ಗಣೇಶ ಬಂದ..

ಗಣೇಶ ಬಂದ..

ನೋಡು ನೋಡುತ್ತಲೇ ಗಣೇಶ ಹಬ್ಬವೂ ಬಂದೇಬಿಡ್ತು. ರಸ್ತೆ ಬದಿಯಲ್ಲಿ, ಲಾರಿ-ಟೆಂಪೋಗಳಲ್ಲಿ Colorful ಗಣಪತಿಯದ್ದೇ ದರ್ಬಾರು! ಆಳೆತ್ತರದ ಮೂರ್ತಿಗಳು ಇನ್ನು ಕೆಲವೇ ಘಂಟೆಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ರಾರಾಜಿಸಲು ಅಣಿಯಾಗಿವೆ. ಇಲ್ಲಿಂದ ಒಂದು ತಿಂಗಳವರೆಗೆ ಗಂಡು ಮಕ್ಕಳದ್ದೇ ಹವಾ! ಈ ಬಾರಿಯ ಬೆಂಗಳೂರು ಗಣೇಶೋತ್ಸವಕ್ಕೆ ಖರ್ಚಾಗ್ತಿರೋದು ಸುಮಾರು ಇಪ್ಪತ್ತು ಕೋಟಿಯಂತೆ! ಅಬ್ಬಾ ಗಣೇಶನಿಗೂ ಒಳ್ಳೆಯ Demand ಬಂದಂಗಾಯ್ತು.
ಹತ್ತು ಹನ್ನೊಂದು ವರ್ಷಗಳಿರಬಹುದು ನಮಗೆ. ಗಣೇಶ ಹಬ್ಬ ಬಂತೆಂದರೆ ಸಾಕು, ಏರಿಯಾ ಹುಡುಗರೆಲ್ಲ ಸೇರಿ ಖಾಲಿ ಡಬ್ಬವೊಂದನ್ನ ಹಿಡಿದು ಮನೆ ಮನೆಗೆ ಹೋಗಿ “ಗಣೇಶ ಕೂರಿಸ್ತಿದೀವಿ, ಕಾಸ್ ಹಾಕಿ” ಅಂತ ಕೇಳ್ತಿದ್ವಿ. ಕೆಲವರು ಒಂದೆರಡು ರೂಪಾಯಿ ಹಾಕ್ತಿದ್ರು, ಕೆಲವರು ಗದರಿಸಿ ಓಡಿಸ್ತಿದ್ರು. ಕೊನೆಗೆ ಒಂದು ನೂರು ಇನ್ನೂರು ರೂಪಾಯಿಗಳು ಸೇರಿ ನಮ್ಮ ಗಣೇಶೋತ್ಸವಕ್ಕೆ ಚಾಲನೆ ನೀಡುತ್ತಿದ್ದೆವು. ಅವರಿವರ ಕಾಡಿ ಬೇಡಿ ಗಣೇಶ ಮೂರ್ತಿ ಇಡಲು ಚಿಕ್ಕ ಗುಡಿಸಲು ಸಿದ್ಧವಾಗ್ತಿತ್ತು. ಎಲ್ಲರೂ ಅಮ್ಮನ ಬೆನ್ನು ಬಿದ್ದು ಒಂದೊಂದು ಹಣ್ಣು , ತಿಂಡಿಗಳನ್ನು ತಂದು ಸೇರಿಸ್ತಾ ಇದ್ವಿ. ಅಪ್ಪನ ಕರೆದೊಯ್ದು ಪುಟ್ಟ ಗಣಪತಿ ತರುತ್ತಿದ್ವಿ. ಹಬ್ಬದ ದಿನ ಬೆಳಗ್ಗೆ ಮನೆ ಬಿಟ್ಟರೆ ಮತ್ತೆ ಮನೆ ಸೇರುತ್ತಿದ್ದದ್ದು ಸಂಜೆಯೇ. ನಮ್ಮ ಪೂಜೆಯೋ ಆ ವಿನಾಯಕನಿಗೆ ಪ್ರೀತಿ ! ಆಚಾರ ವಿಚಾರ ಶಿಸ್ತು ಸಂಪ್ರದಾಯ ಏನೂ ಅರಿಯದ ನಮಗೆ ಆ ವಯಸ್ಸಿನಲ್ಲಿ ಗಣೇಶ ಹಬ್ಬವೆಂದರೆ ಸಂಭ್ರಮವಷ್ಟೇ. ಭಯ ಭಕ್ತಿಗಳ ಬದಲಾಗಿ ಖುಷಿಯಿಂದ ಮಜಾ ಮಾಡ್ತಾ ಹಬ್ಬ ಆಚರಿಸ್ತಿದ್ವಿ.. ಬಹುಶಃ ಗಣಪನಿಗೂ ನಮ್ಮ ಮುಗ್ದತೆಯೇ ಹಿಡಿಸಿ ಕೋಪಿಸಿಕೊಳ್ಳದೆಯೇ ಆಶಿರ್ವದಿಸುತ್ತಿದ್ದನೋ ಏನೋ!!
ಗಣೇಶ ಹಬ್ಬವೆಂದರೆ ಒಂದು ವರ್ಣರಂಜಿತ ಸಂಭ್ರಮ, ಸಡಗರ. ಗಲ್ಲಿಗಲ್ಲಿಯಲ್ಲೂ competition ಮೇಲೆ ತರುವ ವೈವಿಧ್ಯಮಯ ವಿನ್ಯಾಸದ ಗಣಪತಿಗಳು, ಜೋರಾಗಿ ಮೊಳಗುತ್ತಿರುವ ಹಾಡುಗಳು, ಸಂಜೆಯಾದರೆ ಆರ್ಕೆಸ್ಟ್ರಾ, ಗಣೇಶ ವಿಸರ್ಜನೆಗೆ ಹೊರಟಾಗ ಆ ರಂಗು ರಂಗಿನ ಪಲ್ಲಕ್ಕಿಯ ಮೇಲೆ ಮೆರವಣಿಗೆ , ಪಟಾಕಿ, ತಮಟೆ, ನೃತ್ಯ.. ಒಟ್ಟಾರೆ ನಮ್ಮಲ್ಲಿರೋ ಉತ್ಸಾಹಗಳನ್ನ ಮತ್ತೊಮ್ಮೆ ಬಡಿದೆಬ್ಬಿಸಿದಂತಾಗುತ್ತೆ. ಕ್ರಮೇಣ ದೊಡ್ಡವರಾದಂತೆ, ಜೀವನದ ಒತ್ತಡಗಳಿಂದ ಇಂಥ ಚಿಕ್ಕ ಚಿಕ್ಕ ಸಂಭ್ರಮಗಳಿಂದ ದೂರ ಉಳಿಯುತ್ತಿದ್ದೇವೆ. ಹಬ್ಬವೆಂದರೆ it’s like any other day ಅಂತಂದುಕೊಂಡು ನಿತ್ಯ ಜೀವನದ ಶೈಲಿಗೆ ಒಗ್ಗಿಕೊಂಡುಬಿಟ್ಟಿದ್ದೇವೆ. ಎಷ್ಟೋ ಜನಕ್ಕೆ ಇಂದು ಹಬ್ಬವೆಂದೇ ನೆನಪಿಲ್ಲ. ಇನ್ನು ನನ್ನಂತೆ ಮನೆಯಿಂದ ದೂರವಿದ್ದರೆ ಮುಗಿಯಿತು, ಹಬ್ಬಗಳ ಗಾಳಿ ಗಂಧವೇ ಮರೆತಂತೆ. Time tableನಂತಿರೋ ಈ ಯಂತ್ರ ಮಾನವ ಜೀವನವನ್ನು ಬಿಟ್ಟು ವರ್ಷಕ್ಕೊಮ್ಮೆ ಬರೋ ಹಬ್ಬದ ದಿನವಾದರೂ ಬಾಲ್ಯವನ್ನು ಇಣುಕಿ ಬರುವಾಸೆ‌. ಆರ್ಕೆಸ್ಟ್ರಾ ನೋಡಲು ಮೊದಲ ಪಂಕ್ತಿಯಲ್ಲಿ ಸೀಟು ಹಿಡಿದು ಹಿಗ್ಗುವ ಆಸೆ. ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸಿ ಜೋರಾಗಿ ಜೈಕಾರ ಹಾಕಿ ಗಣೇಶನನ್ನು ನೀರಲ್ಲಿ ಬಿಡುವ ಆಸೆ.. ಮನಸಿನಾಳದಿ ಅಡಗಿ ಕುಳಿತಿರೋ ಮುಗ್ದತೆಯ ಹೊರತೆಗೆದು ನನಗಾಗಿ ಬದುಕುವಾಸೆ..
ಸರ್ವರಿಗೂ ಗಣೇಶ ಚತುರ್ಥಿಯ ಶುಭಾಷಯಗಳು!!!

Rating
No votes yet