ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಮನ ತುಂಬಿದ ಕವಿ

June 17, 2008 - 10:45pm — shylaswamy

ಮನ ತುಂಬಿದ ಕವಿ
“ಎದೆ ತುಂಬಿ ಹಾಡಿದೆನು ಅಂದು ನಾನು” ಎಂದು ಹಾಡಿದರು ಜಿ.ಎಸ್. ಶಿವರುದ್ರಪ್ಪನವರು.
“I write when I cannot help writing” ಎಂದರು ಕವಿ ರವೀಂದ್ರ ನಾಥ ಟಾಗೂರರು
“ಎನ್ನಪಾಡೆನಗಿರಲಿ ಅದರ ಹಾಡನಷ್ಟೇ ಹಾಡುವೆನು ರಸಿಕ ನಿನಗೆ,
ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಅದರ ಸವಿಯನಷ್ಟೇ ಹಣಿಸು ನನಗೆ”
ಹೀಗೆಂದವರು ಕನ್ನಡದ ವರಕವಿ ದ.ರಾ.ಬೇಂದ್ರೆಯವರು.
ಸಾಹಿತ್ಯ ಲೋಕದಲ್ಲಿ ಅರಳಿದ ಕುಸುಮಗಳೆಂದರೆ ಈ ಸಾಹಿತಿಗಳು. ಸಂವೇದನಾಶೀಲ ವ್ಯಕ್ತಿಗಳು. ತಮ್ಮ ನೋವು ನಲಿವುಗಳನ್ನೆಲ್ಲಾ ಹಾಡಾಗಿ ಹೊರ ಹೊಮ್ಮಿಸಿ ಹಗುರಾಗುತ್ತಿದ್ದರೇನೋ ಮನದೊಳಗೆ. ಹಾಗೆಯೇ ದ.ರಾ.ಬೇಂದ್ರೆಯವರ ಅನೇಕ ಕವನಗಳು ಅಂತಃಕರಣ ಕುದ್ದು ಕುದ್ದು ಹೊರಬಿದ್ದ ಕವನಗಳಾಗಿರಬೇಕು. ಅವರು ತಮ್ಮ ಬದುಕಿನಲ್ಲಿ ಪಟ್ಟ ಪಾಡೇ ಹಾಡಾಗಿ ಹೊರಬಂದು ಓದುಗರ ಮನ ಮುಟ್ಟಿದೆ. ಹೀಗೆ ಅವರ ನೋವಿನ ಹಾಡುಗಳನ್ನು ಓದಿದಾಗ ಕಣ್ಣೀರು ಮಿಡಿದು ಅವರ ಹಾಸ್ಯ ಮಾತುಗಳ ಬಗ್ಗೆ ಕೇಳಿದಾಗ ಉಲ್ಲಾಸಗೊಂಡು ನಾನು ನಕ್ಕು ಸಂತೋಷ ಅನುಭವಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ನನಗೆ.
ಬೇಂದ್ರೆ ಬಡತನದಲ್ಲಿ ಬೆಂದವರು. ಸಾವು ನೋವುಗಳ ಬೆಂಕಿಯಲ್ಲಿ ಬೆಂದವರು. ಎದೆಯುದ್ದದ ಮಗನನ್ನು ಕಳೆದುಕೊಂಡಾಗ,
“ಸತ್ತ ದಶರಥಗಾಗಿ ಅತ್ತನಾರಾಮನಾಕ್ಷಣ
ಇದ್ದ ದಶರಥ ಅತ್ತೆ ಅಳುವನು ಹೋದ ರಾಮನಿಗಾಗಿ ಕ್ಷಣಕ್ಷಣ.”
ಹುಟ್ಟಿದ ಗಂಡುಮಗುವು ಹುಟ್ಟುವಾಗಲೇ ಸಾವನ್ನಪ್ಪಿತು. ದ.ರಾ.ಬೇಂದ್ರೆಯವರನ್ನು ಅವರ ಹೆಂಡತಿ ಕರುಳು ಇರಿಯುವಂತೆ ನೋಡಿದಾಗ ಹೊರಬಿದ್ದ ಹಾಡು,
“ನೀಹೀಂಗೆ ನೋಡಬೇಡ ನನ್ನ!
ನೀ ಹೀಂಗೆ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗೆ ನೋಡಲೇ ನಿನ್ನ.
ಮಲಗಿರುವ ಕೂಸು ಮಲಗಿರಲಿ ಅತ್ತ
ಮುಂದಿನದು ದೇವರ ಚಿತ್ತ
ಹೀಗೆ ಭಾವನೆಗಳನ್ನು ಹೊರಹೊಮ್ಮಿಸುವ ಕವಿಯನ್ನು ದೇಶದ ಸ್ವಾತಂತ್ರ್ಯ ಹೋರಾಟದ ಬಿಸಿಯೂ ತಾಕಿತು. ಬರೆದರು ’ನರಬಲಿ’ ಎಂಬ ದೇಶಭಕ್ಥಿ ಗೀತೆ.
“ಯಾರು ನಮ್ಮ ಅರಿತರೇನು? ಯಾರು ನಮ್ಮ ಮರೆತರೇನು?
ತವರೂರು ತಮ್ ತಮಗೆ ತಾನೆ ಚಂದ
ಕಟ್ಟಿಕೊಡುವುದಲ್ಲ, ಬಿಚ್ಚಿ ಬಿಡುವುದಲ್ಲ
ಹೊಕ್ಕಳಿನ ಹುರಿಯಂಥ ಭಾವ ಬಂಧ.”
ಈ ದೇಶಭಕ್ತಿ ಗೀತೆ ಇವರನ್ನು ಸೆರೆವಾಸಕ್ಕೆ ನೂಕಿತಲ್ಲದೇ ಸೆರೆಯಿಂದ ಹೊರಬಂದ ನಂತರ ನಿರುದ್ಯೋಗದ ಸಮಸ್ಯೆಯನ್ನೂ ಎದುರಿಸುವಂತಾಯಿತು.
“ನರಬಲಿ ಕವನವು ಬಲಮಾಡಿತೆನ್ನನು,
ಹೆಳವನಿದ್ದಲ್ಲಿಗೆ ಹೊಳೆ ಬಂದಿತು,
ಮನೆಯನ್ನು ಮುರಿಯಿತು”
ಎಂದು ಹಾಡಿಕೊಂಡರು. ನೋವಿನನುಭವ ಸಾಕು. ಇನ್ನು ಕೆಲವು ನಲಿವಿನನುಭವಗಳ ಕಡೆ ಗಮನ ಹರಿಸೋಣ.
ದ.ರಾ.ಬೇಂದ್ರೆಯವರ ಬುದ್ಧಿ ಬಹಳ ಚುರುಕು. ಮಾತು ಬಹಳ ಪ್ರಿಯ. ಸ್ನೇಹ ಪ್ರೀತಿಗಳಿಗ ಬಹಳ ಬೆಲೆ ಕೊಡುತ್ತಿದ್ದರು. ಎನ್.ಕೆ. ಎಂದೇ ಪ್ರಸಿದ್ದರಾಗಿರುವ ಸಾಹಿತಿ ನಾರಾಯಣ್ ರವರು ಇವರ ಆಪ್ತ ಗೆಳೆಯರು. ಇಬ್ಬರೂ ಮಾತನಾಡುವಾಗ ಪದಗಳನ್ನು ಚಮತ್ಕಾರದಿಂದ ಬಳಸುತ್ತಿದ್ದರು. ಒಮ್ಮೆ ದ.ರಾ.ಬೇಂದ್ರೆಯವರು ಎನ್ಕೆಯವರ ಮನೆಗೆ ಹೋದಾಗ ಹೊಸಲು ತುಳಿಯುವಾಗಲೇನೇ, “ಎನ್ಕೇ ನಿನ್ನ ಅರೀಲಿಕ್ಕೆ ಬಂದೀನಿ ನಾನು” ಅಂದರು. ಅದಕ್ಕೆ ಎನ್ಕೇಯವರು ನಗುತ್ತಲೇ, “ಬರ್ರಿ ಮಾಸ್ತರೇ ನಾನೂ ನಿಮ್ಮನ್ನು ಅರೀಲಿಕ್ಕೆ ಕೂತೀನಿ” ಅಂದರು. ಇಲ್ಲಿ ಇಬ್ಬರೂ ಅರೀಲಿಕ್ಕೆ ಎಂಬ ಪದದ ಎರಡು ಅರ್ಥಗಳೂ ಹೊಂದುವಂತೆ pun ಮಾಡಿ ಬಳಸಿರುವುದು ಮನಸ್ಸಿಗೆ ಮುದ ಕೊಡುವ ವಿಚಾರ. ಹೀಗೇನೇ ಒಮ್ಮೆ ಕೆಲವು ಗೆಳೆಯರು ಬೇಂದ್ರೆಯವರನ್ನು ಎನ್ಕೇಯವರ ಮನೆಯಲ್ಲಿ ಬಿಟ್ಟು ಬೇರೆ ಎಲ್ಲೋ ಸ್ವಲ್ಪ ಕೆಲಸ ಮುಗಿಸಿ ಬರುತ್ತೇವೆ ಎಂದು ಹೇಳಿ ಹೋದರು. ಆಗ ಎನ್ಕೇಯವರ ಪತ್ನಿಯವರು ಇವರಿಗೆ ತಂಬಿಟ್ಟು ತಂದುಕೊಟ್ಟರಂತೆ. ಗೆಳೆಯರು ಬಂದಾಗ, “ನೀವು ನನ್ ಬಿಟ್ಟು ಹೋದ್ರಿ, ನಾನು ತಂಬಿಟ್ಟು ತಿಂದೆ” ಅಂತ ಹೇಳಿದರು. ಇಲ್ಲಿ ತಂಬಿಟ್ಟು ಎಂದರೆ ತಮ್ಮನ್ನು ಬಿಟ್ಟು ಎಂಬ ಇನ್ನೊಂದು ಅರ್ಥವೂ ಕಂಡು ಗೆಳೆಯರು, “ಈಗ ನಾವೂ ತಂಬಿಟ್ಟು ತಿಂತೇವೆ” ಎಂದು ನಕ್ಕರಂತೆ. ಹೀಗೆ ಪದಗಳನ್ನು ಚಮತ್ಕಾರದಿಂದ ಬಳಸಿ pun ಮಾಡಿ ಮಾತಾಡೋದ್ರಲ್ಲಿ ನಿಪುಣರು ಬೇಂದ್ರೆಯವರು. ಇವರಿಗೆ ಮೈಸೂರು ವಿಶ್ವ ವಿದ್ಯಾನಿಲಯ ಹಾಗೂ ಕರ್ನಾಟಕ ವಿಶ್ವ ವಿದ್ಯಾನಿಲಯ ಡಾಕ್ಟರೇಟ್ ಕೊಟ್ಟು ಗೌರವಿಸಿದವು. ಆಗ ಅಲ್ಲಲ್ಲಿ ಅಪಸ್ವರದ ಮಾತುಗಳು ಎದ್ದವಂತೆ. ಅದನ್ನು ಗಮನಿಸಿದ ಬೇಂದ್ರೆಯವರು, “ ಈ universityಯವರು ಕೊಡಕ್ಕೆ ಮುಂಚೆ ನಮ್ಮ ತಂದೆ ತಾಯಿನೇ ನಾನು ಹುಟ್ಟುವಾಗಲೇ ಡಾಕ್ಟರೇಟ್ ಕೊಟ್ಟಿದಾರೆ. ಹೇಗೇಂತೀರಾ? ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅಂದ್ರೆ DR ಬೇಂದ್ರೆ. ನೀವು ಡಾಕ್ಟರ್ ಅನ್ನಲಿಕ್ಕೂ DR ಹಾಕ್ತೀರಿ ಹೌದಲ್ಲೋ?” ಅಂತ ಕೇಳಿದರಂತೆ. ಹೀಗೆ ಪದಗಳ ಶ್ಲೇಷೆ ಚಮತ್ಕಾರದ ಮಾತುಗಳ ಜೊತೆಗೆ spontaneous ಆಗಿ ಆಕ್ಷಣದಲ್ಲಿ ನಗೆಚಟಾಕಿ ಹಾರಿಸಿಮಾತನಾಡುವುದರಲ್ಲೂ ನಿಸ್ಸೀಮರು. ಅವರ ಕವಿತಗಳಲ್ಲಿ ಹಾಸ್ಯ, ವಿಡಂಬನೆಯೊಂದಿಗೆ ಗಹನವಾದ ವಿಚಾರಗಳ ಮಾಲೆಯೂ ಇರುತ್ತವೆ. ಬದುಕಿನ ಬವಣೆಗಳಿವೆ. ಪ್ರೀತಿ, ಪ್ರೇಮ ವಿರಹ ಗೀತೆಗಳೂ ಇವೆ. ಅವರ ಪ್ರಕ್ರುತಿಯ ವರ್ಣನೆಯ ಸೊಬಗಂತೂ ದಂಗು ಬಡಿಸುವಂತಹುದು.
’ಕುಣಿಯೋಣು ಬಾರಾ’ ಬೇಂದ್ರೆಯವರ ಜನಪ್ರಿಯ ಗೀತೆ. ಕುಣಿಯುವುದಕ್ಕೆ ಅಂದರೆ ಸಂತೋಷವಾಗಿರುವುದಕ್ಕೆ ಮನಸ್ಸು ಬೇಕು ಅಷ್ಟೆ. ಎಂತಹಾ ತಾಪತ್ರಯವಿದ್ದರೂ ಕುಣಿದು ಎಲ್ಲಾ ಮರೆಯೋಣ. “ತಾಳ್ಯಾಕಾ ತಂತ್ಯಾಕಾ ರಾಗಾದ ಚಿಂತ್ಯಾಕಾ ಹೆಜ್ಯಾಕಾ ಗೆಜ್ಯಾಕಾ ಕುಣಿಯೋಣು ಬಾ.” ಇದರರ್ಥ ಇಲ್ಲ ಸಲ್ಲದ Rules regulationsನ್ನು ಹಾಕಿ ನಮ್ಮ ಮನಸ್ಸಿಗೆ ಬೇಲಿ ಹಾಕಿಕೊಂಡು ಗಂಭೀರ ಮುದ್ರೆ ಹಾಕಿಕೊಂಡು ಸಂತೋಷವನ್ನು ಹಾಳು ಮಾಡಿಕೊಳ್ಳಬಾರದು ಅಂತಾನೇ ಅಲ್ವೇ? ಬಡತನದ ಬಗ್ಗೆ ಒಂದು ವ್ಯಂಗ್ಯ ನುಡಿ ಹೀಗಿದೆ ನೋಡಿ,
ಯಾರಿಗೆ ಬೇಕಾಗೈತಿ ನಿಮ್ಮ ಕವಿತಾ
ಇದ್ರೆ ಒಂದು ಬ್ರೆಡ್ ತಾ
ಮ್ಯಾಲೆ ಅದಕೆ ಬೆಣ್ಣೆ ತಾ
ಇಲ್ಲಾ? ಹೋಗ್ಲಿ ಎಣ್ಣೆ ತಾ
ಹಾಕು ಮೇಲೆ ಖಾರದಪುಡಿ
ಹೊಟ್ಟೆ ತುಂಬಾ ಅದನ್ನು ಜಡಿ!
ಒಮ್ಮೆ ಒಂದು ನಾಟಕ ಸಮಾರಂಭಕ್ಕೆ ಅತಿಥಿಯಾಗಿ ಹೋಗಿದ್ದರು. ಇಂಟರ್ವೆಲ್ ನಲ್ಲಿ ಹೊರಗೆ ಹೋಗಿದ್ದ ಅವರು ಮತ್ತೆ ಥಿಯೇಟರ್ ಒಳಗೆ ಹೋಗುವಾಗ ಅವರನ್ನು ಬಾಗಿಲು ಕಾಯುವವನು ಅಲ್ಲೇ ತಡೆದು ನಿಲ್ಲಿಸಿಬಿಟ್ಟನಂತೆ. ನಾನು ಬೇಂದ್ರೆ ಕಣಪ್ಪಾ ಅಂದ್ರೂ ಬಿಡಲಿಲ್ಲವಂತೆ. ಅವರು ಹಾಗೆಂದಾಗ ಆ ಬಾಗಿಲು ಕಾಯುವವ, “ನಿನ್ನ ಗಡ್ಡ ಏನು? ನಿನ್ನ ಮುಖಏನು? ಬೇಂದ್ರೆಯವರೆಲ್ಲಿ? ನೀನೆಲ್ಲಿ?” ಎಂದು ಹೇಳಿದಾಗ ಬೇಂದ್ರೆಯವರು ಅವಾಕ್ಕಾದರು. ಅವರು ಹೊರಗೆ ಹೋದಾಗ ಇದ್ದ ವ್ಯಕ್ತಿ ಹೋಗಿ ಅವರು ಒಳಗೆ ಬರುವ ಹೊತ್ತಿಗೆ ಬೇರೆ ವ್ಯಕ್ತಿ ಬಂದಿದ್ದ. ಅವನಿಗೆ ಬೇಂದ್ರೆಯವರ ಮುಖ ಪರಿಚಯ ಇರಲಿಲ್ಲ. ತಕ್ಷಣ ಬೇಂದ್ರೆಯವರು, “ಇಲ್ಲಪ್ಪಾ ನಾ ಬೇಂದ್ರೆಯವರ ಪೈಕಿ ಜನ..” ಅಂತ ರಾಗ ಎಳೆದರಂತೆ. ಇವರು ಬೇಂದ್ರೆ ಕಡೆಯವರು ಎಂದು ಇನ್ನೂ ಯಾರೋ ಹೇಳಿದರಂತೆ ಆಗ ಆವ್ಯಕ್ತಿ ಇವರನ್ನು ಗೌರವದಿಂದ ಒಳಗೆ ಬಿಟ್ಟನಂತೆ. “ನೀನ್ ಯಾಕೋ ನಿನ್ನ ಹಂಗ್ಯಾಕೋ? ನನ್ನ ನಾಮದ ಬಲವೊಂದಿದ್ದರೆ ಸಾಕೋ” ಪುರಂದರ ದಾಸರು ಹಾಡಿದಂತೆ ತನ್ನ ನಾಮ ಬಲದಿಂದ ಬೇಂದ್ರೆಯವರು ಒಳಗೆ ಹೋಗಲು ಸಾಧ್ಯವಾಯಿತು.
’ಬೆಂದ್ರೆ ಬೇಂದ್ರೆ ಆದಾನು’ ಎಂಬ ನುಡಿ ಇದೆ. ಆದ್ರೆ ಬೆಂದವರೆಲ್ಲಾ ಬೇಂದ್ರೆ ಆಗಲು ಸಾಧ್ಯವೇ? ನೊಂದು ಬೆಂದವರ ಪ್ರತಿನಿಧಿಯಾಗಿ ಬೇಂದ್ರೆಯವರು ನಿಂತು ಬದುಕಿನ ಬಗ್ಗೆ ಸಾರಿದ ನುಡಿಗಳು,
“ರಸವೇ ಜನನ
ವಿರಸವೇ ಮರಣ
ಸಮರಸವೇ ಜೀವನ”
ಎಂಬ ಸಾರ್ವ ಕಾಲಿಕ ಸಂದೇಶ ನಮ್ಮ ಮುಂದಿದೆ.
73ನೇ ಸಾಹಿತ್ಯ ಸಮ್ಮೇಳನ ಶಿವಮೊಗ್ಗೆಯಲ್ಲಿ ನಡೆದಾಗ ನಾನು ಬೇಂದ್ರೆಯವರ ಎಲ್ಲಾ ಕವನ ಸಂಕಲನಗಳ volumes ಔದುಂಬರ ಗಾಥೆ ಕೊಂಡುಕೊಂಡೆ. ಅದನ್ನು ಮನೆಗೆ ಹೊತ್ತು ತಂದ ನನ್ನವರು “ಬೇಂದ್ರೆಯವರ ಕವನಗಳು ಒಳ್ಳೆ ವಜನು ಇವೆ” ಎಂದು ಬೇಂದ್ರೆಯವರಂತೆ pun ಮಾಡಿ ಹೇಳಿ ಬೆವರು ಒರೆಸಿಕೊಂಡಾಗ ನನಗೆ ಬೇಂದ್ರೆಯವರೇ ಎದುರಿಗೆ ಬಂದು ನಿಂತಂತೆ ಭಾಸವಾಯಿತು.

  • ಭಾಷೆ-ಕನ್ನಡ
~.~
  • Login or register to post comments
  • 571 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 18, 2008 - 11:10am — ಶ್ರೀನಿವಾಸ ವೀ. ಬ೦ಗೋಡಿ

ಉ: ಮನ ತುಂಬಿದ ಕವಿ

ಶ್ರೀನಿವಾಸ ವೀ. ಬ೦ಗೋಡಿ's picture

ಲೇಖನ ಮಸ್ತ್ ಐತ್ರಿ.

Quote:
“ಬೇಂದ್ರೆಯವರ ಕವನಗಳು ಒಳ್ಳೆ ವಜನು ಇವೆ”

ಬಾಳ ಚಂದದ pun.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 18, 2008 - 1:13pm — girish.rajanal

ಉ: ಮನ ತುಂಬಿದ ಕವಿ

girish.rajanal's picture

ಅಮ್ಮಾ,
ಬಾಳ ಚೊಲೊ ಐತ್ರಿ ನಿಮ್ಮ ಲೇಖನ. ಧಾರವಾಡದ ಫೇಡಾ ಸವಿದಂಗಾತ್ರಿ.

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 18, 2008 - 8:22pm — agilenag

ಉ: ಮನ ತುಂಬಿದ ಕವಿ

agilenag's picture

ವರಕವಿಯನ್ನು ಕುರಿತ ಉತ್ತಮ ಲೇಖನವನ್ನು ನೀಡಿದ್ದಕ್ಕೆ ಧನ್ಯವಾದಗಳು
ಎ.ವಿ.ನಾಗರಾಜು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 19, 2008 - 11:24am — sushil

ಉ: ಮನ ತುಂಬಿದ ಕವಿ

sushil's picture

ವರಕವಿಯವರ ಬಗ್ಗೆ ಒಂದು ಇಣುಕುನೋಟವನ್ನು ನೀಡಿದ್ದಕ್ಕೆ ಧನ್ಯವಾದಗಳು ಮೇಡಂ.ಹೊಸಬರಿಗೆ ದಾರಿದೀಪವಾಗುವಂಥ ವಿಚಾರಗಳನ್ನು ನಿಮ್ಮಿಂದ ಮತ್ತಷ್ಟು ನಿರೀಕ್ಷಿಸುತ್ತೇನೆ ಮೇಡಂ.

-ಸುಶೀಲ್.
ಜಗದಲಿ ಎಲ್ಲವ ತಿಳಿಯುತಲಿ ನಾವು ತಿಳಿಯದಾದೆವು ನಮ್ಮನ್ನೆ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 19, 2008 - 11:35pm — hamsanandi

ಉ: ಮನ ತುಂಬಿದ ಕವಿ

hamsanandi's picture

ತುಂಬಾ ಚೆನ್ನಾಗಿದೇರೀ ಬರಹ.

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 20, 2008 - 6:02pm — ಸಂಗನಗೌಡ

ಉ: ಮನ ತುಂಬಿದ ಕವಿ

ಸಂಗನಗೌಡ's picture

ತುಂಬ ಚೆನ್ನಾಗಿದೆ ಬರಹ.

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 22, 2008 - 12:37pm — pallavi.dharwad

ಉ: ಮನ ತುಂಬಿದ ಕವಿ

pallavi.dharwad's picture

ತುಂಬ ಸೊಗಸಾದ ಬರಹ ಅಕ್ಕಾ,

ಧಾರವಾಡದ ಜನ ಬೇಂದ್ರೇ ಅಜ್ಜನ್ನ ಮರ್ತಾರ. ಎಲ್ಲರಿಗಿಂತ ಮೊದಲು ಅವ್ರ ಮಗಾ ವಾಮನ ಮರ್ತಾನ. ಕಾಪಿ ರೈಟ್‌ ಎಂಬ ಕಗ್ಗದಲ್ಲಿ ಬೇಂದ್ರೆ ಅಜ್ಜನ್ನ ಬಂಧಿಸಿ, ಅವರ ಹಾಡುಗಳನ್ನ ಹಾಡಾಕ ಆಗದಂಗ, ಹಾಡುಗಾರರಿಗೆ, ಸಂಗೀತ ನಿರ್ದೇಶಕರಿಗೆ ಹೆದ್ರಿಕೆ ಹುಟ್ಟಿಸ್ಯಾನ. ಎಲ್ಲಿಯ ಬೇಂದ್ರೆ, ಎಲ್ಲಿಯ ವಾಮನ.

ನಿಮ್ಮ ಬರವಣಿಗೆ ಬೇಂದ್ರೆ ಅಜ್ಜನ್ನ ಮತ್ತ ಭೂಮಿ ಮ್ಯಾಗ ತಂದಂಗಾತು ನೋಡಕ್ಕಾ. ಈ ಲೇಖನಾನ ಆ ವಾಮನ ಬೇಂದ್ರೆಗ ಕಳಿಸಿಕೊಡ್ರಿ. ಓದಿ ಒಂದಿಷ್ಟು ನಾಚಿಗಿ ಆದ್ರೂ ಆಗ್ಲಿ.

ಭಾಳ ಚೆಂದ ಬರ್ದೀರಿ. ಹಿಂಗ ಬರೀರಿ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮನತುಂಬಿದ ಕವಿ
  • ಬೇಂದ್ರೆಯವರ ಹಾಸ್ಯ ಮನಸ್ಸು
  • ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು
  • ನಾದಲೀಲೆ: ಬೇಂದ್ರೆ ಕಾವ್ಯ ವಾಚನ ಕಾರ್ಯಕ್ರಮದ ವರದಿ
  • ಕಾಮಿಡಿಯೋ ಟ್ರ್ಯಾಜಿಡಿಯೋ- ಬೇಂದ್ರೆ ಅವರ ನಾಟಕ 'ಜಾತ್ರೆ'
Syndicate content

ಲೇಖಕರು

shylaswamy's picture

ಪೂರ್ಣ ಹೆಸರು
shylaswamy

ಪರಿಚಯ

ನಾನು ಶಿವಮೊಗ್ಗಾದಲ್ಲಿ ವಾಸ ಮಾಡುತ್ತಿರುವ ಗೃಹಿಣಿ. ದೀರ್ಘಕಾಲ ಶಿಕ್ಷಕಿಯಾಗಿ ಈಗ ಸ್ವಯಂ ನಿವೃತ್ತಿಹೊಂದಿ ಮನೆಯಲ್ಲಿದ್ದೇನೆ. ನನ್ನ ಆಸಕ್ತಿಯ ಕ್ಷೇತ್ರಗಳೆಂದರೆ, ಸಂಗೀತ, ಸಾಹಿತ್ಯ ಮತ್ತು ನಾಟಕ. ನಾನು ಕೆಲವು ನಾಟಕಗಳನ್ನು ಬರೆದು ನಿರ್ದೇಶಿಸಿದ್ದೇನೆ. ಹೆಚ್ಚಾಗಿ ಬರೆದಿರುವುದು ಮತ್ತು ನಿರ್ದೇಶಿಸಿರುವುದು ಮಕ್ಕಳ ನಾಟಕಗಳನ್ನು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಂಗಾರದ ಅರಮನೆ
  • ಗುರಿಯ ಮೊಸರನ್ನದಲ್ಲೇಕೆ ಪ್ರೇಮದ ಕಲ್ಲು?
  • 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
  • ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.
  • ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೆರಿಕದಲ್ಲಿ ಮೂಗಬಸವನಾದದ್ದು!
  • ತಪ್ಪಿ ನಡೆಸ ಸರ್ಕಾರ
  • ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!

ಇತ್ತೀಚಿನ ಪ್ರತಿಕ್ರಿಯೆಗಳು

  • gururajkodkani
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:56am
  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
  • uniquesupri
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 9:12am
  • mahesha
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 8:56am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "

— ಕುವೆಂಪು ('ಕನ್ನಡ ದೀಕ್ಷೆ' ಯಲ್ಲಿ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator