" ಇಹಲೋಕ ತ್ಯಜಿಸಿದ ಸಾಹಿತ್ಯ ಲೋಕದ ದಿಗ್ಗಜ "

" ಇಹಲೋಕ ತ್ಯಜಿಸಿದ ಸಾಹಿತ್ಯ ಲೋಕದ ದಿಗ್ಗಜ "

                  

     ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಆರನೆ ಜ್ಞಾನಪೀಠ ಪುರಸ್ಕೃತ ಖ್ಯಾತ ಕಥೆಗಾರ, ಕಾದಂಬರಿಕಾರ, ವಿಮರ್ಶಕ ಅತ್ಯುತ್ತಮ ವಾಗ್ಮಿ ಉಪನ್ಯಾಸಕಾರ ಡಾ. .ಯೂ. ಆರ್. ಅನಂತಮೂರ್ತಿ ಇಂದು ಅಗಸ್ಟ್ 22 ಶ್ರಾವಣ ಮಾಸದ ಶುಭ ಶುಕ್ರವಾರದಂದು ಇಹಲೋಕ ತ್ಯಜಿಸಿ ಹೊಗಿದ್ದಾರೆ. ಇತ್ತೀಚೆಗೆ ಕೆಲ ವರ್ಷಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಆಗಾಗ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುತ್ತ ತಮ್ಮ ತೀವ್ರ ತರದ ಅನಾರೋಗ್ಯದ ಮಧ್ಯೆಯೂ ಅವರು ಕ್ರಿಯಾತ್ಮಕವಾಗಿ ಸಮಾಜಮುಖಿಯಾಗಿ ಬದುಕಿದರು ಎನ್ನುವುದು ಅವರ ಜೀವನ ತುಡಿತದ ಒಂದು ಪ್ರತೀಕವಾಗಿ ನಿಲ್ಲುವುದು ಅವರ ಹೆಚ್ಚುಗಾರಿಕೆ. ಆದರೆ ಅವರ ಎರಡೂ ಮೂತ್ರಪಿಂಡಗಳು ವೈಫಲ್ಯಗೊಂಡಿದ್ದು ಜೊತೆಗೆ ಲಘು ರಕ್ತದೊತ್ತಡ ಮತ್ತು ರಕ್ತದ ಸೋಂಕಿನಿಂದ ತೀವ್ರವಾಗಿ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಪಟ್ಟ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದುದು ಒಂದು ಆಘಾತಕರ ಸಂಗತಿ. ಯಾಕೆಂದರೆ ಅವರು ಬರಿ ಸಾಹಿತಿ ಅಷ್ಟೆ ಆಗಿರದೆ ಸಮಾಜದಲ್ಲಿ ಕಂಡು ಬರುವ ಎಲ್ಲ ಅಸಮಾನತೆ ಜಾತಿಯತೆ ಸಮಾಜವಿರೋಧಿ ಧೋರಣೆಗಳ ಹುನ್ನಾರಗಳ ಕುರಿತು ತಮ್ಮ ತೀಕ್ಷ್ಣ ಪ್ರತಿಕ್ರಿಯೆಗಳ ಮೂಲಕ ನೇರವಾಗಿ ಪ್ರತಿಭಟಿಸುತ್ತಿದ್ದ ಅವರು ಅವರ ನಮ್ಮ ಸಮಾಜದ ಚೇತನವಾಗಿದ್ದರು.. ಇನ್ನು ಆ ಸ್ಥಾನವನ್ನು ತುಂಬು ವವರು ಯಾರು ಎನ್ನುವ ಪ್ರಶ್ನೆ ನಮ್ಮೆದುರು ನಿಂತು ನಮ್ಮನ್ನು ವಿಹ್ವಲರಾಗುವಂತೆ ಮಾಡುತ್ತದೆ.

 

     ಈ ಅನಂತ ಮೂತಿ೵ಯವರ ಹೆಸರನ್ನು ನಾನು ಕೇಳಿದ್ದು 1971 ರಲ್ಲಿ ಅವರ ಶ್ರೇಷ್ಟ ಕಾದಂಬರಿ ‘ಸಂಸ್ಕಾರ’ ಚಲನಚಿತ್ರವಾಗಿ ಹೊರ ಬಂದು ಸೆನ್ಸಾರ ತೊಂದರೆ ಅನುಭವಿಸಿದ್ದು, ಅವರು ಪುರೋಹುಇತಶಾಹಿಗಳ ಪರ ಮತ್ತು ವಿರೋಧ ಎಂಬ ವಿವಾದವಾಗಿ ಅವರ ಹೆಸರು ಹೆಚ್ಚು ಪ್ರಚುರಕ್ಕೆ ಬಂದದ್ದು ಆಗ ಯುವಕರಾಗಿದ್ದ ನಮಗೆ ಯಾರು ಈ ಅನಂತ ಮೂರ್ತಿ ಎಂಬ ಕುತೂಹಲ ಹುಟ್ಟು ಹಾಕಿದ ಹೆಸರಾಗಿ ಕಂಡು ಬಂದಿತ್ತು.. ಕನ್ನಡ ಸಾಹಿತ್ಯದ ಅದರಲ್ಲಿಯೂ ವಿಶೇಷವಾಗಿ ಗದ್ಯ ಸಾಹಿತ್ಯದ ಓದುಗ ಅಭಿಮಾನಿಯಾದ ನನಗೆ ಅವರ ಕೃತಿಗಳನ್ನು ಓದ ಬೇಕೆಂಬ ಆಶಯ ನನ್ನಲ್ಲಿ ಮೂಡಿತ್ತು. ಮಹಾಭಾರತ ರಾಮಾಯಣದ ಪೌರಾಣಿಕ ಕಥನಗಳಿಂದ ಪತ್ತೆದಾರಿ ಕಾದಂಬರಿಕಾರರಾಗಿದ್ದ ಎನ್.ನರಸಿಂಹಯ್ಯ, ಎಂ.ರಾಮಮೂರ್ತಿ ಯವರು ಕೆಲ ಕಾಲ ಆಸಕ್ತಿ ಹುಟ್ಟಿಸಿ ನಂತರದಲ್ಲಿ ಪ್ರಗತಿಪರ ಲೇಖಕರಾದ ಅನಕೃ, ತರಾಸು, ನಿರಂಜನ ಮತ್ತು ಬಸವರಾಜ ಕಟ್ಟಿಮನಿ, ಕೃಷ್ಣಮೂತಿ೵ ಪುರಾಣೀಕರು ತಮ್ಮ ಕೃತಿಗಳಿಂದ ನಮ್ಮನ್ನು ರಂಜಿಸಿದ ನಂತರ ನಮ್ಮನ್ನು ತೀವ್ರ ವಾಗಿ ತಟ್ಟಿದ್ದು ಶಿವರಾಮ ಕಾರಂತರ ಕೃತಿಗಳು. ಅವರ ಕೃತಿಗಳು. 1960 ಆಸುಪಾಸು ಎಂದು ಕಾಣುತ್ತದೆ ಕನ್ನಡ ಸಾಹಿತ್ಯ ಲೋಕ ನವೋದಯದಿಂದ ನವ್ಯದೆಡೆಗೆ ಸಾಗಿದ ಕಾಲಘಟ್ಟ ತುಂಗಭದ್ರಾ ನದಿಯ ದಂಡೆಯ ಈಚೆಗೆ ಅಡಿಗರ ಮುಖಂಡತ್ವದಲ್ಲಿ ಅನಂತಮೂರ್ತಿ, ಲಂಕೇಶ, ತೇಜಸ್ವಿ ಮುಂತಾದವರು ನವ್ಯದೆಡೆಗೆ ಮುಖಮಾಡಿದ್ದರೆ ಆಚೆಗೆ ಗೋಕಾಕರ ಮುಂದಾಳತ್ವದಲ್ಲಿ ಹೊಸ ಚಿಂತನೆ ಮತ್ತು ಅಭಿವ್ಯಕ್ತಿ ಕ್ರಮಗಳು ಜೀವದಳೆಯುತ್ತಯಿದ್ದವು.

 

     ಆಗ ಬಂದ ಕೃತಿ ಸಂಸ್ಕಾರ ಅನಂತ ಮೂರ್ತಿ ಯವರಿಗೆ ಖ್ಯಾತಿಯನ್ನು ತಂದು ಕೊಟ್ಟಿದ್ದರೆ ಅದೇ ಕಾಲಕ್ಕೆ ಎಸ್.ಎಲ್.ಭೈರಪ್ಪ ತಮ್ಮ ಕೃತಿ ‘ವಂಶವೃಕ್ಷ’ ದ ಮೂಲಕ ಖ್ಯಾತರಾಗಿದ್ದರು.. ಈ ಎರಡೂ ಕೃತಿಗಳು ಚಲನಚಿತ್ರಗಳಾಗಿ ಹೊರ ಬಂದು ಆಯಾ ಲೇಖಕರಿಗೆ ದೇಶವ್ಯಾಪಿಯಾಗಿ ಹೆಸರು ತಂದು ಕೊಟ್ಟವು. ಯಯಾತಿ ಮತ್ತು ತುಘಲಕ ನಾಟಕಗಳ ಕತೃ ಗಿರೀಶ ಕಾರ್ನಾಡ, ಸ್ನೇಹಲತಾ ರೆಡ್ಡಿ, ನಾಯಕ ನಾಯಕಿಯರಾಗಿ ನಟಿಸಿದರೆ ಪೋಷಕ ಪಾತ್ರಗಳಲ್ಲಿ ಬಿ.ಜಯರಾಮ ಮುಂತಾದ ಹವ್ಯಾಸಿ ನಾಟಕ ರಂಗದ ಕಲಾವಿದರು ನಟಿಸಿದ್ದರು. ಅಲ್ಲದೆ ಲಂಕೇಶ ಇದರಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.. ಬಿ.ಪಟ್ಟಾಭಿರಾಮ ರೆಡ್ಡಿ ನಿರ್ದೇಶನದ ಈ ಚಿತ್ರಕ್ಕೆ ಆಸ್ಟ್ರೇಲಿಯಾ ಮೂಲದ ಖ್ಯಾತ ಛಾಯಾಚಿತ್ರಗ್ರಾಹಕ ಟಾಮ್ ಕೋವನ್ ಛಾಯಾಗ್ರಣವಿತ್ತು ಇದಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಬಂಗಾರದ ಪದಕ ದೊರೆಯಿತು. ಅದೇ ರೀತಿ ಜಿ.ವಿ.ಅಯ್ಯರ್ ಮತ್ತು ಗಿರೀಶ ಕಾರ್ನಾಢ ಜಂಟಿ ನಿರ್ದೇಶನದಲ್ಲಿ  ಭೈರಪ್ಪನವರ ‘ವಂಶವೃಕ್ಷ’ ವನ್ನು ತೆರೆಗೆ ತಂದರು. ಈ ಚಿತ್ರ ಸಹ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿ ಕನ್ನಡ ಚಲನಚಿತ್ರ ರಂಗವನ್ನು ಇಡಿ ದೇಶ ಗಮನಿಸುವಂತಾಯಿತು. ಹೀಗಾಗಿ ಅನಂತಮೂತಿ೵, ಭೈರಪ್ಪ, ಕಾರ್ನಾಡ, ಲಂಕೇಶ, ಕಂಬಾರ ಮತ್ತು ಕೃಷ್ಣ ಆಲನಹಳ್ಳಿ ಮುಂತಾದ ಬರಹಗಾರರಿಗೆ ಸ್ಟಾರ್ ವ್ಯಾಲ್ಯೂ ಬಂತು.. ಅವರಲ್ಲಿ ಅನಂತಮೂರ್ತಿಯವರು ವಿಶೇಷ ಎತ್ತರಕ್ಕೆ ಏರಿ ಹೆಸರು ಮಾಡಿದರು.. ಈ ಕಾರಣದಿಂದಾಗಿ ಈ ಸಾಹಿತಿಗಳ ಕೃತಿಗಳು ಓದುಗರನ್ನು ವಿಶೇಷವಾಗಿ ಆಕರ್ಷಿಸಿದವು. ಇಂತಹ ಸಂಧರ್ಭದಲ್ಲಿ ಮೂರ್ತಿಗಳ ‘ಸಂಸ್ಕಾರ’ ಕೃತಿ ಸ್ನೆಃಇತರಿಂದ ದೊರೆತು. ಅದನ್ನು ಮೊದಲು ಓದಿದಾಗ ಅದು ನನಗೆ ಅಷ್ಟಾಗಿ ರುಚಿಸಲಿಲ್ಲ.ಅದೇರೀತಿ ಲಂಕೇಶರ ‘ಮುಸ್ಸಂಜೆಯ ಕಥಾ ಪ್ರಸಂಗ’ ಕೃತಿಯೆಂ ದು ಕಾಣುತ್ತದೆ ಅದೂ ಸಹ ನನಗೆ ಹಿಡಿಸಲಿಲ್ಲ. ಚಂದ್ರಿ ಮತ್ತು ಪ್ರಾಣೇಶಾಚಾರರ ಸಮಾಗಮದ ಸನ್ನವೇಶಗಳು ಅದೇ ರೀತಿಯ ಲಂಕೇಶರ ಕೃತಿಯಲ್ಲಿ ಬಂದ ನಿರೂಪಣೆಗಳು ಹಿಡಿಸದೆ ಮುಜುಗರ ಪಟ್ಟುಕೊಂಡು ಓದಿ ಮುಗಿಸಿದೆವು. ಬಹುಶಃ ಅವರ ಕೃತಿಗಳ ಓದಿಗೆ ನಾನು ಇನ್ನೂ ಪಕ್ವಗೊಂಡಿರಲಿಲ್ಲ ವೆಂದೆನಿಸುತ್ತದೆ.

 

     1966 ರಿಂದ 1971 ವರೆಗೆ ಶಿವರಾಮ ಕಾರಂತರ ಶೇಕಡಾ ತೋಬತ್ತರಷ್ಟು ಕೃತಿಗಳನ್ನು ಓದಿ ಮುಗಿಸಿಯಾಗಿತ್ತು. ಹೊಸ ಶೈಲಿಯ ಬರವಣಿಗೆಯ ಕೃತಿಗಳ ಹುಡುಕಾಟದಲ್ಲಿದ್ದೆಯೆಂದು ಕಾಣುತ್ತದೆ. ಮುಂದಿನ ದಿನಗಳನ್ನು ನಾನು ವೃತ್ತಿಯನ್ನರಸಿ ಶಿವಮೊಗ್ಗಕ್ಕೆ ಬಂದೆ. ಅಲ್ಲಿಯ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಅನಂತಮೂರ್ತಿಯವರ ಕೃತಿಗಳು ನನ್ನ ಓದಿಗೆ ದೊರೆತವು. ಪೂರ್ವಾಪರ, ಆಕಾಶ ಮತ್ತು ಬೆಕ್ಕು,, ಸೂರ್ಯನ ಕುದುರೆ, ಪ್ರಜ್ಷೆ ಮತ್ತು ಪರಿಸರ, ಘಟಶ್ರಾದ್ಧ, ಭಾರತಿಪುರ, ಅವಸ್ಥೆ, ಭವ, ಮತ್ತು ದಿವ್ಯ ಕೃತಿಗಳ ಓದು ನನ್ನನ್ನು ಉತ್ತಮ ಕೃತಿಗಳ ಓದಿಗೆ ಪ್ರೇರೇಪಿಸದವು ಎನ್ನುವುದು ಸುಳ್ಳಲ್ಲ. ಮುಂದೆ 1977 ರಲ್ಲಿ ವೃತ್ತಿ ಸಂಬಂಧವಾಗಿ ತೀರ್ಥಹಳ್ಳಿಗೆ ಬಂದೆ. ಆಗ ನನಗೆ ಅಲ್ಲಿ ಪರಿಚಯವಾದವರು ಸಾಹಿತ್ಯ ಪ್ರೇಮಿ ಚಿಂತಕ ಜೊತೆಗೆ ಬರಹಗಾರರಾಗಿದ್ದ ಜವಳಿ ರಾಘವರಾವ್ರವರು.. ಅವರು ಸಾಹಿತ್ಯ ಪ್ರೇಮಿಯಲ್ಲದೆ ಉತ್ತಮ ಚಲನಚಿತ್ರಗಳ ವೀಕ್ಷಕರು ಸಹ ಆಗಿದ್ದುದು ವಿಶೇಷವಾಗಿತ್ತು.. ಅಲ್ಲಿನ ಚಲನಚಿತ್ರ ಮಂದಿರಗಳಾದ ವೆಂಕಟೇಶ್ವರ ಮತ್ತು ಜಯಶಂಕರ ಚಲನಚಿತ್ರ ಮಂದಿರಗಳಲ್ಲಿ ಆಗಾಗ ನಾವು ಮುಖಾಮುಖಿ ಯಾಗುತ್ತದ್ದೆವು. ಅವರೊಟ್ಟಿಗೆ ಚಂದ್ರಲೇಖ, ಬರಸಾತ್ ಕಿ ರಾತ್, ಮತ್ತು ಚಾನಿ ಮುಂತಾದ ಚಲನಚಿತ್ರಗಳನ್ನು ನೋಡುವ ಸಂಧರ್ಭದಲ್ಲಿ ಅವರ ವಿಮರ್ಶಾಗುಣ ನನ್ನಲ್ಲಿ ಮೆಚ್ಚುಗೆಯನ್ನುಂಟು  ಮಾಡಿತ್ತು. ನಮ್ಮ ಭೇಟಿಯ ಸಂಧರ್ಭಗಳಲ್ಲಿ  ಉತ್ತಮ ಸಾಹಿತ್ಯ ಚಲನಚಿತ್ರ ಮತ್ತು ನಾಟಕಗಳ ಕುರಿತು ವಿಚಾರ ವಿನಿಮಯವಾಗುತ್ತಿದ್ದವು.

 

     ಅವರು ತಮ್ಮ ಆಸಕ್ತ ಸಮಾನ ಮನಸ್ಕ ಸ್ನೇಹಿತ ರೊಡಗೂಡಿ ‘ತುಂಗಾ ಫಿಲಂ ಸೊಸೈಟಿ’ ಯನ್ನು ಪ್ರಾರಂಭಿಸಿದ್ದರು.. ಅಲ್ಲಿ ಚಲನಚಿತ್ರ ಪ್ರದರ್ಶನಗಳಿಗೆ ಆಹ್ವಾನಿಸುತ್ತಿದ್ದರು, ಅವರ ಜೊತೆಗಿನ ಒಡನಾಟ ಸಿನೆಮಾ ವೀಕ್ಷಣೆ, ಸಾಹಿತ್ಯದ ಓದು ಮತ್ತು ವಿಮರ್ಶೆ ಮನಸಿಗೆ ಸಂತಸ ತರುವ ಸಂಗತಿಗಳಾಗಿದ್ದವು. ಆಗಿನ್ನು ಟೆಲಿವಿಜನ್ ಮಾಧ್ಯಮ ನಮ್ಮ ದೇಶದಲ್ಲಿ ಬಂದಿರಲಿಲ್ಲ. ಅವರು ತಮ್ಮ ಫಿಲಂ ಸೊಸೈಟಿಯಲ್ಲಿ, ಸತ್ಯಜೀತ ರೇ, ಸ್ವೀಡನ್ನಿನ ಇಂಗಮಾರ್ ಬರ್ಗಮನ್, ಜಪಾನಿನ ಅಕಿರಾ ಕೊರುಸಾವಾ,, ಫ್ರಾನ್ಸಿನ ವಿಟ್ಟೋರಿಯಾ ಡಿಸಿಕಾ, ಭಾರತದ ಸತ್ಯಜೀತ ರೇ ಮುಂತಾದ ಜಗತ್ತಿನ ಖ್ಯಾತ ಕಲಾತ್ಮಕ ಚಿತ್ರಗಳನ್ನು ನೋಡುವ ಅವಕಾಶಗಳು ನನಗೆ ಅಲ್ಲಿ ದೊರೆತವು. ಕೆಲವು ಚಿತ್ರಗಳ ಹೆಸರುಗಳನ್ನು ಹೆಸರಿಸುವುದಾದಲ್ಲಿ ಪಥೇರ್ ಪಾಂಚಾಲಿ, ಅಪರಾಜಿತೋ, ಸಮುರಾಯ್, ದಿ ವರ್ಜಿನ್ ಸ್ಪ್ರಿಂಗ್ ಅಲ್ಲದೆ ಹಲವು ರಶಿಯನ್ ಚಲನಚಿತ್ರಗಳು ಅವುಗಳ ಜೊತೆಗೆ ಅನಂತ ಮೂರ್ತಿಯವರ ಕಾದಂಬರಿ ಆಧಾರಿ ‘ಸಂಸ್ಕಾರ’, ಜ.ವಿ.ಅಯ್ಯರ್ ಅವರು ಸಂಸ್ಕೃತದಲ್ಲಿ ತಯಾರಿಸಿದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ  ಶಂಕರಾಚಾರ್ಯ, ಮಧ್ವಾಚಾರ್ಯ ಮತ್ತು ರಾಮಾನುಜಾಚಾರ್ಯ ಚಿತ್ರಗಳು ನಮಗೆ ನೋಡಲು ದೊರೆತವು. ಚಿತ್ರ ಪ್ರಾರಂಭದಲ್ಲಿ ಆ ಚಿತ್ರಗಳ ಕುರಿತು ನೀಡುತ್ತಿದ್ದ ಒಳನೋಟಗಳುಳ್ಳ ಮಾಹಿತಿಗಳು ನಮ್ಮ ಚಿತ್ರ ವೀಕ್ಷಣೆ ಮತ್ತು ಅರ್ಥೈಸುವಿಕೆಗೆ ಸಹಾಯಕ ವಾಗುತ್ತಿದ್ದವು. ಮುಂದೆ ಅನಂತ ಮೂರ್ತಿಯವರ ಕೃತಿಗಳಾಧಾರಿತ ಗಿರೀಶ ಕಾಸರವಳ್ಳಿ ನಿರ್ದೇಶನದ ‘ಘಟಶ್ರಾದ್ಧ’, ಕೃಷ್ಣ ಮಾಸಡಿ ನಿರ್ಧೇಶನದ ‘ಅವಸ್ಥೆ’, ಎಂ.ಎಸ್.ಸತ್ಯು ನಿರ್ದೇಶನದ ‘ಬರ’ ಚಿತ್ರಗಳನ್ನು ಥಿಯೆಟರ್ ಗಳಲ್ಲಿ ನೋಡಿದೆವು, ಸಾಂಧರ್ಭಿಕವಾಗಿ ಅವರು ಅನಂತ ಮೂರ್ತಿಯವರ ಕೃತಿಗಳ ಒಳನೋಟಗಳ ಕುರಿತು ವ್ಯಕ್ತ ಪಡಿಸುತ್ತಿದ್ದ ಅಭಿಪ್ರಾಯಗಳು ಅನಂತ ಮೂರ್ತಿಯವರ ಕೃತಿಗಳ ಓದಿಗೆ ನನ್ನನ್ನು ಪ್ರೇರೇಪಿಸಿದವು.

 

     ಅನಂತ ಮೂರ್ತಿಯವರ ಕೃತಿಗಳನ್ನು ಓದಿದ್ದರೂ ಅವರನ್ನು ನೋಡುವ ಮತ್ತು ಅವರ ಉಪನ್ಯಾಸವನ್ನು ಕೇಳುವ ಅವಕಾಶ ಮಾತ್ರ ದೊರೆತಿರಲಿಲ್ಲ. ನನ್ನ ನೆನಪು ಸರಿಇದ್ದರೆ ಅದು ಇಸವಿ 1980 ಎಂದು ಕಾಣುತ್ತದೆ ತೀರ್ಥಹಳ್ಳಿಯ ಸಾಂಸ್ಕೃತಿಕ ಮಂದಿರದಲ್ಲಿ ಕುವೆಂಪು ಸಾಹಿತ್ಯ ಕೃತಿಗಳ ಕುರಿತು ಒಂದು ವಾರ ಕಾಲ ಖ್ಯಾತ ಸಾಹಿತಿಗಳಿಂದ ಉಪನ್ಯಾಸ ಮತ್ತು ಕೊನೆಯ ದಿನ ಕುವೆಂಪುರವರಿಗೆ ಸನ್ಮಾನ ಕಾರ್ಯಕ್ರಮಗಳಿದ್ದವು. ಅದನ್ನು ಒಂದು ವಾರ ಕಾಲ ವೀಕ್ಷಿಸುವ ಅವಕಾಶ ನನಗೆ ದೊರೆಯಿತು. ಮೊದಲ ದಿನವೆ ಕುವೆಂಪು ರವರ ಗದ್ಯ ಸಾಹಿತ್ಯ ಕುರಿತು ಅನಂತ ಮೂರ್ತಿಯವರ ಉಪನ್ಯಾಸವಿತ್ತು.. ಆ ಕುರಿತು ಸುಮಾರು ಒಂದೂವರೆ ಗಂಟೆಗಳ ಕಾಲ ನಿರರ್ಗಳವಾಗಿ ಮಾತನಾಢಿದ ಪರಿ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಆ ಮೊದಲು ಕುವೆಂಪುರವರ ಗದ್ಯ ಕೃತಿಗಳನ್ನು ನಾನು ಓದಿದ್ದರೂ ಅನಂತ ಮೂರ್ತಿಯವರ ಉಪನ್ಯಾಸ ಆ ಕೃತಿಗಳ ದರ್ಶನವನ್ನು ಅದ್ಭುತವಾಗಿ ಭಿನ್ನ ನೆಲೆಯಲ್ಲಿ ಮಾಡಿಸಿ ಕೊಟ್ಟಿತ್ತು. ಬಿಡುವಿನ ವೇಳೆಯಲ್ಲಿ ಅವರನ್ನು ಭೇಟಿಯಾದ ರಾಘವರಾವ್ ಅವರು ತಮ್ಮ ಜೊತೆಗಿದ್ದ ನನ್ನನ್ನುಅವರಿಗೆ ಪರಿಚಯಿಸಿ ನನ್ನ ಸಾಹಿತ್ಯಾಸಕ್ತಿಯನ್ನು ಕುರಿತು ಅವರ ಮುಂದೆ ಹೇಳಿದ್ದರು.. ನನಗೋ ಸಂಕೋಚದಿಂದ ಮುದುಡಿ ಹೋದ ಅನುಭವ. ಅವರ ವಿದ್ವತ್ತಿನ ಮುಂದೆ ಏನೂ ಅಲ್ಲದ ನನ್ನನ್ನು ಮಾತನಾಡಿಸಿದ ರೀತಿ ಸಾಹಿತ್ಯ ಕೃತಿಗಳ ಓದಿನ ಕುರಿತು ಅವರು ನೀಡಿದ ಸೂಕ್ಷ್ಮ ಒಳನೋಟಗಳು ಮುಂದೆ ನನ್ನ ಓದಿಗೆ ಮತ್ತು ಸಾಹಿತ್ಯ ಗ್ರಹಿಕೆಗೆ ಬಹಳ ಸಹಾಯ ಮಾಡಿದವು. ಅನಂತ ಮೂರ್ತಿ ಮತ್ತು ಲಂಕೇಶರ ಕೃತಿಗಳು ಮತ್ತು ವಿಚಾರಧಾರೆಗಳು ನಮ್ಮನ್ನು ತಿದ್ದಿ ಸಮಾಜಮುಖಿ ಚಿಂತನೆಗೆ ಮುಖಾಮುಖಿಯಾಗಿಸಿದವು ಎನ್ನುವುದು ಆ ಕಾಲದ ಸತ್ಯ. ಆ ಕಾರ್ಯಕ್ರಮದಲ್ಲಿ ಅನಂತ ಮೂರ್ತಿಯವರಲ್ಲದೆ ಡಾ. ಪ್ರಭು ಶಂಕರ, ಶಿವರಾಮ ಕಾರಂತ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಭಗವಾನ್ ಜೊತೆಗೆ ಕುವೆಂಪು ಮುಂತಾದ ಖ್ಯಾತನಾಮರ ದರ್ಶನ ಮತ್ತು ಅವರ ಉಪನ್ಯಾಸಗಳು ನನ್ನ ಸಾಹಿತ್ಯ ಗ್ರಹಿಕೆಯ ದಿಂಗಂತವನ್ನು ವಿಸ್ತರಿಸಿದವೆಂದೆ ಹೇಳಬೇಕು. ಇದೇ ಸಂಧರ್ಭದಲ್ಲಿ ಕೋಣಂದೂರು ವೆಂಕಪ್ಪ ಗೌಡ ವಿರಚಿತ ಶಾಂತವೇರಿ ಗೋಪಾಲಗೌಡರ ಜೀವನ ಕುರಿತ ‘ಜೀವಂತ ಜ್ವಾಲೆ’ ಕೃತಿ ಸಹ ಬಿಡುಗಡೆ ಗೊಂಡಿತ್ತು.. ಮುಂದೆ ಶಿವಮೊಗ್ಗದಲ್ಲಿ ಎರಡು ಸಲ ಮತ್ತು ಈಗ್ಗೆ ಸುಮಾರು ಎರಡು ಮೂರು ವರ್ಷಗಳ ಹಿಂದೆ ಅವರು ತೀರ್ಥಹಳ್ಳಿಯಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಮಾರನೆ ದಿನ ವಿಚಾರ ಗೋಷ್ಟಿಯೊಂದರಲ್ಲಿ ಅವರು ಭಾಗ ವಹಿಸಲು ಬಂದಾಗ ನನ್ನ ಕವನ ಸಂಕಲನವೊಂದನ್ನು ಅವರಿಗೆ ನೀಡಿ ಅವರ ಜವಳಿ ರಾಘವರಾವ್ ಜೊತೆಗೆ ನನ್ನ ಹಳೆಯ ಭೇಟಿಯ ಕುರಿತು ಹೇಳಿದೆ, ಅವರು ಸಂತಸದಿಂದ ಕೇಳಿ ಆ ಘಟನೆಯನ್ನು ನಾನು ಇನ್ನೂ ನೆನಪಿಟ್ಟುಕೊಂಡದ್ದನ್ನು ಕೇಳಿ ಹರ್ಷ ವ್ಯಕ್ತ ಪಡಿಸಿದರು.. ರಾಘವರಾವ್ ಕುರಿತು ವಿಚಾರಿಸಿದರು. ಅವರು ಗತಿಸಿಹೋದ ವಿಷಯ ತಿಳಿದು ಖೇದ ವ್ಯಕ್ತ ಪಡಿಸಿದರು.. ಅಂತಹ ಸುಸಂಸ್ಕೃತ ಸಹೃದಯ ಮನಸ್ಥಿತಿ ಅವರದಾಗಿತ್ತು.

 

     ಅನಂತಮೂರ್ತಿ ಯವರ ಬದುಕು ಬರಹ ಮತ್ತು ಸಾಧನೆಗಳ ಕುರಿತು ಎಲ್ಲರೂ ಬಲ್ಲರು ಅವುಗಳ ವಿವರಣೆಗೆ ನಾನು ಇಲ್ಲಿ ತೊಡುಗುವುದಿಲ್ಲ. ಅನಂತ ಮೂರ್ತಿ ಜೊತೆಗಿನ ನನ್ನ ಆ ಎರಡು ಭೇಟಿಗಳು ಮತ್ತು ಆ ಸಂಧರ್ಭಗಳಲ್ಲಿ  ಅವರು ಯಕಶ್ಚಿತ್ತ ಒಬ್ಬ ಸಾಮಾನ್ಯನಾದ ನನ್ನನ್ನು ಘನತೆಯಿಂದ ನಡೆಸಿಕೊಂಡ ರೀತಿಗಳನ್ನು ಸಂಪದಿಗರ ಜೊತೆಗೆ ಹಂಚಿಕೊಳ್ಳ ಬೇಕೆನಿಸಿತು..  ಅವರು ನಮ್ಮಿಂದ ದೂರ ಹೋಗಿದ್ದರೂ ಅವರ ಜೊತೆಗಿನ ಆ ಭೇಟಿಯ ನೆನಪುಗಳು ಎಂದೂ ಮನದಿಂದ ಅಳಿಸಿ ಹೋಗಲು ಸಾಧ್ಯವಿಲ್ಲ. ಅವರು ರಾಮ ಮನೋಹರ ಲೋಹಿಯಾ ಮತ್ತು ಶಾಂತವೇರಿ ಗೋಪಾಲ ಗೌಡರ ಅನುಯಾಯಿಗಳಾಗಿದ್ದರು.. ಜೆ.ಹೆಚ್.ಪಟೇಲ್, ಅಜೀಜ್ ಸೇಠ, ಎಂ.ಪಿ.ಪ್ರಕಾಶ್, ಜಾರ್ಜ್ ಫರ್ನಾಂಡಿಸ್ ಮುಂತಾದ ಸಮಾಜವಾದಿ ಚಿಂತನೆಯ ರಾಜಕಾರಣಿಗಳ ಒಡನಾಟ ಅವರಿಗಿತ್ತು.. ಆದರೂ ಸಹಅವರು ಎಂದೂ ಆ ಪರಿಚಯಗಳನ್ನು ಸ್ವಂತದ ಪ್ರಯೋಜನಕ್ಕೆ ಬಳಸಿಕೊಳ್ಳದಿರುವುದು ಅವರ ಸ್ವಾಭಿಮಾನವನ್ನು ಎತ್ತಿ ತೋರಿಸುತ್ತದೆ.    ಅವರ ಆತ್ಮಕ್ಕೆ ಶಾಂತಿದೊರೆಯಲಿ ಎಂಬ ಆಶಯದೊಂದಿಗೆ.

ಚಿತ್ರ ಕೃಪೆ : ಗೂಗಲ್  ಇಮೇಜಸ್

                                          *****

 

 

                                                                     

Rating
No votes yet

Comments

ವಂದನೆಗಳು
ನಿಜ ತಪ್ಪಾಗಿದೆ ..ಲೇಖನವನ್ನು ಆಯ್ದ ವಿಭಾಗಕ್ಕೆ ಹಾಕಿರುವುದರಿಂದ ಅನಂತಮೂರ್ತಿಯವರ ಭಾವಚಿತ್ರ ತಾವೆ ಹಾಕಿದ್ದರೆ ಚೆನ್ನಾಗಿತ್ತು .