ಕಣ್ಣು ನೋಡೇ ಗೌರಿ
ನಮ್ಮ ಮಕ್ಕಳು ನಮ್ಮಿಂದ ಏನನ್ನು ನಿರೀಕ್ಷಿಸುತ್ತವೆ? ಈ ಪ್ರಶ್ನೆ ಎದುರಾಗಿದ್ದು, ನನಗೆ ಮೊದಲ ಮಗು ಗೌರಿ ಹುಟ್ಟಿದಾಗ. ಆಗ ನಾನಿನ್ನೂ ಇಪ್ಪತ್ತೆರಡು ವರ್ಷದ ಹುಡುಗಿ. ಮಗುವನ್ನು ಎತ್ತಿಕೊಳ್ಳಲು ಸಹ ಬರುತ್ತಿದ್ದಿಲ್ಲ. ಆದರೆ ಮಗು ಮುದ್ದಾಗಿತ್ತು. ಕೆಂಪಗಿತ್ತು. ದಪ್ಪವಾಗಿತ್ತು. ಇಂಥ ಮಗುವನ್ನು ಸಂಭಾಳಿಸಲು ಸಾಧ್ಯವೆ ಎಂದು ಎಷ್ಟೋ ಸಾರಿ ಅಳುಕಾಗುತ್ತಿತ್ತು.
ಆದರೆ ಪ್ರೀತಿ ಎಲ್ಲವನ್ನೂ ಕಲಿಸುತ್ತದೆ. ನನ್ನ ಮಗು ಎಂಬ ಮಮತೆಯೇ ಸಾಕು, ಗೊತ್ತಿರದ ಎಷ್ಟೋ ವಿಷಯಗಳನ್ನು ಗೊತ್ತು ಮಾಡಿಸಿಬಿಡುತ್ತದೆ. ಕ್ರಮೇಣ ನಾನು ಮಗುವನ್ನು ನಾಜೂಕಾಗಿ ಎತ್ತಿಕೊಳ್ಳುವುದನ್ನು, ಹಾಲೂಡಿಸುವುದನ್ನು, ಅದರ ಅವಶ್ಯಕತೆಯನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯುತ್ತಾ ಹೋದೆ. ಹಾಸಿಗೆ ಒದ್ದೆಯಾದರೆ ಮಗುವಿಗೆ ಕಿರಿಕಿರಿಯಾಗುತ್ತದೆ ಎಂಬುದನ್ನು ಗಮನಿಸಿದೆ. ಬೆಚ್ಚಗಿನ ಉಡುಪು, ಹಾಸಿಗೆ ಇದ್ದರೆ, ಹೊಟ್ಟೆ ತುಂಬಿದ್ದರೆ ಮಗು ಕಿರಿಕಿರಿ ಮಾಡದೇ ಆಟವಾಡುತ್ತದೆ ಅಥವಾ ನಿದ್ದೆ ಮಾಡುತ್ತದೆ ಎಂಬುದು ಗೊತ್ತಾಯಿತು. ಗೊತ್ತಿರದ್ದನ್ನು ನನ್ನ ತಾಯಿಯಿಂದ ಕೇಳಿ ತಿಳಿದುಕೊಂಡೆ.
ಆದರೆ ಮಗು ಎಲ್ಲಕ್ಕಿಂತ ಇಷ್ಟಪಡುವುದು ತಾಯಿಯ ಪ್ರೀತಿಯನ್ನು ಎಂಬುದು ಕ್ರಮೇಣ ಅರ್ಥವಾಯಿತು. ಎತ್ತಿಕೊಂಡು ಮುದ್ದುಮಾಡುವುದು, ಲಲ್ಲೆ ದನಿಯಲ್ಲಿ ಮಾತನಾಡುವುದನ್ನು ಮಗು ಇಷ್ಟಪಡುತ್ತದೆ ಎಂಬುದು ತಿಳಿಯಿತು. ಗೌರಿ ಹುಟ್ಟಿದ ನಂತರ ನಿರಂತರವಾಗಿ ನಾಲ್ಕೈದು ತಾಸು ನಿದ್ದೆ ಮಾಡುವುದೂ ಸಾಧ್ಯವಾಗಲಿಲ್ಲ. ಪ್ರತಿ ಎರಡು ಗಂಟೆಗೆ ಹಾಲೂಡಿಸಲೇಬೇಕಿತ್ತು. ಮೊದಮೊದಲು ಇದು ನನಗೆ ಕಿರಿಕಿರಿ ಮಾಡಿದರೂ, ಕ್ರಮೇಣ ಅದೂ ಅಭ್ಯಾಸವಾಯಿತು.
ಇದೇ ಸಮಯದಲ್ಲಿ, ಅಂದರೆ, ಗೌರಿ ಹುಟ್ಟಿದ ಒಂದೆರಡು ತಿಂಗಳಲ್ಲಿ ನನ್ನ ಅಕ್ಕ ಕೂಡ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಆದರೆ, ನಮ್ಮ ಗೌರಿ ಐದಾರು ತಿಂಗಳಾದರೂ ನಮ್ಮ ಕಣ್ಣುಗಳನ್ನು ದಿಟ್ಟಿಸಿ ನೋಡುತ್ತಿರಲಿಲ್ಲ. ಆಕೆಯ ಕತ್ತು ನಿಲ್ಲಲಿಲ್ಲ. ಕುಡಿಸಿದ ಹಾಲಿನ ಸ್ವಲ್ಪ ಭಾಗ ಅನಾಯಾಸವಾಗಿ ಹೊರಬಂದುಬಿಡುತ್ತಿತ್ತು. ಆದರೆ, ಅಕ್ಕನ ಮಗಳಲ್ಲಿ ಇದ್ಯಾವ ಸಮಸ್ಯೆಯೂ ಇರಲಿಲ್ಲ. ಆ ಮಗು ಹುಟ್ಟಿದ ಎರಡೇ ತಿಂಗಳಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ ನಗುತ್ತಿತ್ತು. ಕೈಯಲ್ಲಿ ಆಟಿಕೆ ಕೊಟ್ಟರೆ ಹಿಡಿದುಕೊಳ್ಳುತ್ತಿತ್ತು. ಆದರೆ, ಗೌರಿ ಅದ್ಯಾವುದನ್ನೂ ಮಾಡಲಿಲ್ಲ.
ಎಷ್ಟೊಂದು ಸಾರಿ ಗೌರಿಯೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ನೀನು ಯಾಕೆ ನಮ್ಮ ಕಣ್ಣುಗಳನ್ನು ನೋಡುವುದಿಲ್ಲ ಎಂದು ಆಕೆ ನಾಲ್ಕೈದು ತಿಂಗಳದವಳಾಗಿದ್ದಾಗಿಂದಲೇ ಕೇಳುತ್ತ ಬಂದಿದ್ದೇನೆ. ಮೊದಲ ಬಾರಿ ಈ ರೀತಿ ಕೇಳಿದಾಗ, ಅದು ತನ್ನ ಗಮನಕ್ಕೆ ಬಂದಿಲ್ಲ ಎನ್ನುವಂತೆ ಗೌರಿ ಸುಮ್ಮನಿದ್ದಳು. ಈ ಆರು ವರ್ಷಗಳಲ್ಲಿ ಸಾವಿರಾರು ಸಲ ಈ ಪ್ರಶ್ನೆ ಕೇಳಿದ್ದೇನೆ. ಪ್ರೀತಿಯಿಂದ, ಬೇಸರದಿಂದ, ನೋವಿನಿಂದ, ತಮಾಷೆಯಿಂದ ಕೇಳಿದ್ದೇನೆ.
ನನ್ನ ಬದುಕಿನ ಬಲು ದೊಡ್ಡ ಪಾಠ ಈ ಪ್ರಶ್ನೆಯಿಂದ ಶುರುವಾಯಿತು. ಇವತ್ತಿಗೂ ಉತ್ತರ ಹುಡುಕುತ್ತಲೇ ಇದ್ದೇನೆ. ಒಂದಿಷ್ಟು ಗೊತ್ತಾಗಿದೆ. ಆದರೆ, ಬಹಳಷ್ಟು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ.
- ರೇಖಾ ಚಾಮರಾಜ

- Login or register to post comments
- 254 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಕಣ್ಣು ನೋಡೇ ಗೌರಿ
ರೇಖಾ,
ದೀಪಾ ಹೇಳಿದ್ದು ಸರಿ. ವಿಕಲ ಚೇತನ ಅನ್ನೊ ಪದದ ಬಳಕೆ ಬೇಡ. ಅಲ್ಲದೆ ನಿಮ್ಮ ಪುಟ್ಟ ಗೌರಕ್ಕ(ಗೌರಿ)ನಂಥ ಮಕ್ಕಳನ್ನು ವಿಪರೀತ ಕರುಣೆಯಿಂದ ನೋಡಿದರೆ ಆ ಕಂದಮ್ಮಗಳಲ್ಲಿ ಕೀಳರಿಮೆ, ಸದಾ ಬೇರೊಬ್ಬರ ಸಹಾಯದ ನಿರೀಕ್ಷೆಯ ಭಾವ ಬೆಳೆಯುವ ಅಪಾಯವೂ ಇದೆ ಅನ್ನೋದು ನನ್ನ ಅಭಿಪ್ರಾಯ. ಹೆಚ್ಚಿನ ಕಾಳಜಿಯ ಜೊತೆಗೆ ಸಹಜ ಪ್ರೀತಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬಹುದು. ಪುಟ್ಟ ಗೌರಕ್ಕನಿಗೆ ನನ್ನ ಮುತ್ತಿನ ಮಳೆ...
ಜಯಲಕ್ಷ್ಮೀ.ಪಾಟೀಲ್.
ಉ: ಕಣ್ಣು ನೋಡೇ ಗೌರಿ
ಅದಕ್ಕೆಂದೇ ಜಯಲಕ್ಷ್ಮೀ ಅವರೇ, ವಿಕಲ ಚೇತನ ಪದದ ಬದಲಾಗಿ ವಿಶಿಷ್ಠ ಚೇತನ ಎಂಬ ಶಬ್ದ ಬಳಸಿ, ನನ್ನ ಮುಂಚಿನ ಬರಹಗಳನ್ನು ತಿದ್ದಿದ್ದೇನೆ. ದಯವಿಟ್ಟು ಗಮನಿಸಿ. ಬ್ಲಾಗ್‌ನ ನನ್ನ ಬರವಣಿಗೆ ನನ್ನ ಆತ್ಮತೃಪ್ತಿಗೆ ಹಾಗೂ ಇಂತಹ ಮಕ್ಕಳನ್ನು ಹೊಂದಿದವರ ಜೊತೆ ಒಡನಾಡಲು ಹಾಗೂ ಬಲ್ಲವರ ಸಲಹೆ ಪಡೆಯಲು ಮಾತ್ರ. ಗೌರಿಯನ್ನು ನಾವು ಎಂದಿಗೂ ಕೀಳರಿಮೆ ಹುಟ್ಟುವಂತೆ ಮುದ್ದು ಮಾಡಿಲ್ಲ. ಆಕೆಯದು ಸಾಮಾನ್ಯ ಮಕ್ಕಳಿಗಿಂತ ಹೆಚ್ಚಿನ ಕಲಿಕೆ. ಅದಕ್ಕಾಗಿ ಇತರ ಮಕ್ಕಳಿಗಿಂತ ಆಕೆ ಹೆಚ್ಚು ಶ್ರಮ ಪಡುತ್ತಾಳೆ. ಆಕೆಯ ಶಾಲೆ (ಅಂದರೆ, ಮನೆಯಲ್ಲಿರುವ ಕಲಿಕೆ) ಅವಧಿ ಕೂಡ ದೊಡ್ಡ ಪ್ರಮಾಣದ್ದೇ.
ಗೌರಿಗೆ ನಿಮ್ಮ ಅಕ್ಕರೆಯ ಸವಿಯನ್ನು ತಿಳಿಸಿದ್ದೇವೆ. ನಿಮ್ಮ ಪ್ರೀತಿಯ ಬರಹ ನನ್ನ ಮನಸ್ಸು ತುಂಬಿದೆ.
- ರೇಖಾ ಚಾಮರಾಜ
ಉ: ಕಣ್ಣು ನೋಡೇ ಗೌರಿ
ರೇಖಾ,
ನಿಮಗೆ ನನ್ನ ಮಾತುಗಳು ನೋಯಿಸಿವೆ ಎಂದೆನಿಸುತ್ತಿದೆ ನಿಮ್ಮ ಮಾತು ಓದಿ. ಖಂಡಿತ ನಿಮ್ಮನ್ನು ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ. ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ತುಂಬಾ ಜನ ಮಗುವಿನೆದುರಿಗೇ "ಅಯ್ಯೋ ಪಾಪ, ಹೀಗಾಗಬಾರದಿತ್ತು.." ಎನ್ನುವದನ್ನು ಕೇಳಿದ್ದೇನೆ. ಅವರಾದರೂ ಉದ್ದೇಶ ಪೂರ್ವಕ ಹಾಗೆಂದಿರುವುದ್ದಿಲ್ಲ. ಅಂಥ ಮಗುವಿನ ಬಗ್ಗೆ ಹಾಗನಿಸಿಯೇ ಹೇಳಿರುತ್ತಾರೆ.ಆದರೆ ಅದನ್ನು ಮಗುವಿನೆದುರು ಹೇಳಬಾರದು ಎಂದು ಗೊತ್ತಿರುವುದಿಲ್ಲ ಅಷ್ಟೆ. ಅಂಥವರಿಗಾಗಿ ಮತ್ತು ವಿಶೇಷ ಕಾಳಜಿ ಬೇಕಾದಂಥ ಮಗುವನ್ನು ಪಡೆದ 'ಕೆಲವು' ಜನ ಹೆತ್ತವರು ನಿಜಕ್ಕೂ ಮಗುವಿನೆಡೆ ಅತಿಯಾದ ಕರುಣೆ ಅಥವಾ "ಅಯ್ಯೊ ಇದೊಂದು ಜನ್ಮಕ್ಕೆ ಜೋಡು!"(ಯಾವ ತಂದೆ ತಾಯಿಗಳೂ ಹೀಗನ್ನುವುದಿಲ್ಲ ಅನ್ನಬೇಡಿ. ಅಂಥಾ ಜನರೂ ಇದ್ದಾರೆ) ಅನ್ನುವವರಿಗಾಗಿ ನಾನು ಹಾಗೆ ಹೇಳಿದ್ದು.
ನಿಮ್ಮ ಬರಹ ನಿಮ್ಮ ಆತ್ಮತೃಪ್ತಿಗೆ ಅನ್ನೋದು ನಾ ಬಲ್ಲೆ(ಅದನ್ನು ನೀವು ಮುಂಚೆಯೆ ಹೇಳಿದ್ದೀರಿ).ಮತ್ತು "ಇಂತಹ ಮಕ್ಕಳನ್ನು ಹೊಂದಿದವರ ಜೊತೆ ಒಡನಾಡಲು ಹಾಗೂ ಬಲ್ಲವರ ಸಲಹ ಪಡೆಯಲು ಮಾತ್ರ " ನಿಮ್ಮ ಬರಹ ಎನ್ನುವುದಾದರೆ... ನಿಜ ನನಗೆ ಅಂಥ ಮಗುವಿಲ್ಲ. ಹೀಗಾಗಿ ನನಗೆ ನಿಮ್ಮ ಜೊತೆ... ಆದರೆ ನನ್ನ ಬಾಲ್ಯ ಗೆಳತಿ ದಾಕ್ಷಾಯಿಣಿಯ ಮಗು 'ಮಧು' ಹುಟ್ಟಿದ್ದು ವಿಕಲಾಂಗತೆಯೊಂದಿಗೆ. ಆ ಪುಟ್ಟ ಜೀವದ ಕೀಲು ಕೀಲುಗಳನ್ನೂ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಲು ಆ ದಂಪತಿಗಳು ಶ್ರಮಿಸಿದ್ದಕ್ಕೆ ಈಗ ಮಧು ಆಧಾರದೊಂದಿಗೆ ಎದ್ದು ನಿಲ್ಲುವ,ಕೈಯಲ್ಲಿ ಸಣ್ಣಪುಟ್ಟ ಸಾಮಾನುಗಳನ್ನು ಹಿಡಿದುಕೊಳ್ಳುವ ಮಟ್ಟಿಗೆ ಸರಿ ಹೊಂದಿದ್ದಾಳೆ. ದಿನಾಲೂ ಫಿಸಿಯೊಥೆರಪಿ ವೈದ್ಯರು ಮನೆಗೆ ಬಂದು ಅವಳಿಗೆ ವ್ಯಾಯಾಮ ಮಾಡಿಸುತ್ತಾರೆ. ಈ ೬-೮ ತಿಂಗಳಿದಷ್ಟೆ ದಾಕ್ಷಾಯಿಣಿ ತನಗಾಗಿ ೩-೪ ಗಂಟೆ ಸಮಯವನ್ನ ಹೊರ ಬಂದು ತಮ್ಮದೆ ಶಾಲೆಯ ಉಸ್ತುವಾರಿಯನ್ನು ಮಾಡುತ್ತಿದ್ದಾಳೆ, ಮತ್ತು ಆಗಲೂ ಮಧು ಅವಳ ಜೊತೆಗಿರುತ್ತಾಳೆ. ದಾಕ್ಷಯಿಣಿಗೆ ಮಧುಗಿಂತ ಚಿಕ್ಕವರಾದ ಇನ್ನೂ ಇಬ್ಬರು ಮಕ್ಕಳಿದ್ದಾರೆ! ಮಧು ನನ್ನ ಅತಿ ಮೆಚ್ಚಿನ ಮಗುಗಳಲ್ಲೊಂದು. ನನ್ನ ಸೋದರತ್ತೆಯ ಮೊದಲ ಮಗ 'ಉಮೇಶ' ವಿಕಲಾಂಗ ಮತ್ತು ಬುದ್ದಿಮಾಂದ್ಯತೆಯುಳ್ಳವನಾಗಿದ್ದ. ನಮಸ್ಕಾರ.
ಜಯಲಕ್ಷ್ಮೀ.ಪಾಟೀಲ್.