ಶತಾವಧಾನಿ ಆರ್. ಗಣೇಶ್ ರವರ ಅಷ್ಟಾವಧಾವ
ಅಷ್ಟಾವಧಾನ ಎಂದರೇನು - ಅಷ್ಟಾವಧಾನ ಒಂದು ಕಲೆ. ಭಾಷಾ ಪಂಡಿತರ, ಸಾಮರ್ಥ್ಯವನ್ನು, ಭಾಷೆಯ ಮೇಲೆ ಅವರಿಗಿರುವ ಹಿಡಿತವನ್ನು ಒರೆಗೆ ಹಚ್ಚುವಂತಹ ಕಲೆ. ೮ ಜನ ಒಟ್ಟಿಗೇ, ಭಾಷಾ ಪಂಡಿತರಿಗೆ ಸವಾಲುಗಳನ್ನು ಎಸೆಯುವರು, ಅಷ್ಟಾವಧಾನಿಗಳು ಅವರೆಲ್ಲರಿಗೂ, ಉತ್ತರವನ್ನು ಅಲ್ಲಿಯೇ ಕಾವ್ಯದ ಮೂಲಕ ಕೊಡಬೇಕು. ಅದು ಸಂಸ್ಕೃತದಲ್ಲಿಯೂ ಇರಬಹುದು ಅಥವಾ ಕನ್ನಡದಲ್ಲಿಯೂ ಇರಬಹುದು. ಅದು ಪೃಚ್ಛಕರಿಗೆ(ಪ್ರಶ್ನೆ ಕೇಳುವವರಿಗೆ ಬಿಟ್ಟದ್ದು). ಆದರೆ ಇಲ್ಲಿ ಸಾಕಷ್ಟು ನಿಯಮಗಳುಂಟು. ಇಂತಹ ವಿಷಯದ ಮೇಲೆ, ಇಂತಹ ಛಂದಸ್ಸಿನಲ್ಲಿ, ಇಂತಹ ಅಕ್ಷರಗಳನ್ನು ಉಪಯೋಗಿಸದೆ, ಇಂತಹ ಭಾಷೆಯಲ್ಲಿ ಕಾವ್ಯ ರಚಿಸಬೇಕು ಎಂದು ಕೇಳಬಹುದು. ಕಾವ್ಯದಲ್ಲಿ ಇಂತಹ ಅಲಂಕಾರಗಳು ಇರಬೇಕು ಎಂದೂ ಕೂಡ ನಿಯಮ ಹಾಕಬಹುದು. ಅಷ್ಟಾವಧನ ಎಂದರೆ ಎಂಟು ಪೃಚ್ಛಕರಿರುತ್ತಾರೆ ಮತ್ತು ನಾಲ್ಕು ಸುತ್ತುಗಳಿರುತ್ತವೆ. ಹೀಗೆಯೇ ಶತಾವಧಾನ ಎಂದರೆ ನೂರು ಜನರು ಸೇರಿ ಒಟ್ಟಿಗೇ ಅವಧಾನಿಗೆ ಪ್ರಶ್ನೆಗಳು ಕೇಳುವರು. ಶತಾವಧಾನದ ಬಗ್ಗೆ ನನಗೆ ಹೆಚ್ಚುಿ ತಿಳಿದಲ್ಲ.
ಅಂತಹದೊಂದು ಒಳ್ಳೆಯ ಕಾರ್ಯಕ್ರಮವನ್ನು ಕಳೆದ ಶನಿವಾರ, ಗೋಖಲೆ ಸಾರ್ವಜನಿಕ ವಿಚಾರ ಸಂಕೀರ್ಣದಲ್ಲಿ ಏರ್ಪಡಿಸಲಾಗಿತ್ತು. ಅದು ಸರೋಜಾ ಕೃಷ್ಣಮೂರ್ತಿ ಎಂಬುವರ ಶ್ರದ್ಧಾಂಜಲಿ ಕಾರ್ಯಕ್ರಮ. ಆದರೆ ಎಲ್ಲರೀತಿಯ ಶ್ರದ್ಧಾಂಜಲಿ ಕಾರ್ಯಕ್ರಮ ಇದಾಗಿರಲಿಲ್ಲ. ನಾನು ಸರೋಜಾ ಕೃಷ್ಣಮೂರ್ತಿಯವರನ್ನು ನೋಡಿಲ್ಲ. ಆದರೆ ಅವರು ಮೆಟ್ಟಿದ (ಮದುವೆಯಾಗಿ ಸೇರಿದ) ನಾಡು ಕೋಲಾರ, ಸಾಂಸ್ಕೃತಿಕವಾಗಿ ಮೇಲೇರಲು ಪೂರಕವಾದ ಪ್ರಯತ್ನಗಳನ್ನು ನಡೆಸಿದ್ದರು ಎಂಬುದು ತಿಳಿದುಬಂತು. ಶತಾವಧಾನಿ, ಡಾ|| ಆರ್. ಗಣೇಶ್ ರವರ ಮೊದಲ ಅವಧಾನ ಕಾರ್ಯಕ್ರಮ ಕೋಲಾರದಲ್ಲೇ ಆಗಬೇಕು ಎಂದು ಅವರ ಮನವೊಲಿಸಿ ಡಾ||ಗಣೇಶರವರ ಮೊದಲ, ನೂರನೆಯ, ಮತ್ತು ಇನ್ನೂರನೆಯ ಅವಧಾನ ಕಾರ್ಯಕ್ರಮಗಳನ್ನು ಕೋಲಾರದಲ್ಲಿಯೇ ಏರ್ಪಡಿಸುವುದರಲ್ಲಿ ಸಫಲರಾಗಿದ್ದವರು. ಹಾಗಾಗಿ ಅವರ ನೆನಪಿಗಾಗಿ, ಅವರ ಹತ್ತಿರವರು, ಸಾಂಸ್ಕೃತಿಕವಾಗಿ ಅವರೊಡನೆ ಕಲೆತವರೆಲ್ಲ ಸೇರಿ ಅವರ ನೆನಪಿನಲ್ಲಿ, ಶತಾವಧಾನಿ ಡಾ|| ಆರ್. ಗಣೇಶ್ ಅವರ ಒಂದು ಅಷ್ಟಾವಧಾನ ಕಾರ್ಯಕ್ರಮವನ್ನೇ ಏರ್ಪಡಿಸಿದ್ದರು. ಅವರ ಸ್ಮರಮಾರ್ಥವಾಗಿ ನಡೆದ ಈ ಅಷ್ಟಾವಧನ ಕಾರ್ಯಕ್ರಮವಂತೂ ನನಗೆ ಬಹಳ ಸಂತಸವನ್ನುಂಟುಮಾಡಿತು. ಈ ಸಂತಸವನ್ನು ನಿಮ್ಮೊಡನೆ ಹಂಚಿಕೊಳ್ಳಲು ಈ ಲೇಖನ ಬರೆಯುತ್ತಿರುವೆ.
ಶನಿವಾರದ ಅಷ್ಟಾವಧಾನ "ಶತಾವಧಾನಿ ಡಾ|| ಆರ್. ಗಣೇಶ್" ರವರ ೬೦೧ನೇ ಅಷ್ಟಾವಧಾನ ಕಾರ್ಯಕ್ರಮ.
ಈ ಮಾಲಿಕೆಯನ್ನು ಇದೂ ಸೇರಿ ೯ ಭಾಗಗಳಾಗಿ ಹಾಕುವೆ. ನಮ್ಮೆ ನಿಮ್ಮೆಲ್ಲರ ಅಭಿಪ್ರಾಯಗಳನ್ನು ಹಂಚಿಕೊಳ್ಳೋಣ ಮತ್ತು ಕಾವ್ಯಗಳ ಕುರಿತಾದ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳೋಣ.
ಸವಿಯೊದಗೆ.

- Login or register to post comments
- 1023 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: