ತಮ್ಮ ಅಂತಃಪುರಗಳೊಳಗೆ ಕೂಡಿ ಹಾಕುವುದೇ ಒಂದು ಅಂತಸ್ತೆಂದು ಭಾವಿಸುತ್ತಿದ್ದ ; ಅದಕ್ಕಾಗಿ ತಮ್ಮ ಭೌತಿಕ ಬಲವನ್ನೂ ಬಳಸುತ್ತಿದ್ದ ಮೃಗೀಯ ನಾಯಕತ್ವ ನೆಲೆಗೊಂಡಿದ್ದ ಕಾಲದಲ್ಲಿ , ಅವರ ಅಂತಃಪುರಗಳನ್ನು ಬಲಾತ್ಕಾರ ಮೂಲದಿಂದ ಪ್ರವೇಶಿಸುತ್ತಿದ್ದ ನಾರಿಯರು , ಹತಾಶ ಮನಸ್ಸಿನ ಸರ್ಪಸುಂದರಿಯರಾಗುತ್ತಿದ್ದರು . ಪ್ರತಿಭೆ, ಸಂಸ್ಕಾರಗಳಿಂದ ವಿಕಸಿತವಾಗಬೇಕಾಗಿದ್ದ ಕುಸುಮ ಕೋಮಲೆಯರು , ಹತಾಸೆ , ಆಸೂಯೆ , ಕುಟಿಲತೆಗಳ ವಿಕೃತ ಸ್ಥಿತಿಯ ಬೊಂಬೆಗಳಾಗುತ್ತಿದ್ದರು . ಅರಸರ ಅಂತಃಪುರಗಳು ಮನಸ್ಸುಗಳನ್ನು ಕೊಂದು ; ಬಣ್ಣದ ಮೈಗಳನ್ನು ಕೂಡಿ ಹಾಕುವ ಪಂಜರ . ಅಲ್ಲಿ ನವಿಲುಗಳು ನರ್ತಿಸುವುದು ತನ್ನ ಸಹಜ ಸ್ವಾಭಾವಿಕ ಚಲನೆಗಳಿಂದಲ್ಲ ,ಬೀಸುವ ಚಾವಟೀಗಳ ಭಯದಿಂದ .
ಮಧ್ಯ ಯುಗೀನ ಆಢ್ಯ ಸಮಾಜ ಕಲೆ , ಸಾಹಿತ್ಯ , ಸಂಗೀತಗಳನ್ನು ಆಸ್ವಾದಿಸುತ್ತಿದ್ದುದು , ರಸಿಕತೆಯ ನೆಲೆಯಲ್ಲಿ , ಸಹೃದಯತೆ ಅಲ್ಲಿ ಕಡಿಮೆ . ಆದುದರಿಂದ ಆಸ್ವಾದಿಸುತ್ತಿದ್ದ ಕಲೆಗಿದ್ದ ಬೆಲೆ, ಅದರ ಮೂಲ ಕರ್ತನಾದ ಕಲಾವಿದನಿಗಿರಲಿಲ್ಲ . ಕವಿಗೆ ವಿಸ್ಮಯದ ಕಾರಣದಿಂದ ಮನ್ನಣೆಗಳಿದ್ದವಾದರೂ ; ಪ್ರದರ್ಶಕ ಕಲೆಗಳ ಕಲಾವಿದರಿಗೆ ಸಮಾಜ ಕೊಡುತ್ತಿದ್ದ ಸ್ಥಾನ ತೀರಾ ಕೆಳಗಿನದು . ಅಲ್ಲಮನ ಜಾತಿ ನಟುವರದು . ಅದು ಸಾಮಾಜಿಕ ಮನ್ನಣೆಗಳನ್ನು ಗಳಿಸದ ಜಾತಿ . ಮನರಂಜನೆಗೆ ನಟುವರ ಅವಶ್ಯಕತೆ ಇತ್ತಾದರೂ ಅದು ಅವರನ್ನು ಉಪಯೋಗಿಸಿ ಎಂಜಲೆಲೆಯನ್ನು ಬಿಸಾಡಿದಂತೆ , ಬೀಸಾಡುವ ಮಟ್ಟದಲ್ಲಿತ್ತು .
ಅಂಥ ಅಲ್ಲಮನ ತಂದೆ ಅರಮನೆಯ ಅಂತಃಪುರದ ನಾಗವಾಸಾಧಿಪನಾಗಿದ್ದ . ಅಲ್ಲಿ ಹುಟ್ಟಿದ ಅಲ್ಲಮನಿಗೆ ಕಲಾವಿದರ ಜೀವನದ ನೋವು ನಲಿವುಗಳು ತೀರಾ ಎಳವೆಯಲ್ಲಿಯೇ ತಮ್ಮ ಮುದ್ರೆಗಳನ್ನೊತ್ತಿದ್ದವು . ಕಾಣುವ ನೋಟಗಳ ಹಿಂದಿನ ಸೂಕ್ಷ್ಮಗಳನ್ನು , ಸಮರ್ಥವಾಗಿ ಗ್ರಹಿಸಬಲ್ಲ ಹರಿತವಾದ ಭಾವ ಬುದ್ದಿಗಳನ್ನು ಹೊಂದಿದ್ದ ಕಿರು ಮನಸ್ಸೊಂದು , ಅರಮನೆಯ ವಿಲಾಸಿನಿಯರ ಹಿಂದಣ ವಿಲಾಪದ ವಿಕಳ ರಾಗವನ್ನು ಗ್ರಹಿಸಿ ಚಕಿತವಾಗುತ್ತಿತ್ತು . ಅರಮನೆಯ ಸುಂದರಿಯರ ಸ್ತನ ಮಂಡಲಗಳ ಮಧ್ಯದಲ್ಲಿ ಆಡಿ ಬೆಳೆಯುತ್ತಿದ್ದ ಬಾಲ ಮನಸ್ಸು , ಅಲ್ಲಿನ ಸೌಂದರ್ಯ , ಅದರ ಹಿಂದಿನ ವಿಕಾರಗಳನ್ನೂ ಸಹ ಗ್ರಹಿಸಿ , ತಲ್ಲಣಗೊಳ್ಳುತ್ತಿತ್ತು . ಇಂತಹ ವಾತಾವರಣದಲ್ಲಿ ಬೆಳೆದ ಮಗು , ಉತ್ಕಟ ಪ್ರೇಮಿಯೂ ಆಗಬಲ್ಲದು ; ವಿಶ್ವಂಭರ ವಿರಾಗಿಯೂ ಆಗಬಲ್ಲದು .ಈ ಎರಡೂ ಬಗೆಯ ವಿರೋಧಾಭಾಸಗಳನ್ನು ಅಲ್ಲಮನ ಬಾಳಿನಲ್ಲಿ ಕಾಣಲು ಸಾಧ್ಯವಾಗಿರುವುದಕ್ಕೆ ಕಾರಣ , ಅವನ ಬಾಲ್ಯದ ಪರಿಸರವೇ ಇರಬಹುದು .
ಅಲ್ಲಮನೊಬ್ಬ ಅಪ್ರತಿಮ ಮದ್ದಲಿಗ ; ಅಪೂರ್ವ ನರ್ತಕ ! ಈ ಎರಡು ಪ್ರದರ್ಶನ ಕಲೆಗಳು ಎಷ್ಟೇ ಸ್ವಭಾವ ಸಿದ್ದವಾದವುಗಳಾದರೂ ಅವುಗಳಿಗೆ ಗುರು ಅತ್ಯಂತ ಅವಶ್ಯಕ . ಅಲ್ಲಮನ ಕಲಾವಂತಿಕೆಯ ಭಾವವನ್ನು ಉದ್ದೀಪಿಸಿ , ಅವನ ಕಲೆಗೆ ಮೂಲ ನೆಲೆಗಟ್ಟನ್ನು ಒದಗಿಸಿದ ಗುರು ಯಾರು ? ನಟುವರನೂ , ನಾಗವಾಸಾಧಿಪನೂ ಆಗಿದ್ದ ಅವನ ತಂದೆಯೇ ಅಲ್ಲಮನ ಕಲಾ ಪ್ರಪಂಚದ ಮೂಲ ಗುರು ಆಗಿದ್ದಿರಬಹುದೇ ?
ಗುರುವಿನ ಪರಿ ವಿಪರೀತವಾಯಿತ್ತಯ್ಯಾ ,
ಭ್ರಮರ ಕೀಟ ನ್ಯಾಯದಂತಾಯಿತ್ತು !
ಗುರು ತನ್ನ ನೆನೆವಬರ
ಎನ್ನನಾ ಗುರುವ ಮಾಡಿದನು
ಅಹಾ ಮನವೇ ಮರೆದೆಯಲ್ಲ
ನಿನ್ನ ಪೂರ್ವಾಪರವ !
ಘನ ಮನದಲಡಗಿ ಆ ಮನ ಲಿಂಗದೊಳಡಗಿ
........... ಜನನವಿಲ್ಲದ ಘನಕ್ಕೆ ಮರಣ ಉಂಟೇ ?
ಅಲ್ಲಮನು ಕೇವಲ ಕಲಾವಿದನಲ್ಲ ; ಅಪಾರ ಅಧ್ಯಯನಶೀಲ . ಬರಿಯ ಓದಿದವನಲ್ಲ , ಓದಿನ ಒಡವಲವನರಿದವನು . ಆ ಅಪಾರ ಜ್ಞಾನ, ಸಹೃದಯ ಮನಸ್ಸು ಇಲ್ಲದವನಾದರೆ ಆ ಬಗೆಯ ವಚನ ರಚನಾ ಸಿದ್ದಿ ಸಾಧ್ಯವಿಲ್ಲ . ಅವನು ಕೇವಲ ಲೌಕಿಕನಲ್ಲ ; ಪರಮ ಯೋಗಿ ! ಯೋಗದ ಸಕೀಲಗಳನ್ನು ಬಲ್ಲವನು . ನಿರಂತರ ಯೋಗಾಭ್ಯಾಸ ; ಅದರಿಂದಾದ ಅತೀತ ಅನುಭವಗಳನ್ನು ಧರಿಸುವ ಧಾರಣ ಶಕ್ತಿ ; ಅದನ್ನು ಅಭಿವ್ಯಕ್ತಿಸಬಲ್ಲ ಅಪೂರ್ವ ವಾಚನ ಸಾಮರ್ಥ್ಯ .ಇವೆಲ್ಲಾ ಸಾಧಾರಣ ಕ್ರಿಯೆಗಳಲ್ಲ . ಯಾರು ಅವನ ಬಾಲ್ಯದ ಯೋಗ ಗುರು ? ಈ ಎಲ್ಲ ಪ್ರಶ್ನೆಗಳು ಅವನ ಬಾಳಿನಂತೆಯೇ ನಿಗೂಢ . ಅವನ ಏಕಾಂತ ಪ್ರಿಯತೆ ,ಜನ ಸಂದಣಿಯ ಬಗ್ಗೆ ನಿರಾಸಕ್ತಿ , ನಿರಂತರ ಪರ್ಯಟನೆ ,ಅರಣ್ಯಾಂತರ್ಗತ ನೆಲೆಗಳಲ್ಲಿ ನಡೆಸಿದ ಸಾಧನೆಗಳು , ಇವೆಲ್ಲವುಗಳ ಹೊರಳಿಗಳ ನಡುವೆ ಕಾಣುವ ಅಲ್ಲಮನ ಜೀವನವೆನ್ನುವುದು ದಟ್ಟೈಸಿದ ಮೇಘಗಳ ನಡುವೆ ಎಲ್ಲಿಯೋ ಮಿಂಚಿ ಮರೆಯಾಗುವ ಸೂರ್ಯ ರಶ್ಮಿಗಳಂತೆಯೇ ಅಪೂರ್ವ .
ಎನ್ನ ಹೃದಯ ಕಮಲದಲ್ಲಿ
ಮೂರ್ತಿಗೊಂಡಿಪ್ಪ
ಎನ್ನ ಪ್ರಾಣೇಶ್ವರಂಗೆ
ಎನ್ನ ಕ್ಷಮೆಯೇ ಅಭಿಷೇಕ
ಎನ್ನ ಪರಮ ವೈರಾಗ್ಯವೇ ಪುಷ್ಪದ ಮಾಲೆ
ಎನ್ನ ಸಮಾಧಿ ಸಂಪತ್ತೇ ಗಂಧ
ಎನ್ನ ನಿರಹಂಕಾರವೇ ಅಕ್ಷತೆ
ಎನ್ನ ಸದ್ವಿವೇಕವೇ ವಸ್ತ್ರ
ಎನ್ನ ಸತ್ಯವೇ ದಿವ್ಯಾಭರಣ
ಎನ್ನ ವಿಶ್ವಾಸವೇ ಧೂಪ
ಎನ್ನ ದಿವ್ಯ ಜ್ಞಾನವೇ ದೀಪ
ಎನ್ನ ನಿಭ್ರಾಂತಿಯೇ ನೈವೇದ್ಯ
ಎನ್ನ ನಿರ್ವಿಷಯವೇ ತಾಂಬೂಲ
ಎನ್ನ ಮೌನವೇ ಘಂಟೆ
ಎನ್ನ ನಿರ್ವಿಕಲ್ಪನೆಯೇ ಪ್ರದಕ್ಷಿಣೆ
ಎನ್ನ ಶುದ್ದಿಯೇ ನಮಸ್ಕಾರ
ಎನ್ನ ಅಂತಃಕರಣದಿಂದ
ಮಾಡುವ ಸೇವೆಯೇ ಉಪಚಾರಂಗಳು
ಈ ಪರಿಯಲ್ಲಿ ಎಮ್ಮ ಗುಹೇಶ್ವರ ಲಿಂಗಕ್ಕೆ
ಪ್ರಾಣ ಪೂಜೆಯ ಮಾಡಿ
ಬಾಹ್ಯ ಕ್ರೀಯ ಮೆರೆದೇನು ಕಾಣಾ

- Login or register to post comments
- 272 hits
- Email this page





RSS:
ಪ್ರತಿಕ್ರಿಯೆಗಳು
ಉ: ಅನನ್ಯ ಅಲ್ಲಮ ೭
ಪ್ರೀತಿಯ ಸುನಿಲ್ ಜಯಪ್ರಕಾಶ್ ತಮ್ಮ ’ಶಂಕರ ಮತ್ತು ಅಲ್ಲಮ’ ಲಿಂಕ್ ಓದಿದೆ. ಇಲ್ಲಿ ನನ್ನ ಪ್ರತಿಕ್ರಿಯೆಯನ್ನು ದಾಖಲಿಸುತ್ತಿದ್ದೇನೆ . ತಾವು ಬರೆದಿರುವ ಪ್ರಕಾರ ಅಲ್ಲಮನು ಉಪಯೋಗಿಸಿರುವ ’ಅದ್ವ್ಯೆತಿ’ ಶಬ್ದ ಶಂಕರರಿಗೆ ಅನ್ವಯಿಸುವ ಮಾತು . ಎಂಬುದೇ ಪ್ರಶ್ನಾರ್ಹ ಏಕೆಂದರೆ , ಅಲ್ಲಮನ ಅನೇಕ ವಚನಗಳಲ್ಲಿ ಈ ದ್ವೈತ, ಅದ್ವೈತ ಇತ್ಯಾದಿ ಶಬ್ದಗಳು ಧಾರಾಳವಾಗಿ ಉಪಯೋಗಿಸಲ್ಪಟ್ಟಿವೆ .
’ಅಹಂ ಬ್ರಹ್ಮಾಸ್ಮಿ’ ಆಗಲಿ ’ ಆಯಮಾತ್ಮಾಬ್ರಹ್ಮ’ ಆಗಲೀ ಇವೆಲ್ಲಾ ಮೂಲತಃ ಶಂಕರರವಲ್ಲ; ಉಪನಿಷತ್ತುಗಳ ಘೋಷ ವಾಕ್ಯಗಳು . ಋಷಿಗಳು ತಮಗೆ, ಈ ಜಗತ್ತಿಗೆ, ಇವೆಲ್ಲವುಗಳ ಮೂಲಕ್ಕೆ ಇರುವ ಸಂಭಂಧಗಳ ಬಗ್ಗೆ ನಡೆಸಿದ ಜಿಜ್ಞಾಸೆಗಳಲ್ಲಿ ಮೂಡಿ ಬಂದ ಶಬ್ದಗಳಿವು .
ಶಂಕರರು ತಮ್ಮ ತಾತ್ವಿಕ ಪ್ರತಿಪಾದನೆಗೆ ಅದ್ವೈತವನ್ನೇ ಅಡಿಪಾಯವಾಗಿಸಿಕೊಂಡರು ಎನ್ನುವುದು ಸರಿ . ಆದರೆ ಈ ಅದ್ವೈತ ತತ್ವ ಮೂಲತಃ ಅವರದೇ ಎನ್ನುವುದು ಮಾತ್ರ ಸರಿಯಾದ ಕ್ರಮವಲ್ಲ .ಅದೊಂದು ತತ್ವ ಜಿಜ್ಞಾಸೆಯ ದಾರಿ , ಆ ದಾರಿಯ ಯಾತ್ರಿಕರಲ್ಲೊಬ್ಬರು ಶಂಕರರು .
ಎಲ್ಲಿಯ ವರೆಗೆ ಈ ಎಲ್ಲ ಘೋಷ ವಾಕ್ಯಗಳು ಒಂದು ಪ್ರಮೇಯವಾಗಿ ದಾರಿ ತೋರಿಸುತ್ತವೆಯೋ ಅಲ್ಲಿಯ ವರೆಗೆ ಮಾತ್ರ ಅವು ಸರಿ .ಅವೇ ಪಂಥೀಕರಣಗೊಂಡರೆ ಅಪಾಯಕಾರಿ ಆಗುತ್ತವೆ ,’ನಾನು ದ್ವೈತಿ’ ’ನಾನು ಅದ್ವೈತಿ’ ಎಂಬ ಕುರುಡು ಬಡಿದಾಟಗಳು ಶುರುವಾಗುತ್ತವೆ . ಇವತ್ತು ನಾವು ಕಾಣುತ್ತಿರುವ ಧಾರ್ಮಿಕ ಕಲಹಗಳ ಮೂಲ ಈ ಪಂಥೀಯವಾದ .
ಬಸವಣ್ಣನವರು ನೆಚ್ಚಿಕೊಂಡ ವೀರಶೈವ ಮಾರ್ಗ ಸಹ ಈ ಪಂಥೀಕರಣಕ್ಕೆ ಒಳಗಾಗುವ ಅಪಾಯವನ್ನು ಮೊದಲೇ ಮುಂಗಂಡವರು ಈ ಅಲ್ಲಮಪ್ರಭು , ಅವರು ಈ ಬಗೆಯ ಪಂಥೀಕರಣವನ್ನೂ ಸಹ ನಿರ್ದಾಕ್ಷಿಣ್ಯವಾಗಿ ವಿಡಂಬಿಸಿದರು , ವಿರೋಧಿಸಿದರು. ನೋಡಿ ಅವರ ಈ ವಚನವನ್ನು
ಸೃಷ್ಟಿಗೆ ಹುಟ್ಟಿದ ಶಿಲೆ,
ಕಲ್ಲು ಕುಟಿಕಂಗೆ ಹುಟ್ಟಿದ ಮೂರುತಿ ,
ಮಂತ್ರಕ್ಕೆ ಅಂಗವಾಯಿತ್ತಲ್ಲಾ
ಈ ಮೂವರಿಗೆ ಹುಟ್ಟಿದ ಮಗನ ಲಿಂಗವೆಂದು ಕೈವಿಡಿದ
ಅಚ್ಚ ವ್ರತಗೇಡೀಗಳನೇನೆಂಬೆ ಗುಹೇಶ್ವರ
ಇಡಿಯಾಗಿ ಅಲ್ಲಮನನ್ನು ಅರ್ಥ ಮಾಡಿಕೊಂಡರೆ ಎಲ್ಲ ಕುರುಡು ಧಾರ್ಮಿಕ ಪಂಥಗಳ ವಿರೋಧಿ ಅಲ್ಲಮ .ಸ್ವತಃ ಅಲ್ಲಮನೆ ಅದ್ವೈತ ತತ್ವವನ್ನು ಒಂದು ಮಾರ್ಗ ದರ್ಶಕ ತತ್ವವಾಗಿ ಒಪ್ಪಿರುವ ವಚನಗಳೂ ಇವೆ. ಹಾಗಾಗಿ ತಾವು ತಿಳಿಸಿರುವ ವಚನ ಶಂಕರರನ್ನೇ ಕುರಿತು ಬರೆದುದು ಎಂಬುದನ್ನು ತಮ್ಮ ವಿವೇಚನೆಗೇ ಬಿಡುತ್ತೇನೆ
ಉ: ಅನನ್ಯ ಅಲ್ಲಮ ೭
ಚಿನ್ನದಂತಹ ಮಾತು. ಈ ಮಾತನ್ನು ಶಂಕರನ ಎಲ್ಲ ಅನುಯಾಯಿಗಳು ತಿಳಿದುಕೊಳ್ಳಬೇಕು. ಶಂಕರನು ಒಬ್ಬ ಅದ್ವೈತಿ, ಆದರೆ 'ಶಂಕರನೇ ಅದ್ವೈತ, ಅದ್ವೈತವೇ ಶಂಕರ' ಅಂತ ಕಟ್ಟುಬಿಗಿದುಕೊಂಡುಬಿಟ್ಟರೆ, ಶಂಕರನನ್ನು ಮೀರಿದ ಅದ್ವೈತಿಯಾಗಿ ಬೆಳೆಯಲು ತೊಡಕಾಗುತ್ತದೆ.
ಒಳ್ಳೆಯ ಕಾಮೆಂಟ್ ಹಾಕಿದಿರೆ. ನಲಿವೆನಿಸಿತು.
ಶಂಕರ ಮತ್ತು ಅಲ್ಲಮ ಪ್ರಭು ಎಳೆಯಲ್ಲಿ ಹಾಕಿದ ವಚನ ಮತ್ತು ಮುಖ್ಯವಾಗಿ ಶಂಕರನನ್ನು ಎಳೆದು ತಂದ ವ್ಯಾಖ್ಯಾನ ಎರಡೂ ನನ್ನದಲ್ಲ, ಆ ಪುಸ್ತಕವನ್ನು ಬರೆದ ಎನ್.ಬೋರಲಿಂಗಯ್ಯನವರದು.
ಕೊಕೊ - ಶಂಕರನಿಗೂ ಮುಂಚೆ ದ್ರಮಿಳಾಚಾರ್ಯ ಎಂಬುವರು ಅದ್ವೈತದ ಬಗ್ಗೆ ಭಾಷ್ಯಗಳನ್ನು ಬರೆದಿದ್ರಂತೆ, ಇದರ ಬಗ್ಗೆ ಯಾರಿಗಾದರೂ ಏನಾದರೂ ತಿಳಿದಿದೆಯೇ ?
ಉ: ಅನನ್ಯ ಅಲ್ಲಮ ೭
ಸೃಷ್ಟಿಗೆ ಹುಟ್ಟಿದ ಶಿಲೆ,
ಕಲ್ಲು ಕುಟಿಕಂಗೆ ಹುಟ್ಟಿದ ಮೂರುತಿ ,
ಮಂತ್ರಕ್ಕೆ ಅಂಗವಾಯಿತ್ತಲ್ಲಾ
ಈ ಮೂವರಿಗೆ ಹುಟ್ಟಿದ ಮಗನ ಲಿಂಗವೆಂದು ಕೈವಿಡಿದ
ಅಚ್ಚ ವ್ರತಗೇಡೀಗಳನೇನೆಂಬೆ ಗುಹೇಶ್ವರ
ಈ ವಚನಕ್ಕೆ ನನ್ನ ಅನಿಸಿಕೆ. .......
ನನಗೆ ಅನ್ನಿಸುವ ಮಟ್ಟಿಗೆ ಇಲ್ಲಿ ಅಲ್ಲಮ "ಸ್ಥಾವರ-ಲಿಂಗ" ಮತ್ತು ಮೂರ್ತಿ ಪೂಜೆಯನ್ನು ಟೀಕಿಸಿದಾನೆ.
"ಇಷ್ಟ ಲಿಂಗ" ವನ್ನಲ್ಲ!.
ಅತ್ವ ...ಇಷ್ಟ ಲಿಂಗ ಪೂಜೆಯನ್ನು ಮೂರ್ತಿ ಪೂಜೆಯ ಮಟ್ಟಕ್ಕೆ ಇಳಿಸಿದ ಜನರಿಗೆ ಈ ಮಾತನ್ನು ಹೇಳಿರಬಹುದು. ತಂತ್ರಕ್ಕಿಂತ ಯಂತ್ರಕ್ಕೆ ಮಾನ್ಯತೆ ಕೊಟ್ಟವರಿಗೆ?!
ಅಂದ ಹಾಗೆ ಇಷ್ಟ ಲಿಂಗವು ( ನನಗೆ ತಿಳಿದಿರುವಂತೆ ) ಕಲ್ಲಿನಿಂದ ಮಾಡಲ್ಪಟ್ಟಿರುವುದಿಲ್ಲ. ಬಹುಶ: ರಸ ವಿದ್ಯೆಯ ಕೆಲವಂಶಗಳನ್ನು ಬಳಸಿಕೊಂಡು ನಿರ್ಮಿಸಿರುತ್ತಾರೆ ಅನ್ನಿಸುತ್ತದೆ.
ಸವಿತೃ
ಉ: ಅನನ್ಯ ಅಲ್ಲಮ ೭
ಪ್ರಿಯ ಸವಿತೃ
ಇಲ್ಲಿ ಇಷ್ಟಲಿಂಗವನ್ನು ಯಾವ ಭೌತಿಕ ಪದಾರ್ಥದಿಂದ ನಿರ್ಮಿಸುತ್ತಾರೆ? ಶಿಲೆಯೇ,ಲೋಹವೇ , ರಾಸಾಯನಿಕಗಳ ಮಿಶ್ರಣವೇ ಎಂಬುದು ಮುಖ್ಯ ಪ್ರಶ್ನೆಯಲ್ಲ .ಅದರ ಹಿಂದಿನ , ಮನೋಭಾವ ಮುಖ್ಯ . ಜನ ಸಾಮಾನ್ಯರನ್ನು ಮೊದಲು ಬಿಡುಗಡೆಗೊಳಿಸಬೇಕಾಗಿದ್ದುದು , ಪೂಜಾರಿ, ಪುರೋಹಿತರು ಇವರುಗಳ ಕಪಿ ಮುಷ್ಟಿಯಿಂದ.
ಮೊದ ಮೊದಲು ದೇವಾಲಯಗಳು ಸಾರ್ವಜನಿಕ, ಸಾಂಸ್ಕೃತಿಕ ಕೇಂದ್ರಗಳಾಗಿದ್ದುದು ನಿಜ . ನಂತರ ಮಾನವಕೃತ ಎಲ್ಲ ಸಂಸ್ಥೆಗಳು ಅಂತಿಮವಾಗಿ ತಲುಪುವ ದುರವಸ್ಥೆಯಂತೆ, ಅವೂ ಸಹ ಶೋಷಣೆ, ಢಂಭಾಚರಣೆ, ಪಕ್ಷಪಾತ , ಬಲಾಢ್ಯರ ಆಡುಂಬೋಲಗಳಾದುದರಿಂದ , ದೇವಾಲಯ ಸಂಸ್ಕೃತಿಯನ್ನು ತಿರಸ್ಕರಿಸುವ ಅಗತ್ಯ ಬಂತು .’ನೀನು ದೇವಾಲಯದೊಳಗೆ ಬರಬೇಡ’ ಎಂದರೆ ’ನಿನ್ನದೇವಾಲಯ ಯಾರಿಗೆ ಬೇಕು?’ ಎನ್ನುವ ಮಾನವ ಘನತೆಯ ಪ್ರಶ್ನೆ ಇಲ್ಲಿ ಮುಖ್ಯವಾಯಿತು .
ವೀರಶೈವದ ಇಷ್ಟಲಿಂಗದ ಪರಿಕಲ್ಪನೆ ,ಮಧ್ಯವರ್ತಿಗಳ ಅವಶ್ಯಕತೆ ಇಲ್ಲದ ಅವರವರ ಮನಸ್ಸಿನ , ಆತ್ಮದ ಅನುಸಂಧಾನದ ಹಕ್ಕು ಅವರದೇ ,ಎನ್ನುವ ಮೂಲ ತತ್ವಗಳೊಡನೆ ಮಿಳಿತವಾದ ಒಂದು ಆಚರಣೆ. ಯೋಗದ ಕೆಲವು ಸರಳ ತತ್ವಗಳನ್ನು ಜನ ಸಾಮಾನ್ಯರ ಅಗತ್ಯಕ್ಕೆ ಅನುಗುಣವಾಗಿ ಅಳವಡಿಸಿದ ಔಪಾಸನಾ ವಿಧಾನ ಅದು . ಆದರೆ ಇದು ಸಹ ಯಾಂತ್ರೀಕರಣಗೊಳ್ಳುವ,ಪಂಥೀಕರಣಗೊಳ್ಳುವ , ಮನುಷ್ಯರ ನಡುವೆ ಭೇದ ತರುವ ಅಪಾಯವನ್ನು ಮನಗಂಡವರು ಅಲ್ಲಮ .
ಅಲ್ಲಮ ಬಸವಣ್ಣನವರ ಮೊದಲ ಭೇಟಿಯೇ ಸಾಂಕೇತಿಕವಾಗಿ ಈ ವಿಷಯವನ್ನು ಕೈಗೆತ್ತಿಕೊಳ್ಳುತ್ತದೆ .ಅಲ್ಲಮ ಬಸವಣ್ಣನವರನ್ನು ಕಾಣಲು ಅವರ ಮನೆಯ ಮುಂದೆ ಬಂದಾಗ . ಬಸವಣ್ಣ ಇಷ್ಟಲಿಂಗ ಪೂಜೆಯಲ್ಲಿ ಮೈ ಮರೆತಿರುವ ವಿಷಯ ತಿಳಿಯುತ್ತದೆ .ಇದರಿಂದ ಮುನಿದ ಅಲ್ಲಮ ಅಲ್ಲಿಂದ ಹೊರಟೇಬಿಡುತ್ತಾನೆ .ನಂತರ ಬಸವಣ್ಣನವರು ಅಲ್ಲಮನನ್ನು ಸಾಂತ್ವನಗೊಳಿಸುವಲ್ಲಿಯೇ ಈ ಇಷ್ಟಲಿಂಗದ ಚರ್ಚೆ ಮೊದಲಾಗುತ್ತದೆ ...........’ಅನನ್ಯ ಅಲ್ಲಮ’ದಲ್ಲಿಯೇ ಶರಣರ ವಚನಗಳ ಆಧಾರಗಳ ಮೇಲೆಯೇ ಈ ವಿಷಯವನ್ನು ಹಂಚಿಕೊಳ್ಳವ ಆಸೆ ಇರುವುದರಿಂದ ಇಲ್ಲಿ ಇಷ್ಟು ಸಾಕು . ಚರ್ಚೆಯನ್ನು ಮುಂದುವರಿಸಿದ್ದಕ್ಕಾಗಿ ಧನ್ಯವಾದಗಳು