ಕಾರಂತರ ಜೀವಂತ ಪಾತ್ರಗಳು ೬ (೧)
’ನಂಬಿದವರ ನಾಕ ನರಕ’ ’ಧರ್ಮರಾಯನ ಸಂಸಾರದ’ ದಾಂಪತ್ಯ ಸಮಸ್ಯೆಗಳು , ಗಂಡಿನ ಅಹಂಕಾರ ಮತ್ತು ಬೇಜವಾಬ್ದಾರಿಯ ಪರಿಣಾಮಗಳಾದರೆ ,’ ಕೇವಲ ಮನುಷ್ಯರು ’ ಕಾದಂಬರಿಯ ವಾರಿಜೆ ಯದು ಅದೇ ರೀತಿಯ ಹೆಣ್ಣು ಬೇಜವಾಬ್ದಾರಿಗೆ ಕಾರಣೀಭೂತಳಾಗುವ ವಿಚಿತ್ರ ಕಥೆ .
ಹೆಣ್ಣೊಬ್ಬಳು ಸಂಸಾರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಇತರ ಚಟುವಟಿಕೆಗಳಲ್ಲಿ ಮನೆಯನ್ನೇ ಮರೆಯುವುದು ’ ವೀರಪಾಂಡ್ಯ ಕಟ್ಟಬೊಮ್ಮನ್ ’ ( ಆ ಕಾಲದ ಒಂದು ಜನಪ್ರಿಯ ತಮಿಳು ಚಲನಚಿತ್ರ) ಚಲನ ಚಿತ್ರದ ವಿಮರ್ಶೆಯಷ್ಟು ಕೂಡಾ ಮನೆಯ ಕಡೆಗೆ ಗಮನ ನೀಡದಿದ್ದರೆ ,ಆ ಸಂಸಾರದಲ್ಲಿ ಸೃಷ್ಟಿಯಾಗುವ ಬಿರುಕಿನ ಕಡೆಗೆ ಇಲ್ಲಿ ಓದುಗರ ಗಮನ ಸೆಳೆಯಲಾಗಿದೆ . ಹೀಗೆ ಗಂಡು ಹೆಣ್ಣು ಎರಡಕ್ಕೂ ಇರಬೇಕಾದ ನಿಷ್ಟೆ , ಜವಾಬ್ದಾರಿ ಕಡಮೆಯದಲ್ಲ .
ಇಲ್ಲಿ ಹಯವದನರಾಯ ಬಡತನದಿಂದ ತನ್ನ ಓದಿನ ಕಾರಣಕ್ಕಾಗಿ ಮದ್ರಾಸಿನ ಬಂಧುಗಳ ಮನೆ ಸೇರುತ್ತಾನೆ .ಆ ಮನೆಯ ಮಗಳು ವಾರಿಜೆಯನ್ನು ಮದುವೆಯಾಗಲೇಬೇಕಾದ ಅನಿವಾರ್ಯಕ್ಕೆ ಒಳಗಾಗುತ್ತಾನೆ . ಮದುವೆಯ ಹುಡುಗನ ಬಗ್ಗೆ ವಾರಿಜೆಯ ಅಭಿಪ್ರಾಯವೇನೆಂಬುದು ಗೊತ್ತಾಗುವುದಿಲ್ಲ . ತಮ್ಮ ಮನೆಯ ಅನ್ನಕ್ಕಾಗಿ ಬಂದವನನ್ನು , ಹಿರಿಯರ ಇಷ್ಟದಂತೆ ಮದುವೆಯಾದವಳು . ಮದುವೆಯಾದ ತಪ್ಪಿಗೆ ಮಕ್ಕಳನ್ನೂ ಹಡೆಯುತ್ತಾಳೆ . ಅವನೊಡನೆ ಅನೇಕ ಊರುಗಳಲ್ಲಿ ಸಂಸಾರ ನಡೆಸಿದರೂ ; ಶ್ರೀಮಂತ ಮನೆತನದಳೆಂಬ ಹೆಮ್ಮೆ , ಗಂಡನನ್ನು ಸಸಾರವಾಗಿ ಕಾಣುವಂತೆ ಮಾಡುತ್ತದೆ . ಆ ಗಂಡನ ಬಗ್ಗೆ ಅವಳಿಗೆ ಯಾವ ಬಂಧುರತೆಯೂ ಉಳಿಯುವುದಿಲ್ಲ . ಕೇವಲ ಅದು ಯಾಂತ್ರಿಕ ಬಂಧನವಾಗುತ್ತದೆ .
ಮುಖ್ಯ ಇಂಜಿನಿಯರನಾಗಿ ಅನೇಕ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ ನಂತರ ನಿವೃತ್ತನಾಗಿ ವಾರಿಜೆಯೊಡನೆ ವಾಸಿಸಲು ಬಂದರೆ , ಅವನಿಗೆ ತುಂಬಾ ಶೀತಲವಾದ ಸ್ವಾಗತ ದೊರೆಯುತ್ತದೆ .ಅವಳ ತಂದೆ ಮದ್ರಾಸಿನಲ್ಲಿ ಅವಳಿಗಾಗಿ ಕೊಟ್ಟ ’ ವಾರಿಜವಿಲ್ಲಾ’ ದಲ್ಲಿ ಅವಳ ವಾಸ .ನಿಜಕ್ಕೂ ಅದು ಹಯವದನರಾಯರ ಪಾಲಿಗೆ ವಾರಿಜೆ ಇಲ್ಲ ಎನ್ನುವಂತಾಗುತ್ತದೆ .
ತನ್ನ ಸ್ವಂತದ ಸ್ಥಳವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳಿದ ಜೀವನ ಕಳೆಯಲು ಹಯವದನ ರಾಯ ನಿರ್ಧರಿಸುತ್ತಾನೆ . ಇದರಿಂದ ಹೆಂಡತಿ ಪೂರ್ವ ಕರಾವಳಿಯ ವಾಸಿಯಾದರೆ ; ಗಂಡ ಪಡುವಣ ಕರಾವಳಿಯ ನಿವಾಸಿ .ಹೆಂಡತಿಯನ್ನು ತನ್ನೊಡನೆ ಇರಿಸಿಕೊಳ್ಳಲು ಹಯವದನರಾಯ ನಡೆಸುವ ಪ್ರಯತ್ನ ವಿಫಲವಾಗುತ್ತದೆ .ಇಬ್ಬರ ನಡುವೆ ಅವರ ಮನಃಸ್ಥಿತಿಯಷ್ಟೇ ಅಂತರದ ವಿಶಾಲ ಭೂಪ್ರದೇಶ .ಕಾದಂಬರಿಯ ಕೊನೆಯ ವರೆಗೆ ವಾರಿಜೆ ಹಯವದನರಾಯರು ಪುನಃ ಕಲೆತದ್ದು ಎಂಬುದು ಇಲ್ಲವೇ ಇಲ್ಲ .
ಕಾವೇರಿಯದು ಇನ್ನೊಂದು ರೀತಿಯ ಕರುಣಾಜನಕ ಕಥೆ .ಗಂಡ ಇದ್ದರೂ ಇಲ್ಲದಂತಹ ಬಾಳು . ಮಕ್ಕಳಿಗೂ ಅವಳ ಮೇಲೆ ಅಕ್ಕರೆ ಅಷ್ಟೆ . ಅವರಿವರ ಮನೆಯ ಚಾಕರಿಯೇ ಅವಳ ಹಣೆಬರಹ . ಆದರೂ ಬದುಕಬೇಕಲ್ಲ , ಅಷ್ಟಕ್ಕಾಗಿ ಅವಳ ಬದುಕು . ಇಂತಹ ತತ್ತರಿಸುತ್ತಿದ್ದ ಬಾಳಿಗೆ ಆಶ್ರಯದಾತವಾಗಿ ಒಂದು ಹುಲ್ಲು ಕಡ್ಡಿಯ ಆಸರೆ .ಹಯವದನರಾಯರದು - ಯಾವುದೇ ಅತಂತ್ರ ಅನಿಶ್ಚಿತ ಬದುಕಿನಲ್ಲಿ ಆಕಸ್ಮಿಕವಾಗಿ ಅಪರೂಪವಾಗಿ ದೊರಕುವಂತಹುದು - ಅದನ್ನು ಅವಳು ಭದ್ರವಾಗಿ ಆಶ್ರಯಿಸುತ್ತಾಳೆ .
ಶಾಂತಾಬಾಯಿಯದು ಇನ್ನೊಂದೇ ತೆರನ ಬದುಕು . ಅವಳು ಮೀರಾಬಾಯಿಯನ್ನು ಮೀರಿಸುವಂತಹ ಭಕ್ತೆ .ಅವಳ ಭಗವತ್ಪ್ರೇಮದೆದುರು ರಾಧೆ ಸುಳ್ಳು , ಅವಳು ನಿಜ . ಅವಳ ಪತಿ ವಿಶ್ವನಾಥ ಅವಳಿಂದ ಎಂದೂ ಆ ತೆರನ ಪ್ರೀತಿಯನ್ನು ಕಾಣಾದ ಅಭಾಗ್ಯ . ಆದರೂ ಅವಳನ್ನು ಮೆಚ್ಚುಗೆಯಿಂದ ನೋಡಬಲ್ಲ ಸಹೃದಯಿ .ಅವಳ ದೈವ ಅಭಿನ್ನಾನಂದ . ವಿಶ್ವನಾಥನಿಗೂ ಆದರಣಿಯನಾದ ಗುರು .ಅಭಿನ್ನಾನಂದರ ಪೂರ್ವಾಶ್ರಮದ ಹೆಸರು ಮುಕುಂದ ಕಮ್ತಿ . ಮಡದಿ ಪ್ರೇಮಮಯಿಯಾದ ಭವಾನಿ . ಅವಳ ಬಾಳು ಕಡಿಮೆ ಅವಧಿಯದು . ನಂತರ ಆಧ್ಯಾತ್ಮದೆಡೆಗೆ ಆಕರ್ಷಿತನಾಗಿ , ವಿಭಿನ್ನ ರೀತಿಯ ವಾಸ್ತವವಾದದ ಆಧಾರದಲ್ಲಿ ತನ್ನ ವಿಚಾರಗಳನ್ನು ರೂಪಿಸಿಕೊಳ್ಳುತ್ತಾ ; ಹೊಸ ರೀತಿಯ ತಾತ್ವಿಕ ಅನ್ವೇಷೆಣೆಗೆ ತೊಡಗಿಕೊಳ್ಳುತ್ತಾನೆ .
ಆಧ್ಯಾತ್ಮದ ವಿಚಾರದಲ್ಲಿ ಗುರುವಿನೊಡನೆ ಪ್ರಶ್ನೋತ್ತರ ನಡೆಸಲು ಬಂದ ಶಾಂತಾಬಾಯಿ ತಾನೇ ಒಂದು ವಿಚಿತ್ರವಾದ ಯಕ್ಷಪ್ರಶ್ನೆಯಾಗುತ್ತಾಳೆ . ಶಾಂತಾಬಾಯಿಯ ಪ್ರವಾಹವಾಗಿ ಹರಿಯುವ ಹುಚ್ಚು ಪ್ರೇಮದ ಹೊಳೆಯಲ್ಲಿ ಜಾರಿ ಬಿದ್ದು ಕೊಚ್ಚಿ ಹೋದ ಅಭಿನ್ನಾನಂದ , ಹೇಗೋ ಚೇತರಿಸಿಕೊಳ್ಳುತ್ತಾನೆ . ಇಷ್ಟು ಜೀವಂತ ಪಾತ್ರಗಳು ಸಾಕಲ್ಲ ’ಕೇವಲ ಮನುಷ್ಯರ’ನ್ನು ನಿರೂಪಿಸಲು
ಕಾದಂಬರಿಯ ಉದ್ದಕ್ಕೂ ನಡೆಯುವ ಘಟನೆಗಳು ಮನುಷ್ಯನ ಅಸಹಾಯಕ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಮನಗಾಣಿಸುತ್ತಲೇ ಹೋಗುತ್ತವೆ . ಕಾರಂತರು ಎಲ್ಲೋ ಒಂದುಕಡೆ ಹೇಳುತ್ತಾರೆ. ಕಾದಂಬರಿಯೊಳಗಣ ಜೀವಂತ ಪಾತ್ರಗಳು , ಎಂದೂ ಲೇಖಕನ ಮಾತನ್ನು ಕೇಳುವುದಿಲ್ಲವಂತೆ ! ’ ಅವನು ಹೇಳಿದಂತೆ ಕುಣಿಯಲು ’ ಅವೇನು ನಿರ್ಜೀವಿಗಳಾದ ಸೂತ್ರದ ಬೊಂಬೆಗಳೇ !? ರಕ್ತ ಮಾಂಸಗಳಿಂದ ಕೂಡಿದ ಭಾವ ಜೀವಿಗಳು ಅವು ! ’ಕೇವಲ ಮನುಷ್ಯರ’ ಲ್ಲಿನ ಮಾಂಸಲ ಜೀವಿಗಳು , ಕಾರಂತರ ಮಾತನ್ನು ಹೇಗೆ ತಾನೆ ಕೇಳಿಯಾವು ? ಅವುಗಳ ಬಾಳು ಅವುಗಳದ್ದು ; ಕಾರಂತರ ಅಂಕೆಗೆ ಸಿಗುವಷ್ಟು ನಿರ್ಜೀವಿಗಳಲ್ಲ ಅವು . ಹಯವದನರಾಯರು , ಕಾವೇರಿ , ವಿಶ್ವನಾಥ , ಶಾಂತಾಬಾಯಿ , ಅಭಿನ್ನಾನಂದ ಈ ರೀತಿಯ ಕೇವಲ ಮನುಷ್ಯರಾದ , ಸನ್ನಿವೇಶದ ಶಿಶುಗಳು ,ಸಮಾಜ ಒಪ್ಪದೇ ಇರಬಹುದಾದ ಸಂಬಂಧಗಳಲ್ಲೂ , ನೆಮ್ಮದಿಯನ್ನು ಕಂಡುಕೊಳ್ಳುತ್ತವೆ . ಇಲ್ಲಿ ದೂರಬಹುದಾದದ್ದು ಅಂದಂದಿನ ಸನ್ನಿವೇಶವನ್ನೇ ಹೊರತು ಮತ್ತಾರನ್ನೂ ಅಲ್ಲ .
ಕಾವೇರಿಯ ಗಂಡ ತೀರಿಕೊಂಡಾಗ ಆ ವಿಷಯವನ್ನು ಅವಳನ್ನು ಚುಚ್ಚಲೆಂದೇ ಅವಳ ಸಂಬಂಧಿಯು ಉತ್ಪ್ರೇಕ್ಷೆಯಿಂದ ಅವಳಿಗೆ ತಲುಪಿಸಿದಾಗ ಕಾವೇರಿಯಂತಹ ಅಸಹಾಯಕ ಅಬಲೆಯಾದ ಹೆಣ್ಣುಮಗಳೂ ಸಹ , ನಿತ್ಯದಕ್ಕಿಂತ ದೊಡ್ಡದಾಗಿ ಕುಂಕುಮವನ್ನಿಟ್ಟುಕೊಂಡು ಮೌನವಾಗಿಯೇ ಪ್ರತಿಭಟಿಸುತ್ತಾಳೆ .ವಿವಾಹಿತ ಹೆಂಗಸಿನ ಎಲ್ಲ ರೀತಿಯ ಸೌಲಭ್ಯಗಳಿರುವ ತಾನು ಹೇಗೆ ವಿಧವೆ ? ಎಂಬುದು ಅವಳ ಅಂತರಂಗದ ಪ್ರಶ್ನೆ . ಸತ್ತು ಹೋದ ಗಂಡ ಅವಳ ಪಾಲಿಗೆ ಸತ್ತುದು ಎಂದೋ - ಹತ್ತಾರು ವರ್ಷಗಳಿಗೂ ಮೊದಲೇ - ಅಂದ ಮೇಲೆ ಇವತ್ತು ಅವನು ಸತ್ತು ಹೋದುದು ಯಾವ ವಿಶೇಷವೂ ಅಲ್ಲ ಅವಳ ಪಾಲಿಗೆ .
’ಕೇವಲ ಮನುಷ್ಯರು’ ಮನುಷ್ಯ ತನ್ನಿಂದ ಸಾಧ್ಯವಾಗದ ಆದರ್ಶಗಳನ್ನು ಸಾಧ್ಯವೆಂದು ಸಾಧಿಸಲು ; ಅಥವಾ ಹಾಗೆ ವಾದಿಸಲು , ಹೆಣಗಾಡುವ ಅತಾರ್ಕಿಕ ನಿಲುವನ್ನು ವಿಡಂಬಿಸಿ ; ಮನುಷ್ಯನ ಸೋಗಲಾಡಿತನವನ್ನು ಬಯಲು ಮಾಡುವಲ್ಲಿ ಯಶಸ್ಸು ಕಂಡ ಬರಹ .ಈ ವಿಷಯವಾಗಿ ಕಾರಂತರು ಹೇಳುವುದು ಒಂದೇ ಮಾತು ; ಅವರವರ ಅಂತರಂಗವನ್ನು ಅವರೇ ಕೇಳಿಕೊಂಡು , ಇಂಥ ವಿಷಯಗಳಲ್ಲಿ ನಿರ್ಧಾರಕ್ಕೆ ಬರುವುದು ಸರಿಯಾದ ದಾರಿ , ಇಲ್ಲಿ ಯಾರ ಉಪದೇಶವೂ ಅನಾವಶ್ಯಕ ಎಂಬುದು ( ಮುಂದುವರಿಯುವುದು)

- Login or register to post comments
- 230 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: