ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಪ್ರತ್ಯಕ್ಷ ನೋಡಿದರೂ...

... ಪ್ರಮಾಣಿಸಿ ನೋಡು" - ಈ ಗಾದೆಯ ಪರಿಚಯ ನಮ್ಮೆಲ್ಲರಿಗೂ ಇದ್ದೇ ಇರತ್ತೆ. ಮಗುವನ್ನು ಹಾವಿನಿಂದ ಉಳಿಸಿದ್ದಲ್ಲದೇ ಮನೆಯೊಡತಿಯ ಅಚಾತುರ್ಯದ ಪೆಟ್ಟನ್ನೂ ತಾನೇ ತಿಂದು ಸಾಯುವ ಮುಂಗಸಿ ಕಥೆ ಶಾಲೆಯಲ್ಲಿದ್ದಾಗ ಹಲವರು ಓದಿರಬಹುದು. ಅದಿಲ್ಲದಿದ್ದರೆ "ನೋಡಿದ್ದೂ ಸುಳ್ಳಾಗಬಹುದು, ಕೇಳಿದ್ದೂ ಸುಳ್ಳಾಗಬಹುದು" ಹಾಡಂತೂ ಕೇಳಿಯೇ ಇರುತ್ತೇವೆ.

ಕೇಳಿದ್ದೇವೆ, ಸರಿ. ಆದರೆ ಇದೆಲ್ಲಾ ಯಾಕಿವತ್ತು?

ಕೆಲವು ವರ್ಷಗಳ ಹಿಂದೆ ನಡೆದ ಸಂಗತಿಯೊಂದು ನೆನಪಾಯ್ತು. ಹೀಗೇ ಯಾವುದೋ ವಿಷಯವಾಗಿ ಚರ್ಚೆ ಮಾಡುವಾಗ ಇವತ್ತು ಮತ್ತೆ ನೆನಪಾಯ್ತು. ಸುಮಾರು ಮೂರು ವರ್ಷಗಳ ಹಿಂದೆ ನಡೆದದ್ದು. ಆಗಿನ್ನೂ ಸಂಪದ ಇರಲಿಲ್ಲ. ಹೀಗೇ ಕನ್ನಡ ವಿಕೀಪೀಡಿಯದಲ್ಲಿ ನಿತ್ಯ ನಿರ್ವಹಣೆಯ ಕೆಲಸಗಳನ್ನು ಮಾಡುತ್ತ, ಬರೆಯುತ್ತ, ಲೇಖನಗಳನ್ನು ಎಡಿಟ್ ಮಾಡುತ್ತಿದ್ದೆ. ಆಗ ಅಲ್ಲಿಯ ಲೇಖನಗಳ ಎಡಿಟ್ಟು, ವಿಷಯಗಳ ಡಿಬೇಟು, ಆಗಾಗ ಅವರಿವರ ಭಿನ್ನಾಪಿಪ್ರಾಯದಿಂದ ಆಗುತ್ತಿದ್ದ ಎಡವಟ್ಟು ಇವೆಲ್ಲವೂ ಒಟ್ಟು ನನ್ನದೇ ಜವಾಬ್ದಾರಿ ಎಂಬಂತೆ ತೆಗೆದುಕೊಂಡು ನಡೆಸುತ್ತಿದ್ದೆ. ನಿತ್ಯ ಹೊಸ ಲೇಖನಗಳನ್ನು ಸೇರಿಸುವುದು, ಯಾರು ಯಾರು ಬರೆಯುತ್ತಿದ್ದಾರೆ ಎಂಬುದನ್ನೊಮ್ಮೆ ಗಮನಿಸೋದು, ಹೊಸ ಸದಸ್ಯರಿಗೆ ಸ್ವಾಗತ ಸಂದೇಶ ಹಾಕೋದು, ಹೆಚ್ಚಿನ ಜನರನ್ನು ಇದರಲ್ಲಿ ಭಾಗವಹಿಸುವಂತೆ ಮಾಡುವುದು ಹೇಗೆ ಎಂದು ಆಲೋಚಿಸುತ್ತ ಹೊಸ ಹೊಸ ಪ್ರಯೋಗಗಳನ್ನು ನಡೆಸೋದು - ಇವೆಲ್ಲವನ್ನು ನನ್ನ ನಿತ್ಯದ ಕೆಲಸ ಎಂಬಂತೆಯೇ ನಡೆಸುತ್ತಿದ್ದೆ.

ಆಗೊಮ್ಮೆ ಲೈವ್ ಜರ್ನಲ್ ಎಂಬಲ್ಲಿ (ವರ್ಡ್ ಪ್ರೆಸ್. ಕಾಮ್ ಅಥವ ಬ್ಲಾಗ್ ಸ್ಪಾಟ್ ನಂತೆ ಇದೂ ಒಂದು) ಒಬ್ಬರು ಕನ್ನಡ ವಿಕಿಪೀಡೀಯದ ಬಗ್ಗೆ ಬರೆದಿದ್ದರು. ಒಬ್ಬ ಸಾಫ್ಟ್ ವೇರ್ ಇಂಜಿನೀಯರ್ ಬರೆದ ಬ್ಲಾಗ್ ಅದು. "ಕನ್ನಡ ವಿಕಿಪೀಡಿಯದಲ್ಲಿ ಕನ್ನಡವನ್ನು ಹಾಳುಗೆಡವುತ್ತಿದ್ದಾರೆ. ಅಕ್ಷರಗಳನ್ನು ತಪ್ಪು ತಪ್ಪಾಗಿ ಬಳಸುತ್ತಿದ್ದಾರೆ. ಒತ್ತಕ್ಷರಗಳನ್ನು ಸರಿಯಾಗಿ ಬಳಸುತ್ತಿಲ್ಲ" ಎಂದೆಲ್ಲ ಬರೆದಿದ್ದರು. ನನಗೆ ಶಾಕ್ ಆಯ್ತು. ಬರೆದಿದ್ದವನ ಪರಿಚಯ ನನಗಿತ್ತು. ಇದೇನಪ್ಪ ಇದು, ಇದ್ಯಾಕೆ ಹೀಗ್ ಬರೆದಿದ್ದಾನೆ ಎಂದು ಓದಿ ನೋಡಿದರೆ ಅವನಿಗೆ ಹೀಗಾಗಿತ್ತು:
ಮಹರಾಯ ವಿಂಡೋಸ್ 2000ನಲ್ಲಿ ಕನ್ನಡ ವಿಕಿಪೀಡಿಯವನ್ನು ಓದಲು ಪ್ರಯತ್ನಿಸಿ, ಅಲ್ಲಿ ಕನ್ನಡ ಅಕ್ಷರಗಳು (ಯೂನಿಕೋಡ್) ಸರಿಯಾಗಿ ಬರದೆ ಈ ಕನ್ನಡ ವಿಕಿಪೀಡಿಯದಲ್ಲಿ ಬರೆಯುತ್ತಿರುವವರೇ ತಪ್ಪು ತಪ್ಪು ಕನ್ನಡ ಬಳಸಿ ಅದನ್ನು ಹಾಳುಗೆಡವುತ್ತಿದ್ದಾರೆ ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದ!
ಕಂಪೆನಿಯೊಂದರ ರಿಸರ್ಚ್ ಟೀಮಿನಲ್ಲಿದ್ದ ಇವನಿಗೆ ಇದರ ಬಗ್ಗೆ ಹೀಗೆ ಬರೆಯುವ ಮುನ್ನ ಕಿಂಚಿತ್ತಾದರೂ ರಿಸರ್ಚ್ ಮಾಡಬೇಕೆಂಬುದು ಯಾಕೆ ಹೊಳೆಯಲಿಲ್ಲ ಎಂಬುದು ಆಗ ಉತ್ತರ ಸಿಗದ ಪ್ರಶ್ನೆಯಾಗಿತ್ತು.

ಅಮೇರಿಕದಲ್ಲಿ ಕೂತು ಇದನ್ನೋದಿದ್ದ MS ವಿದ್ಯಾರ್ಥಿಯೊಬ್ಬ ತಾನೂ ಅವಲೋಕಿಸಿ ನೋಡದೆ ತಲೆಹರಟೆ ಕಾಮೆಂಟ್ ಹೀಗೆ ಸೇರಿಸಿದ್ದ: "ಎಲ್ರೋ ವಾಟಾಳ್ ನಾಗ್ರಾಜ್ ನಂಬರ್ರು ಇಸ್ಕೊಳ್ರೋ" ಎಂದು!

ತದನಂತರ ನಡೆದದ್ದು ಇತಿಹಾಸ (ಮತ್ತೊಮ್ಮೆ ಸುದೀರ್ಘವಾಗಿ ಬರೆಯುವಷ್ಟು ಸರಕು).

ವಿಂಡೋಸ್ 2000ನಲ್ಲಿ native ಆಗಿ ಯೂನಿಕೋಡ್ ಸಪೋರ್ಟ್ ಇಲ್ಲ. ಅಂದರೆ ಸುಮ್ಮನೆ ವಿಂಡೋಸ್ 2000 ಹಾಕಿಕೊಂಡು ಅದರಲ್ಲಿ ಹೊಸ ಪೀಳಿಗೆಯ ಕನ್ನಡ ವೆಬ್ಸೈಟುಗಳನ್ನು ನೋಡ ಹೊರಟರೆ ಒತ್ತಕ್ಷರಗಳು ಬಿಡಿಬಿಡಿಯಾಗಿ, ಅಕ್ಷರಗಳೂ ಕೆಟ್ಟಕೆಟ್ಟದಾಗಿ ಬರುವುದು. ವಿಂಡೋಸ್ 2000 ಬಳಸುತ್ತಿರುವವರು ಇದನ್ನು ಸರಿಮಾಡಿಕೊಳ್ಳಲು ಅವರ ಕಂಪ್ಯೂಟರುಗಳಲ್ಲಿ ಮಾಡಬೇಕಿರುವ ಕಸರತ್ತಿನ ಬಗ್ಗೆ ಸುಮಾರು ಚರ್ಚೆ ನಡೆದಿದೆ. ತಮಾಷೆಯೆಂದರೆ ಓದುತ್ತಿರುವವರಿಗೆ ತೊಂದರೆ ಅವರ ಕಂಪ್ಯೂಟರಿನಲ್ಲಿ ಓಡುತ್ತಿರುವ ಆಪರೇಟಿಂಗ್ ಸಿಸ್ಟಮಿನದ್ದು, ಅಲ್ಲಿರುವ ವೆಬ್ಸೈಟಿನದ್ದಲ್ಲ ಎಂಬುದರ ಬಗ್ಗೆ ಸುಳಿವೂ ಮನದ ಕದ ತಟ್ಟುತ್ತಿರುವಂತಿಲ್ಲ!

ವಿಂಡೋಸ್ XP ಯಲ್ಲಿ ಹೇಗೆ ಯೂನಿಕೋಡ್ ಅಕ್ಷರಗಳು ಸರಿಯಾಗಿ ಕಾಣಿಸಿಕೊಳ್ಳುತ್ತವೆ ಎಂಬುದರ ಬಗ್ಗೆ ಸುಮಾರು ಚರ್ಚೆಯಾಗಿವೆ. ಆದರೆ ತುಂಗ ಫಾಂಟಿನಲ್ಲಿ ಕೆಲವು ದೋಷಗಳಿದ್ದವು (bugs ಇದ್ದವು). ಇವತ್ತಿಗೂ ಹೊಸತಾಗಿ ಹಾಕಿಕೊಂಡ Xpಲಿ 'ಮಾ' ಮತ್ತು 'ಮೂ' ಎರಡೂ ಒಂದೇ ತರಹ ಕಾಣುವುದು. ಹೊಸ ತುಂಗಾ ಫಾಂಟಿನಲ್ಲಿ ಸರಿಪಡಿಸಿದ್ದಾರೆ, ಅದನ್ನು ಡೌನ್ಲೋಡ್ ಮಾಡ್ಕೊಳ್ಳಿ ಎಂದು ನಾವುಗಳೇ ಎಷ್ಟು ಜನರಿಗೆ ಅದೆಷ್ಟು ಬಾರಿ ಹೇಳಿದ್ದೇವೆಯೋ ಗಣನೆಗೇ ಬಾರದು!
ಸರಿ, ಈ ವಿಷಯ ತಿಳಿದ ಮೇಲೆ ಎಲ್ಲರೂ ಖುಷ್. ಆದರೆ ತಿಳಿಯುವ ಮುನ್ನ ವೆಬ್ಸೈಟೇ ಸರಿಯಿಲ್ಲ ಎನ್ನುವವರೇ ಹೆಚ್ಚು. ಕೂಲಂಕುಷವಾಗಿ ಪ್ರಮಾಣಿಸಿ ನೋಡುವವರು ಕಡಿಮೆ.

ಮೊನ್ನೆ ತಾನೆ ನಾನು ನಿರ್ಮಿಸಲು ಸಹಾಯ ಮಾಡಿದ ವೆಬ್ಸೈಟೊಂದಕ್ಕೆ ಭೇಟಿ ಕೊಟ್ಟವರಿಂದ ಹೀಗೊಂದು ಇ-ಮೇಯ್ಲ್ ಬಂದಿತ್ತು:

"kannada sariyaagi ooduva haage maadalu saadhyavillave? Article chennagiddaru odalikke kashtavaagatte. ishtondu jana kannada it veerariddu kannada yaake innu ii sthitilide?"

("ಕನ್ನಡ ಸರಿಯಾಗಿ ಓದುವ ಹಾಗೆ ಮಾಡಲು ಸಾಧ್ಯವಿಲ್ಲವೆ? ಆರ್ಟಿಕಲ್ ಚೆನ್ನಾಗಿದ್ದರೂ ಓದಲಿಕ್ಕೆ ಕಷ್ಟವಾಗತ್ತೆ. ಇಷ್ಟೊಂದು ಜನ ಕನ್ನಡ ಐ ಟಿ ವೀರರಿದ್ದು ಕನ್ನಡ ಯಾಕೆ ಇನ್ನೂ ಈ ಸ್ಥಿತಿಯಲ್ಲಿದೆ?")

ಏನು ಹೇಳುತ್ತೀರಿ ಇಂಥವರಿಗೆ?

ಕನ್ನಡ ಅಕ್ಷರಗಳು ತಮ್ಮ ಕಂಪ್ಯೂಟರಿನಲ್ಲಿ ಸರಿಯಾಗಿ ಕಾಣಲಿಲ್ಲ ಎಂಬುದನ್ನು ಕನ್ನಡದ "ಈ ಸ್ಥಿತಿ" ಮಾಡಿಟ್ಟುಬಿಡುತ್ತಾರೆ. "ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡ"ಬಾರದೇಕೆ? ಇಂಥ ಅಚಾತುರ್ಯ ಏಕೆ?

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಪ್ರತ್ಯಕ್ಷ ನೋಡಿದರೂ...

vikashegde's picture

ಎಲ್ಲರಿಗೂ ಅವರವರ ಮನೆಗೇ ಹೋಗಿ, ಎಲ್ಲಾ ಹೇಳಿಕೊಟ್ಟು, ಫಾಂಟ್ ಇನ್ ಸ್ಟಾಲ್ ಮಾಡಿ ಕೊಟ್ಟು , ಮತ್ತೇನಾದರೂ ತೊಂದರೆಯಾದರೆ ತಕ್ಷಣ ಬರುತ್ತೇನೆ ಎಂದು ಹೇಳಿ ಬರಬೇಕೇನೋ Smiling

ಉ: ಪ್ರತ್ಯಕ್ಷ ನೋಡಿದರೂ...

hpn's picture

ತುಂಬಾ ದೂರ ಹೋದ್ರಿ. ಸ್ವತಃ ಓದಿ ಸರಿ ಮಾಡಿಕೊಳ್ಳುವಷ್ಟು ಡಾಕ್ಯುಮೆಂಟೇಶನ್ ಇಂಟರ್ನೆಟ್ ನಲ್ಲಿದೆ, ಒಂದು ಗೂಗಲ್ ಸರ್ಚ್ ನಷ್ಟು ದೂರದಲ್ಲಿ. ಅದನ್ನೇ ಓದೋದಿಲ್ಲ! Smiling

ಸಂಪದದಲ್ಲಿ ಈಗ ಇರುವ ಡಾಕ್ಯುಮೆಂಟ್ ಜೊತೆಗೆ ಭಾಷಾಇಂಡಿಯ, ವಿಕಿಪೀಡಿಯ ಹಾಗೂ ಇನ್ನೂ ಹಲವಾರು ಕಡೆ ಡಾಕ್ಯುಮೆಂಟೇಶನ್ ಸುಮಾರು ವರ್ಷಗಳಿಂದಲೇ ಇದೆ. ಇಲ್ಲಿ ಪ್ರಶ್ನೆ ಕೇಳಬಾರದು, ಸಹಾಯ ಅಪೇಕ್ಷೆ ಇರಬಾರದು ಎಂದಲ್ಲ ಎಂಬುದನ್ನು ಒತ್ತಿ ಹೇಳಬಯಸುವೆ (ಬಹುಶಃ ಹಾಗೆ ಹೇಳುತ್ತಿದ್ದೇವೇನೊ ಎಂದುಕೊಂಡ ಶಿವಕುಮಾರ್ ರೇವಡಿ ಮಾತು ಬೇರೆತ್ತಲೋ ಎಳೆದುಬಿಟ್ಟರು).
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಪ್ರತ್ಯಕ್ಷ ನೋಡಿದರೂ...

Shivakumar.Revadi's picture

ಸ್ವಾಮಿ ಹರಿಯವರೆ ಮತ್ತು ವಿಕಾಸ ಅವರೆ ಮಗು ತಪ್ಪನ್ನ ಪದೇ ಪದೇ ಮಾಡುತ್ತಿದೆ ಅಥವಾ ಈ ತಪ್ಪನ್ನ ಜಾಸ್ತಿ ಮಕ್ಕಳು ಮಾಡುತ್ತಿದ್ದಾರೆ ಎಂದು ಗುರುಗಳು ಕೊಪಗೊಂಡಂತೆ ಕಾಣುತ್ತೆ, ಅಲ್ಲಾರೀ..ಕಂಪ್ಯೂಟರ್ ಬಳಸುವವರೆಲ್ಲಾ ಸಾಫ್ಟಿಗಳಲ್ಲ ಅದಕ್ಕಾಗಿ ಈ ರೀತಿಯ ಪ್ರಶ್ನೆಗಳು ಮೇಲಿಂದ ಮೇಲೆ ಉದ್ಭವಿಸುತ್ತವೆ, ಇನ್ನು ಇಸ್ಟಾಲಿಗೂ ಕಾಪಿ ಪೇಸ್ಟಿಗೂ ವ್ಯತ್ತಾಸ ಗೊತ್ತಿಲ್ಲದವರೆಷ್ಟೋ ಜನ ಸಂಪದ ಓದುತ್ತಾರೆ, ನನಗೂ ಈ Moo & Maa ದ ಗೊಂದಲವಿತ್ತು ಅರವಿಂದರು ತಿಳಿಹೇಳಿದ ಮೇಲೆ ದೂರವಾಯಿತು ಅದರೂ ಕೆಲವು limitationಗಳ ನಡುವೆಯೂ ಸಾದ್ಯವಾದಷ್ಟೂ ಕನ್ನಡಕ್ಕೆ ಅಂಟಿಕೊಳ್ಳುವ ಜನರಿದ್ದಾರೆ ಹಾಗು ಸಂಪದ ಬಳಗದ ಮೇಲೆ ಕನ್ನಡ ಭವಿಷ್ಯದ ಆಸೆಯಿಟ್ಟಿದ್ದಾರೆ, ಕನ್ನಡ ಓದುವಾಗ, ಬರೆಯುವಾಗ, ಸಾಹಿತ್ಯ ಅರ್ಥೈಸಿಕೊಳ್ಳುವಾಗ ಎದುರಾಗುವ ಎಲ್ಲ ಸಮಸ್ಯೆಗಳಿಗೂ ನಿಮ್ಮತ್ತಲೇ ಆಶಾದ್ರುಷ್ಟಿಯಿಂದ ನೋಡುವ ಜನರಿಗೆ ನಿಮ್ಮ ಈ ಬರಹಗಳು ನಿರಾಸೆ ಮೂಡಿಸದಿರಲಿ, ನೀವೆಲ್ಲಾ ದೊಡ್ಡಣ್ಣನ ಸ್ಥಾನದಲ್ಲಿದ್ದಿರಾ ಅದಕ್ಕಾಗಿ ಬೇಡವಾದರೂ ನಿಮ್ಮ ಮೇಲೆ ನಮ್ಮನ್ನು ತಿದ್ದುವ ಮತ್ತು ಜೊತೆಗೆ ಕರೆದೊಯ್ಯುವ ಜವಾಬ್ದಾರಿಯಿದೆ.....
ಈ ಮಾತುಗಳು ನಿಮಗೆ ತಲೆಹರಟೆ ಎನ್ನಿಸಿದರೆ........ದಯವಿಟ್ಟು ಕ್ಷಮಿಸಿ......

ನಲುಮೆಯ ನನ್ನಿ

ಉ: ಪ್ರತ್ಯಕ್ಷ ನೋಡಿದರೂ...

hpn's picture

ನಿವು ಕಾಮೆಂಟು ಬರೆದಿರೋ ರೀತಿ ಇಷ್ಟವಾಗಲಿಲ್ಲ. ಮೊದಲಾಗಿ ನೀವು ಮೇಲಿನ ಬರಹವನ್ನು ವೈಯಕ್ತಿಕವಾಗಿ ತೆಗೆದುಕೊಂಡಂತಿದೆ. ಲೇಖನದ ಉದ್ದೇಶ ಅದಲ್ಲ. ಎಲ್ಲರಿಗೂ ಎಲ್ಲ ವಿಷಯವೂ ಗೊತ್ತಿರುವುದಿಲ್ಲ. ಹೀಗಾಗಿ ಏನಾದರೂ ವಿಷಯದ ಬಗ್ಗೆ ತಿಳುವಳಿಕೆ ಇಲ್ಲದಿದ್ದಲ್ಲಿ ಆ ವಿಷಯದ ಬಗ್ಗೆ ತಪ್ಪು ತಪ್ಪು ನಿರ್ಧಾರಕ್ಕೆ ಬರುವ ಮೊದಲು ವಿಷಯದ ಬಗ್ಗೆ ತಿಳಿದವರಲ್ಲಿ ಕೇಳುವ ಮೂಲಕ ಅಥವ ಗೂಗಲ್ ನಲ್ಲಿ ಹುಡುಕುತ್ತ ಓದುವ ಮೂಲಕ ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ಉತ್ತಮ ಎಂಬುದನ್ನು ತಿಳಿಸುವುದು ಈ ಲೇಖನದ ಉದ್ದೇಶ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಪ್ರತ್ಯಕ್ಷ ನೋಡಿದರೂ...

Shivakumar.Revadi's picture

ನಾನು ನಿಮ್ಮ ಲೇಖನ ಓದಿದಾಗ ಅದಕ್ಕೆ ತೋರಿದ ಪ್ರತಿಕ್ರೀಯೆ ಮತ್ತು ನನ್ನ ಪ್ರಮಾಣಿಕ ಆನಿಸಿಕೆ, ಖಂಡಿತವಾಗಿಯೂ ಅದು ಕಮೆಂಟ್ ಅಲ್ಲಾ. ಈಗಲೂ ನನಗೆ ನನ್ನ ಮಾತು ಸರಿ ಎನಿಸುತ್ತಿದೆ.

ಉ: ಪ್ರತ್ಯಕ್ಷ ನೋಡಿದರೂ...

hpn's picture

ಸರಿ, ನಿಮಗೆ ಹಾಗೆನಿಸಿದರೆ ಕೇಳಿ: ನಿಮ್ಮ 'ಪ್ರತಿಕ್ರೀಯೆ'ಗೂ ಮೇಲೆ ಬರೆದಿರುವ ಲೇಖನಕ್ಕೂ ಯಾವುದೇ ಸಂಬಂಧವಿಲ್ಲ. ಮೇಲಿನ ಲೇಖನ *ನಿಮ್ಮನ್ನು ಉದ್ದೇಶಿಸಿ* ಬರೆದುದಲ್ಲ. ಹಾಗೆನಿಸಿದ್ದರೆ ಹಾಗಂದುಕೊಳ್ಳಬೇಡಿ ಅಷ್ಟೆ.

ಮೇಲಿನ ಲೇಖನದಲ್ಲಿ (ಅಥವ ವಿಕಾಸರ ಕಾಮೆಂಟಿನಲ್ಲಿ) ಪ್ರಶ್ನೆ ಕೇಳುತ್ತಿರುವವರ ಬಗ್ಗೆ ಯಾವುದೇ ಕೋಪ ತಾಪ ವ್ಯಕ್ತವಾಗಿಲ್ಲ. ಬದಲಿಗೆ ಯಾವುದೇ ಗೊತ್ತಿಲ್ಲದ ವಿಷಯದ ಬಗ್ಗೆ ತಿಳಿದಿಲ್ಲದಿದ್ದರೆ, "ಪ್ರಶ್ನೆ ಕೇಳಿ, ತಿಳಿದುಕೊಳ್ಳಿ", ನೇರ assumptions ಮಾಡಿಕೊಳ್ಳಬೇಡಿ ಎಂಬುದನ್ನು ಹೇಳಹೊರಟಿರುವುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಪ್ರತ್ಯಕ್ಷ ನೋಡಿದರೂ...

Aravinda's picture

"ಅಲ್ಲಾರೀ..ಕಂಪ್ಯೂಟರ್ ಬಳಸುವವರೆಲ್ಲಾ ಸಾಫ್ಟಿಗಳಲ್ಲ ಅದಕ್ಕಾಗಿ ಈ ರೀತಿಯ ಪ್ರಶ್ನೆಗಳು ಮೇಲಿಂದ ಮೇಲೆ ಉದ್ಭವಿಸುತ್ತವೆ"
ನಿಮ್ಮ ಈ ಮಾತನ್ನ ನಾನು ಒಪ್ಪುತ್ತೇನೆ.

ಈಗ ಒಂದು ಮಾತು ನಿಮ್ಮನ್ನ ಕೇಳುತ್ತೇನೆ. ನಿಮಗೆ ಈಗ maa ಮತ್ತು moo ಬಗೆಗಿನ ತೊಂದರೆ ನಿಮಗೆ ತಿಳಿಯಿತಲ್ಲವೇ, ಯಾರೂ ಕೇಳದೆಯೇ ನೀವಾಗಿಯೇ ಈ ತೊಂದರೆ ಬಗ್ಗೆ ಎಷ್ಟು ಜನಕ್ಕೆ ಮನವರಿಕೆ ಮಾಡಿಕೊಟ್ಟಿದ್ದೀರಿ? ನೀವಾಗೇ ಯಾರಲ್ಲಾದರೂ ಹೇಳಿದರೂ ಅವರಿಗೆ ಇಂತಹ ವಿಷಯದಲ್ಲಿ ಆಸಕ್ತಿ ಇಲ್ಲದಿದ್ದರೆ ನೀವು ಹೇಳಿದರೂ ಪ್ರಯೊಜನ ಆಗೋದಿಲ್ಲ. ಪ್ರಶ್ನೆ ಕೇಳಿದರೇ ಅಲ್ಲವೇ ಉತ್ತರ ಹೇಳಲು ಸಾಧ್ಯ. ಹಾಗೇ ಕನ್ನಡ ಓದಲು/ಬರೆಯಲು ಇಂತಾ ತೊಂದರೆಗಳು ಬರಬಹುದು ಎಂದು ಊಹಿಸಿಕೊಂಡೇ ವಿಕಿಪೀಡಿಯಾ ದಲ್ಲಿ, ಸಂಪದದಲ್ಲಿ FONT HELP ಗೆ ಪುಟಗಳನ್ನು ಮಾಡಿಟ್ಟಿದ್ದಾರೆ. ಕೆಲವೊಂದು ಸಲ ಅದ್ಯಾವುದೂ ಅಲ್ಲದೇ ಬೇರೆ ಪ್ರಶ್ನೆ ಉಧ್ಬವಿಸಬಹುದು, ಆಗ ಆ ಪ್ರಶ್ನೆ ಗಳನ್ನು ಕೇಳದಿದ್ದರೆ ಅದರ ಬಗೆಗಿನ ತೊಂದರೆ ಬಗೆ ಹರಿಯುವುದಿಲ್ಲ. ನಾನು ಸಂಪದಕ್ಕೆ ಸೇರಿದಾಗ ನನಗೂ ಇಂತಹುದೇ ಕೆಲವು ಸಮಸ್ಯೆ ಇದ್ದವು, ನನ್ನ ಮೊದಲನೇ ಬ್ಲಾಗ್ ನೋಡಿ ಅದು ಆ ಸಮಯದಲ್ಲಿ ನನಗೆ ಇದ್ದ ಕನ್ನಡ ಓದಲು ಮತ್ತು ಬರೆಯುವ ಸಮಸ್ಯೆಯ ಬಗ್ಗೆ. ನಾನು ಸಂಪದ ಬಳಗವನ್ನು ಸೇರಿದಾಗಿನಿಂದ ನೋಡುತ್ತಿದ್ದೇನೆ, ಯಾರೇ ಪ್ರಶ್ನೆ ಕೇಳಿದರೂ ಉತ್ತರಿಸಲು ಪ್ರಯತ್ನಿಸುತ್ತಾರೆ. ಇದುವರೆಗೂ ಯಾರಿಗೂ ನಿರಾಸೆ ಯಾದುದು ನಾ ಕಂಡಿಲ್ಲ.

ಹರಿಯವರ ಲೇಖನ ಕನ್ನಡದಲ್ಲಿನ ತಪ್ಪುಗಳನ್ನು ತೋರಿಸಬಾರದು ಎಂದು ಹೇಳಿದ್ದಲ್ಲ, ಸಂಪದದಲ್ಲಿ/ವಿಕಿಪೀಡಿಯಾದಲ್ಲಿ ತಪ್ಪಿದೆ ಅಂತ ಬೇರೆಲ್ಲೋ ಪ್ರಚಾರ ಮಾಡುವ ಮುನ್ನ ಸಂಪದಿಗರಲ್ಲೇ ಒಮ್ಮೆ ಕೇಳಲಿ ಅಥವಾ ಲೇಖನ ಬರೆದವರಲ್ಲಿ ಒಮ್ಮೆ ಕೇಳಲಿ.

ನೀವು ಸಂಪದದಲ್ಲಿ ಒಂದು ಲೇಖನ ಬರೆದು ನಿಮ್ಮ ಸ್ನೇಹಿತರಿಗೆ/ಅಥವಾ ಬೇರೆಯವರಿಗೆ ಓದಲು ಲಿಂಕ್ ಕಳುಹಿಸುತ್ತೀರೆಂದುಕೊಳ್ಳಿ, ಅವರ ಕಂಪ್ಯೂಟರ್ ನಲ್ಲಿ ಕನ್ನಡದ ಫಾಂಟ್ ಸರಿಯಾಗಿಲ್ಲದಿದ್ದರೆ ಅವರಿಗೆ ಸರಿಯಾಗಿ ಓದಲು ಆಗೋದಿಲ್ಲ. ಆಗ ಅವರು ಈ ಕೆಳಗಿನಂತೆ ಮಾಡಬಹುದು
೧) ಅವರಿಗೆ ಸರಿಯಾಗಿ ಓದಲು ಆಗುತ್ತಿಲ್ಲ ಎಂದು ನಿಮಗೆ ತಿಳಿಸಬಹುದು,
೨) ತಮ್ಮ ಕಂಪ್ಯೂಟರ್ ನಲ್ಲಿ ಏನೋ ತಪ್ಪಿದೆ ಎಂದು ಸರಿಪಡಿಸಿಕೊಂಡು ಓದಬಹುದು.
೩) ಅವರ ಬ್ಲಾಗ್ ನಲ್ಲೋ ಅಥವಾ ಅವರ ಪುಟದಲ್ಲಿ ನಿಮಗೆ ಕನ್ನಡ ಸರಿಯಾಗಿ ಬರೆಯಲು ಬರೋದಿಲ್ಲ ಅಂತ ಬರೆದು ನಿಮ್ಮ ಪುಟದ ಲಿಂಕ್ ಕೊಡಬಹುದು.

ಮೇಲಿನ ಆಯ್ಕೆಗಳ ಬಗ್ಗೆ ನಿಮಗೆ ಏನನ್ನಿಸುತ್ತದೆ ಎಂದು ನಮಗೆ ತಿಳಿಸಿ.

ನಿಮ್ಮವನೇ,
ಅರವಿಂದ
http://www.belaku.net

ಉ: ಪ್ರತ್ಯಕ್ಷ ನೋಡಿದರೂ...

raghava's picture

ಯಾರೋ ಮೈಯಲ್ಲಿ ಎಲ್ಲಿ ಮುಟ್ಟಿದರೂ ನೋವಾಗತ್ತೆ ಅಂತ ಡಾಕ್ಟರ್ ಹತ್ರ ತೋರಿಸಿ ನೋಡಿದ ಮೇಲೆ ಕಂಡಿದ್ದು, ನೋವಿರೋದು ಕೈ ಬೆರಳಿನಲ್ಲಿ ಅಂತ!
ಇದು ನೆನಪಿಗೆ ಬಂತು ಈ ಲೇಖನ ಓದಿ ...

--_ರಾಘವ_
http://raghavan.vinay.googlepages.com

ಉ: ಪ್ರತ್ಯಕ್ಷ ನೋಡಿದರೂ...

hpn's picture

ಒಳ್ಳೆ analogy. Smiling

ದಿನವೆಲ್ಲ ಕರೆಂಟ್ ಇಲ್ಲ ಅಂತ ಕೆ ಇ ಬಿ ಯವರಿಗೆ ಫೋನಿನಲ್ಲಿ ಉಗಿದ ಮೇಲೆ ಮನೆಯಲ್ಲೇ ಟ್ರಿಪ್ಪರ್ ಆಫ್ ಆಗಿರುವುದು ಗೊತ್ತಾದಂತೆ!
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ಪ್ರತ್ಯಕ್ಷ ನೋಡಿದರೂ...

Shivakumar.Revadi's picture

ಹರಿ, ವಿಕಾಸ್, ಅರವಿಂದ್ ಎಲ್ಲ ಮಿತ್ರರಿಗೂ.....
ನೀವು ಎನೇ ಅನ್ಕೊಂಡರೂ, ನನಗೆ ಗೊತ್ತಿಲ್ಲದ್ದನ್ನ, ತಿಳೀದೆ ಇರೊದನ್ನ....ನೂರ ಸರ್ತಿ ಕೇಳತಿನಿ.
ನನ್ನಿ.....

ಉ: ಪ್ರತ್ಯಕ್ಷ ನೋಡಿದರೂ...

Aravinda's picture

ಕೇಳಿ ಸಂತೋಷ, ಹಾಗೇ ನಿಮಗಿಂತ ಹೊಸಬರಿಗೆ ನೀವೂ ಸಹಾಯ ಮಾಡಿ.

ನಿಮ್ಮವನೇ,
ಅರವಿಂದ
http://www.belaku.net

ಉ: ಪ್ರತ್ಯಕ್ಷ ನೋಡಿದರೂ...

omshivaprakash's picture

ಹಾ! ಅರವಿಂದ ಹೇಳಿದ ಹಾಗೆ ಹೊಸಬರಿಗೆ ಸಹಾಯ ಮಾಡಬೇಕಾದಾಗ, ಕನ್ನಡದಲ್ಲೇ ಆ ಸಹಾಯವನ್ನ ಒದಗಿಸೋ ಕೆಲಸ ಮಾಡಿದರೆ, ಮುಂದೆ ಕನ್ನಡದಲ್ಲೇ ಅದನ್ನ ಓದಿಕೊಂಡು ಅರ್ಥಮಾಡಿಕೊಳ್ಳೋರು ನಮ್ಮ ಮುಂದೆ ಬರ್ತಾರೆ, ಬೇರೆಯವರಿಗೂ ಎಲ್ಲಿಂದ ಅವರಿಗೆ ಮಾಹಿತಿ ಸಿಗ್ತು ಅಂತ ಹೇಳ್ತಾರೆ. ಕನ್ನಡದಲ್ಲಿ ಮಾಹಿತಿ ಒದಗಿಸಲಿಕ್ಕೆ ನಾವೆಲ್ಲಾ ತುಂಬಾ ಕೆಲಸ ಮಾಡ್ಬೇಕಿದೆ. ನಮಗಿರುವ "ಲಿಮಿಟೇಶನ್" ಗಳ ಜೊತೆಯಲ್ಲೇ ಎಲ್ಲರೊಳಗೊಂದುಗೂಡಿ ಆಗಬೇಕಿರುವ ಕೆಲಸ ಮಾಡುವ. ನಿಮಗೆ ಗೊತ್ತಿರುವ, ನೀವು ಬೇರೆಯವರಿಂದ ಅರಿತು ತಿಳಿದದ್ದನ್ನು ಕನ್ನಡದಲ್ಲಿ ಬರೆದು ಬೇರೆಯವರಿಗೆ ತಿಳಿಸುವ ಕೆಲಸ ಹೆಚ್ಚಿಸಿದರೆ ಮುಂದೇನಾಗ ಬಹುದು ಅನ್ನೋದನ್ನ ನೀವೆ ಹೇಳ ಬಹುದು ಅಂದು ಕೊಳ್ತೇನೆ.

ಅರಿಯದಿದ್ದರೆ ಮರಳಿಯತ್ನವ ಮಾಡು, ತಿಳಿಯಲಿಕ್ಕೆ ಪ್ರಯತ್ನಿಸು ಅಂತ ಹೇಳಿದ್ದಾರಲ್ಲ. ಕಷ್ಟ ಆದ್ರೆ ನಾವೆಲ್ಲ ಇದ್ದೇ ಇದ್ದೇವೆ ಸಹಾಯಕ್ಕೆ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ಪ್ರತ್ಯಕ್ಷ ನೋಡಿದರೂ...

raghava's picture

ಪ್ರಶ್ನೆ ಕೇಳಿದರೆ ಸಂತೋಷ! ಅದಲ್ಲದೆ ಏನೂ ಕೇಳದೇ ತಾವೇ ಒಂದು conclusion ಗೆ ಬಂದು ಅರಿಯದ ವಿಷಯದ ಬಗ್ಗೆ judgement ಪಾಸ್ ಮಾಡುವ ಮಿತ್ರರಿಗೆ ನಮ್ಮ ಸಲಹೆ (ಕೇಜಿಗಟ್ಟಲೆ ಸಹಾನುಭೂತಿಯೊಂದಿಗೆ)... "ತಟ್ಟು ಅದು ತೆರೆಯುತ್ತದೆ."

ತೀರ ಖಾರವಾದ ಪ್ರತಿಕ್ರಿಯೆ ಅಂತ ಅನ್ನಿಸಿದರೆ ಕ್ಷಮೆಯಿರಲಿ ...

--_ರಾಘವ_
http://raghavan.vinay.googlepages.com

Syndicate content