‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
ಮಾತು, ಸದ್ದು, ಗೌಜು, ಗದ್ದಲ, ದಾಂಧಲೆ, ಗೊಂದಲ...ಒಟ್ಟಾರೆ ತಲೆ ಚಿಟ್ ಹಿಡಿಸುವ ವಾತಾವರಣ. ಈ ಜೀವನಕ್ಕೆ ‘ಹೋರಾಟದ ಬದುಕು’ ಎನ್ನಲಡ್ಡಿಯಿಲ್ಲ! ಪ್ರತಿ ಕ್ಷಣ ಒತ್ತಡ, ಅಶಾಂತ ಸ್ಥಿತಿ. ಅಂತಿಮವಾಗಿ ಪ್ರತಿಯೊಂದರಲ್ಲೂ ನಿರಾಸಕ್ತಿ. ಏಕಾಗ್ರತೆಗೆ ತೀವ್ರ ಭಂಗ. ಸಿಟ್ಟಿನ ಪರಮಾವಧಿ; ಹೀಗೆಯೇ ಪಟ್ಟಿ ಬೆಳೆಯುತ್ತದೆ. ಇಷ್ಟಕ್ಕೆಲ್ಲ ಕಾರಣ ನಮ್ಮ ಕಿವಿ!
ವಾಹನಗಳಿಂದ ವಾತಾವರಣ ಕಲುಷಿತಗೊಂಡರೆ ಹೊಗೆ ಕಣ್ಣಿಗೆ ಕಾಣುತ್ತದೆ. ಹೊಲಸು ತುಂಬಿ ಗಟಾರು, ಚರಂಡಿ ಗಬ್ಬೆದ್ದು ‘ನಾತಾವರಣ’ ಸೃಷ್ಠಿಸಿದರೆ ವಾಸನೆ ಮೂಗಿಗೆ ಹೊಡೆಯುತ್ತದೆ. ಕೊಳಚೆ ತುಂಬಿ ನೀರು ಕೆಟ್ಟರೆ ಕಣ್ಣು-ಮೂಗು ಕೂಡೇ ನಿರ್ಧರಿಸುತ್ತವೆ. ಆದರೆ ಶಬ್ದ ಮಾಲಿನ್ಯ ಕಣ್ಣಿಗೆ ಕಾಣುವುದಿಲ್ಲ. ಸದ್ದಿಲ್ಲದೇ ನಮ್ಮ ಕಿವಿಗಳಿಗೆ ಹಾನಿ ಮಾಡುತ್ತದೆ. ಕ್ರಮೇಣ ಆರೋಗ್ಯ ಕೆಡಿಸುತ್ತದೆ.
ವಯಸ್ಸಾದಂತೆ ಶ್ರವಣೇಂದ್ರಿಯದ ಚುರುಕುತನ ಕ್ರಮೇಣ ಕಡಿಮೆಯಾಗುತ್ತ ಬರುತ್ತದೆ. ಇದು ನೈಸರ್ಗಿಕ. ಆದರೆ ನಿತ್ಯ ಶಬ್ದಗಳಿಗೆ ನಾವು ನಮ್ಮ ಕಿವಿಗಳನ್ನು ಒಡ್ಡುತ್ತಿರುವುದರಿಂದ ಕ್ರಮೇಣವಾಗಿ ಕಿವುಡುತನ ನಮ್ಮನ್ನು ಆವರಿಸುತ್ತದೆ. ವಯಸ್ಸು ಹೆಚ್ಚುವ ಮೊದಲೇ ಕಿವಿಗಳು ತಮ್ಮ ಸಂವೇದನೆ ಕಳೆದುಕೊಳ್ಳುತ್ತಿವೆ!
ನಮ್ಮ ನಗರ ಬದುಕಿನ ಎಲ್ಲ ಚಟುವಟಿಕೆಯ ಮೂಲಗಳು ಸದ್ದನ್ನು ಆಕರಿಸಿಯೇ ನಡೆಯುತ್ತವೆ. ನಿತ್ಯ ನಿರಂತರವಾಗಿ ಕಿವಿಗಳು ಈ ಸದ್ದಿಗೆ ಒಡ್ಡಿಕೊಂಡರೆ, ಒಗ್ಗಿಕೊಂಡಿವೆ ಎನಿಸುತ್ತದೆ! ಆದರೆ ತೀವ್ರ ದೂರಗಾಮಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅಧಿಕ ತೀವ್ರತೆಯ ಸಪ್ಪಳ
(೮೫ ಡೆಸಿಬಲ್ ಗಿಂತ ಹೆಚ್ಚು) ಕಿವಿಗೆ ಶಾಶ್ವತವಾದ ಹಾನಿ ಉಂಟುಮಾಡಬಲ್ಲದು. ಅರಿವಿಗೆ ಬಾರದಂತೆ ಶ್ರವಣೇಂದ್ರಿಯದ ಹಾನಿ ನಿಧಾನವಾಗಿ ಏರುತ್ತ ಸಾಗುತ್ತದೆ.
ನಿರಂತರ ಸದ್ದಿಗೆ (ಸುದ್ದಿಗಲ್ಲ!) ನಮ್ಮನ್ನು ಒಡ್ಡಿಕೊಳ್ಳುವುದರಿಂದ- ಹೃದಯದ ಬಡಿತ ಹೆಚ್ಚುತ್ತದೆ. ರಕ್ತ ತೀವ್ರಗತಿಯಲ್ಲಿ ನರಗಳಲ್ಲಿ ಸಂಚರಿಸಲು ಆರಂಭಿಸುತ್ತದೆ. ಹೊರಗಿನ ಸದ್ದಿಗೆ ಪ್ರತಿರೋಧಕ ಶಕ್ತಿ ತಂದುಕೊಳ್ಳಲು ದೇಹ ತನ್ನೊಳಗೆ ಕಂಡುಕೊಳ್ಳುವ ಮಾರ್ಗವಿದು. ಅಡ್ರಿನಾಲಿನ್ ಸ್ರಾವ ಮಿದುಳಿನಲ್ಲಿ ಹೆಚ್ಚಾಗುತ್ತದೆ. ಸಾದಾ-ಸೀದಾ ರೋಗಗಳು ಪ್ರಾಣಹಾನಿಕಾರಕವಾಗಿ ಮಾರ್ಪಡುತ್ತವೆ.
ನಾವು ಯಾವುದೇ ಕೆಲಸ ಮಾಡುವಾಗ ಸದ್ದಿನಿಂದ ಕಿರಿಕಿರಿ ಆಗುತ್ತಿದ್ದರೆ ದಕ್ಷತೆ ಕಡಿಮೆಯಾಗುತ್ತದೆ. ನಿದ್ದೆಯ ಅವಧಿ ಮತ್ತು ಗಾಢತೆಯನ್ನು ಸದ್ದು ಹಾಳು ಮಾಡಬಲ್ಲುದು. ವಯಸಾದವರು, ರೋಗದಿಂದ ಬಳಲುತ್ತಿರುವವರು, ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಸಪ್ಪಳದಿಂದ ಹೆಚ್ಚು ಬಾಧಿತರು. ಸಂಕಟಪಡುವವರು. ನಿದ್ದೆಗೆ ತೊಂದರೆಯಾದರೆ ವ್ಯಕ್ತಿಯ ಆರೋಗ್ಯ ಹದಗೆಡುತ್ತದೆ. ಖಿನ್ನತೆ, ಸಿಟ್ಟು, ಅಸಹಾಯಕತೆ ಇಂತಹ ತೀವ್ರ ಭಾವನಾತ್ಮಕ ಹಾಗು ಮಾನಸಿಕ ಸಮಸ್ಯೆಗಳಿಗೆ, ವರ್ತನೆಗಳಿಗೆ ಸದ್ದು ಕಾರಣವಾಗುತ್ತದೆ. ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ, ಏಕಾಗ್ರತೆಗೆ, ಮನಸ್ಸಿನ ಜಾಗೃತಭಾವವನ್ನ್ಬುಸದ್ದು ಹೊಡೆದು ಹಾಕುತ್ತದೆ. ಭಾಷಾ ಕೌಶಲ್ಯ, ಸಂವಹನ ಕೌಶಲ್ಯ ಬೆಳೆಸಿಕೊಳ್ಳುವಲ್ಲಿ ಸಹ ಅಡ್ಡಿಯಾಗಿ ಹೆದರಿಕೆಯನ್ನೇ ಮನಸ್ಸಿನಲ್ಲಿ ಇಟ್ಟುಕೊಳ್ಳುವಂತೆ ಮಾಡುತ್ತದೆ.
ಸದ್ದಿನಿಂದ ಇಷ್ಟೆಲ್ಲ ದುಷ್ಪರಿಣಾಮಗಳಿದ್ದರೂ ಮದುವೆ, ಗೃಹ ಪ್ರವೇಶ, ಕಾಲೇಜಿನ ಗ್ಯಾದರಿಂಗ್, ಶಾಲಾ ವಾರ್ಷಿಕೋತ್ಸವದಲ್ಲಿ, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಕಿವಿಗಡಗಿಚ್ಚುವ ಸಿನೇಮಾ ಹಾಡು, ಪಾಪ್ ಸಂಗೀತ ಧ್ವನಿವರ್ಧಕಗಳ ಮೂಲಕ ಮತ್ತಷ್ಟು ಧ್ವನಿವರ್ಧಿಸಿ ಬಿತ್ತರಿಸುತ್ತಾರೆ. ಜಾತ್ರೆ, ಉತ್ಸವಗಳ ಹೆಸರಿನಲ್ಲಿ ಸದ್ದುಗಳ ‘ತ್ಸುನಾಮಿ’ ಎಬ್ಬಿಸುತ್ತಾರೆ. ನಿತ್ಯ ಸಂಚರಿಸುವ ಬಸ್, ರಿಕ್ಷಾ ಹಾಗು ಖಾಸಗಿ ವಾಹನಗಳಲ್ಲಿ ಉಚ್ಚ ಸ್ವರದಲ್ಲಿ ಸಂಗೀತ ನುಡಿಸಿ, ಹಾರ್ನ್ ಬಾರಿಸಿ ವಿಕೃತ ಆನಂದ ಪಡೆಯುತ್ತ ಇತರರನ್ನು ಅನಾಹುತಗಳಿಗೆ ಎಡೆ ಮಾಡಿಕೊಡುವವರಿದಾರೆ. ನಾವು ಸಹ ಇದರಲ್ಲಿ ಭಾಗೀದಾರರು. ನಾವು ಪ್ರತಿಭಟಿಸುತ್ತಿಲ್ಲ. ಕಾರಣ ತಲೆ ಕಡಿಸಿಕೊಳ್ಳುತ್ತಿಲ್ಲ. ಕಿವಿ ಕೆಡಿಸಿಕೊಳ್ಳುತ್ತಿದ್ದೇವೆ!
ನಾವೇನು ಮಾಡಬಹುದು?
ಅನಗತ್ಯವಾಗಿ ನಮ್ಮ ಪರಿಸರದಲ್ಲಿ ಧ್ವನಿ ವರ್ಧಕಗಳ (ಸ್ಪೀಕರ್, ಮೈಕ್) ಮೂಲಕ, ವಾಹನಗಳ ಹಾರ್ನ್ ಬಾರಿಸಿ ಶಬ್ದ ಮಾಲಿನ್ಯ ಉಂಟು ಮಾಡುವವರ ವಿರುದ್ಧ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ದೂರು ನೀಡುತ್ತಿರುವವರು ದೂರು ಪತ್ರದಲ್ಲಿ ಸಹಿ ಹಾಕದಿದ್ದರೂ, ಪೊಲೀಸರು ಕ್ರಮ ಜರುಗಿಸಲು ಕಡ್ಡಯವಾಗಿ ದಾಖಲಿಸಿಕೊಳ್ಳತಕ್ಕದ್ದು ಎಂದು ರಾಜ್ಯ ಹೈಕೋರ್ಟಿನ ನ್ಯಾಯಾಧೀಶರಾಗಿದ್ದಾಗ ಎಂ.ಎಫ್.ಸಾಲ್ಡಾನಾ (ಜುಲೈ ೩೦, ೨೦೦೩) ಎಚ್ಚರಿಕೆ ನೀಡಿದ್ದರು.‘ಮೌನವಲಯ’ ಎಂದು ಪರಿಗಣಿಸಲ್ಪಡುವ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯ ಪ್ರದೇಶ, ಆಸ್ಪತ್ರೆ, ವಾಸದ ಬಡಾವಣೆಗಳು, ಪೂಜಾ ಸ್ಥಳಗಳು ಮೊದಲಾದ ಕಡೆ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು ಅನ್ವಯವಾಗುತ್ತವೆ.
ಸಪ್ಪಳ ಪರಿಸರದ ಮೇಲೂ ದುಷ್ಪರಿಣಾಮ ಬೀರುತ್ತಿದೆ:
ಇತ್ತೀಚೆಗೆ ನಮಗೆ ಬೆಳಗಿನ ಸಮಯದಲ್ಲೂ ಹಕ್ಕಿಗಳ ಕಲರವ ಕೇಳಿ ಬರುತ್ತಿಲ್ಲ. ಬೆಳಗಿನ ಸಮಯದಲ್ಲಿ ವಾಹನಗಳ ಭರಾಟೆ ತೀರ ಕಡಿಮೆ. ಎಲ್ಲರೂ ‘ಸೂರ್ಯವಂಶಿ’ಗಳಾಗಿರುವುದರಿಂದ ಸಪ್ಪಳ ಎಬ್ಬಿಸುವವರೂ ಎದ್ದಿರಲಾರರು! ಆದರೂ ಹಕ್ಕಿಗಳ ಕಲರವದ ಸುಪ್ರಭಾತ ನಮಗೆ ಕೇಳಿಸುತ್ತಿಲ್ಲ.
ಪರಿಸರ ಸಂಬಂಧಿ ವಿಷಯಗಳ ಕುರಿತು ಸಾಕಷ್ಟು ನಿಯತಕಾಲಿಕೆಗಳು ಇಂದು ಮಾಹಿತಿ, ಸಮಸ್ಯೆ ಹಾಗು ಪರಿಹಾರಗಳನ್ನು ಒಳಗೊಂಡ ಅರ್ಥಪೂರ್ಣ ಲೇಖನಗಳನ್ನು ಪ್ರಕಟಿಸುತ್ತಿವೆ. ‘ದಿ ನೇಚರ್’ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿರುವಂತೆ- ನಗರ ಪ್ರದೇಶದ ಮರಿ ಹಕ್ಕಿಗಳಿಗೆ ತಮ್ಮ ಸಂವಹನ ಕಲೆ ವೃಧ್ಧಿಸಿಕೊಳ್ಳಲು ‘ಟ್ಯೂಷನ್’ ಅವಶ್ಯಕತೆ ಇದೆ ಅಂತೆ! ಹಕ್ಕಿ ಮರಿಗಳಿಗೆ ಹಸಿವಾದಾಗ, ವೈರಿ ಗೂಡಿಗೆ ದಾಳಿ ಇಟ್ಟಾಗ ತಾಯಿ/ತಂದೆ ಹಕ್ಕಿಯನ್ನು ಕೂಗಿ ಕರೆಯುತ್ತವೆ. ಆದರೆ ಮಾನವ ನಿರ್ಮಿತ ಸಪ್ಪಳದ ಗೌಜು, ಗದ್ದಲದಿಂದಾಗಿ ದೊಡ್ಡ ಹಕ್ಕಿಗೆ ಮರಿ ಹಕ್ಕಿಯ ಕೂಗು ಕೇಳಿಸುತ್ತಿಲ್ಲ.
ಹಾಗೆಯೇ ಹೆಣ್ಣು ಹಕ್ಕಿಗಳು ಸಂತಾನ ಅಭಿವೃದ್ಧಿಗೆ ಅಣಿಗೊಳ್ಳಲು ಗಂಡು ಹಕ್ಕಿ ಹಲವಾರು ವಿಧಧ ಸಂಗೀತಮಯ ಧ್ವನಿ ಹೊರಡಿಸುತ್ತವೆ. ಸದ್ದಿನ ಅಬ್ಬರದಲ್ಲಿ ಗಂಡು ಹಕ್ಕಿಯ ವಿಶಿಷ್ಟ ಕೂಗು ಹೆಣ್ಣು ಹಕ್ಕಿಯನ್ನು ಆಕರ್ಷಿಸಲು ವಿಫಲವಾಗಿ ನೂರಾರು ಅಪರೂಪದ ಪಕ್ಷಿಗಳ ಸಂತತಿ ನಶಿಸಿ ಹೋಗಿವೆ. ಜೊತೆಗೆ ಇನ್ನೂ ಕೆಲ ಸಂತತಿಗಳು ಕಣ್ಮರೆಯಾಗುವ ಅಪಾಯದ ಅಂಚಿನಲ್ಲಿವೆ.
ಈಗ ಮನೆಗಳಲ್ಲಿಯೂ ಧ್ವನಿ ವರ್ಧಕಗಳನ್ನು ಬಳಸದೆಯೇ ಇಡೀ ವಠಾರಕ್ಕೆ ಕೇಳಿಸಬಲ್ಲ ವಿದ್ಯುನ್ಮಾನ ಉಪಕರಣಗಳು ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯ. ಪ್ರತಿಯೊಂದು ಮನೆಯಲ್ಲಿ ಟಿ.ವಿ., ಟೇಪ್ ರೆಕಾರ್ಡರ್, ಸಿ.ಡಿ. ಪ್ಲೇಯರ್, ಡಿ.ವಿ.ಡಿ. ಜೊತೆಗೆ ‘ಸ್ಪೇಷಲ್ ಇಫೆಕ್ಟ್ಶ್’ ನೀಡಬಲ್ಲ ಪರಿಕರಗಳು ಹೇರಳವಾಗಿವೆ. ಉಚ್ಛ ಸ್ವರದಲ್ಲಿ ಚಲನಚಿತ್ರ ಗೀತೆಗಳನ್ನು ನುಡಿಸುವುದು ಪ್ರತಿಷ್ಠೆಯ ಸಂಕೇತವಾಗುತ್ತಿದೆ. ಹಾಗಾಗಿ ಮನೆಗಳ ಅಕ್ಕ ಪಕ್ಕದ ಹೂವಿನ ಗಿಡಗಳಲ್ಲಿ ಚಿಟಗುಬ್ಬಿ ತನ್ನ ಗೂಡು ಕಟ್ಟುತ್ತಿಲ್ಲ. ಮಾನವರ ಸಹಕಾರದಿಂದ ಬದುಕಿ-ಬಾಳ ಬೇಕಿರುವ ಅನೇಕ ಪಕ್ಷಿಗಳ ಆರ್ತನಾದ ಮಾನವರಿಗೆ ಕೇಳಿಸುತ್ತಿಲ್ಲ. ಗೂಡು ಕಟ್ಟಿ ವೈರಿ (ಬೆಕ್ಕು, ಹಾವು, ಇಲಿ, ಮುಂಗುಸಿ) ಗೂಡಿಗೆ ದಾಳಿ ಇಟ್ಟಾಗ ತಾಯಿ ಅಥವಾ ತಂದೆ ಹಕ್ಕಿ ಮನೆಯವರನ್ನು ಕೂಗಿ ಕರೆದು ತಮ್ಮ ಮರಿ/ ಮೊಟ್ಟೆಗಳನ್ನು ಬದುಕಿಸುವಂತೆ ಜೋರಾಗಿ ಕೂಗಿ ಗದ್ದಲ ಎಬ್ಬಿಸುತ್ತವೆ. ಆದರೆ ನಮ್ಮ ಸಪ್ಪಳದ ಮಧ್ಯೆ ಹಕ್ಕಿಯ ಕೂಗಿಗೆ ಕಿವಿಗೊಡುವುದಾದರೂ ಹೇಗೆ?
ಅಪರೂಪದ ಆಸ್ತಿ ಕಿವಿ:
ಗ್ರಾಹಕ ಹಕ್ಕುಗಳ ತಜ್ನ ಶ್ರೀ ಅಡ್ಡೂರು ಕೃಷ್ಣರಾವ್ ಅವರು ದಾಖಲಿಸುವಂತೆ- ಸದ್ದುಗಳ ಗದ್ದಲವಿಲ್ಲದ ಪರಿಸರದಲ್ಲಿ ಜೀವಿಸುವ ಅಫ್ರೀಕಾದ ‘ದುಬಾನ್’ ಬುಡಕಟ್ಟಿನ ವೃದ್ಢರ ಶ್ರವಣ ಶಕ್ತಿ ನಮ್ಮ ಕಿರಿಯರ ಶ್ರವಣ ಶಕ್ತಿಗೆ ಸಮನಾಗಿದೆಯಂತೆ!
ಒಟ್ಟಾರೆ, ನೋಡದೆಯೇ ಇದು ಯಾವ ವಾಹನದ ಸದ್ದು? (ಬಸ್, ಲಾರಿ, ಟ್ರಕ್, ಕಾರು, ರಿಕ್ಷಾ, ಸ್ಕೂಟರ್ ಇತ್ಯಾದಿ), ಹಾಗೆಯೇ ಯಾವ ಬೈಕಿನ ಸದ್ದು? (ಹೀರೋ ಹೊಂಡಾ, ಕಾವಾಸಾಕಿ, ಯಮಹಾ, ಪಲ್ಸ್ರರ್, ಕೈನೆಟಿಕ್ ಇತ್ಯಾದಿ) ಧ್ವನಿ ಕೇಳಿಯೇ ಇದು ಯಾವ ಗಾಯಕರು ಹಾಡಿದ್ದು? (ಎಸ್.ಪಿ.ಬಿ., ಪ್.ಬಿ.ಎಸ್, ಡಾ. ರಾಜ್ ಕುಮಾರ್, ಸೋನು ನಿಗಮ್, ಕುಮಾರ್ ಸಾನು, ಲತಾ ಮಂಗೇಷ್ಕರ್, ಕವಿತಾ ಕೃಷ್ಣ ಮೂರ್ತಿ, ಆಲೀಷಾ ಚಿನಾಯ್) ಅಥವಾ ಒಮ್ಮೆ ಕೇಳಿದ ಯಾರದೋ ಧ್ವನಿಯನ್ನು ಮತ್ತೊಮ್ಮೆ ದೂರವಾಣಿಯಲ್ಲಿ ಕೇಳಿದಾಗ ಅವರು ತಮ್ಮ ಹೆಸರು ಹೇಳುವ ಮೊದಲು ಸಂಬೋಧಿಸಿಬಿಡಬಲ್ಲ ಪ್ರಬಲ ಶಕ್ತಿ ಕಿವಿಗಳಿಗಿದೆ. ಇದೊಂದು ನಿಸರ್ಗದತ್ತ ಅದ್ಭುತ ಇಂದ್ರಿಯ.
ಕಿವಿ ಕಾಯ್ದುಕೊಳ್ಳಲು ಮೀನ-ಮೇಷ ಎಣಿಸಿದರೆ ಇತರರಿಗೆ ‘ಕಿವಿ’ ಕೊಡುವುದು ನಮಗೆ ಕಷ್ಟವಾಗಿ ಕೇವಲ ‘ಕೈ’ ಕೊಡಬೇಕಾಗಬಹುದು!

- Login or register to post comments
- 939 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
ತುಂಬ ಒಳ್ಳೆಯ ಲೇಖನ ಹರ್ಷ ಅವರೇ.ಓದಿ ಸಂತೋಷವಾಯಿತು.ಕಿವಿಯ ಬಗ್ಗೆ ನಾವು ತೋರುತ್ತಿರುವ ನಿರ್ಲಕ್ಷ ನಾಳೆ ನಮ್ಮನ್ನೇ ಅತಿಯಾಗಿ ಬಾಧಿಸಲಿದೆ.ಇನ್ನಾದರೂ ಕಿವಿಗಳ ಬಗ್ಗೆ ಸ್ವಲ್ಪ ಎಚ್ಚರದಿಂದಿರೋಣ.
ನಿಮಗೆ ನನ್ನಿ.
-ಸುಶೀಲ್.
****************************
ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ..
ಜಲವೆಂದರೆ ಕೇವಲ ನೀರಲ್ಲ ಅದು ಪಾವನತೀರ್ಥ!!
****************************
ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
ಉತ್ತಮ ಲೇಖನ! ಸಮಯೋಜಿತವಾದುದು ಕೂಡ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
ಬೆಂಗಳೂರಲ್ಲಿ ಬೆಳಗಾಯಿತು ಎಂದು ಗೊತ್ತಾಗುವುದು ಹೇಗೆ ಗೊತ್ತ? ಹೊರತೆಗೆಯುತ್ತಿರುವ ಕಾರುಗಳ ವಿಧವಿಧವಾದ ಅಪಸ್ವರಗಳು ಕಿವಿಗೆ ಬಾರಿಸಿದಾಗ! ಯಾರಿಗೆ ಬೈದುಕೊಳ್ಳುತ್ತೀರ? ಎಲ್ರೂ ರಿವರ್ಸ್ ತಗೊಳ್ಳಲೇಬೇಕು. ಎಲ್ಲರಿಗೂ ತಮ್ಮ ತಮ್ಮ ಕಾರು ರಿವರ್ಸ್ ತಿರುಗಿಸುವಾಗ ಮತ್ತಷ್ಟು
ತಲೆತಿನ್ನುವಕಿವಿತಿನ್ನುವ ಹಾಡುಗಳೇ ಧ್ವನಿವರ್ಧಕದಂತೆ ಬಾರಿಸಬೇಕು.--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
ಉತ್ತಮ ಲೇಖನ ಹರ್ಷ.
ಕಿವಿ ಅದ್ಭುತ ಸಾಧನ. ಅನುಮಾನ ಬಂದರೆ, ನೀವು ಕೇಳಿದ ಆಕರ್ಷಕ ಧ್ವನಿಗಳನ್ನು, ಹಾಡುಗಳನ್ನು ನೆನಪಿಸಿಕೊಳ್ಳಬಹುದು. ಪ್ರಿಯತಮೆಯ ಧ್ವನಿಯನ್ನು ಮೊದಲ ಬಾರಿ ಫೋನ್‌ನಲ್ಲಿ ಆಲಿಸಿದ್ದು, ಮೆಚ್ಚಿದ ಹಾಡುಗಳನ್ನು ಶಾಂತವಾಗಿ ಕೂತು ಕೇಳಿದ್ದು, ಮಗು ನಕ್ಕ ಧ್ವನಿ- ಬರೆಯುತ್ತ ಹೋದರೆ ಕೊನೆಯೇ ಇಲ್ಲ ಬಿಡಿ.
ಸಂಪದದಲ್ಲಿ ಪಲ್ಲವಿ ಎಂಬುವವರು ಧಾರವಾಡದ ಶಾಲ್ಮಲಾ ಕಣಿವೆ ಬಗ್ಗೆ ಬರೆದಿದ್ದು ಇಲ್ಲಿ ನೆನಪಾಗುತ್ತದೆ. ಧಾರವಾಡದವರಿಗೆ ಶಾಲ್ಮಲಾ ನೆನಪಿಸುವ ಅಗತ್ಯವಿಲ್ಲ. ನಾನು ಧಾರವಾಡದಲ್ಲಿ ’ಪ್ರಜಾವಾಣಿ’ಗೆ ಕೆಲಸ ಮಾಡುತ್ತಿದ್ದಾಗ ಮೊದಲ ಬಾರಿ ಶಾಲ್ಮಲಾ ನೋಡಿ ಅಚ್ಚರಿ-ಖುಷಿಗೊಂಡು ಲೇಖನ ಬರೆದಿದ್ದು ನೀವೂ ಓದಿದ್ದಿರಿ. ಮೆಚ್ಚುಗೆ ಕೂಡ ಸೂಚಿಸಿದ್ದಿರಿ. ಅಲ್ಲೊಮ್ಮೆ ಸುಮ್ಮನೇ ಓಡಾಡಿದರೂ ಸಾಕು ಹಿತವೆನ್ನಿಸುತ್ತದೆ.
ಅನಿವಾರ್ಯವಾಗಿ ಬೆಂಗಳೂರಿಗೆ ಬಂದ ನಂತರ ನಾನು ಶಾಂತ ವಾತಾವರಣವನ್ನು ತುಂಬ ಕಳೆದುಕೊಳ್ಳುತ್ತಿದ್ದೇನೆ. ಅದಕ್ಕೆಂದೇ ಸಾಧ್ಯವಾದಷ್ಟೂ ನಸುಕಿನಲ್ಲಿ ಏಳುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ನಸುಕಿನ ಪಿಸುಮಾತುಗಳು ಕೇಳಲು ಅದ್ಭುತ. ಅದನ್ನು ಮತ್ತೊಮ್ಮೆ ನೆನಪಿಸಿದ್ದೀರಿ.
ಥ್ಯಾಂಕ್ಸ್.
- ಚಾಮರಾಜ ಸವಡಿ
ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಿ..
MP3 ಪ್ಲೇಯರ್ಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು ??
-ವರುಣ ಭಟ್
ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
ನನ್ನ headphone/mp3 player/mobile earphone usage policy:
ಮೊದಲು ವಾಲ್ಯೂಮ್ ಪೂರ್ಣ ಕಡಿಮೆ ಮಾಡಿ ಕಿವಿಗೆ ಹಾಕಿಕೊಳ್ಳೋದು. ಮೊಬೈಲಿನ hands-free ಆದರೆ ಬೀಪ್ ಆಫ್ ಮಾಡಿಟ್ಟುಕೊಳ್ಳುತ್ತೇನೆ. ರಿಂಗಿಂಗ್ ಟೋನ್ ಕೂಡ ಕಡಿಮೆ pitchನಲ್ಲಿರುವುದನ್ನ ಹುಡುಕಿ ಹಾಕಿಕೊಳ್ಳುತ್ತೇನೆ (ಕೊಳಲು ಅಥವ ವೈಯೋಲ/ವೈಯಲಿನ್ ಸಂಗೀತ),
ಆದರೆ ಸಾಧ್ಯವಾದಷ್ಟು headphone, earphone ಬಳಸೋದನ್ನ avoid ಮಾಡ್ತೀನಿ. ಸಾಧ್ಯವಾದಾಗಲೆಲ್ಲ ಸ್ಪೀಕರ್ ಬಳಸೋದು. ಅದೂ ಕಡಿಮೆ ಬ್ಯಾಸ್; ಸಿಕ್ಕಾಪಟ್ಟೆ ವಾಲ್ಯೂಮ್ ಇಲ್ಲದೆ; ಸರೌಂಡ್ ಎಲ್ಲ ಬಂದ್ ಮಾಡಿ. mp3 ಪ್ಲೇಯರ್ರೂ ಅಷ್ಟು ಇಷ್ಟವಾಗೋದಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
ಧನ್ಯವಾದಗಳು.
ನೀವು ಹೇಳೋದು ಸರಿ. ನಾನು ಅಷ್ಟೆ, ರಿಂಗ್-ಟೋನ್ ವಾಲ್ಯೂಮ್ ತುಂಬ ಕಡಿಮೆ ಇಟ್ಕೊಳ್ತೀನಿ...
ಜನರಿಗೆ ಮೊಬೈಲ್ usageನಲ್ಲಿ ಸೌಜನ್ಯದ ಬಗ್ಗೆ ಹೇಳಿಕೊಡಬೇಕು.. ಕರ್ಕಶ ರಿಂಗ್ಟೋನ್ ಕೇಳೋದಲ್ದೆ, ಅವರ ಮನೆಯ ವಿಚಾರಗಳನ್ನು ಕೂಡ ಕೇಳಿಸ್ಕೋಬೇಕು..
-ವರುಣ ಭಟ್
ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
ಹರ್ಷವರ್ಧನ್,
ಲೇಖನ ಇಷ್ಟವಾಯ್ತು. ಈ ರೀತಿ ಾಸ್ತವ ಪ್ರಜ್ಞೆ ಇಟ್ಟುಕೊಂಡ ಸಂಶೋಧನಾತ್ಮಕ ಲೇಖನಗಳು ಮತ್ತಷ್ಟು ಸಂಪದದಲ್ಲಿ ಕಾಣಿಸಿಕೊಳ್ಳಲಿ...
ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
ಅತ್ಯುತ್ತಮ ಲೇಖನ. ತಮಗೆ ವಂದನೆಗಳು.
ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
ತುಂಬ ಚೆನ್ನಾಗಿದೆ ಬರಹ. ಹಾಕಿರುವ ಪಾಪೆಯೂ ಒಪ್ಪುವಂತಿದ್ದು, ಹಕ್ಕಿಗಳ ಕೂಗಿಗೆ ಕಿವಿಗೊಡಬೇಕಿದೆ,.. ಹಕ್ಕಿಗಳಿಂದ ನಮ್ಮ ಮಂದಿಯ ಬದುಕು ಎಸ್ಟೊಂದು ಕಳೆಗಟ್ಟುತ್ತ ಬಂದಿದೆ, ಯುಗಯುಗಗಳಿಂದ. ಅಲ್ಲದೇ ನಮ್ಮ ಕಿವಿಗಳನ್ನು ಕಾಯಿದುಕೊಳ್ಳಬೇಕಿರುವದು ಈ ಹೊತ್ತಿನ ಬೇಡಿಕೆಯಾಗಿದೆ.
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
ಶಬ್ದ ರಕ್ಕಸನ ಬಗ್ಗೆ ಸೊಗಸಾಗಿ ಬರೆದಿದ್ದೀರಿ ಹರ್ಷವರ್ಧನ ಅವರೇ.
ನಾನೂ ಧಾರವಾಡದಲ್ಲೇ ಇದ್ದೇನೆ. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಗಾಗ ನಿಮ್ಮನ್ನು ನೋಡಿದ್ದೇನೆ. ಸದ್ಯಕ್ಕೆ ಗುಪ್ತಳಾಗೇ ಇರಬಯಸುತ್ತೇನೆ. ಬರವಣಿಗೆ ತುಂಬಾ ಚೆನ್ನಾಗಿದೆ.
ಧಾರವಾಡದ ಬಗ್ಗೆ ಇಷ್ಟೊಂದು ಸೊಗಸಾಗಿ ಬರೆಯುತ್ತೀರಿ. ಅಲ್ಲಿಯ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ವಾತಾವರಣದ ಬಗ್ಗೆಯೂ ಬರೆಯಿರಿ. ಒಳ್ಳೆಯದು ಮತ್ತು ಕೆಟ್ಟದ್ದು- ಎರಡರ ಬಗ್ಗೆಯೂ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
ಪಲ್ಲವಿ, ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆ ನೋಡಿ ತುಂಬ ಸಂತಸವಾಯಿತು. ಅದರಲ್ಲೂ ನನ್ನ ಊರಿನವರು ಎಂದ ಮೇಲೆ ಒಂದು ಗುಂಜಿ ಹೆಚ್ಚು ಸಂತೋಷವಾಯಿತು. ಧಾರವಾಡ ನನ್ನ ನೆಲ. ನಾನು ಹುಟ್ಟಿದ್ದು, ಬೆಳೆದಿದ್ದು, ಶಿಕ್ಷಣ ಪಡೆದಿದ್ದು, ಸದ್ಯ ಸಹಾಯಕ ಪ್ರಾಧ್ಯಾಪಕನಾಗಿ ಪತ್ರಿಕೋದ್ಯಮದ ಮಹಾವಿದ್ಯಾಲಯದಲ್ಲಿ ದುಡಿಯುತ್ತಿರುವುದು ಎಲ್ಲ ಇಲ್ಲಿಯೆ. ಸಂಪದ ಒಳ್ಳೆಯ ಕಂಪನ್ನು ಹರಡಿದೆ/ ಹರಡುತ್ತಿದೆ. ಇಲ್ಲಿ ಕೆಟ್ಟ ಯಾವ ವಿಷಯವೂ ಬೇಡ. ಅದನ್ನೇ ಸುಧಾರಿಸಿದ ರೀತಿಯಲ್ಲಿ ಬರೆಯಲಿದ್ದೇನೆ. ಓದುತ್ತಿರಿ. ಬರೆಯುತ್ತಿರಿ. ನನಗೂ ಹೇಳುತ್ತಿರಿ. ಸಾಧ್ಯವಾದರೆ ನನ್ನ ‘ಧಾರವಾಡಕ ಕಾಡುಕೋಣ ಓಡಿಬಂದತ್ತ’ ಲೇಖನ ಓದಿ. ಅದರಲ್ಲಿ ಹಿರಿಯ ಪತ್ರಕರ್ತ ಚಾಮರಾಜ ಪ್ರತಿಕ್ರಿಯಿಸಿರುವ ರೀತಿ ನೋಡಿ.
ಧನ್ಯವಾದ,
ಹರ್ಷವರ್ಧನ ವಿ.ಶೀಲವಂತ
ಧಾರವಾಡ.