24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

" ಅಪರಿಚಿತ"(ಕಥೆ) ಭಾಗ 4

August 11, 2012 - 5:06pm
H A Patil

 

      ರಾಮಾಂಜನೇಯ ಎಫ್ಐಆರ್ ಬರೆದು ಸಬ್ ಇನಸ್ಪೆಕ್ಟರ್ರ ಸಹಿ ಪಡೆದು ದೂರಿನ ಪ್ರತಿಮಾಡಿ ಎಸ್ಡಿಎಂ ನ್ಯಾಯಲಯಕ್ಕೆ ಮತ್ತು ಮೇಲಾಧಿಕಾರಿಗಳಿಗೆ ರವಾನಿಸಲು ಇಟ್ಟುಕೊಂಡು, ಎಫ್ಐಆರ್ ನ ಒಂದು ಪ್ರತಿಗೆ ಡೊಕೆಟ್ ಶೀಟ್ ಹೊದಿಸಿ ಅದರ ಮೇಲೆ ಪ್ರಕರಣದ ವಿವರಗಳನ್ನು ಬರೆದು ಒಂದು ಟ್ಯಾಗ್ನಿಂದ ಕಟ್ಟಿ ಅದರಲ್ಲಿ ಕೆಲವು ಬಿಳಿಹಾಳೆ ಮತ್ತು ಕಾರ್ಬನ್ ಪೇಪರ್ ಗಳನ್ನು ಇಟ್ಟು ಅದನ್ನು ಸಬ್ ಇನಸ್ಪೆಕ್ಟರ್ ರವರ ಟೇಬಲ್ ಮೇಲೆ ಇರಿಸಿದ. 
    
     ' ರಾಮಾಂಜನಿ ನಾನು ಹ್ಯಾಂಗೂ ಕುಮರಿ ಕಡೆಗೆ ಹೊಂಟೇನಿ, ಅವೊಂದೆರಡು ಅರ್ಜಿ ಇದ್ದವಲ್ಲ ಒಂದು ಚುರ್ಚಗುಂಡಿ ಲ್ಯಾಂಡ್ ಡಿಸ್ಪ್ಯೂಟ್ , ಹಂಗ ಸುಳಗೋಡು ನೇಮಯ್ಯ ತನ್ನ ಮನ್ಯಾಗ ರಾತ್ರಿ ಎಲ್ಲ ಇಸ್ಪೀಟು ಆಡಸ್ತಾನ ಅಂತ ಒಂದು ಗುಮಾನಿ ಅರ್ಜಿ ಬಂದದ್ವಲ್ಲ ಅವನ್ನೂ ಸಹ ಈ ಫೈಲ್ ಜೊತೆಗೆ ಇಡು, ಸಾಧ್ಯ ಆದರ ಅವುಗಳ ಬಗ್ಗೇನೂ ವಿಚಾರ ಮಾಡ್ಕೊಂಡು ಬರ್ತೇನಿ ' ಎಂದರು ಮಂಜಪ್ಪಗೌಡ.

     ' ಸರ್ ಈ ಕೇಸು ಅಷ್ಟು ಬೇಗ ಮುಗಿಯೋ ತರ ಕಾಣೋದಿಲ್ಲ ಒಳ್ಳೆ ರಗಳೆ ಕೇಸು ಇದ್ದಂಗ ಅದ ' ಎಂದ ರಾಮಾಂಜನಿ.

     ' ಇನ್ಕ್ವೆಸ್ಟ್ ಮುಗದ ಮ್ಯಾಲ ನಂದೇನದನೋ ಕೆಲಸ, ಮುಂದಿನ ಕೆಲಸ ಎಲ್ಲ ಅಲಿ ನೋಡಕೋತಾನ , ಹ್ಯಾಂಗೂ ಚುರ್ಚಗುಂಡಿನೂ ಆ ಕಡೇನ ಅದ ಅಲ್ಲಿಂದಲ್ಲಿಗೂ ಹೋಗಿ ಒಂದು ವಿಸಿಟ್ ಮಾಡಿ ವಿಚಾರಣೆ ಮಾಡ್ಕೊಂಡು ಬರ್ತೇನಿ . ಇನ್ನ ಆ ನೇಮಯ್ಯನ ಮನಿಗೆ ರಾತ್ರೀನ ಹೋಗಬೇಕು ಅರ್ಜಿ ವಿಚಾರ ಖರೆ ಇದ್ದರ ಮಗ ರೆಡ್ ಹ್ಯಾಂಡ್ ಆಗೆ ಸಿಗ್ತಾನ. ಹಂಗ ನೀ ಹೋಗಿ ಒಂದು ಕಾರ್ ನೋಡ್ಕೊಂಡು ಬಾ ' ಎಂದರು ಮಂಜಪ್ಪ ಗೌಡರು.

     ' ಸಾರ್ ನಾನು ಸ್ಟೇಟ್ಮೆಂಟ್ಸ್ ಹಾಕ್ತಾ ಇದೀನಿ ಪರಸಪ್ದ ಇಲ್ಲೆ ಇದ್ದಾನ ಅವನಿಗೆ ಹೋಗಿ ನೋಡ್ಕೊಂಡು ಬಾ ಅಂತೇನಿ ' ಎಂದ ರಾಮಾಂಜನೇಯ.

    ' ಏ ಅವ ಹುಷಾರಿಲ್ಲ ಅಂತ ರಜಾ ರಿಪೋರ್ಟ ಬರದಿಟ್ಟಾನಲ್ಲೊ ನೀನ ಒಂದ್ಹೆಜ್ಜಿ ಹೋಗಿ ಬಾ ' ಎಂದರು ಮಂಜಪ್ಪ ಗೌಡರು.

     ' ಸಾರ್ ಅವಂದೆಂಥಾ ಕಾಯಿಲೆ ಡೆಡ್ ಬಾಡಿ ವಾಚ್ಗೆ ಹೋಗಬೇಕಾಗ್ತದ ಅಂತ ಒಂದು ನೆವಾ, ಆಂಜನೇಯ ಡೆಡ್ ಬಾಡಿ ವಾಚ್ಗೆ ಹೋದ ಇವನ ಕಾಯಿಲೇನೂ ಹೋತು ' ಎಂದು ರಾಮಾಂಜನಿ ಪರಸಪ್ಪನ ಕಾಯಿಲೆ ಕುರಿತು ಲೇವಡಿ ಮಾಡಿದ. 

     ' ಏ ಪರಸಪ್ಪ ಒಂಚೂರು ಬಸ್ ಸ್ಟ್ಯಾಂಡ್ ಕಡಿಗೆ ಹೋಗಿ ಯಾವದರ ಒಂದು ಕಾರು ಗೊತ್ತು ಮಾಡಿಕೊಂಡು ಬಾ ' ಎಂದ ರಾಮಾಂಜನಿ.

     ' ನನ್ಮಗನ ನೀನೂ ನನಗ ಒಂಥರಾ ಆಫೀಸರ್ ಇದ್ಹಂಗ ಇದ್ದೀ ನೋಡು ' ಎಂದು ಗೊಣಗುತ್ತ ಪರಸಪ್ಪ ಹೊರಹೋದವನು ಮರಳಿ ಬಂದು

     ' ಸಾರ್ ! ಮಲ್ಲೇಶಿ , ಡ್ಯಾನಿಯಲ್ ಬೇರೆ ಟ್ರಿಪ್ಗೆ ಬುಕ್ ಆಗ್ಯಾರಂತ ರಫಿಕ್ ಗೆ ಬರೋಕ ಹೇಳೇನಿ ಹಿಂದಿನ ಭಾಡಿಗಿ ಹಣಾ ಕೊಟ್ಟಿಲ್ಲ ಅಂತ ಗೊಣಗಾಡಿದ ' ಎಂದ. ಆತನ ಹಿಂದೆಯೆ ಬಂದ ರಫಿಕ್ ಸಬ್ ಇನಸ್ಪೆಕ್ದರ್ ಕೊಠಡಿಯ ಬಾಗಿಲಲ್ಲಿ ನಿಂತರು ನಮಸ್ಕರಿಸಿದ.

     ' ಏನೋ ರಫಿ ! ಬಾರೋ ಇಲ್ಲೆ ,ಯಾವ ದುಡ್ಡೋ ನಿಂದು ನಾನು ಬಾಕಿ ಇಟಗೊಂಡಿರೋದು ?' ಎಂದರು.

     ' ಸಾರ್ ಈಗೊಂದು ಹದಿನೈದು ದಿನದ ಹಿಂದೆ ಕಾರಿಮಕ್ಕಿ ಕಡಿಗೆ ಹೋದಾಗಿಂದು ' ಎಂದ ರಫಿಕ್.

     ' ಅದು ಬಿಟ್ಟು ಬೇರೆ ಯಾವದರ ಬಾಕಿ ಇದ್ದರ ಹೇಳು ಒಂದನೆ ತಾರೀಕು ಆಗ್ಲಿ ಎಲ್ಲ ಚುಕ್ತಾ ಮಾಡ್ತೀನಿ, ನಮಗೇನು ಸರಕಾರದವ್ರು ಹದ್ನೈದು ದಿವಸಕ್ಕ ಸಂಬಳ ಕೊಡ್ತಾರೇನು ' ಎಂದರು ಮಂಜಪ್ಪ ಗೌಡರು.

     'ಸಾರ್ ನಿಮಗ್ಯಾಕ ಸಾರ್ ಸಂಬಳ ಎಂದ ' ರಫಿಕ್.

     ' ಏನೋ ಹಾಂಗಂದರ ನಮಗೇನು ಆಕಾಶದಿಂದ ದುಡ್ಡು ಉದುರ್ತಾವೇನು, ಏನೋ ಪರಸ ಹಿಂಗ ಅಂತಾನಿವ ' ಎಂದರು ಮಂಜಪ್ಪ ಗೌಡರು.

     ' ಅವ ಹೇಳೋದು ಸರಿ ಅದ ಸರ್ ' ಅಂದ ಪರಸಪ್ಪ.

     ' ಏನೋ ನೀ ಹೇಳೋದು ' ಎಂದರು ಮಂಜಪ್ಪ ಗೌಡ.

     ' ನೀವು ಲೋಕಲ್ ಜನ ಅಂತ ಅವರಿಗೆ ಕೇಸ್ ಹಾಕೋದಿಲ್ಲ ಮರ್ಸಿ ತೋರಸ್ತೀರಿ ಅದಕ ಅವ ಹಂಗ ಮಾತಾಡ್ತಾನ ' ಎಂದ ಪರಸಪ್ಪ.

     ' ಏನ ಸಾರ್ ಯಾವಾಗ ನಮ್ಮನ್ನ ಬಿಟ್ಟೀರಿ ನೀವು ಹೋದ ಮಳಗಾಲದ ಮುಂದ ಒಂದು ಕೇಸ್ ಹಾಕಿದ್ರಲ್ಲ ಮೊನ್ನೆ ಮೊನ್ನೆ ಇನ್ನೂ ಆ ಕೇಸ್ ಮುಗಿಸಿಕೊಂಡು ಬಂದೀನಿ ' ಎಂದ ರಫಿಕ್.

     ' ವರ್ಷಕ್ಕ ಒಂದ್ ಕೇಸು ಸಾಕೇನೋ, ಅದೂ ನೀನು ಭಾಡಿಗೆಗೆ ಬಂದವರ ಜೊತೆ ಜಗಳ ತಕ್ಕೊಂಡು ಬಂದು ಹಾಕಿಸಿ ಕೊಂಡದ್ದು ' ಎಂದ ಪರಸಪ್ಪ.

     ಮಂಜಪ್ಪ ಗೌಡರು ರಫಿಕ್ ಗೆ ಪ್ರಕರಣದ ವಿವರ ತಿಳಿಸಿ ' ವಾಪಸ್ ಬರಲಿಕ್ಕೆ ರಾತ್ರೀನೆ ಆಗತದ ' ಎಂದರು.

     ' ಹಂಗಾರ ನಾನೂ ಸ್ವಲ್ಪ ಇಲ್ಲೆ ಹೋಗಿ ಬರ್ತೀನಿ ಸಾರ್ ' ಎಂದ ರಫಿಕ್.

     ' ಲಗೂನ ಬಾ ಮತ್ತ ಲೇಟ್ ಮಾಡಬ್ಯಾಡ ಮತ್ತ ಹೊಳ್ಳಿ ಬರಲಿಕ್ಕೆ ಲೇಟಾಗ್ತದ ' ಎಂದರು ಮಂಜಪ್ಪ
ಗೌಡ.

     ' ಒಂದ ಹದ್ನೈದು ನಿಮಿಷದಾಗ ಸ್ವಲ್ಪ ಬ್ಲೋ ಚೆಕ್ ಅಪ್ ಮಾಡಿಸಿಕೊಂಡು ಬಂದು ಬಿಡ್ತೀನಿ ' ಎಂದು ರಫಿಕ್ ಹೊರಟು ಹೋದ.

                                                                         ***

     ಅಷ್ಟರಲ್ಲಿ ಸಬ್ ಇನಸ್ಪೆಕ್ಟರ್ ಕೊಠಡಿಯ ಎದುರು ಕಾರೆಮಕ್ಕಿಯ ಮಂಜಪ್ಪ ಕಾಣಿಸಿಕೊಂಡು ನಮಸ್ಕರಿಸಿದ. ತಲೆ ಎತ್ತಿ ನೋಡಿದ ಮಂಜಪ್ಪ ಗೌಡರು

     ' ಬಾ ಮಂಜಪ್ಪ ನನಗೂ ಏನೂ ಕೆಲಸ ಇಲ್ಲ ಅಂತ ಕಾಯ್ತಾ ಇದ್ದೆ, ಅಷ್ಟರಾಗ ನೀ ಬಂದಿ ನೋಡು ಏನ್ ಸಮಾಚಾರ ಹೇಳ್ ನಿನ್ನ ಕಥಿ ' ಎಂದರು.

     ' ಸಾರ್ ಅದು ನಮ್ಮ ಅಣ್ಣ ನಂಜಪ್ಪ ಬ್ಯಾಸಿಗಿ ಬೆಳಿಗೆ ನೀರು ಬಿಡ್ತಾ ಇಲ್ಲ ಅಂವಗ ಹೇಳಿ ಸ್ವಲ್ಪ ನೀರು ಬಿಡಿಸಿ ಕೊಡಬೇಕು ' ಎಂದ.

     ' ಆಯ್ತು ನಾಳೆ ಬಾ ಹೋಗು ಈಗ ಕಳಸೋಕೆ ಜನಾ ಯಾರೂ ಇಲ್ಲ ' ಎಂದ ಮಂಜಪ್ಪಗೌಡರು ಆತನ ದೂರು ಸ್ವೀಕರಿಸಿ ಅದರ ಮೇಲೆ ಸ್ವೀಕೃತಿ ಹಾಕಿ ಆತನ ಕೈಯಲ್ಲಿಯೆ ಕೊಟ್ಟು ' ರೈಟರ್ ಕೈಯಲ್ಲಿ ಕೊಡು 'ಎಂದರು.

     ತಮ್ಮ ಕೋಠಡಿಯಿಂದಲೆ ' ರಾಮಾಂಜನಿ ಆ ಅರ್ಜಿಗೆ ಅಂವಗ ಅಕ್ನಾಲೆಜಮೆಂಟ್ ಕೊಡು ' ಎಂದರು. ರೈಟರ್ ಆ ಅರ್ಜಿಗೆ ರಸೀದಿ ಬರೆದು ಸಬ್ ಇನಸ್ಪೆಕ್ಟರ್ ಕಡೆಗೆ ಸಹಿ ಹಾಕಿಸಿಕೊಂಡು ಬರುವಂತೆ ಕಳಿಸಿ ಕೊಟ್ಟ. ಮಂಜಪ್ಪ ಗೌಡರು ಅದಕ್ಕೆ ರುಜು ಮಾಡಿ ಮರಳಿ ಕಳಿಸಿದರು. ರಾಮಾಂಜಿನಿ ರಸೀದಿಯನ್ನು ಮಂಜಪ್ಪನಿಗೆ ನೀಡಿದ.

     ' ಸಾರ್ ನನಗ ರಸೀದಿ ಬ್ಯಾಡ ಒಬ್ಬರು ಪೋಲೀಸಿನವರನ್ನ ಕಳಿಸಿ ಕೊಡಿ ' ಎಂದ.

     ' ಬಿದ್ರಕಾನ್ ಕಾಡನ್ಯಾಗ ಯಾರೋ ಒಬ್ಬಂವ ಮರಕ್ಕ ನೇಣ್ಹಾಕ್ಕೊಂಡು ಸತ್ತ್ತಾನ , ಸಾಹೇಬ್ರು ಆ ಕೇಸಿನ ಬಗ್ಗೆ ಹೊಂಟಾರ, ಈಗ ಜನ ಯಾರೂ ಇಲ್ಲ ನಾಳೆ ಬೆಳ್ಳಗ್ಗೇನ ಒಬ್ಬರು ಪೋಲಿಸಿನವ್ರನ್ನ ನಿಮ್ಮೂರಿಗೆ ಕಳಿಸಿ ಕೊಡ್ತೀವಿ ' ಎಂದ ರಾಮಾಂಜನೇಯ.

     ತಮ್ಮ ಕೊಠಡಿಯಿಂದ ಹೊರಬಂದ ಮಂಜಪ್ಪ ಗೌಡರು ' ರಾಮಾಂಜನಿ ನೈಟ್ ಡ್ಯೂಟಿ ದಫೇದಾರ ಗಂಗಾಧರಯ್ಯಗ ಡೈರಿ ಚಾರ್ಜ ಬರದೇನಿ, ಅಂವಗ ಸ್ವಲ್ಪ ಬಂದು ಇರಲಿಕ್ಕೆ ಹೇಳು ' ಎಂದರು. ಅದೇ ಸಮಯಕ್ಕೆ ಠಾಣೆಯ ಒಳ ಬಂದ ಗಂಗಾಧರಯ್ಯ ಪಿಎಸ್ಐ ಹೇಳಿದ್ದನ್ನು ಕೇಳಿಸಿಕೊಂಡರು.

     ಮಂಜಪ್ಪ ಇನ್ನೂ ನಿಂತುದನ್ನು ಕಂಡ ಪಿಎಸ್ಐ ಮಂಜಪ್ಪ ಗೌಡರು ' ಏನೋ ರಾಮಾಂಜನಿ ಮಂಜಪ್ಪ ಇನ್ನೂ ನಿಂತಾನಲ್ಲೊ ' ಎಂದರು.

     ' ಏನಿಲ್ಲ ಸಾರ್ ಅಂವಗ ಇವತ್ತ ಜನಾ ಕಳಸ ಬೇಕಂತ ಅದಕ ನಿಂತಾನ ' ಎಂದ ರಾಮಾಂಜನಿ.

     ' ಏ ರಾಮಾಂಜನಿ ಪರಸಪ್ಪಗ ಒಂದ ಹೆಜ್ಜಿ ಹೋಗಿ ಬಾ ಅಂತ ಹೇಳು ' ಎಂದರು ಗಂಗಾಧರ.

     ' ಅಯ್ಯೋ ಅಂವ ಹೋಗೊ ಹಾಗಿಲ್ಲ ಸಾರ್ ಅಂವಗ ಹುಷಾರಿಲ್ಲಂತ ಎರಡು ದಿನಾ ರಜಾ ಬರದು ಇಟ್ಟಾನ ' ಎಂದ ರಾಮಾಂಜನಿ.

     ' ಏ ರಾಮಾಂಜನಿ ನಂಜಪ್ಪಗ ಒಂದು ನೋಟೀಸು ಬರಿ, ಮತ್ತ ಗಂಗಾಧರ ಸಾಹೇಬ್ರು ಹೇಳ್ಯಾರ ಅಂದ್ರ ಇಲ್ಲ ಅನ್ಲಿಕ್ಕೆ ಆಗ್ತದನು, ಏ ಮಂಜಪ್ಪ ಬಾ ಇಲ್ಲೆ ಅಲ್ಲೆ ಸರ್ಕಲ್ಲಗೆ ಹೋಗಿ ಒಂದು ವೆಹಿಕಲ್ ಮಾಡ್ಕೊಂಡು ಬಾ ' ಎಂದ ಪರಸಪ್ಪ.

     ಪರಸಪ್ಪನ ಮಾತು ಕೇಳಿಸಿಕೊಂಡ ಮಂಜಪ್ಪ ಗೌಡರು ' ಅಲ್ಲೋ ಗಂಗಾಧರ ನಾ ಇಲ್ಲೆ ಯೂಡಿ ಕೇಸಿಗೆ ವೆಹಿಕಲ್ ಮಾಡ್ಕೊಂಡು ಹೋಗೋಕ ಒದ್ದಾಡ್ತಾ ಇದೀನಿ, ಏನೋ ಈ ಪರಸಂದು ದರ್ಬಾರು ' ಎಂದರು.

     ' ಸಾರ್ ನಿಮಗ ಅವನ ವಿಷಯ ಗೊತ್ತಿಲ್ಲ ಅಂವ ಮಾಡೋ ಗತ್ತು ನೋಡೀದ್ರ ಅಂವ ಎಸ್ಪೀನೋ ಡೀಸಿನೋ ಆಗ ಬೇಕಿತ್ತು,  ತಪ್ಪಿ ಪೋಲೀಸ್ ಕೆಲಸಕ್ಕ ಬಂದಾನ ' ಎಂದರು ಗಂಗಾಧರ.

     ' ಅಲ್ಲ ಸಾರ್ ಹೋಗ್ಲಿ ಜನಾ ಇಲ್ಲ ಹೋಗಿ ಬರೋಣ ನಮ್ಮ ಮಂಜಪ್ಪನ ಕಷ್ದ ಕೇಳೋಣ ಅಂತಂದ್ರ ನೀವು ಹೀಂಗ ಮಾತಾಡ್ತೀರಿ, ಯಾರ್ನರ ಕಳಿಸಿಗೊಳ್ರಿ ' ಎಂದು ಪರಸಪ್ಪ ಸಿಟ್ಟಾದ. ದಫೇದಾರ ಗಂಗಾಧರ ತಮ್ಮ ಬಳಿ ಬಂದ ಮಂಜಪ್ಪನನ್ನು ಕುರಿತು

     ' ಇಲ್ಯಾಕ ಬಂದಿ ಮಂಜಪ್ಪ ಪರಸಪ್ಪ ಬರ್ತೇನಿ ಅಂದಾನ ಅವನ್ನ ಕರಕೊಂಡು ಹೋಗು ಈಗ ಕಳಸಲಿಕ್ಕೆ ಬೇರೆ ಜನಾ ಇಲ್ಲ ಅಂತ ಹೇಳ್ಲಿಲ್ಲ ನಿನಗ ' ಎಂದರು.

     ' ಸಾರ್ ನೀವು ಬೇರೆ ಜನ ಕಳಸದಿದ್ದರೂ ಪರವಾ ಇಲ್ಲ ಪರಸಪ್ಪನೋರ್ನ ಕಳಸಬ್ಯಾಡ್ರಿ ' ಎಂದು ಮಂಜಪ್ಪ ಕೋರಿಕೊಂಡ.

     ' ಗಂಗಾಧರ ಏನೋ ಇದು ಸ್ಠೇಶನ್ನಿಗೆ ಬರೋವ್ರೆಲ್ಲ ಜನ ಕಳಿಸೀದ್ರ ಸಾಕು ಖುಷಿಯಾಗಿ ಕರ್ಕೊಂಡು ಹೋಗ್ತಾರ, ಇದೇನೋ ಮಂಜಪ್ಪ ಹೀಂಗ ಹೇಳ್ತಾನ, ನನ್ನ ಸರ್ವಿಸ್ನ್ಯಾಗ ಇಂಥದನ್ನ ನಾನು ಕೇಳ್ತಿರೋದು ಇವತ್ತನ ನೋಡು ' ಎಂದು ಮಂಜಪ್ಪ ಗೌಡರು ಹಾಸ್ಯವಾಗಿ ಮಾತನಾಡಿದರು. 

     ' ಸಾರ್ ನಮ್ಮ ಪರಸಪ್ದ ಅಂದ್ರ ಒಂಥರಾ ಹೈಟೆಕ್ ಪೋಲೀಸ್ ಇದ್ಹಂಗ ಅವನ ಪ್ರಭಾವಳೀನ ಅಂಥಾದ್ದು ' ಎಂದ ರಾಮಾಂಜನಿ.

     ' ಏನೋ ಮಗನ ಹಾಂಗಂದ್ರ ' ಎಂದು ಪರಸಪ್ಪ ರೇಗಿದ.

     ' ಭಾಳ ಇಂಟರೆಸ್ಟಿಂಗ್ ಅದ ಬಿಡೋ ನಮ್ಮ ಪರಸನ ಕಥಿ ' ಎಂದರು ಮಂಜಪ್ಪ ಗೌಡ.

     ' ಎಲ್ಲಿ ಹೋದರೂ ನಮ್ಮ ಪರಸಪ್ಪ ಸಾಹೇಬರಿಗೆ ಭರ್ಜರಿ ಕೋಳಿ ಕಜ್ಜಾಯ ಆಗಬೇಕು ರಥದ ಏರ್ಪಾಡು ಇರಬೇಕು ಕಪ್ಪ ಕಾಣಿಕಿ ಇಡಬೇಕು ಹಂಗಿದ್ರ ಮಾತ್ರ ನಮ್ಮ ಮಹರಾಜರ ಸವಾರಿ ಹೊರಡೋದು ' ಎಂದ ರಾಮಾಂಜನಿ.

     ' ಏನೋ ಮಗನ ಏನೋ ಅದು ನೀ ಹೇಳೊದು ? ಮಾತಾಡೋಕು ಒಂದು ರೀತಿ ರಿವಾಜು ಇರಬೇಕು ಹ್ಯಾಂಗ್ ಮಾತಾಡ್ತಿ ನೋಡ್ ಹಂಗ. ನನ್ನ ಬಗ್ಗೆ ಒಂದರ ಕಂಪ್ಲೇಂಟ್ ಇದ್ದರ ಹೇಳಿ ಆಮ್ಯಾಲ ಮಾತಾಡು ' ಎಂದು ಪರಸಪ್ಪ ಮತ್ತೆ ಸಿಟ್ಟಾದ.

     ' ಪರಸ ನೀ ಇಲ್ಲಿಗೆ ಬಂದ ಮ್ಯಾಲ ಈ ಸೀಮ್ಯಾಗ ಕೋಳಿ ಸಂತಾನ ಕಡಿಮ್ಯಾಗಿ ಹೋತು, ಇನ್ನೊಂದೆರಡು ವರ್ಷ ನೀ ಇಲ್ಲೆ ಇದ್ರ ಕೋಳಿ ಸಂತಾನನ ನಿರ್ನಾಮ ಆಗಿ ಹೋಗತದ ' ಎಂದರು ಗಂಗಾಧರ.

     ಅವರ ಮಾತಿನಿಂದ ರೇಗಿದ ಪರಸಪ್ಪ ' ನಾವು ತಿನ್ನೊ ಕುಲದಾಗ ಹುಟ್ಟೇವಿ ತಿಂತೇವಿ, ನೀವು ತಿನಲಾರದವ್ರು ತಿನ್ನೋಕ ಸುರು ಮಾಡಿದ ಮ್ಯಾಲ ಹಿಂಗಾಗಿರೋದು ' ಎಂದು ಪರಸಪ್ಪ ಮರು ಏಟು ನೀಡಿದ.

     ' ಹೌದೇನೊ ಪರಸ ಗಂಗಾಧರನೂ ಕೋಳಿ ತಿಂತಾನೇನೊ ನನಗ ಗೊತ್ತ ಇರಲಿಲ್ಲ ನೋಡು ' ಎಂದು ಮಂಜಪ್ಪ ಗೌಡರು ಕೆಣಕಿದರು.

     ' ಮತ್ತೊಬ್ಬರು ಏನ್ ಮಾಡ್ತಾರ ಏನ್ ಬಿಡ್ತಾರ ಅದನ್ನೆಲ್ಲ ನಾವು ಆಡ್ಕೊಳ್ಳೊರಲ್ಲ, ಏನೋ ಕೆಲಸಕ್ಕ ಬಂದೇವಿ ನಾಲ್ಕ್ ಜನಕ್ಕ ಒಳ್ಳೇದು ಮಾಡಬೇಕು ಅನ್ನೋ ತತ್ವದವರು ನಾವು ' ಎಂದು ಪರಸಪ್ಪ ಅಸಹನೆ ವ್ಯಕ್ತ ಪಡಿಸಿದ.

     ' ಹೌದು ಹೌದು ನಿನ್ನ ಬಗ್ಗೆ ಮೊನ್ನೆ ಡೆಕ್ಕನ್ ಹೆರಾಲ್ಡ್ ನ್ಯಾಗ ಬಂದಿತ್ತು ನಾ ಓದಿದ್ದೆ ' ಎಂದು ರಾಮಾಂಜನಿ ಮತ್ತೆ ಕೆಣಕಿದ.

     ' ಹೌದಪ ನೀನು ಸರೀನ ಇರಭೌದು, ಆದರ ಮಂಜಪ್ಪ ನಿನ್ನ ಕಳಸ್ತೇವಿ ಅಂದರ ಯಾಕ ಬ್ಯಾಡ ಅಂತಾನ ಈ ವಿಷಯ ಹೇಳು ' ಎಂದರು ಗಂಗಾಧರ.

     ' ಅವನೊಬ್ಬ ತರಲೆ ಹೇಳ್ತಾನ ನೀವ್ ಕೇಳ್ರಿ ' ಎಂದ ಪರಸಪ್ದ.

     ' ಸಾರ್ ಅದರ ಗುಟ್ಟು ನಾ ಹೇಳ್ತೀನಿ, ಹೋದ ಸಲ ಮಳೆಗಾಲದಾಗ ಮಂಜಪ್ಪ ಇದ ತರಾ ನೀರಿನ ವ್ಯಾಜ್ಯ ತಂದಿದ್ದ,, ಆಗ ಪರಸನ್ನ ಆ ಅರ್ಜಿ ಬಗ್ಗೆ ಕಳಿಸಿತ್ತು, ಒಂದ ಸಲಕ ಪ್ರಕರಣ ಬಗೆ ಹರಿಲಿಲ್ಲ ಎರಡು ಮೂರು ಸಲ ಇವ ಹೋಗಿ ಬರಬೇಕಾತು. ಆವಾಗ ಮಂಜಪ್ಪ ಇಂವಗ ಕೋಳಿ ಕುಯ್ಸಿ ಕುಯ್ಸಿ ಸುಸ್ತಾಗಿ ಬಿಟ್ಟ ಅದಕ ಪರಸಪ್ಪನ್ನ ಕಳಸ ಬ್ಯಾಡ್ರಿ ಅಂತಾನ , ಹೌದಲ್ಲೊ ಮಂಜಪ್ಪ ಖರೆ ಹೇಳು ' ಎಂದ ರಾಮಂಜನಿ.

     ' ಏ ಸುಮ್ಮನಿರ್ರೋ ಪರಸ ಅಂಥಾವಲ್ಲ ವಿದ್ಯಾವಂತ ಬುದ್ಧ ಗಾಂಧಿ ಬಸವ ಅಂತ ಮಾತಾಡ್ತಾನ, ನೀವ ಅವನ್ನ ಸರಿಯಾಗಿ ತಿಳಕೊಂಡಿರಲಿಕ್ಕಿಲ್ಲ ' ಎಂದರು ಮಂಜಪ್ಪ ಗೌಡರು.

     ' ಅದೆಲ್ಲ ಬರೆ ಜನರ ತಲಿ ಮ್ಯಾಲ ಕೈ ಎಳಿಯಾಕ ಹೇಳೊ ಮಾತು ಅಸಲಿ ಹಕೀಕತ್ತ ಬ್ಯಾರೆ ಇರತದ ' ಎಂದ ರಾಮಂಜನಿ.

                                                                                                            ( ಮುಂದುವರಿದುದು )

 

 

 

 

 

 

 

 

 

 

 

 

 

 

 

 

 

 

 

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by swara kamath on

ಪಾಟೀಲರಿಗೆ ನಮಸ್ಕಾರಗಳು.

'ಅಪರಿಚಿತ 'ಕಥೆಯ ಪುಟಗಳು ತೆರೆದು ಕೊಳ್ಳುತ್ತಾ ಹೋದಂತೆ ಪಾತ್ರ ಗಳು ಕಣ್ಮುಂದೆ ಬಂದು ನಿಲ್ಲುತ್ತವೆ.ಸ್ವಾರಸ್ಯಭರಿತ ಮಾತುಗಳಿಂದ ಮನಸ್ಸಿಗೆ ಮುದನೀಡುತ್ತದೆ.ಪ್ರತಿ ಭಾಗವು ಕುತುಹಲಕರ ವಾಗಿರುತ್ತದೆ.
ನಿರಾಸಕ್ತಿಯಿಂದ ದೂರವಿದ್ದ ನನಗೆ ಪುನಃ ಸಂಪದಕ್ಕೆ ಎಳೆತಂದಿರುವಿರಿ.ಈ ಮದ್ಯೆ ಅನೇಕ ಲೇಖನ,ಕವನಗಳು ತಪ್ಪಿಹೋಗಿವೆ. ಒಂದಂದಾಗಿ ಓದಿ ಪ್ರತಿಕ್ರಿಯಸಲು ಪ್ರಯತ್ನಿಸುತ್ತೇನೆ.
ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by H A Patil on

ಎನ್ ರಮೇಶ ಕಾಮತರಿಗೆ ವಂದನೆಗಳು

ತಮ್ಮ ಪ್ರತಿಕ್ರಿಯೆ ಓದಿದೆ,ತಮ್ಮ ಮೆಚ್ಚುಗೆಗೆ ಧ್ಯನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಹನುಮಂತ ಪಾಟೀಲರಿಗೆ ನಮಸ್ಕಾರಗಳು.
ಕಂತಿನಿಂದ ಕಂತಿಗೆ ಪೋಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಬಹಳ ಚೆನ್ನಾಗಿ ಬಿಚ್ಚಿಡುತ್ತಿದ್ದೀರ; ಇದರೊಂದಿಗೆ ಒಂದು ಕೇಸ್ ಬಗೆಹರಿಸಲು ಪೋಲೀಸರಿಗೆ ಏಕೆ ಕಷ್ಟವಾಗುತ್ತದೆ ಅನ್ನೋದು ವಿಶದವಾಗುತ್ತಾ ಇದೆ. ಇಲ್ಲಿ ಧಾರವಾಡ ಶೈಲಿಯ ಭಾಷೆಯನ್ನು ನೀವು ಬಳಸುತ್ತಿರುವುದು ಕಥೆಗೆ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತದೆ. ನನಗಂತೂ ಬಹಳ ಖುಷಿಯಾಗ್ಲಿಕ್ಕ ಹತ್ಯದ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by H A Patil on

ಶ್ರೀಧರ ಬಂಡ್ರಿ ಯವರಿಗೆ ವಂದನೆಗಳು,

ನಿಮ್ಮ ಪ್ರತಿಕ್ರಿಯೆ ಓದಿದೆ, ಪೋಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು ಸಾರ್ವಜನಿಕರಲ್ಲಿ ವಿಪರೀತ ಕಲ್ಪನೆಗಳಿವೆ, ಅಲ್ಲಿಯ ತೊಂದರೆಗಳು ಕುಂದು ಕೊರತೆಗಳು ಹೊರ ಜಗತ್ತಿಗೆ ಅರ್ಥವಾಗುವುದಿಲ್ಲ, ಅವು ಸಹಜವಾಗಿ ಈ ಕಥಾನಕದೊಂದಿಗೆ ಮೂಡಿ ಬರುತ್ತಿವೆ, ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು. ‍

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.