ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ:
ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ:
ಇದು ಸಂಪೂರ್ಣವಾಗಿ ಅನಿರೀಕ್ಷಿತ ತೀರ್ಪೇನಲ್ಲ. ಹೊಸ ಆರ್ಥಿಕ ನೀತಿ ಮಾರುಕಟ್ಟೆಗಳಲ್ಲಿ ತಂದು ಒಟ್ಟಿರುವ ಹೊಸ ಸಂಪತ್ತಿನ ಮರುಳು ನ್ಯಾಯಾಲಯಗಳಿಗೂ ಆವರಿಸಿರುವುದು ಈ ತೀರ್ಪಿನಿಂದ ಗೊತ್ತಾಗುವಂತಿದೆ. ಹಾಗಾಗಿಯೇ ಅದು ಇಂಗ್ಲಿಷ್ ಇಲ್ಲದೆ 'ಪ್ರಗತಿ' ಸಾಧ್ಯವಿಲ್ಲವೆಂಬ ಹಳೆಯ ಅರ್ಧ ಸತ್ಯವನ್ನೇ ಹೊಸ ಹುರುಪಿನಿಂದ ಪೂರ್ಣ ಒಪ್ಪಿಕೊಳ್ಳುತ್ತಾ ಕನ್ನಡ ಮಾಧ್ಯಮ ಜಾರಿಗೆ ಸಂಬಂಧಿಸಿದ ಸರ್ಕಾರಿ ಆಜ್ಞೆಯನ್ನು ಅನೂರ್ಜಿತಗೊಳಿಸಿದೆ. ಬಹಳ ಹಿಂದಿನಿಂದಲೂ ಎಲ್ಲ ಶಾಲೆಗಳಲ್ಲಿ - ಈಗ ಒಂದನೇ ತರಗತಿಯಿಂದಲೇ - ಎಲ್ಲ ಮಕ್ಕಳಿಗೆ ಇಂಗ್ಲಿಷ್ ಕಲಿಸಲಾಗುತ್ತಿದೆ ಎಂಬ ಸಂಗತಿಯನ್ನೇ ಗಮನಕ್ಕೆ ತಂದುಕೊಳ್ಳದೆ, ಇಂಗ್ಲಿಷ್ ಪರವಾಗಿ ವಕ್ತಾರಿಕೆ ಮಾಡಿರುವ ಈ ತೀರ್ಪು, ಮಕ್ಕಳ ಕಲಿಕೆಯ ಬಗೆಗಿರುವ ತಾತ್ವಿಕತೆಯನ್ನೇ ಸಂಪೂರ್ಣವಾಗಿ ತಿರಸ್ಕರಿಸುವ ಮೂಲಕ ಮುಂದಿನ ದಿನಗಳು ಹೇಗೆ ಕೇವಲ ಮಾರುಕಟ್ಟೆ ವಾಸ್ತವತೆಯ ದಿನಗಳು ಮಾತ್ರವಾಗಿರುತ್ತವೆ ಮತ್ತು ಅದಕ್ಕೆ ನ್ಯಾಯಾಂಗದ ಬೆಂಬಲವೂ ಉಂಟು ಎಂಬ ಅಪಾಯದ ಸೂಚನೆಯನ್ನೂ ನೀಡಿದೆ!
ಶಿಕ್ಷಣ ಮಾಧ್ಯಮ ಸ್ವಾತಂತ್ರ್ಯವೂ ಅಭಿವ್ಯಕ್ತಿ ಸ್ವಾತಂತ್ರ್ಯದ ಅವಿಭಾಜ್ಯ ಅಂಗವೆಂದು ಉದಾರವಾಗಿ ಅರ್ಥೈಸಿರುವ ಕೋರ್ಟು, ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವಂತೆ ಮಾಡಿರುವ ಶಿಫಾರ್ಸನ್ನು ಹೇಗೆ ಸಮರ್ಥಿಸಿಕೊಳ್ಳುವುದೋ ತಿಳಿಯದು! ಏಕೆಂದರೆ, ಕೋರ್ಟಿನ ಈ ಅರ್ಥೈಸುವಿಕೆಯ ಪ್ರಕಾರ, ತಮ್ಮ ಮಕ್ಕಳಿಗೆ ಯಾವುದೇ ಭಾಷೆಯನ್ನು ಕಲಿಸದಿರುವ ಸ್ವಾತಂತ್ರ್ಯವನ್ನೂ ಪೋಷಕರು ಹೊಂದಿರುತ್ತಾರೆ ಅಲ್ಲವೆ? ಕೋರ್ಟು ಈಗ ಮಾನ್ಯ ಮಾಡಿರುವ ಪ್ರಗತಿಯ ಹೆಸರಲ್ಲೇ ಈ ಸ್ವಾತಂತ್ರ್ಯವನ್ನೂ ಒತ್ತಾಯಿಸಿ ಪೋಷಕರು ಅಥವಾ ಸಾಹುಕಾರ ಶಾಲೆಗಳ ದಲ್ಲಾಳಿಗಳ್ಯಾರಾದರೂ ಕೋರ್ಟಿನ ಮೊರೆ ಹೋದರೆ, ಈ ಕೋರ್ಟು ಏನು ಹೇಳುವುದು? ಸಂವಿಧಾನ ಪ್ರದಾನ ಮಾಡಿರುವ ಸ್ವಾತಂತ್ರ್ಯದ ಅರ್ಥವನಕಾರಾಷ್ಟ್ರೀಯ ವಿವೇಕದ ಸಾಂಸ್ಕೃತಿಕ ಗಡಿಗಳನ್ನು ಧಿಕ್ಕರಿಸಿ ವಿಸ್ತರಿಸಲಾಗದೆಂಬ ಅರಿವಿನಿಂದಲೇ ಸುಪ್ರೀಂ ಕೋರ್ಟ್ ಐದನೇ ತರಗತಿಯವರೆಗಾದರೂ ಮಾತೃ/ಪ್ರಾದೇಶಿಕ ಭಾಷಾ ಮಾಧ್ಯಮ ಶಿಕ್ಷಣವನ್ನು ಜಾರಿಗೆ ತರುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ದಯಪಾಲಿಸಿತ್ತು. ಇದಾದ ಒಂದೂವರೆ ದಶಕದ ನಂತರ ನಮ್ಮ ಹೈಕೋರ್ಟು ಬದಲಾದ (ರಾಜಕೀಯ) 'ವಾಸ್ತವ'ಕ್ಕೆ ತಕ್ಕಂತೆ ತಾನೂ ಬದಲಾಗುವ 'ಆಧುನಿಕತೆ'ಯನ್ನು ಪ್ರದರ್ಶಿಸುತ್ತಾ, ಸುಪ್ರೀಂ ಕೋರ್ಟಿನ ತೀರ್ಪಿನ ಹಿಂದಿದ್ದ ರಾಷ್ಟ್ರೀಯ ಭಾವನೆಯೇ ಅಸಂಗತವೆನ್ನುವಂತಹ ತೀರ್ಪು ನೀಡಿದೆ!
ಈ ತೀರ್ಪಿನ ಹಿಂದೆ ಅಂತಹ ಜಟಿಲ ವಿಷಯಗಳ ನಿರ್ವಹಣೆಯೇನೂ ಇದ್ದಂತೆ ತೋರುವುದಿಲ್ಲ. ಅದು ಸರಳವಾಗಿ, ನೇರವಾಗಿದೆ! ಇಂತಹ ಸರಳ, ನೇರ ತೀರ್ಪನ್ನು ಬರೆಯಲು ನ್ಯಾಯಾಧೀಶರಿಗೆ ಎರಡು ವರ್ಷಗಳು ಬೇಕಾಯಿತು ಮತ್ತು ಅದು ಈ ಪ್ರಕರಣವನ್ನು ಆಲಿಸಿದ ನ್ಯಾಯಾಧೀಶರಲ್ಲೊಬ್ಬರಾಗಿದ್ದ ಕೋರ್ಟಿನ ಮುಖ್ಯ ನ್ಯಾಯಾಧೀಶರು ಈಗ ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರಾಗಿ ಭಡ್ತಿ ಹೊಂದಿ ಹೋಗಬೇಕಾದ ಮುನ್ನ ನಿಕಾಲೆ ಮಾಡಬೇಕಾದ ಅನಿವಾರ್ಯತೆಯಲ್ಲಷ್ಟೇ ಪ್ರಕಟವಾಗಿದೆ ಎಂಬ ಸಂಗತಿಗಳು ಈ ಬಗ್ಗೆ ಇನ್ನಷ್ಟು ಪ್ರಶ್ನೆಗಳನ್ನು ಎತ್ತಬಲ್ಲವು. ಹಾಗಾಗಿ, ಸರ್ಕಾರ ತಾನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿದ್ದಂತೆ ನಿಜವಾಗಿ ಕನ್ನಡ ಅಭಿವೃದ್ಧಿಗೆ ಬದ್ಧವಾಗಿದ್ದರೆ, ನ್ಯಾ|| ರಾಮಾ ಜೋಯಿಸರೂ ಸೇರಿದಂತೆ ಕನ್ನಡಕ್ಕೆ ಸಾಂಸ್ಕೃತಿಕ ದೃಷ್ಟಿಯಿಂದ ಬದ್ಧವಾದ ಕಾನೂನು ತಜ್ಞರು, ಶಿಕ್ಷಣ ತಜ್ಞರು ಮತ್ತು ಕನ್ನಡ ಬುದ್ಧಿಜೀವಿಗಳು ಹಾಗೂ ಕಾರ್ಯಕರ್ತರೊಂದಿಗೆ ವ್ಯವಧಾನದಲ್ಲಿ ವ್ಯಾಪಕ ಚರ್ಚೆ ನಡೆಸಿ, ಈ ತೀರ್ಪಿಗೆ ಕೂಡಲೇ ಸುಪ್ರೀಂ ಕೋರ್ಟಿನಿಂದ ತಡೆಯಾಜ್ಞೆ ಪಡೆಯುವ ಏರ್ಪಾಡು ಮಾಡಬೇಕು.

- Login or register to post comments
- 250 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ:
ಹೈ ಕೋರ್ಟ್ ನ ಈ ನಿರ್ಣಯ ಕನ್ನಡ ಜನತೆಗೇ ಅವಮಾನ ಮಾಡುವಂತಹುದಾಗಿದೆ, ಮತ್ತು ನಮ್ಮ ಭಾಷಾ ಅಂತಸ್ಸತ್ವಕ್ಕೇ ಅಪಮಾನ ತರುವಂತಹ ಈ ನಿರ್ಣಯವು ಅನುಕೂಲ ಸಿಂಧುವಿನದ್ದಾಗಿದ್ದು ವಿದೇಶೀ ಸಂಸ್ಕೃತಿಯ ವ್ಯಾಮೋಹದ ಇನ್ನೊಂದು ಕರಾಳ ರೂಪವಾಗಿದೆ.
ಕನ್ನಡದೊಂದಿಗೆ ನಮ್ಮ ಅಭಿವ್ಯಕ್ತಿಯೂ ನಶಿಸಿ ಹೋಗಿ ನಮ್ಮೆಲ್ಲರನ್ನೂ ಇತರ ಭಾರತೀಯರ ಗುಲಾಮರನ್ನಾಗಿಸುವುದೇ ನಮ್ಮ ಘನ ಉಚ್ಛ ನ್ಯಾಯಾಲಯದ ನಿಜ ಉದ್ದೇಶವಾಗಿದೆ.
ಕನ್ನಡ ಮಾಧ್ಯಮದಲ್ಲೇ ಪ್ರೌಢ ಶಾಲೆಯ ವರೆಗೂ ಕಲಿತ ಎಷ್ಟೋ ಜನ ಇಂದು ದೇಶ ವಿದೇಶದಲ್ಲಿ ಹೆಸರು ಮಾಡಿ ನಮ್ಮ ಸಾಮರ್ಥ್ಯಕ್ಕೆ, ಇತರ ಭಾಷಿಕರೊಂದಿಗೆ ಕನ್ನಡದ ಭಾಷಾ ವಿಲಯನ ಶಕ್ತಿಗೆ ಸಾಕ್ಷಿಯಾಗಿದ್ದಾರೆ. ಆದ್ದರಿಂದ ನ್ಯಾಯಾಲಯದ ನಿರ್ಣಯವು ಆಧಾರ ರಹಿತವೂ ಆಗಿದೆ
- ಅರವಿಂದ್
ಉ: ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ:
ನಮ್ಮ ಜನಕ್ಕೆ ಇಂಗ್ಲೀಷಿನ ರಾವು ಬಡಿದಿದೆ ಅನ್ಸುತ್ತೆ. ತೀರ್ಥಹಳ್ಳಿಯಂತಹ ಸಣ್ಣ ಪಟ್ಟಣಗಳಲ್ಲೂ ಸುತ್ತ ಮುತ್ತಲಿನ ಹಳ್ಳಿಯ ಜನ ಮನೆಯ ಪಕ್ಕದಲ್ಲಿಯೆ ಒಳ್ಳೆಯ ಸರಕಾರಿ/ಅನುದಾನಿತ ಕನ್ನಡ ಶಾಲೆಗಳಿದ್ದಾಗಲೂ ಮಕ್ಕಳನ್ನ ಆಟೋಗಳಲ್ಲಿ, ಬಸ್ ಗಳಲ್ಲಿ ತುರುಕಿ ಪಟ್ಟಣದ ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸಲು ಪ್ರಾರಂಭಿಸಿದ್ದಾರೆ. ದೊಡ್ಡ ದೊಡ್ಡ ನಗರಗಳಲ್ಲಿರುವ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಹೇಗೋ ನನಗೆ ಗೊತ್ತಿಲ್ಲ, ಆದರೆ ಸಣ್ಣಪುಟ್ಟ ಪಟ್ಟಣದಲ್ಲಿರುವ ಈ ಖಾಸಗಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಸಾಮಾನ್ಯವಾಗಿ ಕಳಪೆಯಾಗಿರುತ್ತದೆ. ಸರ್ಕಾರಿ ನೌಕರಿ ಸಿಗದೆ, ಎಲ್ಲಿಯೂ ಸಲ್ಲದವರು ಇಲ್ಲಿ ಮೇಷ್ಟ್ರಾಗಿರುತ್ತಾರೆ. ಸಾಮಾನ್ಯವಾಗಿ ಈ ಶಾಲೆಗಳಿಗೆ ಸಾಕಷ್ಟು ದೊಡ್ಡದಾದ ಆಟದ ಬಯಲುಗಳಿರುವುದಿಲ್ಲ. ಇಷ್ಟಾಗಿಯೂ ದೈವಸಾಕ್ಷಾತ್ಕಾರವೂ ಇಂಗ್ಲೀಷಿನಲ್ಲಿ ಮಾತ್ರ ಸಾಧ್ಯ ಎಂಬ ನಂಬಿಕೆ ಬಲವಾಗುತ್ತಿರುವ ಈ ಕಾಲದಲ್ಲಿ ಅಮಾಯಕ ಪೋಷಕರು ಈ ಗಿಲೀಟಿಗೆ ಮರುಳಾಗುತ್ತಿದ್ದಾರೆ. ಎಲ್ಲಕ್ಕೂ ಕಲಶವಿಟ್ಟಂತೆ ನಮ್ಮ ನ್ಯಾಯಾಲಯವೂ ಅದಕ್ಕೆ ಅಧಿಕೃತತೆಯ ಮುದ್ರೆಯನ್ನೊತ್ತಿ ಬಿಟ್ಟಿದೆ!
ಉ: ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ:
ಇದು ಗಂಡಾ-ಗುಂಡಿ ಆಡಿ ಇತ್ತ ತೀರ್‌ಪು ಅನಿಸುತ್ತದೆ. ಯಾಕಂದರೆ ೧) ಮಂದಿಯ ಇಂಗಲೀಸ್ ಬಗೆಗಿನ ಮರುಳಿನ ಲಾಬವನ್ನು ಎರ್ರಾ-ಬಿರ್ರಿ ಪಡೆಯುತ್ತಿರುವ ಇಂಗಳೀಸ್ ಸಾಲೆಗಳನ್ನು ನಡೆಸುತ್ತಿರುವವರಿಗೆ ಇಂತದೊಂದು ತೀರ್‌ಪಿನ ಸಕ್ಕತ್ ಬೇಡಿಕೆ ಇತ್ತು, ಅದಕ್ಕಾಗಿ ಅವರು ಏಟು ದುಡ್ಡು ಬೇಕಾದರೂ ಸುರಿಯಲು ಸಿದ್ದವಾಗಿದ್ದರು. ೨) ನಮ್ಮ ನ್ಯಾಯಾಂಗ ವೆವಸ್ತೆಯ ಮೇಲೆ ಮಂದಿಯ ನಂಬಿಕೆ ಹೊರಟೇ ಹೋಗಿದೆ. ಕೇಸುಗಳನ್ನು ಹಾಕಿರುವವರು ಸತ್ತು ಹೋಗಿದ್ದರೂ ಕೇಸುಗಳು ಮುಗಿದಿರುವದಿಲ್ಲ,.. ಆಟೊಂದು ಸಣ್ಣಗೇ ಇವುಗಳ ನಡೆ. ೩) ಕೆಳಗಿನ ಕೋರ್ಟಲ್ಲಿ ತಮ್ಮಂತೆ ತೀರ್‌ಪು ಬರದಿದ್ದಲ್ಲಿ,.. ಹಣ ತೆತ್ತು ಮೇಲ್ ಕೋರ್ಟಿನಿಂದ ಆರ್ಡರ್ ತರುತ್ತಾರೆ ಮಂದಿ.
ಈಗ ಸರಕಾರ ಈ ಕೂಡಲೆ ಮಾಡಬೇಕಿರುವದು ಸುಪ್ರೀಂ ಕೋರ್ಟಿನಿಂದ ತಡೆ.....
ಇದು ಕನ್ನಡಕ್ಕೆ ಅವಮಾನ ಅಸ್ಟೇ ಅಲ್ಲ, ಕನ್ನಡಿಗರಿಗೆ ಅವಮಾನ...
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ:
ಅಲ್ಲಾ ರೀ ನಾವು ಯಾವ ಭಾಷೆಯಲ್ಲಿ ಬೇಕಾದರೂ ಕಲಿಯುತ್ತೇವೆ ನಿಮಗೇನು? ಹೊಟ್ಟೆಕಿಚ್ಚಾ, ನಿಮಗೆ ಬುದ್ದಿ ಇಲ್ಲವಾ, ನಿಮಗೆ ಇಂಗ್ಲೀಶ್ ಬರಲ್ಲ ಅದಕ್ಕೆ ನಿಮಗೆ ನಮ್ಮ ಮೇಲೆ ಇಷ್ಟೊಂದು ದ್ವೇಷ, ಇವ್ವತ್ತು ಕಿತ್ತೊಗಿರೋ ಕನ್ನಡದಲ್ಲಿ ಕಲಿತರೆ ನಾವು ಕಾಲ್ ಸೆಂಟೆರ್ ಗೆ ಹೋಗಿ ನಮ್ಮ ಮಕ್ಕಳು ಅಲ್ಲೆಲ್ಲಾ ರಾತ್ರಿ ಹೊತ್ತು ಅದ್ಯಾರ್ಯಾರು ಜೊತೆನಲ್ಲೋ ಟಸ್ ಪುಸ್ ಅಂತ ಮಾತನಾಡಿ ಅವರ ಜೊತೆಯಲ್ಲಿ ಚಕ್ಕಂದವಾಡಿ ಕೈ ತುಂಬಾ ದುಡ್ಡು ತರಲ್ಲವಾ ! ನಿಮಗೆ ಈ ಅದೃಷ್ಟ ಇಲ್ಲ ಅಂತಾ ತಾನೆ ನಿಮ್ಮ ಈ ದೂರು. ಎನ್ನುವ ತಂದೆ ತಾಯಿಗಳಿರುವ ನಮ್ಮ ಈ ಮಹಾನ್ ನಾಡಿನಲ್ಲಿ ನಮ್ಮ ಭಾಷೆಯ ಬಗ್ಗೆ ಅವರಿಗೆ ಈ ರೀತಿಯ ತಾತ್ಸಾರ ಭಾವನೆ ಇರುವಾಗ ನಮ್ಮ ನಿಮ್ಮ ಗೊಡ್ಡು ಮಾತುಗಳನೆಲ್ಲಾ ಯಾರು ತಾನೆ ಕೇಳುತ್ತಾರೆ?. ನಮ್ಮ ಮಗ/ಳು ಆ ಹೆಚ್ಚು ಡೊನೇಷನ್ ಪೀಕುವ ಶಾಲೆಗೆ ಹೋದರೇನೆ ನಮ್ಮ ಪ್ರಿಸ್ಟೇಜ್ ಜಾಸ್ತಿ ಎನ್ನುವ ವರಿಗೇನು ಕಡಿಮೆಯಿಲ್ಲ ನಮ್ಮಲ್ಲಿ. ಇಂತಹವರಿಂದಲೇ ಈ ಕಂಗ್ಲೀಷ್ ಶಾಲೆಗಳು ಎಲ್ಲೆಂದರಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವುದು. ಅದಕ್ಕೆ ಸರಿಯಾಗಿ ಈ ನಮ್ಮ ಘನವೆತ್ತ ನ್ಯಾಯಮೂರ್ತಿಗಳ ಈ ರೀತಿಯ ತೀರ್ಪು ಇಂತಹವರಿಗೆಲ್ಲಾ ಭುಜಕ್ಕೆ ನೀರು ತಟ್ಟಿದಂತಾಗಿದೆ.ಇದರ ಜೊತೆಗೆ ಮುಂದಿನ ವರ್ಷದಿಂದ ಪಾಲಕರಿಂದ ಎಷ್ಟನ್ನು ಹೆಚ್ಚಾಗಿ ಪೀಕಬಹುದೆಂದು ಈಗಾಗಲೇ ಲೆಕ್ಕ ಹಾಕುತ್ತಿದ್ದಾರೆಂದು ಕೆಲವು ಕಡೆ ಸುದ್ದಿ!
ಅಲ್ಲ ಸ್ವಾಮಿ ಈ ನ್ಯಾಯ ಮೂರ್ತಿಗಳಿಗಾದರೂ ಸ್ವಲ್ಪ ಬುದ್ದಿ ಬೇಡವಾ. ನಮ್ಮ ಗಾಂಧಿ ತಾತರವರು ಆವೊತ್ತೇ ಹೇಳಿರಲಿಲ್ಲವಾ, ಮಗುವಿಗೆ ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿಯೇ ಆಗಬೇಕಂತೆ. ಇದನ್ನು ಈ ನಮ್ಮ ನ್ಯಾಯಾಧೀಶರು ಓದಿರಲಲ್ಲ ಅಂತ ಅನ್ನಿಸುತ್ತದೆ. ಇನ್ನಾದರು ನಮ್ಮ ಈ ಘನ ಸರ್ಕಾರ ಸ್ವಲ್ಪ ದಂ ನಿಂದ ಈ ತೀರ್ಪಿಗೆ ತಕ್ಷಣವೇ ಸುಪ್ರೀಂ ಕೋರ್ಟ್ ನಲ್ಲಿ ತಡೆಯಾಜ್ನೆ ತಂದರೆ ಕನ್ನಡಿಗರ ವಿರೋಧ ಕಟ್ಟಿಕೊಳ್ಳುವುದು ತಪ್ಪುತ್ತದೆ.
ಉ: ಕನ್ನಡ ಮಾಧ್ಯಮ ಕುರಿತ ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆ:
ಎಲ್ಲ ಕನ್ನಡಾಭಿಮಾನಿಗಳು ಕನ್ನಡ ಮಾಧ್ಯಮ ಶಿಕ್ಷಣವನ್ನ ಬೆಂಬಲಿಸುತ್ತಾ, ಆಂಗ್ಲ ಮಾಧ್ಯಮ ಶಿಕ್ಷಣವನ್ನ ತಿರಸ್ಕರಿಸುತ್ತಾ ಇರೋದು ಕನ್ನಡದ ಮಟ್ಟಿಗೆ ಒಳ್ಳೆಯ ಬೆಳವಣಿಗೆಯೇ ಸರಿ. ಆದರೆ, "ಕನ್ನಡ ಮಾಧ್ಯಮ ಶಿಕ್ಷಣ" ಎಷ್ಟು ಚೆನ್ನಾಗಿದೆ ಎಂದರೆ ಆ ಕನ್ನಡಾಂಬೆಗೇ ಪ್ರೀತಿಯಾಗಬೇಕು! ಇದರರ್ಥ ಇಂಗ್ಲೀಶ್ ಶಿಕ್ಷಣ ಚೆನ್ನಾಗಿದೆ ಎಂದರ್ಥವಲ್ಲ! ಕನ್ನಡ ಮಾಧ್ಯಮದ ಪ್ರಶ್ನೆ ಎದುರಾದಾಗಲೆಲ್ಲ ಕನ್ನಡ ಮಾಧ್ಯಮ ಬೆಂಬಲಿಸುವ ಎಷ್ಟು ಜನರ ಮಕ್ಕಳು ಅದೇ ಮಾಧ್ಯಮದಲ್ಲಿ ಓದಿದ್ದಾರೆ ಎನ್ನುವ ನೈತಿಕ ಪ್ರಶ್ನೆ ಧುತ್ತನೆ ಎದುರಾಗುತ್ತದೆ! "ಹೇಳೋದು ವೇದಾಂತ, ತಿನ್ನೋದು ಬದನೇಕಾಯಿ" ಅನ್ನೋ ರೀತಿ ಆಗ್ಬಾರದಲ್ವ?
ನಾನು ಓದಿದ್ದು ಆಂಗ್ಲ ಮಾಧ್ಯಮದಲ್ಲೇ. ಆದರೆ, ನನ್ನ ಕನ್ನಡಾಭಿಮಾನ, ಕನ್ನಡ ತಿಳುವಳಿಕೆ ಕನ್ನಡ ಮಾಧ್ಯಮದಲ್ಲಿ ಪದವಿ ಪಡೆದಿರುವ ನನ್ನ ಒಡಹುಟ್ಟಿದವರಿಗಿಂತ, ಸ್ನಾತಕೋತ್ತರ ಪದವಿ ಪಡೆದಿರುವ ನನ್ನ ಎಷ್ಟೋ ಮಂದಿ ಗೆಳೆಯರಿಗಿಂತ ಚೆನ್ನಾಗಿಯೇ ಇದೆ. ಮುಖ್ಯವಾಗಿ, ಮೂಲ ಕನ್ನಡ ಶಿಕ್ಷಣ, ಅಂದರೆ, ಕನ್ನಡದಲ್ಲಿ ಯೋಚಿಸುವ, ಬರೆಯುವ, ಓದುವ, ಮಾತನಾಡುವ ಕಲೆಯನ್ನ ಸಿದ್ಧಿಸಿಕೊಳ್ಳುವ ಹಾಗೆ ಮಾಡಬೇಕಾದ ಜವಾಬ್ದಾರಿ ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲಿದೆ. ನಮ್ಮ ಕನ್ನಡ ಸಾಹಿತ್ಯದ ಮೇರು ಪರ್ವತಗಳೆಲ್ಲ ಇಂಗ್ಲೀಶ್ ಸಾಹಿತ್ಯವನ್ನು ವ್ಯಾಸಂಗ ಮಾಡಿದವರೇ. ಇದರರ್ಥ ಕನ್ನಡ ಕೀಳು, ಇಂಗ್ಲೀಶ್ ಮೇಲು ಎನ್ನುವ ಅರ್ಥವಲ್ಲ. ಮುಖ್ಯವಾಗಿ, ಕನ್ನಡದಲ್ಲಿ "ಯೋಚಿಸುವುದನ್ನು" ನಾವು ಕಲಿಯಬೇಕಿದೆ, ಕಲಿಸಬೇಕಿದೆ. ಮೂಲಭೂತವಾಗಿ, ನಮ್ಮ ಕನ್ನಡ ಶಿಕ್ಷಣ ವ್ಯವಸ್ಥೆಯಲ್ಲಿನ ದೋಷವನ್ನ ಸರಿಪಡಿಸಬೇಕಿದೆಯಷ್ಟೆ. ಈಗಲಾದರೂ ನಾವೆಲ್ಲ "ಕನ್ನಡಿಗರು" ಎಚ್ಚೆತ್ತುಕೊಳ್ಳಬೇಕಿದೆ. ಏಕೆಂದರೆ, ಇದು ನಮ್ಮೆಲ್ಲರ ಕರ್ತವ್ಯ, ಧರ್ಮ.
ಸಿರಿಗನ್ನಡಂ ಗೆಲ್ಗೆ
ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/