ಜಯನಗರದ ಬೀದಿಗಳು
ಜಯನಗರದ ಬೀದಿಗಳಲ್ಲಿ
ಈಗ,
ಹೀಗೇ ಸುಮ್ಮನೆ
ಅಂಡಲೆಯಲು ಸಾಧ್ಯವಿಲ್ಲ.
ಇಕ್ಕಟ್ಟು ರಸ್ತೆಗಳಲ್ಲಿ,
ಭಾನುವಾರದ ನಡಿಗೆಯ ನಡುವೆಯೂ,
ಅಕಸ್ಮಾತ್ತಾಗಿ,
ಪ್ರಜ್ನೆಗೆ
ಅನಾಥವಾಗಲು ಬಿಡುವಾಗುವುದಿಲ್ಲ.
ಬೆಂಬಿಡದೆ ಭಯೋತ್ಪಾದಿಸುವ,
ಬಿಲ್ ಬೋರ್ಡಿನ ಹೊಸ ಸೆಲ್-ಫ಼ೋನು,
ತಿರುವಿನಲ್ಲಿ ತೆರೆದ ಹೊಸ
ಚಿನ್ನದಂಗಡಿ,
(ಮಧ್ಯೆ ಸರಕ್ಕನೆ ಬಂದು
ಎರಡು ಪಲ್ಟಿ ಹೊಡೆದು ಕೈಯೊಡ್ಡುವ
ಗಿಡ್ಡ ದೊಂಬರಾಟದ ಹುಡುಗಿ),
ಇರದ ಹಸಿವನು ಇಂಗಿಸುತ್ತ
ಕಾಲ ದೂಡುವ ಸಮೂಹಗಳು,
ಮತ್ತೆ, ನಡುನಡುವೆ,
ಸೆಕ್ಸಿ-ಗುರುವಿನ ಗುರುಕುಲದ ಜಬರ್ದಸ್ತು ಪೋಸ್ಟರು.
ಇಲ್ಲ, ಇಲ್ಲಿ ಸಾಧ್ಯವಿಲ್ಲ,
ದು:ಖ ಪಡಲು,
ಪಡುವ ದು:ಖದ ಕಹಿಯ
ಸಿಹಿ ಅಮಲಿನಲ್ಲಿ ತೇಲಲು,
ಹಠಾತ್ ವಿಷಾದ ಯೋಗ ಸ್ವೀಕರಿಸಲು.
(ಕೆರೆವ ಕಾಲಿನ ಪುಟ್ಟ ಗಾಯವ
ತುರಿಸಿ ಸುಖಪಡಲೂ).
ರಸ್ತೆಗಳೆಲ್ಲ ಇಕ್ಕಟ್ಟು. ಎಲ್ಲ
ರಸ್ತೆಗಳೂ ಒಂದೇ ಹದ.
ಇಲ್ಲ, ಇಲ್ಲಿ ಸಾಧ್ಯವಿಲ್ಲ,
ಎಲ್ಲೂ ನಿಂತು
ಒಂದರೆಘಳಿಗೆ
ಮರೆತು -
ಕಾರುಗಳ ಹಾರನ್ನು,
ಬೈಕುಗಳ ರೇಸು,
ಬಸ್ಸುಗಳ ಭಯ,
ಹೆಂಡತಿಯ ಕೋರಿಕೆ,
ನಿನ್ನೆ ಓದಿದ ಆಧ್ಯಾತ್ಮದ ಅರ್ಥ,
ಬರೆಯಲು ಹೊರಗೆ ಬಾರದೆ
ಕಾಡುತಿರುವ ಕಮ್ಮರದೇಗು ಕವನ,
ಕೊಳ್ಳಲೇ ಬೇಕಿಲ್ಲದ ಹೊಸ ಕಾರು,
ಗುದ್ದಲಿ, ಸನಿಕೆ, ಗಡಾರಿ ಹಾರೆಗಳ
ಹೊತ್ತು ಮಾರ್ಚ್ ಪಾಸ್ಟ್ ಮಾಡುತ್ತ ಹಾಯ್ದುಹೋಗುವ
ಮನುಷ್ಯರ ಗುಂಗುಂಗಾನ-
ಎಲ್ಲವನು,
ಒಂದೊಳದಾರಿಯ ಹೆಸರಿಲ್ಲದ
ಗಲ್ಲಿಯ ಅನಾಮಧೇಯತ್ವಕ್ಕೆ
ಶರಣಾಗಲು.
-- ರವಿಶಂಕರ
ಫ಼ೆಬ್ ೦೮

- Login or register to post comments
- 136 hits
- Email this page




RSS:
ಪ್ರತಿಕ್ರಿಯೆಗಳು
ಉ: ಜಯನಗರದ ಬೀದಿಗಳು
ಸಿಕ್ಕಾಪಟ್ಟೆ ಚೆನ್ನಾಗಿದೆ
ಇತ್ತೀಚೆಗೆ ದಿ ಹಿಂದೂ ಪತ್ರಿಕೆಯಲ್ಲಿ ವಿಶ್ವೇಶ್ವರಯ್ಯನವರು ಡಿಸೈನ್ ಮಾಡಿದ ಜಯನಗರದ ನಕ್ಷೆ ಹಾಗೂ ಮತ್ತಷ್ಟು ಮಾಹಿತಿ ಇತ್ತು. ಅವರುಗಳಿಗೂ ಕನಸು ಮನಸಿನಲ್ಲಿ ಇದು ಹೀಗಾಗುವುದೆಂದು ಅನಿಸಿರಲಿಕ್ಕಿಲ್ಲ!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಜಯನಗರದ ಬೀದಿಗಳು
ರವಿಶಂಕರರೆ,
ಉದ್ಗರಿಸುತ್ತಲೇ ಚಿಂತೆಗೆ ಹಚ್ಚಿಸುವ ನಿಮ್ಮ ಪರಿ ಚೆನ್ನಾಗಿದೆ.
ಏಷಿಯಾಕ್ಕೇ ಒಂದು ಕಾಲದಲ್ಲಿ ಮಾದರಿಯಾಗಿದೆ ಎನಿಸಿಕೊಂಡಿದ್ದ ಜಯನಗರದ ಕತೆ, ಪ್ರತಿಮೆ ನಮ್ಮ ಎಷ್ಟೋ ಉಳಿದ ಸಂಗತಿಗಳ ಮೇಲೂ ನೆರಳು ಚಾಚುತ್ತದೆ.
ಜಯನಗರದ ಅಗಲದ ಬೀದಿಗಳಲ್ಲಿ ಪುಟ್ಟವನಾಗಿದ್ದಾಗ ಭರಾಕನೆ ಓಡಿದ್ದು ನೆನಪಾಯಿತು. ಥ್ಯಾಂಕ್ಸ್...