' ಉರಿವ ಮೇಣದ ಬತ್ತಿ '

' ಉರಿವ ಮೇಣದ ಬತ್ತಿ '

ಚಿತ್ರ

  

ಉರಿವ ಬತ್ತಿ ಅಕ್ಕಸದಿ

ಮೇಣಕ್ಕೆ ಹೇಳಿತು

ಉರಿಯುವುದು ನಾನು 

ನೀನೇಕೆ ಕರಗುತ್ತಿ ?

 

ಮೇಣದ ಉತ್ತರ

ಉರಿಯುವುದು ನೀನಾದರೂ

ಇಂಧನ ನಾನು 

ಕರಗದೆ ಗತ್ಯಂತರವಿಲ್ಲ 

 

ಎರಡೂ ಕೂಡಿ 

ಬೆಳಗುವ ಜ್ಯೋತಿಯ 

ಬೆನ್ನು ಬಿದ್ದವು ನಿನ್ನದೆ

ಸುಖದ ಬದುಕು 

ಕರಗುವವರು ಯಾರೋ 

ಉರಿವವರು ಯಾರೋ

ಉರುವಣಿಗೆ ಮಾತ್ರ ನಿನ್ನದು !

 

ಬೆಳಕು ಅವುಗಳನ್ನು 

ಸಮಾಧಾನಿಸಿತು 

ಕರಗುವುದು ಉರಿಯುವುದು

ಬೆಳಗುವುದು ಒಂದು

ನಿರಂತರ ಸಂವಹನ ಕ್ರಿಯೆ 

ಇಲ್ಲದಿರೆ 

ಕತ್ತಲಿನದೆ ಸಾಮ್ರಾಜ್ಯ !

 

ನೀವಿಲ್ಲದೆ  ನಾನಿಲ್ಲ 

ನಾವಿಲ್ಲದಿರೆ ಜಗವಿಲ್ಲ 

ಜಗವಿಲ್ಲದಿರೆ 

ನಮಗೆ ಅಸ್ತಿತ್ವವಿಲ್ಲ 

ಪರಸ್ಪರ ಸಹಕಾರ

ನಿಜದ ಬಾಳು ತಿಳಿಯಿರಿ

 

ಮೌನದಲಿ ಮೋಂಬತ್ತಿ

ಉರಿಯ ತೊಡಗಿತು

 

       *

ಚಿತ್ರಕೃಪೆ :ಅಂತರ್ ಜಾಲದಿಂದ

Rating
No votes yet

Comments

Submitted by partha1059 Tue, 06/16/2015 - 13:20

ಎಲ್ಲವೂ ಹಾಗೆ ಒಂದಕ್ಕೊಂದು ಪೂರಕ‌ ಕ್ರಿಯೆಗಳು
ಕಡೆಗೆ ಸಂಸಾರವು ಒಂದು ದೀಪದಂತೆ
ಗಂಡ‌ ಉರಿವಬತ್ತಿಯಾದರೆ ಹೆಂಡತಿ ಕರಗುವ‌ ಮೇಣ‌,
ಉರಿಯುವನು ಗಂಡಾದರು ! ಕಣ್ಣೀರು ಮಾತ್ರ‌ ಹೆಣ್ಣಿನದು ! :‍)
ಇಬ್ಬರು ಸೇರಿದಾಗ‌ ಸಂಸಾರವೆಂಬ‌ ಬೆಳಕು ಸುತ್ತಲು ಚೆಲ್ಲುವುದು !
ಆ ಬೆಳಕಲ್ಲಿ ಮಕ್ಕಳು ಮರಿ ಸಮಾಜ‌ ಹೀಗೆ....

ಉತ್ತಮ‌ ಕವನ‌ ನಿಮ್ಮದು ಅಭಿನಂದನೆ
ಪಾರ್ಥಸಾರಥಿ

Submitted by nageshamysore Sat, 06/20/2015 - 16:49

ಪಾಟೀಲರೆ ನಮಸ್ಕಾರ. ಸೃಷ್ಟಿಯಲ್ಲಿ ಸಮಷ್ಟತೆಯ ಶಕ್ತಿಯನ್ನು ಮೀರಿದ್ದು ಮತ್ತಾವುದಿದೆಯೊ ಕಾಣೆ. ಛಿಧ್ರತೆಯಲಿ ಭಧ್ರತೆಯಿದ್ದರು, ಸಮಗ್ರತೆಯಲ್ಲೆ ಸಾರ್ಥಕತೆಯಿರುವುದು. ತ್ಯಾಗದ ಹೆಸರಲ್ಲೊ, ಬಲಿದಾನದ ಹೆಸರಲ್ಲೊ ಅಸ್ತಿತ್ವವೆ ಕರಗಿ ಹೋದರು ನಿರಂತರ ಶಾಶ್ವತ ಕುರುಹನ್ನುಳಿಸಿ ಹೋಗುವ ಈ ಅಸ್ತಿತ್ವಗಳ ಸಾಂಕೇತಿಕತೆಯನ್ನು ಮೊಂಬತ್ತಿಯ ಮೇಣ-ಬತ್ತಿಗಳು ಸೊಗಸಾಗಿ ಬಿಂಬಿಸಿವೆ. ವೈವಿಧ್ಯತೆಯಲಿ ಏಕತೆ, ಏಕತೆಯಲಿ ಸಮಗ್ರತೆ ಎನ್ನುವ ಸಂದೇಶವೂ ಅನುರಣಿತ. ಚೆನ್ನಾದ ಕವನಕ್ಕೆ ಅಭಿನಂದನೆಗಳು

Submitted by H A Patil 1 Mon, 06/22/2015 - 19:56

ಪಾರ್ಥಸಾರಥಿ ಮತ್ತು ನಾಗೇಶ ಮೈಸೂರುರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆಗಳನ್ನು ಓದಿದೆ ಕವನವನ್ನು ನೀವುಗಳು ಗ್ರಹಿಸಿದ ರೀತಿ ಮತ್ತು ಪ್ರತಿಕ್ರಿಯಿಸಿದ ಕ್ರಮ ವಿಭಿನ್ನವಾದುದು. ಕವನವೊಂದು ಗ್ರಹಿಕೆಗಳು ನೂರೊಂದು ನಿಮ್ಮ ಗ್ರಹಿಕೆ ಮತ್ತು ನೋಟಗಳು ಕವನಕ್ಕಿಂತ ಚೆನ್ನಾಗಿವೆ. ನಮ್ಮಲ್ಲಿ ಒಂದು ವಾರದಿಂದ ಕತ್ತಲಿನದೆ ಸಾಮ್ರಾಜ್ಯ ಅಂತರ್ಜಾಲ ಸಂಪರ್ಕ ಸಿಗುವಲ್ಲಿ ತೊಂದರೆಗಳಿವೆ, ಧನ್ಯವಾದಗಳು.

Submitted by kavinagaraj Thu, 06/25/2015 - 15:41

ನಮಸ್ತೆ, ಪಾಟೀಲರೇ. ಸಮಿತ್ತಿನಲ್ಲಿ ಬೆಳಕಿಲ್ಲ. ಆದರೆ ಅಗ್ನಿಯ ಸಂಪರ್ಕಕ್ಕೆ ಬಂದಾಗ ಅಗ್ನಿ ಮತ್ತಷ್ಟು ಉಜ್ವಲವಾಗುವುದು. ಸಮರ್ಪಣಾಭಾವದಲ್ಲಿ ಬೆಳಕು ಹೆಚ್ಚುವುದು. ಈ ಭಾವ ನಿಮ್ಮ ರಚನೆಯಲ್ಲಿ ಕಂಡೆ.

Submitted by ನಾಗೇಶ್ ಪೈ ಕುಂದಾಪುರ Sun, 06/28/2015 - 08:34

In reply to by kavinagaraj

ಮೇಣದಬತ್ತಿ ಉರಿಯುವಾಗ ಕರಗಿ ದ್ರವ ರೂಪದಲ್ಲಿ ಬುಡದಲ್ಲಿಯೇ ಶೇಕರಿಸಿ ಪ್ರಕಾಶ ಕೊಡುವಂತೆಯೇ ಸಜ್ಜನರು ಮಾಡಿದ ಸೇವೆಗಳು ರಾಷ್ಟ್ರದ ಏಳಿಗೆಗೆ ನೆರವಾಗುತ್ತದೆ
ಕುಂದಾಪುರ ನಾಗೇಶ್ ಪೈ

Submitted by H A Patil 1 Wed, 07/01/2015 - 20:21

In reply to by ನಾಗೇಶ್ ಪೈ ಕುಂದಾಪುರ

ನಾಗೇಶ ಪೈಗಳಿಗೆ ವಂದನೆಗಳು ತಮ್ಮ ಕವನದ ಗ್ರಹಿಕೆ ಅರ್ಥೈಸಿದ ರೀತಿ ಮತ್ತು ರಾಷ್ಟ್ರಪ್ರೇಮಕ್ಕೆ ನನ್ನ ನಮನ ಧನ್ಯವಾದಗಳು.