ಅನನ್ಯ ಅಲ್ಲಮ - ೮
ಅಲ್ಲಮನ ವ್ಯಕ್ತ ಜೀವನದಲ್ಲಿ ಅತ್ಯಂತ ಗೋಜಲಾದ ಸಂಗತಿಯೆಂದರೆ , ವಿಕಳ ಸ್ಥಿತಿಯಲ್ಲಿದ್ದ ಅಲ್ಲಮನಿಗೆ , ಅನಿಮಿಷ ದೇವರು ಇಷ್ಟಲಿಂಗವನ್ನು ಪ್ರಸಾದಿಸಿ , ಅವನನ್ನು ಅನುಗ್ರಹಿಸಿದ ಸಂದರ್ಭ . ಇದನ್ನು ಐತಿಹಾಸಿಕವಾಗಿ ನಿಷ್ಕರ್ಷಿಸುವುದು ಅತ್ಯಂತ ಕಠಿಣ ಸವಾಲು .
ಅನಿಮಿಷನಿಗೂ ಬಸವಣ್ಣನೇ ಲಿಂಗವನ್ನು ಪ್ರಸಾದಿಸಿದ ಎನ್ನುವುದನ್ನು ಸಮರ್ಥಿಸುವ ವಚನಗಳು , ಯಾವ ತಾರ್ಕಿಕ ನಿಲುವಿಗೆ ಬರಲೂ ಸಹಕಾರಿಯಾಗುವುದಿಲ್ಲ .ಪ್ರಭು ಲಿಂಗ ಲೀಲೆಯಲ್ಲಿ ,ಪ್ರಭು ದೇವರ ರಗಳೆಯಲ್ಲಿ ಅನಿಮಿಷನೊಡನೆ ಅಲ್ಲಮನ ಸಮರಸ ಭಾವದ ವಿಷಯದಲ್ಲಿ ಭಿನ್ನ ದೃಷ್ಟಿಕೋನಗಳಿದ್ದರೂ ; ಅಲ್ಲಮನಿಗೆ ಅನಿಮಿಷನ ಸಂದರ್ಶನ ಭಾಗ್ಯವೊದಗುವುದು ಮಾತ್ರ ಮಾನವ ಮಾತ್ರರಿಗೆ ದುರ್ಲಭವಾದ ನೆಲದ ಅಂತರಾಳದಲ್ಲಿ . ಎನ್ನುವ ವಿಚಾರದಲ್ಲಿ ಏಕಾಭಿಪ್ರಾಯವಿದೆ .
ಹೀಗೆ ಜಗತ್ತಿನ ಅವಗಾಹನೆಯಿಂದ ಇಡಿಯ ಒಂದು ಮಂದಿರವೇ ಮರೆಯಾಗಿ ಹೋಗಲು ಶತಮಾನಗಳೇ ಬೇಕು!ಈ ಶತಮಾನಗಳ ಮುನ್ನಿನ ಅನಿಮಿಷನಿಗೆ , ಮಂಗಳವೇಢೆಯಲ್ಲಿ , ಕಲ್ಯಾಣದಲ್ಲಿ ಎರಡು ಮೂರು ದಶಕಗಳ ಅವಧಿಯಲ್ಲಿ ಕಾರ್ಯಾಚರಣೆ ನಡೆಸಿದ ಬಸವಣ್ಣನೇ ಗುರು ಎಂಬ ಮಾತು , ಅಭಿಮಾನದ ದೃಷ್ಟಿಯಿಂದ ಸರಿ ಎನಿಸಬಹುದಾದರೂ ತಾರ್ಕಿಕವಾಗಿ ನಿಲ್ಲುವುದಿಲ್ಲ.
ಐತಿಹಾಸಿಕವಾಗಿ ಹನ್ನೆರಡನೆಯ ಶತಮಾನದಲ್ಲಿ ಅಲ್ಲಮನಿಂದ ಲೋಕದ ಕಣ್ಣಿಗೆ ಬಿದ್ದ ಆ ದೇವ ಮಂದಿರವಾದರೂ ಯಾವುದು? ಅದು ಬನವಸೆಯಲ್ಲಿದ್ದಿತೇ? ಬಳ್ಳಿಗಾವೆಯಲ್ಲಿದ್ದಿತೇ? ಅಥವಾ ಬೇರೆಲ್ಲಾದರೂ ಇದ್ದಿತೇ ? ಎಂಬ ಬಗ್ಗೆ ಯಾವುದೇ ವಿವರಗಳಿಲ್ಲ . ಕಳೆದ ಸಾವಿರಾರು ವರ್ಷಗಳ ಅನೇಕ ಪುಣ್ಯ ಸ್ಥಳಗಳು ಭಾರತದ ಎಲ್ಲ ಕಡೆ ಗುರುತಿಸಲ್ಪಡುತ್ತಿದ್ದರೂ, ಕರ್ನಾಟಕದಲ್ಲಿ ಅಘಟನಾ ಘಟನೆಯೊಂದು ನಡೆದುದರ ಸ್ಮಾರಕವಾಗಿ ಅಂತಹ ದೇವ ಮಂದಿರವೊಂದು ಎಲ್ಲಿಯೂ ಪೌರಾಣಿಕ ಸಾಕ್ಷಿಯಾಗಿಯಾದರೂ ಉಳಿದಿಲ್ಲ.
ಹಾಗಾದರೆ ಭೌತಿಕವಾಗಿ ಅಲ್ಲಮನ ಜೀವನದಲ್ಲಿ ಘಟಿಸಿತೆಂದು ನಂಬಲಾದ ಪವಿತ್ರ ಸ್ಥಳವೊಂದು ಯಾವ ಕಾರಣಕ್ಕೆ ಅಗೋಚರವಾಯಿತು? ಆರೀತಿಯ ಅನುಭಾವ ಜನ್ಯ ಸ್ಮೃತಿಯೊಂದು ಭೌತಿಕವಾಗಿ ಘಟೀಸಿತೇ ? ಅಥವಾ ಅದೊಂದು ಅನುಭೂತಿಯೇ? ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ಪ್ರಶಸ್ತವಾದ ಸ್ಥಳ ಅಲ್ಲಮನವೇ ವಚನಗಳು .
ಪೃಥ್ವಿಯ ಎಲ್ಲರಂತೆ ಸಂಸಾರದಲ್ಲಿ ತಲ್ಲೀನನಾದ ಅಲ್ಲಮನಿಗೆ ,ಅವನ ಸ್ಥಾನ ಅದಲ್ಲವೆಂದು ಮನವರಿಕೆ ಮಾಡಲು ,ಅದಾವ ಮಾಯೆ ಅಲ್ಲಮನಿಂದ ಅವನ ಮನದನ್ನೆಯನ್ನು ಸೆಳೆದೊಯ್ಯಿತೋ? ಅದರ ಮರ್ಮ ತಕ್ಷಣ ತಾಗದೆ , ವಿಚಲಿತನಾಗಿ , ವಿರಹಿಯಾಗಿ ,ದಿಕ್ಕು ದೆಸೆಗಳ ಪರಿವೆ ಇಲ್ಲದೆ ಅವಳಿಗಾಗಿ ಹಂಬಲಿಸಿ ಮುಂದೆಂದೂ ಕಾಣಲಾರದ ಅವಳ ಭೌತಿಕ ಕಾಯಕ್ಕಾಗಿ ಪರಿತಪಿಸುತ್ತಿದ್ದ , ಅಲ್ಲಮನ ವಿಕಳ ಸ್ಥಿತಿಯಿಂದ ಅವನನ್ನು ಪಾರು ಮಾಡಿದ್ದು ಅವನಲ್ಲೇ ಸುಪ್ತವಾಗಿದ್ದ ಅವನ ಯೌಗಿಕ ಪಾರುಗಾಣ್ಕೆ .
ಸತತ ಬದಲಾವಣೆಯಿಂದ , ಅನಿತ್ಯವಾದ ಜಗತ್ತಿನಲ್ಲಿ ಇರಬಹುದಾದ ಯಾವುದೋ ಒಂದು ನಿತ್ಯ ಸತ್ಯದ ದರ್ಶನ , ಅಲ್ಲಮನಿಗೆ ದೊರಕಿದ್ದು ಅವನದೇ ಪುಣ್ಯದ ಫಲದಿಂದ . ಅವನಲ್ಲಿಯೇ ,ಅವನೊಡನೆಯೇ ಸತತವಾಗಿದ್ದ ಅವನ ಗುಹೇಶ್ವರನನ್ನು ಮರೆ ಮಾಡಿದ್ದ ಮಾಯೆಯೇ ಮಣ್ಣಿನ ಹೊರಳಿ , ಸ್ಮೃತಿ ರಹಿತ ಸ್ಥಿತಿಯಿಂದ , ಸ್ಮೃತಿಯತ್ತ ನಡೆದ ಪಯಣವೇ ಮಣ್ಣಿನ ಹೊರಳಿಯನ್ನು ಸರಿಸಿದ ಪ್ರಯತ್ನ . ಅಲ್ಲಿ ಕಂಡ ಮಂದಿರವೇ ಪ್ರಾಣಮಯ ಜಗತ್ತು . ಅದರೊಳಗೆ ಪ್ರವೇಶಿಸಿ ,ಅನಿಮಿಷನಾಗಿ ದೃಷ್ಟಿಯನ್ನು ಕೀಲಿಸಿದುದೇ , ಅವನರಿವೇ ಅವನ ಗುರುವಾದ ಅನಿಮಿಷ ಯೋಗಿಯ ಮನೋಮಯ ಜಗತ್ತು . ಅಲ್ಲಿ ದೊರಕಿದ ಗುಹೇಶ್ವರ ಲಿಂಗವೇ ಜ್ಞಾನಮಯ ಜಗತ್ತು .ಅದರಿಂದ ದೊರಕಿದ ಜ್ಞಾನವೇ ವಿಜ್ಞಾನಮಯ ಜಗತ್ತು .ಇದಕ್ಕೆ ಸಾಕ್ಷಿಯಾಗಿ ಅಲ್ಲಮನ ನೂರಾರು ವಚನಗಳಿವೆ .
ಉಪಾಧಿಕ ಮನವು , ಉಪಾಧಿ ರಹಿತ ಮನವು
ನಿಂದಲ್ಲಿಯೇ ನಿವಾತವಾಯಿತ್ತು
ಆನಂದ ಭಾವವು ಬಿಂದು ತಾನುಳಿದು
ನಿಂದಲ್ಲಿಯೇ ನಿವಾತವಾಯಿತ್ತು
ಲಿಂಗ ಉದಯ ಪ್ರಜ್ವಲಿಸುತಿದೆ
ಗುಹೇಶ್ವರನೆಂಬ ಲಿಂಗ ತಾನೆಯಾಗಿ
ಮನದ ಕೊನೆಯ ಮೊನೆಯ ಮೇಲೆ
ನೆನೆದ ನೆನಹು ಜನನ ಮರಣವ ನಿಲಿಸಿತ್ತು
ಜ್ಞಾನ ಜ್ಯೋತಿಯ ಉದಯ ಭಾನು ಕೋಟಿಯ ಮೀರಿ
ಸ್ವಾನುಭವದ ಉದಯ
ಜ್ಞಾನ ಶೂನ್ಯದಲಡಗಿದ ಘನವನೇನೆಂಬೆ ಗುಹೇಶ್ವರ
ತುಂಬಿ ಪರಿಮಳವನುಂಡಿತೋ !
ಪರಿಮಳ ತುಂಬಿಯನುಂಡಿತೋ!
ಲಿಂಗ ಪ್ರಾಣವಾಯಿತೋ !
ಪ್ರಾಣ ಲಿಂಗವಾಯಿತೋ !
ಗುಹೇಶ್ವರ ಈ ಉಭಯ ಭೇದವ ನೀನೇ ಬಲ್ಲೆ
ಬೆಳಕು ಕತ್ತಲೆಯ ನುಂಗಿ
ಒಳಗೆ ತಾನೊಬ್ಬನೆಯಾಗಿ
ಕಾಬ ಕತ್ತಲೆಯ ಕೆಳೆದುಳಿದು
ನಿಮಗಾನು ಗುರಿಯಾದೆ ಗುಹೇಶ್ವರಾ
ಸತ್ಯವನೊಳಕೊಂಡ ಮಿಥ್ಯಕ್ಕೆ ಭಂಗ
ಮಿಥ್ಯವನೊಳಕೊಂಡ ಸತ್ಯಕ್ಕೆ ಭಂಗ
ಸತ್ಯ ಮಿಥ್ಯವನೊಳಕೊಂಡ ಮನಕ್ಕೆ ಭಂಗ
ಮನವನೊಳಕೊಂಡ ಜ್ಞಾನಕ್ಕೆ ಭಂಗ
ಜ್ಞಾನವನೊಳಕೊಂಡ ನಿಜಕ್ಕೆ ಭಂಗವುಂಟೇ ಗುಹೇಶ್ವರ
ತನುವಿಲ್ಲದ ಕಂಡು ಕಂಡು ನಿಂದೆ
ಬೆರಗಿಲ್ಲದ ಕಂಡು ಕಂಡು ಬೆರಗಾದೆ
ರೂಹಿಲ್ಲದೆ ಕಂಡರಿದೆ ಗುಹೇಶ್ವರನೆಂಬ ಲಿಂಗವ

- Login or register to post comments
- 324 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಅನನ್ಯ ಅಲ್ಲಮ - ೮
ಆ ಗುಹೇಶ್ವರ ಲಿಂಗ ಎಲ್ಲೋ ಒಂದು ಕಡೆ ಇದ್ದಿರಲೇಬೇಕೆಂದು ನನಗನಿಸುತ್ತದೆ. ವಚನಕಾರರೆಲ್ಲರು ಯಾವುದೋ ಒಂದು ದೇಗುಲದ ದೇವರನ್ನು ತಮ್ಮ ಮನದ ಗುಡಿಯಲ್ಲಿರಿಸಿಕೊಂಡು, ಅವನಿಗೆ ಹೇಳುವಂತೆ ವಚನಗಳನ್ನು ಬರೆದಿದ್ದಾರೆ.
ಉ: ಅನನ್ಯ ಅಲ್ಲಮ - ೮
ಸಂಗನ,
ನನಗೆ ಹಾಗನಿಸುವುದಿಲ್ಲ. ಅಲ್ಲಮ ಸೊನ್ನೆ ಸಂಪಾದನೆಯ ಬಗ್ಗೆ ಮಾತಾಡಿದ್ದಾನೆ. ಗುಹೆ=ಗವಿ ==> ಕತ್ತಲೆ ಅಂದರೆ ಎನೂ ಕಾಣದಿರುವುದು. ಅಂದರೆ ಮನ-ಮಿದುಳುಗಳನ್ನು ಕತ್ತಲೆ ತರ ಕಾಲಿ ಮಾಡಿಕೊಳ್ಳುವುದು. ಹಾಗಾಗಿ ಅಲ್ಲಮ 'ಗುಹೇಶ್ವರ' ಬಳಸಿದ್ದಾನೆ ಅಂತ ನನ್ನ ಊಹೆ.(ನಿಕ್ಕುವ ಗುಹೇಶ್ವರ ಯಾಕೆ ಬಳಸಿದ್ದಾನೆ ಅಂತ ನನಗೆ ಗೊತ್ತಿಲ್ಲ).
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು