ಅದೊಂದು ದಿನ
ಅದೊಂದು ದಿನ, ಮತ್ತೊಂದು ಹಾಡು,
ಭಾರವಾಗಿತ್ತು ಮನ, ಮತ್ತದೇ ಪಾಡು.
ಇರಿದು ಮುಗಿಸಿತ್ತು ಮೊಗದಲ್ಲಿನ ಛಾಯೆ
ತಿಳೀದೇ ಹೋಯಿತು ಯಾವುದೀ ಮಾಯೆ
ಎಲ್ಲಿಂದೆಲ್ಲಿಗೆ ಹತ್ತಿಳಿಯಿತೋ,
ಹೊತ್ತಿನ ಜೊತೆಯಲಿ ಅದೃಷ್ಟ
ಬಂದುಳಿದರೂ ಮಿಗಲಿಲ್ಲವಲ್ಲಾ
ಕೊಂಚವಾದರೂ ಕನಿಷ್ಠ
ಯೋಚನೆಗಳೆಂಬ ಇರುವೆಯ ಹುತ್ತದಲಿ
ಸಮಯವೆಂಬ ಕೊನೆಯಿಲ್ಲದ ತೊರೆಯಲಿ
ಜೀವನವೆಂಬ ಬಯಲ ನಡುವಿನಲಿ
ಅಡೆತಡೆಗಳ ದಾಟಬಲ್ಲೆನೆ ನಾ?
ಬುದ್ಢಿಯ ಮಂಗನಾಟಗಳ
ದೇಹದ ದೌರ್ಬಲ್ಯಗಳ
ವಿಧಿಯು ಬರೆದಿಟ್ಟ ಗೆರೆಗಳ
ಮೀರಬಲ್ಲೆನೆ ನಾ ?
ಪ್ರತಿಕ್ಷಣವೂ ಶ್ರೇಷ್ಠ ಕಾಲ
ಸಾಧಿಸುವೆಯೆಂಬ ನಂಬಿಕೆ ಅಚಲ
ಜೊತೆಗೆ ಮಾಡಬಲ್ಲೆನೆಂಬ ಛಲ
ಇವೇ ನನಗೆ ಅಕ್ಷೋಹಿಣಿ ಬಲ!

- Login or register to post comments
- 717 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಅದೊಂದು ದಿನ
ಕರಿಹೈದ್ರೆ, ನಿಮ್ಮ ಕವನ ಓದಿ ನಾನೂ ಸಂಪದದಲ್ಲಿ ಬಂದು ಬರೆದೆ!!
ಕರಿಹೈದ್ರ ಕ್ಷಮೆ ಕೋರಿ.....
ಮತ್ತೊಂದು ದಿನ ಮತ್ತೊಂದು ಹಾಡು
ಭಾರವೆನಿಸಿತು ಮನ ಮತ್ತದೇ ಪಾಡು
ಹತ್ತಿಳಿಯಿತು ಎಲ್ಲಿಂದೆಲ್ಲಿಗೆ
ಅದೃಷ್ಟ
ಪಾದರಸದಂತೆ ಹೊತ್ತಿನೊಡನಾಡಟದಲಿ
ಉಳಿಯಬಾರದೆ ಕೊಂಚ
ಮಿಗಲಿಲ್ಲ ಒಂದಿನಿತು ಹರಿದರಿದು ಸೋರಿ
ಕೊನೆಯಿರದ ತೊರೆಯಾಯ್ತು
ಸಮಯ
ಆಲೋಚನೆಯು ಹುತ್ತ ಇರುವೆಗಳ
ಬಯಲಾಯ್ತು ಜೀವನ
ದಾಟಬಲ್ಲೆನೆ ನಾ ಅಡೆತಡೆಗಳ ಮೀರಿ
ಹಿಡಿದಿಟ್ಟಂತೆ ನಿಲ್ಲದ ಮನ
ಒಲ್ಲದ ದೇಹ
ವಿಧಿ ಬರೆದಿಟ್ಟಂತೆ ಗೆರೆ
ದೌರ್ಬಲ್ಯಗಳ
ಮೀರಬಲ್ಲೆನೆ ನಾ ದೃಢತೆಯ ತೋರಿ
ಕ್ಷಣ ಸ್ವರ್ಣ ಅಚಲ ನಂಬಿಕೆಯೊಡಗೂಡಿ
ಬಿಡಬಿಡದ ಛಲ
ಸಾಧನೆಯ ಅಕ್ಷೌಹಿಣಿ ಬಲದಲಿ
ತೋರೆಲೆ ಮನ
ನನ್ನದಾಗಬಹುದಾದ ಮುಂದಿನ ದಾರಿ
ಉ: ಅದೊಂದು ದಿನ
ಮೊದಲ ಬಾರಿಗೆ ಈ ಕವನವನ್ನು ಓದಿದಾಗ, ಕರಿಹೈದರು ಸ್ವಲ್ಪ ಸೆಲ್ಫ-ಕನ್ಸೋಲೇಶನ್ನಿನಲ್ಲಿ ಮುಳುಗಿರುವರೇನೋ ಅಂತನ್ನಿಸಿತು. ಇದಕ್ಕೆ ಕಾರಣಗಳಿವೆ.
"....ಇರಿದು ಮುಗಿಸಿತ್ತು ಮೊಗದಲ್ಲಿನ ಛಾಯೆ
ತಿಳೀದೇ ಹೋಯಿತು ಯಾವುದೀ ಮಾಯೆ"
ಹೇಳಿಯಾದ ಮೇಲೆ
"ಎಲ್ಲಿಂದೆಲ್ಲಿಗೆ ಹತ್ತಿಳಿಯಿತೋ,..." ಅಂತ ಹೇಳಿದ್ದಾರೆ. ಕರಿಹೈದರು ನಿಜಕ್ಕೂ ಯೋಚನೆಗಳ ಹುತ್ತದಿಂದ ಆಚೆಬಂದು ಈ ಪದ್ಯ ಬರೆದಿದ್ದರೆ, "ಎಲ್ಲಿಂದೆಲ್ಲಿಗೆ ಹತ್ತಿಳಿಯಿತೋ,..." ಬರೆಯುವ ಬದಲು, "ಎಲ್ಲಿಂದೆಲ್ಲಿಗೆ ಹತ್ತಿಳಿದಿತ್ತೋ,..." ಹೇಳುತ್ತಿದ್ದರು - ಅಂತ ನನಗೆ ಬಲವಾಗಿ ಅನ್ನಿಸಿತು.
ನಿಜ ಹೇಳಿ, ಕರಿಹೈದ್ರೆ ನೀವು ಬೇಸರದಿಂದ ಆಚೆಬಂದಿದ್ದೀರಾ ? ಸಮಯದ ಗೊಂಬೆಯಾಗದೆ ಪರಿಸ್ಥಿತಿಯನ್ನು ಪೂರ್ಣವಾಗಿ ಕೈಗೆತ್ತಿಕೊಂಡಿದ್ದೀರಾ ? ವಿಧಿಯ ಗೆರೆಯನ್ನು ಮೀರುವ ವಿಶ್ವಾಸ ಮೂಡಿದೆಯೇ ?
ಪ್ರಶ್ನೆ ಏಕೆ ಕೇಳಬೇಕೆನಿಸಿತೆಂದರೆ, ಅಕಸ್ಮಾತ್(ಮತ್ತೊಮ್ಮೆ ಅಕಸ್ಮಾತ್) ನೀವು ಇನ್ನೂ ಬೇಸರದಿಂದ ಆಚೆಬಂದಿಲ್ಲವಾದರೆ, ಈ ಪ್ರಶ್ನೆಗಳಿಗೆ ಉತ್ತರ ನೀಡುವಾಗ ಬರಬಹುದೇನೋ ಎಂಬ ನಿರೀಕ್ಷೆಯಲ್ಲಿ.