ಕಾರಂತರ ಜೀವಂತ ಪಾತ್ರಗಳು ೭ (೧)
ಅಪಾರ ವಿಸ್ತಾರವಾದ , ಆಕಾಶವೆಂಬ ಅವಕಾಶದಲ್ಲಿ ಸಚರಾಚರಗಳನ್ನು ಸೃಷ್ಟಿಸಿಕೊಂಡ ಶಕ್ತಿ ಯಾವುದೋ ? ಅದೆಂತಹ ಶಕ್ತಿ ಎಂಬುದನ್ನು ಬಲ್ಲವರು ಯಾರೂ ಇಲ್ಲ . ಅದರ ಬಗೆಗೆಗಿನ ತಿಳುವಳಿಕೆಗಾಗಿ ಇದುವರೆಗೆ ನಡೆದಿರುವ ತತ್ವ ಜಿಜ್ಞಾಸೆಗಳು ಯಾವುವೂ ದಡ ಮುಟ್ಟಿಸಿಲ್ಲ ; ಬಹುಶಃ ಮುಟ್ಟಿಸುವುದೂ ಇಲ್ಲ .ಕೊನೆಗೆ ಆ ಬಗೆಯ ಶಕ್ತಿಯನ್ನು , ತರ್ಕಾತೀತವೆಂದು ಪ್ರಾಜ್ಞರು ಕೈ ತೊಳೆದುಕೊಂಡಿದ್ದಾರೆ . ಇಂತಹ ಅದರ ರಚನೆಗಳಲ್ಲಿ , ಅತ್ಯಂತ ಕುತೂಹಲಭರಿತ ಮಾತ್ರವಲ್ಲ , ಸುಂದರ ಸಜೀವ ಗ್ರಹವೆಂಬ ಹೆಗ್ಗಳಿಕೆ ಈ ಭೂಮಿಯದು . ಭೂಮಿಯಂತಹ ಇನ್ನೊಂದು ಗ್ರಹ ಇರುವ ಬಗ್ಗೆ ಕೂಡಾ ಸರಿಯಾದ ಮಾಹಿತಿ ಇದುವರೆಗೆ ಗೊತ್ತಿಲ್ಲ .
ಈ ಜೀವ ಇಲ್ಲಿ ಮೊಳೆತುದು ಆಕಸ್ಮಿಕವೋ ? ಪೂರ್ವ ಯೋಜಿತವೋ ? ಅಥವಾ ಎರಡೂ ಅಲ್ಲವೋ ? ಪೂರ್ವ ಯೋಜಿತವೇ ಆಗಿದ್ದಲ್ಲಿ ಯಾರು ಅದರ ಪ್ರೇರಕರು ? ಇದೂ ಕೂಡಾ ಯಾರಿಗೂ ಗೊತ್ತಿಲ್ಲ ! ಈ ಗೊತ್ತಿಲ್ಲಗಳ ಸಂತೆಯಲ್ಲಿಯೇ ಇಲ್ಲಿ ನೆಲೆಯೂರಿದ ಜೀವ ಪಡೆದುಕೊಂಡ ವೈವಿಧ್ಯಕ್ಕೆ ಕೊನೆ ಎಂಬುದಿದೆಯೇ ? ಸಸ್ಯ ಪ್ರಾಣಿಗಳೆಂಬ ಮುಖ್ಯ ವಿಭಾಗಗಳಿಂದ ಹೊರ ಹೊಮ್ಮಿರುವ ಅಪಾರ ಪ್ರಭೇದಗಳು . ಈ ಅಪರಿಮಿತ ಜೀವ ಜಾಲದ ನಡುವೆ ಮನುಷ್ಯ ಜೀವಿ ಯಾವಾಗಲೋ ಪದಾರ್ಪಣೆ ಮಾಡಿ ಆಗಿತ್ತು .
ಈ ಭುವಿಯ ಅನೇಕ ಶಕ್ತಿಶಾಲಿ ಜೀವಿಗಳ ಮಧ್ಯೆ ಅತ್ಯಂತ ದುರ್ಬಲ ಜೀವಿಯಾಗಿ ಮೈದಳೆದ ಮನುಷ್ಯ , ಅವುಗಳ ನಡುವೆ ಅನೇಕ ಲಕ್ಷ ವರ್ಷಗಳ ಸೆಣಸಿನಲ್ಲಿ ಉಳಿದುದೆಂಬುದೇ ಆಶ್ಚರ್ಯಗಳಲ್ಲಿ ಆಶ್ಚರ್ಯ ! ಆಗೆಲ್ಲಾ ಅವನನ್ನು ಕಾಪಾಡಿದ್ದು , ಜೀವ ಜಗತ್ತಿನಲ್ಲಿ ಅವನದೇ ವಿಶಿಷ್ಟ ಅಸ್ತ್ರವಾದ ಬುದ್ದಿ ಶಕ್ತಿ ಎನ್ನುತ್ತಾರೆ ಜೀವ ವಿಜ್ಞಾನಿಗಳು .
ನಲವತ್ತು ಲಕ್ಷ ವರ್ಷಗಳ ಪ್ರಾಣಿ ಜೀವನದಲ್ಲಿ ಅವುಗಳೊಡನೆ ಸೆಣಸಿ ಉಳಿದು , ಪ್ರಕೃತಿಯ ಸುದೀರ್ಘ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ,ನಾಗರಿಕತೆಯ ಹತ್ತಿರಕ್ಕೆ ಬಂದುದು , ( ಅದೂ ನಾಗರಿಕತೆಯ , ಉಷೆಯಲ್ಲದ ಇನ್ನೂ ಬೆಳ್ಳಿ ಮೂಡುವ ಕಾಲವೆನ್ನಬಹುದೇನೋ ?) ಆ ಕಾಲ ಹದಿನೈದು ಸಾವಿರ ವರ್ಷಗಳಿಗೂ ಹಿಂದಿನದಿರಬಹುದೆನ್ನುತ್ತಾರೆ .
ಇತ್ತ ನಾಗರಿಕ ಜೀವನಕ್ಕೆ ತೇರ್ಗಡೆಯೂ ಅಲ್ಲ ; ಅತ್ತ ಪ್ರಾಣಿ ಜೀವನದಿಂದ ಬಿಡುಗಡೆಯೂ ಅಲ್ಲ ಎನ್ನುವ ಆ ಸಂಧಿ ಕಾಲದಲ್ಲಿ ಕೆಲವಾದರೂ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಪ್ರಮೇಯಗಳು ಈ ವಿಚಿತ್ರ ಜೀವಿಗೆ ಪ್ರಾಪ್ತಿಸಿರಬಹುದು . ಕೆಲವಾದರೂ ; ತೆಳುವಾದರೂ , ಅನಿವಾರ್ಯವಾದ , ’ಇದನ್ನು ಮಾಡು, ಇದನ್ನು ಬಿಡು’ ಎನ್ನುವ ವಿಧಿ ನಿಷೇಧಗಳೆನ್ನಬಹುದಾದ ಅಂಕಿತಕ್ಕೆ ತನ್ನ ಉಳಿವಿಗಾಗಿ ಮನುಷ್ಯ ಕುಲ ಒಳಪಟ್ಟಿರಬಹುದು . ಆಗಿನ್ನೂ ಯಾವ ಧರ್ಮ ಶಾಸ್ತ್ರಕಾರನೂ ಕಣ್ಣು ತೆರೆದಿರಲಿಲ್ಲವಲ್ಲ . ಮನುಷ್ಯ ಕುಲವನ್ನು ಜಾತಿ,ಮತ , ಪಂಥ , ಸಿದ್ದಾಂತಗಳ ಆಧಾರದಲ್ಲಿ ವಿಂಗಡಿಸಲು ಕಾರಣ ಕರ್ತರಾದ ಮಾನವ ಜನಾಂಗದ ಮಾರ್ಗದರ್ಶಕ ಕಂದಮ್ಮಗಳು , ಇನ್ನೂ ಅವರವರ ತಾಯಂದಿರ ಉಡೀಗಳಲ್ಲಿ ಆಡುವ ಕಾಲ ಕೂಡಾ ಮುಂದೆಲ್ಲೋ ಬಲು ದೂರದ , ಕಾಲ ಗರ್ಭದ , ಮಹಾನ್ ಅಂಧಕಾರದಲ್ಲಿನ ಅನಂತ ಭವಿಷ್ಯತ್ತಿನಲ್ಲಿ ಅಡಗಿ ಹೋಗಿತ್ತು .
ಮತ್ತೆನಕ್ಕಲ್ಲದಿದ್ದರೂ ಮನುಷ್ಯರ ನಡುವೆ ವೈಮನಸ್ಯಕ್ಕೆ ಆರಂಭಿಕ ಕಾರಣಗಳಾಗಬಹುದಾಗಿದ್ದ , ಗಂಡು ಹೆಣ್ಣುಗಳ ನಡುವಣ ಸಂಬಂಧದ ಸೀಮಾವಲಯದ ಗಡಿಯ ನಿರ್ಧಾರದ ಅಗತ್ಯಗಳಿದ್ದವು .ಮಣ್ಣು ಎಂದು ಕರೆಯಲಾಗದಿದ್ದರೂ ಇರುವಿಕೆಗೆ ಅಗತ್ಯವಾದ ನೆಲದ ಹಂಚಿಕೆಯ ವಿಷಯದಲ್ಲಿ ಮೊದಲ ಕಟ್ಟುಪಾಡುಗಳು ಮಸುಕಾಗಿ ಆರಂಭವಾಗತೊಡಗಿರಬಹುದು . ಗಂಡು ಗಂಡನ ರೂಪಕ್ಕೆ ; ಹೆಣ್ಣು ಹೆಂಡತಿ ರೂಪಕ್ಕೆ ಬರಲು ಇನ್ನೂ ಹತ್ತಾರು ಸಾವಿರ ವರ್ಷಗಳ ಕಾಲ ಪರಿಪಕ್ವತೆಯ ಸನ್ನಿವೇಶವೇ ಇದ್ದರೂ , ಆರಂಭಿಕ ಯುಕ್ತಾಯುಕ್ತತೆಯ ರೂಪ ರೇಷೆಗಳು ಮಸುಕು ಮಸುಕಾಗಿ ಮೂಡತೊಡಗಿರಬಹುದು . ಕನಿಷ್ಟ ಬುಡಕಟ್ಟಿನೊಳಗಣ ಸಂಬಂಧಗಳ ಕಟ್ಟುಪಾಡುಗಳು ಮೊಳೆಯತೊಡಗಿರಬಹುದು ; ಇಲ್ಲಿಯೂ ಸಹ ಕಾಡಿನ ನ್ಯಾಯ ಇದ್ದೇ ಇದ್ದಿರಬಹುದು .
ಇಂತಹ ವಿಷಯಗಳನ್ನು ತೆಗೆದುಕೊಂಡೇ ’ ಮೂಕಜ್ಜಿಯ ಕನಸು’ ಗಳಲ್ಲಿನ ಆದಿ ಮಾನವನ ಜೀವನವನ್ನು ಕಟ್ಟಿ ಕೊಡಲು ಕಾರಂತರು ಪ್ರಯತ್ನಿಸುತ್ತಾರೆ . ಅಲ್ಲಿ ಬರುವ ಗುಹಾ ವಾಸಿ ಮಾನವನ ಜೀವನ ಚಿತ್ರಣವೆಂಬುದು ಇಂತಹದೇ ಪರಿಕಲ್ಪನೆ . ಕಾದಂಬರಿಯಲ್ಲಿ ಬರುವ ವಿಭಿನ್ನ ಧರ್ಮಗಳ ಕಾಲಘಟ್ಟಗಳನ್ನು ಸೂಚಿಸುವುದೂ ಸಹ , ಮನುಷ್ಯ ನಡೆದು ಬಂದ ದಾರಿಯ ಹುಡುಕಾಟದ ಒಂದು ಭಾಗ . ಮನುಷ್ಯನ ಜೈವಿಕ ವಲಯದಲ್ಲಿ ಸಂಕೀರ್ಣವಾಗಿ ಮೇಳೈಸಿ , ಅವನ ಜೀವನ ವಿಧಾನದಲ್ಲಿ ಆಕ್ರಮಕ ರೂಪದಲ್ಲಿ ವ್ಯಾಪಿಸಿರುವ , ಲೈಂಗಿಕ ವ್ಯಾಪಾರಗಳ ನಿರೂಪಣೆಯೇ ಕಾದಂಬರಿಯ ಕೇಂದ್ರ ತಿರುಳು . ಇನ್ನು ಜನರ ಜೀವನ ಕ್ರಮದಲ್ಲಿ ಅಪಾರ ಪ್ರಭಾವ ಬೀರಿರುವ ನಂಬಿಕೆಗಳಲ್ಲಿ , ಧರ್ಮದ ಪಾತ್ರ ಪ್ರಾಧಾನವಾದುದು . ಈ ಧರ್ಮವೆಂಬುದೂ ಸಹ ಕಾಲದಿಂದ ಕಾಲಕ್ಕೆ ಬದಲಾವಣೆ ಹೊಂದುವ ; ಪ್ರಭುತ್ವ ಶಕ್ತಿಯ ಸಂಪರ್ಕದಿಂದ ಪಡೆದುಕೊಳ್ಳುವ ಪ್ರಬಲ ಆಯಾಮಗಳ ಚಿತ್ರಣ ಸಹ ’ಮೂಕಜ್ಜಿಯ ಕನಸುಗಳಲ್ಲಿ’ ಬಿಂಬಿತವಾಗುವ ಮುಖ್ಯ ವಿಷಯ .
ಧರ್ಮದ ಬಗೆಗಿನ ಸಂವಾದ , ಕಾರಂತರ ಕಾದಂಬರಿಗಳಲ್ಲಿ ಎಡೆಬಿಡದೆ ವ್ಯಾಪಕವಾಗಿರುವ ಒಂದು ಸೂತ್ರ .ಧರ್ಮದ ಕುರುಡು ನಂಬಿಕೆಗಳ ಮೊತ್ತವನ್ನು ಚುಚ್ಚಿ ಒಡೆದು ಹಾಕುತ್ತಲೇ ಅದರ ನೆಲೆಗಟ್ಟನ್ನು ಅನ್ವೇಷಿಸತೊಡಗುವುದು ; ಮನುಷ್ಯನ ಜೀವನದಲ್ಲಿ ಓತಪ್ರೋತವಾಗಿ ಹಬ್ಬಿರುವ , ಅವನ ಮನೋಮಯ ಕ್ಷೇತ್ರದಲ್ಲಿ ಒಂದು ನವಿರಾದ ತೆರೆಯಂತೆ ವ್ಯಾಪಿಸಿರುವ , ಅಲ್ಲಿಂದಲೇ ಕ್ಷೀಣವಾದ ಆದರೂ ಪ್ರಬಲವಾದ ತರಂಗಗಳನ್ನು ಪ್ರಸರಿಸುತ್ತಲೇ , ಅವನ ಜೀವನವನ್ನು ಪ್ರಭಾವಿಸುತ್ತಿರುವ ವಿಚಿತ್ರ ಶಕ್ತಿಯಾದ ಈ ಧಾರ್ಮಿಕ ಪ್ರಭಾವಲಯವನ್ನು ವಿಶ್ಲೇಷಿಸುವುದು ಅವರ ಸಾಹಿತ್ಯದಲ್ಲಿ ಇಷ್ಟವಾದ ನಡೆ . ಅದೂ ಸಹ ತಮ್ಮ ಅರಿವಿಗೆ ಬರುವಷ್ಟನ್ನೇ ಬಳಸಿ , ಉಳಿದುದು ತಿಳಿದಿಲ್ಲವೆನ್ನುವ ಪ್ರಾಮಾಣಿಕ ನೆಲೆಗಟ್ಟಿನ ಮೇಲೆ ಕಟ್ಟಿರುವ ತಾತ್ವಿಕ ದರ್ಶನ .

- Login or register to post comments
- 203 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS: