ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ಲೇಖನ ಮೊದಲು ‘ಕಲರವ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
..............................
ಸಮಾನತೆ, ಸ್ತ್ರೀವಾದದ ಬಗ್ಗೆ ಮಾತನಾಡುವ ಮೊದಲು ನಮ್ಮ ಸಮಾಜ ಸಮಾನತೆಯ ಸಮಾಜವಾ ಎಂಬುದನ್ನು ಕೂಲಂಕುಶವಾಗಿ ಪರಿಶೀಲಿಸಬೇಕು. ನಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳು ಗಂಡಿನ ಸರಿಸಮಾನವಾಗಿ ಓದಬಹುದು, ಕೆಲಸಗಿಟ್ಟಿಸಿಕೊಳ್ಳಬಹುದು, ಸಂಪಾದನೆ ಮಾಡಬಹುದು. ಇದನ್ನೆಲ್ಲಾ ಹೆಮ್ಮೆಯಿಂದ, ಮಮತೆಯಿಂದ ಕಾಣುವ ನಮಗೆ ಆಕೆ ಗಂಡಿನ ಸರಿ ಸಮಾನವಾಗಿ ಸ್ವೇಚ್ಛಾಚಾರಕ್ಕಿಳಿದರೆ ಸಹಿಸಲು ಸಾಧ್ಯವೇ? ಗಮನಿಸಿ ನೋಡಿ, ಮಗ ಮನೆಗೆ ತಡವಾಗಿ ಬರಲಾರಂಭಿಸಿದರೆ ಆತನ ಸಹವಾಸದ ಬಗ್ಗೆ ಸಂಶಯ ಬರಬಹುದು. ಆತನೇನಾದರೂ ಕೆಟ್ಟ ಚಟಗಳಿಗೆ ಅಂಟಿಕೊಂಡಿದ್ದಾನಾ ಎಂಬ ಆತಂಕ ಕಾಡಬಹುದು. ಅದನ್ನು ನಾವು ಪ್ರಶ್ನಿಸುತ್ತೇವೆಯೇ ಹೊರತು ಮನೆಗೆ ತಡವಾಗಿ ಬರುವ ಅವನ ಸ್ವಾತಂತ್ರ್ಯವನ್ನಲ್ಲ. ಆದರೆ ಅದೇ ಹೆಣ್ಣು ಮಗಳು ಸಕಾರಣಕ್ಕಾಗಿ ಮನೆಗೆ ತಡವಾಗಿ ಬರುತ್ತಿದ್ದಾಳೆ ಎಂದರೆ ನಾವು ವರ್ತಿಸುವ ರೀತಿಯಿದೆಯಲ್ಲಾ, ಅದನ್ನು ಗಮನಿಸಬೇಕು. ನಾವು ಮೊಟ್ಟಮೊದಲು ಆಕೆಯ ವ್ಯಕ್ತಿತ್ವವನ್ನೇ ಸಂಶಯಿಸುತ್ತೇವೆ, ಆಕೆಯ ಆತ್ಮಗೌರವವನ್ನೇ ನಾವು ಅನುಮಾನಿಸುತ್ತೇವೆ. ಆಕೆಯನ್ನು ಹೊರಗೇ ಹೋಗದ ಹಾಗೆ ಕಟ್ಟು ನಿಟ್ಟು ಮಾಡುತ್ತೇವೆ. ಆಕೆಯ ಎಲ್ಲಾ ಖಾಸಗಿ ಸಂಗತಿಗಳಲ್ಲಿ ಮೂಗು ತೂರಿಸುತ್ತೇವೆ. ನಮ್ಮ ಮನಸ್ಥಿತಿ ಹೀಗಿರುವಾಗ ಹೆಣ್ಣು ಮಕ್ಕಳು ಗಂಡಿನ ಸರಿಸಮಾನವಾಗಿ ಸ್ವೇಚ್ಛೆಗಿಳಿಯುವುದು ಸ್ವಾತಂತ್ರ್ಯದ ಅಭಿವ್ಯಕ್ತಿಯಾಗುತ್ತದೆಯೇ? ಪೊಳ್ಳು ಸ್ತ್ರೀವಾದವನ್ನು ಭಾಷಣಗಳಲ್ಲಿ ಗಂಟಾಘೋಷವಾಗಿ ಉದ್ಗರಿಸುವ ‘ಲೇಡಿ’ಗಳಿಗೆ ಒಂದು ಸಂಗತಿ ಮನವರಿಕೆಯಾಗಬೇಕು. ಮಹಿಳೆಯ ಮೇಲಿರುವ ನೈತಿಕ ಜವಾಬುದಾರಿಗಳು, ಆಕೆಯ ಮೇಲಿರುವ ಕಟ್ಟುನಿಟ್ಟು, ಆಕೆಯ ವ್ಯಕ್ತಿತ್ವಕ್ಕಿರುವ ಸಭ್ಯತೆಯ ಎಲ್ಲೆ ಎಲ್ಲವನ್ನೂ ನಿರ್ಧರಿಸುವಲ್ಲಿ ಪುರುಷರು ಎಷ್ಟು ಪ್ರಮಾಣದಲ್ಲಿ ಕಾರಣಕರ್ತರೋ ಅದೇ ಪ್ರಮಾಣದಲ್ಲಿ ಮಹಿಳೆಯರೂ ಕಾರಣಕರ್ತರು. ಅಸಭ್ಯವಾಗಿ ವರ್ತಿಸುವ ಮಗಳನ್ನು ಹದ್ದುಬಸ್ತಿನಲ್ಲಿಡಲು ತಂದೆ ಎಷ್ಟು ಪ್ರಯತ್ನ ಮಾಡುತ್ತಾನೋ ಅದರಷ್ಟೇ ಹೆಚ್ಚು ಕಾಳಜಿಯನ್ನು, ಕಠಿಣತೆಯನ್ನು ತಾಯಿಯೂ ತೋರುತ್ತಾಳೆ. ಒಂದು ಕಾಲದಲ್ಲಿ ಅತ್ತೆಯ ಕಟ್ಟುನಿಟ್ಟಿನಲ್ಲಿ ಉಸಿರುಗಟ್ಟಿದ ಭಾವವನ್ನು ಅನುಭವಿಸುವ ಹೆಣ್ಣುಮಗಳೇ ಮುಂದೆ ತನ್ನ ಮಗನಿಗೆ ಹೆಣ್ಣನ್ನು ತಂದಾಗ ಆಕೆಯ ಮೇಲೆ ಕಟ್ಟುನಿಟ್ಟು ಮಾಡುತ್ತಾಳೆ. ಆಕೆಯ ಮೇಲೆ ಇನ್ನಿಲ್ಲದ ನಿಗಾ ಇಡುತ್ತಾಳೆ. ನಮ್ಮ ಸಮಾಜದಲ್ಲಿ ಹೆಣ್ಣು ಅವಕಾಶ ವಂಚಿತೆ ಎಂಬುದು ಸೂರ್ಯನಷ್ಟೇ ಸತ್ಯವಾದ ಸಂಗತಿ. ಆದರೆ ಇದಕ್ಕೆ ಪುರುಷರ ದಬ್ಬಾಳಿಕೆ ಎಷ್ಟರ ಮಟ್ಟಿಗೆ ಕಾರಣವೋ, ಅಷ್ಟೇ ಮಹಿಳೆಯರೂ ಕಾರಣ. ವಾಸ್ತವ ಸ್ಥಿತಿ ಹೀಗಿರುವಾಗ ವಿವೇಚನೆಯಿಲ್ಲದೆ ಎಲ್ಲಕ್ಕೂ ಪುರುಷರನ್ನೇ ಅಪರಾಧಿಯಾಗಿ ನಿಲ್ಲಿಸಿ ಏಕಪಕ್ಷೀಯವಾದ ಜಡ್ಜ್ ಮೆಂಟುಗಳನ್ನು ಹೊರಡಿಸುವುದು ಸರಿಯೇ? ಸಮಾಜ ಸೃಷ್ಟಿಸಿರುವ ಸಿದ್ಧ ಮಾದರಿಗಳಿಗೆ ಸ್ತ್ರೀಯರಷ್ಟೇ ಪುರುಷರೂ ಬಾಧ್ಯರಾಗಿದ್ದಾರೆ. ಒಬ್ಬ ಹುಡುಗನನ್ನು ನಾವು ಪೋಲಿ ಎನ್ನುವುದಕ್ಕೂ, ಒಬ್ಬ ಹುಡುಗಿಯನ್ನು ಆಕೆ ಸ್ವಲ್ಪ ಸಡಿಲ ಎನ್ನುವುದಕ್ಕೂ ವ್ಯತ್ಯಾಸವಿದೆ. ಹೀಗಾಗಿಯೇ ಶೀಲವೆಂಬುದು ಕೇವಲ ಹೆಣ್ಣಿಗೆ ಸಂಬಂಧಿಸಿದ ಸಂಗತಿಯಾಗಿದೆ. ಸಭ್ಯತೆ, ಮರ್ಯಾದೆ, ಸೌಜನ್ಯಗಳು ಸಮಾಜ ಹೆಣ್ಣಿನ ಮೇಲೆ ಹೇರಿರುವ ಸಂಕೋಲೆಗಳು. ಒಂದು ವೇಳೆ ಇವು ಕೇವಲ ಸಂಕೋಲೆಗಳು ಎಂಬ ಅರಿವು ಹೆಣ್ಣಿನಲ್ಲಿದ್ದರೆ ಅವುಗಳನ್ನು ಮುರಿದು ಮುಕ್ತರಾಗುವ ಸಾಧ್ಯತೆಯಿರುತ್ತಿತ್ತು, ಆದರೆ ದುರದೃಷ್ಟದ ಸಂಗತಿಯೆಂದರೆ ಹೆಣ್ಣು ಸಮಾಜ ವಿಧಿಸಿದ ಈ ಸಂಕೋಲೆಗಳನ್ನು ಆಭರಣಗಳನ್ನಾಗಿ ಧರಿಸಿಕೊಂಡು ಓಡಾಡುತ್ತಿದ್ದಾಳೆ. ಅವುಗಳನ್ನು ಮೆರೆಸುವ, ಗೌರವ, ಹೆಮ್ಮೆ ಪಟ್ಟುಕೊಳ್ಳುವ ವಸ್ತುವಾಗಿ ಆಕೆ ಪರಿಗಣಿಸಿದ್ದಾಳೆ. ಹೀಗಾಗಿಯೇ ಒಬ್ಬ ಹೆಣ್ಣನ್ನು ಪತಿವೃತೆ, ಸತಿಯೇ ದೇವರು ಎಂದು ನಂಬಿಕೊಂಡಾಕೆ ಎಂದಾಗ ಆ ಹೆಣ್ಣಿಗೆ ಸಮಾಜದಲ್ಲಿ ಗೌರವ ದೊರೆಯುತ್ತದೆ, ಆಕೆಗೆ ಆ ಬಗ್ಗೆ ಹೆಮ್ಮೆಯೆನಿಸುತ್ತದೆ. ಹೀಗೆ ಆಕೆ ತನ್ನ ವ್ಯಕ್ತಿತ್ವದ ಘನತೆಗೆ ಸಮಾಜವನ್ನು ಅವಲಂಬಿಸಿರುವಾಗ, ಸರಪಳಿಗಳನ್ನೇ ಆಭರಣಗಳೆಂದು ಭಾವಿಸಿರುವಾಗ ಅವುಗಳನ್ನು ಮೀರಲು ಮಾಡಿದ ಪ್ರಯತ್ನಗಳು ಸಮಾಜದ ಕಣ್ಣಿಗೆ ಅನಾರೋಗ್ಯಕರವಾಗಿ ಕಾಣುತ್ತದೆ. ಹೆಣ್ಣು ಪ್ರಚೋದನಕಾರಿಯಾಗಿ ಬಟ್ಟೆ ತೊಡುವುದರಿಂದ, ಸಿಗ್ಗಿಲ್ಲದ ಹಾಗೆ ವರ್ತಿಸುವುದರಿಂದ, ಗಂಡುಗಳಿಗೆ ಸಮಾನವಾಗಿ ಮದ್ಯಪಾನ, ಸಿಗರೇಟು ಸೇದುತ್ತಾ ನಿಲ್ಲುವುದರಿಂದ ಆಕೆ ಪುರುಷರನ್ನು ಆಕರ್ಷಸಿವುದು, ಪ್ರಚೋದಿಸುವುದಲ್ಲದೆ ತನ್ನ ವ್ಯಕ್ತಿತ್ವವನ್ನೇ ತಾನು ಕೀಳು ಮಟ್ಟಕ್ಕೆ ಎಳೆದುಕೊಂಡಂತಾಗುತ್ತದೆ. ಇಲ್ಲಿ ತುಂಬಾ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ, ಅಡಸಾಬಡಸಾ ಬಿಹೇವಿಯರ್ ಇರುವ ಹೆಣ್ಣು ಕೇವಲ ಗಂಡಸಿನ ಕಣ್ಣಿಗೆ ಅಗ್ಗವಾಗಿ ಕಾಣಿಸುವುದಿಲ್ಲ, ಉಳಿದ ಹೆಣ್ಣುಗಳ ನಡುವೆಯೂ ಆಕೆಯ ಅಗ್ಗವಾದ ಇಮೇಜು ಚಾಲ್ತಿಯಲ್ಲಿರುತ್ತದೆ. ಹೀಗಾಗಿ ಆಕೆಯ ಅಂತಃಸತ್ವ ಹೇಗೇ ಇದ್ದರೂ ಸಹ ತೊಡುವ ಬಟ್ಟೆಯಿಂದ ಹುಟ್ಟುವ ವ್ಯಕ್ತಿತ್ವವಿದೆಯಲ್ಲಾ, ಅದು ಅಗ್ಗದ್ದಾಗಿರುತ್ತದೆ. ಸಭ್ಯತೆಯ ಮಾನದಂಡ ದೇಶ, ಕಾಲಗಳಿಗೆ ತಕ್ಕಂತೆ ಬದಲಾಗುವಂಥದ್ದು ಎಂಬುದು ಎಲ್ಲರೂ ಒಪ್ಪಿಕೊಳ್ಳಬೇಕಾದ ಸಂಗತಿ. ಆದರೆ ಹೆಣ್ಣು ತಾನು ತೊಡುವ ಬಟ್ಟೆಯ ಬಗ್ಗೆ ಯೋಚಿಸುವಾಗ ಅಷ್ಟೆಲ್ಲಾ ವೈಚಾರಿಕವಾಗಿ ಚಿಂತಿಸುವ ಅಗತ್ಯವಿಲ್ಲ. ಕಳ್ಳಕಾಕರು ಹೆಚ್ಚಿರುವ ಪ್ರದೇಶದಲ್ಲಿ, ನಿರ್ಜನವಾದ ರಸ್ತೆಯಲ್ಲಿ ಹೊತ್ತು ಕಳೆದ ಮೇಲೆ ಸಂಚರಿಸುವ ಸಂದರ್ಭದಲ್ಲಿ ನಾವು ಸಹಜವಾಗಿ ನಮ್ಮ ಎಚ್ಚರಿಕೆಯಿಂದ ಬೆಲೆಬಾಳುವ ವಾಚು, ರಿಂಗು, ಚೈನು, ಮೊಬೈಲುಗಳನ್ನು ಒಳಕಿಸೆಗಳಲ್ಲಿಟ್ಟುಕೊಂಡು ಜೋಪಾನ ಮಾಡಿಕೊಳ್ಳುತ್ತೇವಲ್ಲಾ, ಬಸ್ಸಿನಲ್ಲಿ ದೂರ ಪ್ರಯಾಣ ಮಾಡುವಾಗ, ರೈಲಿನಲ್ಲಿ ಹೋಗುವಾಗ ಹಣವನ್ನೆಲ್ಲಾ ಕಳ್ಳ ಜೇಬಿನಲ್ಲಿಟ್ಟುಕೊಳ್ಳುತ್ತೇವಲ್ಲಾ ಹಾಗೆ ಹೆಣ್ಣು ತನ್ನ ದೈಹಿಕ ಪಾವಿತ್ರ್ಯಕ್ಕೆ ಪ್ರಾಮುಖ್ಯತೆ ಕೊಡುವುದಾದರೆ ಹಾಗೂ ಅದಕ್ಕೆ ಸಮಾಜ ಕೊಡುವ ಬೆಲೆಯನ್ನು ನಂಬಿಕೊಂಡವಳಾದರೆ ಆಕೆ ತನ್ನ ಹುಷಾರಿನಲ್ಲಿ ತಾನಿರಬೇಕು. Of course, ಕಳ್ಳತನ ಮಾಡುವುದು, ಪಿಕ್ ಪಾಕೆಟ್ ಮಾಡುವುದು ಅಪರಾಧವೇ, ಅದರಲ್ಲಿ ತೊಡಗಿದವರನ್ನು ಶಿಕ್ಷಿಸುವುದಕ್ಕಾಗಿಯೇ ಕಾನೂನು, ಪೊಲೀಸು,ಕೋರ್ಟುಗಳಿರುವುದು ಹಾಗಂತ ನಮ್ಮ ರಕ್ಷಣೆಯನ್ನು ನಾವು ನಿರ್ಲಕ್ಷಿಸುವುದಕ್ಕೆ ಸಾಧ್ಯವೇ? ಇದನ್ನು ಹೆಣ್ಣು ತನ್ನ ಸುರಕ್ಷತೆಗಾಗಿ ತಾನು ಕಂಡುಕೊಳ್ಳಬೇಕಾದ ಉಪಾಯವೆಂದು ಕಾಣಬೇಕೇ ಹೊರತು ತನಗೆ ಸಮಾಜ ವಿಧಿಸಿದ ಕಟ್ಟಳೆ ಎಂದು ಭಾವಿಸಬಾರದು. ಹಾಗೆ ಭಾವಿಸಿದಾಗ ಅದನ್ನು ಮೀರುವ ಹುಚ್ಚು ಉನ್ಮಾದ ಬೆಳೆಯುತ್ತದೆ. ಏನಂತೀರಿ?

- Login or register to post comments
- 823 hits
- Email this page




RSS:
ಪ್ರತಿಕ್ರಿಯೆಗಳು
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
"ಹೀಗಾಗಿಯೇ ಶೀಲವೆಂಬುದು ಕೇವಲ ಹೆಣ್ಣಿಗೆ ಸಂಬಂಧಿಸಿದ ಸಂಗತಿಯಾಗಿದೆ."--
ಅಬ್ಬಾ..ಏನ್ ಬರ್ದಿದೀರ್ ರೀ..ಎಂತಾ ಆಲೋಚನೆ..ನಿಮ್ಮಂತವರು ಇರೋ ತನಕ ನಾವ್ ಉದ್ಧಾರ ಅಗೋಕ್ ಆಗಲ್ಲ ಬಿಡಿ.
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ನೀವು ಏನು ಬರಿಲಿಕ್ಕೆ ಹೊಂಟೀರಿ ಅಂತ ನನಗ ಅರ್ಥ ಆಗಲಿಲ್ಲ. ಒಂಥರಾ ಅಡ್ಡಗೋಡೆ ಮೇಲೆ ದೀಪ ಇಟ್ಟಂಗ. ನಮ್ಮ ಸಮಾಜದಲ್ಲಿ ಹೆಣ್ಣಿಗೆ ಸಮಾನತೆ ಇಲ್ಲ ಅಂತ ನಿಮಗನ್ನಿಸಿದ್ದರೆ ಇವತ್ತು ನಮ್ಮ ಅದೇ ಸಮಾಜದಲ್ಲಿ ತಾಯಂದಿರು, ಅಕ್ಕತಂಗಿಯರು ಅನ್ನೋ ಪದಗಳು ಮೂಲೆಗುಂಪಾಗಿರುತ್ತಿದ್ದವು. ಸಂಬಂಧಗಳು ಸುಟ್ಟುಹೋಗಿ ಎಷ್ಟೋ ದಿನಗಳಾಗಿರುತ್ತಿದ್ದವು. ನಮ್ಮ ದೇಶದಲ್ಲಿ ಹೆಣ್ಣಿಗೆ ಒಂದು ’ಸ್ಥಾನ’ ಅನ್ನೋದು ಇಲ್ಲಾ ಅಂದಿದ್ರೆ ಇವತ್ತು ಕಿತ್ತೂರು ಚೆನ್ನಮ್ಮಾ, ಝಾನ್ಸಿರಾಣಿ ಲಕ್ಷ್ಮೀಬಾಯಿ, ರಾಣಿ ಅಬ್ಬಕ್ಕ ಹಾಗೂ ಕೆಳದಿ ಚೆನ್ನಮ್ಮಾ ಅನ್ನೋ ಹೆಸರುಗಳನ್ನು ಕೇಳ್ತಾನೂ ಇರಲಿಲ್ಲ ಅನ್ಸುತ್ತೆ. ಪರಕೀಯರು ನಮ್ಮನ್ನಾಳೋದಕ್ಕೂ ಮುಂಚೆ ಎಲ್ಲಾ ಸರಿಯಾಗೇ ಇತ್ತು ಆದರೆ ಅವರು ಬಂದಮೇಲೆ ಅವರು ನಮ್ಮಲ್ಲಿ ಒಡಕನ್ನುಂಟುಮಾಡಿ ನಮ್ಮನಮ್ಮಲ್ಲೇ ಕಿತ್ತಾಡೋ ಹಾಗೆ ಮಾಡಿದರು. ಮತ್ತೆ ಪರಂಗಿಗಳು ನಿಮ್ಮ ಆಚಾರ ಸರಿಇಲ್ಲಾ, ನೀವು ಕರಿಯರು ನೀವು ಅನಾಗರಿಕರು ನಿಮಗೆ ನಾಗರೀಕತೆ ಗೊತ್ತಿಲ್ಲ; ನಾವು ಬಿಳಿಯರು, ನಮ್ಮ ಸಂಸ್ಕೃತಿ ಹೆಚ್ಚಿನದು ದೇವರು ನಿಮ್ಮನ್ನಾಳಲೆಂದೇ ನಮ್ಮನ್ನು ಕಳಿಸಿದ್ದಾನೆ ಹಾಗೆ ಹೀಗೆ ಅಂತ ನಮ್ಮ ತಲೇಲಿ ಎರಡೂವರೆ ನೂರು ವರ್ಷಗಳ ಕಾಲ ಅದನ್ನು ತುಂಬಿದರು. ನಾವು ಅವರು ಹೇಳಿದ್ದೇ ವೇದವಾಕ್ಯ ಅಂತ ನಂಬಿ ಬಿಟ್ಟೆವು. ಮೆಕಾಲೆ ಇಂಗ್ಲೀಷ ಶಿಕ್ಷಣ ಪದ್ಧತಿ ತಂದರು ನಿಮ್ಮ ಶಿಕ್ಷಣ ಪದ್ಧತಿಗಿಂತ ಆಂಗ್ಲ ಶಿಕ್ಷಣ ಪದ್ಧತಿ great ಅಂತ ಹೇಳಿದರು ನಮ್ಮ ಜನರು ಅದನ್ನ ನಂಬಿ ಅದೇ ದೊಡ್ಡದು ಎನ್ನುವ ರೀತಿಯಲ್ಲಿ ಕಲಿತರು. ಅದೇ ಪರಿಣಾಮದ ಒಂದು ತುಣುಕು ಸ್ತ್ರೀ ಸಮಾನತೆ.
ಸ್ತ್ರೀ ಸಮಾನತೆ ಬೇಕು ಅಂತ ತಗಾದೆ ತೆಗೆಯೋರು ಲೇಡೀಸ್ ಕ್ಲಬ್ಬಲ್ಲಿ, ಮಹಿಳಾ ಸಮಾಜದಲ್ಲಿ ಕುಂತು ಮಾತಾಡೋರು. ನಿಮಗೊಂದು ವಿಷಯ ಗೊತ್ತಾ ೧೯೫೦ ತನಕ ಯುರೋಪಲ್ಲಿ ಒಂದು ಹೆಣ್ಣಿನ ಹೆಸರಿನಲ್ಲಿ ಬ್ಯಾಂಕ ಅಕೌಂಟ್ ಇರಲಿಲ್ಲ ಬೇಕಾದರೆ ಇತಿಹಾಸ ತಿರುವಿಹಾಕಿ ಮತ್ತು ನ್ಯಾಯಾಲಯಗಳಲ್ಲಿ ಹೆಣ್ಣು ಸಾಕ್ಷಿ ಹೆಳುವುದಕ್ಕೆ ಅರ್ಹಳಲ್ಲ ಅಂತ ಅಲ್ಲಿನ ಸರ್ಕಾರ ನಿರ್ಬಂಧ ವಿಧಿಸಿತ್ತು ತಿಳಿಯಿರಿ. ಮಹಿಳೆಯರನ್ನು ಅಲ್ಲಿ ಜನ ಒಂದು ವಸ್ತುವಿನ ತರಹ ಬಳಸ್ತಿದ್ರು, ಬೇಕಾದರೆ google ನಲ್ಲಿ ಹುಡುಕಿ witch hunting ಅಂತ. ಇಲ್ಲಿ ಈಗಿನ ಮಹಿಳೆ ಸಮಾನತೆ ಬೇಕು ಅಂತ ಹೇಳೋದು ಸ್ವೇಚ್ಛಾಚಾರಕ್ಕೆ ಹೊರತು ಸ್ವಾತಂತ್ರಕ್ಕಲ್ಲ. ಆಜಾದಿ ಬಚಾವೋ ಅಂದೋಲನದ ಮುಖ್ಯ ಕಾರ್ಯದರ್ಶಿ ’ರಾಜೀವ್ ದಿಕ್ಷೀತ’ರ "ಭಾರತದ ಸಂಸ್ಕೃತಿ ಮತ್ತು ಯುರೋಪ ಸಂಸ್ಕೃತಿ" ಅನ್ನೋ ಬಗ್ಗೆ ಒಂದು ಡಿವಿಡಿ ಇದೆ ಬೇಕಾದರೆ ನೋಡಿ.
ಡಿವಿಡಿ ಬೇಕಾದರೆ ನನ್ನನ್ನ ಭೇಟಿಮಾಡಿ ನನ್ನ ದೂರವಾಣಿ-೯೩೪೧೨ ೧೫೯೭೫
ನಿಮ್ಮವ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ಅವರವರ ಇಷ್ಟಕ್ಕೆ ತಕ್ಕಂತೆ ಜನ ಬಟ್ಟೆ ಹಾಕ್ತಾರೆ.ಸಭ್ಯ,ಅಸಭ್ಯ ಅನ್ನೋದು ಅಲ್ಲಿನ ಪರಿಸರದ ಮೇಲೆ ಅವಲಂಬಿತ.ಅಮೇರಿಕದಲ್ಲಿ ಹುಡುಗಿಯರು ಹಾಕೋ ಬಟ್ಟೆ ಅಲ್ಲಿ ಸಭ್ಯ ಎನಿಸಿದ್ದರೂ, ಅದು ನಮ್ಮ ದೇಶದಲ್ಲಿ ಅಸಭ್ಯ,ಅಶ್ಲೀಲ ಅನಿಸಬಹುದು.ಬಟ್ಟೆಯಿಂದ ಸ್ವಾತಂತ್ರವನ್ನು ಅಳೆಯುವುದು ಸರಿ ಅಲ್ಲ.ಯೂನೀಕ್ಸುಪ್ರಿಯವರ, ನಮ್ಮ ಸುರಕ್ಷೆಗೆ ನಾವು ಸರಿಯಾದ ಬಟ್ಟೆ ತೊಡಬೇಕು ಅನ್ನೋ ವಾದವನ್ನು ಒಪ್ತೇನೆ.ಆದ್ರೆ 'ಹೆಣ್ಣಿಗೆ ಮಾತ್ರ ಶೀಲ ಗಂಡಿಗೇನು ಇಲ್ಲ' ಅನ್ನೋ ಮಾತಿಗೆ ನನ್ನ ವಿರೋಧ.
ನಮಗೆ ದೇವತೆ,ಪೂಜ್ಯಳು ಅನ್ನೋ ಬಿರುದೇನು ಬೇಡ..ನಮ್ಮನ್ನು ನಿಮ್ಮ ಹಾಗೆ ಒಂದು ಜೀವಿ ಅಂತ ನೋಡಿದ್ರೆ ಸಾಕು..
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ASHYMA,
ನನ್ನ ವಾದವನ್ನು ಸರಿಯಾಗ ಗ್ರಹಿಸುವ ಪ್ರಯತ್ನ ಮಾಡಿ. ನಾನು ಶೀಲದ ಪರಿಕಲ್ಪನೆ ಇರುವುದು ಕೇವಲಹೆಣ್ಣಿ ಬಗ್ಗೆ ಅಂತ ಹೇಳಿರುವೆ. ಗಂಡಿಗೆ ಅದು ಇರಬರಾದು ಅಥವಾ ಇಲ್ಲ ಎಂದು ಹೇಳಿಲ್ಲ. ಇಲ್ಲಿ ಹೆಣ್ಣಿನ ಗೌರವದ ಪ್ರಶ್ನೆ ಕೇವಲ ಗಂಡಿನ ಪ್ರಜ್ಞೆಯಲ್ಲಿ ಮಾತ್ರ ಇಲ್ಲ. ಹೆಣ್ಣಿನಲ್ಲೂ ಇದೆ. ಮಗಳು ತನ್ನ ಸ್ವಾತಂತ್ರ್ಯವನ್ು ಸ್ಥಾಪಿಸಲು ಹೊರಡುವಾಗ ಆತಂಕವಾಗುವುದು ಆಕೆಯ ಅಮ್ಮನಿಗೆ , ಆಕೆಯೇ ಆಕೆ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡುತ್ತಾಳೆ. ಹೆಣ್ಣಿನ ಅಡ್ಡಿ ಕೇವಲ ಪುರುಷ ಪ್ರಧಾನ ಸಮಾಜವಲ್ಲ, ಹೆಣ್ಣಿನ ಬಗ್ಗೆ ಹೆಣ್ಣಿನಲ್ಲೇ ಇರುವ ಚಿಂತನೆ....
(ಇದಕ್ಕೆ ಸಂಬಂಧಿಸಿದಂತೆ ನನ್ನ ಇನ್ನೊಂದು ಲೇಖನದ ಮೇಲೆ ಕಣ್ಣೋಡಿಸಿ... )
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ಆ ಲೇಖನದ ಲಿಂಕು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ಆ ಲೇಖನದ ಲಿಂಕು ಇಲ್ಲಿದೆ...
http://kalaravapatrike.wordpress.com/2008/04/24/%e0%b2%b9%e0%b3%80%e0%b2...
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ಗಿರೀಶ್,
ನಿಮ್ಮ ಚಿಂಅತನೆಗಳಲ್ಲಿ ದೀಕ್ಷಿತರ ಪ್ರಭಾವ ಢಾಳಾಗಿ ಕಾಣುತ್ತದೆ. ಬ್ರಿಟನ್ನಿನಲ್ಲಿ ಹಾಗೂ ಇನ್ನಿತರ ಪಾಶ್ಚಾತ್ಯ ದೇಶಗಳಲ್ಲಿ ಮಹಿಳೆಯನ್ನು ಕೀಳಾಗಿ ಕಾಣುವುದಕ್ಕೆ ಕಾರಣ ಅಲ್ಲಿನ ಕ್ಯಾಥೋಲಿಕ್ ಚರ್ಚುಗಳು. ಬೈಬಲ್ಲಿನಲ್ಲಿಯೇ ಅವರು ಹೆಣ್ಣನ್ನು(ಈವ್) ಗಂಡಿನ(ಆಡಮ್) ಮನಸ್ಸು ಕಡಡಿಸಿ ಕೆಡಿಸುವವಳು ಎಂದೇ ಬಿಂಬಿಸಿದ್ದಾರೆ. ಇದು ಕೇವಲ ಚರ್ಚುಗಳ ಅಧಿಪತ್ಯವಿರುವ ರಾಷ್ಟ್ರಗಳಲ್ಲಿ ಮಾತ್ರವಲ್ಲ, ಎಲ್ಲಾ ಧರ್ಮಗಳಲ್ಲೂ ವ್ಯಾಪಕವಾಗಿ ಹರಡಿದೆ. ಹಿಂದೂ ಧರ್ಮದಲ್ಲಿಯಂತೂ ಹೆಣ್ಣನ್ನು ಕಟ್ಟಕಡೆಯ ಪ್ರಜೆಯಾಗಿ ಕಾಣಲಾಗುತ್ತದೆ. ಹೆಣ್ಣು ಮುಕ್ತಿಗೆ ಅಡ್ಡಿ ಎಂದು ಭಾವಿಸುತ್ತಾರೆ. ಏಕೆಂದರೆ ಈ ಧರ್ಮಗಳೆಲ್ಲಾ ಗಂಡಸರ ಸೃಷ್ಟಿಗಳು.
ಸ್ತ್ರೀ ಸ್ವಾತಂತ್ರ್ಯ, ಸಮಾನತೆಯ ಬಗ್ಗೆ ಯಾವ ನೆಲೆಯಲ್ಲಾದರೂ ಮಾತನಾಡಬಹುದು. ಹೆಣ್ಣು ಮುಕ್ತತೆಗೆ, ಪಬ್, ಕ್ಲಬ್ ಸಂಸ್ಕೃತಿಗೆ ತೆರೆದುಕೊಳ್ಳುತ್ತಿರುವುದಕ್ಕೆ ಜಾಗತೀಕರಣ ಕಾರಣ. ಇದು ಹೆಣ್ಣು ಗಂಡೆಂಬ ಬೇಧವಿಲ್ಲದೆ ಎಲ್ಲರನ್ನೂ ವ್ಯಾಪಿಸಿಕೊಂಡಿದೆ. ಮನೆಯೆದುರು ಗೇಟಿನ ಬಳಿ ಗೆಳೆಅತಿಯೊಂದಿಗೆ ಮಾತನಾಡುತ್ತಾ ನಿಲ್ಲುವುದಕ್ಕೆ ಸಂಕೋಚ ಪಡುತ್ತಿದ್ದ ಹುಡುಗ ಈಗ ರಾಜಾರೋಷವಾಗಿ ತಿರುಗಾಡುತ್ತಾನೆ ಎಂದರೆ ಇದು ಒಟ್ಟಾರೆ ನಮ್ಮ ಮನಸ್ಥಿತಿಯಲ್ಲಾಗುತ್ತಿರುವ ಬದಲಾವಣೆಗೆ ಕನ್ನಡಿ. ಆದರೆ ಎಲ್ಲದಕ್ಕೂ ಬ್ರಿಟೀಷರ ಆಳ್ವೀಕೆಯೇ ಮೂಲ ಎಂಬ ಕಪ್ಪು ಕನ್ನಡಿ ಧರಿಸಿ ನೋಡಿದರೆ ಈ ಸೂಕ್ಷ್ಮಗಳು ತಿಳಿಯುವುದಿಲ್ಲ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ಆ ವಾಕ್ಯವನ್ನು ಸರಿಯಾದ ಕಂಟೆಕ್ಸ್ಟ್ ನಲ್ಲಿ ಓದಿಕೊಳ್ಳಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ಆ ಮಾತಿನ ಹಿನ್ನೆಲೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ಸುಪ್ರೀತ್,
"ನಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳು ಗಂಡಿನ ಸರಿಸಮಾನವಾಗಿ ಓದಬಹುದು, ಕೆಲಸಗಿಟ್ಟಿಸಿಕೊಳ್ಳಬಹುದು, ಸಂಪಾದನೆ ಮಾಡಬಹುದು. ಇದನ್ನೆಲ್ಲಾ ಹೆಮ್ಮೆಯಿಂದ, ಮಮತೆಯಿಂದ ಕಾಣುವ ನಮಗೆ ಆಕೆ ಗಂಡಿನ ಸರಿ ಸಮಾನವಾಗಿ ಸ್ವೇಚ್ಛಾಚಾರಕ್ಕಿಳಿದರೆ ಸಹಿಸಲು ಸಾಧ್ಯವೇ?" ಹೆಮ್ಮೆ, ಮಮತೆ- ಅಷ್ಟೆಲ್ಲಾ ಸಮಾನತೆ ಇನ್ನೂ ಎಲ್ಲಾ ಮಟ್ಟದಲ್ಲಿ ಬಂದಿಲ್ಲ ಅನ್ಕೋತೀನಿ! ಸಣ್ಣ ಪುಟ್ಟ ಊರುಗಳನ್ನ ಬಿಡಿ, ಬೆಂಗಳೂರಿನಲ್ಲೇ ನನ್ನ ಗೆಳತಿಯರ ಸರ್ಕಲ್ ನಲ್ಲೇ ಹಲವು ಕುಟುಂಬಗಳಲ್ಲಿ ಓದು-ಕೆಲಸದ ಬಗ್ಗೆ ತಾರತಮ್ಯ, ಹೆಣ್ಣುಮಕ್ಕಳು ಮಾಡಬೇಕಾಗೋ ಗುದ್ದಾಟಗಳನ್ನ ನೋಡಿದ್ದೀನಿ.
"ಮಗ ಮನೆಗೆ ತಡವಾಗಿ ಬರಲಾರಂಭಿಸಿದರೆ ಆತನ ಸಹವಾಸದ ಬಗ್ಗೆ ಸಂಶಯ ಬರಬಹುದು. ... ಆದರೆ ಅದೇ ಹೆಣ್ಣು ಮಗಳು ಸಕಾರಣಕ್ಕಾಗಿ ಮನೆಗೆ ತಡವಾಗಿ ಬರುತ್ತಿದ್ದಾಳೆ ಎಂದರೆ ನಾವು ವರ್ತಿಸುವ ರೀತಿಯಿದೆಯಲ್ಲಾ, ಅದನ್ನು ಗಮನಿಸಬೇಕು. ನಾವು ಮೊಟ್ಟಮೊದಲು ಆಕೆಯ ವ್ಯಕ್ತಿತ್ವವನ್ನೇ ಸಂಶಯಿಸುತ್ತೇವೆ..." ನಿಜ - ಮುಕ್ಕಾಲುಪಾಲು ಕುಟುಂಬಗಳಲ್ಲಿ. ಆದ್ರೆ ಇದು ಒಂದು ಅನಾರೋಗ್ಯಕರ ಮನಸ್ಥಿತಿಯ, ತಾರತಮ್ಯ ಮನೋಭಾವದ ಪರಿಣಾಮ. ಆ ಮನಸ್ಥಿತಿಯ ಬದಲಾವಣೆ ನಮ್ಮ ಅವಶ್ಯಕತೆಯೇ ಹೊರತು ಅದಕ್ಕೇ ಕಟ್ಟುಬಿದ್ದು ಹೆಣ್ಣುಮಕ್ಕಳು ಕಟ್ಟುಪಾಡುಗಳನ್ನ ಅನುಸರಿಸೋದಲ್ಲ. ಪರಿಸ್ಥಿತಿಯ ಚಿತ್ರಣದಲ್ಲಿ ನೀವು ತೋರಿಸಿರೋ ಪಕ್ವತೆ ಅದರಮೇಲೆ ನೀವು ನೀಡಿರೋ ವಾದಕ್ಕೆ ಇಲ್ಲ ಅನಿಸ್ತಿದೆ.
ಸಿದ್ಧಮಾದರಿಗಳನ್ನ ಪ್ರಶ್ನಿಸೋ ಅಗತ್ಯ, ಮೀರಿ ನಿಲ್ಲೋ ಅಗತ್ಯ ಸಮಾಜದ ಆರೋಗ್ಯಕ್ಕೆ ಮುಖ್ಯವೇ ಹೊರತು ಅವುಗಳಲ್ಲಿರೋ ಲೋಪಗಳನ್ನರಿತೂ ಅವುಗಳಿಗೇ ಕಟ್ಟುಬೀಳುವುದಲ್ಲ. "ಹೆಣ್ಣು ತಾನು ತೊಡುವ ಬಟ್ಟೆಯ ಬಗ್ಗೆ ಯೋಚಿಸುವಾಗ ಅಷ್ಟೆಲ್ಲಾ ವೈಚಾರಿಕವಾಗಿ ಚಿಂತಿಸುವ ಅಗತ್ಯವಿಲ್ಲ" ಅನ್ನೋ ಮಾತು ಅದಕ್ಕೇ ಸರಿಯಿಲ್ಲ.
ಇನ್ನು ಎಲ್ಲ ಅಸಮಾನತೆಗಳಿಗೆ ಕಾರಣ ಪುರುಷರಲ್ಲ, ಪುರುಷಪ್ರಧಾನ ವ್ಯವಸ್ಥೆ. ಅದಕ್ಕೆ ನಾಕು ಪ್ರಶ್ನೆಗಳನ್ನಿಡೋ ಅಗತ್ಯ ಎಂದಿನಿಂದಲೂ ಇದೆ!
ಗಿರೀಶ್
ನಿಮಗೆ ಏನ್ ಹೇಳ್ಬೇಕೊ ಗೊತ್ತಾಗ್ತಿಲ್ಲ! ಯೂರೋಪಿನಲ್ಲಿ ಸಮಾನತೆ ಇರಲಿಲ್ಲ ಅಂತ ಇಲ್ಲೂ ಇರಬಾರದು ಅಂತಲಾ ನೀವ್ ಹೇಳೋದು?! ಇಂಗ್ಲಿಷ್ ಶಿಕ್ಷಣ, ಆಳ್ವಿಕೆಗಳಿಂದ ಬಂದಿದ್ದು ಸಮಾನತೆಯ ವಾದವಲ್ಲ, ವಿಕ್ಟೋರಿಯನ್ ಮಡಿವಂತಿಕೆಯ ಪಳೆಯುಳಿಕೆಗಳು! ಸ್ತ್ರೀ ಸಮಾನತೆ ಆಮದಾದ ವಸ್ತು ಅನ್ನೋದು ಇತಿಹಾಸಕ್ಕೆ ಅಪಚಾರ ಮಾಡೋ ಮಾತು. ಸ್ವಲ್ಪ ಭಾರತದ ಮಹಿಳೆಯರ ಬಗ್ಗೆ ಓದ್ಕೊಳಿ, ’women writing in India' ಅಂತ ಸೂಸಿ ಥಾರು ಹಾಗೂ ಲಲಿತಾ ಅವ್ರು ಬರ್ದಿರೋ ಪುಸ್ತಕದಿಂದ ಷುರು ಮಾಡ್ಬಹುದು. ನಿಮ್ಮ ರೈಟಿಸ್ಟುಗಳೇ ಕೋಟ್ ಮಾಡೋ ಗಾರ್ಗಿ-ಮೈತ್ರೇಯಿಯರಿಂದ್ಲೂ ಷುರು ಮಾಡಬಹುದು. ಯಾವುದೇ ಅಸಮಾನತೆ ತನ್ನೊಳಗಿನಿಂದ್ಲೇ ಅದನ್ನೆದುರಿಸೋ ವಾದಕ್ಕೆ ಜನ್ಮ ನೀಡುತ್ತೆ. ಹೊರಗಿನ ಕಾರಣಗಳಿಗೆ ಹುಡುಕಾಡಬೇಕಿಲ್ಲ!
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ಅದನ್ನೇ ನಾನು ಹೇಳಹೊರಟಿದ್ದು....
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
"ಹೆಣ್ಣಿಗೆ "ನಿಜವಾದ’ ಸ್ವಾತಂತ್ರ್ಯ ಸಿಕ್ಕಿಲ್ಲ. ಆದರೆ ಇದಕ್ಕೆ ಗಂಡಸರಷ್ಟೇ ಹೆಂಗಸರೂ ಕಾರಣ." ಎಂಬುದು ನಿಮ್ಮ ಲೇಖನದ ಸಾರಾಂಶವೇ?
ನಿಮ್ಮ ಲೇಖನದ ಸಾರಾಂಶ ನನಗೆ ಸರಿಯಾಗಿ ಅರ್ಥವಾಗಿದೆಯೋ ಇಲ್ವೋ ಗೊತ್ತಿಲ್ಲ ಅದಕ್ಕೆ ಕೇಳ್ತಿದ್ದೀನಿ.
--
ನೀ ಲೋಕದ ಕಾಳಜಿ ಮಾಡುವೆನಂತಿ, ಯಾರ ಬ್ಯಾಡಂದಾರ ಮಾಡಪ್ಪ ಚಿಂತಿ - ಸಂತ ಶಿಶುನಾಳ ಶರೀಫ
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ಹೌದು ಉದ್ದೇಶ ಸರಿಯಾಗಿ ಗ್ರಹಿಸಿದ್ದೀರಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
supreeth
"ಹೀಗಾಗಿಯೇ ಶೀಲವೆಂಬುದು ಕೇವಲ ಹೆಣ್ಣಿಗೆ ಸಂಬಂಧಿಸಿದ ಸಂಗತಿಯಾಗಿದೆ.
ನೀವು ಹೇಳಿದ ಈ ಶೀಲ ಹೆಮ್ಮೆ, ದೇವತೆ ಎಂಬುದೆಲ್ಲಾ ಸರಿ ಆದರೆ ಇದು ಕೇವಲ ಹೆಣ್ಣಿಗೆ ಮಾತ್ರ ಸಂಭಂಧಿಸಿದೆ ಅನ್ನೋದು ಒಪ್ಪುವಂತಹ ಮಾತಲ್ಲ.
ಈಗೀಗ ಹುಡುಗಿಯರೋ ತುಂಬಾ ಚೂಸಿಯಾಗುತಿದ್ದಾರ.
ಶೀಲಗೆಟ್ಟ ಗಂಡನ್ನು ಮದುವೆಯಾಗಲು ಯಾವ ಹೆಣ್ಣು ಖುಷಿಯಿಂದ ಮುಂದೆ ಬರುವುದಿಲ್ಲ. ತಾವೇನು ಮಾಡಿದರೂ ತಮಗೇನು ಮದುವೆಯಾಗಲು ತೊಡಕ್ಯಾವದೂ ಇಲ್ಲ ಎಂಬುದು ಗಂಡಸರ ಅನಿಸಿಕೆ ಅಷ್ಟೆ.
ಸೊ ಹೆಣ್ಣಾಗಲಿ ಗಂಡಾಗಲಿ ಒಳ್ಳೆಯ ನಡತೆ ಎಂಬುದು ಒಂದು ಸರಿಸಮಾನ ಮಾನದಂಡವಾಗಬೇಕು.
ನೀನು ಹೆಣ್ಣು ನಿನಗೆ 80% ಒಳ್ಳೆಯ ನಡತೆ ಬೇಕೆ ಬೇಕು
ಅವನು ಗಂಡು ಅವನು ಹೇಗಿದ್ದರೂ ಕೇಳುವುದಿಲ್ಲ ಎಂಬ ಮನೋಭಾವ ಬದಲಾಗಬೇಕು
http://thereda-mana.blogspot.com/
ರೂಪ
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ರೂಪಾಕ್ಕ,
ನೀವೂ ಮಿಸ್ ಕೋಟ್ ಮಾಡಿದ್ದೀರಿ... ಮೇಲೆ ASHMYAರವರಿಗೆ ಕೊಟ್ಟ ನನ್ನ ಕಮೆಂಟುಗಳನ್ನು ನೋಡಿ
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
"ಹೆಣ್ಣಿಗೆ "ನಿಜವಾದ’ ಸ್ವಾತಂತ್ರ್ಯ ಸಿಕ್ಕಿಲ್ಲ. ಆದರೆ ಇದಕ್ಕೆ ಗಂಡಸರಷ್ಟೇ ಹೆಂಗಸರೂ ಕಾರಣ." ಎಂಬುದು ನಿಮ್ಮ ಲೇಖನದ ಸಾರಾಂಶವೇ? ಹೌದು ಅಂತೀರಿ ನೀವು. ಆದರೆ ಇದು ನನಗಂತೂ ನಿಮ್ಮ ಲೇಖನದಿಂದ ಅರ್ಥವಾಗಲಿಲ್ಲ. ನನಗೆ ಅರ್ಥವಾಗಿದ್ದು, ನೀವು ಹೆಣ್ಣು ಪ್ರಚೋದನಕಾರಿ ಉಡುಪು ತೊಟ್ಟರೆ ಅದರ ಪರಿಣಾಮವನ್ನೂ ಎದುರಿಸಲು ಸಿದ್ಧವಾಗಿರಬೇಕು ಎನ್ನುವ ಭೋದನೆ ಇದ್ದ ಹಾಗಿತ್ತು. ಇದು ಓದಿ -"ಇದನ್ನು ಹೆಣ್ಣು ತನ್ನ ಸುರಕ್ಷತೆಗಾಗಿ ತಾನು ಕಂಡುಕೊಳ್ಳಬೇಕಾದ ಉಪಾಯವೆಂದು ಕಾಣಬೇಕೇ ಹೊರತು ತನಗೆ ಸಮಾಜ ವಿಧಿಸಿದ ಕಟ್ಟಳೆ ಎಂದು ಭಾವಿಸಬಾರದು. ಹಾಗೆ ಭಾವಿಸಿದಾಗ ಅದನ್ನು ಮೀರುವ ಹುಚ್ಚು ಉನ್ಮಾದ ಬೆಳೆಯುತ್ತದೆ." ನಿಮ್ಮ ವಾದ ಮಾನಭಂಗಕ್ಕೊಳಗಾದ ಹೆಣ್ಣಿಗೆ "you asked for it" ಅನ್ನುವ ಹಾಗಿದೆ!!! ಕಡಿಮೆ ಬಟ್ಟೆ ತೊಟ್ಟ ಮಾತ್ರಕ್ಕೆ ನಮ್ಮ ಮೈಮೇಲೆ ಬೀಳೀಂತ ನಾವೇನು permission ಕೊಟ್ಟಿಲ್ಲವಲ್ಲ? ಅದನ್ನು ಹಾಗಂತ interpret ಮಾಡುವುದು ಗಂಡಸರು ತಾನೆ? ಹಾಗಾದರೆ, ಮಾತೆತ್ತಿದರೆ ಶರ್ಟು ಕಳಚುವ ಸಲ್ಮಾನ್ ಖಾನ್, ಶಾರುಕ್ ಖಾನ್, ಇವರು gayಗಳಿಗೆ "come rape me" ಎಂದು ಕರೆಯುತ್ತಿದ್ದಾರೋ?
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ಇಲ್ಲಿನ ಒಂದು ಸೂಕ್ಷ್ಮವನ್ನು ಗಮನಿಸಿ... ಒಬ್ಬನು ಮೈತುಂಬ ಒಡವೆಗಳನ್ನು ಹಾಕಿಕೊಂಡು ಮಧ್ಯ ರಾತ್ರಿಯಲ್ಲಿ ನಿರ್ಜನ ಪ್ರದೇಶದಲ್ಲಿ ಹೋಗುತ್ತಾನೆ ಎಂದಿಟ್ಟುಕೊಳ್ಳಿ. ಆತನೇನು ಕಳ್ಳರಿಗೆ ಕದಿಯಿರೀ ಎಂದು ಪರ್ಮಿಶನ್ ಕೊಟ್ಟಿರುತ್ತಾನೆಯೇ? ಆತನ ಸುರಕ್ಷೆಗಾಗಿ ಆತ ಆಭರಣಗಳನ್ನು ತೊಡುವುದಕ್ಕೆ ಕಡಿವಾಣ ಹಾಕಿಕೊಳ್ಳಬೇಕು. ಹಾಗಂತ ಕಳ್ಳರೇನು ಸುಭಗರಲ್ಲ. ಮನೆಯಲ್ಲಿ
ಭದ್ರರಾಗಿರುವವರನ್ನೂ ದೋಚುತ್ತಾರೆ, ಅದಕ್ಕೆ ಶಿಕ್ಷೆ ಬೇಕೇ ಬೇಕು, ಅದನ್ನು ಖಂಡಿಸಲೇ ಬೇಕು.
ಇನ್ನು ಒಬ್ಬಾಕೆ ಪ್ರಚೋದನಕಾರಿಯಾಗಿ ಬಟ್ಟೆ ತೊಟ್ಟರೆ ಅದು ಕೇವಲ ಗಂಡಿನ ಕಣ್ಣಿನಲ್ಲಿ ಅವಹೇಳನಕ್ಕೆ ಗುರಿಯಾಗದು ಎಂಬುದನ್ನು ಗಮನಿಸಿ. ಇತರೆ ಹೆಣ್ಣು ಮಕ್ಕಳಿಗೂ ಆಕೆ ‘ಹಾಗೆ’ ಎನ್ನುವ ಭಾವನೆ ಹುಟ್ಟುತ್ತದೆ. ಅದಕ್ಕೇ ಹೇಳಿದ್ದು... ಹೆಣ್ಣಿನೆಡೆಗಿನ ದೃಷ್ಟಿಕೋನ ನಮ್ಮ ಸಮಾಜದ ದೃಷ್ಟಿಕೋನ, ಇದರಲ್ಲಿ ಹೆಣ್ಣು ಗಂಡೆಂಬ ವರ್ಗೀಕರಣವಿಲ್ಲ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ಸುಪ್ರೀತ್,
’ಪ್ರಚೋದನಕಾರಿ’ ಅನ್ನೋದೇ ರಿಲೆಟಿವ್ ವಿಷಯ. ಅದರ ಮೇಲೆ ಇಲ್ಲಿ ಪ್ರಚೋದನಕಾರಿಯಾಗಿ ಬಟ್ಟೆ ತೊಟ್ಟರೆ ಹೆಣ್ಣನ್ನ ಗಂಡು-ಹೆಣ್ಣೆಂಬ ಭೇದವಿಲ್ಲದೇ ಆಕೆ ’ಹಾಗೆ’ ಅಂದೊಕೋತಾರೆ ಅಂದಿದೀರ - ಪ್ರಶ್ನೆ ಇರೋದು ಬ್ರ್ಯಾಂಡಿಂಗ್ ಬಗ್ಗೆ ಅಲ್ಲ. ತಮಗಿಷ್ಟವಾದದ್ದು ಹಾಕಿಕೊಳ್ಳೋ ಅಷ್ಟು ಧಮ್ಮಿರೋ ಹುಡ್ಗೀರಿಗೆ ಈ ಬ್ರ್ಯಾಂಡಿಂಗ್ ಬಗ್ಗೆ ಗಮನ ಹರಿಸದೇ ಬದುಕೋ ಅಷ್ಟು ಧೈರ್ಯವೂ ಇರತ್ತೆ. ಆದ್ರೆ ’ಹಾಗೆ’ ಅಂದೊಕೊಂಡು ಸುಮ್ನಾಗದೇ ಆಕೆ ಲಭ್ಯ(ಅವೇಲಬಲ್) ಅಂತ ಮೇಲೇರಿಹೋಗೋದು ಗಂಡಸು ಮಾತ್ರ. ಅಲ್ಲಿ ವ್ಯತ್ಯಾಸ ಖಂಡಿತಾ ಇದೆ!
ಇನ್ನು ಆಭರಣ ಧರಿಸಿ ನಿರ್ಜನ ಪ್ರದೇಶದಲ್ಲಿ ಹೋಗೋದಕ್ಕೂ ಇದಕ್ಕೂ ಹೇಗೆ ಹೋಲಿಸ್ತೀರಾ? ನಾವು ಯಾವ ಜಾಗಕ್ಕೆ ಹೋಗ್ತಿದ್ದೀವಿ, ಅಲ್ಲಿ ಯಾವ್ ಥರದ್ ಜನ್ ಇರ್ತಾರೆ, ಅವರ ದೃಷ್ಟಿಯಲ್ಲಿ ಯಾವ್ದು ’ಪ್ರಚೋದನಕಾರಿ’ ಉಡುಗೆ ಅಂತೆಲ್ಲ ರಿಸರ್ಚ್ ಮಾಡಿಹೋಗ್ಬೇಕಾ ಹೇಗೆ?
ಅಥ್ವಾ ಲೋಕದ ಗಂಡಸರೆಲ್ಲಾ ಡೆಸ್ಪೋಗಳು ಅಂತ nirdharisi ಗುಮ್ಮನೆ ಬುರ್ಖಾ ಹಾಕಿ ನಡೀಬೇಕೋ?
ಇನ್ನೊಂದು ಉದಾಹರಣೆ ಕೊಡ್ತೀನಿ, ಸಿಹಿ ತಿಂಡಿ ಅಂಗಡಿ ಕಿಟಕಿ ಗಾಜಿನಲ್ಲಿ ಕಾಣತ್ತೆ, ಮೇಲೆ ಫಳ ಫಳ ಸಿಲ್ವರ್, ಒಂದಿಷ್ಟು ಪಿಸ್ತಾ, ಕೇಸರಿ, ದ್ರಾಕ್ಷಿ ಇನ್ನೇನೇನೋ. ಚೆನ್ನಾಗಿದೆ ಅಂತ ಗಾಜು ಒಡ್ದು ದೋಚುತ್ತೀರಾ? ನಿಮ್ಮ ಪಾಕೆಟ್ಟಿಗೆ, ಹೊಟ್ಟೆಗೆ ಅದನ್ನ ತೆಗೆದುಕೊಳ್ಳೋ/ತಡೆದುಕೊಳ್ಳೋ ಯೋಗ್ಯತೆ ಇದೆಯೋ ಇಲ್ವೋ ನೋಡ್ತೀರಲ್ಲ? ಕಣ್ಣಿಗೆ ನೂರು ವಿಷ್ಯ ಬೇಕು ಅನ್ನಿಸುತ್ತೆ, ವಿವೇಕ ಅನ್ನೋದು ಯಾವ್ದು ನಮ್ಗೆ ಸೇರಿದ್ದು/ ಸೇರಬಹುದಾದದ್ದು, ಯಾವ್ದು ಅಲ್ಲ ಅಂತ ಹೇಳುತ್ತೆ, ಹೇಳ್ಬೇಕು. ಇಲ್ಲದಿದ್ರೆ ವಿವೇಕ ಸತ್ತಿದೆ ಅಂತ ಅರ್ಥ.
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ಶ್ರೀಮಾತಾರವರೇ,
ನಿಮ್ಮ ಅಭಿಪ್ರಾಯವನ್ನು ಗೌರವಿಸುವೆ. ಪ್ರಚೋದನೆ ಎಂಬ ಸಂಗತಿ ಮಾತ್ರ ರಿಲೇಟಿವ್ ಅಲ್ಲ. ನಮ್ಮೆಲ್ಲಾ ಮೌಲ್ಯಗಳು, ನಾವು ಆದರ್ಶಗಳು ಎಂದು ಕರೆಯುವುದೆಲ್ಲವೂ ರಿಲೇಟಿವ್ ಸಂಗತಿಗಳೇ. ಹಾಗಂತ ನಾವು ಯಾವುಅದನ್ನೂ ರಿಸರ್ಚ್ ಮಾಡಿ ಮೈಗೂಡಿಸಿಕೊಳ್ಳ್ವುವುದಿಲ್ಲವಲ್ಲಾ?
ನಾನಿಲ್ಲಿ ಹೇಳುತ್ತಿರುವುದು ಆ ಬ್ರ್ಯಾಂಡಿಂಗ್ ಬಗ್ಗೆಯೇ... ಈ ರೀತಿ ಬ್ರ್ಯಾಂಡ್ ಆಗುವುದರಿಂದಲೇ ಆಕೆ ಪ್ರಚೋದನೆ ನೀಡಿದ ಹಾಗಾಗುತ್ತದೆ. ಇಷ್ಟೆಲ್ಲದರ ನಡುವೆಯೂ ಗಂಡನ್ನು ಸುಭಗ ಎಂದು ಎಲ್ಲಿಯೂ ಸಮರ್ಥಿಸುವ ಕೆಲಸವನ್ನು ನಾನು ಮಾಡಿಲ್ಲ ಎಂಬುದನ್ನು ಗಮನಿಸಿ.ಪ್ರತಾಪ್ ಹೇಳಿದ ಹಾಗೆ ಪ್ರಚೋದನಕಾರಿ ಉಡುಪು ತೊಟ್ಟು ಓಡಾಡುವ ಹೆಣ್ಣಿನ ಮೇಲೆ ಒಬ್ಬ ಗಂಡು ಎರಗಿದರೆ ಅದು ಆಕೆಯದೇ ಜವಾಬ್ದಾರಿ ಎನ್ನುವ ಭಾವವನ್ನು ನಾನು ವಿರೋಧಿಸುತ್ತೇನೆ.
ಇನ್ನು ನಿಮ್ಮ ಸ್ವೀಟ್ಸ್ ಅಂಗಡಿಯ ಬಗ್ಗೆ... ಯೋಚಿಸಿ ನೋಡಿ ಸ್ವೀಟುಗಳನ್ನು ಏಕೆ ಡಬ್ಬಿಯಲ್ಲಿ, ಗ್ಲಾಸಿನ ಜಾಡಿಗಳಲ್ಲಿ ಹಾಕಿಟ್ಟುರುತ್ತಾರೆ ಗೊತ್ತೇ? ಒಂದು ವೇಳೆ ಅದನ್ನು ಕಾಯಲು ಯಾರೂ ಇಲ್ಲದೆ, ಅವು ಸುಲಭವಾಗಿ ಕೈಗೆ ಸಿಕ್ಕುವಂತಿದ್ದರೆ ನಾವು ಆಲೋಚಿಸುವ ನಮ್ಮ ಕೊಳ್ಳುವ ಸಾಮರ್ಥ್ಯ, ಯೋಗ್ಯತೆಯ ಬಗ್ಗೆಯೆಲ್ಲಾ ಯೋಚಿಸಲು ಸಾಧ್ಯವಾಗುತ್ತದಾ? ಸ್ವೀಟನ್ನು ಕೇವಲ ತಿನ್ನುವ ಕೈಗಳಿಂದ ಅಲ್ಲ, ನೊಣ, ಕ್ರಿಮಿ ಕೀಟಗಳಿಂದಲೂ ಕಾಪಾಡಬೇಕು. ಅಲ್ಲವೇ? ಏನಂತೀರಿ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ತಡವಾಗಿ ಪ್ರತಿಕ್ರಿಯೆ ನೀಡ್ತಿರೋದಕ್ಕೆ ಕ್ಷಮಿಸಿ. ಪ್ರಚೋದನೆಯ ಹಾಗೇ ಮೌಲ್ಯಗಳು, ಆದರ್ಶಗಳೂ ರಿಲೇಟಿವ್, ನಿಜ. ಆದ್ರೆ ನನ್ನ ಮೌಲ್ಯಗಳು, ನಂಬಿಕೆಗಳು ನನಗೆ, ನಿಮ್ಮದು ನಿಮ್ಗೆ. ನನ್ನ ಮೌಲ್ಯಗಳನ್ನ ನಿಮ್ಮ ಮೇಲೆ ಹೇರೋದು ಅಥ್ವಾ ನಿಮ್ಮ ನಂಬಿಕೆಗಳನ್ನ ನಾನು ಮೈಗೂಡಿಸಿಕೊಳ್ಳೋದು ಅಗತ್ಯವಿರೋದಿಲ್ಲ. ಪ್ರಚೋದನೆಯ ರಿಲೇಟೀವ್ ಕಾನ್ಸೆಪ್ಟಿಗೂ ಇದು ಅನ್ವಯವಾಗುತ್ತಾ?
ನಿಮ್ಗೆ ಯಾವುದು ಪ್ರಚೋದನಕಾರಿಯನ್ನಿಸುತ್ತೆಅ ಂತ ನಾನು ತಿಳಿದುಕೊಂಡು ಅದಕ್ಕೆ ತಕ್ಕಂತೆ ನನ್ನ ನಡವಳಿಕೆ/ಉಡುಗೆ-ತೊಡುಗೆ ಹೊಂದಿಸಿಕೊಳ್ಳಬೇಕನ್ನೋದು ಎಷ್ಟು ಸರಿ? ಪ್ರಚೋದನೆಗೆ ಒಳಗಾಗೋದು ನಮ್ಮ ನಮ್ಮ ಕೈಲಿರೋದು. ಒಳಗಾದ ಪಕ್ಷದಲ್ಲೂ ನಮ್ಮ ಕ್ರಿಯೆಗಳನ್ನ ನಿಯಂತ್ರಿಸಿಕೊಳ್ಳಬೇಕಾದುದು ನಾಗರಿಕತೆಯ ಅವಶ್ಯಕತೆ.
ಬ್ರ್ಯಾಂಡ್ ಆಗೋದ್ರಿಂದ ಪ್ರಚೋದನೆ ನೀಡಿದಹಾಗಾಗುತ್ತೆ ಅನ್ನೋದು, ’ಪ್ರಚೋದನಕಾರಿ ಉಡುಪು ತೊಟ್ಟು ಓಡಾಡುವ ಹೆಣ್ಣಿನ ಮೇಲೆ ಒಬ್ಬ ಗಂಡು ಎರಗಿದರೆ ಅದು ಆಕೆಯದೇ ಜವಾಬ್ದಾರಿ ಎನ್ನುವ ಭಾವವನ್ನು ನಾನು ವಿರೋಧಿಸುತ್ತೇನೆ’ ಅನ್ನೋ ಮಾತಿನ ಜೊತೆ ನೋಡಿದಾಗ ಗೊಂದಲಮಯ ಅಭಿಪ್ರಾಯ ಎನ್ನಿಸುತ್ತೆ. ಯಾರದ್ದೋ ಕಲ್ಪನೆಯ ಬ್ರ್ಯಾಂಡಿಂಗ್‌ನ ಪ್ರಕಾರ ನಾವು ನಡೆದುಕೊಳ್ಳಬೇಕಂತಲಾ?
ಇನ್ನು ಸ್ವೀಟ್ ಅಂಗಡಿಯ ಬಗ್ಗೆ - ಕಾಯಲು ಯಾರೂ ಇಲ್ಲದೆ, ಸುಲಭವಾಗಿ ಕೈಗೆ ಸಿಗುವ ಹಾಗಿದ್ದರೂ ನನ್ನದಲ್ಲದ ವಸ್ತುವಿಗೆ ಕೈಹಾಕದಷ್ಟು ನನ್ನ ಮನಸ್ಸಾಕ್ಷಿ ನನ್ನನ್ನು ಕಾಯುತ್ತೆ. ಅದೇ ಇನ್ನೊಬ್ಬರ ವೈಯುಕ್ತಿಕ ಪರಿಧಿಯನ್ನು ಅತಿಕ್ರಮಿಸಹೊರಡೋ ಮನಸ್ಸನ್ನ ತಡೀಬೇಕಾಗಿರೋದು.
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಮನುಷ್ಯನಿಗೆ ಸೆಕೆಂಡ್ ಥಾಟ್ ಎನ್ನುವುದೊಂದು ಇರುತ್ತದೆ. ಯಾವುದೇ ಪ್ರಚೋದನೆ, ಆಕರ್ಷಣೆಗಳನ್ನು ಮೀರಿ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ, ಪ್ರಚೋದನೆಯನ್ನು ನಿಯಂತ್ರಿಸಬಲ್ಲ ಮನಸ್ಥಿತಿ ಇರುತ್ತದೆ. ಆದರೆ ಇದು ಯಾವ ಯಾವ ಹಂತದಲ್ಲಿರುತ್ತದೆ ಎಂಬುದು ಮುಖ್ಯ.
ನಾನು ಗೊಂದಲಗೊಂಡಿರಬಹುದು ಎಂದು ನೀವು ಅನುಮಾನಿಸಿದ ಅಂಶದ ಬಗ್ಗೆ ಬೆಳೆಕು ಚೆಲ್ಲಬಯಸುವೆ. ಮುಂಬೈನಲ್ಲಿ ಹೊಸ ವರ್ಷಾಚರಣೆಯ ಹಿಂದಿನ ರಾತ್ರಿ ಯುವತಿಯರ ಮೇಲೆ ನಡೆದ ಹಲ್ಲೆ, ಅತ್ಯಾಚಾರ ಪ್ರಕರಣವನ್ನು ಅವಲೋಕಿಸಿ ಪೊಲೀಸ್ ಮಹಾನಿರ್ದೇಶಕ ಹೇಳಿದ ಹಾಗೆ ‘ನಿಮ್ಮ ಹೆಂಡತಿಯರು ಸುರಕ್ಷಿತರಾಗಿರಬೇಕಾದರೆ ಅವರನ್ನು ಮಧ್ಯ ರಾತ್ರಿ ಮನೆಯಿಂದ ಹೊರ ಬರದಂತೆ ನೋಡಿಕೊಳ್ಳಿ’ ಎಂದರು. ಇದನ್ನು ಅನೇಕ ಮಹಿಳಾ ಸಂಘಟನೆಗಳು ವಿರೋಧಿಸಿದವು, ಹಲವರು ಎಲ್ಲದಕ್ಕೂ ಪೊಲೀಸರನ್ನು ನಿಂದಿಸಲಾಗದು ಎಂದರು. ಇದೇ ಚರ್ಚೆಯ ಒಂದು ಭಾಗವನ್ನು ನಾನು ಎತ್ತಿಕೊಂಡು ಪ್ರಚೋದನಕಾರಿ ಉಡುಪು ಮಹಿಳೆಯರ ಸುರಕ್ಷತೆಗೆ ಯೋಗ್ಯವೇ ಎಂಬುದಾಗಿ ಚರ್ಚಿಸಲು ಪ್ರಯತ್ನಿಸಿದೆ. ಸೀರೆ ಉಟ್ಟ ಮಹಿಳೆಯರು, ಹಸು ಕಂದಮ್ಮಗಳ ಮೇಲೂ ಅತ್ಯಾಚಾರಗಳು ನಡೆಯುತ್ತವೆ. ಆದರೆ ಪ್ರಚೋದನಕಾರಿ ಉಡುಪು ಅನವಶ್ಯಕವಾಗಿ ಅಪಾಯವನ್ನು ಆಹ್ವಾನಿಸುವುದಿಲ್ಲವೇ ಎಂಬುದು ನನ್ನ ವಾದ.
ನಿಮ್ಮ ಕಾಳಜಿಗೆ ಧನ್ಯವಾದಗಳು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com