ಮತ್ತೆ ಮಳೆ ಹುಯ್ಯುತಿದೆ
ಮತ್ತೆ ಮಳೆ ಹುಯ್ಯುತಿದೆ.
ಯಾರೋ ಸಿಕ್ಕಾಪಟ್ಟೆ ಹೊಡೆದಿದ್ದಾರೇನೋ ಎಂಬಂತೆ ಮೋಡ ನಿರಂತರವಾಗಿ ಅಳುತ್ತಿದೆ. ಹೊಡೆದಾಗಿನ ಕ್ಷಣದ ನೋವು ಮರೆಯಾಗಿದೆಯೇನೋ. ಗುಡುಗು-ಸಿಡಿಲುಗಳ ಆರ್ಭಟವಿಲ್ಲ. ಸುಮ್ಮನೇ ನೋವು ತಿಂದು ಅಳುವ ಗೃಹಿಣಿಯಂತೆ ನಿರಂತರವಾಗಿ ಅಳುತ್ತಲೇ ಇದೆ. ರಾತ್ರಿಯೇ ಶುರುವಾಗಿದ್ದು ಇನ್ನೂ ನಿಂತಿಲ್ಲ. ಅಳು ನಿಲ್ಲಿಸಲು ಸೋತ ಭಾವನೆಯಲ್ಲಿ ಮರಗಿಡಗಳು ಮೌನವಾಗಿ ನಿಂತಿವೆ. ಅವುಗಳ ಮೇಲೆ ಸಣ್ಣಗೇ ಸುರಿಯುತ್ತಿರುವ ಮಳೆ. ಅದನ್ನೇ ಮಂಜುಕಣ್ಣುಗಳಿಂದ ನೋಡುತ್ತಿರುವ ದೂರದ ವಿದ್ಯುತ್ ದೀಪ.
ಹಗಲು ಯಾವಾಗ ಬರುತ್ತದೋ ಗೊತ್ತಿಲ್ಲ. ಸೂರ್ಯ ಬಂದು ಅಳು ನಿಲ್ಲಿಸುವ ಗ್ಯಾರಂಟಿಯೂ ಇಲ್ಲ. ಬಂದರೂ ಅವನಿಗೆ ಮೋಡಕ್ಕೆ ಸಮಾಧಾನ ಹೇಳಲು ಭಯ. ಎಲ್ಲೋ ಬಚ್ಚಿಟ್ಟುಕೊಂಡಿರುತ್ತಾನೆ. ಒಡಲ ದುಃಖ ಕರಗಿ ಕೊನೆಯ ಹನಿಯಾಗಿ ಬೀಳುವವರೆಗೆ ಮಳೆ ಬರುತ್ತಲೇ ಇರುತ್ತದೆಯೇನೋ.
ರಾತ್ರಿ ಶುರುವಾದ ಮಳೆ ಇದ್ದಕ್ಕಿದ್ದಂತೆ ಬೀದಿಗಳನ್ನು ನಿರ್ಜನವಾಗಿಸಿತು. ಸಂಜೆಯ ಸೊಗಸು ಸವಿಯಲು ರಸ್ತೆಗಿಳಿದಿದ್ದ ಹುಡುಗ-ಹುಡುಗಿಯರು ’ಹೋ’ ಎಂದು ಖುಷಿಯಿಂದ ಕೂಗುತ್ತಾ ಮರೆ ಹುಡುಕಿಕೊಂಡು ಓಡಿಹೋದರು. ಬೀದಿ ಬದಿಯಲ್ಲಿ ನಿಂತಿದ್ದ ತಳ್ಳುಗಾಡಿಯವರು, ಆಸರೆ ಹುಡುಕಿಕೊಳ್ಳಲು ಒದ್ದಾಡಿದರು. ಸಂಜೆ ವ್ಯಾಪಾರಕ್ಕೆ ಬಂದಿದ್ದ ಪಾನಿಪುರಿ ಅಂಗಡಿಯವರಿಗೆ ಭರ್ತಿ ನಷ್ಟ. ದೂರದ ಊರುಗಳಿಗೆ ಹೋಗಬೇಕಾದವರು, ದೂರದ ಊರುಗಳಿಂದ ಬಂದವರನ್ನು ಮಳೆ ಇಕ್ಕಟ್ಟಿಗೆ ಸಿಲುಕಿಸಿತು. ಗೆಳತಿಯೊಬ್ಬಳನ್ನು ಭೇಟಿಯಾಗಲು ಹಾಸ್ಟೆಲ್‌ಗೆ ಹೋಗಿದ್ದ ನನಗೆ, ಬೇಗ ಮನೆ ಸೇರಿಕೊಳ್ಳುವ ಧಾವಂತ. ಮಳೆಯನ್ನು ಎದುರಿಸಿ ಸ್ಕೂಟಿ ಓಡೀತೆ?
ನೋಡನೋಡುತ್ತಲೇ ಇನ್ನಷ್ಟು ಕಪ್ಪು ಮೋಡಗಳು ಸೇರಿಕೊಂಡವು. ಮಳೆಯ ರಭಸ ಜೋರಾಯಿತು. ಗಾಳಿಯಿಲ್ಲದೆ ಕೇವಲ ತನಗೆ ತಾನೆ ಎಂಬಂತೆ ಬೀಳುತ್ತಿರುವ ಶುದ್ಧ ಜೋರು ಮಳೆ ಅದು. ಹಾಸ್ಟೆಲ್ ಹುಡುಗಿಯರು ಕಾರಿಡಾರ್‌ಗೆ ಬಂದು ನಿಂತರು. ಇನ್ನು ಸ್ವಲ್ಪ ಹೊತ್ತಿಗೆ ಕರೆಂಟ್ ಹೋಗುತ್ತದೆ. ಓದಲು ಆಗುವುದಿಲ್ಲ ಎಂಬ ಕಳವಳ ಕಂಡಿದ್ದು ಕೆಲವೇ ಕೆಲವು ಹುಡುಗಿಯರಲ್ಲಿ. ಉಳಿದವರಲ್ಲಿ ಎಂಥದೋ ಖುಷಿ.
ಮಳೆ ನಿಲ್ಲುವವರೆಗೆ ಅಂಗಡಿಕಾರರ ವ್ಯಾಪಾರ ಖೋತಾ. ಮಾವಿನಹಣ್ಣು ಮಾರುವ ಹೆಣ್ಣುಮಗಳ ಹತ್ತಿರ ಹಣ್ಣು ಕೊಳ್ಳುವ ಗಿರಾಕಿಗಳಿಲ್ಲ. ಅಷ್ಟು ದೊಡ್ಡ ಬುಟ್ಟಿ ಹೊತ್ತುಕೊಂಡು, ಮಗುವನ್ನೂ ಎತ್ತಿಕೊಂಡು ಮನೆ ಸೇರುವುದು ಹೇಗೆಂಬ ದಿಗಿಲು ಆಕೆಯ ಮುಖದಲ್ಲಿ. ಮಡಿಲ ಮಗುವಿಗೆ ಅಮ್ಮನ ಸೆರಗಿನಿಂದ ಹೊರಗಿಣುಕಿ ನೋಡುವ ಕುತೂಹಲ. ಮಳೆಗೆ ಇವ್ಯಾವ ಭಾವನೆಗಳೂ ಅರ್ಥವಾಗುವುದಿಲ್ಲ. ಅಬ್ಬರಿಸಿ ನೆಲಕ್ಕೆ ಅಪ್ಪಳಿಸುವುದೊಂದೇ ಅದಕ್ಕೆ ಗೊತ್ತು.
ನಿರೀಕ್ಷಿಸಿದಂತೆ ವಿದ್ಯುತ್ ಸರಬರಾಜು ನಿಂತು ಹೋಯಿತು. ಯುದ್ಧಕಾಲದಲ್ಲಿ ಹೇಗೋ ಉಳಿದುಕೊಂಡ ಪಳೆಯುಳಿಕೆಯಂತೆ ಹಾಸ್ಟೆಲ್ ಕಟ್ಟಡ ಘೋರವಾಗಿ ಕಾಣತೊಡಗಿತು. ಕಂಪೌಂಡ್‌ನಲ್ಲಿದ್ದ ಮರಗಳ ಮುಖದಲ್ಲಿ ಎಂಥದೋ ಹರುಷ. ಅದರಡಿ ನಿಲ್ಲಿಸಿದ ನನ್ನ ಸ್ಕೂಟಿಯಲ್ಲಿ ಎಂಥದೋ ಪುಳಕ.
ಏನೇನೋ ವಿಷಯಗಳನ್ನು ಮಾತಾಡುತ್ತಿದ್ದವರ ಮಾತು ಈಗ ಮಳೆಯತ್ತಲೇ. ಸ್ವಲ್ಪ ಹೊತ್ತಿಗೆ ಅದೂ ನಿಂತು ಹೋಯಿತು. ಎಲ್ಲರೂ ಮೌನವಾಗಿ ಮಳೆಯನ್ನು ನೋಡತೊಡಗಿದ್ದರು. ಮನಸ್ಸಿನೊಳಗೂ ಮಳೆ ಸುರಿಯುತ್ತಿದೆಯೇನೋ ಎಂಬಂತೆ ಮೂಕವಾಗಿ ನಿಂತರು.
’ಎಲ್ಲಿದ್ದೀಯೇ ಪಲ್ಲು?’ ಎಂದು ಅವ್ವ ಫೋನ್ ಮಾಡಿದಳು. ’ನಿನ್ನ ಸ್ಕೂಟಿ ಅಲ್ಲೇ ಇರಲಿ ಬಿಡು, ನಿನ್ನ ಅಪ್ಪನ್ನ ಕಳಿಸಿ ಪಿಕಪ್ ಮಾಡುವಂತೆ ಹೇಳುತ್ತೇನೆ’ ಎಂದು ಧಾವಂತ ತೋರಿದಳು. ಬೆಳೆದ ಮಗಳನ್ನು ಮಗುವಿನಂತೆ ನೋಡಿದರೆ ಸಿಟ್ಟು ಬಾರದಿರುತ್ತದೆಯೆ? ’ಯಾವ ಸೀಮೆಯಿಂದ ಬಂದಿದ್ದೀಯಾ ತಾಯಿ? ಧಾರವಾಡದ ಮಳೆಗೆ ಹೆದರುತ್ತೀಯಲ್ಲ! ಈಗ ಬಂತು, ಈಗ ಹೋಯ್ತು ಎಂಬಂಥ ಮಳೆ ಇದು. ನಿಂತ ಕೂಡಲೇ ಬರ್ತೀನಿ, ಸುಮ್ಮನಿರು’ ಎಂದು ಅಸಮಾಧಾನದಿಂದಲೇ ಹೇಳಿದೆ. ಅತಿ ಮುದ್ದು ತೋರಿದರೆ ನಾನು ಸಿಡುಕುತ್ತೇನೆ ಎಂಬುದು ಆಕೆಗಿಂತ ಚೆನ್ನಾಗಿ ಯಾರಿಗೆ ಗೊತ್ತಿದೆ? ಹೀಗಾಗಿ ಸುಮ್ಮನಾದಳು.
ನಾನು ಮತ್ತೆ ಮಳೆಯಲ್ಲಿ ಮಗ್ನಳಾದೆ. ಹೊರಗೆ ನಿಧಾನವಾಗಿ ಕತ್ತಲಾಗುತ್ತಿತ್ತು. ಆಗೊಂದು ಈಗೊಂದು ವಾಹನಗಳು ಲೈಟು ಬೆಳಗಿಸಿಕೊಂಡು ಹೋಗುತ್ತಿದ್ದುದು ಬಿಟ್ಟರೆ ಹಿತವಾದ ಮಂಕು ಮಂಕು ಕತ್ತಲು. ಮರದಡಿ ನಿಲ್ಲಿಸಿದ್ದ ಸ್ಕೂಟಿ ಈಗ ಕಾಣುತ್ತಿರಲಿಲ್ಲ. ಕಂಪೌಂಡ್‌ನ ಕಬ್ಬಿಣದ ಗೇಟು ಕೂಡ ಮಸುಕು ಮಸುಕಾಗಿತ್ತು. ಮರಗಳು ಕಪ್ಪಗೇ ರಾಕ್ಷಸನಂತೆ ಕಾಣುತ್ತಿದ್ದವು. ರಸ್ತೆ ಪೂರ್ತಿ ಕಪ್ಪಾಗಿ, ಅದರಾಚೆ ಇದ್ದ ಕಟ್ಟಡಗಳು ಪಾಳು ಬಿದ್ದಂತೆ ಉದ್ದಕ್ಕೆ ನಿಂತಿದ್ದವು. ರಿಚಾರ್ಜೆಬಲ್ ದೀಪಗಳು ತಮ್ಮ ಅಸ್ತಿತ್ವ ಸಾರುತ್ತಿದ್ದವೇ ವಿನಾ ಕತ್ತಲನ್ನು ಹೊಡೆದೋಡಿಸುವಷ್ಟು ಶಕ್ತವಾಗಿದ್ದಿಲ್ಲ.
ಎಲ್ಲ ರೀತಿಯ ಧ್ವನಿಗಳು ಮರೆಯಾಗಿದ್ದವು. ಕೇಳಿ ಬರುತ್ತಿದ್ದುದು ಮಳೆ ಬೀಳುತ್ತಿರುವ ಸದ್ದೊಂದೇ. ಮನಸ್ಸಿಗೆ ಎಂಥದೋ ಹಾಯ್. ಎಂಥದೋ ಕಸಿವಿಸಿ. ಏನೋ ಧಾವಂತ. ಇದು ಯಾವಾಗ ನಿಲ್ಲುತ್ತದೋ, ಯಾವಾಗ ಕರೆಂಟ್ ಬರುತ್ತದೋ, ಯಾವಾಗ ಮನೆಗೆ ಹೋದೇನೋ ಎಂಬ ಚಿಂತೆ. ಮಳೆ ಬೀಳುತ್ತಲೇ ಹೋದಾಗ, ಕಾರು ತರುವಂತೆ ಅಪ್ಪನಿಗೆ ಫೋನ್ ಮಾಡಲಾ? ಎಂಬ ವಿಚಾರ ಬಂದಿತು. ಆದರೆ ಅಹಂ ಅದಕ್ಕೆ ಒಪ್ಪಲಿಲ್ಲ. ಈಗ ತಾನೆ ಅವ್ವನನ್ನು ಗದರಿಕೊಂಡಿದ್ದೇನೆ. ಅಪ್ಪನಿಗೆ ಹೇಗೆ ಫೋನ್ ಮಾಡಲಿ?
ಮಳೆಯಲ್ಲೇ ಕೊಡೆ ಹಿಡಿದು ಮೆಸ್‌ಗೆ ಹೋಗಲು ಒಂದಿಷ್ಟು ಹುಡುಗಿಯರು ಸಿದ್ಧವಾದರು. ’ಇವತ್ತು ಇಲ್ಲೇ ಊಟ ಮಾಡಿ, ಇಲ್ಲೇ ಇದ್ದು ಬೆಳಿಗ್ಗೆ ಬರುತ್ತೇನೆ’ ಎಂದು ಮನೆಗೆ ಫೋನ್ ಮಾಡಿ ಹೇಳೇ ಎಂದು ಗೆಳತಿ ಸಲಹೆ ಮಾಡಿದಳು. ನಾನು ಒಪ್ಪಲಿಲ್ಲ. ಹೀಗಾಗಿ ಆಕೆಯೂ ಸುಮ್ಮನೇ ನಿಂತಳು. ನಿಂತು ನಿಂತು ಬೇಸರವಾಗಿ ಹಾಡೊಂದನ್ನು ಗುನುಗಿಕೊಳ್ಳಲು ಶುರು ಮಾಡಿದಳು.
ಸುಮ್ಮನೇ ನಿಂತಿದ್ದ ಹುಡುಗಿಯರಲ್ಲಿ ಈಗ ಕೊಂಚ ಸಂಚಲನ. ಜೋರಾಗಿ ಹಾಡೇ ಎಂಬ ವಿನಂತಿ ಭರಿತ ಪ್ರೋತ್ಸಾಹ. ಗೆಳತಿ ದನಿ ದೊಡ್ಡದು ಮಾಡಿದಳು. ’ಎಲ್ಲಿ ಜಾರಿತೋ ಮನವು, ಎಲ್ಲೆ ಮೀರಿತೋ’.
ಕ್ಷಣ ಕಾಲ ಮಳೆಯನ್ನು ಮರೆತು ಹಾಡಿನತ್ತ ಮನಸ್ಸು ತಿರುಗಿತು. ಹಾಡುಗಳ ಮೇಲೆ ಹಾಡುಗಳು ಹೊರಬಂದವು. ಕಂಠ ಚೆನ್ನಾಗಿದ್ದ ಇನ್ನೊಂದಿಬ್ಬರು ಹುಡುಗಿಯರು ಗೆಳತಿಯ ಜೊತೆ ಸೇರಿಕೊಂಡರು. ಭಾವಗೀತೆ, ಸಿನಿಮಾ ಹಾಡುಗಳು ಧಾರಾಳವಾಗಿ ಹೊರಬಂದವು. ನೆನಪಿಲ್ಲ ಎಂಬ ಕಾರಣಕ್ಕೆ ಒಂದೇ ನುಡಿ ಹಾಡಿದರೂ ಕೆಲ ಹಾಡುಗಳು ಮನಸ್ಸಿನಲ್ಲಿ ಗುಂಗು ಹಿಡಿಸಿದವು. ಹಾಡುತ್ತ, ಕೇಳುತ್ತ ನಾವೆಲ್ಲ ಮಳೆಯನ್ನು ಮರೆತೇಬಿಟ್ಟೆವು.
ಕೊನೆಗೂ ಮಳೆ ನಿಂತಾಗ ರಾತ್ರಿ ಎಂಟು ಗಂಟೆ. ಕರೆಂಟ್ ಬಂದಿದ್ದು ಅರ್ಧ ಗಂಟೆ ನಂತರ. ಗೆಳತಿಯರ ಸಹಾಯದಿಂದ ಮರದಡಿ ಹುದುಗಿದಂತಿದ್ದ ಸ್ಕೂಟಿ ಹೊರಗೆಳೆದು, ನೀರು ಬಿದ್ದು ನಯವಾಗಿದ್ದ ಗೇಟು ತೆರೆದು ರಸ್ತೆಗಿಳಿದಾಗ ಸ್ಟಾರ್ಟ್ ಆಗಲು ಸ್ಕೂಟಿ ಮೊಂಡು ಹಿಡಿಯಿತು. ಸರದಿಯ ಮೇಲೆ ಗೆಳತಿಯರು ಅದನ್ನು ಒದ್ದು ಒದ್ದು ಶುರು ಮಾಡಲು ಯತ್ನಿಸಿದರು. ಹುಡುಗಿಯರ ಒದೆ ತಿಂದು ನಾಚಿಕೆಯಾಯಿತೇನೋ ಎಂಬಂತೆ ಸ್ಕೂಟಿ ಕೊನೆಗೂ ಶುರುವಾಯಿತು.
ಮನೆಗೆ ಬಂದರೆ ಬಾಗಿಲಲ್ಲೇ ನಿಂತಿದ್ದಾಳೆ ಅವ್ವ. ಸೇಫಾಗಿ ಬಂದವಳನ್ನು ನೋಡಿ ಸಮಧಾನಪಟ್ಟಳು. ನಾನು ಸೀದಾ ರೂಮಿಗೆ ಹೋಗಿ ಭಾವಗೀತೆ ಹಾಡಿನ ಸಿಡಿ ಹಾಕಿದೆ. ಭಾವಸಂಗಮದ ’ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ...’ ಹಾಡು ಸಣ್ಣಗೆ ಮಳೆಯಂತೆ, ಗುಂಗಿನಂತೆ, ಕನಸಿನಂತೆ, ಕನವರಿಕೆಯಂತೆ ರೂಮನ್ನು ತುಂಬಿಕೊಂಡಿತು. ಮನಸ್ಸು ನಿಧಾನವಾಗಿ ಮಳೆಯ ಜಾಡಿನಲ್ಲಿ ಜಾರಿಕೊಂಡು ಕಾಣದ ಲೋಕಕ್ಕೆ ತೇಲಿ ಹೋಯಿತು.
- ಪಲ್ಲವಿ ಎಸ್.

- Login or register to post comments
- 527 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಮತ್ತೆ ಮಳೆ ಹುಯ್ಯುತಿದೆ
re pallavi tumba chennagide nimma dharwadada male, Innu ondu vishya gotta Dharwada male nambabaradhu ...Belagum Hudigeerna Nambabardu antha namma poli geleyara sangha heltha ittu. Hope you take this is good spirit. Basu
ಉ: ಮತ್ತೆ ಮಳೆ ಹುಯ್ಯುತಿದೆ
ಧಾರವಾಡ ಮಳೆ ನಂಬಬಾರದು, ಬೆಳಗಾವಿ ಹುಡುಗೀರನ್ನ ನಂಬಬಾರದು ಎಂಬುದು ಈಗಲೂ ಚಾಲ್ತಿಯಲ್ಲಿರುವ, ಪೋಲಿ ಎಂದು ಭಾವಿಸದ ಮಾತು. ಅದು ಎಷ್ಟೋ ಸಾರಿ ನಿಜ ಎಂದು ನನ್ನ ಗೆಳೆಯರು ವಾದಿಸುತ್ತಿರುತ್ತಾರೆ. ನಾವೂ ಅದನ್ನು ವಿರೋಧಿಸುತ್ತಿರುತ್ತೇವೆ. ಈ ಮಾತು ಬಂದಾಗೆಲ್ಲ, ಸೊಗಸಾದ ಚರ್ಚೆಯೇ ನಡೆದುಬಿಡುತ್ತದೆ. ಅದರ ಬಗ್ಗೆ ನೀವು, ಕನ್ನಡದಲ್ಲಿ, ಏಕೆ ಬರೆಯಬಾರದು?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮತ್ತೆ ಮಳೆ ಹುಯ್ಯುತಿದೆ
ಪಲ್ಲವಿ,
ಧಾರವಾಡ ಮಳ್ಯಾಗ ನೆನದಂಗಾಯ್ತು...
ಈ ರೀತಿಯ ಬರಹಗಳನ್ನ ನೀವು ತುಂಬಾ ಚೆನ್ನಾಗಿ ಬರೀತಿರಿ.
ಹಿಂಗ ಸಿಂಧು ಅನ್ನೋರು ಒಬ್ಬರು ಬರೀತಿದ್ರು... ಇತ್ತೀಚಿಗೆ ಯಾಕೋ ನಿಲ್ಲಿಸಿದ್ದಾರ.
ಉ: ಮತ್ತೆ ಮಳೆ ಹುಯ್ಯುತಿದೆ
ಚರ್ಚೆ ನಡೆಸಿ ಎಷ್ಟೇ ವಾದ ಮಾಡಿದ್ರು ಗಾದೆ ಮಾತು ಎಂದೂ ಸುಳ್ಳಾಗಲ್ಲ ಅಂತ ನಮ್ಮಜ್ಜಿ ಯಾವಗಲೂ ಹೇಳ್ತಾನೆ ಇರ್ತಾರೆ...
ಉ: ಮತ್ತೆ ಮಳೆ ಹುಯ್ಯುತಿದೆ
ನಿಮ್ಮ ಲೇಖನದಲ್ಲಿ ರೂಪಕ ಅಲಂಕಾರ(ವ್ಯಾಕರಣ ವೀಕು ತಪ್ಪಿದ್ದರೆ ಕ್ಷಮಿಸಿ)ತುಂಬಾ ಚನ್ನಾಗಿದೆ ಇದನ್ನೇ ದ್ರುಶ್ಯವಾಗಿ ಪರಿವರ್ತಿಸಿದರೆ ಅದ್ಬುತವಾದ ಕಿರುಚಿತ್ರ ಮಾಡಬಹುದು.
ಉ: ಮತ್ತೆ ಮಳೆ ಹುಯ್ಯುತಿದೆ
ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತು ಹುಟ್ಟಿರುವುದೇ ಅದಕ್ಕೆ. ರೂಪಕ ಅಲಂಕಾರ ಎಂಬುದನ್ನು ಕೇಳಿದ್ದೇನೆ, ಆದರೆ, ವ್ಯಾಖ್ಯೆ ಗೊತ್ತಿಲ್ಲ. ನನ್ನ ವ್ಯಾಕರಣವೂ ಅಷ್ಟೇ ವೀಕು. ಇದನ್ನು ಕಿರುಚಿತ್ರ ಮಾಡುತ್ತೀರಾ? ಇನ್ನಷ್ಟು ಚೆನ್ನಾಗಿ ಬರೆಯಲು ಯತ್ನಿಸುತ್ತೇನೆ. (ತಮಾಷೆಗೆ ಹೇಳಿದೆ)
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮತ್ತೆ ಮಳೆ ಹುಯ್ಯುತಿದೆ
ಸಿಂಧು ಅವರ ಬರಹಗಳನ್ನು ಓದಿಲ್ಲ. ಕೊಂಡಿ ಇದ್ದರೆ ಹಾಕಿ, ಓದುತ್ತೇನೆ. ಬರಹಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸುವುದರ ಹಿಂದೆ ಹಲವಾರು ಕಾರಣಗಳಿರುತ್ತವೆ. ಕೆಲವನ್ನು ಇಲ್ಲಿ ಹೇಳುವುದು ಕಷ್ಟ. ಒಟ್ಟಿನಲ್ಲಿ, ಒಮ್ಮೆ ಉಕ್ಕಿದ ಭಾವನೆ ಬತ್ತಿ ಹೋಗುತ್ತದೆ ಎಂದು ನಾನಂದುಕೊಂಡಿಲ್ಲ. ಹಾಗೆ ದಿಢೀರನೇ ನಿಲ್ಲಿಸಿದ ಎಲ್ಲರೂ ಮತ್ತೆ ಬರೆಯುವಂತಾಗಲಿ ಎಂದು ಆಶಿಸುತ್ತೇನೆ.
ಒಮ್ಮೆ ಧಾರವಾಡಕ್ಕೆ ಬಂದು ಮಳೆಯಲ್ಲಿ ನೆನೆಯಿರಿ. ಕವಿತೆ ತಾನೇ ತಾನಾಗಿ ಹೊರಬರುತ್ತದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮತ್ತೆ ಮಳೆ ಹುಯ್ಯುತಿದೆ
ಹೇಯ್ ಪಲ್ಲವಿ, ನಿಮ್ಮ ಒಂದೊಂದು ಲೇಖನದಲ್ಲೂ ತಂಪಾದ ಗಾಳಿ ಬೀಸುತ್ತಿರುತ್ತದೆ. ಮನಸ್ಸಿಗೆ ಹಿತವೆನಿಸುತ್ತದೆ. ನಂದೊಂದು ರಿಕ್ವೆಸ್ಟ್, ಮಳೆ ಹನಿ ಬಿದ್ದಾಗ ಆ ನೆಲದ ಪರಿಮಳದ ಬಗ್ಗೆ ಒಂಚೂರು ಬರೆತೀರಾ ಪ್ಲೀಸ್....
ಉ: ಮತ್ತೆ ಮಳೆ ಹುಯ್ಯುತಿದೆ
ಶ್ರೀದೇವಿ, ಮಳೆಯ ಮೊದಲ ಹನಿ ನೆಲಕ್ಕೆ ತಾಕಿದಾಗ ಮಾತ್ರ ಆ ಘಮ ಬಂದೀತು. ಈಗ ಮಳೆ ಬಿಟ್ಟು ಬಿಟ್ಟು ಬರುತ್ತಿದೆ. ಹೀಗಾಗಿ ಮಣ್ಣಿನ ವಾಸನೆ ಇಲ್ಲವಾಗಿದೆ. ಮತ್ತೆಂದೋ ಅದರ ನೆನಪು ಉಕ್ಕಿದಾಗ ಬರೆದೇನು.
ಈಗ ಆಷಾಢದ ಗಾಳಿಯ ಭೋರ್ಗರೆತ. ಮುಂದೆ ಬರುವುದು ಶ್ರಾವಣ. ಆ ಬಗ್ಗೆ ಬರೆದೇನು. ಜೋಕಾಲಿ, ಉಂಡೆ, ಸಡಗರ, ಜಿಟಿ ಜಿಟಿ ಮಳೆ- ಎಲ್ಲವೂ ಉಕ್ಕುತ್ತಿವೆ. ಅದರ ಬಗ್ಗೆ ಬರೆಯುವ ಆಸೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮತ್ತೆ ಮಳೆ ಹುಯ್ಯುತಿದೆ
ಪಲ್ಲು. . .ಹಂಗ ನೀ ಜರೀ ಲಂಗ ಹಾಕ್ಕೊಂಡು ಜೋಕಾಲಿ ಜೀಕಿದ್ದು ನೆನಪಿದ್ರ ಅದನ್ನೂ ಬರೀಲಾ? ಅವತ್ತ ಹೇಳಿದ್ದೀಯಲ್ಲಾ? ಜೋಕಾಲಿಯಿಂದ ಕೆಳಗ್ ಬಿದ್ದು ನಿನ್ನ ರೇಶ್ಮಿ ಲಂಗ ಹರಿದಿದ್ದು. . . ನಿನ್ನ ಫ್ರೆಂಡ್ಸ್ ಎಲ್ಲಾ ನಕ್ಕಿದ್ದು... ನೀ ಅತ್ತಿದ್ದು. . . ಬರೀಯ ಪ್ಲೀಸ್
ಉ: ಮತ್ತೆ ಮಳೆ ಹುಯ್ಯುತಿದೆ
ಶ್ರಾವಣ ಮಾಸವೇ ಮುಗಿದಾದ ಮೇಲೆ ಅದೆಂಥ ಜೋಕಾಲಿ ಜೀಕಿಯೇನು? ಬರಲಿ ಇನ್ನೊಂದು ಶ್ರಾವಣ. ಆಗ ಬರೆಯುತ್ತೇನೆ. ಅಥವಾ ಮನಸ್ಸಿನ ಜೋಕಾಲಿ ಜೀಕಿದಾಗ ಬರೆದೇನು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮತ್ತೆ ಮಳೆ ಹುಯ್ಯುತಿದೆ
ನಮಸ್ಕಾರ ಪಲ್ಲವಿ,
ನಿಮ್ಮ ಅನುಭವ ಕಥನ ಒದಿದಾಗ ಪ್ರತಿಕ್ರಿಯೆ ಸೆರಿಸದೆ ನಾನು ಹೊಗುವುದ್ದಿಲ್ಲಾ.
ಎಲ್ಲೊ ಇರುವ ನೀವು ಎಲ್ಲೊ ಇರುವ ಅಪರಿಚಿತ ಸ್ನೇಹಿತರಿಗೆ ಒಳ್ಳೆ ವಿಶಯ ಹೇಳುತ್ತೀರಿ.
ನಮ್ಮೂರಿನ ಮೆಳೆ, ಅ ಹರಿಯುವ ಹಳ್ಳ. ಎಲ್ಲ ನೆನಪು ಬ೦ತು. ಥ್ಯಾ೦ಕ್ಸ.
ನಾನು ಧಾರವಾಡದಲ್ಲಿದ್ರೆ ನಿಮ್ಮ ಸ್ನೇಹದ ಗು೦ಪಲ್ಲಿ ಸೆರುತ್ತಿದ್ದೆ. ಆಗ ನನ್ನ ಹಾಡು ಕೇಳಿ ನೀಮಗೆ ೧೦೦% ಇಷ್ಟಾ ಪಡೂತ್ತಿದ್ರಿ.
ಇಗಲು ನಾನು ಮಳೆಬ೦ದಾಗ ಕೆಲವು ಹಾಡುಗಳು ನೆನಪಾಗುತ್ತೆ. ಮು೦ಗರು ಮಳೆ ಗಣೇಶ ತರಾ ಹುಚ್ಚ೦ತೆ ರಸ್ತೆ ಯಲ್ಲಿ, ಮಳೆಯಲ್ಲಿ "ಮು೦ಗಾರು ಮಳೆಯೇ" ಹಾಡಿದ್ದು ಇನ್ನು ಮರೆತಿಲ್ಲಾ.
ಒ೦ದು ಕೋರಿಕೆ.
ನೀವೆನಾದರು ಹೊಸ ಲೇಖನ ಬರೆದಾಗ ನನಗೆ ತಿಳಿಸಿ.
anantshayan@gmail.com
Thanks Pallavi!
ಉ: ಮತ್ತೆ ಮಳೆ ಹುಯ್ಯುತಿದೆ
ಎಲ್ಲೋ ಇದ್ದರೂ ಇಲ್ಲೇ ಇರುವಂತೆ ಪ್ರತಿಕ್ರಿಯೆ ನೀಡಿರುವ ಅನಂತ ಅವರೇ,
ನೀವು ಹಾಡುತ್ತೀರಿ ಎಂಬುದೇ ಖುಷಿಯ ಸಂಗತಿ. ನಿಮಗೆ ಇಷ್ಟವಾದ ಒಂದು ಹಾಡನ್ನು ಹಾಡಿ, ಸಂಪದದಲ್ಲಿ ಅದಕ್ಕೆ ಕೊಂಡಿ ಏಕೆ ಕೊಡಬಾರದು? ಕೇಳಿ ನನ್ನ ಅಭಿಪ್ರಾಯ ತಿಳಿಸುವೆ. ಹೇಗಿದ್ದರೂ ಮಳೆ ಬರುತ್ತಿದೆ. ’ಮತ್ತೆ ಮಳೆ ಹುಯ್ಯುತಿದೆ, ಎಲ್ಲ ನೆನಪಾಗುವುದೆ?’ ಎಂದು ಯು.ಆರ್. ಅನಂತಮೂರ್ತಿ ಬರೆದ ಪದ್ಯ ನೆನಪಾಗುತ್ತಿದೆ. ಇಂತಹ ನೂರಾರು ಹಾಡುಗಳಿವೆ. ಸಿನಿಮಾ, ಭಾವಗೀತೆ- ಹೀಗೆ ಎಲ್ಲವನ್ನೂ ಮಳೆಯ ಮೋಹ ಆವರಿಸಿದೆ. ಅದು ನಿಮ್ಮನ್ನೂ ಆವರಿಸಲಿ, ನಿಮ್ಮ ಹಾಡುಗಳನ್ನು ಹೊರಹಾಕಲಿ. ನಾವೂ ಒಂದಿಷ್ಟು ಕೇಳೋಣ.
ಹಾಡುತ್ತೀರಲ್ಲವೆ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮತ್ತೆ ಮಳೆ ಹುಯ್ಯುತಿದೆ
ಮೊನ್ನೆ ಪುಷ್ಯ ಮೞೆ ತಡವಾಗಿ ಪ್ರಾರಂಭವಾದಾಗ ಈ ಕನ್ನಡಿಗರು ಮೞೆಯನ್ನು ’ಮಳೆ’ಯೆಂದು ಏಕೆ ತಪ್ಪಾಗಿ ಹೇೞುತ್ತಾರೋ ಎಂದು ಯೋಚಿಸುತ್ತಿರುವಾಗಲೇ ಮೞೆ ಜೊರಾಗಿ ಹೊಯ್ಯಲು ತೊಡಗಿತು. ನನ್ನ ಯೋಚನೆಗೆ ಸೈ ಎನ್ನುವಂತೆ. ನಾನಾಗಲೇ ನಿರ್ಧರಿಸಿದೆ ಮೞೆಯೆಂದೇ ಬರೆಯಬೇಕೆಂದು.
ಉ: ಮತ್ತೆ ಮಳೆ ಹುಯ್ಯುತಿದೆ
ಬರೆಯಿರಿ, ಬರೆಯಿರಿ. ನೀವು ಮಳೆ ಎಂದು ಬರೆದರೂ, ಮೞೆ ಎಂದು ಬರೆದರೂ ಹೆಚ್ಚಿನ ವ್ಯತ್ಯಾಸವಾಗದು ಬಿಡಿ. ಏಕೆಂದರೆ, ಮಳೆಗೆ ಏನು ಹೆಸರಿಟ್ಟರೂ ಗೊತ್ತಾಗುವುದೇ ಇಲ್ಲ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮತ್ತೆ ಮಳೆ ಹುಯ್ಯುತಿದೆ
ನಿಮ್ಮ ಬರಹ ಚೆನ್ನಾಗಿದೆ ಪಲ್ಲವಿ ಯವರೇ
ಈ ಬರಹವೆಂಬ ಮಳೆ ಎಂದಿಗೂ ನಿಲ್ಲದಿರಲಿ
ಧನ್ಯವಾದಗಳೊ೦ದಿಗೆ
ಭಾರ್ಗವ
ಉ: ಮತ್ತೆ ಮಳೆ ಹುಯ್ಯುತಿದೆ
ಹಾಗೇನೂ ಇಲ್ಲ ಭಾರ್ಗವ, ಒಮ್ಮೊಮ್ಮೆ ಚಳಿಗಾಲ, ಬೇಸಿಗೆಕಾಲ, ಬರಗಾಲವೂ ಬರ್ತಿರ್ತವೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮತ್ತೆ ಮಳೆ ಹುಯ್ಯುತಿದೆ
ಪಲ್ಲವಿ ಯವರೇ..
ಈ ಎಳೆ ಯನ್ನು ಪ್ರಯತ್ನಿಸಿ.
http://quillpad.in/kannada/
ಕನ್ನಡ ವೇ ಅಲ್ಲದೇ ಹಲವಷ್ಟು ಭಾಷೆಗಳಲ್ಲಿ ಯಾವುದೇ ನಿಯಮಗಳ ನೆರವಿಲ್ಲದೇ ಬರೆಯಬಹುದು.
ನಿಮ್ಮ ಪ್ರತಿಕ್ರಿಯೆ ತಿಳಿಸಿ
ಇಂತಿ
ಭಾರ್ಗವ
ಉ: ಮತ್ತೆ ಮಳೆ ಹುಯ್ಯುತಿದೆ
ತುಂಬ ಚೆನ್ನಾಗಿದೆ. ನನಗೆ ನಾನೇ ಒಂದು ಮೇಲ್ ಕಳಿಸಿಕೊಂಡೆ. ಯಾವುದೇ ಕಿರಿಕಿರಿ ಇಲ್ಲದೇ ಹೋಯ್ತು. ಥ್ಯಾಂಕ್ಸ್ ಭಾರ್ಗವ.
ಈ ಬಗ್ಗೆ ಸಂಪದಿಗರಿಗೆ ಒಂದು ಬರಹವನ್ನೇಕೆ ಹಾಕಬಾರದು ನೀವು? ಎಲ್ಲರಿಗೂ ಉಪಯೋಗವಾಗುತ್ತದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮತ್ತೆ ಮಳೆ ಹುಯ್ಯುತಿದೆ
ಅದೆಲ್ಲ ಸರಿ. ಬೇಸಿಗೆಕಾಲ, ಮೞೆಗಾಲ, ಚಳಿಗಾಲ. ಕೆಲವೊಮ್ಮೆ ಬಱಗಾಲ. ಆದರೆ ನಿಮ್ಮ ಮಾತಿನ ಮೞೆಗೆ ಬಱವೇಕೆ? ಇದು ನಮ್ಮ ಪ್ರಶ್ನೆ.
ಉ: ಮತ್ತೆ ಮಳೆ ಹುಯ್ಯುತಿದೆ
ಅಕ್ಷರ ಮಳೆಗೆ ಋತುಮಾನಗಳಿಲ್ಲ ಕಂದಾ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮತ್ತೆ ಮಳೆ ಹುಯ್ಯುತಿದೆ
ಅಮ್ಮ-ಕಂದ, ಚೆನ್ನಾಗಿದೀರ.
ಉ: ಮತ್ತೆ ಮಳೆ ಹುಯ್ಯುತಿದೆ
ಮಾತು ಕೇಳದ ಕಂದ
ಎಲ್ಲಾ ತಿಳಿದಿದೆಯಂದ
ಅದಕ್ಕೇ ಒಂದು ಮಾರುಲಿ
ಕಂದ ಏಕೋ ಗಲಿಬಿಲಿ
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮತ್ತೆ ಮಳೆ ಹುಯ್ಯುತಿದೆ
ಅಕ್ಷರಮೞೆಗೆ ಋತುಮಾನವಿಲ್ಲವೋ. ಋತುಮಾನದಲ್ಲಿ ಒಂದು ಕ್ರಮ (ಸೂೞ್) ಇಲ್ಲವೋ?. ಅದೊಂದು ಗೊತ್ತು ಗುಱಿಯಿಲ್ಲದ ಎರ್ರಾಬಿರ್ರಿ ಹೊಯ್ದಾಟವೋ?