ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಕಾರಂತರ ಜೀವಂತ ಪಾತ್ರಗಳು ೬ (೩)

May 22, 2008 - 6:46am — csomsekraiah

ಕಾರಂತರ ’ಮರಳಿ ಮಣ್ಣಿಗೆ’ ತೊಂಭತ್ತು ವರ್ಷಗಳ ಸುದೀರ್ಘ ಕಥಾನಕವನ್ನು ಹೊಂದಿರುವ ಒಂದು ಬೃಹತ್ ಕಾದಂಬರಿ ೧೮೫೦ ರಿಂದ ೧೯೪೦ ರ ವರೆಗಿನ ಸಾಮಾಜಿಕ ಜೀವನದ ಬದಲಾವಣೆಗಳನ್ನು ಸಮಗ್ರವಾಗಿ ಬಿಡಿಸಿಡುವ ಒಂದು ದೊಡ್ಡ ಪ್ರಯತ್ನ .

ಇಂತಹ ಒಂದು ಬರಹವನ್ನು ಯಾವುದೇ ಚೌಕಟ್ಟಿನಡಿಯಲ್ಲಿ ಕೂಡಿಸಿಡುವುದು ಕಷ್ಟದ ಕೆಲಸ . ಏಕೆಂದರೆ ಈ ಕಾಲಾವಧಿಯು ಇಡೀ ಪ್ರಪಂಚದ ಜನ ಸಮೂಹಗಳ ಜೀವನ ಕ್ರಮದಲ್ಲಿ ಅಗಾಧವಾದ ಬದಲಾವಣೆಗಳನ್ನು ಮೂಡಿಸುತ್ತಿದ್ದ ಸಂಕ್ರಮಣ ಸಮಯ . ಸಾಮಾಜಿಕ ಜೀವನದಲ್ಲಿ , ಆರ್ಥಿಕ ವಲಯಗಳಲ್ಲಿ , ರಾಜಕೀಯ ವಾತಾವರಣದಲ್ಲಿ , ಧಾರ್ಮಿಕ ಪ್ರಭಾವಗಳಲ್ಲಿ ಹಿಂದೆ ಕಂಡರಿಯದ ರೀತಿಯ ಮಾರ್ಪಾಡುಗಳು ಜರುಗುತ್ತಿದ್ದವು . ವೈಜ್ಞಾನಿಕ ಅನ್ವೇಷಣೆಗಳ ಫಲವಾಗಿ , ಹೊಸ ರೀತಿಯ ವಿಚಾರಗಳು , ಭಾವನೆಗಳು ಜನ ಮಾನಸದಲ್ಲಿ ರೂಪು ತಳೆದು , ಹೊಸ ದಿಗಂತಗಳು ತೆರೆದಿದ್ದವು . ಆದರೆ ಸಾಮಾನ್ಯರ ಬಾಳಿನಲ್ಲಿ ಸಂಕಷ್ಟಗಳ ಸರಮಾಲೆಗಳೇ ಸೃಷ್ಟಿಯಾಗಿದ್ದುದರಿಂದ ಜನರು ಬದುಕನ್ನು ಅರಸಿ , ಅತಂತ್ರ ರೀತಿಯಲ್ಲಿ ತಿರುಗಾಡುವ ಅನಿವಾರ್ಯತೆಗೂ ಪಕ್ಕಾಗಿದ್ದರು . ಅಮಾನವೀಯವಾದ ಪ್ರಪಂಚ ಯುದ್ದಗಳು ಮಾನವ ಪ್ರಾಣಗಳನ್ನು ತೃಣ ಸಮಾನವಾಗಿಸಿದ್ದವು .

ಅದೇ ಸಮಯದಲ್ಲಿ ಮನುಷ್ಯರ ಸ್ವಾತಂತ್ರ್ಯದ ಹಕ್ಕುಗಳನ್ನು ದಮನಗೊಳಿಸುವ ವಿದ್ಯಮಾನಗಳೂ ; ಅಂತಹ ದಮನಗಳ ವಿರುದ್ದ ಮಾನವೀಯ ಹೋರಾಟಗಳೂ ಎಲ್ಲೆಡೆ ಸಾಮಾನ್ಯವಾಗಿದ್ದ ಕಾಲ ಘಟ್ಟವದು . ಈ ವಿದ್ಯಮಾನಗಳು ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗಿರದೆ ಇಡೀ ಮನುಷ್ಯ ಕುಲ ವಾಸಿಸುತ್ತಿದ್ದ ಭೂಖಂಡಗಳನ್ನೆಲ್ಲಾ ವ್ಯಾಪಿಸಿದ್ದವು . ಭಾರತದಲ್ಲಂತೂ ಪರಕೀಯರ ಆಡಳಿತದ ವಿರುದ್ದವಾಗಿ ಸ್ವಾತಂತ್ರ್ಯ ಸಮರ , ಅಹಿಂಸಾ ಮಾರ್ಗದಲ್ಲಿ ಜಗತ್ತು ಕಂಡರಿಯದ ಹೊಸ ಬಗೆಯ ಹೋರಾಟವಾಗಿ ರೂಹು ತಳೆಯುತ್ತಿತ್ತು .

ಇಂತಹ ಸಮಯದಲ್ಲಿನ ಕನ್ನಡ ಕರಾವಳಿಯ ಕುಗ್ರಾಮವೊಂದರಲ್ಲಿ ಘಟಿಸುತ್ತಿದ್ದ ಮನೆತನವೊಂದರ ಜೀವನ ಕ್ರಮವನ್ನು ಅನಾವರಣಗೊಳಿಸುತ್ತಾ , ಮೂರು ತಲೆಮಾರಿನ ಜೀವನ ಚಿತ್ರಣಗಳನ್ನು ಕಾರಂತರು ಚಿತ್ರಿಸಿರುವ ರೀತಿಯೇ ಅಸಾಧಾರಣವಾದದ್ದು . ಕಾದಂಬರಿಯಲ್ಲಿ ಚಿತ್ರಿತವಾಗುವ ಇತರ ವಿಷಯಗಳ ಕಡೆಗೆ , ಬೇರೊಂದು ಬರಹದಲ್ಲಿ ವಿಶ್ಲೇಷಿಸಬಹುದಾದುದರಿಂದ ಸದ್ಯಕ್ಕೆ ಅಲ್ಲಿನ ಮಾನವೀಯ ಸಂಬಂಧಗಳ ಬಗ್ಗೆ ಮಾತ್ರವೇ ಈ ಲೇಖನದ ಮಿತಿಯಲ್ಲಿ ಚರ್ಚಿಸಬಹುದು .

ರಾಮ ಐತಾಳರ ಜೀವನ ಕಾಲವೆಂಬುದು , ಊಳಿಗ ಮಾನ್ಯ ಪದ್ದತಿಯ ಕೊನೆಯ ಕಾಲಘಟ್ಟವಾಗಿತ್ತು . ಅವರ ತಂಗಿ ವಿಧವೆ ಸರಸೋತಿ , ಮನೆತನದ ವಿದ್ಯಮಾನಗಳಲ್ಲಿ ಹೆಣ್ಣನ್ನು ಕಡೆಗಣಿಸುತ್ತಿದ್ದ ಪದ್ದತಿಯ ವಿರುದ್ದ ಆಕ್ರೋಶ ತೋರಿಸುತ್ತಿದ್ದಳು . ಹಗಲು ರಾತ್ರಿಯೆನ್ನದೆ ಮನೆತನದ ಹಿತಕ್ಕಾಗಿ ದುಡಿಯುತ್ತಿದ್ದ ಹೆಣ್ಣುಮಕ್ಕಳಿಗೆ , ಕುಟುಂಬದ ಅತಿ ಮುಖ್ಯವಿಷಯಗಳಲ್ಲಿ ಸಹ , ಚರ್ಚೆಗೆ ಅವಕಾಶವಿರುವುದಿರಲಿ , ವಿಷಯವನ್ನೇ ಅವರಿಗೆ ತಿಳಿಸಬೇಕಾದ ಅಗತ್ಯವಿಲ್ಲವೆನ್ನುವಂತೆ ವರ್ತಿಸುತ್ತಿದ್ದ ಗಂಡಿನ ರೀತಿ , ಹೆಣ್ಣು ಮಕ್ಕಳು ಕೆರಳಲು ಕಾರಣವಾಗಿತ್ತು . ರಾಮ ಐತಾಳರ ಎರಡನೆ ಮದುವೆ ಎಂಬುದು ಅವರ ಹೆಂಡತಿ ಪಾರೋತಿಗೆ ಮನೆಯ ಮುಂದೆ ಮದುವೆಯ ಚಪ್ಪರ ಎದ್ದಾಗಲೂ ಗೊತ್ತಿರಲಿಲ್ಲ .

ಕಾದಂಬರಿಯ ಆರಂಭಕ್ಕೇನೇ ಪಾರ್ವತಿ ರಾಮ ಐತಾಳರ ಮಳೆಗಾಲದ ಮದುವೆಯ ಗ್ರಾಮೀಣ ಸಂಭ್ರಮದ ಚಿತ್ರಣದೊಡನೆ , ಸಹಜವಾಗಿ ಜೀವಂತವಾಗತೊಡಗುವ ಕತೆ , ಮುಂದುವರಿಯುವುದು ಸರಸೋತಿ, ಪಾರೋತಿಯರ ಮುಗ್ಧ ಬದುಕಿನ ಸಜೀವ ಚಿತ್ರಣದೊಡನೆ . ಮಳೆಗಾಲವನ್ನು ಎದುರಿಸಲು ಕರಾವಳಿಯ ಮನೆಗಳಲ್ಲಿ ನಡೆಯುವ ಪೂರ್ವ ಸಿದ್ದತಾಕ್ರಮಗಳನ್ನು ಈ ಎರಡು ಹೆಣ್ಣು ಜೀವಗಳ ಚಟುವಟಿಕೆಗಳೊಡನೆ ಸಮೀಕರಿಸುತ್ತ , ದಿನ ದಿನದ ಕರಾವಳಿಯ ಮನೆ ಮನೆಯ ಬದುಕನ್ನು , ಸರಸೋತಿ ಪಾರೋತಿಯರು , ಮನೆಯ ಹಪ್ಪಳ ಒಣಗಿಸುವುದರಿಂದ ಹಿಡಿದು . ಮನೆಗೆ ಬೇಕಾದ ಎಣ್ಣೆಯನ್ನು ಒದಗಿಸಿಕೊಳ್ಳುವ ಕ್ರಮಗಳಿಂದ , ದನ ಕರುಗಳನ್ನು ನೋಡಿಕೊಳ್ಳುವ , ಹಿತ್ತಲಲ್ಲಿ ಕಾಯಿ ಪಲ್ಲೆ ಬೆಳೆಯುವ , ಬದುಕಿನ ಎಲ್ಲ ವಿಧಾನಗಳನ್ನು ಓದುಗನ ಕಣ್ಣೆದುರು ನಡೆಯುವ ವಿದ್ಯಮಾನಗಳಂತೆ ಚಿತ್ರಿಸುವ ರೀತಿಯೇ ಸಹಜ ಸೊಗಸಿನಿಂದ ಕೂಡಿದುದು .

ಮಕ್ಕಳಿಲ್ಲವೆಂಬ ಕಾರಣಕ್ಕೆ ಸತ್ಯಭಾಮೆಯನ್ನು ಎರಡನೆಯ ಮದುವೆಯಾದ ರಾಮ ಐತಾಳರ ಆಸೆಗೆ ತಕ್ಕಂತೆ ಲಚ್ಚ ಹುಟ್ಟುತ್ತಾನೆ . ಆದರೆ ಆ ಲಚ್ಚ ಮಾತ್ರ ಮನುಷ್ಯತ್ವಕ್ಕೆ ವಿರುದ್ದವಾದ ಗುಣ ಧರ್ಮಗಳಿಂದ ಐತಾಳರ ಮನೆತನವನ್ನು, ಅದರಲ್ಲಿ ಆಶ್ರಯ ಪಡೆದ ಜೀವಗಳನ್ನು , ಹಿಂಸೆಯ ಕೂಪಕ್ಕೆ ತಳ್ಳುತ್ತಾನೆ . ಇಲ್ಲಿ ಒಂದು ವಿಶೇಷವನ್ನು ಕಾರಂತರ ಬರಹದಲ್ಲಿ ಗುರುತಿಸಬೇಕಾದದ್ದು ನಿಸರ್ಗದೊಡನೆ ಒಡನಾಟವಿರುವ ಮನುಷ್ಯ , ಅವನ ಸ್ವಭಾವ ಯಾವ ತೆರದ್ದೇ ಆಗಿದ್ದರೂ ಒಂದಿಷ್ಟಾದರೂ ಸಹ್ಯವೆನಿಸುವ ರೀತಿಯಲ್ಲಿ ಬಾಳುತ್ತಾನೆ . ನಿಸರ್ಗ ವಿದೂರವಾದವನು ಎಲ್ಲ ಬಗೆಯ ಮನುಷ್ಯತ್ವವಿದೂರವಾದ ನರಕದ ಕಡೆಗೆ ಹೆಜ್ಜೆ ಹಾಕುತ್ತನೆ ಎಂಬುದು .

ರಾಮ ಐತಾಳರು ಯಜಮಾನಿಕೆಯ ಸಂಸ್ಕೃತಿಯವರೇ ಆದರೂ , ಮನೆತನವನ್ನು ನಿಕೃಷ್ಟವಾಗಿ ಕಾಣುವುದಿಲ್ಲ . ಅದಕ್ಕೆ ಅನಿವಾರ್ಯ ವಾಗಿ ಪ್ರಕೃತಿಯೊಡನೆ ಬದುಕಬೇಕಾಗಿ ಬಂದ ಅವರ ಜೀವನ ವಿಧಾನವೂ ಕಾರಣವಾಗುತ್ತದೆ . ಕಡಲಿನ ದಂಡೆಯಲ್ಲಿಯೇ ಇರುವ ಅವರ ಮನೆ , ಅದರ ಆರ್ಭಟದಿಂದಾಗಿ , ಹೊರ ಜಗತ್ತಿಗೆ ಅಲ್ಲಿನ ವಿದ್ಯಮಾನಗಳೇ ಅರಿವಾಗದಂತಹ ಪರಿಸ್ಥಿತಿಯನ್ನೇ ನಿರ್ಮಾಣ ಮಾಡಿದ್ದರೂ ಸಹ , ಅಲ್ಲಿನ ಕರುಳ ಬೆಸುಗೆಗಳು ಪರಸ್ಪರ ಸ್ಪಂದಿಸುತ್ತಲೇ ಇರುತ್ತವೆ . ಆದರೆ ಅದೇ ಮನೆತನದ ಕುಡಿ ಲಚ್ಚ , ತನ್ನ ಮನೆಗೆ ಸಮೀಪವೇ ಹರಿದು ಕಡಲು ಸೇರುವ ನದಿಯನ್ನೂ ಕಾಣ ; ಸಮುದ್ರವಂತೂ ಅವನ ಲೆಕ್ಕದ ಪುಸ್ತಕದಲ್ಲಿಯೇ ಇಲ್ಲದ ವಿಚಾರ . ವಯಸ್ಸಿಗೆ ಬಂದ ಕೂಡಲೇ ಕಂಡದ್ದು , ಗಲ್ಲಿಗಳ ಕಮಟು ಹಿಡಿದ ರೂಮುಗಳಲ್ಲಿ ಇಸ್ಪೀಟಿನ ಸಹವಾಸ , ಜೊತೆಗೆ ಬೆಲೆವೆಣ್ಣುಗಳ ಬಲೆಯಲ್ಲಿ ಮತ್ತೇರಿದ ಬದುಕು . ಅದೇ ಅವನ ಮಗ ರಾಮನಿಗೆ ಸಮುದ್ರವೆಂದರೆ ಪ್ರಾಣ .ಕಾಡು ನದಿ ಝರಿ ಇವೆಲ್ಲ ಪ್ರಿಯ . ಈ ಬಗೆಯ ಮೂರು ರೀತಿಯ ಮನಸ್ಸುಗಳು ರೂಪುಗೊಳ್ಳುವುದು ಪ್ರಕೃತಿಯ ನಡುವಣ ರಕ್ತಿ ವಿರಕ್ತಿಗಳ ಪರಿಣಾಮವಾಗಿ.

ಲಚ್ಚನಂತಹ ಗಂಡನನ್ನು ಪಡೆದ ಅಭಾಗಿನಿ ನಾಗವೇಣಿಯದು ಅಸಹಾಯಕತೆಯ ಪರಮಾವಧಿಯ ಬದುಕು .ಮನುಷ್ಯರ ರೀತಿ ನೀತಿಗಳನ್ನು ಕಿಂಚಿತ್ತಾದರೂ ರೂಢಿಸಿಕೊಳ್ಳದ , ಯಾವತ್ತಾದರೂ
ಪ್ರವಾಸಿಯಂತೆ ಬಂದು , ಮನೆತನವನ್ನೇ ವಿನಾಶದ ಅಂಚಿಗೆ ದೂಡುವ ಸನ್ನಾಹಗಳಿಂದಲೇ ಸಜ್ಜಾಗಿರುತ್ತಿದ್ದ ಮನುಷ್ಯನನ್ನು , ಸಹಿಸಬೇಕಾದ ಅನಿವಾರ್ಯತೆ ಅವಳದು . ತನ್ನ ಸ್ವಾರ್ಥ ಮತ್ತು ವಿಷಯ ಲೊಲುಪ್ತಿಗೆ ಮನೆತನದ ಆಸ್ತಿಯನ್ನು ಮೋಸದಿಂದ ಪರಭಾರೆ ಮಾಡಿ , ಹೆಂಡತಿ ಮಕ್ಕಳ ಬಾಳನ್ನು ಬೀದಿಗೆ ತಂದು ನಿಲ್ಲಿಸಿ , ಅದಕ್ಕಾಗಿ ಸ್ವಲ್ಪವಾದರೂ ಪಾಶ್ಚಾತ್ತಾಪವಿಲ್ಲದ ಪರಮ ಬೇಜವಾಬ್ದಾರಿಯ ಬದುಕು ಅವನದು .

ತನ್ನ ಕರುಳ ದುಃಖವನ್ನು ಮರೆಯಲು , ನಾಗವೇಣಿ ಮರೆ ಹೊಗುವುದು ಸಂಗೀತವನ್ನು . ಪಿಟೀಲಿನ ಟುಂಯ್ ಸದ್ದಿನಲ್ಲಿ , ಮನದಲ್ಲಿ ಮಡುಗಟ್ಟಿದ ದುಃಖವನ್ನು ತೋಡೀಕೊಳ್ಳಲು ಆಶ್ರ್ತಯಿಸುವುದು , ತೋಡಿರಾಗವನ್ನು .ಸಮುದ್ರದೆದುರಿನಲ್ಲಿ, ಸಮುದ್ರದಂತಹ ಸಮುದ್ರವೇ ಭೋರ್ಗರೆದು ಗೋಳಿಡುವಂತೆ , ಸಮುದ್ರದ ಮೊರೆತವನ್ನು ತನ್ನ ಸಂಗೀತದ ಲಯಗಳಲ್ಲಿ ಹಿಡಿದಿಟ್ಟು ಮನಸ್ಸನ್ನು ಸ್ತಿಮಿತಕ್ಕೆ ತರಲು ಹೆಣಗುತ್ತಿದ್ದ , ಆ ಜೀವಕ್ಕೆ ತಂಪೆರೆಯುವಂತೆ ಮಗ ರಾಮ ಅದೇ ಪಿಟೀಲಿನ ತನ್ನ ಪ್ರೌಢಿಮೆಯನ್ನು ತಾಯಿಯೆದುರು ತೋರಿಸಿ , ಆ ನೊಂದ ಜೀವಕ್ಕೆ ಸಾಂತ್ವನ ನೀಡುತ್ತಾನೆ .

ರಾಮನಿಗೆ ತನ್ನ ತಂದೆ ಎಂತಹವನು ಎಂಬುದು ಗೊತ್ತಾಗುವ ಅವಕಾಶಗಳೇ ಇರಲಿಲ್ಲ . ಅವನು ಹುಟ್ಟಿದಾಗಿನಿಂದ ಯವ್ವನದ ವರೆಗೆ ತಂದೆಯನ್ನು ಕಂಡವನೇ ಅಲ್ಲ .ಅವನಿಗೆ ಇಪ್ಪತ್ತು ವರ್ಷವಾಗುವಾಗ ಮೈಸೂರಿನಲ್ಲೊಮ್ಮೆ ಶ್ರೀರಾಂಪೇಟೆಯ ಕವಲೊಡೆಯುವ ಒಂದು ಸಂದಿಯಲ್ಲಿ ತನ್ನ ತಂದೆಯನ್ನು ಕಾಣಲು ಹೋಗುತ್ತಾನೆ .ತಾನೆಂದೂ ನೋಡದ , ದೊಡ್ಡವನಾಗಿ ತನ್ನೆದುರು ನಿಂತ ಮಗನನ್ನು ಕಾಣುವ ಯಾವ ಕಾತರವನ್ನೂ ತೋರದೆ , ತನ್ನ ಇಸ್ಪೀಟಿನ ಆಟದಲ್ಲೇ ಲೀನನಾದ ತಂದೆಯನ್ನು ಕಂಡು , ಉಂಟಾದ ಅಸಹ್ಯಭಾವವನ್ನು ತಡೆದುಕೊಂಡು , ತನ್ನ ತಾಯಿಯೊಡನೆ , " ಅಮ್ಮ ಎಂದೂ ನಾನು ಅಪ್ಪನಂತಾಗಲಾರೆ ,, ಎನ್ನುವ ಮಾತೇ ನಾಗವೇಣಿಯ ಪಾಲಿಗೆ ಭರವಸೆಯ ಮಾತಾಗಿ ಕೇಳಿಸುತ್ತದೆ .

ಇದು ಮೂರು ತಲೆಮಾರುಗಳ ರಾಮ ಐತಾಳರ ,ಅವರ ಮಗ ಲಚ್ಚನ ಮತ್ತು ಅವನ ಮಗ ರಾಮನ ಕತೆ ಮಾತ್ರವಲ್ಲ ; ಮನುಷ್ಯನ ಮೂರ್ಖತನದೆದುರು ಬಳಲಿದ ಜೀವಗಳ ಆರ್ತನಾದದ ಕತೆ ; ಹಾಗೆಯೇ ಜಗತ್ತಿನ ಮೂರ್ಖತನದಿಂದಾಗಿ ಮನುಷ್ಯ ಕುಲ ತೊಳಲಾಡುವ ಇತಿಹಾಸದ ಕತೆ .

  • ವಿಮರ್ಶೆ
~.~
  • Login or register to post comments
  • 198 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾರಂತರ ಜೀವಂತ ಪಾತ್ರಗಳು -೫ (೧)
  • ಕಾರಂತರ ಜೀವಂತ ಪಾತ್ರಗಳು ೬ (೧)
  • ಕಾರಂತರ ಜೀವಂತ ಪಾತ್ರಗಳು ೮ (೧)
  • ಕಾರಂತರ ಜೀವಂತ ಪಾತ್ರಗಳು ೪ (೨)
  • ಕಾರಂತರ ಜೀವಂತ ಪಾತ್ರಗಳು ೧
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
  • ಪರಂಪರೆ-ಪ್ರವಾಹ-ಪ್ರತಿರೋಧ
  • ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
  • ’ರಾಕ್ ಬ್ರಿಡ್ಜ್ ಮೆಮೋರಿಯಲ್ ಸ್ಟೇಟ್ ಪಾರ್ಕ್”
  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 5:31am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 13, 2008 - 5:28am
  • venkatesh
    ಉ: ಪರ್ಯಟಕ ಮಿತ್ರರ ಜೊತೆಯಲ್ಲಿ !
    October 13, 2008 - 4:54am
  • ವರ್ಣನಾಥ ಎನ್. ವೆ...
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 1:37am
  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:16am
  • anil.ramesh
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 12, 2008 - 11:59pm
  • ಗಣೇಶ
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:50pm
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:27pm
  • anil.ramesh
    ಉ: ಅವರು ಯಾರಿರಬಹುದು?
    October 12, 2008 - 11:26pm
  • ಗಣೇಶ
    ಉ: ಮತಾಂತರ ಏನು ಎತ್ತ
    October 12, 2008 - 11:22pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 72 ಅತಿಥಿಗಳು ಆನ್ಲೈನ್ ಇರುವರು.


ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator