ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಕಪ್ಪೆ ಕಪ್ಪೆ ನೀರು ಕೊಡು...

June 2, 2008 - 11:38am — rashmi_pai

ಶಾಲೆಯ ಆರಂಭದ ದಿನ. ಒಂದನೇ ತರಗತಿಗೆ ಕಾಲಿಡುವ ಸಂತಸ. ನನ್ನ ಮನೆಯ ಹತ್ತಿರವೇ ಇರುವ ಶಾಲೆ. ಶಾಲೆಯ ಗಂಟೆಯ ಸದ್ದು ಯಾವಾಗಲೂ ನಮ್ಮ ಮನೆಗೆ ಕೇಳುತ್ತಿತ್ತು. ನನ್ನ ಅಣ್ಣ ಅಕ್ಕ ಎಲ್ಲರೂ ಅಲ್ಲಿ ಓದಿದವರೇ. ನಮ್ಮ ಹಳ್ಳಿಯಲ್ಲಿರುವ ಏಕೈಕ ಕನ್ನಡ ಶಾಲೆ ಅದು. ಕೇರಳವಾಗಿದ್ದರಿಂದ ಮಲಯಾಳ ಕಲಿಯಬೇಕೆಂದಿದ್ದವರಿಗೆ ಬಸ್‌ನಲ್ಲಿಯೇ ಶಾಲೆಗೆ ಹೋಗಬೇಕು. ಅಂತೂ ಬಸ್‌ನಲ್ಲಿ ಮಕ್ಕಳನ್ನು ಕಳುಹಿಸಲು ಇಷ್ಟವಿಲ್ಲದ ಮಲಯಾಳಿಗರಿಗೆ ಕನ್ನಡ ಶಾಲೆಯೇ ಆಶ್ರಯ. ಒಂದರಿಂದ ಏಳನೇ ತರಗತಿಯವರೆಗಿರುವ "ಮಜದೂರರ" ಶಾಲೆ. ಅಲ್ಲಿ ಕಲಿಯುವಂತಹ ಮಕ್ಕಳೆಲ್ಲರಿಗೂ ಬಡತನದ ಕಹಿ ಗೊತ್ತು. ಬೆರಳೆಣಿಕೆಯಷ್ಟೇ ಮಂದಿ ಸ್ವಲ್ಪ ಅನುಕೂಲ ಕುಟುಂಬದಿಂದ ಬಂದವರಾಗಿದ್ದರು. ಆದರೂ ಬಡತನದ ಬೇನೆಯಲ್ಲಿಯೂ ಉತ್ತಮವಾಗಿ ಕಲಿತು ಏಳನೇ ತರಗತಿಯವರೆಗೇರಿದರೂ ನಂತರ ಹೈಸ್ಕೂಲ್ ಮೆಟ್ಟಿಲು ಹತ್ತಲು ತಾಪತ್ರಯಗಳು ಅವರ ಬೆನ್ನು ಬಿಡುತ್ತಿರಲಿಲ್ಲ.

ಜೂನ್ ಒಂದನೇ ತಾರೀಕಿಗೆ ಹೊಸ ಅಧ್ಯಯನ ವರ್ಷ ಪ್ರಾರಂಭ. ಅಂದು ಒಂದನೇ ಕ್ಲಾಸಿಗೆ ಕಾಲಿಟ್ಟಾಗ ಅತೀವ ಸಂತಸವಾಗಿತ್ತು. ಪ್ರಾರಂಭ ದಿನದಂದು ಒಂದನೇ ಕ್ಲಾಸಿನ ಮಕ್ಕಳನ್ನು ಸ್ವಾಗತಿಸಲು ಶಾಲೆ ಸಜ್ಜಾಗಿತ್ತು. ಹೊಚ್ಚ ಹೊಸತಾದ ನೀಲಿ ಬಣ್ಣದ ತುಂಡು ಲಂಗ, ಬಿಳಿ ರವಿಕೆ ಧರಿಸಿ, ಮೋಟುದ್ದದ ಜಡೆಗೆ ಚೆಂಡು ಹೂವನ್ನು ಮುಡಿದು ಶಾಲೆಗೆ ಹೋದ ಬಾಲ್ಯದ ನೆನಪು. ಹೊಸ ತರಗತಿ, ಅಪ್ಪ ತಂದು ಕೊಟ್ಟಂತಹ ಹೊಸ ಬ್ಯಾಗು, ಮರದ ಸ್ಲೇಟು, ಪೆನ್ಸಿಲು ಇರಿಸುವ ಪ್ಲಾಸ್ಟಿಕ್ ಪೆಟ್ಟಿಗೆ (ನಮ್ಮಲ್ಲಿ ಹೆಚ್ಚಾಗಿ ಇದನ್ನು ಕಂಪಾಸು ಪೆಟ್ಟಿಗೆ ಅಂತನೇ ಹೇಳ್ತಾರೆ ) ಅದೂ ಅಲ್ಲದೆ ರೈನ್‌ಕೋಟ್, ಚಪ್ಪಲಿ, ಕೈತುಂಬಾ ಬಳೆ, ಅದಾಗಲೇ ಅಣ್ಣ ಖರೀದಿಸಿ ಕೊಟ್ಟ ಉದ್ದದ ಬಳಪ ಎಲ್ಲವೂ ಹೊಸತು ಹೊಸತು. ಮೊದಲ ದಿನ ಗುರುಗಳು ತರಗತಿಗೆ ಬಂದು ಆರೆಂಜ್ ಮಿಠಾಯಿ ಕೈಗೆ ಕೊಟ್ಟಿದ್ದರು. ಇನ್ನು ಕೆಲವು ಮಕ್ಕಳಂತೂ ರಂಪಾಟ ಮಾಡಿ "ಅಮ್ಮಾ" ಎಂದು ಅಳುವಾಗ, ಅವರನ್ನು ನೋಡಿ ನಾನು ಅತ್ತಿದ್ದೆ. ಆ ಶಾಲೆಯಲ್ಲಿರುವ ಎಲ್ಲಾ ಟೀಚರ್‌ಗಳಿಗೂ ನಾನು ಮೊದಲೇ ಪರಿಚಿತಳಾಗಿದ್ದ ಕಾರಣ ಹೆಚ್ಚಿನ ಭಯವೇನು ಇಲ್ಲವಾಗಿತ್ತು. ಅದೂ ಅಲ್ಲದೆ ತರಗತಿಯ ಹೊರಗೆ ಬಂದರೆ ನಮ್ಮ ಮನೆಯ ಗೇಟು, ಮಾವಿನ ಮರ ಎಲ್ಲವೂ ಕಾಣಿಸುತ್ತಿತ್ತು. ಅದನ್ನು ಕಂಡಾಗ ಅದೇನೋ ಒಂಥರಾ ತೃಪ್ತಿ.

ಮೊದನ ದಿನದ ಅನುಭವವಂತೂ ಅಚ್ಚಳಿಯದ ನೆನಪಾಗಿ ಉಳಿದಿದೆ. ನನ್ನನ್ನು ಮೊದಲ ಬೆಂಚಿನಲ್ಲಿ ಕುಳಿತು ಕೊಳ್ಳಲು ಹೇಳಿದಾಗ ಏನೋ ಒಂದು ರೀತಿ ಭಯ. ಮೊದಲ ಬೆಂಚಿನಲ್ಲಿ ಯಾರೂ ಕುಳಿತು ಕೊಳ್ಳಲು ಧೈರ್ಯ ತೋರಿಸದೇ ಇರುವ ಕಾರಣ ಮೊದಲನೇ ಬೆಂಚು ಖಾಲಿಯಾಗಿತ್ತು. ನಾನೊಬ್ಬಳೇ ಮುಂದಿನ ಬೆಂಚಿನಲ್ಲಿ ಕುಳಿತಿದ್ದೆ. ಮುಸು ಮುಸು ಅಳುವ ಮಕ್ಕಳು ಒಂದೆಡೆಯಾದರೆ ತುಂಟ ಬುದ್ದಿ ತೋರಿಸುವ ಮಕ್ಕಳು ಇನ್ನೊಂದೆಡೆ. ಸ್ವಲ್ಪ ಹೊತ್ತು ಕಳೆದ ನಂತರ ಇನ್ನೊಂದು ಹುಡುಗಿಯನ್ನು ಕರೆದು ನನ್ನ ಹತ್ತಿರ ಕುಳಿತು ಕೊಳ್ಳಿಸಿದ ನಂತರವೇ ನನಗೆ ಸಮಾಧಾನವಾದದ್ದು. ಅವಳೇ ನನ್ನ ಮೊದಲ ಗೆಳತಿಯೂ ಆಗಿ ಬಿಟ್ಟಳು. ಬೆಳಗ್ಗೆ ಅಸೆಂಬ್ಲಿ ಮುಗಿಸಿ ಹತ್ತು ಗಂಟೆಗೆ ಶಾಲೆ ಆರಂಭವಾದುದರಿಂದ ಇನ್ನಿತರ ತರಗತಿಯಲ್ಲಿ ಪಾಠ ಮುಂದುವರಿಯುತ್ತಿತ್ತು. ಹನ್ನೊಂದುವರೆ ಗಂಟೆಯ ಮಧ್ಯಾಂತರದಲ್ಲಿ ಒಂದನೇ ಕ್ಲಾಸಿನ ಪುಟಾಣಿಗಳನ್ನು ನೋಡಲು ಮೇಲಿನ ತರಗತಿಯ ಮಕ್ಕಳ ಗುಂಪೇ ಬರುತ್ತಿತ್ತು. ಅವರಲ್ಲಿ ಅಣ್ಣ ಅಕ್ಕಂದಿರು ತಮ್ಮ ತಮ್ಮ ತಂಗಿ, ತಮ್ಮಂದಿರನ್ನು ಗೆಳೆಯರಿಗೆ ಪರಿಚಯ ಮಾಡಿಕೊಡುವುದು, ಮಿಠಾಯಿ ತಂದು ಕೊಡುವುದು ಎಲ್ಲಾ ಮಾಡುತ್ತಿದ್ದರು. ತರಗತಿಯಿಡೀ ಹೊಸ ಬಟ್ಟೆಯ ಬ್ಯಾಗಿನ ಪರಿಮಳದಿಂದ ತುಂಬಿತ್ತು. ಮಕ್ಕಳಿನ್ನು ಸುಮ್ಮನೆ ಹರಟೆ ಮಾಡುವುದು ಬೇಡ ಎಂದು ನಮ್ಮ ಗುರುಗಳು ಎಲ್ಲರಲ್ಲೂ ಹೆಸರನ್ನು ಕೇಳಿದರು. ಹಾಗೆಯೇ ಆಯ್ದ ಕೆಲವು ಮಕ್ಕಳಲ್ಲಿ ನಿಮ್ಮ ಅಪ್ಪನ ಹೆಸರೇನು? ಅಮ್ಮನ ಹೆಸರೇನು? ಅಕ್ಕ, ಅಣ್ಣನ ಹೆಸರು ಹೇಳು ಎಂದು ಕೇಳುತ್ತಿದ್ದರು. ಹಲವಾರು ಭಾಷೆಗಳಿರುವ ನಮ್ಮೂರಿನ ಶಾಲೆಯಲ್ಲಿ ಕೊಂಕಣಿ, ಹವ್ಯಕ, ಮರಾಠಿ, ಮಲಯಾಳಂ, ತುಳು ಭಾಷೆಯನ್ನಾಡುವ ಮಕ್ಕಳು ಇದ್ದರೂ ತರಗತಿಯಲ್ಲಿ ತುಳುವರದ್ದೇ ಮೇಲುಗೈ ಯಾಗಿತ್ತು. ಇಂತಿರುವಾಗ ನಮ್ಮ ಮಾಸ್ತರ್ ನಿನ್ನ ಅಪ್ಪನ ಹೆಸರು ಏನು ಎಂದು ಓರ್ವ ಸಹಪಾಠಿಯೊಡನೆ ಕೇಳಿದಾಗ, ಹೆದರುತ್ತಾ ಎದ್ದು ನಿಂತ ಹುಡುಗ "ಪೊಪ್ಪ" ಎಂದ. ಅಪ್ಪನನ್ನು ಮನೆಯಲ್ಲಿ ಪೊಪ್ಪ ಎಂದು ತುಳುವಿನಲ್ಲಿ ಸಂಭೋಧಿಸುತ್ತಿರುವ ಆ ಹುಡುಗ ತನ್ನ ಅಪ್ಪನ ಹೆಸರು ಪೊಪ್ಪ ಎಂದೇ ತಿಳಿದಿದ್ದ. ಈಗಲೂ ಆ ಹುಡುಗನನ್ನು ಕಂಡಾಗ ಪೊಪ್ಪ ನೆನಪಿಗೆ ಬರುತ್ತಾರೆ.

ತರಗತಿ ಆರಂಭವಾದಾಗ ಗುರುಗಳು ಕರಿಹಲಗೆಯಲ್ಲಿ ಅ ಆ ಇ ಈ ಬರೆದು ನಮ್ಮ ಸ್ಲೇಟಿನಲ್ಲಿಯೂ ಬರೆದು ಕೊಟ್ಟು ಅದರ ಮೇಲೆಯೇ ಬರೆಯುವಂತೆ ಹೇಳುತ್ತಿದ್ದರು. ಅದು ಬರೆದು ಉಜ್ಜಿದಷ್ಟೂ ಹೋಗದಿದ್ದರೆ ನೀರು ಹಾಕಿ ಉಜ್ಜುವುದು ಅಭ್ಯಾಸ. ಇಲ್ಲದಿದ್ದರೆ ಸ್ಲೇಟಿನ ಮೇಲೆ ಅಂಗೈ 'ಕಪ್ಪೆ ಕಪ್ಪೆ ನೀರು ಕೊಡು ಹಾಲು ಕೊಡ್ತೇನೆ 'ಎಂದು ರಾಗ ಎಳೆಯುತ್ತಿದ್ದೆವು. ಅಂಗೈ ಬೆವರು ಸ್ಲೇಟಿನ ಮೇಲೆ ಮೂಡಿದಾಗ ಕಪ್ಪೆಯೇ ನೀರು ಕೊಟ್ಟ ಸಂತಸವಾಗುತ್ತಿದ್ದು. ಅದೂ ಅಲ್ಲದೆ ನೀರ ಕಡ್ಡಿ( ಒಂದು ಜಾತಿಯ ಹುಲ್ಲು)ಯನ್ನು ತೆಗೆದು ಕೊಂಡು ಶಾಲೆಗೆ ಹೋಗುತ್ತಿದ್ದೆವು. ಸ್ಲೇಟಿನ ವಿಷಯ ಹೇಳುವಾಗ ಬಳಪವೂ ಬೇಕಲ್ಲವೇ? ಅದು ಉದ್ದವಾಗಿಯೇ ಇರಬೇಕೆಂದು ಜಾಗರೂಕತೆ ವಹಿಸುತ್ತಿದ್ದದ್ದು, ಸುಂದರವಾದ ಪೆಟ್ಟಿಗೆ ಕೈಗೆ ಸಿಕ್ಕಾಗ ಕಡ್ಡಿಯನ್ನು ತುಂಡುಮಾಡಿ ಅದರೊಳಗೆ ಹಾಕಿದ್ದು, ನಂತರ ಅದು ತುಂಡಾಗಿ ಹೋಯ್ತು ಇನ್ನು ಅದನ್ನು ಉದ್ದಮಾಡಿ ಕೊಡು ಎಂಬುದಾಗಿ ಅಮ್ಮನಲ್ಲಿ ರಚ್ಚೆ ಹಿಡಿದದ್ದು. ಎಲ್ಲವೂ ಶಾಲೆಯ ತುಂಟತನದ ದಿನಗಳ ನೆನಪುಗಳು... ಪ್ರಸ್ತುತ ಶಾಲೆ ಆರಂಭವಾಗಿ ಮಕ್ಕಳು ಶಾಲೆಯತ್ತ ಹೆಜ್ಜೆಯಿಡುತ್ತಿರುವುದನ್ನು ಕಂಡಾಗ ನನ್ನ ಬಾಲ್ಯದ ನೆನಪುಗಳು ಅಕ್ಷರಗಳ ರೂಪವನ್ನು ಪಡೆಯಿತು.

  • ಅನುಭವ ಕಥನ
~.~
  • Login or register to post comments
  • 466 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 2, 2008 - 4:42pm — vinayudupa

ಉ: ಕಪ್ಪೆ ಕಪ್ಪೆ ನೀರು ಕೊಡು...

vinayudupa's picture

ನಮಸ್ಕಾರ,

ಬರಹ ಚೆನ್ನಾಗಿದೆ. ಶಿಶುವಿಹಾರ ಬಿಟ್ಟು ಕನ್ನಡ ಕಾನ್ವೆಂಟ್ ಸೇರಿದ ಮೊದಲ್ನೇ ದಿನ ನಾನೂ ಬಹಳ ಅತ್ತಿದ್ದೆ.

ಮೊದಲ ಎರಡು ಮೂರು ದಿನ ಶಾಲೇಲಿ ಮಾತೆ ಆಡಿರ್ಲಿಲ್ಲ್ವಂತೆ. ಆಗ ನಮ್ ಶಾಲೇಲಿ ಬೆಂಚಿರ್ಲಿಲ್ಲ. ಬೆನ್ಚಸ್ತೆ ಉದ್ದವಾಗಿದ್ದ ಮನೆ ಹಾಕಿದ್ದ್ರು.

ನಮ್ಮೂರ ಶಾಲೆ ನೆನಪುಗಳು ಮರುಕಳಿಸೋಹಾಗೆ ಮಾಡಿದ್ರಿ.

ನಮಗೆ ಸ್ಲೇಟು ಅಳಿಸೋಕೆ ಒದ್ದೆ ಸ್ಪಂಜ್ ಬಳಸೋಕೆ ಹೇಳೋರು. ಆದರೂ ಲಾಲಾರಸ ಪ್ರಯೋಗ ಮಾಡಿ ಬೈಸಿಕೊಳ್ತಾ ಇದ್ವಿ.

ಧನ್ಯವಾದಗಳು.

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 6:14pm — rashmi_pai

ಉ: ಕಪ್ಪೆ ಕಪ್ಪೆ ನೀರು ಕೊಡು...

rashmi_pai's picture

ನಿಮ್ಮ ಪ್ರಕಿಕ್ರಿಯೆಗೆ ಧನ್ಯವಾದಗಳು...ಇನ್ನು ಮುಂದೆಯೂ ನಿಮ್ಮ ಸಹಕಾರ ಪ್ರೋತ್ಸಾಹ ಬಯಸುತ್ತೇನೆ.

ಇತೀ,

ರಶ್ಮಿ.ಪೈ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 12:50pm — Aravind M.S

ಉ: ಕಪ್ಪೆ ಕಪ್ಪೆ ನೀರು ಕೊಡು...

Aravind M.S's picture

ಪ್ರೀತಿಯ ರಶ್ಮಿಯವರೇ,

ಬರಹ ಮಧುರವಾಗಿದೆ. ನನಗೂ ಮೊದಲ ಶಾಲೆಯ ಕಹಿ ಅನುಭವವೇ ಆಗಿದ್ದರೂ, ಈಗ ನೆನೆಸಿಕೊಂಡು ಆನಂದಿಸುವಂತೆಯೇ ಇದೆ. ನಾನು ಓದಿದ್ದು ಉಡುಪಿಯ ಇಂಗ್ಲಿಷ್ ಶಾಲೆಯೇ. ಆದರೆ ಮನೆಯಿಂದ ಇಪ್ಪತ್ತು ಕಿ.ಮೀ ಪ್ರಯಾಣ (ನಮ್ಮ ಊರು ಹಂಗಾರಕಟ್ಟೆಯಿಂದ), ದಿನಾ ಕಷ್ಟವಾಗುತ್ತಿತ್ತು

ನನ್ನ ಮೊದಲ ದಿನದ ಅನುಭವ - ಜೂನ್ ತಿಂಗಳ ಆ ಮಳೆಯ ನಿಗೂಢ, ಒದ್ದೆ ದಿನದ ಛತ್ರಿಯೊಂದಿಗೆ ಬಂದು ಕೂತು ಪಕ್ಕದ ಯೋಗೀಶನೊಂದಿಗೆ ಪೆಟ್ಟೇ ಪೆಟ್ಟು. ಆಮೇಲೆ ದೋಸ್ತಿಯಾದದ್ದು ಇದ್ದಿದ್ದೇ. ಆ ಕೆಂಪು ಮಣ್ಣಿನ ಮಳೆಗಾಲದ ಪರಿಮಳ ನೆನೆಸಿಕೊಂಡರೆ ಈಗಲೂ ಮೈ ಜುಮ್ಮೆನ್ನುತ್ತದೆ.

ಈಗ ಮಧುರವೆನಿಸುವ ಆ ದಿನಗಳು ಕಷ್ಟವಾಗಿಯೇ ಇದ್ದವು. ಅದೂ ಮಳೆಗಾಲದಲ್ಲಿ. ಆ ಕಾಲದ ಬಣ್ಣ ಬಣ್ಣದ ಪಾರದರ್ಶಕ (ಛತ್ರಿಗಳ) ಹಿಡಿಗಳು, ಹಾಗೂ ಸ್ವಲ್ಪ ಶ್ರೀಮಂತ ಮಕ್ಕಳು ತರುತ್ತಿದ್ದ ಬಣ್ಣದ ಬಟ್ಟೆಯ ಛತ್ರಿಗಳೊಂದೇ ಸ್ವಲ್ಪ ಸಮಾಧಾನ, ಸುಖ ಕೊಡುತ್ತಿದ್ದಂತಿತ್ತು. ಒಂದು ಛತ್ರಿ ಕಳೆದು ಹೋದಾಗ ಬಹಳ ದುಃಖವಾಗಿತ್ತು - ಅದರ ಹಿಡಿಯ ಮೇಲೆ "ಪೊಂಪೈ" ಎಂಬ ಬಣ್ಣದ ಪದವು (ಪಾರದರ್ಶಕ ಹೊದಿಕೆಯ ಒಳಗೆ!) ಇದ್ದುದಾದರಿಂದ. ಈಗಲೂ ಅಂತಹ ಹಿಡಿಗೆ ಹುಡುಕುತ್ತಿದ್ದೇನೆ.

ನಿಮ್ಮ ಬರಹಗಳು ಮುಂದುವರೆಯಲಿ ಎಂದು ಹಾರೈಸುತ್ತಾ,

ನಿಮ್ಮ

ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 2:03pm — rashmi_pai

ಉ: ಕಪ್ಪೆ ಕಪ್ಪೆ ನೀರು ಕೊಡು...

rashmi_pai's picture

ಒಲವಿನ ಅರವಿಂದ್ ,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನನಗಂತೂ ಛತ್ರಿ ಹಿಡಿದು ನಡೆಯುವ ಭಾಗ್ಯ ದೊರಕಿದ್ದೇ ನಾಲ್ಕನೇ ಕ್ಲಾಸು ಕಳೆದಾಗ. ಅಲ್ಲಿಯವರೆಗೆ ಗುಮ್ಮನಂತೆ ರೈನ್‍ಕೋಟ್ ಹಾಕಿ ನಡೆಯುತ್ತಿದ್ದೆ. ನೀವು ಹೇಳಿದಂತೆ ಛತ್ರಿಯ ಹಿಡಿಯನ್ನು ನಾನು ಕೂಡಾ ಕಲ್ಲಿನಲ್ಲಿ ಗುದ್ದಿ ನೋಡಿದ್ದೆ. ಹೀಗೆಯೇ ನಿಮ್ಮ ಪ್ರೋತ್ಸಾಹ ಎಂದೆಂದೂ ಇರಲಿ ಎಂದು ಬಯಸುತ್ತೇನೆ.

ಇತೀ,

ರಶ್ಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 3:31pm — Aravind M.S

ಉ: ಕಪ್ಪೆ ಕಪ್ಪೆ ನೀರು ಕೊಡು...

Aravind M.S's picture

ಪ್ರೀತಿಯ ರಶ್ಮಿಯವರೆ,

ಕಾಕತಾಳೀಯವೆಂದರೆ, ನಾನೂ ೨-೩ ನೇ ಕ್ಲಾಸ್ ನಿಂದಲೇ ಛತ್ರಿ ಹಿಡಿದದ್ದು. ಅಲ್ಲಿಯವರೆಗೆ ಭಾರವಾದ ಡಕ್ ಬ್ಯಾಕ್ ರೈನ್ ಕೋಟ್ ಹಾಕಿ ನಡೆಯುವುದೇ ಆಗಿತ್ತು. ಬಾಳಿಕೆ ಹೆಚ್ಚು, ಆದರೆ ಪಿ.ವಿ.ಸಿ. ರೈನ್ ಕೋಟ್ ನಷ್ಟು ಹಗುರವಲ್ಲ !! ಜೊತೆಗೆ ಮಳೆಯ ದೊರಬರ ದೊರಬರ ಶಬ್ದ ಬೇರೆ.

ಇಂತಿ ನಿಮ್ಮ,

ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 3:59pm — vinayudupa

ಉ: ಕಪ್ಪೆ ಕಪ್ಪೆ ನೀರು ಕೊಡು...

vinayudupa's picture

ಅರವಿಂದ,

ಪರ್ವಾಗಿಲ್ಲ ನೀವು ಬಹಳ ಬೇಗನೆ "ಛತ್ರಿ"ಪತಿಗಳಾದ್ರಿ . ನಮಗೆ ಆ ಭಾಗ್ಯ ಬಂದಿದ್ದು ಪ್ರೌಢ ಶಾಲೆ ಮೆಟ್ಟಿಲು ಹತ್ತಿದ್ಮೆಲೇ.

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 4:00pm — mananthprabhu

ಉ: ಕಪ್ಪೆ ಕಪ್ಪೆ ನೀರು ಕೊಡು...

mananthprabhu's picture

ರಶ್ಮಿಯವರೆ..
ಬರಹ ಚೆನ್ನಾಗಿದೆ.

Quote:
ಅದೂ ಅಲ್ಲದೆ ನೀರ ಕಡ್ಡಿ( ಒಂದು ಜಾತಿಯ ಹುಲ್ಲು)ಯನ್ನು ತೆಗೆದು ಕೊಂಡು ಶಾಲೆಗೆ ಹೋಗುತ್ತಿದ್ದೆವು.

ಮೇಲಿನ ಸಾಲು ನೋಡಿ ಚಿಕ್ಕ೦ದಿನ ನೆನಪುಗಳು ಮರುಕಳಿಸಿದವು..

ಅನ೦ತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 5:19pm — Aravind M.S

ಉ: ಕಪ್ಪೆ ಕಪ್ಪೆ ನೀರು ಕೊಡು...

Aravind M.S's picture

ವಿನಯ್ ರವರು ಛತ್ರಿಪತಿಗಳಾಗುವ ಮುನ್ನ ಏನು ಹಿಡಿದು ನಡೆಯುತ್ತಿದ್ದರೋ. ನಾನು ಕೇಳಬಯಸುವುದು ಆ ಅಡಿಕೆ ಸೋಗೆಯ ಛತ್ರಿಯೇನಾದರೂ ಇದ್ದೀತೆ, ನಮ್ಮ ಊರಲ್ಲಿ ಕೆಲವು ನೋಡಿದ್ದೆವು ಆ ದಿನಗಳಲ್ಲಿ

- ಅರವಿಂದ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 3:52pm — girish.rajanal

ಉ: ಕಪ್ಪೆ ಕಪ್ಪೆ ನೀರು ಕೊಡು...

girish.rajanal's picture

ರಶ್ಮಿಅವರೆ,
ನಾವು ನೀರು ಹಾಕಿ ಕಲ್ಲಿನ ಪಾಠಿಯನ್ನು ಒರೆಸುವಾಗ, ಬೇಗ ಒಣಗಲೆಂದು ಗುಬ್ಬಿ ಗುಬ್ಬಿ ನೀರು ಕುಡಿ ಅಂತ ಹೇಳುತ್ತಿದ್ದೆವು.
ಮತ್ತೆ ಅದರಲ್ಲೂ ಪಂದ್ಯ... ಯಾರ ಪಾಠಿ ಮೊದಲು ಆರುತ್ತೆ ಅಂತ... ಅಂತೂ ನಿಮ್ಮ ಲೇಖನ ಬಾಲ್ಯದ ದಿನಗಳನ್ನು ಮರುಕಳಿಸಿದ್ದು ಬಹಳ ಖುಷಿ ತಂತು.

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 8, 2008 - 3:36am — lgnandan

ಉ: ಕಪ್ಪೆ ಕಪ್ಪೆ ನೀರು ಕೊಡು...

lgnandan's picture

ವಾಹ್... ನಿಮ್ಮ ಕಥೆ ಕೇಳಿ ಖುಷಿಯಯಿತು ಕಂಡ್ರಿ... ಗಡಿನಾಡ ಕನ್ನಡತಿಗೆ ನನ್ನ ನಮಸ್ಕಾರಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 3:37pm — kpbolumbu

ಉ: ಕಪ್ಪೆ ಕಪ್ಪೆ ನೀರು ಕೊಡು...

kpbolumbu's picture

ಕಲ್ಲಕಟ್ಟ ಶಾಲೆಯ ಬಗ್ಗೆ ಹೇಳುತ್ತಿದ್ದೀರಾ?
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 5:33pm — rashmi_pai

ಉ: ಕಪ್ಪೆ ಕಪ್ಪೆ ನೀರು ಕೊಡು...

rashmi_pai's picture

ಹೌದು.. ನೀವು ಕಾಸರಗೋಡಿನವರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 5:55pm — kpbolumbu

ಉ: ಕಪ್ಪೆ ಕಪ್ಪೆ ನೀರು ಕೊಡು...

kpbolumbu's picture

ಹೌದು, ಈಗ ಕಾಸರಗೋಡಿನಲ್ಲೇ ಇದ್ದೇನೆ. ನಾನು ನೀರ್ಚಾಲು ಶಾಲೆಯಲ್ಲಿ ಕಲಿತವನು. ನಿಮ್ಮ ಬರಹ ಓದಿದಾಗ ಬಾಲ್ಯದ ನೆನಪಾಯಿತು. ಆ ಕಡ್ಡಿಯೂ ನೀರ ಕಡ್ಡಿಯೂ ನೆನಪಾದವು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೆನಪುಗಳ ಸುರುಳಿ ಬಿಚ್ಚಿ . . .
  • ತಾರೆ ಜಮೀನ್ ಪರ್........
  • ಮಕ್ಕಳ ರಾತ್ರಿ ಶಿಬಿರ
  • ಪಶ್ಚಾತ್ತಾಪ
  • ಅವರು ಸ್ವರ್ಗದ ಮಕ್ಕಳೇ!
Syndicate content

ಲೇಖಕರು

rashmi_pai's picture

ಪೂರ್ಣ ಹೆಸರು
Rashmi Pai

ಪರಿಚಯ

ನನ್ನ ಊರು ಗಡಿನಾಡಾದ ಕಾಸರಗೋಡು. ಪ್ರಸ್ತುತ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದೇನೆ. ಸಾಹಿತ್ಯ, ಕಲೆಗಳಲ್ಲಿ ಆಸಕ್ತಿ ಹೊಂದಿರುವುದರೊಂದಿಗೆ ಕತೆ, ಕವಿತೆ, ಭಾಷಣ ಮೊದಲಾದವುಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ. ನನ್ನ ನೆಚ್ಚಿನ ಗೆಳೆಯನಾದ ಪ್ರಕೃತಿಯೊಂದಿಗೆ ಒಡನಾಟ ನಡೆಸುವುದು ಹಾಗೂ ಸ್ವಪ್ನಲೋಕದಲ್ಲಿ ವಿಹರಿಸುವುದೆಂದರೆ ನನಗಿಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
  • ಕೊಲಂಬಿಯ ಪಟ್ಟಣದ ಸಂತೆ !
  • ವಾರಾಂತ್ಯ ಹೇಗಿತ್ತು?
  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ

ಇತ್ತೀಚಿನ ಪ್ರತಿಕ್ರಿಯೆಗಳು

  • sudhimail
    ಉ: ಏನಿದೇನಿದು?
    September 8, 2008 - 10:12pm
  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 139 ಅತಿಥಿಗಳು ಆನ್ಲೈನ್ ಇರುವರು.


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator