’ಅದು ಅಸ್ತ್ರ; ಹಿಡಿದಿಡಲು ಶಕ್ತಿ ಹುಟ್ಟುವ ತನಕ ಬಳಸಬೇಡ’
ಚಾಕು ಹಿಡಿದಿದ್ದ ಕೈಗಳಿಗೆ ಉಪದೇಶಿಸಿದ್ದರು ಅಪ್ಪ!
ಅವರೆಂದಿದ್ದು ಅರ್ಥವಾಗದಿದ್ದರೂ ಗಂಭೀರ ಮುಖದ
ಎದುರು ನಿಲ್ಲುವ ಎದೆಗಾರಿಕೆ ನನ್ನಲ್ಲಿರದೆ
ಕುಯ್ಯಬೇಕೆಂದಿದ್ದ ಕನಸಿಗೆ ತರ್ಪಣ ಬಿಟ್ಟಿದ್ದೆ
ಚಾಪೆ, ಸೋಫದ ಸ್ಪಂಜು, ಮರದ ತೊಗಟೆಗಳ
ನಿರಾಳದ ನಿಟ್ಟುಸಿರು ನನ್ನ ಕಿವಿದೆರೆಗಳಿಗೂ ಬಿದ್ದಿತ್ತು
ನನ್ನನ್ನು ಅಣಕಿಸಿದ್ದಕ್ಕೆ ಅವುಗಳ ಮೇಲೆ ಸಿಟ್ಟು ಹುಟ್ಟುತ್ತಿತ್ತು!
ಮುಂದೆಂದೋ ಯಾರ ಮಾತನ್ನೂ ಕೇಳಬೇಕಿರದಾಗ
ಮನದಾಸೆಗಳನ್ನೆಲ್ಲಾ ಈಡೇರಿಸುವೆ ಎಂದು ಪ್ರತಿಜ್ಞೆ ಮಾಡಿದ್ದೆ
ಮನೆಯಲ್ಲಿರದ ಅಪ್ಪನನ್ನು ಕೆಣಕಲೆಂದೇ ಹಿಡಿದಿದ್ದೆ ದೊಡ್ದ ಕತ್ತರಿ
ತೋಟವಿಡೀ ಕಳೆಯೋ ಗಿಡವೋ ಹೂವೋ ಹಣ್ಣೋ
ಒಂದೂ ನೋಡದೆ ಸಿಕ್ಕಿದ್ದನ್ನೆಲ್ಲಾ ಕತ್ತರಿಸಿದ್ದೆ.
ಅಪ್ಪ ನೋಡಿದ ನಂತರ ಅದೂ ಕೈಯಿಂದ ದೂರ -
ಎಟುಕದ ಎತ್ತರದಲ್ಲಿ ನಿಂತು ನನ್ನ ಕರೆಯುತ್ತಿತ್ತು.
ನನಗದನ್ನು ಬಳಸಲು ಗೊತ್ತಿದೆ ಎಂದು ಅತ್ತಿದ್ದಕ್ಕೆ
ಅಪ್ಪ ಮುಗುಳ್ನಗುತ್ತಾ ತಲೆ ನೇವರಿಸಿದ್ದರು.
’ಬಳಸಲ್ಪಡುವುದೇ ಉದ್ದೇಶವಲ್ಲ’
ಅರ್ಥವಾಗದ ನನ್ನ ದೃಷ್ಟಿಯ ಕಂಡು ಅದೇ ನಿಗೂಢತೆಯ ಧ್ವನಿ
’ಅರ್ಥವಾಗುವ ತನಕ ಮುಟ್ಟಬೇಡ’
ಅಂದು ಹುಟ್ಟಿದ್ದ ತುಂಡರಿಸುವ ವಾಂಛೆ ಈಗಿಲ್ಲ
ಕತ್ತರಿಸುವಾಗ ಹುಟ್ಟಿದ್ದ ಕೆಚ್ಚು ಈಗ ಹುಟ್ಟುವುದಿಲ್ಲ
ಚಾಕುವಿನಿಂದ ಉಗುರುಗಳನ್ನು ಕತ್ತರಿಸುವುದನ್ನು ಕಲಿತಿದ್ದೇನೆ
ದೊಡ್ಡ ಕತ್ತರಿಯಿಂದ ತೋಟವನ್ನು ಸ್ವಚ್ಛಗೊಳಿಸುತ್ತೇನೆ
’ನೀವು ಹೇಳಿದ ಮಾತುಗಳು ಈಗ ಅರ್ಥವಾಗತೊಡಗಿವೆ
ಇವುಗಳ ಉದ್ದೇಶ ನಾಶವಲ್ಲ, ಪಾಲನೆ’
ಸಂಧ್ಯೆಯ ಕೆಂಪು ಬಾನನ್ನು ನೋಡುತ್ತಾ ಅಪ್ಪ ಮುಗುಳ್ನಗುತ್ತಾರೆ.
’ಆವತ್ತು ನಾನಂದಿದ್ದು ನಿನ್ನ ಕೈಯಲ್ಲಿದ್ದ ಕಬ್ಬಿಣಕ್ಕೆ ಅಲ್ಲ’
ಸುದೀರ್ಘ ಮೌನ! ಭೋರ್ಗರೆವ ಸಮುದ್ರ, ಬೀಸುವ ಗಾಳಿ
ಏನೂ ಬದಲಾಗಿಲ್ಲ ಇನ್ನೂ.. ಮತ್ತದೇ ಅರ್ಥವಾಗದ ಅಸಹನೆ ಕಾಡುತ್ತದೆ
ಹಣ್ಣಾದ ಕೂದಲಿನ ನಡುವೆ ಅಪ್ಪ ಈಗೀಗ ಮೌನಿ
ತಲೆಯಾಡಿಸುತ್ತಾರೆ; ಮುಗುಳ್ನಗುತ್ತಾರೆ - ಮತ್ತೆ ನಿರ್ಲಿಪ್ತ ದೃಷ್ಟಿ
ಸಮುದ್ರ ದಂಡೆಗೆ ಅವರು ಬರುವುದಿಲ್ಲ
ನಾನೊಬ್ಬನೇ ಹೋಗಿ ಕುಳಿತುಬಿಡುತ್ತೇನೆ
ನೆನಪಿನೊರತೆಯಲ್ಲಿನ ಚಾಕು, ತೋಟ - ಕತ್ತರಿಗಳಿಲ್ಲ!
ಅಪ್ಪ ಅಂದಿದ್ದ ಅಸ್ತ್ರ ಏನು ಎಂದು ಈಗ ಅರ್ಥವಾಗಿದೆ
ದೂರದಲ್ಲೆಲ್ಲೋ ಕಾಣುವ ದೋಣಿಯಂತೆ ಅದೂ ಹೊಳೆಯುತ್ತದೆ
ಮನಸ್ಸಿನೊಳಗೆ; ನಾನೇ ಕತ್ತರಿಯ ರೂಪ,
ನನ್ನೊಳು ಹುಟ್ಟುವ ಭಾವನೆಗಳೇ ಚಾಕುವಿನ ಅಲಗು
ಅರಿವಾದ ನಂತರ ಅಪ್ಪನ ಮುಗುಳ್ನಗು ನನ್ನ ಮುಖದಲ್ಲೂ ಮೂಡುತ್ತದೆ
ಅಸ್ತ್ರ
August 11, 2012 - 5:53pm
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಅಸ್ತ್ರ
ಸಂತೋಷ್
ಅತಿ ಉತ್ತಮ ಕವನ ಹಾಗು ನೀತಿ
ಯಾವುದನ್ನೆ ಆಗಲಿ ಅದರ ಉಪಯೋಗದ ಅರಿವು ನಮಗಾಗದ ಹೊರತು ಬಳಸುವುದು ತರವಲ್ಲ
ಆದರೆ ಈಗಿನ ಸಮಾಜಕ್ಕೇನೊ ಆಗಿದೆ.
ಇರುವ ಯಾವುದನ್ನು ಉಪಯೋಗಿಸಲು ತಿಳಿದಿಲ್ಲ
ಮೊಬೈಲ್.. ಕ್ಯಾಮರ... ವಾಹನದ ಹಾರ್ನ್... ನುಣುಪು ರಸ್ತೆ... ಸಿಕ್ಕ ಅಧಿಕಾರ... ಪಕ್ಕನೆ ಹತ್ತುವ ಲೈಟ್.. ತಿರುಗಿಸಿದರೆ ಸುರಿಯುವ ನೀರು... ಯಾರದೋ ಕೈನ ಬಂದೂಕು... ಯಾವುದೆ ದೇಶದ ಕೈಲಿ ಸಿಕ್ಕ ಅಣುಬಾಂಬು...
ಹೀಗೆ ಮುಂದುವರೆಯುತ್ತದೆ...
ಉ: ಅಸ್ತ್ರ
ನಿಜ. ಪಟ್ಟಿ ಮುಗಿಯುವುದಿಲ್ಲ.
ಉ: ಅಸ್ತ್ರ
ಕ್ಷಮಿಸಿ ಪಟ್ಟಿಯಲ್ಲಿ ಬಿಟ್ಟುಹೋದ ಮುಖ್ಯ ಅಸ್ತ್ರ
.
.
ಮಾತು!
.
.
ಅದನ್ನು ಉಪಯೋಗಿಸುವುದು ಸಹ ಬಹಳ ಮಂದಿಗೆ ತಿಳಿದಿಲ್ಲ.
ಉ: ಅಸ್ತ್ರ
ಎಲ್ಲವೂ ಹಾಗೆಯೇ ... ಮೊದಲಿನ ರೊಚ್ಚು -ಕೆಚ್ಚು ಕಾಲ ಕಳೆದ೦ತೆ... ಪ್ರೌಢಿಮೆ ಒಲಿದ೦ತೆ ... ಸ್ನೇಹ - ಪ್ರೀತಿಯಾಗಿ ಬದಲಾಗತೊಡಗುತ್ತದೆ! ಸ೦ಪೂರ್ಣ ಲೋಕದ ಮೇಲಿನ ಕೋಪವೆ೦ಬುದು ಲೋಕದೊಳು ನಾವೊಬ್ಬರಾಗಿ ಬೆರೆತಾಗ ಕಡಿಮೆಯಾಗುತ್ತದೆ!
ಯಾವುದನ್ನಾದರೂ ಸಮಯಕ್ಕೆ ಸರಿಯಾಗಿ ಸನ್ನಿವೇಶಕ್ಕೆ ಅನುಗುಣವಾಗಿ ಬಳಸಬೇಕು! ಅದು ಅಸ್ತ್ರವಾಗಲೀ ಯಾ ಮತ್ತೊ೦ದಾಗಲೀ.. ಆದರೆ ಬಳಸುವ ಪ್ರಬುಧ್ಢತೆ ಇರಬೇಕು! ಯಾವುದೂ ಮ೦ಗನ ಕೈಯ ಮಾಣಿಕ್ಯವಾಗಬಾರದು!
ಎಲ್ಲದ್ದಕ್ಕಿ೦ತಲೂ ಹೆಚ್ಚಾಗಿ ಬದಲಾಗಬೇಕೆ೦ಬ ತುಡಿತವಿದ್ದರೆ ಸಾಕು! ಬದಲಾವಣೆಗೆ ತಾನಾಗಿಯೇ ಮೈಯೊಡ್ಡುತ್ತೇವೆ....
ಇವಿಷ್ಟೂ ನಿಮ್ಮ ಕವನವನ್ನೋದಿ ಮನಸ್ಸಿಗೆ ಬ೦ದ ಮಾತುಗಳು.. ಅದು ಸೂಕ್ತವೋ ಅಸೂಕ್ತವೋ ... ಆದರೆ ಅಷ್ಟನ್ನೂ ಇಲ್ಲಿ ಹಚ್ಚಿದ್ದೇನೆ.
ಬಹಳ ದಿನಗಳ ನ೦ತರ ಬ೦ದ ಈ ಕವನ ತಮ್ಮ ಅತ್ಯುತ್ತಮ ಕವನಗಳಲ್ಲಿ ಅಗ್ರಸ್ಠಾನಿಯಾಗಬಹುದೆ೦ದು ನನ್ನ ಅನಿಸಿಕೆ. ಇತ್ತೀಚೆಗೆ ಬರುವುದೂ-ಬರೆಯುವುದೂ ಬಹಳ ಕಡಿಮೆಗೊಳಿಸಿದ್ದೀರಿ..
ಯೋಚನೆಗೀಡು ಮಾಡುವ ಕವನ..ಸ೦ದೇಶಯುಕ್ತವಾಗಿ ಸೊಗಸಾಗಿದೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಅಸ್ತ್ರ
ಒಬ್ಬನ ಕೈಯಲ್ಲಿ ಉಪಯೋಗವಾಗುವ ವಸ್ತುವನ್ನು ಇನ್ನೊಬ್ಬನ ಕೈ ಹಾನಿಗೆ ಬಳಸುತ್ತದೆ. ಮನಸ್ಥಿತಿ ಬದಲಾಗಬೇಕಷ್ಟೇ.. ಪಾರ್ಥಸಾರಥಿಯವರಂದಂತೆ ಪಟ್ಟಿ ದೊಡ್ಡದಿದೆ ಕಬ್ಬಿಣದ ಸಲಾಕೆಯಿಂದ ಹಿಡಿದು ಅಣುವಿಜ್ಞಾನದವರೆಗೆ!
ನಿಜ, ಬರೆಯುವುದೂ ಬರುವುದೂ ಕಡಿಮೆಯಾಗಿದೆ. ಮುಂದೆಂದಾದರೂ ಹೆಚ್ಚಾದರೂ ಆದೀತು! ಯಾವಾಗ ಎಂದು ಖಚಿತವಾಗಿ ಹೇಳಲಾರೆ
ಉ: ಅಸ್ತ್ರ
ವಿಭಿನ್ನ, ಉತ್ತಮ ಕವನ.
ಉ: ಅಸ್ತ್ರ @ ಸಂತೋಷ್ ಅವ್ರೇ
+1(ಪ್ರೇಮ ಅವರ ಪ್ರತಿಕ್ರಿಯೆಗೆ)
’ಬಳಸಲ್ಪಡುವುದೇ ಉದ್ದೇಶವಲ್ಲ’
ಅರ್ಥವಾಗದ ನನ್ನ ದೃಷ್ಟಿಯ ಕಂಡು ಅದೇ ನಿಗೂಢತೆಯ ಧ್ವನಿ
’ಅರ್ಥವಾಗುವ ತನಕ ಮುಟ್ಟಬೇಡ’
======================
ಪಟ್ಯದ ರೀತಿ ಇದ್ದರೂ ಸರಳವಾಗಿದ್ದು ಅರ್ಥವಾಗುತ್ತೆ-ಕವನದ ಒಳಾರ್ಥ ತಿಳಿಸುತ್ತೇ...
ಹಾಗೆಯೇ ಇದಕೆ ಬಂದ ಪ್ರತಿಕ್ರಿಯೆಗಳು ಅದರ ಇನ್ನಸ್ಟು ದರ್ಶನ ಮಾಡಿಸಿದವು...
ಶುಭವಾಗಲಿ...
ಉ: ಅಸ್ತ್ರ
ಸುಂದರ ಹಾಗೆ ಮನಕ್ಕೆ "ಮುಟ್ಟುವ" ಕವನ
...ಸತೀಶ್
ಉ: ಅಸ್ತ್ರ
ಸುಂದರ ಭಾವವಿದೆ!
ಉ: ಅಸ್ತ್ರ
ಮೆಚ್ಚಿ ಪ್ರತಿಕ್ರಿಯಿಸಿದ ಸರ್ವರಿಗೂ ನನ್ನ ಧನ್ಯವಾದಗಳು