ಜನರಿಗೆ ಬೇಡವಾದ ಬಡಾಯಿದಾಸ
ವಾಟಾಳ್ ನಾಗರಾಜ್ ಮತ್ತೊಮ್ಮೆ ಹೀನಾಯ ಸೋಲು ಕಂಡಿದ್ದಾರೆ.
ಈ ವ್ಯಕ್ತಿಯ ಬಗ್ಗೆ ಒಂದಾನೊಂದು ಸಮಯದಲ್ಲಿ ಗೌರವವಿತ್ತು. ಅವರ ಚಳುವಳಿಗಳು, ಘೋಷಣೆಗಳು ರೋಮಾಂಚನ ಹುಟ್ಟಿಸುತ್ತಿದ್ದವು. ಆಗ ನಾನಿನ್ನೂ ಹೈಸ್ಕೂಲಲ್ಲಿ ಓದುತ್ತಿದ್ದೆ. ಪತ್ರಿಕೆಯಲ್ಲಿ ತಗ್ಗು ಬಿದ್ದಿರುವ ಕೆನ್ನೆಯ, ಉಬ್ಬುಹಲ್ಲುಗಳ ವ್ಯಕ್ತಿಯ ಘೋಷಣೆಗಳನ್ನು ಓದಿ ಮೈ ನವಿರೇಳುತ್ತಿತ್ತು. ಮುಂದೆ ಕಾಲೇಜಿಗೆ ಬಂದಾಗ ಆ ಅಭಿಮಾನ ಇನ್ನಷ್ಟು ಜಾಗೃತವಾಯಿತು. ವಾಟಾಳ್ ನಾಗರಾಜ್ ಹುಟ್ಟಿದ್ದೇ ಕನ್ನಡ ಮತ್ತು ಕರ್ನಾಟಕದ ಹಿತರಕ್ಷಣೆಗೆ ಅಂತ ಮಾತಾಡಿಕೊಳ್ಳುತ್ತಿದ್ದೆವು.
ಮುಂದೆ ಆ ಭಾವನೆ ಕುಸಿಯತೊಡಗಿತು. ಬೇರೆ ಬೇರೆ ವೃತ್ತಿಗಳಲ್ಲಿ ಏಳೆಂಟು ವರ್ಷ ಸರ್ವೀಸ್ ಮಾಡಿ, ಕೊನೆಗೆ ಪತ್ರಿಕೋದ್ಯಮಕ್ಕೆ ಬಂದಾಗ, ವಾಟಾಳ್ ಅಸಲಿಯತ್ತು ಸ್ಪಷ್ಟವಾಗಿ ಕಾಣಿಸತೊಡಗಿತು. ಪತ್ರಿಕೋದ್ಯಮದಲ್ಲಿ ಎರಡು ರೀತಿಯ ದುರಂತಗಳಿರುತ್ತವೆ. ಕೆಲವೊಂದು ವಿಷಯಗಳ ಬಗ್ಗೆ ತುಂಬ ಸ್ಪಷ್ಟವಾದ ಮಾಹಿತಿ ಇರುತ್ತದೆ. ಆದರೆ, ಅದನ್ನು ಬರೆಯಲು ಅಥವಾ ಪ್ರಸಾರ ಮಾಡಲು ಆಗುವುದಿಲ್ಲ. ಏಕೆಂದರೆ, ಬೇಕಾದ ಸಾಕ್ಷ್ಯಾಧಾರ ಸಿಗುವುದಿಲ್ಲ. ಅಂತಹ ಮಾಹಿತಿಗಳು, ನಮ್ಮ ನಮ್ಮ ಖಾಸಗಿ ಮಾತುಕತೆಯಲ್ಲಿಯೇ ಉಳಿದುಬಿಡುತ್ತವೆ. ಇನ್ನೊಂದಿಷ್ಟು ವಿಷಯಗಳಿರುತ್ತವೆ. ಅದರ ಬಗ್ಗೆ ಅನಗತ್ಯವಾಗಿ ಬರೆಯುವ, ವಿಸ್ತರಿಸುವ, ವೈಭವೀಕರಿಸುವ ಮನಸ್ಸಿರುವುದಿಲ್ಲ. ಉದಾಹರಣೆಗೆ ಹೇಳುವುದಾದರೆ, ಉಡುಪಿ ಶಾಸಕ ಪದ್ಮಪ್ರಿಯ ಅವರ ಸಾವು.
ಆದರೆ, ಮಾಧ್ಯಮದ ಸ್ಪರ್ಧೆಯಲ್ಲಿ ವೈಯಕ್ತಿಕ ಅನಿಸಿಕೆಗಳು ವೈಯಕ್ತಿಕವಾಗಿಯೇ ಉಳಿದುಬಿಡುತ್ತವೆ. ಇನ್ನೊಂದು ಚಾನೆಲ್‌ನವರು ಕೊಡುತ್ತಾರೆ ಎಂದು ನಾವು, ಅವರೆಲ್ಲಿ ಕೊಟ್ಟುಬಿಡುತ್ತಾರೋ ಎಂದು ಅವರು ಆತುರಾತುರವಾಗಿ ಸುದ್ದಿ ಪ್ರಸಾರವಾಗುತ್ತದೆ. ಅದೊಂಥರಾ ಸುಳಿಯಲ್ಲಿ ಸಿಕ್ಕ ಬಡ ದೋಣಿಯ ರೀತಿ.
ಆದರೆ, ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿರುವ ವ್ಯಕ್ತಿ ಸಂಯಮ ವಹಿಸಿದರೆ, ಕೆರಳಿಸುವ ಹಾಗೂ ವೈಭವೀಕರಿಸುವ ಸುದ್ದಿಗಳಿಗೆ ಖಂಡಿತ ಕತ್ತರಿ ಹಾಕಬಹುದು. ಪೂರ್ತಿ ನಿವಾರಿಸಲಾಗದಿದ್ದರೂ, ಅದರ ತೀವ್ರತೆಯನ್ನು ಖಂಡಿತ ಕಡಿಮೆ ಮಾಡಬಹುದು. ಆದರೆ, ಅಂತಹ ವಿವೇಕ ಇರುವವರ ಸಂಖ್ಯೆ ತುಂಬ ಕಡಿಮೆ. ವೈಭವೀಕರಿಸುವುದೇ ಮಾಧ್ಯಮದ ಮೂಲ ಉದ್ದೇಶ ಎಂಬಂತೆ ಬಹುತೇಕ ಜನ ವರ್ತಿಸುತ್ತಿರುವಾಗ, ಇಂತಹ ವಿವೇಕವಂತರು ಕಣ್ಣಿಗೆ ಬೀಳುವುದೂ ಕಡಿಮೆ.
ಇಂತಹ ಪರಿಸ್ಥಿತಿಯಲ್ಲಿ, ಕತ್ತೆ, ಎಮ್ಮೆ ಹತ್ತಿ ಪೋಸು ಕೊಡುವ, ಖಾಲಿ ಬಿಂದಿಗೆ ಪ್ರದರ್ಶಿಸಿ ಫೋಟೊಕ್ಕೆ ಹಲ್ಲು ತೋರಿಸುವ ವಾಟಾಳ್ ನಾಗರಾಜ್ ಅವರ ಬಾಲಿಶ ಪ್ರದರ್ಶನಗಳಿಗೆ ಮಾಧ್ಯಮ ಏಕೆ ಅಷ್ಟೊಂದು ಆದ್ಯತೆ ನೀಡುತ್ತದೆ? ನಾನು ಕೆಲಸ ಮಾಡಿದ ಬಹುತೇಕ ಸುದ್ದಿ ಸಂಸ್ಥೆಗಳಲ್ಲಿ ಸಂಬಂಧಿಸಿದ ಹಿರಿಯರಿಗೆ ಈ ವ್ಯಕ್ತಿಗೆ ಏಕೆ ಅನಗತ್ಯ ಆದ್ಯತೆ ಎಂದು ಕೇಳಿದ್ದೇನೆ. ನನ್ನ ಮಟ್ಟದಲ್ಲಿ ವಿರೋಧಿಸಿದ್ದೇನೆ. ಆ ವ್ಯಕ್ತಿಯದು ಬೂಟಾಟಿಕೆ ಮಾತ್ರ. ಏಕೆ ಪ್ರಚಾರ ಕೊಟ್ಟು ಓದುಗರ ದಾರಿ ತಪ್ಪಿಸುತ್ತೀರಿ ಎಂದು ವಾದಿಸಿದ್ದೇನೆ. ಆದರೆ, ಹಿರಿಯ ಪತ್ರಕರ್ತರಿಗೆ ವಾಟಾಳ್ ಬಗ್ಗೆ ಎಂಥದೋ ಭಯ. ಪ್ರಚಾರ ಸಿಗದಿದ್ದರೆ, ಆ ವ್ಯಕ್ತಿ ಕಚೇರಿಗೇ ಬಂದು ಗದ್ದಲ ಮಾಡಿಯಾನು ಎಂಬ ಆತಂಕ. ಹೋಗಲಿ ಬಿಡಿ, ಒಂದು ಫೊಟೊ, ಕ್ಯಾಪ್ಷನ್ ಹಾಕಿ ಕೈತೊಳೆದುಕೊಳ್ಳೋಣ ಎಂದು ಹೇಳುವುದು ಸಾಮಾನ್ಯ.
ಕನ್ನಡಕ್ಕಾಗಿ ಮಾಡಿದ ಕೆಲಸಕ್ಕಿಂತ, ಹೀಗೆ ಫೊಟೊ ಮೇಲೆ ಫೊಟೊಗಳು ಬಂದು ವಾಟಾಳ್ ಕನ್ನಡ ಹೋರಾಟಗಾರ ಎಂಬ ಹೆಸರನ್ನು ಸಂಪಾದಿಸಿದರು. ಪ್ರಾರಂಭದಲ್ಲಿ ಅವರು ಕನ್ನಡಕ್ಕಾಗಿ ಮಾಡಿದ ಹೋರಾಟ ಕುರಿತು ನನಗೆ ಅಪಾರ ಗೌರವವಿದೆ. ಆದರೆ, ಅದು ತುಂಬ ದಿನ ಉಳಿಯದೇ, ನಕಲಿ ಶ್ಯಾಮನಂತೆ ವರ್ತಿಸತೊಡಗಿದ್ದರ ಬಗ್ಗೆ ಅಷ್ಟೇ ತಿರಸ್ಕಾರವಿದೆ.
ಈಗ ಜನ ಕೂಡ ಅವರ ಅಸಲಿಯತ್ತು ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ. ಅದಕ್ಕೆಂದೇ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಚುನಾವಣೆಗಳಲ್ಲಿ ಠೇವಣಿ ಕಳೆದುಕೊಳ್ಳುವಂತೆ ಮರ್ಯಾದೆ ಮಾಡಿದ್ದಾರೆ. ಇನ್ನಾದರೂ ಬಡಾಯಿದಾಸ ಮಾತಿಗಿಂತ ಹೆಚ್ಚಾಗಿ ಕೃತಿಯ ಮೂಲಕ ಕನ್ನಡ ಸೇವೆ ಮಾಡುವಂತಾಗಲಿ. ಚಿಲ್ಲರೆ ತಂತ್ರಗಳ ಮೂಲಕ ಪ್ರಚಾರ ಗಿಟ್ಟಿಸುವ ಕೀಳು ಹವ್ಯಾಸ ಬಿಟ್ಟು, ಗಂಭೀರವಾಗಿ ಕನ್ನಡ ಬೆಳೆಸುವ ಕೆಲಸ ಮಾಡಲಿ.
- ಚಾಮರಾಜ ಸವಡಿ
http://chamarajsavadi.blogspot.com

- Login or register to post comments
- 274 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಜನರಿಗೆ ಬೇಡವಾದ ಬಡಾಯಿದಾಸ
ಬೇಡದ ಸುದ್ದಿಗಳಿಗೆ ಅತಿ ಗಮನ ಕೊಡಬಾರದೆ೦ಬ ನಿಮ್ಮ ಕಳಕಳಿ ಹಿಡಿಸಿತು. ಆದರೆ ಹಾಗೆ ಮಾಡಲಾಗದ ನಿಮ್ಮ ಅಸಹಾಯಕತೆ ಅರಿವಿಗೆ ಬರುತ್ತದೆ. ಸಾಮಾಜಿಕ ಕಳಕಳಿ ಸಾಕು ಸಮಾಜಕ್ಕೆ ಏನೋ ಒಳ್ಳೆಯದಾಗೇ ಆಗುತ್ತದೆ. ನಿಮಗೆ ಒಳ್ಳೆಯದಾಗಲಿ.
ಉ: ಜನರಿಗೆ ಬೇಡವಾದ ಬಡಾಯಿದಾಸ
ಬಹುಶಃ ಪ್ರತಿಯೊಬ್ಬರೂ ಒಂದಲ್ಲ ಒಂದು ಮಿತಿಯಲ್ಲಿಯೇ ಕೆಲಸ ಮಾಡುತ್ತಾರೆ ಅನಿಸುತ್ತದೆ ದೀಪಾ. ಆದರೂ, ನಮ್ಮ ಮಿತಿ ಮೀರುವ, ಅಂದರೆ, ಕೊಂಚ ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವ ಸಂದರ್ಭಗಳು ಇದ್ದೇ ಇರುತ್ತವೆ. ರಾಜಕಾರಣಿಗಳ ಹಿಂದೆ ಓಡಾಡುತ್ತ ಇರುವ ಬೇಕಾದಷ್ಟು ಪತ್ರಕರ್ತರು ಇದ್ದಾರೆ. ನಿತ್ಯದ ಬೆಳವಣಿಗೆಗಳನ್ನು ಬಿಟ್ಟರೆ ಬೇರೆ ಏನನ್ನೂ ಅವರು ಬರೆಯಲಾರರು. ಹೊಸ ಹೊಳಹುಗಳನ್ನು ಪತ್ತೆ ಹಚ್ಚಲಾರರು. ಹೀಗಾಗಿ ವಾಟಾಳ್ ನಾಗರಾಜ್‌ರಂಥ ಪ್ರಚಾರಪ್ರಿಯರು ಪದೆ ಪದೆ ಕಾಣಿಸಿಕೊಳ್ಳುತ್ತಾರೆ. ಇದರಲ್ಲಿ ಪತ್ರಕರ್ತರ ತಪ್ಪೇ ಸಾಕಷ್ಟಿದೆ.
ಆದರೆ, ಜನರಿಗೆ ತಮ್ಮದೇ ಆದ ವಿವೇಚನೆ ಇರುತ್ತದೆ. ಎಲ್ಲ ಸಮಯದಲ್ಲಿಯೂ ಮಾಧ್ಯಮದ ದೃಷ್ಟಿಕೋನವನ್ನು ಅವರು ಒಪ್ಪುವುದಿಲ್ಲ. ಆ ವ್ಯಕ್ತಿ ಸತತ ಎರಡು ಚುನಾವಣೆಗಳಲ್ಲಿ ಠೇವಣಿ ಕಳೆದುಕೊಂಡಿದ್ದೇ ಇದಕ್ಕೆ ಸಾಕ್ಷಿ.
- ಚಾಮರಾಜ ಸವಡಿ
ಉ: ಜನರಿಗೆ ಬೇಡವಾದ ಬಡಾಯಿದಾಸ
ಹೀಗೆ ಒಳ್ಳೆ ಲೇಖನಗಳನ್ನು ಬರೆಯುತ್ತಿರಿ. ನಿಮ್ಮ ಸಾಮಜಿಕ ಕಳವಳಿಗೆ ಒಳ್ಳೆಯದಾಗಲಿ.
ಇತ್ತೀಚಿಗೆ ಟಿವಿಯೊಂದರಲ್ಲಿ ಅವರ ಬಗ್ಗೆ ವರದಿಯೊಂದನ್ನು ಪ್ರಸಾರ ಮಾಡಿತ್ತು , ಅವರು ೨೦ ವರ್ಷ ಒಂದೇ ಮನೆಯಲ್ಲಿದ್ದು ಅದಕ್ಕೆ ರು. ೧೦೦೦ ಮಾತ್ರ ಕೊಡುತ್ತಿದ್ದರು. ಮನೆ ಮಾಲೀಕರು ಅವರನ್ನು ಬಿಡಿಸಲು ಕೋರ್ಟ್ಗೆ ಹೋದ್ರು, ೨ನೇ ಬಾರಿ ಮನೆ ಮಾಲೀಕರ ಪರಿಶ್ರಮಕ್ಕೆ ಫಲ ದೊರೆಯಿತು.ನಾಲ್ಕು ಜನಕ್ಕೆ ಮಾದರಿಯಾಗಬೇಕಿದ್ದ ಅವರೇ ಈ ರೀತಿ ವರ್ತಿಸಿದ್ದಾರೆ.
ಸಾಧ್ಯವಾದರೆ ಪರಮಾಣು ಒಪ್ಪಂದ, ಲೋಕಾಯುಕ್ತದ ಬಗ್ಗೆ ಉಪಯುಕ್ತ ಮಾಹಿತಿ ನೀಡಿ.
ಉ: ಜನರಿಗೆ ಬೇಡವಾದ ಬಡಾಯಿದಾಸ
ನಿಮ್ಮ ಕಳಕಳಿಗೆ ಧನ್ಯವಾದಗಳು ರಾಜೇಶ್ವರಿಯವರೇ. ಲೋಕಾಯುಕ್ತರ ಮುಖ್ಯ ಕ್ರಮವೊಂದರ ಬಗ್ಗೆ ಶೀಘ್ರ ಬರೆಯಲಿದ್ದೇನೆ. ಒಂದೆರಡು ದಾಖಲೆಗಳನ್ನು ಸ್ಕ್ಯಾನ್ ಮಾಡಬೇಕಿದೆ. ನಿರೀಕ್ಷಿಸಿ.
- ಚಾಮರಾಜ ಸವಡಿ
ಉ: ಜನರಿಗೆ ಬೇಡವಾದ ಬಡಾಯಿದಾಸ
"ನಾಲ್ಕು ಜನಕ್ಕೆ ಮಾದರಿಯಾಗಬೇಕಿದ್ದ ಅವರೇ ಈ ರೀತಿ ವರ್ತಿಸಿದ್ದಾರೆ."
ಇದರರ್ಥ ಜನ ಸಾಮಾನ್ಯರಿಗೆ ಮಾದರಿಯಾಗಿರಬೇಕಾದ ನಾಯಕರೆ ಈ ರೀತಿ ಮಾಡುತ್ತಾರೆ ಎಂದು. ಈ ವಿಷಯ ಇವರಿಗೆ ಅನ್ವಯವಾಗುತ್ತೆ , ಆದ್ರೆ ನಮ್ಮಲ್ಲಿ ಬಹುತೇಕ ನಾಯಕರ ವರ್ತನೆಗಳು ಖಂಡನೀಯವಾಗಿರುತ್ತೆ.