ಅರಳೀಮರ,ಆಲದಮರ,ಅತ್ತಿಮರ.
ಅರಳೀಮರ (ಅಶ್ವತ್ಥ, ಪಿಪ್ಪಲ..)-
ನಮ್ಮ ದೇಶದ ಎಲ್ಲೆಡೆ ಬೆಳೆಯುವ ಮರ. ಇದರ ತುಂಬಾ ಎಲೆಗಳಿರುತ್ತವೆ. ಸ್ವಲ್ಪ ಗಾಳಿಗೂ ಅಲ್ಲಾಡುತ್ತಾ ಪರಪರ ಶಬ್ದ ಮಾಡುತ್ತಿರುವುದು. ಅದಕ್ಕೇ ಈ ಮರಕ್ಕೆ ‘ಚಲಪತ್ರ’ ಎಂಬ ಹೆಸರೂ ಇದೆ.
ಆಲದಂತೆ ಈ ಮರಕ್ಕೂ ಬೀಳಲುಗಳಿದ್ದರೂ ಗಾತ್ರದಲ್ಲಿ
ಸಣ್ಣ ಮತ್ತು ತೆಳುವಾಗಿರುವುದು.(पीपल कि दाडी
)
ಈ ವೃಕ್ಷದ ಅಡಿಯಲ್ಲೇ ಕುಳಿತು ಅಖಂಡ ೪೯ ದಿನ ಧ್ಯಾನಿಸಿ,
ಜ್ಞಾನೋದಯವಾದ ಬುದ್ಧನಿಂದಾಗಿ ಇದಕ್ಕೆ ‘ಬೋಧಿ ವೃಕ್ಷ’ ಎನ್ನುವರು.
ಆನೆಗಳಿಗೆ ಇದರ ಎಲೆ ಪ್ರಿಯ ಖಾದ್ಯ ದ್ರವ್ಯ. ೪-೬ ದಿನ ಆನೆಗಳಿಗೆ ಇದರ ಎಲೆ ತಿನ್ನಲು ಸಿಗದಿದ್ದರೆ ಉನ್ಮತ್ತಗೊಳ್ಳುವುದಂತೆ. ಅದಕ್ಕೇ ಅಶ್ವತ್ಥಕ್ಕೆ
‘ಗಜಾಶನ, ಗಜಭಕ್ಷ್ಯ’ ಎಂಬ ಹೆಸರು ಬಂತು.
ಹಿಂದಿ ಹೆಸರು- ಪೀಪಲ್, ಪೀಪರ್
ಇಂಗ್ಲೀಷ್ನಲ್ಲಿ-sacred fig, peepul tree.
ಬಾಟನಿಕಲ್ ಹೆಸರು- Ficus religiosa. (Ficus rumphii ಇತ್ಯಾದಿ ಹಲವು ಪ್ರಭೇದಗಳಿವೆ)
ಅರಳಿಮರದಲ್ಲಿ ಭೂತಪ್ರೇತಗಳು ವಾಸಿಸುವುದಿಲ್ಲ ಎಂಬ ನಂಬಿಕೆ. ದೇವಸ್ಥಾನಗಳ ಸಮೀಪ ಅರಳೀಮರ,ಅಥವಾ ಅರಳೀಮರದ ಸಮೀಪ ದೇವಸ್ಥಾನಗಳು ಏಳುವುದು ಸಾಮಾನ್ಯ.
ಈ ಮರದ ಅಡಿಯಲ್ಲಿ ನಾಗನ ಕಲ್ಲುಗಳನಿಟ್ಟು ಪೂಜಿಸುವರು. ಮಕ್ಕಳಾಗದ ದಂಪತಿಗಳು ಅಶ್ವತ್ಥಕ್ಕೆ ಸುತ್ತು ಹಾಕಿ ನಾಗನ ಕಲ್ಲಿಗೆ ಪೂಜೆ ಸಲ್ಲಿಸಿದರೆ ಮಕ್ಕಳಾಗುವುದಂತೆ.
ಸಿನಿಮಾಗಳಲ್ಲಿ, ಅರಳೀ ಮರದ ಅಡಿಯ ಕಟ್ಟೆಯಲ್ಲಿ, ಹಳ್ಳಿಯ ಸಮಸ್ತ ಜನರು ಸೇರಿ, ಚರ್ಚೆ,ಜಗಳ,ನ್ಯಾಯತೀರ್ಮಾನ ಮಾಡುವುದನ್ನು ನೋಡಿಯೇ ಇರುತ್ತೀರಿ. ಕನ್ನಡದ ಹೆಸರಾಂತ, ಜನಪ್ರಿಯ ನಟ-ಅಶ್ವತ್ಥ.
*************************
ಆಲದ ಮರ- ಭಾರತದ ‘ರಾಷ್ಟ್ರವೃಕ್ಷ’.
ಹಿಂದಿಯಲ್ಲಿ ‘ಬರಗದ್’ ಎನ್ನುವರು.
ಇದರ ನೆರಳಲ್ಲಿ ಬನಿಯಾ(ಹಿಂದೂ ವರ್ತಕರು)ಗಳು ತಮ್ಮ ವ್ಯಾಪಾರ ಮಾಡುತ್ತಿದ್ದುದರಿಂದ ಇದನ್ನು banyan tree ಎಂದು ವಿದೇಶೀಯರು ಕರೆದರು.
ಸಂಸ್ಕೃತದಲ್ಲಿ ಇದನ್ನು ‘ನ್ಯಗ್ರೋಧ’ ಎಂದು ಕರೆಯುವರು. ಬಿಸಿಲು, ಮಳೆ ಕೆಳಗೆ
ಬೀಳುವುದರಿಂದ ತಡೆಯುವುದು ಎಂದು ಇದರ ಅರ್ಥ. ( ನ್ಯಕ್ ಅಧೋದೇಶೇ
ಸೂರ್ಯತಾಪ ವರ್ಷಾದಿ ರೋಧನಾತ್..)
ಬೆಂಗಳೂರಲ್ಲಿರುವ ದೊಡ್ಡಾಲದ ಮರವನ್ನು ನೋಡಲು ಮರೆಯದಿರಿ.
************************
ಅತ್ತಿಮರ-
ಸಂ - ಉದುಂಬರ.
ಹಿಂ - ಗೂಲರ್
ಬಾ.ಹೆಸರು - Ficus glomerata
ಇದರಲ್ಲಿ ಸಣ್ಣತ್ತಿ,ದೊಡ್ಡತ್ತಿ,ಕಲ್ಲತ್ತಿ,ನೀರುಅತ್ತಿ ಎಂದು ಭೇದವಿದೆ.
ಸಿನೆಮಾ ಹಾಡು ‘ಅತ್ತಿಯಾ ಹಣ್ಣು ಅಂಜೂರವೇ..’ ನೆನಪಿದೆಯಾ?
***********************
ಈಗ ಒಂದು ಪ್ರಶ್ನೆ:
ಈ ಮೂರೂ ಮರಗಳ ಸಂಸ್ಕೃತ ಹೆಸರು ಒಟ್ಟಾಗಿ ‘ನ್ಯಗ್ರೋಧೋದುಂಬರೋsಶ್ವತ್ಥ’. ಅಲ್ಲವೇ.
ವಿಷ್ಣು ಸಹಸ್ರನಾಮದಲ್ಲಿ ೮೮ನೇ ಶ್ಲೋಕ-
‘ಸುಲಭಃ.. .. .. ..
ನ್ಯಗ್ರೋಧೋದುಂಬರೋಶ್ವತ್ಥಶ್ಚಾಣೂರಾಂಧ್ರ ನಿಷೂದನಃ’ ಎಂದಿದೆ.
ಸರ್ವ ವೃಕ್ಷಗಳಲ್ಲಿ ‘ಅಶ್ವತ್ಥ’ ನಾನೇ ಎಂದು ಗೀತೆಯಲ್ಲಿ ಕೃಷ್ಣ ಹೇಳಿರುವನು.
ನ್ಯಗ್ರೋಧ, ಉದುಂಬರ 'ವೃಕ್ಷಗಳೂ' ವಿಷ್ಣುವಿನ ಸಹಸ್ರ ನಾಮಗಳಲ್ಲಿ ಸೇರಿರುವುದೇ?
-ಗಣೇಶ.

- Login or register to post comments
- 696 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಅರಳೀಮರ,ಆಲದಮರ,ಅತ್ತಿಮರ.
ಗಣೇಶ್ ರವರಿಗೆ ನಮಸ್ಕಾರ,
ಲೇಖನಕ್ಕೆ ಧನ್ಯವಾದಗಳು. ಆಲದ ಮರಕ್ಕೆ ಕೆಳಗೆ ಸೂಚಿಸಿದ ಗುಣಗಳಿರುವುದರಿಂದ ಅದು ಪುರುಷಪ್ರಾಯವಾದುದೆಂದು, ತ್ರಿಮೂರ್ತಿಸ್ವರೂಪಿಯೆಂದು ಪರಿಗಣಿಸಲ್ಪಟ್ಟಿದೆ :
೧. ಇದರ ಬೇರುಗಳಿಂದ ಕಷಾಯ ಮಾಡಿ ಕುಡಿದರೆ ಗರ್ಭ ನಿಲ್ಲುತ್ತದೆ. ಆದ್ದರಿಂದ - ಬೇರುಗಳು ಬ್ರಹ್ಮ / ಸೃಷ್ಟಿಶಕ್ತಿಯ ಪ್ರತೀಕ
೨. ಇದರ ಕಾಂಡ, ಕೊಂಬೆಗಳು ಔಷದೀಯ ಗುಣಗಳು ಹೊಂದಿದೆ. ಇದರಿಂದ ಮಾಡುವ ಹೋಮದ ಧೂಪ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ -ಕೊಂಬೆ, ಕಾಂಡ ವಿಷ್ಣು / ಸ್ಥಿತಿಶಕ್ತಿಯ ಪ್ರತೀಕ
೩. ಎಲೆ, ಚಿಗುರಿನ ಕಷಾಯ ಗರ್ಭ ಪಾತಕ್ಕೆ ಉಪಯೋಗಿಸಲಾಗುತ್ತದೆ. ಆದ್ದರಿಂದ - ಎಲೆಗಳು ರುದ್ರ / ಲಯಶಕ್ತಿಯ ಪ್ರತೀಕ
ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ "ನಾನು ವೃಕ್ಷಗಳಲ್ಲಿ ಅಶ್ವತ್ಥ, ಋಷಿಗಳಲ್ಲಿ ಕಶ್ಯಪ, ಮುಂತಾಗಿ ತನ್ನ ವಿಶ್ವರೂಪದರ್ಶನದಲ್ಲಿ ಹೇಳುತ್ತಾನೆ"
ಹೀಗೆ ಅರಳೀ ಮರ ಪುರುಷ ಸಂಕೇತವಾಗಿದೆ. ಅದೇ ರೀತಿ ಆಲದ ಮರ ಸ್ತ್ರೀ ಸಂಕೇತವಾಗಿದೆ (ಪ್ರಾಯಶಃ ಅದರ ಅಗಾಧ ಬೇರುಗಳ ಕಾರಣದಿಂದ). ಈ ಕಾರಣಗಳಿಂದ ಅರಳೀ ಮರ - ಆಲದ ಮರದ ವಿವಾಹದ ಆಚಾರವು ನಡೆಯುತ್ತವೆ
(ಸಂಗ್ರಹ - ವಿದುರಾಷ್ವತ್ಥ ಸ್ಥಳ ಪುರಾಣ)
ಉ: ಅರಳೀಮರ,ಆಲದಮರ,ಅತ್ತಿಮರ.
ಅರಳೀಮರಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ.
ತಲೆಕೆಳಗಾದ ಅರಳೀಮರ ಇಡೀ ಬ್ರಹ್ಮಾಂಡದ ರೂಪವೆನ್ನುತ್ತದೆ ಭಗವದ್ಗೀತೆ!
ಹದಿನೈದನೇ ಅಧ್ಯಾಯವಾದ ಪುರುಷೋತ್ತಮಯೋಗದಲ್ಲಿ ಕೃಷ್ಣ ಹೀಗೆನ್ನುತ್ತಾನೆ:
ಊರ್ಧ್ವಮೂಲಮಧಃಶಾಖಂ ಅಶ್ವತ್ಥಂ ಪ್ರಾಹುರವ್ಯಯಂ|
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್|| (ಭ.ಗೀ.೧೫-೧)
->ಬುಡಮೇಲಾಗಿ, ಕೊಂಬೆಕೆಳಗಾದ ಅರಳಿಯನ್ನು ಅಳಿಯದೆನ್ನುವರು.
ಋಚೆ(ಛಂದಸ್ಸು)ಗಳೇ ಎಲೆಗಳಾಗಿರುವ ಈ ಮರವನರಿತವನು ವೇದಗಳ ತಿಳಿದಂತೆ!
ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ ಗುಣಪ್ರವೃದ್ಧಾ ವಿಷಯಪ್ರವಾಲಾಃ|
ಅಧಶ್ಚ ಮೂಲಾನ್ಯನುಸಂತತಾನಿ ಕರ್ಮಾನುಬಂಧೀನಿ ಮನುಷ್ಯಲೋಕೇ|| (ಭ.ಗೀ.೧೫-೨)
->ಕೆಳಗೂ ಮೇಲೆಯೂ ಹರಡಿರುವ ಅದರ ಟೊಂಗೆಗಳು ತ್ರಿಗುಣಾತ್ಮಕವಾಗಿ ಚಿಗುರೊಡೆದ ಐಹಿಕ ವಿಷಯಗಳು.
ಮೇಲಿನಿಂದ ಕೆಳಗೂ(ಬುಡದಿಂದ ಎಲೆವರೆಗೂ) ಜೋತುಬಿದ್ದಿರುವ ಬೇರುಗಳು ಮನುಜಲೋಕದ ಕರ್ಮಬಂಧನವನ್ನು ತೋರುತ್ತವೆ!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಅರಳೀಮರ,ಆಲದಮರ,ಅತ್ತಿಮರ.
ಅಶ್ವತ್ಥ ಮತ್ತು ಆಲದ ಬಗ್ಗೆ ಇನ್ನಷ್ಟು ವಿವರ ನೀಡಿದ ಅರವಿಂದ ಮತ್ತು ಬೆನಕರಿಗೆ ಧನ್ಯವಾದಗಳು.
-ಗಣೇಶ.