ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪಕ್ಷಿ ಸಂಕುಲ ಪರಿಸರ ಆರೋಗ್ಯಕ್ಕೆ ಕೈಗನ್ನಡಿ

ಧಾರವಾಡದಲ್ಲಿ ಇತ್ತೀಚೆಗೆ ನಾಲ್ಕಾರು ಕಡೆಗಳಲ್ಲಿ ‘ಹೈ-ಮಾಸ್ಟ್’ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಅತ್ಯಂತ ಎತ್ತರದಲ್ಲಿ ತಲೆ ಎತ್ತಿ ನಾಲ್ಕೂ ದಿಕ್ಕುಗಳಲ್ಲಿ ಪ್ರಖರ ಬೆಳಕು ಬೀರುವ ಈ ಹೈ-ಮಾಸ್ಟ್ ಗಳು ಪಕ್ಷಿಗಳ ದೈನಂದಿನ ಬದುಕಿಗೆ- ವಿಷೇಶವಾಗಿ ರಾತ್ರಿಯ ವೇಳೆ ಪ್ರಾಣ ಘಾತಕವಾಗಿ ಪರಿಣಮಿಸಿವೆ.
ನಗರದ ಶಹರ ಪೊಲೀಸ್ ಠಾಣೆ, ವಿವೇಕಾನಂದ ವೃತ್ತ, ಆಲೂರು ವೆಂಕಟರಾವ್ ವೃತ್ತ, ಪ್ರೊ.ಆರ್ಮೆಂಡೊ ಮ್ಯಾನೇಜಿಸ್ ವೃತ್ತ, ಕರ್ನಾಟಕ ಕಾಲೇಜು ರಸ್ತೆ, ರೈಲ್ವೆ ನಿಲ್ದಾಣದ ಅಕ್ಕ-ಪಕ್ಕದಲ್ಲಿ ಸಾವಿರಾರು ಪಕ್ಷಿಗಳಿಗೆ ಆವಾಸ ಸ್ಥಾನಗಳಾಗಿ ನೂರಾರು ಮರಗಳಿವೆ. ನಿತ್ಯ ಅವುಗಳಲ್ಲಿ ಸಾವಿರಾರು ಗೂಡು ಕಟ್ಟಿಕೊಂಡು ಮರಿಗಳೊಂದಿಗೆ ವಾಸವಾಗಿವೆ.
ಗುಬ್ಬಿ, ಬುಲ್-ಬುಲ್, ಗಿಳಿ, ಬೆಳ್ಳಕ್ಕಿ, ಗೂಬೆಗಳು, ಬಾವಲಿಗಳು ಸೇರಿದಂತೆ ಮೈನಾ, ಪಾರಿವಾಳಗಳು ಹಾಗು ಕಾಗೆಗಳು ತರಹೇವಾರಿ ಗೂಡುಗಳನ್ನು ಕಟ್ಟಿಕೊಂಡು ವಾಸವಾಗಿವೆ. ಆದರೆ ಪ್ರತಿ ರಾತ್ರಿ ಹತ್ತಾರು ಪಕ್ಷಿಗಳು ಸತ್ತು ಗಿಡದ ಬುಡದಲ್ಲಿ ಬೀಳುತ್ತವೆ. ಇಡಿ ರಾತ್ರಿ ಹೈ-ಮಾಸ್ಟ್ ವಿದ್ಯುದೀಪಗಳು ಸೂಸುವ ಪ್ರಖರ ಬೆಳಕು ಈ ಪಕ್ಷಿಗಳಿಗೆ ಎರವಾಗಿದೆ. ಇಂತಹ ಯೋಜನೆಗಳನ್ನು ತಯಾರಿಸುವ ನಮ್ಮವರಿಗೆ ಸುತ್ತ-ಮುತ್ತಲಿನ ಪರಿಸರದ ಕುರಿತು ತುಸು ತಿಳಿವಳಿಕೆ ಇರಬೇಡವೆ?
ಹಕ್ಕಿಗಳ ಸ್ಥಿತಿ-ಗತಿ ನಮ್ಮ ಪರಿಸರದ ಆರೋಗ್ಯಕ್ಕೆ ಕೈಗನ್ನಡಿ. ಪರಿಸರದ ಸಮತೋಲನದಲ್ಲಿ ಎಲ್ಲ ಹಕ್ಕಿಗಳದ್ದು ಪಾತ್ರವಿದೆ. ಉದಾಹರಣೆಗೆ ಗೂಬೆಯನ್ನೆ ತೆಗೆದುಕೊಳ್ಳೋಣ. ಒಂದು ಜೋಡಿ ಗೂಬೆ ಹಾಗು ೬ ಮರಿಗಳು, ೫೦೦ ರಿಂದ ೬೦೦ ಇಲಿಗಳನ್ನು ತಮ್ಮ ಬೆಳವಣಿಗೆಯ ಹಂತದಲ್ಲಿಯೆ ಬೇಟೆಯಾಡಿ ಕೊಲ್ಲುತ್ತವೆ. ಮಾರಿಷಿಯಸ್ ನಲ್ಲಿ ಮಿಡತೆಗಳ ಹಾವಳಿಯನ್ನು ನಿಯಂತ್ರಿಸಲು ಭಾರತದಿಂದ ಮೈನಾ ಹಕ್ಕಿಗಳನ್ನು ಆಮದು ಮಾಡಿಕೊಂಡಿದ್ದು ಬಹುಶ: ನಮ್ಮವರ ಸ್ಮೃತಿಪಟಲದಲ್ಲಿ ಉಳಿದಿಲ್ಲ.
ಪಟ್ಟಣ ಪ್ರದೇಶಗಳಲ್ಲಿ ವಾಹನಗಳ ಅಂಕೆ ಮೀರಿದ ಶಬ್ದ ಮಾಲಿನ್ಯದಿಂದಾಗಿ ಹಕ್ಕಿಗಳ ಇಂಪಾದ ಧ್ವನಿಯ ಸೊಲ್ಲಡಗಿದಂತಾಗಿದೆ. ನಗರ-ಪಟ್ಟಣಗಳಲ್ಲಿ ವಾಸಿಸುತ್ತಿರುವ ಹಕ್ಕಿಗಳು ತಮ್ಮದೇ ಆದ ಇಂಪಾದ ಧ್ವನಿಯಲ್ಲಿ ಪರಸ್ಪರ ಕೂಗಿ ಕರೆದಿದ್ದೂ ಸಹ ಕೇಳಿಸದಂತಾಗಿದೆ. ಈ ಬೆಳವಣಿಗೆಯಿಂದಾಗಿ ಹೆಚ್ಚು ನಷ್ಟ ಉಂಟಾಗಿದ್ದು ಮರಿಹಕ್ಕಿಗಳಿಗೆ. ತಾಯಿ ಹಾಗು ತಂದೆ ಹಕ್ಕಿಯ ಧ್ವನಿಯನ್ನು ಕೇಳಿ, ಅನುಕರಿಸಿ ತಮ್ಮ ಭಾಷೆ ಕಲಿಯಬೇಕಿದ್ದ ಮರಿಹಕ್ಕಿಗೆ ಟ್ಯೂಷನ್ ಅವಶ್ಯಕತೆ ಒದಗಿ ಬಂದಿದೆ!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
muralihr's picture

ನಿಮ್ಮೂರಲ್ಲಿ ಯಾವ ಪಕ್ಷಿ ಜಾಸ್ತಿಯಿದೆ. ನಮ್ಮೂರಲ್ಲಿ ಬರೀ ಕಾಗೆ ಹೆಚ್ಚು ಅದು ಮಿಕ್ಕ ಪಕ್ಷಿಗಳನ್ನು ಓಡಿಸಿ ತನ್ನ ರಾಜ್ಯ ಭಾರ ಮಾಡ್ತಾಯಿದೆ.
ಅದಕ್ಕೆ ವೈಜ್ಞಾನಿಕವಾಗಿ ಉತ್ತರವೆ೦ದರೆ ಕಾಗೆ ಬೇಗ ಮನುಷ್ಯ ಸಮಾಜಕ್ಕೆ ಅಡಾಪ್ಟ್ ಆಗುವ ಚತುರತೆಯಿರುವ ಪಕ್ಷಿ, ಮಿಕ್ಕ ಪಕ್ಷಿಗಳು
ಇದರಷ್ಟು ಬಲಶಾಲಿಯಲ್ಲಾ.

rameshbalaganchi's picture

"ಮಿಕ್ಕ ಪಕ್ಷಿಗಳು ಇದರಷ್ಟು ಬಲಶಾಲಿಯಲ್ಲಾ."

ಮುರಳಿ,
ನಮ್ಮ ಮನೆಯ ಬಳಿ ಇರುವ ಗದ್ದೆಯಲ್ಲಿ ತಗ್ಗಿನಲ್ಲಿ ಮೊಟ್ಟೆಯಿಟ್ಟ ಒಂದು ಜೋಡಿ ಟಿಟ್ಟಿಭಗಳು (Red wattled Lapwing) ತೀರ ಆಕಸ್ಮಿಕವಾಗಿ ತಮ್ಮ ಗೂಡಿನ ಬಳಿ ಬಂದ ನಾಯಿ, ಮಂಗ ಮೊದಲಾದವನ್ನು ಚೀರಾಡಿ, ಹಾರಡಿ ಕುಕ್ಕಿ ಓಡಿಸಿ ತಮ್ಮ ನೆಲವನ್ನು ಕಾಪಾಡಿಕೊಂಡಿದ್ದನ್ನ ನಾನೇ ನೋಡಿ ಬೆರಗಾಗಿದ್ದೇನೆ. ಕಪ್ಪು ಡ್ರೋಂಗೋ ಗಾತ್ರದಲ್ಲಿ ಚಿಕ್ಕದಾದರೂ ಅದರ ಧೈರ್ಯ ನೋಡಿ ಪುಕ್ಕಲು ಹಕ್ಕಿಗಳೆಲ್ಲ ಇದರ ಗೂಡಿನ ಸುತ್ತಮುತ್ತವೇ ತಮ್ಮ ಗೂಡಿ ಕಟ್ಟಿಕೊಳ್ಳುತ್ತವಂತೆ. :)

"ಏರಿದವನು ಚಿಕ್ಕವನಿರಬೇಕು"

rameshbalaganchi's picture

ಹರ್ಷವರ್ಧನ್,
ಇತ್ತೀಚೆಗೆ ನಮ್ಮ ಊರಿನಲ್ಲೂ ಎರಡು ಮೂರುಕಡೆಗಳಲ್ಲಿ ಈ ದೀಪಗಳನ್ನು ಹಾಕಿದ್ದಾರೆ. ಆದರೆ ಇಲ್ಲಿ ಅಂಥ ಪಕ್ಷಿಸಾವೇನೂ ಕಂಡುಬಂದಿಲ್ಲವಲ್ಲ? ಈ ದೀಪಗಳ ಪ್ರಖರ ಬೆಳಕು ಪಕ್ಷಿಗಳ ಸಾವಿಗೆ ಹೇಗೆ ಕಾರಣವಾಗಿವೆ ಅಂತ ತಿಳಿಸುತ್ತೀರಾ? ನಮ್ಮ ಊರಿನಲ್ಲೂ ಕಾಡು ಪಾರಿವಾಳಗಳು, ಗಿಳಿಗಳು ಮೈನಾ, ಮಿಂಚುಳ್ಳಿ, ನೀರುಕಾಗೆ, ಬೆಳ್ಳಕ್ಕಿ, ಕಾಗೆ, ಸೂರಕ್ಕಿ, ಉದ್ದಬಾಲದ ಡ್ರೋಂಗೋ, ಮ್ಯಾಗ್‌ಪೈ ರಾಬಿನ್, ಕೋಗಿಲೆಗಳು, ಇತ್ಯಾದಿ ಸಮೃದ್ಧ ಪಕ್ಷಿಪ್ರಭೇದಗಳಿವೆ. ಇವುಗಳಿಗೆ ಬಂದಿರುವ ಕುತ್ತು ಕೆರೆಗಳ ಒತ್ತುವರಿಯಿಂದಾಗಿ. ನಾನು ಗಮನಿಸಿದ ವಿಷಯವೆಂದರೆ ಬದಲಾದ ಪರಿಸ್ಥಿತಿಯಲ್ಲಿ ಹಕ್ಕಿಗಳೂ ತಮ್ಮ ವರ್ತನೆಯಲ್ಲಿ ಬದಲಾವಣೆಯನ್ನು ತಂದುಕೊಂಡಿವೆ. ಮೊನ್ನೆ ಮೊನ್ನೆ ಬೆಳಿಗ್ಗೆ ಮನೆಯ ಹೊರಬಾಗಿಲಿನಲ್ಲಿ ಹೊಸ್ತಿಲಿನ ಹತ್ತಿರ ಕುಳಿತು ತಿಂಡಿ ತಿನ್ನುವಾಗ ಒಂದು ಮ್ಯಾಗ್‌ಪೈ ರಾಬಿನ್ ಹಕ್ಕಿ ಥೇಟ್ ಕಾಗೆಯಂತೆ ನನ್ನಿಂದ ಸುಮಾರು ಆರಡಿ ದೂರದಲ್ಲಿ ಧೈರ್ಯದಿಂದ ಕೂತು ನಾನು ತಿನ್ನುವುದನ್ನು ಕುತೂಹಲದಿಂದ ನೋಡುತ್ತಿತ್ತು.

"ಏರಿದವನು ಚಿಕ್ಕವನಿರಬೇಕು"

agilenag's picture

ಪ್ರಿಯ ಹರ್ಷವರ್ಧನ್
ಪಕ್ಷಿ ಸಂಕುಲಗಳ ಸಂರಕ್ಷಣೆಯ ಬಗ್ಗೆ ನಿಮ್ಮ ಕಾಳಜಿಯನ್ನು ತಿಳಿದು ಸಂತೋಷವಾಯಿತು. ವಿಜ್ಞಾನದ ಬೆಳವಣಿಗೆಯಾದಂತೆಯೇ ಮಾನವನ ಸಂಕುಚಿತ ಬುದ್ಧಿಯೂ ಹೆಚ್ಚುತ್ತಿರುವುದು ನಿಶ್ಚಳವಾಗಿ ಕಾಣುತ್ತಿದೆ. ನಾನು, ನನ್ನದು ಎಂಬ ಧೇಯವಾಕ್ಯವನ್ನು ಹೊತ್ತುಕೊಂಡೇ ಜೀವಿಸತೊಡಗಿದ್ದಾನೆ. ಹಾಗಾಗಿಯೇ ಪರಿಸರ, ಪಕ್ಷಿ ಸಂಕುಲ, ವೃಕ್ಷ ಸಂಪದ ಎಲ್ಲವೂ ಅವನ ದುರಾಸೆಗೆ ಈಡಾಗಿ, ಭೂಮಿಯನ್ನು ಬರಡಾಗಿಸುವತ್ತಾ ಸಾಗಿದ್ದಾನೆ.
ನೀವು ತಿಳಿಸಿರುವಂತೆ ಹೈ ಮಾಸ್ಟ್ ದೀಪಗಳು ಎಲ್ಲಾ ಚೌಕಗಳಲ್ಲಿಯೂ ಬೇಕಿರುವುದಿಲ್ಲ. ಬೇಕಿರುವುದು ಸಾದಾರಣ ವಿದ್ಯುತ್ ಕಂಭಗಳು ಮತ್ತು ಪೋಲಿಸರಿಂದ ಅಮಾಯಕರ ರಕ್ಷಣೆ. ಹೈ ಮಾಸ್ಟ್ ದೀಪಗಳು ಬೀರುವ ಯುವಿ ಕಿರಣಗಳು ನಿಶಾಚರ ಜೀವಿಗಳಿಗೆ ಮಾರಕವೇ ಸರಿ. ಅವುಗಳ ಜೀವನ ಶೈಲಿಯೇ ಏರುಪೇರಾಗಿ ಅಕಾಲ ಮರಣ ಕಟ್ಟಿಟ್ಟ ಬುತ್ತಿಯಾಗುತ್ತದೆ.
ಹಕ್ಕಿ ಪಕ್ಷಿಗಳನ್ನು ಮಾನವ ನಾನಾ ರೀತಿಯಲ್ಲಿ ಕೊಲ್ಲುತ್ತಿದ್ದಾನೆ. ಕಾಡು ಕಡಿದು, ಜಲ ಬತ್ತಿಸಿ, ಶಬ್ಧ ಮಾಲಿನ್ಯ ಹುಟ್ಟಿಸಿ, ವಾಯು ಮಾಲಿನ್ಯ ಮಾಡಿ, ರಸಗೊಬ್ಬರಗಳನ್ನು ಉಪಯೋಗಿಸಿ, ಕೀಟ ನಾಶಕಗಳನ್ನು ಸಿಂಪಡಿಸಿ, ಮೊಬೈಲಿನ ಶಬ್ಧ ತರಂಗಗಳನ್ನು ವಾತಾವರಣದಲ್ಲಿ ಪಸರಿಸಿ - ಹೀಗೆ ಅವನ ಕೈಯಲ್ಲಿ ಹತ್ತು ಹಲವಾರು ಆಯುದಗಳನ್ನು ಇಟ್ಟುಕೊಂಡಿದ್ದಾನೆ, ಪಾಪದ ಪಕ್ಷಿಗಳನ್ನು ಕೊಲ್ಲಲು. ದೇವರೇ ಅವನಿಗೆ ಬುದ್ಧಿಯನ್ನು ಕೊಡಬೇಕು.

girish.rajanal's picture

ಎಲ್ಲರೂ infrastructure ಅನ್ನೋ ಹೆಸರಲ್ಲಿ ನಗರ, ಪಟ್ಟಣಗಳನ್ನು ಆಧುನಿಕರಣ ಮಾಡಿದ್ದೇ ಮಾಡಿದ್ದು. ಆದರೆ ಯಾರೂ ಸಾತ್ವಿಕ, ಸರಳ ಬದುಕಿಗೆ ಮಹತ್ವ ಕೊಟ್ಟಂತಿಲ್ಲ ಅನ್ನಿಸುತ್ತೆ. ಮೊಬೈಲ್ ತರಂಗ ಅಲೆಗಳಿಂದ ಗುಬ್ಬಿಗಳು ಗಣನೀಯವಾಗಿ ಕಡಿಮೆಯಾಗಿವೆ. ಚಿಕ್ಕಚಿಕ್ಕ ಊರುಗಳಲ್ಲಿ ಕೂಡ ಗುಬ್ಬಿಗಳು ಕಾಣಸಿಗುವುದು ವಿರಳ.

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!