ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
ಅದು ಪದ್ಮಪ್ರಿಯ ಆತ್ಮಹತ್ಯೆಯ ಪ್ರಕರಣವಿರಬಹುದು, ಆರುಷಿ ತಲ್ವಾರ್ ಎಂಬ ಹುಡುಗಿಯ ಕೊಲೆಯ ಪ್ರಕರಣವಿರಬಹುದು. ಜನರಿಗೆ ಅಪರಾಧಿಯ ಮೇಲಿನ ಅಸಹ್ಯಕ್ಕಿಂತ ಹೆಚ್ಚಾಗಿ ಮಾಧ್ಯಮಗಳ ಮೇಲೆ ಅಸಹ್ಯ ಮೂಡುತ್ತಿದೆ. ಸಭ್ಯರಾದವರಿಗೆ ಮಾಧ್ಯಮಗಳು ತಮ್ಮ ಹದ್ದು ಮೀರಿ ವರ್ತಿಸುತ್ತಿವೆ ಎಂಬ ಅರಿವಾಗುತ್ತಿದೆ. ಇಂಗ್ಲೀಷ್ ಚಾನಲ್ಲೊಂದರಲ್ಲಿ ಶಾಲ ಶಿಕ್ಷಕರಾದ ವೀಕ್ಷಕರೊಬ್ಬರು ಆರುಷಿಯ ಕೊಲೆ ಪ್ರಕರಣದ ಬಗ್ಗೆ ಮಾಧ್ಯಮಗಳು ದಿನಕ್ಕೊಂದರಂತೆ ‘ರಸವತ್ತಾದ’ ವರದಿಗಳನ್ನು ಮಾಡುತ್ತಿರುವುದನ್ನು ಆಕ್ಷೇಪಿಸುತ್ತಾ ಆತಂಕಕಾರಿಯಾದ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲಿದ್ದರು. ಆರುಷಿ ಹತ್ಯೆಯ ಬಗ್ಗೆ ಟಿವಿ ನ್ಯೂಸ್‌ಗಳಲ್ಲಿ ಪ್ರಸಾರದ ವರದಿಗಳನ್ನು ನೋಡಿದ ಅವರ ವಿದ್ಯಾರ್ಥಿಗಳು ‘ನೀವು ತಂದೆ ತಾಯಿಗಳು ದೇವರು, ಅವರನ್ನು ಗೌರವಿಸಿ ಎನ್ನುತ್ತೀರಿ ಆದರೆ ಹೀಗೆ ತಂದೆಯೇ ಮಗಳನ್ನು ಕೊಲೆ ಮಾಡುತ್ತಾರೆ ಎಂದರೆ ಅವರನ್ನು ಹೇಗೆ ಗೌರವಿಸುವುದು?’ ಎಂದು ಪ್ರಶ್ನಿಸುತ್ತಾರಂತೆ! ಮಾಧ್ಯಮಗಳು ಇಷ್ಟು ದಿನ ಜವಾಬ್ದಾರಿಯಿಲ್ಲದ ಅಧಿಕಾರದ ರುಚಿ ಕಂಡು ಅದಕ್ಕೇ ಮರುಳಾಗಿರುವಾಗ ಅವರಿಗೆ ಈ ಸೂಕ್ಷ್ಮದ ಅರಿವಾಗುತ್ತದೆ ಎಂದು ಆಶಿಸಬಹುದೇ?
ಮಾಧ್ಯಮಗಳು ಈ ಹಂತದಲ್ಲಿ ಸ್ವವಿಮರ್ಶೆಯನ್ನು ಮಾಡಿಕೊಳ್ಳಬೇಕು ಎಂದು ಆ ಕ್ಷೇತ್ರದಲ್ಲಿನ ಅನೇಕ ಪ್ರಜ್ಞಾವಂತ ಪತ್ರಕರ್ತರಿಗೆ ಅರಿವಾದಂತಿದೆ. ಆದರೂ ವಕ್ರತುಂಡೋಕ್ತಿಯೊಂದು ಹೇಳುವಂತೆ- ‘ತಮ್ಮನ್ನು ಬೈದರೂ ಅದನ್ನು ಅದೇ ಹುಮ್ಮಸ್ಸಿನಿಂದ ವರದಿ ಮಾಡುವವರು ಪತ್ರಕರ್ತರು’- ಪರಿಸ್ಥಿತಿ ಸೃಷ್ಟಿಯಾಗಿದೆ. ಮುದ್ರಣ ಮಾಧ್ಯಮದವರು ದೃಶ್ಯ ಮಾಧ್ಯಮದ ಮೇಲೆ ಹರಿಹಾಯುತ್ತಿದ್ದಾರೆ. ಒಬ್ಬರು ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ ತಮ್ಮ ನೈತಿಕ ನೆಲೆಯನ್ನು ಮೇಲಕ್ಕೇರಿಸುವ ಹವಣಿಕೆಯಲ್ಲಿ ತೊಡಗಿದಂತೆ ಕಂಡುಬರುತ್ತಿದ್ದಾರೆ. ಜನಸಾಮಾನ್ಯರು ಮಾತ್ರ ಸುದ್ದಿ ಮಾಧ್ಯಮಗಳು ಸಂಭ್ರಮದಿಂದ, ಅಬ್ಬರದಿಂದ ಕೊಡುವ ಸುದ್ದಿಯನ್ನು ಅಪಾರ ಹಸಿವಿನಿಂದ ಎಂಬತೆ ತಿಂದು ಅನಂತರ ಎಲೆ ಅಡಿಕೆ ಹಾಕುವಾಗ ಗೊಣಗಿಕೊಳ್ಳುವವರ ಹಾಗೆ ‘ಮಾಧ್ಯಮಗಳಿಗೆ ಖಾಸಗಿ ಬದುಕಿನ ಸಂಗತಿಗಳನ್ನು ಬಯಲುಗೊಳಿಸುವ ಹಕ್ಕು ಕೊಟ್ಟವರು ಯಾರು?’ ಎಂದು ಪೇಚಾಡುತ್ತಾರೆ. ಮರುದಿನ ಬೆಳಿಗ್ಗೆ ಪತ್ರಿಕೆಯಲ್ಲಿ ಮತ್ತೆ ಏನು ಬರೆದಿದ್ದಾರೆ ಎಂದು ಕಾತರಿಸಿ ಓದಲು ಚಾಳೀಸು ಹುಡುಕುವಲ್ಲಿ ಮಗ್ನರಾಗುತ್ತಾರೆ!
ಇವೆಲ್ಲದರ ನಡುವೆ ನಮ್ಮ ‘ಸಡಗರ’ ಪತ್ರಿಕೆಗೆ ತಿಂಗಳಿಗೊಂದು ಪುಸ್ತಕದ ಅನುಭವವನ್ನು ಹಂಚಿಕೊಳ್ಳುವ ಅಂಕಣಕ್ಕಾಗಿ ಹಳೆಯ ಪುಸ್ತಕಗಳನ್ನು ತಡವಿದಾಗ ಸಿಕ್ಕಿದ್ದು, ಸುಮಾರು ಎಂಭತ್ತು ವರ್ಷಗಳ ಹಿಂದೆ ಡಿ.ವಿ.ಜಿಯವರು ಮಾಧ್ಯಮಗಳ (ಪತ್ರಿಕೆಗಳು ಮಾತ್ರ ಇದ್ದದ್ದು ಆಗ) ಬಗ್ಗೆ ಬರೆದಿರುವ ‘ವೃತ್ತಪತ್ರಿಕೆಗಳು’ ಪುಸ್ತಕ. ಅದರ ಬಗ್ಗೆ ‘ಇಂಥದ್ದೊಂದು ಪುಸ್ತಕ ಓದಿದ್ದೆ…’ ಕಾಲಂನಲ್ಲಿ ಬರೆದಿರುವೆನಾದರೂ ಆ ಪುಸ್ತಕದಲ್ಲಿನ ಒಂದೆರೆಡು ಅಂಶಗಳನ್ನು ಇಲ್ಲಿ ಹಂಚಿಕೊಳ್ಳಬೇಕು ಎನ್ನಿಸಿತು.
ಇಂದಿನ ಶರವೇಗದ ಯುಗದಲ್ಲಿ ರಾಕೆಟ್ ಸ್ಪೀಡಿನಲ್ಲಿ ಮುನ್ನುಗ್ಗುತ್ತಿರುವ ನಮಗೆ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ಗಮ್ಯವನ್ನು ಪರೀಕ್ಷಿಸಿಕೊಳ್ಳಲು ಸಮಯ ಮಾಡಿಕೊಳ್ಳಬೇಕು ಎಂಬ ವಿವೇಚನೆಯೇ ಇಲ್ಲವಾಗುತ್ತಿದೆ. ಪತ್ರಿಕೆಗಳೊಂದಿಗೆ, ಸುದ್ದಿ ವಾಹಿನಿಗಳೊಂದಿಗೆ ನಮ್ಮ ಒಡನಾಟ ಇಷ್ಟು ಗಾಢವಾದರೂ ಇಂದಿನ ಪ್ರಜಾಪ್ರಭುತ್ವದ ಸಮಾಜದಲ್ಲಿ ಮಾಧ್ಯಮಗಳ ಪಾತ್ರ ಏನು ಎಂಬ ಮೂಲಭೂತ ಪ್ರಶ್ನೆಯನ್ನೇ ಕೇಳಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಡಿ.ವಿ.ಜಿ ಪತ್ರಿಕೆಗಳ ಪಾತ್ರದ ಬಗ್ಗೆ ಸೊಗಸಾಗಿ ಪುಟ್ಟದಾಗಿ ಹೇಳಿದ್ದು ಇಷ್ಟವಾಯಿತು.
“ಪ್ರಜಾರಾಜ್ಯದಲ್ಲಿ ವೃತ್ತಪತ್ರಿಕೆಯು ಪ್ರಜೆಯ ಅಂತರಂಗವೆಂದು ಮೇಲೆ ಹೇಳಿದೆನಷ್ಟೆ. ಅಂತರಂಗದ ಅತಿ ಶ್ರೇಷ್ಠವಾದ ಕಾರ್ಯವು ವಿವೇಚನೆ. ರಾಜನಿಗೆ ಮಂತ್ರಿಗಳು ಹೇಗೆಯೋ, ಪ್ರಜೆಗೆ ಪತ್ರಿಕೆಗಳು ಹಾಗೆ; ಎಂದರೆ- ಅವು ರಾಜ್ಯಸ್ಥಿತಿಯನ್ನು ಚೆನ್ನಾಗಿ ವಿವರಿಸಿ, ಧರ್ಮಾಧರ್ಮಗಳ ವಿಮರ್ಶೆಯನ್ನು ಸುಲಭಪಡಿಸತಕ್ಕವುಗಳಾಗಬೇಕು. ಹಿಂದೆ ಸನ್ಮಂತ್ರಿಗಳಾದವರು ರಾಜನೊಂದಿಗೆ ಕುಳಿತು ಆಲೋಚಿಸಿ, ಸಲಹೆಗಳನ್ನು ಕೊಟ್ಟು, ನಿರ್ಣಯ ಕಾರ್ಯವನ್ನು ರಾಜನಿಗೇ ಬಿಡುತ್ತಿದ್ದರು; ಆಲೋಚನೆ ಮಾಡುವ ಕೆಲಸವನ್ನು ರಾಜನಿಗೆ ತಪ್ಪಿಸಿ, ತಾವೇ ನಿರ್ಣಯಗಳನ್ನು ಕೊಟ್ಟು, ಅವನನ್ನು ಸಿಂಗರದ ಬೊಂಬೆಯಾಗಿ ಮಾಡುತ್ತಿರಲಿಲ್ಲ. ಈಗ ಪತ್ರಿಕೆಗಳೂ ಹಾಗೆಯೇ ಪ್ರಜೆಗಳಲ್ಲಿ ಸ್ವತಂತ್ರ ವಿಚಾರ ಬುದ್ಧಿಯನ್ನು ಬಲಪಡಿಸತಕ್ಕವುಗಳಾಗಿರಬೇಕು. ಆದರೆ ಕೆಲ ಪತ್ರಿಕೆಗಳ ಲೇಖಕರಿಗೆ ಇದು ಸುಲಭವಲ್ಲ.”
ಇಷ್ಟರಲ್ಲಿ ಪತ್ರಿಕೆಯ ಜವಾಬ್ದಾರಿ ಹಾಗೂ ಸರಹದ್ದಿನ ಪರಿಚಯ ಸಿಕ್ಕುಬಿಡುತ್ತದೆ. ಮುಂದೆ ಪತ್ರಿಕೆಗಳ ಸ್ವಾತಂತ್ರ್ಯದ ಬಗ್ಗೆ ಬರೆಯುತ್ತಾ ಡಿವಿಜಿ ಲಾರ್ಡ್ ಬ್ರೈಸ್ ಎಂಬುವವನ ವಿಚಾರವನ್ನು ಅನುಮೋದಿಸುತ್ತಾರೆ. ಇದು ಸಹ ಕುತೂಹಲಕರವಾಗಿದೆ.
“ ಪತ್ರಿಕೆಗಳು ಜಾಗರೂಕತೆ ಬಿಟ್ಟು ಒಂದೊಂದು ವೇಳೆ ನಿರಪರಾಧಿಗಳಿಗೆ ನೋವನ್ನುಂಟುಮಾಡಬಹುದು. ಆದರೆ ಪ್ರಮಾಣ ರುಜುವಾತುಗಳಿಲ್ಲದಿದ್ದರೆ ತಾವು ಮಾತನ್ನೇ ಆಡುವುದಿಲ್ಲವೆಂದು ಅವು ವ್ರತ ಮಾಡಿಕೊಂಡರೆ ಅನೇಕ ಮಂದಿ ಕೆಡುಕರು ತಪ್ಪಿಸಿಕೊಳ್ಳುವಂತೆ ಆಗುವುದು. ಇಂಥಾ ಕೆಟ್ಟ ಜನರನ್ನು ಬಯಲಿಗೆಳೆಯುವುದು ಆವಶ್ಯವಾಗಿ ನಡೆಯಬೇಕಾದ ದೊಡ್ಡ ಕೆಲಸ… ವೃತ್ತಪತ್ರಿಕೆಯು ಮನೆಗಾವಲಿನ ನಾಯಿಯ ಹಾಗೆ. ಅದು ಗಟ್ಟಿಯಾಗಿ ಬೊಗಳುತ್ತಿರುವುದೇ ನಮಗೆ ಒಂದು ಉಪಕಾರ. ಹತ್ತಿರ ಬಂದವನಿಗೆ ದುರುದ್ದೇಶವೇನೂ ಇಲ್ಲದಿದ್ದರೂ ಅದರ ಬೊಗಳಿಕೆಯನ್ನು ಅವನು ಸಹಿಸಬೇಕು.”
ಈ ಅಂಶವನ್ನು ಗಮನಿಸಿದರೆ ಪತ್ರಿಕೆಗಳ ಓದುಗರು, ಸುದ್ದಿ ವಾಹಿನಿಗಳ ವೀಕ್ಷಕರು ಅವುಗಳಿಗೆ ತೋರಬೇಕಾದ ರಿಯಾಯಿತಿಯ ಸೂಚನೆಯೂ ಸಿಕ್ಕುತ್ತದೆ. ಒಟ್ಟಿನಲ್ಲಿ ಮಾಧ್ಯಮಗಳ ವರ್ತನೆ ಹಾಗೂ ಅವುಗಳ ಜವಾಬ್ದಾರಿಗಳ ಬಗೆಗೆ ಮಾಧ್ಯಮದ ಮಂದಿಯೂ ಹಾಗೂ ಜನಸಾಮಾನ್ಯರೂ ತಲೆ ಕೆಡಿಸಿಕೊಂಡಿರುವ ಈ ಸಂದರ್ಭದಲ್ಲಿ ಡಿವಿಜಿಯವರ ಪುಸ್ತಕದಲ್ಲಿನ ಈ ಎರಡು ಆಯಾಮದ ಚಿಂತನೆಗಳು ಸಹಾಯಕವಾಗಬಹುದು ಎಂದು ಭಾವಿಸುತ್ತೇನೆ.

- Login or register to post comments
- 292 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
ಪ್ರಿಯರೇ,
ನಮಸ್ಕಾರ. ಇತ್ತೀಚೆಗೆ ಬಹಳ ಚರ್ಚೆಗೊಳಗಾಗುತ್ತಿರುವುದು ಅಪರಾಧಗಳಲ್ಲ. ಅವುಗಳನ್ನು ರಂಜನೀಯವಾಗಿ ಬಿಂಬಿಸುತ್ತಿರುವ ಮಾಧ್ಯಮಗಳು. ಸಮಾಜವನ್ನು ಪ್ರತಿನಿಧಿಸೋ ಅಂಗಗಳಲ್ಲಿ ಬಹುಮುಖ್ಯವಾದ ಮಾಧ್ಯಮಗಳು ತಮ್ಮ ನೈತಿಕತೆಯನ್ನ ಮರೆತು "ಸುದ್ದಿಯೆಂಬ ಸೂಳೆ"ಯ ಬೆನ್ನತ್ತಿ ಹೊರಟಿರುವುದು ನಿಜಕ್ಕೂ ಅಪಾಯಕಾರಿ.
ತಮ್ಮ ಲೇಖನದಲ್ಲಿ ಪ್ರಸ್ತುತ ವಿಚಾರಗಳ ಕುರಿತು ಚರ್ಚಿಸಿದ್ದೀರಿ. ಮತ್ತಷ್ಟು ಬರೆಯಬಹುದಿತ್ತೇನೋ ಎನಿಸುತ್ತೆ. ದಿ ಹಿಂದೂವಿನಲ್ಲಿ ಈ ಕುರಿತು ಇತ್ತೀಚೆಗೆ ವಿಸ್ತಾರವಾದ ಲೇಖನವೊಂದು ಬಂದಿತ್ತು. ಈ ಕುರಿತು ಬರೆಯಬೇಕೆಂದಿದ್ದೇನೆ. ಆದರೆ, ಯಾವಾಗ ಸಾಧ್ಯವಾಗ್ತದೋ ನೋಡ್ಬೇಕು.
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/
ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
ನಿಮ್ಮ ಬರಹಕ್ಕಾಗಿ ಕಾಯುತ್ತಿರುತ್ತೇನೆ.
ಹಿಂದೂ ಪತ್ರಿಕೆಯ ಲೇಖನಕ್ಕೆ ಲಿಂಕು ಇದ್ದರೆ ಕೊಡಿ
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
ಸುಪ್ರೀತ್ ,
ಹೌದು, ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸಬೆಕು, ಮಾಧ್ಯಮಗಳ ಇತ್ತೀಚಿನ ವರದಿಗಳನ್ನು ನೋಡಿದಾಗ ತುಂಬಾ ಬೇಸರವಾಗುತೆ, ಕೆಲವು ಧೃಶ್ಯ ಮಾಡ್ಯಮಗಳು, ೨೪/೭ ನ್ಯೂಸ್ ಪ್ರಸಾರಕೋಸ್ಕರ ಸಣ್ಣ ಸಣ್ಣ ವಿಷಯಗಳನು ತುಂಬಾ ದೊಡ್ಡದಾಗಿ ಬಿಂಬಿಸ್ಥ ಇದ್ದಾರೆ, ಇದರಿಂದ ತುಂಬಾ ಅನಾನುಕೂಲಗಳೆ ಜಾಸ್ತಿ ಇದೆ ಅಂತ ನನ್ನ ಅನಿಸಿಕೆ,
ಸಮಾಜದ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಬೀರುತಿರುವುದಂತೂ ಸತ್ಯ.
ಗುರುಪ್ರಸಾದ್
ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
ನಿಮ್ಮ ಲೇಖನದ ಕೊನೆಯ ಸಾಲು ಉಲ್ಲೇಖಿಸಿ ಹೇಳುವುದಾದರೆ, ಚಿಂತನೆಯಿಂದ ಮಾಧ್ಯಮದ ದುಂಡಾವರ್ತನೆ ನಿಲ್ಲುತ್ತದಾ?
ಈಗ ಬೇಕಿರುವುದು ಪ್ರತಿಭಟನೆ. ನೀವು ಮಾಡಿದ ವರದಿಗಾರಿಕೆ ರೀತಿ ಸರಿಯಾಗಿಲ್ಲ ಎಂದು ಸಂಬಂಧಿಸಿದ ಪತ್ರಿಕೆ ಅಥವಾ ಚಾನೆಲ್‌ಗಳ ಮುಖ್ಯಸ್ಥರಿಗೆ ನೇರವಾಗಿ ಹೇಳುವುದು. ಅದು ಪತ್ರ, ಈ ಮೇಲ್, ಅಥವಾ ಸಾಂಘಿಕ ಪ್ರತಿಭಟನೆಯ ಮೂಲಕವಾಗಿರಬಹುದು- ಒಟ್ಟಿನಲ್ಲಿ ನಮ್ಮ ಧ್ವನಿ ಅವರಿಗೆ ಮುಟ್ಟಬೇಕು.
ಸ್ವಯಂ ನಿಯಂತ್ರಣ ಇಲ್ಲದಿರುವಾಗ, ಬಾಹ್ಯ ನಿಯಂತ್ರಣಕ್ಕೆ ಮುಂದಾಗುವುದು ಅನಿವಾರ್ಯ, ಅಲ್ಲವೆ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
ಚಿಂತನೆಯಿಂದ ಏನೂ ಬದಲಾವಣೆಯಾಗುವುದಿಲ್ಲ ಎನ್ನುವುದು ಅಷ್ಟು ಸಮಂಜಸವಲ್ಲ. ಎಲ್ಲಾ ಪ್ರತಿಭಟನೆಯೂ ಚಿಂತನೆಯ ನೆಲೆಯಲ್ಲೇ ರೂಪುಗೊಳ್ಳುವುದು. ಮಾಧ್ಯಮದ ದುಂಡಾವರ್ತಿ ವರ್ತನೆ ನನಗೆ ಹೇಸಿಗೆ ಉಂಟು ಮಾಡಿತು ಎಂದು ಹೇಳಿ ಅದಕ್ಕೆ ತಾತ್ವಿಕ ಕಾರಣಗಳನ್ನು ಕೊಟ್ಟು ಚಿಂತನೆಗೆ ಶುರು ಮಾಡಿದರೆ ಸಮಸ್ಯೆಯ ವಾಸ್ತವತೆ, ಆಳ, ಅಗಲಗಳು ಸಿಕ್ಕುತ್ತವೆ ಅನ್ನಿಸುತ್ತದೆ. ‘ಸಂಪದ’ದ ವೇದಿಕೆಯಲ್ಲಿ ನಮ್ಮ ಅಸಮಾಧಾನವನ್ನು ಪ್ರಕಟಿಸುವುದೂ ಪ್ರತಿಭಟನೆಯ ಒಂದು ವಿಧಾನ ಎಂದು ಭಾವಿಸಿದ್ದೇನೆ.
ಪ್ರತಿಭಟನೆಗಳ ಬಗ್ಗೆ ಇನ್ನೂ ವಿಸ್ತೃತವಾಗಿ ಚರ್ಚೆ ನಡೆಸೋಣವೇ? ಸಾಧ್ಯವಾದರೆ ಸಂಬಂಧಿಸಿದವರ ಇಮೇಲ್ ವಿಳಾಸವನ್ನೂ ಸಂಪಾದಿಸಿಕೊಂಡು ಚರ್ಚೆಗೆ ತೊಡಗಬಹುದು... ಏನಂತೀರಿ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com