ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು
ಈ ಅಷ್ಟಾವಧಾನ ಮಾಲಿಕೆಯ ಪೀಠಿಕೆಯ ಕಂತು ಇಲ್ಲಿದೆ
ಮತ್ತು ಮೊದಲ, ನಿಷೇಧಾಕ್ಷರದ ಕಂತು ಇಲ್ಲಿದೆ
ಈಗ ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು
ಸಮಸ್ಯೆ – ಗೌರಿ ಪಚತಿ ಗೋಮಾಂಸಂ - ಗೌರಿ ಗೋಮಾಂಸವನ್ನು ಬೇಯಿಸುತ್ತಾಳೆ.
ಶಾಂತಂ ಪಾಪಂ ಇದು ಹೇಗೆ ಸಾಧ್ಯ. ಮಾಂಸವನ್ನು ತಿಂದರೂ ಹಸುವಿನಲ್ಲಿ ಕಾಮಧೇನುವನ್ನು ಕಂಡು ಹಸುವಿನ ಮಾಂಸವನ್ನು ತ್ಯಜಿಸಿದ ಎಷ್ಟೋ ಹಿಂದು ಹಾಗು ಅನ್ಯ ಧರ್ಮೀಯರ ಕುಟುಂಬಗಳು ನಮಗೆ ಉದಾಹರಣೆಯಾಗಿ ಸಿಗುವುದು. ಹೇಳಿ ಕೇಳಿ, ಗೌರಿ ಹಿಂದುಗಳ ದೇವತೆ. ಅಂತಹುದರಲ್ಲಿ, “ಗೌರಿ ಗೋಮಾಂಸವನ್ನು ಬೇಯಿಸುವಳು” ಎಂದರೆ ಏನು ಕರ್ಮ ಬಂತಪ್ಪಾ,
ಸಮಸ್ಯೆ ನೀಡಿದವರು – ಸುಧೀರ್ ಎನ್ನುವವರು. ಆದರೆ ಇವರ ಕಿರು ಪರಿಚಯ ನನಗೆ ಸಿಗಲಿಲ್ಲ
| ಸುತ್ತು | ರಚಿತವಾದ ಕಾವ್ಯದ ಸಾಲು |
| ೧ | ಪಂಚಮೋ ಜಾರಜೋ ಯತ್ರ |
| ೨ | ಪೌಶಾಸಕ್ ತತ್ರ ಸರ್ವಥಾ |
| ೩ | ಗೌರಿ ಪಚತಿ ಗೋಮಾಂಸಂ |
| ೪ | ಗೌರೋ ಭುಂಕ್ತೆ ಭುಭುಕ್ಷಿತಃ |
ಅರ್ಥ ಹೀಗಿದೆ
ಗೌರಿ ಎಂದರೆ ದೇವತೆ ಮಾತ್ರವಲ್ಲ, ಬಿಳಿಯ ಹೆಂಗಸು ಎಂದು ಕೂಡ ಅರ್ಥವಿದೆ. white lady.
ಬಿಳಿಯಳಾದ, ದೊರೆ ೫ನೇ ಜಾರ್ಜ್ ನ ಹೆಂಡತಿ ತನ್ನ ಗಂಡನಿಗೆ (ಇನಿಯನಿಗೆ) ಗೋಮಾಂಸವನ್ನು ಬೇಯಿಸಿ ಹಾಕುವಳು, ಅವಳು ಬೇಯಿಸಿ ಕೊಟ್ಟಿದ್ದನ್ನು ಅವನ್ನು ತಿನ್ನುವನು – ಇಷ್ಟೇ, ನಿಮ್ಮ ಸಮಸ್ಯೆಗೆ ಉತ್ತರ ಸಿಕ್ಕಿತೇ.
ಸಮಸ್ಯೆ ನೀಡಿದವರು ಕೊಟ್ಟ ಉತ್ತರ
ಅವಧಾನದಲ್ಲಿ ಭಾಗವಹಿಸುವ ಪೃಚ್ಛಕರೂ ಕೂಡ ತಿಳಿದುಕೊಂಡಿರುವವರಾಗಿರಬೇಕು. ಹಾಗೆಯೇ ಅವರು ಕೇಳುವ ಪ್ರಶ್ನೆಗೆ ಅವರು ಮನೆಯಲ್ಲಿಯೇ ಒಂದು ಉತ್ತರ ಕಂಡುಕೊಂಡಿರಬೇಕು. ಇಲ್ಲಿ ಪೃಚ್ಛಕರು ನೀಡಿದ ಉತ್ತರ ಈ ರೀತಿಯಿದೆ.
ಗೌಡೀತು ಪಚತಿ ಮೀನಂ
ದ್ರಾವಿಡಂ ಪಚತಿ ಶಾಕಂ
ಗೌರೀತು ಪಚತಿ ಗೋಮಾಂಸಂ
ನೂನಂ ಲೋಕೋ ಭಿನ್ನರುಚಿಃ
ಅರ್ಥ ಹೀಗಿದೆ
ಗೌಡೀ - ಬಂಗಾಲದ ಹೆಂಗಸು ಮೀನನ್ನು ಬೇಯಿಸುವಳು
ದ್ರಾವಿಡಂ – ದಕ್ಷಿಣ ಭಾರತ, ದಕ್ಷಿಣದ ಹೆಂಗಸು ತರಕಾರಿಗಳನ್ನು ಬೇಯಿಸುವಳು
ಗೌರಿ – ಬಿಳಿಯ ಹೆಂಗಸು, ಬಿಳಿಯ ಹೆಂಗಸು ಹಸುವಿನ ಮಾಂಸವನ್ನು ಬೇಯಿಸುವಳು
ಹೀಗೆಯೇ ಲೋಕದಲ್ಲಿ, ಜನರ ಅಭಿರುಚಿಗಳು ಬೇರೆಬೇರೆಯಾಗಿರುತ್ತದೆ, ಒಂದೇ ರೀತಿಯದ್ದಾಗಿರುವುದಿಲ್ಲ.

- Login or register to post comments
- 1032 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಪತ್ರಕರ್ತರಾಗಬಹುದು.
ಇಷ್ಟು ಸುಂದರವಾಗಿ ಕೇಳಿದ್ದನ್ನು ಬರೆದಿರುವ ನೀವು ಹವ್ಯಾಸಿ ಸ್ವತಂತ್ರ ಪತ್ರಕರ್ತರಾಗಬಹುದು ಸುನಿಲರೆ.
ಅಹೋರಾತ್ರ
ಸ : ಪತ್ರಕರ್ತರಾಗಬಹುದು
ಜೇನೊದಗು ನಿಮಗೆ. ನೀವು ಹುರಿದುಂಬಿಸಿದ ಮೇಲೆ ಪ್ರಯತ್ನಿಸುತ್ತೇನೆ. ಆದರೂ ವೃತ್ತಿನಿರತ ಪತ್ರಕರ್ತರೇ ಸಮಾಜದ ನೈಜ ಧ್ವನಿಗಳು.
ಅಥವಾ ಈಗ ಅದು ಬದಲಾಗುತ್ತಿದೆಯೇನೋ ಗೊತ್ತಿಲ್ಲ.
ಕಾವ್ಯಕೌಶಲ್ಯ
ಸುನಿಲರೇ,
ಪಂಚಮೋ ಜಾರಜೋ ಯತ್ರ ಎಂಬುದು ಅತಿ ಸೂಕ್ಷ್ಮ ಪ್ರಯೋಗ!
ಐದನೇ ಜಾರ್ಜ್ ದೊರೆಯನ್ನೇ ಗೊತ್ತಾಗದಂತೆ ಕೆಟ್ಟದಾಗಿ ಬೈದಂತಿದೆ!
ಪಂಚಮ = ಐದನೆಯ, ಹೊಲೆಯ, ಹೀನಕುಲದವ!
ಜಾರಜ = ಜಾರ್ಜ್ ದೊರೆ, ಜಾರ/ಜಾರಿಣಿಯ ಮಗ!
ಠಾಗೋರರು ಅವನನ್ನೇ ಭಾರತಭಾಗ್ಯವಿಧಾತಾ ಎಂದಿದ್ದು!? ಗಣೇಶರ ಕಾವ್ಯಕೌಶಲ್ಯ ಮೆಚ್ಚಬೇಕಾದದ್ದು!
ನಿಮ್ಮವ
ಬೆನಕ
ಗೌಡದೇಶ
ಭೋಜ ಪ್ರಬಂಧದ ಶ್ಲೋಕ.
ಪಂಚಾಷತ್ಪಂಚವರ್ಷಾಣಿ ಸಪ್ತಮಾಸದಿನತ್ರಯಂ
ಭೋಜರಾಜೇನ ಭೋಗ್ತವ್ಯಂ ಸಗೌಡದಕ್ಷಿಣಾಪಥಂ||
ಐವತ್ತೈದು ವರುಷಗಳು, ಏಳುತಿಂಗಳು, ಮೂರುದಿನಗಳು ಭೋಜರಾಜನಿಂದ ಭೋಗಿಸಬೇಕು, ಗೌಡದೇಶ ಮತ್ತು ದಕ್ಷಿಣಾಪಥದ ಜೊತೆಗೆ.
ಈ ಶ್ಲೋಕವನ್ನು ಹೇಳುವಾದ ನಮ್ಮ ಸಕ್ಕದದ ಗುರುಗಳು, ಗೌಡದೇಶವೆಂದರೆ ವಂಗದೇಶ(ಈಗಿನ ಬಂಗಾಳ) ಎಂದು ಹೇಳಿದಂತೆ ನನಗೆ ನೆನಪು. ಅಲ್ಲೂ ಮಿನಾಹಾರವು ಅತಿಪ್ರಿಯ ಮತ್ತು ಪ್ರಸಿದ್ಧಿ.
ಸಂಸ್ಕೃತದಲ್ಲಿ ೫೦ = ಪಂಚಾಷತ್ ಅಥವಾ ಪಂಚಷತ್?. ನನಗೆ ಮರೆತೇ ಹೋಗಿದೆ.
ಇರಲಿ... ಈ ವಿವರಣೆಗಳಿಗೆ ....
ಸವಿಯೊದಗೆ,
ಮಹೇಶ
ಉ : ಗೌಡ ದೇಶ
ಈ ಶ್ಲೋಕವನ್ನು ಹೇಳುವಾದ ನಮ್ಮ ಸಕ್ಕದದ ಗುರುಗಳು, ಗೌಡದೇಶವೆಂದರೆ ವಂಗದೇಶ(ಈಗಿನ ಬಂಗಾಳ) ಎಂದು ಹೇಳಿದಂತೆ ನನಗೆ ನೆನಪು. ಅಲ್ಲೂ ಮಿನಾಹಾರವು ಅತಿಪ್ರಿಯ ಮತ್ತು ಪ್ರಸಿದ್ಧಿ.
ಹೌದೇ, ಈ ವಿಷಯವಾಗಿ ತಿಳಿದವರಿಂದ ಹೆಚ್ಚಿನ ಮಾಹಿತಿ ಖಂಡಿತವಾಗಿ ಪಡೆಯಬೇಕು.
ಗೌಡದೇಶ - ಮಧ್ಯ ಮತ್ತು ಪಶ್ವಿಮ ಬಂಗಾಳ
ನಮ್ಮ ಬಂಗಾಳಿ ಸಂಸ್ಕೃತ ಪಂಡಿತರು ಹೀಗೆ ಹೇಳುವರು.
ಗೌಡ-ದೇಶ = ಈಗಿನ ಮಧ್ಯ ಮತ್ತು ಪಶ್ವಿಮ ಬಂಗಾಳದ(ಬಾಂಗ್ಲ ದೇಶವನ್ನು ಸೇರಿಸಿಕೊಂಡು) ಪ್ರದೇಶ. ನಂತರವದು ವಂಗದೇಶದ ಜೊತೆ ಸೇರಿಹೋಯಿತಂತೆ.
ಬರೇನ್ದ್ರ/ಬಾರೇಂದ್ರ = ಉತ್ತರ ಬಂಗಾಳ
ಸಮತಟ = ದಕ್ಷಿಣ ಪೂರ್ವ ಬಂಗಾಳ.
ಈ ನೈರುತ್ಯ, ಈಶಾನ್ಯಗಳಾವುವು ಎಂದು ಹೇಳಲು ನನಗೆ ಬರದು.
ಸವಿಯೊದಗೆ,
ಮಹೇಶ
ಬಂಗಾಳ - ದ್ರಾವಿಡ
ಹೌದ್ರೀ, ಗೌಡ ದೇಶವೆಂದರೆ ಬಂಗಾಳವೇ; ಅಂದರೆ ಹಿಂದಿನ 'ವಂಗ' ದೇಶ.
ಗೌಡೀಯ ಗ್ರಂಥಮಂದಿರ ಎಂಬ ವಂಗಕವಿಗಳ ಸಂಸ್ಕೃತ ಸಾಹಿತ್ಯ ಅಂತರ್ಜಾಲ ತಾಣವೂ ಇದೆ. ನೋಡಿ:
http://www.granthamandira.org/
ಆಮೇಲೆ "ದ್ರಾವಿಡಂ ಪಚತಿ ಶಾಖಂ" ಎಂದರೆ ದ್ರವಿಡ ಮಹಿಳೆಯ ಕತೆಯಲ್ಲ; ದ್ರಾವಿಡ ದೇಶವನ್ನು ಬಿಸಿಲು ಸುಡುತ್ತದೆ ಎಂದರ್ಥ!
ದ್ರಾವಿಡಂ = ದ್ರಾವಿಡ ವನ್ನು
ಪಚತಿ = ಬೇಯಿಸುತ್ತದೆ
ಶಾಖಂ = ಬಿಸಿಲು, ಸೆಕೆ ; --> 'ತರಕಾರಿ' ಯಲ್ಲ!
ಶಾಕಂ = ತರಕಾರಿ
ಬೆನಕ
ದ್ರಾವಿಡ
ನಿಮ್ಮ ಮಾತು ಸರಿಯಾಗಿದೆ.
ಶಾಖಾ ಎಂದೆ ರೆಂಬೆ/ಕೊಂಬೆ ಎಂದು. ಶಾಖಾಹಾರ ವೆಂದರೆ ಸಸ್ಯಾಹಾರವೆ.
ಅವರು ಶಾಖಾ(ಶಾಖೆ) ಮತ್ತು ಶಾಖದ ನಡುವೆ ಗೊಂದಲ ಮಾಡಿಕೊಂಡಿರಬೇಕು
ಶಾಕ ಎಂದರೆ ತರಕಾರಿ, ಅದೂ ಕೂಡ ಸರಿಯೆ.
ಸವಿ : ನನ್ನನ್ನು ಪಾರುಮಾಡಿದಿರಿ
ಬೆನಕ ಮತ್ತು ಮಹೇಶರವರಿಗೆ ಸವಿಯೊದಗೆಗಳು. ಇಲ್ಲದಿದ್ದರೆ ನಾನು ತಪ್ಪು ಮಾಹಿತಿಯನ್ನು ರವಾನಿಸಿದ ಪಾಪಕ್ಕೆ ಗುರಿಯಾಗುತ್ತಿದ್ದೆ.
ಹಾಗಾದರೆ ಗೌಡೀ ಪದವನ್ನು ಬಂಗಾಲದ ಹೆಂಗಸು ಎಂದುಕೊಳ್ಳೋಣವೇ. ಶಾಖಂ ಪದವನ್ನು ಶಾಕಂ ಮಾಡುತ್ತೇನೆ.
ಸರಿಯಾದ ಅರ್ಥ ತಿಳಿಸಿದ ಬೆನಕ ಮತ್ತು ಮಹೇಶರಿಗೆ ಮತ್ತೊಮ್ಮೆ ಕೃತಜ್ಞತೆಗಳು.
ದ್ರಾವಿಡಂ = ದ್ರಾವಿಡವನ್ನು
ಸುನಿಲರೆ,
ಬೆನಕರು ಹೇಳಿದಂತೆ
ದ್ರಾವಿಡಂ ಎಂದರೆ ದ್ರಾವಿಡವನ್ನು, ದ್ರಾವಿಡ ಹೆಂಗಸಲ್ಲ.
ಮತ್ತೊಂದು
ಗೌಡೀ ತು. ಗೌಡೀತು ಅಲ್ಲ.
ಗೌಡೀ ತು ಅಂದರೆ , "ಗೌಡೀಯಾದರೋ" ಎನ್ನವ ಅರ್ಥ ಬರುತ್ತದೆ.
ಉದಾ: ಖಾದ ತು = ತಿಂದು ಆದರು
ಖಾದತು = ತಿನ್ನಲಿ.
ಈ ತರಹದ ಯಾವುದೋ ಉದಾಹರಣೆ ಕೊಡಬಹುದು, ಅರ್ಥ ವ್ಯತ್ಯಾಸಕ್ಕೆ.
ಉ:
ಈ ಸೂತ್ರವನ್ನು ಈಗ ಕೆಲದಿನಗಳ ಹಿಂದೆ ಓದಿದೆ. ಬಹಳ ಚೆನ್ನಾಗಿದೆ ಎನ್ನಿಸಿ, ಕೆಲವು ಮಿತ್ರರೊಡನೆ ಹಂಚಿಕೊಂಡೆ. ಅಲ್ಲಿ, ನನ್ನ ಇಬ್ಬರು ಗೆಳೆಯರಿಂದ ಈ ಸಮಸ್ಯೆಗೆ ಇನ್ನೆರಡು ಹೊಸ ಉತ್ತರಗಳು ಸಿಕ್ಕವು. ಇಲ್ಲಿನ ಓದುಗರಿಗೂ ಇಷ್ಟವಾಗಬಹುದೆಂದು ಇಲ್ಲಿ ಬರೆಯುತ್ತಿದ್ದೇನೆ.
೧. ಸಿಲಿಕಾನ್ ಕಣಿವೆಯ ಕನ್ನಡಿಗ ಮಿತ್ರರೊಬ್ಬರ ಪಾದ ಪೂರಣ ಹೀಗಿದೆ.
ಮಮ ಗೇಹ ಸಮೀಪಸ್ಥೇ ಮೆಕ್‍ಡೊನಾಲ್ಡ್ ಭೋಜನಾಲಯೇ
ಗೌರೀ ಪಚತಿ ಗೋಮಾಂಸಂ ಕೃಷ್ಣಸ್ತಂ ಭಕ್ಷಯಿಷ್ಯತಿ!
मम गेहसमीपस्थे मॆक्डॊनाल्ड् भोजनालये|
गौरी पचति गोमांसं कृष्णस्तं भक्षयिष्यति||
(ನನ್ನ ಮನೆಯ ಬಳಿಯ ಮೆಕ್‍ಡೊನಾಲ್ಡ್ಸ್ ನಲ್ಲಿ, ಬಿಳಿಯಳೊಬ್ಬಳು ಅಟ್ಟ ದನದ ಮಾಂಸದ ತಿನಿಸನ್ನು, ಕರಿಯನೊಬ್ಬ* ತಿನ್ನುತ್ತಿರುವನು)
*ಕರಿಯ -> african american
೨. ನನ್ನ ಇಂಗ್ಲೆಂಡಿನ ಮಿತ್ರರೊಬ್ಬರ ಉತ್ತರ ಹೀಗಿದೆ:
ತ್ರಿಲೋಕಜನನೀ ಕಾ ಭೋ? ಸೂಪಕೃತ್ ಕಿಂ ಕರೋತಿ ಭೋ?
ಕಿಮ್ ಖಾದಂತಿ ತುರುಷ್ಕಾಃ ಭೋ? ಗೌರೀ ಪಚತಿ ಗೋಮಾಂಸಂ!
त्रिलोकजननी का भो? सूपक्ऱ्त् किम् करोति भो?
किम् खादन्ति तुरुष्काः भो? गौरी पचति गोमाम्सम्.
(ಮೂರು ಲೋಕಗಳ ತಾಯಿ ಯಾರು? ಅಡಿಗೆಯವ ಏನು ಮಾಡುವನು? ಮುಸಲ್ಮಾನರು ಏನನ್ನು ತಿನ್ನುವರು? ಗೌರಿ. ಅಡುವನು. ದನದ ಮಾಂಸ.
ಇದರಲ್ಲಿ, ಕಾಳಿದಾಸನದೆನ್ನಲಾದ ಕುಂತೀ ಸುತೋ ರಾವಣ ಕುಂಭಕರ್ಣಃ ಎನ್ನುವ ಪದ್ಯದಂತೆ, ಚಮತ್ಕಾರವಾಗಿ ಮೊದಲ ಮೂರು ಪಾದಗಳಲ್ಲಿ ಮೂರು ಪ್ರಶ್ನೆಗಳನ್ನು ತುಂಬಿಸಿ, ಕೊನೆಯ ಪಾದದಲ್ಲಿ ಅದರ ಉತ್ತರಗಳನ್ನು ಬರುವಂತೆ ಮಾಡಿದ್ದಾರೆ!
-ಹಂಸಾನಂದಿ
ಉ: ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು
ಟಯ್ಪುತಪ್ಪು
"ಗೌರೀ ಪಚತಿ ಗೋಮಾಂಸಮ್" ಇರಬೇಕು!
ಆದ್ರೆ ತೆಂಕಣಿಂಡಿದೋರೇ ಬಡಗಿಂಡಿಯದೋರಿಗಿಂತ ಬಾಡು ಹೆಚ್ಚು ತಿನ್ನೋದಂತೆ!
ಉ: ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು
ತೆಂಕಣಿಂಡಿದೋರೇ -- ಅಂದ್ರೇನು ?